ಜೈಲಿನಿಂದ ಬಿಡುಗಡೆಯಾದ ಅತ್ಯಾಚಾರ ಆರೋಪಿಗೆ ಜೈಕಾರ, ಭರ್ಜರಿ ರೋಡ್ ಶೋ: ಇಂಥ ಜನಗಳು ಎಲ್ಲಿ ಸಿಕ್ತಾರೆ? ಹೊಡಿರಿ ಚಪ್ಪಾಳೆ ಎಂದು ವ್ಯಂಗ್ಯವಾಡಿದ ನೆಟ್ಟಿಗರು
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಅತ್ಯಾಚಾರ ಆರೋಪಿಯೊಬ್ಬ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ನಾಚಿಗೆಗೇಡಿನ ದೃಶ್ಯ ಕಂಡಬಂತು. ಆತನಿಗೆ ಬೆಂಬಲ ಸೂಚಿಸಿ ಆಯೋಜಿಸಿದ್ದ ಭರ್ಜರಿ ರೋಡ್‌ಶೋ ಇದೀಗ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ವಿಡಿಯೊ ವೈರಲ್ ಆಗಿದ್ದು, ಪೊಲೀಸರು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಜೆಮಿನಿ ಎಐ ರಚಿತ ಚಿತ್ರ -
ಲಖನೌ, ಮೇ 19: ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ ಅತ್ಯಾಚಾರ ಆರೋಪಿಯೊಬ್ಬ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ನಾಟಕೀಯ ಬೆಳವಣಿಗೆ ನಡೆಯಿತು. ಆತನನ್ನು ಭರ್ಜರಿಯಾಗಿ ಸ್ವಾಗತಿಸಿದ ಬೆಂಬಲಿಗರು, ಅದ್ಧೂರಿ ರೋಡ್ ಶೋ ಆಯೋಜಿಸಿದರು. ಸದ್ಯ ಈ ನಡೆ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಈ ಸಂಭ್ರಮಾಚರಣೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ (viral video) ಆಗಿವೆ.
ಹಿಂದೂ ಯುವ ವಾಹಿನಿಯ ನಗರ ಘಟಕದ ಮಾಜಿ ಅಧ್ಯಕ್ಷ, ಸುಶೀಲ್ ಪ್ರಜಾಪತಿ ಎಂಬ ಆರೋಪಿಗೆ ಸುಮಾರು ಒಂಬತ್ತು ತಿಂಗಳ ನಂತರ ಜಾಮೀನು ದೊರೆಯಿತು. ಜಾಮೀನು ಪಡೆದು ಜೈಲಿನಿಂದ ಹೊರಬರುತ್ತಿದ್ದಂತೆ ಆತನ ಬೆಂಬಲಿಗರು ಹೂವಿನ ಹಾರ ಮತ್ತು ಘೋಷಣೆಗಳೊಂದಿಗೆ ಸ್ವಾಗತಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಬೆಂಬಲಿಗರು ಆತನ ಮೇಲೆ ಹೂಮಳೆ ಸುರಿಸುತ್ತಿರುವುದು ಮತ್ತು ಬಹಿರಂಗ ಶಕ್ತಿ ಪ್ರದರ್ಶನವಾಗಿ ವಾಹನಗಳ ದೊಡ್ಡ ಮೆರವಣಿಗೆಯನ್ನು ನಡೆಸಿರುವುದು ಕಂಡು ಬಂದಿದೆ. ಈ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿದೆ ವಿಡಿಯೊ:
गाजियाबाद में शर्मनाक हरकत, रेप केस के आरोपी का जेल से छूटने पर जोरदार स्वागत
— Bansal News Official (@BansalNews_) May 19, 2026
