ನನಸಾದ ದಶಕದ ಕನಸು
ನಾಯಕನಿಗೆ ದೂರದೃಷ್ಟಿ ಆಲೋಚನೆ, ಜನಪರ ಚಿಂತನೆಯಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ಈ ಸೇತುವೆ ತಲೆ ಎತ್ತಿ ನಿಂತಿದೆ ಎಂದರೆ ತಪ್ಪಾಗುವುದಿಲ್ಲ. ಅಷ್ಟಕ್ಕೂ ಈ ಸೇತುವೆ ಇರುವುದು ನರಸಿಂಹರಾಜಪುರ (ಎನ್ಆರ್‌ಪುರ)ದಲ್ಲಿ. ಭದ್ರಾ ಜಲಾಶಯದ ನಿರ್ಮಾಣದ ಬಳಿಕ ಹಿನ್ನೀರಿನಲ್ಲಿ ಮುಳುಗಡೆಯಾದ ಬಳಿಕ ಎನ್ಆರ್ ಪುರ ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ಬೇರೆ ಕಡೆ ವಲಸೆ ಹೋದರು. ಆದರೆ ಎಂಟ್ಹತ್ತು ಗ್ರಾಮದವರು ಅಲ್ಲಿಗೇ ಉಳಿದುಕೊಂಡರು.
-
ಶಂಕುಸ್ಥಾಪನೆ ಮಾಡಿದ್ದ ಸಿದ್ದರಾಮಯ್ಯ ಅವರಿಂದಲೇ ಉದ್ಘಾಟನೆ
ಹುಟ್ಟೂರಿಗೆ ಸೇತುವೆ ನಿರ್ಮಿಸಲು ಸರೋವರ
ಶ್ರೀನಿವಾಸ್ ಅವರ ಅವಿರತ ಶ್ರಮ
ಪ್ರವಾಸಿಗರು-ಪ್ರವಾಸೋದ್ಯಮದ ನಡುವೆ ಸೇತುವೆಯಾಗುವ ವಿಶ್ವಾಸ
ರಸ್ತೆಗಳು ಯಾವುದೇ ಒಂದು ಪ್ರದೇಶದ ಅಭಿವೃದ್ಧಿಯ ಸಂಕೇತ ಎನ್ನುವ ಮಾತೊಂದಿದೆ. ಆದರೆ ಭಾರತದಲ್ಲಿ, ಈಗಲೂ ರಸ್ತೆಗಳು ದೇಶದ ಅಥವಾ ರಾಜ್ಯಗಳ ಅಭಿವೃದ್ಧಿಯ ಸಂಕೇತ ಎನ್ನುವು ದಕ್ಕಿಂತ, ಅನಿವಾರ್ಯತೆಯಾಗಿದೆ. ಇಂತಹದ್ದೇ ಅನಿವಾರ್ಯತೆಯ ಸೇತುವೆಯೊಂದು ಲೋಕಾ ರ್ಪಣೆಗೆ ಸಜ್ಜಾಗಿದ್ದು, ಈ ಸೇತುವೆ ಮೂಲಕ ಮುಂದಿನ ದಿನದಲ್ಲಿ ಸ್ಥಳೀಯರ ದೈನಂದಿನ ವ್ಯಾಪಾರ-ವ್ಯವಹಾರ, ಶಾಲೆ-ಆಸ್ಪತ್ರೆಗೆ ಹೋಗುವವರಿಗೆ ಆಗುತ್ತಿದ್ದ ಸಮಸ್ಯೆ ಬಗೆಹರಿಯುವುದಷ್ಟೇ ಅಲ್ಲದೇ, ಮಲೆನಾಡಿನ ಪ್ರವಾಸೋದ್ಯಮದ ಮತ್ತಷ್ಟು ವಿಸ್ತಾರ ನಿರೀಕ್ಷೆ ಸ್ಥಳೀಯರದ್ದಾಗಿದೆ.
