ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Somalinganna Benni Column: ʼಮುಳ್ಳುಗಳೇ ಹೂʼವಾಗುವ ಗ್ರಾಮೀಣ ಯುಗಾದಿ

ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಪ್ರತಿವರ್ಷ ಯುಗಾದಿ ಹಾಗೂ ಕಾರ್ತಿಕ ಮಾಸದ ಹಬ್ಬ ಗಳಲ್ಲಿ ಮುಳ್ಳು ಹಬ್ಬವೂ ವಿಶೇಷವಾಗಿ ಚಾಲ್ತಿಯಲ್ಲಿದೆ. ಆಯಾ ಗ್ರಾಮದ ಮಾರುತೇಶ್ವರ, ಗ್ರಾಮದೇವತೆ ಹಾಗೂ ನಾನಾ ದೇವರ ಹೆಸರಿನ ಮೇಲೆ ನಡೆಯುವ ಈ ಸಾಹಸಮಯ ಹಬ್ಬವು ನೋಡಲು ಒಂದು ರೋಮಾಂಚಕ ಅನುಭವ. ಭಕ್ತಿ ಮತ್ತು ಸಾಹಸ ಬೆರೆತಿರುವ ಈ ಆಚರಣೆಯು, ಯುಗಾದಿಯ ಸಂಭ್ರಮ ವನ್ನು ನೂರ್ಮಡಿಗೊಳಿಸುತ್ತದೆ, ನೆರೆದವರನ್ನು ಬೆರಗಾಗಿಸುತ್ತದೆ.

ʼಮುಳ್ಳುಗಳೇ ಹೂʼವಾಗುವ ಗ್ರಾಮೀಣ ಯುಗಾದಿ

-

Profile
Ashok Nayak Apr 19, 2026 12:37 PM

ಸೋಮಲಿಂಗಪ್ಪ ಬೆಣ್ಣಿ

ನಮ್ಮ ದೇಶದ ವೈವಿಧ್ಯತೆಯನ್ನು ಹಲವು ರೀತಿಯಲ್ಲಿ ಹೊಗಳಿದ್ದಾರೆ. ವೈವಿಧ್ಯತೆಯಲ್ಲಿ ಏಕತೆ ಎಂಬ ವಾಕ್ಯವನ್ನು ಸ್ವಾತಂತ್ರ್ಯ ಹೋರಾಟಗಾರರು ಸಹ ಬಳಸಿದ್ದಾರೆ. ನಮ್ಮ ರಾಜ್ಯದ ವೈವಿಧ್ಯಮಯ ಆಚರಣೆಗಳ ಪಟ್ಟಿ ಮಾಡಿದರೆ, ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಆಚರಿಸುವ ಮುಳ್ಳಿನ ಹಬ್ಬವು ಅಗ್ರಸ್ಥಾನದಲ್ಲಿ ನಿಲ್ಲಬಲ್ಲದು! ಯುಗಾದಿ ಅಥವಾ ದೀಪಾವಳಿಯ ಸಮಯದಲ್ಲಿ, ಬೃಹತ್ ಮುಳ್ಳಿನ ರಾಶಿಯನ್ನು ಹಳ್ಳಿಯ ಪ್ರಮುಖ ಭಾಗದಲ್ಲಿ ಪೇರಿಸಿ, ಅದರ ಮೇಲೆ ಕುಣಿದಾಡುವ ಯುವಕರ ಉತ್ಸಾಹ ಮತ್ತು ಉಲ್ಲಾಸಕ್ಕೆ, ಭಕ್ತಿಯೇ ತಳಪಾಯ. ಹಬ್ಬದ ಆಚರಣೆಯ ಭಾಗವಾಗಿ ಮುಳ್ಳಿನ ರಾಶಿಯ ಮೇಲೇರುವ ಯುವಕರು, ನೋವನ್ನು ಮರೆತು ಭಕ್ತಿಯನ್ನು ತೋರುತ್ತಾರೆ. ಮುಳ್ಳಿನ ರಾಶಿಯ ಮೆರವಣಿಗೆಯು ತಮಟೆ ಸದ್ದಿನೊಂದಿಗೆ ಮುಂದುವರಿದು, ಊರಿನ ಪ್ರಮುಖ ದೇಗುಲಕ್ಕೆ ಸಾಗುವುದು ಮತ್ತೊಂದು ವಿಶೇಷ! ಗ್ರಾಮೀಣರು ಆಚರಿಸುವ ಈ ಪರಿಯ ಯುಗಾದಿಯ ಸಂಭ್ರಮವು ನಿಜಕ್ಕೂ ಅಪರೂಪದ್ದು!

ಮೈ ಜುಂ ಎನ್ನುವಂತಿರುವ ಮುಳ್ಳು ಗಿಡಗಳು, ನೆತ್ತಿಯ ಮೇಲೆ ಕೆಂಡದಂತೆ ಸುಡುವ ಬೇಸಿಗೆಯ ಬಿಸಿಲು. ಪಕ್ಕದಲ್ಲಿ ಹುರುಪೇರಿಸುವ ಡೊಳ್ಳಿನ ಬಡಿತ. ಭಕ್ತಿಯ ಪರಾಕಾಷ್ಠೆಯನ್ನು ಮೈಯೊಳ ಗಿಳಿಸಿಕೊಂಡ ಯುವಕರ ಪಡೆ; ಅವರೆಲ್ಲರೂ ಆ ಮುಳ್ಳು ಗಿಡಗಳ ರಾಶಿಯ ಮೇಲೆ ಹಾರುತ್ತಿದ್ದು ದನ್ನು ಸುತ್ತಲೂ ನೆರೆದ ಗ್ರಾಮೀಣ ಜನರು ಬೆರಗುಗಣ್ಣಿನಿಂದ ನೋಡುತ್ತಾ ನಿಂತಿದ್ದಾರೆ; ಎಲ್ಲರೂ ಭಕ್ತಿಯಿಂದ ನಮಿಸುತ್ತಿದ್ದಾರೆ, ಮುಳ್ಳು ಗಿಡಗಳ ಮೇಲೆ ಏರುತ್ತಿರುವ ಯುವಕರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಇಂತಹ ಉಲ್ಲಾಸದ ಸಂದರ್ಭಗಳನ್ನು ಕಂಡಾಗ ಹೊಳೆಯುವ ಉತ್ತರ ಒಂದೇ: ಉತ್ತರ ಕರ್ನಾ ಟಕದ ಹಲವು ಹಳ್ಳಿಗಳಲ್ಲಿ ಯುಗಾದಿ ಅಥವಾ ಕಾರ್ತಿಕ ಮಾಸದ ಹಬ್ಬಗಳು ಸಂಭ್ರಮದಿಂದ ಈ ಪ್ರಕಾರವಾಗಿ, ವೈವಿಧ್ಯಮಯವಾಗಿ ನಡೆಯುತ್ತಿವೆ ಎಂದರ್ಥ.

ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಪ್ರತಿವರ್ಷ ಯುಗಾದಿ ಹಾಗೂ ಕಾರ್ತಿಕ ಮಾಸದ ಹಬ್ಬಗಳಲ್ಲಿ ಮುಳ್ಳು ಹಬ್ಬವೂ ವಿಶೇಷವಾಗಿ ಚಾಲ್ತಿಯಲ್ಲಿದೆ. ಆಯಾ ಗ್ರಾಮದ ಮಾರುತೇಶ್ವರ, ಗ್ರಾಮದೇವತೆ ಹಾಗೂ ನಾನಾ ದೇವರ ಹೆಸರಿನ ಮೇಲೆ ನಡೆಯುವ ಈ ಸಾಹಸಮಯ ಹಬ್ಬವು ನೋಡಲು ಒಂದು ರೋಮಾಂಚಕ ಅನುಭವ. ಭಕ್ತಿ ಮತ್ತು ಸಾಹಸ ಬೆರೆತಿರುವ ಈ ಆಚರಣೆಯು, ಯುಗಾದಿಯ ಸಂಭ್ರಮವನ್ನು ನೂರ್ಮಡಿಗೊಳಿಸುತ್ತದೆ, ನೆರೆದವರನ್ನು ಬೆರಗಾಗಿಸುತ್ತದೆ.

