ಹನುಮಾನ್ ಮಂದಿರದಲ್ಲಿ ಸುತ್ತು ಹಾಕಿದ ಶ್ವಾನಕ್ಕೆ ಭಕ್ತರಿಂದ ಪೂಜೆ; ನಾಯಿ ನಿಜವಾಗಿಯೂ ಭಕ್ತಿಯಿಂದ ಪ್ರದಕ್ಷಿಣೆ ಬಂದಿತ್ತೆ? ತಜ್ಞರು ಹೇಳೋದೇನು?
ಉತ್ತರ ಪ್ರದೇಶದ ನಗಿನಾ ತಾಲೂಕಿನ ನಂದಪುರ ಗ್ರಾಮದಲ್ಲಿರುವ ಪುರಾತನ ಹನುಮಾನ್ ದೇವಾಲಯದಲ್ಲಿ, ಆರೋಗ್ಯ ಸಮಸ್ಯೆಯಿಂದ ದೇವರ ಮೂರ್ತಿಗಳ ಸುತ್ತ ವೃತ್ತಾಕಾರವಾಗಿ ಚಲಿಸುತ್ತಿದ್ದ ಶ್ವಾನವನ್ನು ಕೆಲ ಭಕ್ತರು ದೈವಿಕ ಸಂಕೇತವೆಂದು ಭಾವಿಸಿ ಪೂಜೆ-ಪುನಸ್ಕಾರ ನಡೆಸಿದ್ದಾರೆ. ಈ ಘಟನೆಯ ವಿಡಿಯೊಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಅಂಧಶ್ರದ್ಧೆ–ವೈಜ್ಞಾನಿಕ ದೃಷ್ಟಿಕೋನ ಕುರಿತು ಭಾರಿ ಚರ್ಚೆಗೆ ಕಾರಣವಾಗಿದೆ.
ಶ್ವಾನಕ್ಕೆ ಪೂಜೆ -
ಲಖನೌ, ಜ. 17: ಉತ್ತರ ಪ್ರದೇಶದ (Uttar Pradesh) ದೇವಾಲಯವೊಂದರಲ್ಲಿ ಇತ್ತೀಚೆಗೆ ವೃತ್ತಾಕಾರದಲ್ಲಿ ಚಲಿಸುತ್ತಿದ್ದ ಶ್ವಾನಕ್ಕೆ, ಭಕ್ತರು ಪೂಜೆ-ಪುನಸ್ಕಾರ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹೌದು, ಈ ಘಟನೆಯು ನಗಿನಾ (Nagina) ಪ್ರದೇಶದ ನಂದಪುರ (Nandpur) ಗ್ರಾಮದಲ್ಲಿರುವ ಪುರಾತನ ಹನುಮಾನ್ ದೇವಾಲಯದಲ್ಲಿ ನಡೆದಿದ್ದು, ದೇವರ ಮೂರ್ತಿಗಳಿಗೆ ಶ್ವಾನವು ಪ್ರದಕ್ಷಿಣೆ ಹಾಕುವ ಮೂಲಕ ಗಮನ ಸೆಳೆದಿತ್ತು. ಈ ವಿಡಿಯೊ ಭಾರಿ ವೈರಲ್ ಆಗಿತ್ತು.
ನಾಯಿಯ ವಿಚಿತ್ರ ವರ್ತನೆಯಿಂದ ಆತಂಕ
ಸ್ಥಳೀಯರ ಮಾಹಿತಿ ಪ್ರಕಾರ, ಸೋಮವಾರ (ಜನವರಿ 12) ಬೆಳಗಿನ ಜಾವ ನಾಯಿ ದೇವಾಲಯಕ್ಕೆ ಬಂದು ಹನುಮಾನ್ ದೇವರ ವಿಗ್ರಹದ ಸುತ್ತ ನಿರಂತರವಾಗಿ ವೃತ್ತಾಕಾರವಾಗಿ ನಡೆಯಲು ಆರಂಭಿಸಿತು. ಈ ವರ್ತನೆ ಹಲವು ಗಂಟೆಗಳ ಕಾಲ ಮುಂದುವರಿದಿದ್ದು, ನಾಯಿ ಆಹಾರ, ನೀರು ಏನನ್ನೂ ಸೇವಿಸಿಲ್ಲ ಎಂದು ಹೇಳಲಾಗಿದೆ. ಮೂರನೇ ದಿನಕ್ಕೆ ನಾಯಿ ತನ್ನ ಚಲನವಲನವನ್ನು ದುರ್ಗಾ ಮಾತೆಯ ವಿಗ್ರಹದತ್ತ ಬದಲಿಸಿ, ಅದೇ ರೀತಿಯ ಪ್ರದಕ್ಷಿಣೆ ಹಾಕುವುದನ್ನು ಮುಂದುವರಿಸಿತು.
