ಮಧುಮೇಹಕ್ಕೆ ಅನುವಂಶೀಯತೆ ಕಾರಣವೇ? ?
ವೈದ್ಯಕೀಯ ವಿಜ್ಞಾನದಲ್ಲಿ ಟೈಪ್ 2 ಡಯಾಬಿಟಿಸ್ ಅನ್ನು ಒಂದು ‘ಮಲ್ಟಿ-ಫ್ಯಾಕ್ಟೋರಿಯಲ್’ ಸಮಸ್ಯೆ ಎಂದು ಕರೆಯುತ್ತೇವೆ. ಅಂದರೆ, ಇದು ಕೇವಲ ಒಂದೇ ಒಂದು ಕಾರಣದಿಂದ ಬರುವಂಥ ದ್ದಲ್ಲ; ಬದಲಾಗಿ ಹಲವಾರು ಕಾರಣಗಳು ಒಟ್ಟಾಗಿ ಸೇರಿ ಸೃಷ್ಟಿಸುವ ಚಕ್ರವ್ಯೂಹವಿದು! ವಯಸ್ಸು, ಅತಿಯಾದ ತೂಕ, ದೈಹಿಕ ಶ್ರಮವಿಲ್ಲದ ಜೀವನಶೈಲಿ, ಮಾನಸಿಕ ಒತ್ತಡ ಮತ್ತು ಅನುವಂಶೀಯತೆ ಇವೆಲ್ಲವೂ ಅಥವಾ ಇವುಗಳಲ್ಲಿ ಕೆಲವು ಒಟ್ಟಾಗಿ ಸೇರಿ ಮಾಡುವ ಕಿತಾಪತಿ ಇದು.
-
ಕ್ಷ-ಕಿರಣ
ಡಾ.ಶಶಿಕಿರಣ್ ಉಮಾಕಾಂತ್, ಉಡುಪಿ
ಆಸ್ಪತ್ರೆಯಲ್ಲಿ ತಪಾಸಣೆಗೆ ಬರುವವರ ಜೊತೆ ಮಾತನಾಡುವಾಗ ಆಗಾಗ ಒಂದು ಸ್ವಾರಸ್ಯಕರವಾದ ಚರ್ಚೆ ನಡೆಯುತ್ತದೆ. ಹೊಸದಾಗಿ ಡಯಾಬಿಟಿಸ್ ಪತ್ತೆಯಾದಾಗ, ನಾನು ಅವರಿಗೆ ಒಂದು ರೆಗ್ಯುಲರ್ ಪ್ರಶ್ನೆ ಕೇಳ್ತೀನಿ: ನಿಮ್ಮ ಮನೇಲಿ ಅಪ್ಪ-ಅಮ್ಮ, ತಾತ-ಅಜ್ಜಿಗೆ ಯಾರಿಗಾದರೂ ಮಧು ಮೇಹ ಇತ್ತಾ? ಅದಕ್ಕೆ ಅವರು ಮುಖದಲ್ಲೊಂದು ಸಣ್ಣ ನಗು ತಂದುಕೊಂಡು ಹೇಳ್ತಾರೆ: ಹೌದು, ನಮ್ಮಪ್ಪನಿಗೆ ಇತ್ತು, ಅಮ್ಮನಿಗೂ ಇತ್ತು.
ಅವರು ನಮಗೆ ಕೋಟಿಗಟ್ಟಲೆ ಆಸ್ತಿ-ಪಾಸ್ತಿ ಏನೂ ಮಾಡಿಡಲಿಲ್ಲ, ಆದ್ರೆ ಈ ಡಯಾಬಿಟಿಸ್ ಅನ್ನು ಮಾತ್ರ ಕರೆಕ್ಟಾಗಿ ನಮಗೆ ಬಳುವಳಿಯಾಗಿ ಕೊಟ್ಟು ಹೋಗಿದ್ದಾರೆ. ಅವರ ರಕ್ತಾನೇ ನನ್ನಲ್ಲೂ ಹರಿಯೋದು ಅಂದ್ಮೇಲೆ, ನನಗೂ ಬರಲೇಬೇಕಲ್ವಾ? ಇದರಲ್ಲಿ ಆಶ್ಚರ್ಯ ಏನಿದೆ ಬಿಡಿ, ದೇವ್ರು ಕೊಟ್ಟ ಪ್ರಸಾದ! ಅವರ ಈ ಮಾತು ಕೇಳೋಕೆ ತಮಾಷೆಯಾಗಿ ಕಂಡರೂ, ಇದರ ಹಿಂದೆ ನಮ್ಮ ಜನರ ಒಂದು ದೊಡ್ಡ ‘ಶರಣಾಗತಿ’ ಮನೋಭಾವ ಅಡಗಿದೆ. ನಮ್ಮಪ್ಪನಿಗೆ ಇತ್ತು, ಹಾಗಾಗಿ ನನಗೂ ಬಂತು. ಇದರಲ್ಲಿ ನನ್ನದೇನೂ ತಪ್ಪಿಲ್ಲ, ನಾನೇನು ಮಾಡೋಕೂ ಆಗಲ್ಲ ಅನ್ನೋದು ತಮ್ಮ ಜೀವನಶೈಲಿಯ ತಪ್ಪುಗಳನ್ನು ಮುಚ್ಚಿಡಲು ಬಳಸುವ ಅತ್ಯಂತ ಸುಲಭವಾದ ಎಸ್ಕೇಪ್ ರೂಟ್!
