Prof G N Upadhyay Column: ಮೆಡಿಕಲ್ ಕಾಲೇಜು ಆರಂಭಕ್ಕೆ ಕಾರಂತರ ಕೊಡುಗೆ !
ಸ್ವತ: ವೈದ್ಯರೂ ಶಿಕ್ಷಣ ಪ್ರೇಮಿಗಳೂ ಆಗಿದ್ದ ಡಾ.ಮಾಧವ ಪೈ ಅವರು ಮಣಿಪಾಲದಲ್ಲಿ ಒಂದು ಮೆಡಿಕಲ್ ಕಾಲೇಜು ಸ್ಥಾಪಿಸಲು ಮುಂದಾಗಿ ಕೊನೆಯ ಕ್ಷಣದಲ್ಲಿ ಅದಕ್ಕೆ ಸರಕಾರದ ಒಪ್ಪಿಗೆ ಸಿಗದೇ ಹೈರಾಣಾಗಿದ್ದರು. ಡಾ.ಪೈ ಅವರ ಆತ್ಮೀಯ ಸ್ನೇಹಿತರಾಗಿದ್ದ ಶಿವರಾಮ ಕಾರಂತರು ಈ ಸಂಗತಿ ಯನ್ನು ತಿಳಿದು ಛಲ ಬಿಡದೆ ಕೇಂದ್ರ ಸಚಿವರೊಬ್ಬರ ಸಹಾಯದಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾ ಲಯದ ಮೂಲಕ ಮಣಿಪಾಲ ಮೆಡಿಕಲ್ ಕಾಲೇಜಿಗೆ ಬೇಕಾಗಿದ್ದ ಅನುಮತಿ ಕೊಡಿಸುವುದರಲ್ಲಿ ಯಶಸ್ವಿಯಾದರು.


ಪ್ರೊ.ಜಿ.ಎನ್.ಉಪಾಧ್ಯ, ಮುಂಬೈ
ಅಲ್ಲಮ ಪ್ರಭುದೇವರು ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧ ವಯ್ಯಾ ಎಂದು ಉದ್ಗಾರ ಎತ್ತಿದ್ದರು. ಶಿವರಾಮ ಕಾರಂತರ ಒಂದು ಸಾಹಸವನ್ನು ಕಂಡಾಗ ಅಲ್ಲಮನ ಈ ಮಾತು ನೆನಪಾಗುತ್ತದೆ. ಆಗ ತಾನೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭ, ನಮ್ಮ ನಾಡಿನ ಸಾಹಿತಿ ಯೊಬ್ಬರು ಒಂದು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಮಧ್ಯಸ್ಥಿಕೆ ವಹಿಸಿ ಅದಕ್ಕೆ ಪರವಾನಗಿ ಕೊಡಿಸುವಲ್ಲಿ ಯಶ ಕಂಡ ಘಟನೆ ಕರ್ನಾಟಕದಲ್ಲಿ ನಡೆದದ್ದು ಎಷ್ಟು ಮಂದಿಗೆ ಗೊತ್ತಿದೆಯೋ ನಾ ಕಾಣೆ. ಇಂದು ಮಣಿಪಾಲದ ಹೆಸರು ಕೇಳದವರಿಲ್ಲ. ಶಿಕ್ಷಣ ಕೇಂದ್ರವಾಗಿ, ಆರೋಗ್ಯಧಾಮವಾಗಿ, ಆರ್ಥಿಕ ತಾಣ ವಾಗಿ ಅದರ ಹೆಸರು ಪಸರಿಸಿದೆ. ಕಳೆದ ಶತಮಾನದ ಆದಿ ಭಾಗದಲ್ಲಿ ಮಣಿಪಾಲ ಸಾಮಾನ್ಯ ಹಳ್ಳಿಯಾಗಿತ್ತು. ಇಂದು ಮಣಿಪಾಲಕ್ಕೆ ವಿಶ್ವದ ನಕಾಶೆಯಲ್ಲಿ ಅಣಿಯರ ಸ್ಥಾನಮಾನ ಪ್ರಾಪ್ತ ವಾಗಿದೆ.
