ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೈಲಿನ ಲೋಕೋ ಪೈಲಟ್ ಮೇಲೆ ಕಲ್ಲೆಸೆದ ಮಹಿಳೆ; ಕಾರಣವೇನಿರಬಹದು?

Woman throws stone: ಚಲಿಸುತ್ತಿರುವ ರೈಲೊಂದರ ಬಾಗಿಲಿನಲ್ಲಿ ನಿಂತುಕೊಂಡ ವೃದ್ಧ ಮಹಿಳೆಯೊಬ್ಬರು ಪಕ್ಕದ ಹಳಿಯಲ್ಲಿ ಸಮೀಪಿಸುತ್ತಿರುವ ರೈಲಿಗೆ ಕಲ್ಲನ್ನು ಎಸೆದಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಕೆ ಆ ರೀತಿ ಕಲ್ಲೆಸೆಯಲು ಕಾರಣವೇನಿರಬಹುದು ಎಂಬುದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ.

ರೈಲಿನ ಲೋಕೋ ಪೈಲಟ್ ಮೇಲೆ ಕಲ್ಲೆಸೆದ ಮಹಿಳೆ

-

Priyanka P Priyanka P Oct 18, 2025 7:24 PM

ನವದೆಹಲಿ: ಚಲಿಸುತ್ತಿರುವ ಲೋಕಲ್ ರೈಲಿನ ಬಾಗಿಲಿನಲ್ಲಿ ನಿಂತುಕೊಂಡ ವೃದ್ಧೆಯೊಬ್ಬರು ಪಕ್ಕದ ಹಳಿಯಲ್ಲಿ ಸಂಚರಿಸುತ್ತಿದ್ದ ರೈಲಿಗೆ ದೊಡ್ಡ ಕಲ್ಲನ್ನು ಎಸೆದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿರುವ ಈ ವಿಡಿಯೊ (Viral Video) ಆಘಾತ ಮತ್ತು ಗೊಂದಲವನ್ನುಂಟು ಮಾಡಿದೆ. ಅನೇಕ ಬಳಕೆದಾರರು ಈ ಘಟನೆ ಮುಂಬೈಯಲ್ಲಿ ನಡೆದಿದೆ ಎಂದು ಹೇಳಿದ್ದಾರೆ. ಆದರೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈ ವಿಡಿಯೊ ಮುಂಬೈಯದ್ದಲ್ಲ ಎಂದು ತಿಳಿದುಬಂದಿದೆ.

ವೈರಲ್ ಆಗಿರುವ ಈ ವಿಡಿಯೊದಲ್ಲಿ, ಮಹಿಳೆಯು ದೊಡ್ಡ ಕಲ್ಲನ್ನು ಹಿಡಿದುಕೊಂಡು ಪಕ್ಕದ ಹಳಿಯಲ್ಲಿ ಬರುತ್ತಿರುವ ರೈಲಿನ ಮೋಟಾರ್‌ಮ್ಯಾನ್‌ನ ಕ್ಯಾಬಿನ್‌ಗೆ ಗುರಿಯಿಟ್ಟುಕೊಂಡಿರುವುದು ಕಂಡು ಬಂದಿದೆ. ಕಲ್ಲು ಎಸೆದ ನಂತರ, ಅವಳು ಹಾದುಹೋಗುವ ರೈಲಿಗೆ ಕೂಗುತ್ತಿರುವುದು ಕಂಡುಬಂದಿದೆ. ಆದರೂ ಅವಳ ಮಾತುಗಳು ಕೇಳಿಸುವುದಿಲ್ಲ. ಈ ಆತಂಕಕಾರಿ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಹಲವಾರು ಬಳಕೆದಾರರು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವೈರಲ್ ಆದ ಪೋಸ್ಟ್‌ಗಳಿಂದ ಆರಂಭದಲ್ಲಿ ದಾರಿತಪ್ಪಿದ್ದ ಮುಂಬೈ ಪೊಲೀಸ್ ಅಧಿಕೃತ ಖಾತೆಯು ಸಹ, ತನಿಖೆಗಾಗಿ X (ಹಿಂದೆ ಟ್ವಿಟರ್)ನಲ್ಲಿ ಮುಂಬೈ ಸರ್ಕಾರಿ ರೈಲ್ವೆ ಪೊಲೀಸ್ (GRP) ಅನ್ನು ಟ್ಯಾಗ್ ಮಾಡಿತು. ಆದರೆ ಬಳಿಕ ಈ ಘಟನೆ ನಡೆದಿದ್ದು, ಮುಂಬೈಯಲ್ಲಿ ಅಲ್ಲ ಎಂದು ತಿಳಿದುಬಂದಿದೆ. ಆಕೆ ತನಗೆ ಸಿಕ್ಕ ಅತಿದೊಡ್ಡ ಕಲ್ಲನ್ನು ಹಿಡಿದು ಲೋಕೋಮೋಟಿವ್ ಚಾಲಕನ ಕ್ಯಾಬಿನ್ ಮೇಲೆ ಎಸೆದಿದ್ದಾಳೆ. ಆಕೆ ಆ ರೀತಿ ಕಲ್ಲೆಸೆಯಲು ಕಾರಣವೇನಿರಬಹುದು ಎಂಬುದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ.

