Shashidhara Halady Column: ಸ್ಪೂರ್ತಿ ತುಂಬುವ ಶಿಕ್ಷಕರಿವರು !
ಸಾಹಿತ್ಯ ಪರಿಚಾರಿಕೆಯೂ ಸೇರಿದಂತೆ, ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿರುವ, ಸಮಾಜ ಸೇವೆ ಮಾಡಿರುವ, ಶಿಕ್ಷಕ ವೃತ್ತಿಯ ನ.ಭ.ನೆಂಪು ಅವರು 11 ಪುಸ್ತಕಗಳನ್ನೂ ರಚಿಸಿದ್ದಾರೆ. ಶಿಕ್ಷಕರಾಗಿ ಅವರು ಮಾಡಿದ ಸಾಧನೆ ಬಹುದೊಡ್ಡದು. ಹಲವು ವಿದ್ಯಾರ್ಥಿಗಳಿಗೆ ಸಮರ್ಥ ಮಾರ್ಗದರ್ಶನ ನೀಡಿದ ಹಿರಿಮೆ ಅವರದು.
-
ಶಶಿಧರ ಹಾಲಾಡಿ
ಕುಗ್ರಾಮವೊಂದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ನಭ ನೆಂಪು ಅವರು, ಅಲ್ಲಿದ್ದುಕೊಂಡೇ ಅಂಚೆಯ ಮೂಲಕ ಹಲವು ಪದವಿ ಪಡೆದು, ಶಿಕ್ಷಕ ವೃತ್ತಿ ಯಲ್ಲೇ ಪದೋನ್ನತಿ ಹೊಂದಿ, ಜತೆಯಲ್ಲೇ ಸಾಹಿತ್ಯ ಸಾಂಸ್ಕೃತಿಕ ಸಾಧನೆಯನ್ನೂ ಮಾಡಿದ ಪರಿ ವಿಸ್ಮಯಮೂಡಿಸುವಂತಹದ್ದು.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕೊಲ್ಲೂರು ಕ್ಷೇತ್ರದಿಂದ ಬಹಳ ದೂರವೇನೂ ಅಲ್ಲದ ಒಂದು ಕಾಡಿನ ಕಿಬ್ಬದಿಯಲ್ಲಿ ‘ನೆಂಪು’ ಎಂಬ ಪುಟಾಣಿ ಹಳ್ಳಿಯಿದೆ. ಹೆಸರೇ ವಿಶೇಷ : ನೆಂಪು! ಆ ಪುಟ್ಟ ಊರಿನಲ್ಲಿ ಹಲವು ಪ್ರತಿಭಾವಂತರು ರೂಪುಗೊಂಡಿರುವುದು ಬಹಳ ವಿಶೇಷ ಎನಿಸುತ್ತದೆ. ಸಾಹಿತ್ಯ, ಬ್ಯಾಂಕಿಂಗ್, ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವು ಮಹನೀಯರು ಆ ಊರಿನ ಮೂಲದವರು. ಅದೇ ಊರಿನ ನ.ಭ.ನೆಂಪು (1947- 2025) ಅವರು ಮಾಡಿದ ಸಾಧನೆ ಅಪಾರ.
ಸಾಹಿತ್ಯ ಪರಿಚಾರಿಕೆಯೂ ಸೇರಿದಂತೆ, ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿರುವ, ಸಮಾಜ ಸೇವೆ ಮಾಡಿರುವ, ಶಿಕ್ಷಕ ವೃತ್ತಿಯ ನ.ಭ.ನೆಂಪು ಅವರು 11 ಪುಸ್ತಕಗಳನ್ನೂ ರಚಿಸಿದ್ದಾರೆ. ಶಿಕ್ಷಕರಾಗಿ ಅವರು ಮಾಡಿದ ಸಾಧನೆ ಬಹುದೊಡ್ಡದು. ಹಲವು ವಿದ್ಯಾರ್ಥಿಗಳಿಗೆ ಸಮರ್ಥ ಮಾರ್ಗದರ್ಶನ ನೀಡಿದ ಹಿರಿಮೆ ಅವರದು. ಅವರ ಈ ಸೇವೆಯನ್ನು ಗುರುತಿಸಲಾಗಿದ್ದು, ರಾಷ್ಟ್ರ ಮಟ್ಟದಲ್ಲಿ(2002), ರಾಜ್ಯ ಮಟ್ಟದಲ್ಲಿ(1999) ಜಿಲ್ಲಾಮಟ್ಟದಲ್ಲಿ (1998) ಅವರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜತೆಗೆ ತಾವು ರಚಿಸಿದ ಮಕ್ಕಳ ಪುಸ್ತಕಗಳಿಗೆ ಮತ್ತು ಇತರ ಕೃತಿಗಳಿಗೆ ಹಲವು ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ. ತಮ್ಮ ಜೀವನದುದ್ದಕ್ಕೂ ಗ್ರಾಮೀಣ ಪ್ರದೇಶದ ಶಾಲೆಗಳಲ್ಲೇ ಸೇವೆ ಸಲ್ಲಿಸಿ, 2005ರಂದು ನಿವೃತ್ತರಾದ ನಂತರ, ಕರಾವಳಿ ಜಿಲ್ಲೆಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಮ್ಮನ್ನು ತೊಡಗಿಸಿಕೊಂಡು, ಆ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ.