ಇದಕ್ಕೆ ಕಾರಣರಾದವರು ತೋನ್ಸೆ ಡಾ.ಮಾಧವ ಪೈ ಹಾಗೂ ಅವರ ಪರಿವಾರ. ಈ ಮಣಿಪಾಲದ ಅಭಿವೃದ್ಧಿಯಲ್ಲಿ, ಅಲ್ಲಿನ ಮೆಡಿಕಲ್ ಕಾಲೇಜು ಸ್ಥಾಪನೆಯಲ್ಲಿ ಖ್ಯಾತ ಸಾಹಿತಿ ಶಿವರಾಮ ಕಾರಂ ತರು ವಿಶೇಷವಾದ ಪಾತ್ರವನ್ನು ವಹಿಸಿದ್ದು ಅಚ್ಚರಿ ಅನಿಸಿದರೂ ಇದು ವಾಸ್ತವ.
ಕೋಟ ಶಿವರಾಮ ಕಾರಂತರು ಬರೇ ಸಾಹಿತಿಯಾಗಿ ತಮ್ಮ ಪಾಡಿಗೆ ತಾವು ಬರವಣಿಗೆ ಮಾಡಿ ಕೊಂಡು ಇದ್ದುಬಿಟ್ಟವರಲ್ಲ. ಅವರು ಜನಮುಖಿಯಾಗಿ ಸಮಾಜಮುಖಿಯಾಗಿ ಸಮುದಾಯದ ಹಿತಕ್ಕಾಗಿ ನಾಡಿನ ದೇಶದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿದ್ದು ಈಗ ಇತಿಹಾಸ. ಉಡುಪಿಯಲ್ಲಿ ಎಂ. ಜಿ.ಎಂ ಕಾಲೇಜು ಸುರು ಮಾಡಲು ಸಾರ್ವಜನಿಕರಿಂದ ವಂತಿಗೆ ಎತ್ತಲು ಹೋದವರಲ್ಲಿ ಕಾರಂತರೂ ಒಬ್ಬರಾಗಿದ್ದರು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲದ ಸಂಗತಿ.
ಮಾನವ ಸಂಸ್ಕೃತಿ ಬೆಳೆದುದಿದ್ದರೆ, ಅದಕ್ಕೆ ಕಾರಣವಾದ ಘಟನೆ ಎಷ್ಟೇ ಕಿರಿದಾಗಿದ್ದರೂ, ಅದು ಹೆಮ್ಮರವಾಗಿ ಬೆಳೆದು ಅಸಂಖ್ಯ ಜೀವಿಗಳಿಗೆ ಆಸರೆ ಕೊಡಬಲ್ಲ ವೃಕ್ಷವಾಗುವ ಸಾಧ್ಯತೆಯಿಂದ ಎಂಬ ಕಾರಂತರ ಮಾತು ಅವಲೋಕನೀಯವಾಗಿದೆ.
ಇದನ್ನೂ ಓದಿ: Yagati Raghu Naadig Column: ʼಯುಗʼ ಬದಲಾದರೂ, ʼಯುಗಧರ್ಮʼ ಬದಲಾಗಲಿಲ್ಲವೇ..?!
ಮಣಿಪಾಲ ವೈದ್ಯಕೀಯ ಮಹಾವಿದ್ಯಾಲಯದ ಸ್ಥಾಪಕರಲ್ಲಿ ಉಪೇಂದ್ರ ಪೈ, ಡಾ.ಮಾಧವ ಪೈ, ಅನಂತ ಪೈ, ರಮೇಶ ಪೈ ಅವರ ಪಾತ್ರ ಗುರುತರವಾದುದು. ಆ ಬಳಿಕ ಪೈ ಪರಿವಾರದವರು ಮಣಿ ಪಾಲವನ್ನು ಕಟ್ಟಿ ಬೆಳೆಸಿದ ಪರಿಗೆ ಯಾರೂ ಬೆರಗಾಗಬೇಕು. ಹುಚ್ಚು ಮನಸ್ಸಿನ ಹತ್ತು ಮುಖಗಳು ಶಿವರಾಮ ಕಾರಂತರ ಪ್ರಸಿದ್ಧ ಆತ್ಮಕಥನ. ಈ ಗ್ರಂಥದಲ್ಲಿ ಶಿವರಾಮ ಕಾರಂತರು ಮಣಿಪಾಲದಲ್ಲಿ ಮೆಡಿಕಲ್ ಕಾಲೇಜ್ ಹುಟ್ಟಿಕೊಂಡ ಬಗೆಯನ್ನು ಹೀಗೆ ನೆನಪು ಮಾಡಿಕೊಂಡಿದ್ದಾರೆ.
ಅದು ಹೀಗಿದೆ. ‘ಇಂದಿಗೆ ಐದೂವರೆ ದಶಕಗಳಷ್ಟು ಹಿಂದೆ ತೋನ್ಸೆ ಡಾ.ಮಾಧವ ಪೈಗಳವರಿಗೆ ಉಡುಪಿಯಲ್ಲಿ ಒಂದು ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಹಂಬಲವಾಯಿತು. ಅವರು ಸ್ವತಃ ವೈದ್ಯರು, ವೈದ್ಯ ವೃತ್ತಿನಿರತರು.ಆದರೆ, ವೈದ್ಯ ಶಿಕ್ಷಣ ಪಡೆಯುವ ಹಂಬಲವುಳ್ಳ ನಮ್ಮ ಜಿಲ್ಲೆಯ ಅಸಂಖ್ಯರಿಗೆ ಅಂದಿನ ಮದ್ರಾಸು ಸಂಸ್ಥಾನದಲ್ಲಿ ತೀರ ಕಡಿಮೆ ಅವಕಾಶವಿತ್ತು. ಅದನ್ನು ಕಂಡ ಅವರು, ’ಕಾಸಿಗೆ ಕಾಸು ಕೂಡಿಸಿದರೆ ಕೋಟಿ ಆಗುವುದಿಲ್ಲವೇ?’ ಎಂದು ನೆನೆದವರು; ನೆನೆದುದನ್ನು ಮಾಡಿದವರು. ಹೀಗಾಗಿ, ಉಡುಪಿ ಬಳಿಯ ಮಣಿಪಾಲದಲ್ಲೇ ಒಂದು ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಕನಸು ಕಂಡರು.’
ಹಳ್ಳಿಯಲ್ಲಿ ಕಾಲೇಜು
ತೋನ್ಸೆ ಮಾಧವ ಪೈ ಅವರು ಮಹತ್ವಾಕಾಂಕ್ಷಿಯಾಗಿದ್ದರು. ಸ್ಥಳೀಯ ವಿದ್ಯಾರ್ಥಿಗಳಿಗೆ ಆಗುತ್ತಿ ರುವ ತೊಂದರೆಯನ್ನು ಮನಗಂಡವರು. ಒಂದು ವೈದ್ಯಕೀಯ ಮಹಾವಿದ್ಯಾಲಯ ಈ ಭಾಗದಲ್ಲಿ ಸ್ಥಾಪನೆ ಆದರೆ ಅದರಿಂದ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಲಾಭವಾಗಲಿದೆ ಎಂಬ ದೂರ ದೃಷ್ಟಿ ಯಿಂದ ಕಾಲೇಜನ್ನು ಸುರು ಮಾಡಲು ಬೇಕಾದ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡರು.
ಮಾಧವ ಪೈ ಅವರ ಕಾರ್ಯವೈಖರಿಯನ್ನು ಕಾರಂತರು ಹೀಗೆ ಚಿತ್ರಿಸಿದ್ದಾರೆ: “ಆ ಮೊದಲೇ ಅವರು ಉಡುಪಿಯಲ್ಲಿ ಖಾಸಗಿ ಮಹಾತ್ಮಾ ಗಾಂಧಿ ಕಾಲೇಜನ್ನು ತೆರೆಯುವಲ್ಲಿ ತೊಡಗಿಯೂ ಆಗಿತ್ತು. ಸಾರ್ವಜನಿಕರ ನೆರವಿಗಾಗಿ ಭಿಕ್ಷೆಯೆತ್ತಲು ಹೋದ ಒಂದೆರಡು ಸಂದರ್ಭಗಳಲ್ಲಿ, ನಾನೂ ಅವರ ಜತೆಗೆ ಹೋದುದುಂಟು.