ನಾಯಕನಿಗೆ ದೂರದೃಷ್ಟಿ ಆಲೋಚನೆ, ಜನಪರ ಚಿಂತನೆಯಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ಈ ಸೇತುವೆ ತಲೆ ಎತ್ತಿ ನಿಂತಿದೆ ಎಂದರೆ ತಪ್ಪಾಗುವುದಿಲ್ಲ. ಅಷ್ಟಕ್ಕೂ ಈ ಸೇತುವೆ ಇರುವುದು ನರಸಿಂಹರಾಜಪುರ (ಎನ್ಆರ್‌ಪುರ)ದಲ್ಲಿ. ಭದ್ರಾ ಜಲಾಶಯದ ನಿರ್ಮಾಣದ ಬಳಿಕ ಹಿನ್ನೀರಿನಲ್ಲಿ ಮುಳುಗಡೆಯಾದ ಬಳಿಕ ಎನ್ಆರ್ ಪುರ ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ಬೇರೆ ಕಡೆ ವಲಸೆ ಹೋದರು. ಆದರೆ ಎಂಟ್ಹತ್ತು ಗ್ರಾಮದವರು ಅಲ್ಲಿಗೇ ಉಳಿದುಕೊಂಡರು.
ಈ ರೀತಿ ತಾಯ್ನಾಡು ಬಿಟ್ಟು ಹೋಗಲು ಬಯಸದೇ ಉಳಿದುಕೊಂಡವರಿಗೆ ಹಿನ್ನೀರಿನ ಕಾರಣಕ್ಕೆ ಗ್ರಾಮಗಳಿಂದ ಎನ್‌ಆರ್ ಪುರಕ್ಕೆ ಬರಲು ಸುತ್ತಿಕೊಂಡು ಬರಬೇಕಾದ ಅನಿವಾರ್ಯತೆ ಸೃಷ್ಟಿ ಯಾಗಿತ್ತು. ಈ ಸಮಸ್ಯೆಯನ್ನು ಅರಿತ ಕೆಎಸ್ʼಟಿಡಿಸಿ ಅಧ್ಯಕ್ಷ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಅವರು ತಮ್ಮ ಹುಟ್ಟೂರಿನ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳ ಬೇಕೆಂದು, ಸೇತುವೆ ನಿರ್ಮಿಸಬೇಕೆಂಬ ಆಲೋಚನೆ ಮಾಡಿದರು.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಈ ಸೇತುವೆ ನಿರ್ಮಾಣದ ಮಹತ್ವವನ್ನು ಶ್ರೀನಿವಾಸ್ ಅವರು ಮನವರಿಕೆ ಮಾಡಿಕೊಟ್ಟರು.
ಇದನ್ನೂ ಓದಿ: Hari Paraak Column: ವೈಭವ್ ಸೂರ್ಯವಂಶಿ ನೀತಿ ಹೊಡೆದು ಆಳಬೇಕು
ಭದ್ರಾ ಜಲಾಶಯಕ್ಕೆಂದು ಗ್ರಾಮಗಳನ್ನೇ ಬಿಟ್ಟುಕೊಟ್ಟಿರುವ ಗ್ರಾಮಸ್ಥರಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇತುವೆಯನ್ನು ನಿರ್ಮಿಸಲು ಒಪ್ಪಿಗೆ ನೀಡಿ, ಶಂಕುಸ್ಥಾಪನೆಯನ್ನು ಮಾಡಿದರು. ಆದರೆ ಬಳಿಕ ಸರಕಾರಗಳ ನಿರ್ಲಕ್ಷ್ಯದಿಂದ ಈ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಆದರೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ, ಶ್ರೀನಿವಾಸ್ ಅವರ ಸತತ ಪ್ರಯತ್ನದಿಂದ ಸೇತುವೆ ಕಾರ್ಯ ಮುಕ್ತಾಯವಾಗಿದ್ದು, ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಲೋಕಾರ್ಪಣೆಗೊಳ್ಳಲಿದೆ.