ಕಳೆದ ವರ್ಷ ನ.ಭ.ನೆಂಪು ಅವರು ನಿಧನರಾಗಿದ್ದು, ಅದಾಗಿ ಒಂದು ವರ್ಷ ತುಂಬುವ ಸಮಯಕ್ಕೆ ಅವರ ಕುರಿತು ‘ನಭ ಜೀವನ ಯಾನ’ ಎಂಬ ಪುಸ್ತಕ ಪ್ರಕಟಗೊಂಡಿದೆ; ಅದರಲ್ಲಿ ನ.ಭ. ಅವರ ಪರಿಚಿತರು, ಬಂಧುಗಳು, ಹಿರಿಯರು, ಒಡನಾಡಿಗಳು ಬರೆದ ಹಲವು ಬರಹಗಳಿದ್ದು, ಅವುಗಳ ಜತೆ, ನಭ ಅವರು ಬರೆದಿದ್ದ ತಮ್ಮ ಜೀವನದ ಅನುಭವಗಳೂ ಅಡಕಗೊಂಡಿದ್ದು, ಒಂದ ಸ್ಮೃತಿಚಿತ್ರ ಹೇಗೆ ರೂಪುಗೊಳ್ಳಬಹುದು ಎಂಬುದಕ್ಕೆ ಮಾದರಿ ಎನಿಸುವಂತೆ ಈ ಗ್ರಂಥ ರೂಪುಗೊಂಡಿದೆ.
ಇದನ್ನೂ ಓದಿ: Shashidhara Halady Column: ಘಮಘಮಿಸುವ ಆ ವ್ಯಂಜನವನ್ನು ತಯಾರಿಸುವ ಕಾಲ !
ಸುಮಾರು 350 ಪುಟಗಳ ‘ನ.ಭ.ಜೀವನಯಾನ’ ಗ್ರಂಥದ ಸಂಪಾದಕತ್ವವನ್ನು ವಹಿಸಿ ಕೊಂಡು, ಈ ಮೌಲಿಕ ಗ್ರಂಥ ರೂಪುಗೊಳ್ಳುವಲ್ಲಿ ಅಮೂಲ್ಯ ಕೊಡುಗೆ ನೀಡಿದ ಬೆಳಗೋಡು ರಮೇಶ ಭಟ್ ಅವರ ‘ಸಂಪಾದಕನ ಬಿನ್ನಹ’ದ ಈ ಸಾಲುಗಳು ಮನನೀಯ : “... ಹಲವು ಹಿರಿಯ ಸ್ನೇಹಿತರು ಪುನರಪಿ ನೆನಪಿಸಿಕೊಂಡಂತೆ, ನ.ಭ.ನೆಂಪುರವರ ಜೀವನ ಚರಿತ್ರೆಯನ್ನು ಒಂದು ‘ಮೋಟಿವೇಶನಲ್ ಸ್ಟೋರಿ’ಯನ್ನಾಗಿಯೂ (ಪ್ರೇರಣಾತ್ಮಕ ಕಥೆ) ತೆಗೆದುಕೊಳ್ಳಬಹುದು. ಬದುಕಿನಲ್ಲಿ ತರಲೆ ತಾಪತ್ರಯಗಳು ಎದುರಾದಾಗ, ಅವುಗಳನ್ನು ಎದುರಿಸುವ ಬದಲು ಪಲಾಯನ ಮಾಡುವವರು, ತಮ್ಮ ಓದಿಗೆ ತಕ್ಕ ಕೆಲಸ ಸಿಗಲಿಲ್ಲ ವೆಂದು ಹಳಹಳಿಸುವವರು, ನಿಂತು, ಗಮನಿಸಿ, ತಮ್ಮ ದಾರಿಯನ್ನು ಬದಲಿಸಿಕೊಳ್ಳಬೇಕು ಎನ್ನಿಸುವಂತಹ ಬದುಕು ನ.ಭ.ನೆಂಪುರವರದ್ದು.