ವಿಶೇಷವಾಗಿ ಕೊಪ್ಪಳ ಜಿಲ್ಲೆಯ ಗಬ್ಬೂರು, ಅಬ್ಬಿಗೇರಿ, ಲಾಚನಕೇರಿ, ಹ್ಯಾಟಿಮುಂಡರಗಿ, ಬಹದ್ದೂರಬಂಡಿ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಈ ಹಬ್ಬವು ವಿಶೇಷವಾಗಿ ಆಚರಣೆಯಲ್ಲಿದೆ.

ಇದನ್ನೂ ಓದಿ: Narayan Yaji Column: ʼಶಂಕರ ಭಗವತ್ಫಾದʼರ ಕಾಲ ಯಾವುದು ?

ಅಗಸಿಯ ಮುಂದೆ ಮುಳ್ಳಿನ ರಾಶಿ!

ಇಲ್ಲಿನ ಕೆಲವು ಹಳ್ಳಿಗಳಲ್ಲಿ ಕಾರ್ತಿಕ ಮಾಸದ ಹಬ್ಬದಲ್ಲಿ ಮುಳ್ಳು ಹಬ್ಬ ಆಚರಿಸಿದರೆ ಹಲವು ಹಳ್ಳಿಗಳಲ್ಲಿ ಯುಗಾದಿ ಹಬ್ಬದಲ್ಲಿ ಮುಳ್ಳು ಹಬ್ಬ ಆಚರಿಸಲಾಗುತ್ತದೆ. ಹಬ್ಬದ ದಿನ ಊರಿನ ತುಂಬೆಲ್ಲ ಸಡಗರ, ಸಂಭ್ರಮ. ಊರಿನ ಜನರು ತಮ್ಮ ಗ್ರಾಮದ ಹೊರವಲಯದಲ್ಲಿನ ಜಾಲಿ, ಖಾರಿ, ಕವಳಿ ಮತ್ತಿತರ ಕಠಿಣ ಮತ್ತು ಬಿರುಸಾದ ಮುಳ್ಳುಗಳನ್ನು ಹೊಂದಿರುವ ಮರದ ಕೊಂಬೆಗಳನ್ನು ಕಡಿದು ತಂದು ಊರ ‘ಅಗಸಿ’ಯ ಮುಂದೆ ಗುಡ್ಡೆ ಹಾಕುತ್ತಾರೆ. ಡೊಳ್ಳು ಮತ್ತಿತರ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮುಳ್ಳು ಕೊಂಪೆಯನ್ನು ಮೆರವಣಿಗೆ ರೀತಿ ಯಲ್ಲಿ ಕೊಂಡೊಯ್ಯಲಾಗುತ್ತದೆ. ಅಂದರೆ, ಈ ಮುಳ್ಳಿನ ದೊಡ್ಡ ದೊಡ್ಡ ಕೊಂಬೆಗಳೇ, ಜನರಿಂದ ಪೂಜಿಸಲ್ಪಡುವ ಸಾಮಗ್ರಿಗಳು; ಈ ಆಚರಣೆಯಲ್ಲಿ ಭಕ್ತಿ ಇದೆ, ಶ್ರದ್ಧೆ ಇದೆ.

ಚೂಪಾದ ಮುಳ್ಳುಗಳಿಂದ ತುಂಬಿದ ಆ ಕೊಂಬೆಗಳನ್ನು ಮೆರವಣಿಗೆಯಲ್ಲಿ ತರುವಾಗ, ಅದನ್ನು ನೋಡಲು ಆ ಊರಿನ ಹಾಗೂ ಸುತ್ತಮುತ್ತಲಿನ ನೂರಾರು ಭಕ್ತರು ಅಲ್ಲಿ ನೆರೆದಿರುತ್ತಾರೆ. ಡೊಳ್ಳಿನ ನಾದಕ್ಕೆ ಊರಿನ ಯುವಕರು ಆವೇಶಕ್ಕೆ ಒಳಗಾಗುತ್ತಾರೆ; ಮುಳ್ಳಿನ ರಾಶಿಗೆ ನಮಿಸುವುದು ಆರಂಭಿಕ ಹಂತ. ಭಕ್ತಿಯು ಇನ್ನಷ್ಟು ಔನ್ನತ್ಯಕ್ಕೆ ಏರುವುದು ಈಗ ಶುರು. ಭಕ್ತಿಯ ಪರಾಕಾಷ್ಠೆ ತಲುಪಿದ ಯುವಕರು, ನಾ ಮುಂದು ತಾ ಮುಂದು ಎಂದು ಸ್ಪರ್ಧೆಗಿಳಿದವರಂತೆ ಮುಳ್ಳಿನ ರಾಶಿಯ ಮೇಲೆ ಜಿಗಿದು ಕುಣಿಯತೊಡಗುತ್ತಾರೆ.

