ಹೀಗೂ ನಡೆಯುತ್ತೆ ವಂಚನೆ: ಭಾರಿ ಬೆಲೆ ತೆತ್ತು ಖರೀದಿಸಿದ ಗ್ಯಾಸ್ ಸಿಲಿಂಡರ್‌ನಲ್ಲಿ ತುಂಬಿತ್ತು ಬರೀ ನೀರು!
Viral Video: ಉತ್ತರ ಪ್ರದೇಶದ ಬೀದಿ ಬದಿಯ ವ್ಯಾಪಾರಿಯೊಬ್ಬರು ಖರೀದಿಸಿದ ಸಿಲಿಂಡರ್ ಕಂಡು ದಂಗಾಗಿ ಹೋಗಿದ್ದಾರೆ. ಸಿಲಿಂಡರ್‌ನಿಂದ ಗ್ಯಾಸ್ ಬದಲಿಗೆ ನೀರು ಸುರಿಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಗ್ಯಾಸ್ ವಿಚಾರದಲ್ಲೂ ಇಂತಹ ವಂಚನೆ ಕಂಡು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಸಿಲಿಂಡರ್ ಒಳಗೆ ಗ್ಯಾಸ್ ತುಂಬಿಸುವ ಬದಲಿಗೆ ನೀರನ್ನು ತುಂಬಿಸಿ ಇಡಲಾಗಿದೆ.
ಸಿಲಿಂಡರ್ ಒಳಗೆ ಗ್ಯಾಸ್ ಬದಲು ನೀರು -
ಲಖನೌ, ಮೇ 19: ಇತ್ತೀಚೆಗೆ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ದೇಶದಲ್ಲಿ ಎಲ್‌ಪಿಜಿ ಹಾಗೂ ಸಿಎನ್‌ಜಿ ಗ್ಯಾಸ್ ಕೊರತೆ ಕಾಡುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಬೀದಿ ಬದಿಯ ವ್ಯಾಪಾರಿಯೊಬ್ಬರು ತಾವು ಖರೀದಿಸಿದ ಸಿಲಿಂಡರ್ ಕಂಡು ದಂಗಾಗಿ ಹೋಗಿದ್ದಾರೆ. ಸಿಲಿಂಡರ್‌ನಿಂದ ಗ್ಯಾಸ್ ಬದಲಿಗೆ ನೀರು ಸುರಿಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.
ಮಾರುಕಟ್ಟೆಯಲ್ಲಿ ಖರೀದಿಸಿದ ಎಲ್‌ಪಿಜಿ ಸಿಲಿಂಡರ್‌ನಿಂದ ನೀರು ಸೋರಿಕೆಯಾಗುತ್ತಿರುವುದು ಕಂಡು ಗ್ರಾಹಕ ದಿಗ್ಭ್ರಮೆಗೊಂಡಿದ್ದಾರೆ. ಗ್ಯಾಸ್ ಸಿಲಿಂಡರ್‌ನಲ್ಲೂ ಇಂತಹ ವಂಚನೆ ಕಂಡು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಸಿಲಿಂಡರ್ ಒಳಗೆ ಗ್ಯಾಸ್ ತುಂಬಿಸುವ ಬದಲಿಗೆ ನೀರನ್ನು ತುಂಬಿಸಿ ಇಡಲಾಗಿದೆ.
ವಿಡಿಯೊ ನೋಡಿ:
मुंह मांगी कीमत चुकाने के बाद भी देश के लोगों को गैस के नाम पर ये मिल रहा है.... pic.twitter.com/ko1E0Pp5yp
— आजाद भारत का आजाद नागरिक (@AnathNagrik) May 18, 2026
ತಾರಾಪುರಿಯ ಜೋಗಿವಾಲಿ ಗಾಲಿಯಲ್ಲಿ ಈ ಘಟನೆ ನಡೆದಿದೆ. ಪಕೋಡಾ ಅಂಗಡಿಯನ್ನು ನಡೆಸುವ ಮೂಲಕ ಜೀವನ ಸಾಗಿಸುವ ತಾರಾಪುರಿಯ ನಿವಾಸಿ ಫಹೀಮ್, ತಮ್ಮ ಮನೆಯಲ್ಲಿ ಗ್ಯಾಸ್ ಖಾಲಿಯಾದ ನಂತರ ತುರ್ತಾಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ್ದರು. ಆದರೆ ಅವರಿಗೆ ಅಧಿಕೃತ ಮಾರ್ಗಗಳ ಮೂಲಕ ತಕ್ಷಣ ಸಿಲಿಂಡರ್ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಸೈಕಲ್‌ನಲ್ಲಿ ಸಿಲಿಂಡರ್‌ಗಳನ್ನು ಮಾರಾಟ ಮಾಡುವ ವ್ಯಕ್ತಿಯಿಂದ 14 ಕೆಜಿ ಎಲ್‌ಪಿಜಿ ಸಿಲಿಂಡರ್ ಖರೀದಿಸಿದ್ದಾರೆ.
ಸಿಲಿಂಡರ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಂದ 14 ಕೆಜಿಯ ಎಲ್‌ಪಿಜಿ ಸಿಲಿಂಡರ್ ಅನ್ನು ಬರೋಬ್ಬರಿ 2,500 ರುಪಾಯಿ ಕೊಟ್ಟು ಖರೀದಿಸಿದ್ದಾರೆ. ಆದರೆ ಸಿಲಿಂಡರ್ ಅನ್ನು ಮನೆಗೆ ತೆಗೆದುಕೊಂಡು ಅಡುಗೆ ಮಾಡಲು ಪ್ರಾರಂಭಿಸಿದಾಗ ಬರ್ನರ್ ಉರಿಯಲಿಲ್ಲ. ಆರಂಭದಲ್ಲಿ ಒಲೆ ಅಥವಾ ನಿಯಂತ್ರಕದಲ್ಲಿ ಸಮಸ್ಯೆ ಇರಬಹುದು ಎಂದು ಅವರು ಅನುಮಾನಿಸಿದರು.
ಫಹೀಮ್ ಸಿಲಿಂಡರ್ ಅಲ್ಲಾಡಿಸಿ ಪರಿಶೀಲಿಸಿದ್ದಾರೆ. ಆದರೂ ಗ್ಯಾಸ್ ಬರದಿದ್ದಾಗ ಅನುಮಾನಗೊಂಡು ಸಿಲಿಂಡರ್ ಅನ್ನು ತಲೆಕೆಳಗಾಗಿ ಮಾಡಿದ್ದಾರೆ. ಆಗ ನೀರು ಹೊರ ಬರುವುದನ್ನು ನೋಡಿ ಅವರು ಆಘಾತಕ್ಕೊಳಗಾದರು. ಸದ್ಯ ಅನಧಿಕೃತ ಮಾರಾಟಗಾರರ ಮೂಲಕ ಎಲ್‌ಪಿಜಿ ಸಿಲಿಂಡರ್‌ಗಳನ್ನು ಖರೀದಿಸಿದರೆ ಉಂಟಾಗುವ ಅಪಾಯಗಳ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ.