ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Surendra Pai Column: ಸಾವಿರದ ಸಾಲುಮರಗಳು !

ಬಹುಶಃ ಅಂದು ಆಕೆಗೆ ತಾನು ಮಾಡ ಹೊರಟಿದ್ದ ಕೆಲಸ ಮುಂದೊಂದು ದಿನ ಮನು ಕುಲಕ್ಕೆ ಆದರ್ಶಪ್ರಾಯವಾಗಲಿದೆ ಎಂಬ ಅರಿವು ಇರಲಿಕ್ಕಿಲ್ಲ. ಮರಗಳೇ ತನ್ನ ಮಕ್ಕಳೆಂದು ಭಾವಿಸಿ ತನ್ನೂರಿನ ಹಳ್ಳಿಯ ರಸ್ತೆ ಅಂಚಿನಲ್ಲೊಂದು ಸಸಿ ನೆಡಲು ಪ್ರಾರಂಭಿಸಿದವಳು ಪರಿಸರಪ್ರೇಮಿ ತಿಮ್ಮಕ್ಕ.

Surendra Pai Column: ಸಾವಿರದ ಸಾಲುಮರಗಳು !

-

Ashok Nayak
Ashok Nayak Nov 16, 2025 8:37 AM

ಸುರೇಂದ್ರ ಪೈ ಭಟ್ಕಳ

ಎಲ್ಲಾ ತಾಯಂದಿರಂತೆ ತಾನು ಅಮ್ಮ ಎಂದು ಕರೆಯಿಸಿಕೊಳ್ಳಬೇಕೆಂಬ ಕನಸು! ಹಳ್ಳಿಯಲ್ಲಿ ಓಡಾಡುವ ಮಕ್ಕಳೆಂದರೆ ಅಕ್ಕರೆ. ಮಕ್ಕಳು ಮಾತ್ರವಲ್ಲ, ಸಕಲ ಜೀವಾದಿಗಳು, ಗಿಡ ಮರಗಳು ಎಲ್ಲವೂ ಆಕೆಗೆ ಇಷ್ಟ. ಅದನ್ನೇ ಯೋಚಿಸುತ್ತಾ ಇದ್ದಾಗ, ಅದೊಂದು ಕ್ಷಣ, ಆಕೆಯ ಮನದಲ್ಲೊಂದು ಆಲೋಚನೆ ಮೂಡಿತು; ಅದು ಕೇವಲ ಆಲೋಚನೆ ಅಲ್ಲ, ಹೃದಯದಲ್ಲಿ ಬಿತ್ತಿದ ಬೀಜ.

ತನ್ನೆದೆಯಲ್ಲಿ ಹುದುಗಿಸಿಕೊಂಡಿದ್ದ ಆ ಬೀಜ, ಅಲ್ಲೇ ಕುದುರಿಕೊಂಡಿತು, ನಿಧಾನವಾಗಿ ಜೀವಸಂಚಯಗೊಂಡಿತು. ಆ ಬೀಜ ಮೊಳೆತು ಸಸಿಯಾಗಿ, ನಿಧಾನವಾಗಿ ಬೆಳೆದು ಸಾಲು ಸಾಲು ಮರಗಳಾದವು. ಆಕೆ ತನ್ನ ಮಕ್ಕಳೆಂದು ನಂಬಿದ್ದ ಗಿಡ ಮರಗಳು, ಅಸಾಧಾರಣ ಸಾಧನೆ ಮಾಡಿದವು, ಗಿಡ ನೆಟ್ಟವರೂ ಈ ಬದುಕಿನಲ್ಲಿ ಯಶಸ್ಸು ಗಳಿಸಬಹುದೆಂದು ಸಾಧಿಸಿ ತೋರಿಸಿದವು.