ಬಾಲ್ಯದಲ್ಲೇ ಋಗ್ವೇದ ಸಂಹಿತೆಯನ್ನು ಓದಿ ಕುಲವೃತ್ತಿ ಪೌರೋಹಿತ್ಯಕ್ಕೆ ಸಿದ್ಧರಾದವರು. ಎಳೆಯ ಹರೆಯದಲ್ಲೇ ತಂದೆಯನ್ನು ಕಳೆದುಕೊಂಡು ಅನಾಥರಾದವರನ್ನು ಕೈಹಿಡಿದು ಎತ್ತಿದ್ದು ಅಕ್ಷರ ಪ್ರೀತಿ. ಎಸ್‌ಎಸ್‌ಎಲ್‌ಸಿಯ ಜೊತೆಗೆ ಹಿಂದಿ ರತ್ನ ಪಾಸಾಗಿ 19ನೆಯ ವಯಸ್ಸಿನಲ್ಲಿ (1967) ಪುತ್ತೂರು ತಾಲೂಕಿನ ಕುಗ್ರಾಮ ನಿಡಳ್ಳಿ ಮುಂಡೂರು-1ರ ಪ್ರೈಮೆರಿ ಶಾಲೆಯ ಹಿಂದಿ ಶಿಕ್ಷಕರಾಗಿ, ಅಲ್ಲೇ 10-12 ವರ್ಷ ಉಳಿಯಬೇಕಾಗಿ ಬಂದಾಗಲೂ, ತನ್ನ ವಿಧಿಯನ್ನು ಶಪಿಸದೇ ಅದೊಂದು ಅವಕಾಶವೆಂದು ಬಗೆದು, 1971ರಲ್ಲಿ ಕನ್ನಡ ಪಂಡಿತ್ ಪದವಿ, ಖಾಸಗಿಯಾಗಿ 1972ರಲ್ಲಿ ಪಿಯೂಸಿ, 1974ರಲ್ಲಿ ಡ್ರಾಯಿಂಗ್ ಹಯರ್ ಗ್ರೇಡ್, 1975ರಲ್ಲಿ ಟಿಸಿಎಚ್, 1979ರಲ್ಲಿ ಬಿಎ, 1978ರಲ್ಲಿ ಕನ್ನಡ ಎಂಎ ಪದವಿಗಳನ್ನು ಅಂಚೆ ತೆರಪಿನ ಶಿಕ್ಷಣದ ಮೂಲಕ ಸಂಪಾದಿಸಿದರು.
1986ರಲ್ಲಿ ಬಿಎಡ್ ಮಾಡಿದರು. ಪ್ರೈಮರಿ ಶಾಲೆಯ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿ ದವರು, ಹೈಸ್ಕೂಲು ಅಧ್ಯಾಪಕರಾಗಿ, ವೃತ್ತಿಜೀವನದ ಉತ್ತರಾರ್ಧದಲ್ಲಿ ಕಾರ್ಕಳ ಸರಕಾರಿ ಜೂನಿಯರ್ ಕಾಲೇಜಿನ ಜನಪ್ರಿಯ ಅಧ್ಯಾಪಕರಾಗಿ, ಕವಿಗಳಾಗಿ, ಸಂಘಟಕರಾಗಿ ‘ಸ್ವಯಂ ಕೃಷಿ’ ಎಂಬ ಕಲ್ಪನೆಗೇ ರೂಪಕವಾದರು.
ಪ್ರಾಪ್ತವಾದ ಒಂದು ಮನುಷ್ಯ ಜನ್ಮವನ್ನು ಎಲ್ಲಾ ಮಿತಿಗಳಿಗೆ ಹೊರತಾಗಿಯೂ ಸಾರ್ಥಕ ಗೊಳಿಸುವುದು ಹೇಗೆ ಎಂಬುದಕ್ಕೆ ಉಜ್ವಲ ಉದಾಹರಣೆಯಾದರು. ‘ಬಡತನದಲ್ಲಿ ಹುಟ್ಟು ವುದು ತಪ್ಪಲ್ಲ, ಆದರೆ ಅದರಿಂದಾಗಿಯೇ ಬದುಕಲ್ಲಿ ತಾನು ಏನನ್ನೂ ಸಾಧಿಸ ಲಾಗಲಿಲ್ಲ ಎಂದು ಹಳವಿಸುವುದು ತಪ್ಪು’ ಎಂದು, ಬದುಕಿ ತೋರಿಸಿದ ನ.ಭ.ನೆಂಪುರವರು ಇತಿಹಾಸ ವನ್ನು ಸೃಷ್ಟಿಸಿ, ಇತಿಹಾಸಕ್ಕೆ ಸೇರಿಹೋದರು.