उत्तर प्रदेश के गाजियाबाद से एक बेहद हैरान और विचलित करने वाला वीडियो सामने आया है, जहाँ एक दुष्कर्म मामले के आरोपी सुशील प्रजापति की जेल से रिहाई पर उसके समर्थकों ने उसका किसी 'हीरो' की तरह स्वागत… pic.twitter.com/wUODZpnI6v
ಮೋದಿನಗರದ ಎಲ್‌ಎಲ್‌ಬಿ ವಿದ್ಯಾರ್ಥಿನಿಯೊಬ್ಬರು 2025ರ ಆಗಸ್ಟ್ 8ರಂದು ಮುರಾದ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಜಾಪತಿ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದರು. ಗಾಜಿಯಾಬಾದ್ ನ್ಯಾಯಾಲಯದಲ್ಲಿ ಕೊಠಡಿ ಪಡೆಯಲು ಮತ್ತು ಕಾನೂನು ಅಭ್ಯಾಸದಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡುವ ಮೂಲಕ ಆರೋಪಿಯು ತನ್ನನ್ನು ವಂಚಿಸಿದ್ದಾನೆ ಎಂದು ಆಕೆ ತನ್ನ ದೂರಿನಲ್ಲಿ ಆರೋಪಿಸಿದ್ದರು. ಮೀರತ್ ನ್ಯಾಯಾಲಯದಲ್ಲಿ ಹಿರಿಯ ವಕೀಲರ ಅಡಿಯಲ್ಲಿ ಕಾನೂನು ಅಧ್ಯಯನ ಮತ್ತು ತರಬೇತಿ ಪಡೆಯುತ್ತಿದ್ದಾಗ 2021ರ ನವೆಂಬರ್‌ನಲ್ಲಿ ಪ್ರಜಾಪತಿಯನ್ನು ಭೇಟಿಯಾಗಿದ್ದಾಗಿ ಅವರು ಪೊಲೀಸರಿಗೆ ತಿಳಿಸಿದ್ದರು.
ಬಾದಾಮಿ ಗುಹಾಂತರ ದೇವಾಲಯಕ್ಕೆ ಚಪ್ಪಲಿ ಧರಿಸಿ ಬಂದ ಮುಸ್ಲಿಂ ಯುವತಿ; ಪ್ರವಾಸಿಗರಿಂದ ತರಾಟೆ
ತನ್ನ ವಕೀಲಿಕೆ ವೃತ್ತಿಯನ್ನು ಗಾಜಿಯಾಬಾದ್ ನ್ಯಾಯಾಲಯಕ್ಕೆ ಬದಲಾಯಿಸುವಂತೆ ಪ್ರಜಾಪತಿ ಸಲಹೆ ನೀಡಿದ್ದನು. ಅಲ್ಲಿ ತನಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿದ್ದನು ಎಂದು ಆ ಮಹಿಳೆ ಆರೋಪಿಸಿದ್ದರು. ಇದೇ ನೆಪದಲ್ಲಿ ಆತ ಆಕೆಯನ್ನು ಥಾರ್ ಎಸ್‌ಯುವಿ (Thar SUV) ಕಾರಿನಲ್ಲಿ ಫ್ಲ್ಯಾಟ್‌ವೊಂದಕ್ಕೆ ಕರೆದೊಯ್ದು, ಕೋಲ್ಡ್ ಡ್ರಿಂಕ್ಸ್‌ನಲ್ಲಿ ಅಮಲು ಪದಾರ್ಥವನ್ನು ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ.
ಎಫ್‌ಐಆರ್ ದಾಖಲಾದ ನಂತರ ಆರೋಪಿ ಪರಾರಿಯಾಗಿದ್ದ. ಪೊಲೀಸರು ಪ್ರಜಾಪತಿಯ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರುಪಾಯಿ ಬಹುಮಾನ ಸಹ ಘೋಷಿಸಿದ್ದರು. ಕೊನೆಗೆ ಅವನನ್ನು 2025ರ ಆಗಸ್ಟ್ 11ರಂದು ಬಂಧಿಸಲಾಯಿತು.
ಪ್ರಜಾಪತಿಯನ್ನು ಮೇ 17ರ ಭಾನುವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಬೆಂಬಲಿಗರು ಜೈಲಿನ ಹೊರಗೆ ಜಮಾಯಿಸಿ ಸಂಭ್ರಮಾಚರಣೆ ಮೆರವಣಿಗೆಯನ್ನು ಆಯೋಜಿಸಿದ್ದರು. ವೈರಲ್ ಆಗಿರುವ ವಿಡಿಯೊ ಪೊಲೀಸರ ಗಮನಕ್ಕೆ ಬಂದಿದ್ದು, ತನಿಖೆಯ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಸುರೇಂದ್ರನಾಥ್ ತಿವಾರಿ ಹೇಳಿದ್ದಾರೆ.