ಅವರ ಅಣ್ಣ ಉಪೇಂದ್ರ ಪೈಗಳು, ಆ ಅಣ್ಣನ ಮಕ್ಕಳಾದ ಅನಂತ ಮತ್ತು ರಮೇಶ ಪೈಗಳು ಜತೆಗಿ ದ್ದರು. ಹಾಗೆ ಭಿಕ್ಷೆಯೆತ್ತುವ ಕೆಲಸ ಎಷ್ಟು ಕಷ್ಟದ್ದೆಂದು ಅವರಿಗೆ ತಿಳಿದಿತ್ತು.’ ಉಡುಪಿಯಲ್ಲಿಎಂ. ಜಿ. ಎಂ ಕಾಲೇಜು ಆರಂಭಿಸಿದ ಸಂದರ್ಭದಲ್ಲಿ ಡಾ.ಪೈ ಅವರು ಪಟ್ಟ ಕಷ್ಟವನ್ನು ಕಾರಂತರು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಆ ಯೋಜನೆಯಲ್ಲಿ ಕಾರಂತರು ಸಹ ಭಾಗಿಯಾ ದುದು ವಿಶೇಷ.
ವೈದ್ಯ ವಿದ್ಯೆಯ ಅಭ್ಯರ್ಥಿಗಳ ಹಿರಿಯರಿಂದ ಹಣ ಬೇಡಿದರೆ, ಈ ಕೆಲಸ ಸಾಧ್ಯವೆಂದು ಮನಗಂಡು, ಆ ಕೆಲಸಕ್ಕೆ ಹೊರಟೇಬಿಟ್ಟರು. ಸಿಂಡಿಕೇಟು ಬ್ಯಾಂಕು ಸ್ಥಾಪಕರ ಬಳಗದ ಅವರಿಗೆ ಆ ಕಾರಣದಿಂದ ವಿಶಾಲ ದಕ್ಷಿಣ ಭಾರತದಲ್ಲಿ ಖ್ಯಾತಿ ಬೆಳೆದಿತ್ತು. ಹೀಗಾಗಿ, ಅಭ್ಯರ್ಥಿಗಳ ಹಿರಿಯರಿಂದ ದಾನ ಪಡೆದು, ವೈದ್ಯಕೀಯ ಕಾಲೇಜನ್ನು ತೊಡಗುವೆನೆಂದು ಪ್ರಸಾರ ಮಾಡಿದರು. ಅನೇಕರು ಅವರನ್ನು ‘ಇದು ಹುಚ್ಚು’ ಎಂದು ಬೆದರಿಸಿದರೂ, ಅವರ ಕರೆಗೆ ಓಗೊಟ್ಟು ದಾನ ಕೊಡಲು ಹಲವಾರು ಮಾತಾಪಿತರು ಮುಂದೆ ಬಂದರು.
ಕಾಲೇಜು ಆರಂಭಿಸುವುದು ಅಪರಾಧ?
ಇನ್ನೇನು-ನಾಳೆ, ನಾಡಿದ್ದು ಕಾಲೇಜಿನ ಪ್ರಾರಂಭ ಉತ್ಸವ ಎಂದಾಗ ಮದ್ರಾಸಿನ ಪ್ರಭಾವಶಾಲಿ ಮಹಾನುಭಾವರಲ್ಲಿ ಒಬ್ಬರಾದ ಲಕ್ಷ್ಮಣ ಸ್ವಾಮಿ ಮೊದಲಿಯಾರರವರಿಂದ ‘ಸರಕಾರದ ಅನುಮತಿ ಇಲ್ಲದೆ ಖಾಸಗಿ ವೈದ್ಯಕೀಯ ಕಾಲೇಜನ್ನು ತೊಡಗುವುದು ಅಪರಾಧ’ ಎಂಬ ನೋಟೀಸು ಜಾರಿ ಆಯಿತು. ಆಗ ಆ ಪ್ರದೇಶ ಮದರಾಸು ರಾಜ್ಯದಲ್ಲಿತ್ತು. ದಿಗಿಲುಗೊಂಡ ಮಾಧವ ಪೈಗಳು ಅಭ್ಯರ್ಥಿ ಗಳ ಹಿರಿಯರಿಂದ ಪಡೆದ ದಾನಗಳನ್ನು ಹಿಂದಿರುಗಿಸಬೇಕಾಯಿತು.