“1967ರಿಂದ 2005ರ ತನಕದ ಕಡಿಮೆಯೆಂದರೂ ಮೂರು ತಲೆಮಾರಿನ ವಿದ್ಯಾರ್ಥಿಗಳಿಗೆ ‘ಕನ್ನಡವೂ ಅಭ್ಯಾಸ ಮಾಡಬೇಕಾದ ಒಂದು ಅಭಿಜಾತ ವಾಯದ ಭಾಷೆ’ ಎನ್ನುವುದನ್ನು ಮನದಟ್ಟು ಮಾಡಿಕೊಟ್ಟ ಕೀರ್ತಿ ಅವರದು. ಆಪ್ತರಾದ ನೀಲಾವರ ಸುರೇಂದ್ರ ಅಡಿಗ ರಿಂದ ನಾನು ಕೇಳಿ ತಿಳಿದಂತೆ ನ.ಭ.ನೆಂಪುರವರು ಹೈಸ್ಕೂಲು ಅಧ್ಯಾಪಕರಾಗಿದ್ದಾ ಗಲೂ ಪ್ರಾಥಮಿಕ ತರಗತಿಗಳಲ್ಲಿ ಭಾಷಾ ಬೋಧನಾ ಪ್ರಕ್ರಿಯೆಯ ಬಗ್ಗೆ ಚರ್ಚಿಸುವ ಮತ್ತು ಬೋಧನಾ ವಿಷಯಕ್ಕೆ ಸಂಬಂಧಿಸಿದ ಹೊಸ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳು ವಲ್ಲಿ ಉತ್ಸುಕರಾಗಿದ್ದರಂತೆ, ಶಿಕ್ಷಕ ಕೇಂದ್ರ ಸಭೆಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿ ಭಾಷಾಬೋಧನೆಯ ಕುರಿತು ಉಪನ್ಯಾಸ, ಪ್ರಾತ್ಯಕ್ಷಿಕೆಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದರಂತೆ.
ಹಲವು ಅರ್ಥಗಳಲ್ಲಿ ಒಬ್ಬ ಪರಿಪೂರ್ಣ ಶಿಕ್ಷಕರಾಗಿದ್ದ ಅವರು ಪ್ರಾಥಮಿಕ ತರಗತಿಗಳ ಕನ್ನಡ ಪಠ್ಯ ಪುಸ್ತಕಗಳ ಪರಿಷ್ಕರಣೆಯಲ್ಲಿ ತೋರಿಸಿದಷ್ಟೇ ಕಾಳಜಿಯನ್ನು ಹೈಸ್ಕೂಲು ತರಗತಿಗಳ ಕನ್ನಡ ಪಠ್ಯಗಳ ಪರಿಶೀಲನೆಯಲ್ಲಿಯೂ ತೋರುತ್ತಿದ್ದರಂತೆ. ಆ ತಲೆಮಾರಿನ ಶಿಕ್ಷಣದಲ್ಲಿ ಕನ್ನಡ ಸಾಹಿತ್ಯದ ಕೊಂಗಾಟ ಮತ್ತು ಕೊಂಡಾಟಗಳು ಕಂಡುಬರುತ್ತಿದ್ದುದರ ಬಹುತೇಕ ಶ್ರೇಯಸ್ಸು ಪರಿಷ್ಕರಣ ಸಮಿತಿಯಲ್ಲಿ ಇರುತ್ತಿದ್ದ ನ.ಭ.ನೆಂಪುರಂತಹ ಪಂಡಿತ ಪರಂಪರೆಯ ಅಧ್ಯಾಪಕರಿಗೆ ಸಲ್ಲುತ್ತದೆ ಎಂಬರ್ಥದ ಮಾತುಗಳನ್ನೂ ನಾನು ಕೇಳಿದ್ದೆ.
“ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ, ಸಮಾನ ಚಿಂತಕರು ಉಡುಪಿಯಲ್ಲಿ ಆರಂಭಿಸಿ ದ್ದ ಮನೆಮನೆಯಲ್ಲಿ ಸಾಹಿತ್ಯ-ಸಂಗೀತ- ಸಂವಾದದ ‘ನಡುಮನೆ’ ಮತ್ತು ಸುಹಾಸಂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ನೆಂಪು ನರಸಿಂಹ ಭಟ್ಟರು ಸಾಹಿತ್ಯಕ ಮಾರ್ಗದರ್ಶನ ವನ್ನು ನೀಡಲಾರಂಭಿಸಿದ ಬಳಿಕ, ಉಡುಪಿಯ ವಿದ್ವಜ್ಜಗತ್ತು ಅವರನ್ನು ಗಂಭೀರವಾಗಿ ಪರಿಗಣಿಸತೊಡಗಿತ್ತು.