ವಿಡಿಯೊ ವೀಕ್ಷಿಸಿ:



ಈ ಹಿಂದೆ ಎಂದಾದರೂ ಆಕೆಗೆ ರೈಲು ಮಿಸ್ ಆಗಿದ್ದಕ್ಕೆ ಪ್ರತೀಕಾರ ತೀರಿಸಿಕೊಂಡಿರಬಹುದು ಎಂದು ಕೆಲವು ಬಳಕೆದಾರರು ತಮಾಷೆ ಮಾಡಿದ್ದಾರೆ. ಇತರರು ಅವಳು ಮಾನಸಿಕ ಅಸ್ವಸ್ಥಳಾಗಿರಬಹುದು ಎಂದು ಶಂಕಿಸಿದರು. ಇನ್ನೂ ಕೆಲವರು ಅವಳು ಒಂದು ನಿರ್ದಿಷ್ಟ ವಿಷಯವನ್ನು ಪ್ರತಿಭಟಿಸುತ್ತಿದ್ದಿರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Bomb Treat: ರೈಲಿನಲ್ಲಿ ಸೀಟ್ ಸಿಗಲಿಲ್ಲವೆಂದು ಹುಸಿ ಬಾಂಬ್ ಕರೆ ಮಾಡಿದ ಕಿಡಿಗೇಡಿ ಸಹೋದರರು!

ದೃಶ್ಯಗಳಲ್ಲಿ ಗೋಚರಿಸುವ ರೈಲಿನ ಮುಂಭಾಗವನ್ನು ಗಮನಿಸಿದರೆ ಇದು ಪಶ್ಚಿಮ ರೈಲ್ವೆ (WR) ಮತ್ತು ಕೇಂದ್ರ ರೈಲ್ವೆ (CR) ವಿಭಾಗಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಮುಂಬೈಯ ಲೋಕಲ್ ರೈಲುಗಳಂತೆ ಕಾಣುವುದಿಲ್ಲ. ಬದಲಾಗಿ ರೈಲು ER ಗುರುತು ಹೊಂದಿದೆ. ಇದು ಪೂರ್ವ ರೈಲ್ವೆಯನ್ನು ಸೂಚಿಸುತ್ತದೆ. ಇದು ಪ್ರಾಥಮಿಕವಾಗಿ ಪಶ್ಚಿಮ ಬಂಗಾಳ ಮತ್ತು ಹತ್ತಿರದ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ವಲಯವಾಗಿದೆ.

ಸಾಕ್ಷ್ಯಾಧಾರಗಳ ಆಧಾರದ ಮೇಲೆ, ಈ ವಿಡಿಯೊ ಮುಂಬೈಯದ್ದಲ್ಲ ಎಂಬುದು ತಿಳಿದುಬಂದಿದೆ. ಪೂರ್ವ ರೈಲ್ವೆ ಜಾಲದ ವ್ಯಾಪ್ತಿಗೆ ಬರುವ ಪ್ರದೇಶದ್ದು ಇರಬಹುದು ಎನ್ನಲಾಗಿದೆ. ಘಟನೆಯ ನಿಖರವಾದ ಸ್ಥಳವನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ಆದರೆ ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಲಾಗಿದೆ.