Viral News: ಇಲ್ಲಿ ರಾವಣನನ್ನು ಸುಡುವುದಿಲ್ಲ, ಪೂಜಿಸಲಾಗುತ್ತದೆ; ವಿಜಯದಶಮಿಯಂದು ಶೋಕ ವ್ಯಕ್ತಪಡಿಸುತ್ತೆ ಇಲ್ಲಿನ ಕುಟುಂಬ
Ravana Isn’t Burnt but Revered: ಸಾಮಾನ್ಯವಾಗಿ ರಾವಣ ಪ್ರತಿಕೃತಿಯನ್ನು ವಿಜಯದಶಮಿಯಂದು ದಹನ ಮಾಡಲಾಗುತ್ತದೆ. ಆದರೆ ದೇಶದ ಈ ಭಾಗದ ಸಮುದಾಯವೊಂದು ರಾವಣನನ್ನು ಪೂರ್ವಜರೆಂದು ಗೌರವಿಸುತ್ತದೆ. ರಾವಣನಿಗೆ ತರ್ಪಣ ಮತ್ತು ಪಿಂಡ ದಾನವನ್ನು ನೆರವೇರಿಸಲಾಗುತ್ತದೆ. ಎಲ್ಲಿ ಈ ಆಚರಣೆ ಇದೆ ಎಂಬುದರ ವಿವರ ಇಲ್ಲಿದೆ.

-

ಜೈಪುರ: ವಿಜಯದಶಮಿಯಂದು ದೇಶದ ಹಲವೆಡೆ ರಾವಣ (Ravan)ನ ಪ್ರತಿಕೃತಿಯನ್ನು ಸುಡಲಾಗುತ್ತದೆ. ಆದರೆ ದೇಶದ ಈ ಭಾಗದಲ್ಲಿ ಮಾತ್ರ ರಾವಣನನ್ನು ಸುಡುವುದಿಲ್ಲ, ಬದಲಾಗಿ ಪೂಜಿಸಲಾಗುತ್ತದೆ. ಶ್ರಾದ್ಧ ಪಕ್ಷದ ಹತ್ತನೇ ದಿನವಾದ ಮಂಗಳವಾರ ರಾಜಸ್ಥಾನದ ಜೋಧಪುರ (Jodhpur)ದ ದವೆ-ಗೋಧ ಶ್ರೀಮಾಲಿ ಬ್ರಾಹ್ಮಣ ಸಮುದಾಯದ ಗೋಡ ಕುಲದ ಸದಸ್ಯರು ರಾವಣನಿಗೆ ತರ್ಪಣ ಮತ್ತು ಪಿಂಡ ದಾನವನ್ನು ನೆರವೇರಿಸಿದರು. ಅವನನ್ನು ಪೂರ್ವಜರೆಂದು ಗೌರವಿಸುವ ಸಂಪ್ರದಾಯವನ್ನು ಮುಂದುವರಿಸಿದರು.
ಈ ಕುಟುಂಬಗಳು ತಮ್ಮನ್ನು ರಾವಣನ ವಂಶಸ್ಥರೆಂದು ಪರಿಗಣಿಸುತ್ತಾರೆ. ಪೂರ್ವಜರ ಆತ್ಮಗಳ ಶಾಂತಿ ಮತ್ತು ಮೋಕ್ಷವನ್ನು ಗುರಿಯಾಗಿಟ್ಟುಕೊಂಡು ಆಚರಣೆಗಳನ್ನು ವೇದ ಪಠಣದೊಂದಿಗೆ ನಡೆಸಲಾಯಿತು. ರಾವಣನ ತಂದೆ ವಿಶ್ರವ ಮತ್ತು ಅಜ್ಜ ಮಹರ್ಷಿ ಪುಲಸ್ತ್ಯರನ್ನು ಸ್ಮರಿಸಲಾಯಿತು.
ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾದ ಈ ಸಮಾರಂಭವು ಜೋಧ್‌ಪುರದ ಕಿಲಾ ರಸ್ತೆಯಲ್ಲಿರುವ ಅಮರನಾಥ ದೇವಾಲಯದಲ್ಲಿ ನಡೆಯಿತು. ಅಲ್ಲಿ ದಶನನ (ರಾವಣ) ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಪಂಡಿತ್ ಅಜಯ್ ದವೆ ಎಂಬವರು ಇತರ ಪಂಡಿತರೊಂದಿಗೆ, ವಿಶ್ರವ ಮತ್ತು ಪುಲಸ್ತ್ಯರ ಹೆಸರುಗಳನ್ನು ಪ್ರಾರ್ಥಿಸುತ್ತಾ ತರ್ಪಣ ಮತ್ತು ಪಿಂಡ ದಾನ ಆಚರಣೆಗಳನ್ನು ನಡೆಸಿದರು. ಪಂಡಿತ್ ಕಮಲೇಶ್ ದವೆ, ರಾವಣನನ್ನು ಶಕ್ತಿ ಮತ್ತು ಬುದ್ಧಿವಂತಿಕೆಯ ಸಂಕೇತವಾಗಿ ಪೂಜಿಸಲಾಗುತ್ತದೆ ಮತ್ತು ರಾವಣನಿಗೆ ತರ್ಪಣ ಮಾಡುವ ಮೂಲಕ ಭಾಗವಹಿಸುವವರು ಈ ಸದ್ಗುಣಗಳನ್ನು ಪಡೆಯಲು ಆಶಿಸುತ್ತಾರೆ ಎಂದು ವಿವರಿಸಿದರು.
ಇದನ್ನೂ ಓದಿ: Viral News: ನೀರಿನ ಬಾಟಲಿಯ ಮುಚ್ಚಳಗಳು ಯಾವಾಗಲೂ ನೀಲಿ ಬಣ್ಣದಲ್ಲಿಯೇ ಇರುವುದು ಏಕೆ ಗೊತ್ತಾ? ಇಲ್ಲಿದೆ ಕಾರಣ
ಜೋಧಪುರದಲ್ಲಿ ಸುಮಾರು 100 ಕುಟುಂಬಗಳ ಸದಸ್ಯರು ರಾವಣನ ವಂಶಸ್ಥರು ಎಂದು ಹೇಳಿಕೊಳ್ಳುತ್ತಾರೆ. ಜೋಧಪುರ ಜಿಲ್ಲೆಯ ಫಲೋಡಿಯಲ್ಲಿ 60 ಕುಟುಂಬಗಳು ಮತ್ತು ಇನ್ನೂ ಅನೇಕ ಕುಟುಂಬಗಳು ಗುಜರಾತ್‌ನಲ್ಲಿ ನೆಲೆಸಿವೆ ಎಂದು ಪಂಡಿತ್ ಅಜಯ್ ಡೇವ್ ವಿವರಿಸಿದರು. ಈ ಕುಟುಂಬಗಳು ವಿಜಯದಶಮಿಯಂದು ರಾವಣ ದಹನವನ್ನು ವೀಕ್ಷಿಸುವುದಿಲ್ಲ. ಬದಲಿಗೆ ತಮ್ಮ ಮನೆಗಳಲ್ಲಿ ಶೋಕಾಚರಣೆಯ ಅವಧಿಯನ್ನು ಆಚರಿಸಲಾಗುತ್ತದೆ ಮತ್ತು ತರ್ಪಣವನ್ನು ನೀಡಲಾಗುತ್ತದೆ.
ಈ ಸಂಪ್ರದಾಯವು ಕಾಲಾನಂತರದಲ್ಲಿ ವಿಕಸನಗೊಂಡಿದೆ. ಆರಂಭದಲ್ಲಿ ಸರೋವರದ ದಡಗಳಲ್ಲಿ ನಡೆಸಲಾಗುತ್ತಿತ್ತು. ನಂತರ ಅದು ರಾವಣನ ಚಿತ್ರವಿರುವ ಮನೆಗಳಿಗೆ ಸ್ಥಳಾಂತರಗೊಂಡಿತು. 2007ರಿಂದ ಅಮರನಾಥ ದೇವಾಲಯದಲ್ಲಿ ರಾವಣನ ವಿಗ್ರಹವನ್ನು ಸ್ಥಾಪಿಸಿದ ನಂತರ, ಆಚರಣೆಗಳನ್ನು ಅಲ್ಲಿಯೇ ನಡೆಸಲಾಗುತ್ತಿದೆ.
ಅನೇಕ ಕುಟುಂಬಗಳು ಈ ಪದ್ಧತಿಯನ್ನು ಮನೆಯಲ್ಲಿಯೇ ಮುಂದುವರಿಸಿಕೊಂಡು ಬಂದಿವೆ. ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ಈ ಪರಂಪರೆಯನ್ನು ಸಂರಕ್ಷಿಸುತ್ತವೆ. ಅವರು ಇದನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡದೆ ತಮ್ಮ ಬೇರುಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಒಂದು ಅಂಶವಾಗಿ ಪರಿಗಣಿಸಿದ್ದಾರೆ.