ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ಮದುವೆ: ವರರ ಕೊರಳಿಗೆ ಬಿತ್ತು ತಲಾ 1 ಕೋಟಿ ರೂಪಾಯಿ ಮೌಲ್ಯದ ನೋಟಿನ ಹಾರ
Mathura viral Wedding: ಉತ್ತರ ಪ್ರದೇಶದ ಮಥುರಾದಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಮದುವೆಯ ವೇಳೆ ಇಬ್ಬರು ವರರಿಗೆ ತಲಾ 1 ಕೋಟಿ ರೂಪಾಯಿ ಮೌಲ್ಯದ ನೋಟಿನ ಹಾರಗಳನ್ನು ಹಾಕಲಾಗಿದ್ದು, ಈ ದೃಶ್ಯ ಕಂಡು ಅತಿಥಿಗಳು ಹಾಗೂ ನೆಟ್ಟಿಗರು ದಂಗಾಗಿದ್ದಾರೆ.
ಉತ್ತರ ಪ್ರದೇಶದಲ್ಲಿ ವರರ ಕೊರಳಿಗೆ 1 ಕೋಟಿ ರೂಪಾಯಿ ಹಾರ -
ಲಖನೌ, ನ. 23: ಮದುವೆ ದಿನ ವರನಿಗೆ ಹೂವಿನ ಹಾರ ಅಥವಾ ಅಪರೂಪಕ್ಕೆ ಒಂದಿಷ್ಟು ಸಾವಿರ ರೂಪಾಯಿಗಳ ನೋಟಿನ ಹಾರ ಹಾಕುವುದನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಉತ್ತರ ಪ್ರದೇಶದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಇಬ್ಬರು ವರರಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ, ಸುಮಾರು 100 ಅಡಿ ಉದ್ದದ ನೋಟಿನ ಹಾರಗಳನ್ನು ಉಡುಗೊರೆಯಾಗಿ ಕೊರಳಿಗೆ ಹಾಕಲಾಗಿದ್ದು, ಈ ಅದ್ಧೂರಿ ಮದುವೆ ದೃಶ್ಯಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿವೆ.
ರಾಜಸ್ಥಾನದ ಸರಪಂಚ್ ಆಗಿರುವ ವರರ ಬಾವ ಯೋಗೇಶ್ ಕುಮಾರ್ ಅಲಿಯಾಸ್ ಭೂರಾ ಠಾಕೂರ್ ಈ ದುಬಾರಿ ಉಡುಗೊರೆಯನ್ನು ನೀಡಿದ್ದು, ಮದುವೆ ಸಮಾರಂಭದ ವೇಳೆ ವರರಿಗೆ ನೋಟಿನ ಹಾಕಿ ಮೆರವಣಿಗೆ ಮಾಡಲಾಗಿದೆ. ಮಥುರಾದ ನಾಗ್ಲಾ ಫೊಂಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಪ್ರಶಾಂತ್ ಮತ್ತು ಕನ್ಹಾ ರಾಘವ ಎಂಬ ಇಬ್ಬರು ಸಹೋದರ ಸಂಬಂಧಿಗಳ ಅದ್ದೂರಿ ಮದುವೆ, ಗೋವರ್ಧನ್ ಮುಡ್ಸೇರಸ್ ಗ್ರಾಮದ ಇಬ್ಬರು ಯುವತಿಯರೊಂದಿಗೆ ನಿಶ್ಚಯವಾಗಿತ್ತು.
ವಿಡಿಯೊ ನೋಡಿ:
During a wedding procession in Mathura, bride's brother adorned groom with 100 foot long garlands made of 1 crore rupee notes. This is what happens when dehati sell ancestral land and suddenly become crorepatis overnight. 😂😂 https://t.co/Rf1voPEHGA
— Nisha Yadav (@valuecraft_) November 23, 2026
ದಂಗಾದ ಅತಿಥಿಗಳು
ಸಮಾರಂಭದ ವೇಳೆ ವರರಿಗೆ ದುಬಾರಿ ಮೊತ್ತದ ನೋಟಿನ ಹಾರಗಳನ್ನು ತೊಡಿಸಿದ್ದಾರೆ. ಒಬ್ಬೊಬ್ಬ ವರನ ಹಾರದಲ್ಲೂ 500 ರೂಪಾಯಿ ಮುಖಬೆಲೆಯ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ನೋಟುಗಳಿವೆ ಎನ್ನಲಾಗಿದೆ. ಈ ಬೃಹತ್ ಹಾರಗಳು ಸುಮಾರು 100 ಅಡಿ ಉದ್ದವಿದ್ದು, ಅವುಗಳನ್ನು ಹಿಡಿದುಕೊಳ್ಳಲು ಹತ್ತಾರು ಜನರು ಹರಸಾಹಸ ಪಡಬೇಕಾಯಿತು. ವೇದಿಕೆಯ ಮೇಲೆ ಈ ದೃಶ್ಯ ಕಾಣಿಸಿಕೊಳ್ಳುತ್ತಿದ್ದಂತೆ ಮದುವೆಗೆ ಆಗಮಿಸಿದ್ದ ಅತಿಥಿಗಳು ಕ್ಷಣಕಾಲ ದಿಗ್ಭ್ರಮೆಗೊಂಡು, ಮೊಬೈಲ್ಗಳಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲು ಮುಗಿಬಿದ್ದರು. ಜತೆಗೆ ಒಂದೇ ಬಾರಿಗೆ 2 ಕೋಟಿ ರೂಪಾಯಿ ಮೌಲ್ಯದ ನಗದು ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿದೆ.
ಬಿಹಾರದ ʼಬಾಹುಬಲಿʼ ಮಗಳ ಮದುವೆಗೆ 4 ಲಕ್ಷ ಜನರಿಗೆ ಆಹ್ವಾನ
ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್
ಮದುವೆಯ ವಿಡಿಯೊಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿದ್ದಂತೆಯೇ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಕೆಲವರು ಇದನ್ನು ಕುಟುಂಬದ ಶ್ರೀಮಂತಿಕೆ ಮತ್ತು ಅದ್ದೂರಿತನದ ಪ್ರದರ್ಶನ ಎಂದು ಕೊಂಡಾಡಿದರೆ, ಇನ್ನು ಕೆಲವರು ಇಷ್ಟು ದೊಡ್ಡ ಮೊತ್ತದ ಹಣವನ್ನು ಹಾರವಾಗಿ ಬಳಸಿರುವುದಕ್ಕೆ ತಮಾಷೆ ಹಾಗೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ನಗದು ಕರೆನ್ಸಿ ಹಾರಗಳಿರುವುದರಿಂದ ಮದುವೆ ನಡೆಯುತ್ತಿದ್ದ ಸ್ಥಳದಲ್ಲಿ ಕುಟುಂಬಸ್ಥರು ಮತ್ತು ಆಯೋಜಕರು ಹೆಚ್ಚಿನ ನಿಗಾ ವಹಿಸಿದ್ದರು.