ಶ್ವಾನಕ್ಕೆ ಪೂಜೆ ಸಲ್ಲಿಸುವ ವಿಡಿಯೊ ಇಲ್ಲಿದೆ:
Now, devotees have started treating the dog as some spiritual incarnation with a priest sitting next to him inside the temple. The stray is now resting on a comfy mattress with devotees making a beeline to touch his feet. https://t.co/b6bSSFFtvP pic.twitter.com/xmZgSSvKkS
— Piyush Rai (@Benarasiyaa) January 16, 2026
ಶ್ವಾನಕ್ಕೆ ನಿಗಾದ ಅವಶ್ಯಕತೆ ಇದೆ ಎಂದ ಪಶು ವೈದ್ಯರು
ನಾಯಿ ಈ ವರ್ತನೆಯಿಂದ ಆತಂಕಗೊಂಡ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಪಶುವೈದ್ಯರ ತಂಡವು ಪರಿಶೀಲನೆ ನಡೆಸಿದ್ದು, "ಆ ನಾಯಿಗೆ ಯಾವುದೇ ಗಾಯಗಳು ಅಥವಾ ತಕ್ಷಣದ ಜೀವಾಪಾಯದ ಸ್ಥಿತಿ ಇಲ್ಲವಾದರೂ, ಅದು ಅಸ್ವಸ್ಥವಾಗಿದೆ. ಸದ್ಯ ಅದಕ್ಕೆ ನಿಗಾದ ಅಗತ್ಯವಿದೆ" ಎಂದು ತಿಳಿಸಿದ್ದಾರೆ.
ಬಾಂಗ್ಲಾದಲ್ಲಿ ನಿಲ್ಲದ ದೌರ್ಜನ್ಯ; ಹಿಂದೂ ಶಿಕ್ಷಕನ ಮನೆಗೆ ಬೆಂಕಿ
ಇದು ಅದ್ಭುತವಲ್ಲ, ವೈದ್ಯಕೀಯ ಸಮಸ್ಯೆ!
ಪಶು ವೈದ್ಯರ ಪ್ರಕಾರ, ನಾಯಿಗಳಲ್ಲಿ ಇಂತಹ ನಿರಂತರ ವೃತ್ತಾಕಾರದ ಚಲನೆ ಸಾಮಾನ್ಯವಾಗಿ ನರ ಸಂಬಂಧಿತ ತೊಂದರೆಗಳು, ಒಳಕಿವಿ ಸೋಂಕು, ತಲೆಗೆ ಆದ ಗಾಯ ಅಥವಾ ‘ಕೇನೈನ್ ವೆಸ್ಟಿಬ್ಯುಲರ್ ಡಿಸೀಸ್’ ಎಂಬ ಕಾಯಿಲೆಯೊಂದಿಗೆ ಸಂಬಂಧ ಹೊಂದಿರುತ್ತದೆ. ಇಂತಹ ಸಮಸ್ಯೆಗಳು ದಿಕ್ಕು ತಪ್ಪುವುದು, ಸಮತೋಲನ ಕಳೆದುಕೊಳ್ಳುವುದು ಮತ್ತು ಬಲವಂತದ ಚಲನೆಗೆ ಕಾರಣವಾಗಬಹುದು.
ನಾಯಿಗೆ ಪೂಜೆ ಆರಂಭಿಸಿದ ಭಕ್ತರು
ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮತ್ತೊಂದು ವಿಡಿಯೊದಲ್ಲಿ ಹಲವು ಭಕ್ತರು ನಾಯಿಯ ಮುಂದೆ ಮಂಡಿಯೂರಿ, ಅದರ ಕಾಲುಗಳನ್ನು ಸ್ಪರ್ಶಿಸಿ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಾಣಿಸಿದೆ. ದೇವಾಲಯದ ಒಳಗೆ ನಾಯಿಯ ಪಕ್ಕದಲ್ಲೇ ಒಬ್ಬ ಪೂಜಾರಿಯೂ ಕುಳಿತಿರುವ ದೃಶ್ಯವೂ ಕಂಡುಬಂದಿದೆ. ನಾಯಿಯನ್ನು ಹಾಸಿಗೆಯ ಮೇಲೆ ಮಲಗಿಸಲಾಗಿದ್ದು, ಇದು ದೇವರ ಅವತಾರ ಎಂದು ಜನರು ಆಶೀರ್ವಾದ ಪಡೆಯಲು ಸಾಲುಗಟ್ಟಿ ನಿಂತಿದ್ದಾರೆ ಎನ್ನಲಾಗಿದೆ.
ಎಕ್ಸ್ ಬಳಕೆದಾರ ಪಿಯೂಷ್ ರೈ ಎಂಬುವವರು ಈ ವಿಡಿಯೊ ಹಂಚಿಕೊಂಡು, “ಈಗ ಭಕ್ತರು ನಾಯಿಯನ್ನು ಯಾವುದೋ ದೇವರ ಅವತಾರವೆಂದು ಕಾಣುತ್ತಿದ್ದಾರೆ. ದೇವಾಲಯದೊಳಗೆ ಅದರ ಪಕ್ಕದಲ್ಲಿ ಪೂಜಾರಿಯೂ ಕುಳಿತಿದ್ದಾನೆ. ಬೀದಿ ನಾಯಿ ಈಗ ಆರಾಮದಾಯಕ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದು, ಭಕ್ತರು ಅದರ ಕಾಲು ಮುಟ್ಟಲು ಸಾಲುಗಟ್ಟಿ ನಿಂತಿದ್ದಾರೆ" ಎಂದು ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಇನ್ನು ಈ ವಿಡಿಯೊಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ನಾಯಿಗೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆ ಕೊಡಿಸುವುದನ್ನು ಬಿಟ್ಟು, ಇಂತಹ ವರ್ತನೆ ತೋರುತ್ತಿರುವುದು ಹುಚ್ಚಾಟ ಮತ್ತು ಅಪಾಯಕಾರಿ ಎಂದಿದ್ದಾರೆ.