ಸುತ್ತಲೂ ನೂರಾರು ಸಂಖ್ಯೆಯಲ್ಲಿ ಜಮಾಯಿಸುವ ಹಳ್ಳಿಯ ಜನರು, ಹೆಂಗಳೆಯರು, ಮಕ್ಕಳು ಬಹು ಬೆರಗಿನಿಂದ ಮತ್ತು ಭಕ್ತಿಯಿಂದ ಈ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಊರಿನ ಅಗಸಿ ಯಿಂದ ಪ್ರಾರಂಭವಾಗುವ ಈ ಮುಳ್ಳು ಜಿಗಿತದ ಹಬ್ಬವು ಗ್ರಾಮದ ಆರಾಧ್ಯ ದೇವರ ಗುಡಿಯನ್ನು ತಲುಪಲು ಸುಮಾರು ಎರಡರಿಂದ ಮೂರು ಗಂಟೆಗಳಾದರೂ ಬೇಕು. ಆ ಇಡೀ ಅವಧಿಯಲ್ಲಿ ಬೀದಿ ಯುದ್ದಕ್ಕೂ ಈ ಸಾಹಸದ ಪ್ರದರ್ಶನ, ಭಕ್ತಿಯಿಂದ ಮುಳ್ಳಿನ ರಾಶಿಯ ಮೇಲೇರಿ ಯುವಕರು ಕುಣಿಯುವ ದೃಶ್ಯ!

Screenshot_8

ಭಕ್ತಿಯ ಶಕ್ತಿ ನೋವಿಗೆ ಮುಕ್ತಿ

ಅತ್ತ ದೇವರ ಮೇಲಿನ ಭಕ್ತಿ, ಇತ್ತ ಡೊಳ್ಳಿನ ಹೊಡೆತದ ಸದ್ದು ಅಷ್ಟೇ ಅಲ್ಲ, ಸುತ್ತಲೂ ನೋಡುತ್ತ ನಿಂತ ಸಾವಿರಾರು ಜನರ ಕುತೂಹಲ ಮತ್ತು ಪ್ರೋತ್ಸಾಹವೂ ಉತ್ಸಾಹಿ ಯುವಕರನ್ನು ಬಡಿದೆಬ್ಬಿಸುತ್ತದೆ. ಭಕ್ತಿ ಮತ್ತು ಸಕಾರಾತ್ಮಕ ಉತ್ಸಾಹವನ್ನು ಮೈದುಂಬಿಕೊಂಡ ಯುವಕರ ಪಡೆ ಅಂತಹ ಕಠೋರ ಮುಳ್ಳಿನ ಮೇಲೆ ಜಿಗಿದಾಡಿದರೂ, ಅವರಿಗೆ ಮುಳ್ಳು ಚುಚ್ಚಿದ ಅನುಭವ ವಾಗುವುದಿಲ್ಲ ಎನ್ನುವುದು ಇಲ್ಲಿನ ವಿಶೇಷ. ಭಕ್ತಿಯ ಪರಾಕಾಷ್ಠೆಯಿಂದಾಗಿ, ಅವರ ಮನೋ ಸ್ಥೈರ್ಯವು ಅಧಿಕಗೊಂಡು, ಅವರನ್ನು ನೋವಿನಿಂದ ಮುಕ್ತಿಯಾಗಿಸುತ್ತದೆ.