ಕಾಲೇಜನ್ನು ತೊಡಗಲು ಸರಕಾರದ ಮನ್ನಣೆಯಿಲ್ಲದೆ ಏನೂ ಮಾಡಲಾರದ ಪರಿಸ್ಥಿತಿ ಅದು. ಈ ಸಂಗತಿ ಕಾರಂತ ಅವರನ್ನು ಸಹ ಚಿಂತೆಗೆ ಈಡು ಮಾಡಿತ್ತು. ಇದಕ್ಕೆ ಏನನ್ನಾದರೂ ಮಾಡಬೇಕು ಎನ್ನುವ ಉದ್ದೇಶ ಅವರದಾಗಿತ್ತು. ‘ಈ ಘಟನೆ ಯಾಕೋ ನನ್ನನ್ನು ಎಚ್ಚರಿಸಿತು. ಆ ಅವಧಿಯಲ್ಲಿ ಮುಂಬಯಿ ಸಂಸ್ಥಾನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆ ಆಗಿತ್ತು. ಮುಂಬಯಿ ಸರಕಾರ ಈ ವಿಶ್ವವಿದ್ಯಾಲಯಕ್ಕೆ ಅನ್ಯ ಕನ್ನಡ ಪ್ರದೇಶಗಳ ಕಾಲೇಜುಗಳ ಮನ್ನಣೆಗೆ ಅಧಿಕಾರ ನೀಡಿತ್ತು. ಈ ಹೆಳೆ ಇರುವಾಗ, ಮದ್ರಾಸು ಸರಕಾರ ವೈದ್ಯಕೀಯ ಕಾಲೇಜಿಗೆ ಮನ್ನಣೆಯನ್ನು ಕೊಡದೆ ಹೋದರೂ, ಮುಂಬಯಿ ಸರಕಾರ ಕೊಡಲು ಬಂದಿತು. ಆ ಅವಧಿಯಲ್ಲಿ ಬೆಳಗಾವಿಯ ಬಲವಂತ ದಾತಾರರವರು ಕೇಂದ್ರ ಸರಕಾರದ ಮಂತ್ರಿಗಳಾಗಿದ್ದರು.
ನಾನು ನನ್ನಷ್ಟಕ್ಕೆ ಅವರನ್ನು ಭೇಟಿಯಾಗಿ ನಿಮಗೆ ಉಡುಪಿಯಲ್ಲಿ ತೆರೆಯುವ ವೈದ್ಯಕೀಯ ಕಾಲೇಜಿಗೆ ಮನ್ನಣೆ ಕೊಡುವ ಹಕ್ಕಿದೆಯಷ್ಟೆ ಎಂದು ಕೇಳಿದೆ. ಅವರು ನಿಮ್ಮವರು ಅದನ್ನು ಬಯಸಿದರೆ ಕೊಡಲು ತೊಂದರೆ ಆಗದು ಎಂದರು. ಆ ಅವಧಿಯಲ್ಲಿ ಮೊದಲ ವೈಸ್ ಚಾನ್ಸಲರಾದ ಆರ್.ಎ. ಜಹಗೀರದಾರರ ತರುವಾಯ, ಉತ್ತರ ಕರ್ನಾಟಕದ ಹಿರಿಯರಾದ ಹುಲಕೋಟಿ ಎಂಬ ಗೃಹಸ್ಥರನ್ನು, ಮುಂಬಯಿ ಸರಕಾರ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳನ್ನಾಗಿ ನೇಮಿ ಸಿತ್ತು.