ಭಾರಿ ಹೋರಾಟ
ಲೋಕಾರ್ಪಣೆಗೆ ನವವಧುವಿನಂತೆ ಈ ಸೇತುವೆ ಸಜ್ಜಾಗಿದೆ. ಆದರೆ ಈ ಹಂತಕ್ಕೆ ಈ ಕಾಮಗಾರಿ ಬರುವುದಕ್ಕೆ ಹತ್ತಿರ ಹತ್ತಿರ ಒಂದು ದಶಕ ಬೇಕಾಯಿತು. ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಶಂಕುಸ್ಥಾಪನೆ ಮಾಡಿದ ಬಳಿಕ ಕಾಮಗಾರಿ ವೇಗ ಪಡೆಯುವ ಹೊತ್ತಿನಲ್ಲಿ ಸರಕಾರ ಬದಲಾಯಿತು. ಆಗ ಕಾಮಗಾರಿಗೆ ವೇಗ ನೀಡಲು ಎಷ್ಟೇ ಪ್ರಯತ್ನಿಸಿದರೂ, ಸಾಧ್ಯವಾಗಲಿಲ್ಲ. ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಶ್ರೀನಿವಾಸ್ ಅವರು ಮುತುವರ್ಜಿ ವಹಿಸಿದ್ದರಿಂದ, ಹೆಚ್ಚುವರಿ ಅನುದಾನವನ್ನು ಒದಗಿಸಿ ಯೋಜನೆ ಪೂರ್ಣಗೊಳ್ಳುವಂತಾಗಿದೆ. ಆದರೆ ಈ ಹಂತಕ್ಕೆ ಸೇತುವೆ ಬರುವುದರ ಹಿಂದೆ ಭಾರಿ ಹೋರಾಟ ನಡೆದಿದೆ ಎನ್ನುವುದು ವಾಸ್ತವ.
ನರಸಿಂಹರಾಜಪುರ ಆಗಿದ್ದು ಇತಿಹಾಸ
ಹಾಗೇ ನೋಡಿದರೆ ಇಂದಿನ ಎನ್‌ಆರ್ ಪುರ ಶತಮಾನಗಳ ಹಿಂದೆ ಎನ್.ಆರ್.ಪುರವಾಗಿರಲಿಲ್ಲ. ಬದಲಿಗೆ ಎಡೆಹಳ್ಳಿಯಾಗಿತ್ತು. ಆದರೆ ಮೈಸೂರು ಸಂಸ್ಥಾನ ನರಸಿಂಹರಾಜ ಒಡೆಯರು ಈ ಹಳ್ಳಿಗೆ ಒಮ್ಮೆ ಭೇಟಿ ನೀಡಿದ್ದರು. ಈ ಭೇಟಿಯ ನೆನಪನ್ನು ಅಚ್ಚಳಿಯದಂತೆ ಇಟ್ಟುಕೊಳ್ಳಬೇಕು ಎನ್ನುವ ಕಾರಣಕ್ಕೆ ನರಸಿಂಹರಾಜಪುರ ಅಥವಾ ಎನ್‌ಆರ್ ಪುರ ಎಂದು ಮರುನಾಮಕರಣವಾಯಿತು. ಊರಿಗೆ ಮರುನಾಮಕರಣ ಮಾಡಿ ಶತಮಾನದ ಹೊಸ್ತಿಲಿನಲ್ಲಿ ಸಿದ್ದರಾಮಯ್ಯ ಅವರು ಭೇಟಿ ನೀಡಿದಾಗ ಎಂ.ಶ್ರೀನಿವಾಸ್ ಅವರು ಈ ಸೇತುವೆಯ ಪ್ರಸ್ತಾಪವನ್ನು ಮಾಡಿದ್ದರು. ಇದಕ್ಕೆ ಸ್ಪಂದಿಸಿ 2018ರಲ್ಲಿ ಸಿದ್ದರಾಮಯ್ಯ ಅವರೇ ಈ ಸೇತುವೆಗೆ ಗುದ್ದಲಿಪೂಜೆ ನೆರವೇರಿಸಿದ್ದರು ಹೊನ್ನೇಕೊಡಿಗೆ ಭಾಗದ ಜನರು ಸದ್ಯ ಎನ್‌ಆರ್ ಪುರ ಪೇಟೆಗೆ ಬರಬೇಕೆಂದರೆ ಸುಮಾರು 23 ಕಿಮೀ ಸುತ್ತಿಕೊಂಡು ಬರಬೇಕು. ಆದರೀಗ ಕೇವಲ ಮೂರು ಕಿಮೀ ದೂರ ಪ್ರಯಾಣ ಮಾಡಿದರೆ ಸಾಕು. 38 ಕೋಟಿ ರು. ಅನುದಾನದಲ್ಲಿ ಸೇತುವೆ ನಿರ್ಮಾಣವಾಗಿದ್ದು, ಇದರೊಂದಿಗೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಗತ್ಯವೂ ಇದ್ದಿದ್ದಕ್ಕೆ ಆರು ಕೋಟಿ ರು. ಖರ್ಚು ಮಾಡಲಾಗಿದೆ. ಸುಮಾರು 15-20 ವರ್ಷಗಳ ಸುದೀರ್ಘ ಹೋರಾಟ ಇದಾಗಿತ್ತು.