ಅಲ್ಲಿಯ ತನಕ ಅವರು ಕನ್ನಡ ವಿದ್ವಾನ್ ಮತ್ತು ಕನ್ನಡ ಎಂಎ ಮಾಡಿದ್ದರೂ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಅಧ್ಯಾಪಕರಾಗಿದ್ದರೂ, ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಿದ್ದುದು ‘ಮಕ್ಕಳ ಸಂಗಮ’ದ ಮತ್ತು ಮಕ್ಕಳು ಸಾಹಿತ್ಯದ ಕಾರ್ಯಕ್ರಮಗಳಲ್ಲೇ ಎಂಬ ಕಾರಣಕ್ಕೂ ಇರಬಹುದು.
ಸುತ್ತಲಿನ ಕವಿಗಳದ ನವ್ಯ ಭರಾಟೆಯಲ್ಲಿ ಧಾವಿಸುತ್ತಿದ್ದಾಗ ಮಿತಭಾಷಿ ನ.ಭ.ನೆಂಪುರವರು ಛಂದೋಬದ್ಧ ಸರಳ ಕವಿತೆಗಳಲ್ಲಿ ಚುಟುಕುಗಳಲ್ಲಿ ಹಾದಿಯೊಂದನ್ನು ರೂಪಿಸುತ್ತಿದ್ದರು. ಕಾರ್ಕಳ ಕನ್ನಡ ಸಂಘ ಮತ್ತು ಕಾಂತಾವರ ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾಗಲೂ ಅವರದ್ದು ಮೆಲುದನಿಯೇ.
ನಾನು ಗಮನಿಸಿದಂತೆ ತಾನು ಇವರೆಲ್ಲರಿಗಿಂತ ಹೆಚ್ಚು ತಿಳಿದವನು, ಹೆಚ್ಚು ಸಾಧಿಸಿದವನು ಎಂಬ ಮನೋವೃತ್ತಿಯನ ಅವರೆಂದೂ ತೋರಿಸುತ್ತಿರಲಿಲ್ಲ. ನಮ್ಮ ಮಾತಿನಲ್ಲಿ ತಪ್ಪುಗಳನ್ನು ಗುರುತಿಸಿದರು ಕಾರ್ಯಕ್ರಮದ ನಡುವೆ ಪ್ರತಿಕ್ರಿಯೆ ನೀಡದೇ, ಗುಟ್ಟಿನಲ್ಲಿ ಎಂಬಂತೆ ನಮಗಷ್ಟೇ ತಿಳಿ ಹೇಳುವ ಅವರ ಸರಳ ಸ್ವಭಾವ ಆ ದಿನಗಳಲ್ಲಿ ನಮಗೆ ತುಂಬಾ ಆಪ್ತವಾಗಿತ್ತು." (ಬೆಳಗೋಡು ರಮೇಶ್ ಭಟ್ ಅವರ ಸಂಪಾದಕನ ಬಿನ್ನಹದಿಂದ ಆಯ್ದ ಸಾಲುಗಳು) ಪ್ರಾಥಮಿಕ ಶಾಲಾ ಅಧ್ಯಾಪಕರಾಗಿ, ದಟ್ಟ ಕಾಡಿನ ನಡುವಿನ ಕುಗ್ರಾಮ ವೊಂದರಲ್ಲಿ ಹತ್ತು ವರ್ಷ ಆರಂಭಿಕ ಸೇವೆ ಸಲ್ಲಿಸುವ ಸಂದರ್ಭವನ್ನು ಸಂತಸದಿಂದ ಸ್ವೀಕರಿಸಿ, ಆ ಹತ್ತು ವರ್ಷಗಳಲ್ಲಿ ಹಲವು ಪದವಿಗಳನ್ನು ಅಂಚೆಯ ಮೂಲಕ ಪಡೆದು, ಭವಿಷ್ಯದ ಪದೋನ್ನತಿಗೆ ದಾರಿ ಮಾಡಿಕೊಂಡು, ಹಿರಿಯ ಶಿಕ್ಷಕರಾಗಿ ರೂಪುಗೊಂಡ ನಭ ನೆಂಪು ಅವರ ಜೀವನವು, ಸಾಧನೆ ಮಾಡಬಯಸುವ ಎಲ್ಲರಿಗೂ ಸ್ಪೂರ್ತಿ ಕಥನವಾಗ ಬಲ್ಲದು.