ನಾನು ಬೆಳಗಾವಿಗೆ ಹೋಗಿ, ಕೇಂದ್ರಮಂತ್ರಿ ಬಲವಂತ ದಾತಾರರನ್ನು ಕಂಡು, ಮಾತಾಡಿ, ಮುಂದೆ ಕೊಲ್ಲಾಪುರಕ್ಕೆ ಹೋದವನು, ಅಲ್ಲಿಂದ ಈ ಸಾಧ್ಯತೆಯನ್ನು ಕುರಿತು ಸಿಂಡಿಕೇಟು ಬ್ಯಾಂಕಿನ ಮೂಲಕ ಡಾ. ಮಾಧವ ಪೈಗಳಿಗೆ ತಿಳಿಸಿದೆ. ನಾನು ಊರಿಗೆ ಮರಳಿಬಂದ ಬಳಿಕ, ಒಂದು ಸುಮು ಹೂರ್ತದಲ್ಲಿ ಶ್ರೀಗಳಾದ ಉಪೇಂದ್ರ ಪೈಗಳು, ಅವರ ತಮ್ಮ ಮಾಧವ ಪೈಗಳು, ಉಪೇಂದ್ರ ಪೈಗಳ ಮಕ್ಕಳಾದ ಅನಂತ ಪೈ, ರಮೇಶ ಪೈಗಳವರ ಜತೆಗೆ ಧಾರವಾಡಕ್ಕೆ ಧಾವಿಸಿದೆ.
ಸಿಂಡಿಕೇಟ್ ಬ್ಯಾಂಕಿನ ಸ್ಥಾಪಕರಾದ ಪೈ ಬಂಧುಗಳು, ತಮ್ಮ ಜನರಿಂದ ಶ್ರೀ ಹುಲಕೋಟಿಯವರ ಭೇಟಿಗೆ ಅವಕಾಶ ಕಲ್ಪಿಸಿದ್ದರು. ಹಾಗಾಗಿ, ಉಡುಪಿ ಅಥವಾ ಮಣಿಪಾಲ ವೈದ್ಯಕೀಯ ಕಾಲೇಜಿನ ಸ್ಥಾಪನೆಗೆ ಕರ್ನಾಟಕ ವಿ.ವಿ.ಯು ಅನುಮತಿ ನೀಡಿತು!’(ಹುಚ್ಚು ಮನಸ್ಸಿನ ಹತ್ತು ಮುಖಗಳು, ಐದನೆಯ ಮುದ್ರಣದ ಮುನ್ನುಡಿಯಲ್ಲಿ)
ಕನಸಿಗೆ ಮರುಜೀವ
ನಿಂತೇ ಹೋಗಿದ್ದ ಡಾ.ಮಾಧವ ಪೈಗಳ ದೊಡ್ಡ ಕನಸಿಗೆ ಮರು ಜೀವ ತುಂಬಿದವರು ಕಾರಂತರು. ಆದರೂ ಅವರು ಈ ಕುರಿತು ವಿನಮ್ರವಾಗಿ ಹೇಳಿ ಕೊಂಡದ್ದು ಗಮನೀಯ ಅಂಶ. ನೆನೆಗುದಿಗೆ ಬಿದ್ದಿದ್ದ ಡಾ.ಮಾಧವ ಪೈ ಅವರ ದೊಡ್ಡ ಯೋಜನೆಗೆ ಪರಿಹಾರ ಕಂಡು ಕೊಳ್ಳಲು ನಾಡಿನ ಅನೇಕ ಕಡೆಗಳಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡಂತೆ ಸುತ್ತಾಡಿ ಅಂತೂ ಇಂತು ಅದರಲ್ಲಿ ಯಶಸ್ವಿಯಾದದ್ದು ಕಾರಂತರ ಕೃತುಶಕ್ತಿಗೆ ಉತ್ತಮ ನಿದರ್ಶನ. ಮಣಿಪಾಲ ಮೆಡಿಕಲ್ ಕಾಲೇಜಿಗೆ ಅನುಮತಿ ಕೊಡಿಸು ವಲ್ಲಿ ಕಾರಂತರು ಮುಖ್ಯ ಪಾತ್ರ ವಹಿಸಿದ್ದರೂ ಅವರು ಮಾತ್ರ ತನ್ನ ಕೆಲಸ ನಿಮಿತ್ತ ಮಾತ್ರ ಎಂದಿರುವುದು ಅವರ ಸೌಜನ್ಯ, ದೊಡ್ಡ ಮನಸ್ಸಿಗೆ ಸಾಕ್ಷಿ.