2017ರಲ್ಲಿ ಶುರುವಾದ ಈ ಕೆಲಸ ಈಗ ಪೂರ್ಣಗೊಳ್ಳುತ್ತಿದ್ದು, ಹೋರಾಟವು ಈಗ ಸಾರ್ಥಕತೆ ಕಂಡುಕೊಂಡಿದೆ. ಪೇಟೆಗೆ ಬಂದು ವಾಪಸ್ ಹೋಗುವುದೆಂದರೆ ಅದು ಒಂದು ಇಡೀ ದಿನದ ಕೆಲಸ ವಾಗಿತ್ತು. ಈಗ ಕೆಲವು ಗಂಟೆಗಳಲ್ಲಿ ಬಂದು ಹೋಗಬಹುದು. ಇದರ ಜತೆಗೆ ಲಕ್ಕುಂದ, ಸಾಲೂರು, ಬಿಳಲ್ಕೊಪ್ಪ ಸೇರಿದಂತೆ ಏಳು ಗ್ರಾಮಗಳ 2000 ಜನಗಳಿಗೆ ಇದು ಅನುಕೂಲವಾಗಲಿದೆ
ಸೇತುವೆಯ ಇತಿಹಾಸ
ಸೇತುವೆಯ ಉದ್ದ : 504 ಮೀ (1.20ಕಿಮೀ ಸಂಪರ್ಕ ರಸ್ತೆ)
ಸೇತುವೆಯ ಅಗಲ : 8.5 ಮೀಟರ್
ಶಂಕುಸ್ಥಾಪನೆಯಾದ ದಿನ : 19032018
ಪೂರ್ಣಗೊಂಡ ದಿನ: 30012026
ಉದ್ದೇಶ : ಎನ್‌ಆರ್ ಪುರ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಸೇತುವೆ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು
ಕಾಮಗಾರಿ ಮೊತ್ತ : 34.86 ಕೋಟಿ ರು.
ಗುತ್ತಿಗೆದಾರರು: Contec Syndicate PVT LTD Banglore
ಭದ್ರ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ್ದ ಗ್ರಾಮದ ಕಷ್ಟ ನಿವಾರಣೆಗೆ ಸೇತುವೆ
ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಶಂಕುಸ್ಥಾಪನೆ; ಅವರ ಎರಡನೇ ಅವಧಿಯಲ್ಲಿ
ಲೋಕಾರ್ಪಣೆ
ತಮ್ಮ ತವರೂರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕೆ ಶ್ರೀನಿವಾಸ್ ಅವರ ಹೋರಾಟಕ್ಕೆ ಸಿಕ್ಕ ಫಲ
ಭಾನುವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸೇತುವೆ ಉದ್ಘಾಟನೆ
ಸ್ಥಳೀಯವಾಗಿ ಈಗಾಗಲೇ ‘ಸಿದ್ದರಾಮಯ್ಯ ಸೇತುವೆ’ ಎಂದೇ ಪ್ರಖ್ಯಾತಿ
ಉದ್ಘಾಟನೆಗೂ ಮೊದಲೇ ಪ್ರವಾಸಿ ತಾಣವಾದ ಸೇತು
![]()