Screenshot_7 R

ಮುಳ್ಳುಗಳು ಅವರಿಗೆ ಚುಚ್ಚುವುದಿಲ್ಲ ಎನ್ನಲಾಗದು, ಆದರೆ, ಅದರಿಂದಾಗುವ ನೋವು ಅವರನ್ನು ಬಾಧಿಸುವುದಿಲ್ಲ, ದೇವರ ಸೇವೆ ಎಂಬಂತೆ ಅವರು ಮುಳ್ಳುಗಳ ಮೇಲೆ ಜಿಗಿಯುತ್ತಾರೆ, ಕುಣಿಯು ತ್ತಾರೆ. ಇದನ್ನು, ಕೊಂಡ ಹಾಯುವುದು ಮತ್ತು ಗೆಂಡ ಸೇವೆಗೆ ಹೋಲಿಸಬಹುದು; ಕೊಂಡ ಹಾಯು ವಾಗಲೂ ಸಹ, ಬೆಂಕಿಯು ಕಾಲಿನ ಅಡಿ ಇದ್ದರೂ, ಭಕ್ತಿಯಿಂದ ಕೊಂಡ ಹಾಯುವವರಿಗೆ ಅದರಿಂದ ಭಯವಾಗದು, ನೋವಾಗದು. ಅದೇ ರೀತಿ, ಹಬ್ಬದ ದಿನ, ಆಚರಣೆಯ ಭಾಗವಾಗಿ ಮುಳ್ಳುಗಳ ಮೇಲೆ ಏರುವ, ಜಿಗಿದಾಡುವ ಯುವಕರಿಗೂ ನೋವಾಗದು, ಬದಲಿಗೆ ಅಪರೂಪದ ಧೈರ್ಯವನ್ನು ಪ್ರದರ್ಶಿಸುತ್ತಾ, ಅವರೆಲ್ಲರೂ ಮುಳ್ಳುಗಳಲ ಮೇಲೆ ಜಿಗಿಯುತ್ತಾರೆ.

ಭಕ್ತಿ, ಏಕಾಗ್ರತೆ, ಮನೋಧೈರ್ಯ, ಛಲವು ಎಂತಹ ಕಠಿಣ ಸವಾಲನ್ನೂ ಸ್ವೀಕರಿಸಲು ಶಕ್ತಿಯನ್ನು ನೀಡುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಇಂತಹ ಹಬ್ಬಗಳನ್ನು ನೋಡಬಹುದು. ಜತೆಗೆ, ನೈಜ ಬದುಕಿನಲ್ಲಿ ಎದುರಾಗುವ ಹಲವು ಕಷ್ಟದ ಮತ್ತು ಬಿಕ್ಕಟ್ಟಿನ ಸನ್ನಿವೇಶಗಳನ್ನು ಎದುರಿಸಲು, ಇಂತಹ ಭಕ್ತಿಪೂರ್ವಕ ಸಾಹಸ ಪ್ರದರ್ಶನಗಳು ಜನರಲ್ಲಿ ಮನೋಸ್ಥೈರ್ಯವನ್ನು ತುಂಬುತ್ತವೆ.

ಅದೆಷ್ಟೋ ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಸಾಹಸಮಯ ಹಬ್ಬಗಳು ಇಂದಿಗೂ ಮುಂದುವರಿದುಕೊಂಡು ಬಂದಿರುವುದು ನಮ್ಮ ನಾಡಿನ ಗ್ರಾಮೀಣ ಧಾರ್ಮಿಕ ಪರಂಪರೆ ಹಾಗೂ ವೈವಿಧ್ಯತೆಯನ್ನು ಬಿಂಬಿಸುತ್ತವೆ. ಯುಗಾದಿ ಮತ್ತು ದೀಪಾವಳಿಯ ಸನ್ನಿವೇಶ ದಲ್ಲಿ ಭಕ್ತಿಯಿಂದ ನಡೆಯುವ ಇಂತಹ ಮುಳ್ಳು ಹಬ್ಬವು, ಸ್ಥಳೀಯರಿಗೆ ಗೌರವಯುತ ಆಚರಣೆ. ತಮ್ಮ ಊರಿನ ಅಸ್ಮಿತೆ ಎಂಬಂತೆ, ಇಂತಹ ಮುಳ್ಳು ಹಬ್ಬಗಳನ್ನು ಆಚರಿಸುತ್ತಿರುವುದು, ಉತ್ತರ ಕರ್ನಾಟಕದ ಹಲವು ಹಳ್ಳಿಗೆ ವಿಶೇಷ ಎಂದೇ ಹೇಳಬಹುದು.