ಇಲ್ಲಿ ನನ್ನ ಪಾತ್ರ ತೀರ ಸಣ್ಣದು. ಅದು ಬರಿಯ ಒಂದು ಸಲಹೆ. ಕಾಲೇಜು ತೊಡಗಿದಾಗ ಆಗಿನ ಸ್ಥಾಪಕ ಸದಸ್ಯರು ಕೇವಲ 20-30 ರೂಪಾಯಿ ಕೊಟ್ಟರಾಯಿತು. ನಾನು ಅಂತಹ ಒಬ್ಬ ಸದಸ್ಯ ನಾಗಿದ್ದೆ. ಪುತ್ತೂರಿನ ಅಂಥ ಒಂದೆರಡು ಮಂದಿಯನ್ನೂ ಒದಗಿಸಿದ್ದೆ. ಮುಂದೆ ಕಾಲೇಜಿನ ನಿರ್ಮಾಣಕ್ಕೆ, ಆಸ್ಪತ್ರೆಗೆ ಸಾಕಷ್ಟು ದಾನ ಮಾಡಿದ ವ್ಯಕ್ತಿಗಳೂ ಅದರ ಸ್ಥಾಪಕ ಸದಸ್ಯರಾದರು.
ಡೊನೇಶನ್ ವಿದ್ಯಾರ್ಥಿಗಳ ಹಿರಿಯರಿಗೂ ಅಂಥ ಸೌಲಭ್ಯವಿದ್ದಂತೆ ನೆನಪು. ಅಂತು, ಅಂದು ಹುಟ್ಟಿ ಬೆಳೆಯತೊಡಗಿದ ಈ ಸಂಸ್ಥೆ (ಮೆಡಿಕಲ್ ಕಾಲೇಜು ಆರಂಭದ ದಿನಾಂಕ 30.6.1953), ಮದ್ರಾಸು ಸರಕಾರದಿಂದ ಮನ್ನಣೆ ಪಡೆಯದೆ ಹೋದರೂ, ಸಾರ್ವಜನಿಕರ ದಾನದಿಂದ ಬೆಳೆದ ರೀತಿ ಒಂದು ಅದ್ಭುತ ವಿದ್ಯಮಾನ. ನಮ್ಮ ಭಾರತ ದೇಶದಲ್ಲೇ ಇಂಥ ವಿದ್ಯಮಾನವನ್ನು ಕಾಣಲಾರಿರಿ’ ಎಂಬ ಕಾರಂತರ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲ.
ಶಿವರಾಮ ಕಾರಂತರು ಅಂತ:ಸಾಕ್ಷಿಯ ಮೂರ್ತ ಸ್ವರೂಪವಾಗಿದ್ದರು. ಅವರು ಬರೇ ಸಿದ್ಧಾಂತಗಳ ಪ್ರತಿಪಾದನೆಗೆ ತಮ್ಮನ್ನು ಸೀಮಿತಗೊಳಿಸಿ ಕೊಂಡವರಲ್ಲ. ಕಾರಂತರು ಆರಾಮಕುರ್ಚಿಯ ಲೇಖಕರೂ ಆಗಿರಲಿಲ್ಲ. ಅವರು ಬದುಕಿಗೆ ಬದ್ಧರಾದ ವಿಚಾರವಾದಿ ಲೇಖಕರು. ಅವರಿಗೆ ಬದುಕೇ ಧ್ಯೇಯ, ಉದ್ದೇಶವಾಗಿತ್ತು. ದೇಶ ತಿರುಗಿ ಕೋಶ ಓದಿ ಅಪಾರವಾದ ಅನುಭವವನ್ನು ಹೆಚ್ಚಿಸಿ ಕೊಂಡ ಅಪೂರ್ವ ಕ್ರಿಯಾಶೀಲ ಲೇಖಕ, ಚಿಂತಕ ಶಿವರಾಮ ಕಾರಂತ ಎಂಬುದು ಹೆಮ್ಮೆಯ ಸಂಗತಿ. ಕಾರಂತರ ಸೃಜನಶೀಲ ಕೃತಿಗಳಂತೆ ಬಾಳ್ವೆಗೆ ಬೆಳಕಾಗಲ್ಲ ಅವರ ಆತ್ಮಕಥನಗಳನ್ನು ನಾವು ಇವತ್ತು ಮತ್ತೆ ಮತ್ತೆ ಓದಿಕೊಳ್ಳಬೇಕಾದ ಅಗತ್ಯವಿದೆ.