ಈ ಸೇತುವೆ ನನ್ನ ಜೀವಮಾನದ ಸಾಧನೆ. ಇಲ್ಲಿನ ಕೆಲವು ಊರುಗಳು ಮುಳುಗಡೆ ಆದ ಬಳಿಕ ಹೊನ್ನೇಕೊಡಿಗೆಯವರು ಮಾತ್ರ ಇಲ್ಲಿದ್ದರು. ಅವರಿಗೆ ಪೇಟೆಗೆ ಬರುವ ದಾರಿ ಸುಲಭದ್ದಾಗಿರಲಿಲ್ಲ. ಈ ಸೇತುವೆಯಿಂದ ಅವರು ಸಲೀಸಾಗಿ ಓಡಾಡುವ ಹಾಗಾಗಿದೆ. ಇದರ ಎಲ್ಲ ಕ್ರೆಡಿಟ್ ಸಿದ್ದರಾಮಯ್ಯನವರಿಗೆ ಸಲ್ಲಬೇಕಾಗುತ್ತದೆ. ಎಡೆಹಳ್ಳಿಯಾಗಿದ್ದ ಊರಿಗೆ ನರಸಿಂಹರಾಜ ಒಡೆಯರ್ ಬಂದು ನರಸಿಂಹರಾಜಪುರ ಎಂಬ ಹೆಸರು ಕೊಟ್ಟರು. ಹಾಗೇ 100 ವರ್ಷಗಳ ಬಳಿಕ ಬಂದ ನೀವು ಈ ಊರಿಗೆ ಏನಾದರು ಕೊಡುಗೆ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇಳಿದ್ದಕ್ಕೆ ಪ್ರೀತಿಯಿಂದ ಒಪ್ಪಿಕೊಂಡು ಈ ಸೇತುವೆ ನಿರ್ಮಾಣಕ್ಕೆ ನಾಂದಿ ಹಾಡಿದರು. ಶಂಕು ಸ್ಥಾಪನೆ ಕೂಡ ಮಾಡಿದರು. ಈಗ ಲೋಕಾರ್ಪಣೆ ಕೂಡ ಅವರೇ ಮಾಡುತ್ತಿದ್ದಾರೆ. ಹುಟ್ಟೂರಿನ ಋಣ ತೀರಿಸುವ ಪ್ರಯತ್ನ ಅಷ್ಟೇ.
-ಎಂ. ಶ್ರೀನಿವಾಸ, ಅಧ್ಯಕ್ಷರು, ಕೆಎಸ್ ಟಿಡಿಸಿ
![]()
ಎನ್ ಆರ್ ಪುರ ಮತ್ತು ಹೊನ್ನೇಕೊಡಿಗೆ ಸಂಪರ್ಕ ಮಾಡುವಂಥ ರಸ್ತೆಯಿದು. ಮುಳುಗಡೆ ಆದ ನಂತರ ಹಳ್ಳಿಯ ಜನರು ಸುಮಾರು ದೂರ ಪ್ರಯಾಣ ಮಾಡಿ ಎನ್ ಆರ್ ಪುರಕ್ಕೆ ಬರಬೇಕಿತ್ತು. ಈ ಸೇತುವೆಯಿಂದ ಅವರು ಈಗ 10-15 ನಿಮಿಷದಲ್ಲಿ ಪೇಟೆಯನ್ನು ತಲುಪಬಹುದು. ಇದೊಂದು ಐತಿಹಾಸಿಕ ಕಾರ್ಯ. ಮೈಸೂರಿನ ಒಡೆಯರ್ ನರಸಿಂಹರಾಜಪುರ ಎಂದು ನಾಮಕರಣ ಮಾಡಿದ ನೂರು ವರ್ಷಗಳ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರಿಗೆ ಇಂದು ಸೇತುವೆ ಆಗಬೇಕು ಎಂದು ಶ್ರೀನಿವಾಸ ಅವರು ಮನವಿ ಮಾಡಿದರು. ಅದಕ್ಕೆ ಮುಖ್ಯಮಂತ್ರಿಗಳು ಸುಮಾರು 34 ಕೋಟಿ ರು. ವಿಶೇಷ ಅನುದಾನ ನೀಡಿದರು. ಹೀಗಾಗಿ ಆ ಸೇತುವೆಗೆ ಅವರ ಹೆಸರನ್ನೇ ಇಡಲು ತೀರ್ಮಾನಿಸಲಾಗಿದೆ. ಸಿದ್ದರಾಮಯ್ಯನವರೇ ಬಂದು ಉದ್ಘಾಟನೆ ಕೂಡ ಮಾಡುತ್ತಿರು ವುದು ಖುಷಿಯ ವಿಷಯ.
-ಟಿ.ಡಿ, ರಾಜೇಗೌಡ, ಶಾಸಕರು, ಶೃಂಗೇರಿ ವಿಧಾನಸಭಾ ಕ್ಷೇತ್ರ