ಅಂದಿನಿಂದ ಆಕೆ ಜೀವಸಂಕುಲಕ್ಕೆ ವೃಕ್ಷಮಾತೆಯಾದಳು. ಕಷ್ಟದಲ್ಲೇ ಜೀವನ ಸಾಗಿಸಿ, ಸಾಲು ಸಾಲು ಮರಗಳನ್ನು ನೆಟ್ಟು ನಿತ್ಯವೂ ನೀರುಣಿಸಿ ಸಾಕಿ ಸಲಹಿದ ಸಾಲುಮರದ ತಿಮ್ಮಕ್ಕ ನಮ್ಮೊಂದಿಗಿಲ್ಲ. 114 ವರ್ಷಗಳ ಕಾಲ ತುಂಬು ಶತಾಯುಷಿ ಜೀವನವನ್ನು ನಡೆಸಿ ಇದೀಗ ತನ್ನ ದೇಹವನ್ನು ತೊರೆದು, ಪ್ರಕೃತಿ ಮಾತೆ ಮಡಿಲು ಸೇರಿದ್ದಾಳೆ.

ಬಹುಶಃ ಅಂದು ಆಕೆಗೆ ತಾನು ಮಾಡ ಹೊರಟಿದ್ದ ಕೆಲಸ ಮುಂದೊಂದು ದಿನ ಮನು ಕುಲಕ್ಕೆ ಆದರ್ಶಪ್ರಾಯವಾಗಲಿದೆ ಎಂಬ ಅರಿವು ಇರಲಿಕ್ಕಿಲ್ಲ. ಮರಗಳೇ ತನ್ನ ಮಕ್ಕಳೆಂದು ಭಾವಿಸಿ ತನ್ನೂರಿನ ಹಳ್ಳಿಯ ರಸ್ತೆ ಅಂಚಿನಲ್ಲೊಂದು ಸಸಿ ನೆಡಲು ಪ್ರಾರಂಭಿಸಿದವಳು ಪರಿಸರಪ್ರೇಮಿ ತಿಮ್ಮಕ್ಕ.

ತಾನು ನೆಟ್ಟ ಒಂದು ಸಸಿ, ಹೆಮ್ಮರವಾಗಿ ಬೆಳೆದು ಬಿಸಿಲ ಬೇಗೆಯಲ್ಲಿ ದಣಿದು ಬಂದ ದಾರಿಹೋಕರಿಗೆ ನೆರಳ ನೀಡುತ್ತಾ ಮೊಗದಲ್ಲಿ ಮಂದಹಾಸ ಮೂಡಿಸಿತು. ಪಕ್ಷಿ ಸಂಕುಲ ಗಳಿಗೆ ಆಶ್ರಯದ ತಾಣವಾಯಿತು. ಮನುಕುಲಕ್ಕೆ ಶುದ್ಧ ಆಮ್ಲಜನಕವನ್ನು ನೀಡಿ, ಭೂಮಿ ಯ ಸಮತೋಲನವನ್ನು ಕಾಪಾಡಿತು.

ಪರಿಸರ ಸಂರಕ್ಷಣೆಯೇ ನನ್ನ ಬದುಕಿನ ದಾರಿ ಎಂದು ನಂಬಿದ ಆಕೆ ನಿಜಕ್ಕೂ ಸಾವಿರದ ಸಾಲು ಮರಗಳ ವೃಕ್ಷಮಾತೆಯಾಗಿ ಚಿರಸ್ಥಾಯಿಯಾಗಿ ಎಲ್ಲರ ಮನದಲ್ಲಿ ಉಳಿದುಬಿಟ್ಟಳು.

ನಿರ್ಮಲ ಬದುಕು

ಪರಿಸರವೇ ಜೀವನವೆಂದು ಬದುಕುವ ಪರಿವೇ ನಿರ್ಮಲ. ಶಿಕ್ಷಣದ ಗಂಧವೇ ತಿಳಿಯದ, ಹೊಟ್ಟೆ ಬಟ್ಟೆಗಾಗಿ ಕಲ್ಲು ಗಣಿಯಲ್ಲಿ ದಿನಗೂಲಿ ಕೆಲಸ ಮಾಡುತ್ತಾ ದಿನವನ್ನು ಕಳೆದ ಜೀವನ ಆಕೆಯದು. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ 1911 ಜೂನ್ 30ರಂದು ಜನನ. ನಂತರ ಮಾಗಡಿ ತಾಲೂಕಿನ ಚಿಕ್ಕಯ್ಯ ಎಂಬುವವರನ್ನು ವಿವಾಹವಾದರು. ಆದರೆ ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ.

