#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಜನ ಸಂದಣಿಯ ರೈಲಿನಲ್ಲಿ ಪ್ರಯಾಣಿಕರ ಅಪಾಯಕಾರಿ ಸಾಹಸ ಹೇಗಿತ್ತು? ವಿಡಿಯೊ ನೋಡಿ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ವಾರಾಣಸಿಯಲ್ಲಿಯೂ ಜನ ಸಂದಣಿ ಕಂಡು ಬರುತ್ತಿದೆ. ಸೀಟು ದೊರೆಯದ ಹಿನ್ನೆಲೆಯಲ್ಲಿ ಪ್ರಯಾಣಿಕರು ರೈಲು ಎಂಜಿನ್‌ಗೆ ನುಗ್ಗಿದ ಘಟನೆಯ ವಿಡಿಯೊ ಸದ್ಯ ವೈರಲ್‌ ಆಗಿದೆ.

ಜನ ಸಂದಣಿಯ ರೈಲಿನಲ್ಲಿ ಪ್ರಯಾಣಿಕರ ಅಪಾಯಕಾರಿ ಸಾಹಸ ಕಂಡು ಅಧಿಕಾರಿಗಳೇ ದಂಗು

Profile Ramesh B Feb 9, 2025 10:31 PM

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ (Maha Kumbh Mela 2025) ನಡೆಯುತ್ತಿದ್ದು, ಪ್ರತಿ ದಿನ ಲಕ್ಷಾಂತರ ಮಂದಿ ಆಗಮಿಸುತ್ತಿದ್ದಾರೆ. ಸುಮಾರು 1 ತಿಂಗಳಿಂದೀಚೆಗೆ ಉತ್ತರ ಪ್ರದೇಶಕ್ಕೆ ದೇಶ-ವಿದೇಶಗಳ ಭಕ್ತರು ಆಗಮಿಸಿ ಗಂಗಾ-ಯಮುನಾ-ಸರಸ್ವತಿ (ಗುಪ್ತಗಾಮಿನಿ) ನದಿಗಳ ತ್ರಿವೇಣಿ ಸಂಗಮದಲ್ಲಿ ಮಿಂದೇಳುವ ಮೂಲಕ ಪುನೀತರಾಗುತ್ತಿದ್ದಾರೆ. ಇದೇ ಕಾರಣಕ್ಕೆ ಉತ್ತರ ಪ್ರದೇಶಕ್ಕೆ ತೆರಳುವ ರೈಲುಗಳಲ್ಲಿ ಅಪಾರ ಜನ ಸಂದಣಿ ಕಂಡು ಬರುತ್ತಿದೆ. ರೈಲು ನಿಲ್ದಾಣಗಳಲ್ಲಿ ಎಷ್ಟರ ಮಟ್ಟಿಗೆ ನೂಕು ನುಗ್ಗಲು ಕಂಡು ಬರುತ್ತಿದೆ ಎಂದರೆ ಇಲ್ಲೇನೋ ಜಾತ್ರೆ ನಡೆಯುತ್ತಿದೆ ಎಂದು ಭಾವಿಸುವಷ್ಟು (Viral Video). ಸೀಟು ದೊರೆಯದ ಹಿನ್ನೆಲೆಯಲ್ಲಿ ಪ್ರಯಾಣಿಕರು ರೈಲು ಎಂಜಿನ್‌ಗೆ ನುಗ್ಗಿದ ಘಟನೆ ವಾರಾಣಸಿಯಲ್ಲಿ ನಡೆದಿದ್ದು, ಈ ವಿಡಿಯೊ ವೈರಲ್‌ ಆಗಿದೆ.

ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟ್‌ ರೈಲು ನಿಲ್ದಾಣದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಸದ್ಯ ಪ್ರಯಾಣಿಕರು ರೈಲು ಎಂಜಿನ್‌ಗೆ ನುಗ್ಗಿ ಬಾಗಿಲು ಲಾಕ್‌ ಮಾಡತ್ತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿ, ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.



ಏನಿದು ಘಟನೆ?

