ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂಗ್ಲಿಷ್ ಬರಲ್ಲ ಎಂದಿದ್ದಕ್ಕೆ ವೇಟರ್‌ಗೆ ಕಪಾಳಮೋಕ್ಷ: ಶ್ರೀಮಂತ ಗ್ರಾಹಕನಿಗೆ ಜೀವಮಾನದ ನಿಷೇಧ ಹೇರಿದ ತಾಜ್ ಹೋಟೆಲ್!

ಇಂಗ್ಲಿಷ್ ಭಾಷೆ ಸರಿಯಾಗಿ ಮಾತನಾಡಿನಾಡಿಲ್ಲ ಎಂಬ ಕಾರಣಕ್ಕೆ ತಾಜ್ ಹೋಟೆಲ್‌ನ ವೇಟರ್‌ ಒಬ್ಬರಿಗೆ ಅತಿಥಿಯೊಬ್ಬರು ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಉದ್ಯೋಗಿಯ ಸ್ವಾಭಿಮಾನಕ್ಕೆ ಧಕ್ಕೆ ತಂದ ಪ್ರಭಾವಿ ಗ್ರಾಹಕನಿಗೆ ಹೊಟೆಲ್‌ನ ಆಡಳಿತ ಮಂಡಳಿ ಜೀವಮಾನ ನಿಷೇಧ ಹೇರಿ ಖಡಕ್‌ ಸಂದೇಶ ರವಾನಿಸಿದೆ.

ಶ್ರೀಮಂತ ಗ್ರಾಹಕನಿಗೆ ಜೀವಮಾನದ ನಿಷೇಧ ಹೇರಿದ  ತಾಜ್ ಹೋಟೆಲ್; ಕಾರಣವೇನು?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 30, 2026 7:52 PM

ನವದೆಹಲಿ: ಇಂಗ್ಲಿಷ್ ಭಾಷೆ ಸರಿಯಾಗಿ ಮಾತನಾಡಿನಾಡಿಲ್ಲ ಎಂಬ ಕಾರಣಕ್ಕೆ ತಾಜ್ ಹೋಟೆಲ್‌ನ (Taj Hotel) ವೇಟರ್‌ ಒಬ್ಬರಿಗೆ ಅತಿಥಿಯೊಬ್ಬರು ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ತನ್ನ ಉದ್ಯೋಗಿಯ ಸ್ವಾಭಿಮಾನಕ್ಕೆ ಧಕ್ಕೆ ತಂದ ಪ್ರಭಾವಿ ಗ್ರಾಹಕನಿಗೆ ಆಗ್ರಾದ ಪ್ರತಿಷ್ಠಿತ ‘ತಾಜ್ ಹೋಟೆಲ್ (Viral News) ಮತ್ತು ಕನ್ವೆನ್ಷನ್ ಸೆಂಟರ್’ ಆಡಳಿತ ಮಂಡಳಿಯು ಜೀವಮಾನದ ನಿಷೇಧ ಹೇರುವ ಮೂಲಕ ಖಡಕ್ ಸಂದೇಶ ರವಾನಿಸಿದೆ.

ಆಗ್ರಾ ಸಮೀಪದ ಹಳ್ಳಿಯೊಂದರ ಬಡ ಕೃಷಿ ಕುಟುಂಬದಿಂದ ಬಂದ ಕಾಂತ್ ಎಂಬ ಯುವಕ, ಕಷ್ಟಪಟ್ಟು ಈ ಪಂಚತಾರಾ ಹೋಟೆಲ್‌ನಲ್ಲಿ ವೇಟರ್‌ ಕೆಲಸ ಗಿಟ್ಟಿಸಿಕೊಂಡಿದ್ದ. ಇತ್ತೀಚೆಗೆ ಹೋಟೆಲ್‌ನ ರೆಸ್ಟೋರೆಂಟ್‌ಗೆ ಬಂದಿದ್ದ ಶ್ರೀಮಂತ ಮತ್ತು ಪ್ರಭಾವಿ ಅತಿಥಿಯೊಬ್ಬರ ಆರ್ಡರ್ ತೆಗೆದುಕೊಳ್ಳುವಾಗ ಭಾಷೆಯ ಸಮಸ್ಯೆಯಿಂದಾಗಿ ಸಣ್ಣ ಗೊಂದಲ ಉಂಟಾಗಿದೆ. ಇದರಿಂದ ತೀವ್ರ ಕೋಪಗೊಂಡ ಗ್ರಾಹಕ, ಇತರ ಅತಿಥಿಗಳ ಸಮ್ಮುಖದಲ್ಲೇ ಕಾಂತ್ ಕೆನ್ನೆಗೆ ಬಾರಿಸಿದ್ದಾನೆ.