ಅಂದು ತಿಮ್ಮಕ್ಕನ ಭಾವನೆಗಳಿಗೆ ಬೆಳಕಾದವರೆ ಈ ಸಸಿಗಳು. ಅಂದಿನಿಂದ ರಸ್ತೆಯ ಬದಿ ಯಲ್ಲಿ ತಾನು ನೆಟ್ಟ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿ ದ್ದಳು. ಗಿಡಗಳಿಗೆ ನೀರುಣಿಸಿದ ತಿಮ್ಮಕ್ಕ ಮೊದಲಿಗೆ ಮರಗಳಿಂದ ಸಸಿಗಳನ್ನು ಕಸಿಮಾಡಲು ಆರಂಭಿಸಿ ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕದೂರು ಹಳ್ಳಿಯ ರಸ್ತೆಯ ಬಳಿ ನೆಡಲಾಯಿತು.

ಹೀಗೆ ಪ್ರಾರಂಭವಾದ ಪಯಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿ ಸಾವಿರಾರು ಮರಗಳು ಸಾಲು ಸಾಲಾಗಿ ಬೆಳೆದವು. ತಮ್ಮ ಮಕ್ಕಳಾದ ಸಸಿಗಳನ್ನು ಬೆಳೆಸಲು, ಪೋಷಿ ಸಲು ತಮ್ಮ ದಿನಗೂಲಿಯ ಆದಾಯವನ್ನೇ ಬಳಸಿಕೊಂಡರು. ಆಧುನಿಕ ಸೌಲಭ್ಯವಿರದ ಕಾಲದಲ್ಲೂ ನಿತ್ಯವೂ ನಾಲ್ಕಾರು ಕಿ.ಮೀ. ನಡೆದುಕೊಂಡೇ ನೀರು ತಂದು, ನಿತ್ಯ ನೀರು ಹಾಕಿ, ದನಕರುಗಳು ಗಿಡಗಳನ್ನು ತಿನ್ನದಂತೆ ನೋಡಿಕೊಂಡು ಪೋಷಿಸಿದಳು.

ಆ ಗಿಡಗಳೀಗ ದೊಡ್ಡ ಮರಗಳಾಗಿ, ರಸ್ತೆಯುದ್ದಕ್ಕೂ ಬೆಳೆದು ನಿಂತಿವೆ. ಆ ಸಾಲುಮರಗಳೇ ಒಂದು ನೆಡುತೋಪಾಗಿವೆ; ಶುದ್ಧ ಗಾಳಿ ಮತ್ತು ಸುಂದರ ನೋಟವನ್ನು ಒದಗಿಸುತ್ತಿವೆ. ಆಕೆ ಎಂದಿಗೂ ತನ್ನ ಕಾರ್ಯವನ್ನು ಫೇಸ್‌ಬುಕ್ ಮೂಲಕ, ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಪ್ರಚಾರ ಮಾಡಿದವಳಲ್ಲ. ಆಕೆ ನಮ್ಮಷ್ಟು ಓದಿದವಳು ಅಲ್ಲ. ಆದರೂ ಇಂದಿನ ಜೆನ್ ಅಲ್ಪಾ ಮಕ್ಕಳಿಗೂ ಆಕೆಯ ಗುರುತಿದೆ.

ಕಲುಷಿತ ಗಾಳಿ ಹಾಗೂ ಪರಿಸರ ಮಾಲಿನ್ಯವು ದಿನೇ ದಿನೇ ಹೆಚ್ಚಾಗುತ್ತಾ ಉಸಿರುಗಟ್ಟಿಸುವ ಇಂದಿನ ಪರಿಸ್ಥಿತಿಯಲ್ಲಿ ಮುಂದಿನ 10-15 ವರ್ಷ ಗಳ ಬಳಿಕ ಜನರೆಲ್ಲಾ ಹತ್ತಕ್ಕೆ ನೂರ ರಷ್ಟು ದುಡ್ಡು ನೀಡಿ ಆಕ್ಸಿಜನ್ ಸಿಲಿಂಡರ್, ಸಸಿಗಳನ್ನು ಕೊಂಡು ಅವುಗಳನ್ನು ತಮ್ಮ ಹೆಗಲಿಗೆ ನೇತು ಹಾಕಿಕೊಂಡು ಸಾಗುತ್ತಿರು ವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರು ವುದನ್ನು ನೋಡಿದಾಗ ಸಾಲುಮರದ ತಿಮ್ಮಕ್ಕ ನೆನಪಾಗುತ್ತಾಳೆ.

ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ, ಹೆದ್ದಾರಿಯ ಅಗಲೀಕರಣಕ್ಕೆಂದು, ಮೆಟ್ರೋ ನಿರ್ಮಾಣ ಕ್ಕೆಂದು, ಮನೆ ಕಟ್ಟಲೆಂದು ನಿತ್ಯವೂ ಸಾವಿರಾರು ಮರಗಳ ಮಾರಣಹೋಮ ನಡೆಯು ತ್ತಿರುವ ಈ ಸಮಯದಲ್ಲಿ, ಮಾರ್ಗ ಮಧ್ಯದಲ್ಲಿ ದೊಡ್ಡ ಆಲದ ಮರದ ಬುಡವೊಂದನ್ನು ಕಡಿದು ಎಸೆದಿರುವುದನ್ನು ಕಂಡಾಗ ಮನಸ್ಸಿಗೆ ಅದೇನೋ ಸಂಕಟ ವಾಗುತ್ತದೆ.

ಆಗ ಮತ್ತೆ ತಿಮ್ಕಕ್ಕ ನಮ್ಮನ್ನು ಕಾಡುತ್ತಾಳೆ. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆ ಯಲ್ಲಿ ತಿಮ್ಮಕ್ಕಳ ಮಹತ್ತರ ಸಾಧನೆಗೆ ಹಲವಾರು ಸಂಘ ಸಂಸ್ಥೆ ಸೇರಿದಂತೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ. ರಾಜ್ಯೋತ್ಸವ ಪ್ರಶಸ್ತಿ, ವಿಶಾಲಾಕ್ಷಿ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಪ್ರಶಸ್ತಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ - ಈ ರೀತಿ ಸಾಲು ಸಾಲು ಗೌರವಗಳಿಗೆ ಇವರು ಪಾತ್ರರಾಗಿದ್ದಾರೆ.

ಅಮೆರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್‌ಲ್ಯಾಂಡ್, ಕ್ಯಾಲಿ ಫೋರ್ನಿಯಗಳಲ್ಲಿ ಸ್ಥಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ಇರುವ ಪರಿಸರವಾದಿ ಸಂಘಟನೆ ಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ. ಶಾಲಾ ಪಠ್ಯಪುಸ್ತಕದಲ್ಲೂ ‘ಸಾಲು ಮರದ ತಿಮ್ಮಕ್ಕ’ ಎಂಬ ಪಾಠವಿದೆ.

ಮಾಗಡಿ ತಾಲೂಕಿನ ಕುದೂರು ಸುತ್ತಮುತ್ತ ಆಕೆ ನೆಟ್ಟ 384 ಆಲದ ಮರಗಳು ಸೇರಿದಂತೆ, ಕರ್ನಾಟಕದಾದ್ಯಂತ ನೆಟ್ಟಿರುವ ಸುಮಾರು 8000ಕ್ಕೂ ಹೆಚ್ಚು ಮರಗಳು ಇಂದು ಹಸು ರನ್ನು ಸೂಸುತ್ತಿವೆ, ಆಮ್ಲಜನಕವನ್ನು ನೀಡುತ್ತಿವೆ, ಪಕ್ಷಿಗಳಿಗೆ ಆಸರೆ ನೀಡಿವೆ. ಆಕೆ ಗಿಡಗಳನ್ನು ನೆಡಲು ಆಯ್ಕೆ ಮಾಡಿಕೊಂಡದ್ದು ಆಲದ ಮರದ ಸಸಿಗಳನ್ನು. ಅವು ಆಮ್ಲಜನಕದ ಪವರ್‌ಹೌಸ್.

ಹಾಗಾಗಿ ಅವು ಪರಿಸರ ವ್ಯವಸ್ಥೆಯ ನಾಯಕ ಇದ್ದಂತೆ. ಆಲದ ಮರಗಳನ್ನು ಸಾಲಾಗಿ ಬೆಳೆಯುವ ಮೂಲಕ, ಆ ಗಿಡಗಳಿಗೆ ನೀರನ್ನು ಹೊತ್ತುತಂದು ನೀಡುವ ಮೂಲಕ, ತಿಮ್ಮಕ್ಕ ಇಂದು ಅಮರರಾಗಿದ್ದಾರೆ.