ವರದಿಯೊಂದರ ಪ್ರಕಾರ, ಈ ಘಟನೆ ಫೆ. 8ರ ಮಧ್ಯರಾತ್ರಿ 2 ಗಂಟೆಗೆ ನಡೆದಿದೆ. ವಾರಾಣಸಿಯಿಂದ ಕುಂಭಮೇಳಕ್ಕೆ ತೆರಳುವ ರೈಲಿನಲ್ಲಿ ಸೀಟು ದೊರೆಯದ ಕಾರಣ ಕೆಲ ಪ್ರಯಾಣಿಕರು ಈ ರೀತಿಯ ಸಾಹಸ ಪ್ರದರ್ಶಿಸಿದ್ದಾರೆ. ರೈಲು ಕ್ಯಾಂಟ್‌ ನಿಲ್ದಾಣದ 2ನೇ ಫ್ಲಾಟ್‌ಫಾರಂನಲ್ಲಿ ಬಂದು ನಿಂತಾಗ ನೂಕುನುಗ್ಗಲು ಕಂಡುಬಂತು. ಈ ವೇಳೆ ಬೋಗಿಗೆ ಪ್ರವೇಶಿಸಲು ಸಾಧ್ಯವಾಗದ ಮಹಿಳೆಯರನ್ನೊಳಗೊಂಡ ಸುಮಾರು 20 ಜನರ ಗುಂಪು ರೈಲು ಎಂಜಿನ್‌ ಪ್ರವೇಶಿಸಿ ಒಳಗಿನಿಂದ ಬಾಗಿಲನ್ನು ಲಾಕ್‌ ಮಾಡಿದೆ. ಸಾಮಾನ್ಯ ಬೋಗಿಯಂತೆ ಅವರು ಅದರೊಳಗೆ ಪ್ರವೇಶಿಸಿದ್ದು ವಿಡಿಯೊದಲ್ಲಿ ಕಂಡು ಬಂದಿದೆ.

ಪ್ರತಿಕ್ರಿಯಿಸಿದ ಅಧಿಕಾರಿಗಳು ಹೇಳಿದ್ದೇನು?

ಈ ಘಟನೆ ಬಗ್ಗೆ ರೈಲ್ವೇ ಅಧಿಕಾರಿಗಳು ತ್ವರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಸರ್ಕಾರಿ ರೈಲ್ವೆ ಪೊಲೀಸ್ (GRP) ಮತ್ತು ರೈಲ್ವೆ ಸಂರಕ್ಷಣಾ ಪಡೆ (RPF) ಕೂಡಲೇ ಸ್ಥಳಕ್ಕೆ ಧಾವಿಸಿ ಎಂಜಿನ್‌ನಿಂದ ಪ್ರಯಾಣಿಕರನ್ನು ಹೊರಗೆ ಕಳುಹಿಸಿದ್ದಾರೆ. ಎಂಜಿನ್‌ ಬಳಿ ಕುಳಿತು ಪ್ರಯಾಣಿಸುವುದು ಅತ್ಯಂತ ಅಪಾಯಕಾರಿ ಎಂದು ಅವರು ತಿಳಿಸಿದ್ದಾರೆ.

ವಾರಾಣಸಿಯಲ್ಲೂ ಜನ ಸಂದಣಿ

ಮಹಾ ಕುಂಭಮೇಳದ ಹಿನ್ನೆಲೆಯಲ್ಲಿ ಧಾರ್ಮಿಕ ಮಹತ್ವ ಹೊಂದಿರುವ ವಾರಾಣಸಿಯಲ್ಲೂ ಜನ ಸಂದಣಿ ಕಂಡು ಬರುತ್ತಿದೆ. ಕುಂಭಮೇಳಕ್ಕೆ ತೆರಳುವವರು ಇಲ್ಲಿಗೂ ಭೇಟಿ ನೀಡುತ್ತಿದ್ದಾರೆ. ಪ್ರಸಿದ್ದ ದೇವಾಲಯಗಳು, ಘಾಟ್‌ಗಳು, ಧಾರ್ಮಿಕ ಸ್ಥಳಗಳು ಭಕ್ತರಿಂದ ತುಂಬಿದೆ. ದೇವರ ದರ್ಶನಕ್ಕಾಗಿ ಪ್ರತಿ ದಿನ 3-4 ಕಿ.ಮೀ. ಸಾಲು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಾರಾಣಸಿಯ 84 ಘಾಟ್‌, ರೈಲ್ವೆ ನಿಲ್ದಾಣ, ಬಸ್‌ ಸ್ಟೇಷನ್‌ಗಳಲ್ಲಿಯೂ ಪ್ರಯಾಣಿಕರು ತುಂಬಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Arvind Kejriwal; ಅರವಿಂದ್ ಕೇಜ್ರಿವಾಲ್ ಪ್ರತಿಕೃತಿಯ ಅಂತ್ಯಕ್ರಿಯೆ ಮೆರವಣಿಗೆ ಮಾಡಿದ ದೆಹಲಿ ಜನ ! ವಿಡಿಯೋ ವೈರಲ್‌

ಅಧಿಕಾರಿಗಳಿಂದ ಎಚ್ಚರಿಕೆ

ಜನಸಂದಣಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಗದರ್ಶನ ಪಾಲಿಸುವಂತೆ ಅಧಿಕಾರಿಗಳು ಪ್ರಯಾಣಿಕರಿಗೆ ಸೂಚಿಸಿದ್ದಾರೆ. ನಿಷೇಧಿತ ಸ್ಥಳಗಳಿಗೆ ಪ್ರವೇಶಿಸದಂತೆ ಸೂಚನೆ ನೀಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.