ಸಾರ್ವಜನಿಕವಾಗಿ ಅಪಮಾನವಾಗಿದ್ದರೂ, ಬಡ ಕುಟುಂಬದ ಕಾಂತ್ ದೂರು ನೀಡಲು ಮುಂದಾಗಲಿಲ್ಲ. ಹೋಟೆಲ್ ಮ್ಯಾನೇಜ್‌ಮೆಂಟ್‌ಗೆ ದೂರು ನೀಡಿದರೆ ಕೆಲಸ ಕಳೆದುಕೊಳ್ಳುವ ಭಯದಿಂದ ಆತ ಘಟನೆಯನ್ನು ಮುಚ್ಚಿಡಲು ಯತ್ನಿಸಿದ್ದನು. ಆದರೆ, ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿ ಹಾಗೂ ಇತರ ಸಹೋದ್ಯೋಗಿಗಳ ಮೂಲಕ ಈ ಗಂಭೀರ ವಿಷಯ ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹೋಟೆಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಪರಿತೋಷ್ ಲಧಾನಿ, ಮರುದಿನವೇ ಆ ಗ್ರಾಹಕನನ್ನು ಹೋಟೆಲ್‌ನಿಂದ ಶಾಶ್ವತವಾಗಿ ಕಪ್ಪುಪಟ್ಟಿಗೆ ಸೇರಿಸಲು ಆದೇಶಿಸಿದ್ದಾರೆ. ಈ ಕುರಿತು ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಬರೆದುಕೊಂಡಿರುವ ಪರಿತೋಷ್ ಲಧಾನಿ, "ನೀವು ಎಷ್ಟೇ ಶ್ರೀಮಂತರಾಗಿರಬಹುದು, ಎಷ್ಟೇ ಪ್ರಭಾವಶಾಲಿಯಾಗಿರಬಹುದು ಅಥವಾ ನಮ್ಮ ಹೋಟೆಲ್‌ನಲ್ಲಿ ಎಷ್ಟೇ ಹಣ ಖರ್ಚು ಮಾಡಿರಬಹುದು; ಅದ್ಯಾವುದೂ ನಮಗೆ ಮುಖ್ಯವಲ್ಲ. ನಮ್ಮ ತಂಡದ ಸದಸ್ಯರ ಮೇಲೆ ದೈಹಿಕ ದೌರ್ಜನ್ಯ ಎಸಗುವ ಹಕ್ಕು ಯಾರಿಗೂ ಇಲ್ಲ. ನಮ್ಮ ಉದ್ಯೋಗಿಗಳು ತಮ್ಮ ಘನತೆಯನ್ನು ರಕ್ಷಿಸಿಕೊಳ್ಳಲು ಹೆದರಿದರೆ, ಅವರ ಪರವಾಗಿ ನಿಲ್ಲುವುದು ನಮ್ಮ ಕರ್ತವ್ಯ ಎಂದು ಅವರು ಬರೆದುಕೊಂಡಿದ್ದಾರೆ.

ರಸ್ತೆ ತಪಾಸಣೆ ವೇಳೆ ಯುವಕನಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್ ವರ್ಮಾ; ವಿಡಿಯೊ ವೈರಲ್‌

ಸಿಬ್ಬಂದಿಯ ಸ್ವಾಭಿಮಾನಕ್ಕೆ ಬೆಲೆ ನೀಡಿ, ಹಣದ ಅಹಂ ಪ್ರದರ್ಶಿಸಿದ ಗ್ರಾಹಕನಿಗೆ ಜೀವಮಾನದ ನಿಷೇಧ ಹೇರಿದ ಹೋಟೆಲ್ ಆಡಳಿತ ಮಂಡಳಿಯ ನಿರ್ಧಾರಕ್ಕೆ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ. ಉದ್ಯೋಗಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.