ಮಲ್ಟಿ-ಫ್ಯಾಕ್ಟೋರಿಯಲ್: ಒಂದಲ್ಲ, ಹಲವಾರು ವಿಲನ್‌ಗಳು!
ವೈದ್ಯಕೀಯ ವಿಜ್ಞಾನದಲ್ಲಿ ಟೈಪ್ 2 ಡಯಾಬಿಟಿಸ್ ಅನ್ನು ಒಂದು ‘ಮಲ್ಟಿ-ಫ್ಯಾಕ್ಟೋರಿಯಲ್’ ಸಮಸ್ಯೆ ಎಂದು ಕರೆಯುತ್ತೇವೆ. ಅಂದರೆ, ಇದು ಕೇವಲ ಒಂದೇ ಒಂದು ಕಾರಣದಿಂದ ಬರುವಂಥ ದ್ದಲ್ಲ; ಬದಲಾಗಿ ಹಲವಾರು ಕಾರಣಗಳು ಒಟ್ಟಾಗಿ ಸೇರಿ ಸೃಷ್ಟಿಸುವ ಚಕ್ರವ್ಯೂಹವಿದು! ವಯಸ್ಸು, ಅತಿಯಾದ ತೂಕ, ದೈಹಿಕ ಶ್ರಮವಿಲ್ಲದ ಜೀವನಶೈಲಿ, ಮಾನಸಿಕ ಒತ್ತಡ ಮತ್ತು ಅನುವಂಶೀಯತೆ ಇವೆಲ್ಲವೂ ಅಥವಾ ಇವುಗಳಲ್ಲಿ ಕೆಲವು ಒಟ್ಟಾಗಿ ಸೇರಿ ಮಾಡುವ ಕಿತಾಪತಿ ಇದು. ಹಾಗಾಗಿ ಕೇವಲ ಅಪ್ಪ-ಅಮ್ಮನನ್ನು ದೂಷಿಸಿ ನಾವು ಕೈತೊಳೆದು ಕೊಳ್ಳುವಂತಿಲ್ಲ.
ಇದನ್ನೂ ಓದಿ: Health Tips: ಶುಂಠಿ ಚಹಾ ಹೆಚ್ಚು ಕುಡಿಯುತ್ತೀರಾ? ಮಿತಿಮೀರಿದರೆ ಈ ಆರೋಗ್ಯ ಸಮಸ್ಯೆ ಕಾಡಬಹುದು!
ಬಂದೂಕು ಮತ್ತು ಟ್ರಿಗರ್!
ಅಪ್ಪ-ಅಮ್ಮನಿಗೆ ಮಧುಮೇಹ ಇದ್ದರೆ ಮಕ್ಕಳಿಗೂ ಬರುವ ಸಾಧ್ಯತೆ ಹೆಚ್ಚು ಎನ್ನುವುದು ಸತ್ಯ. ಆದರೆ, ಅದು ಬಂದೇ ಬರುತ್ತದೆ ಎನ್ನುವುದು ಶುದ್ಧ ಸುಳ್ಳು. ಇದಕ್ಕೆ ವೈದ್ಯಕೀಯ ಲೋಕದಲ್ಲಿ ಒಂದು ಅತ್ಯದ್ಭುತ ವಾದ ನಾಣ್ಣುಡಿಯಿದೆ: ‘ಜೆನೆಟಿಕ್ಸ್ ಲೋಡ್ಸ್ ದ ಗನ್, ಬಟ್ ಲೈಫ್ʼಸ್ಟೈಲ್ ಪುಲ್ಸ್ ದ ಟ್ರಿಗರ್’! ಅಂದರೆ, ತಂದೆ-ತಾಯಿಯಿಂದ ಬಂದ ಅನುವಂಶೀಯತೆ ಅನ್ನೋದು ಗುಂಡು ತುಂಬಿಟ್ಟಿರುವ ಒಂದು ರಿವಾಲ್ವರ್ (ಬಂದೂಕು) ಇದ್ದ ಹಾಗೆ. ಆದರೆ, ಆ ರಿವಾಲ್ವರ್‌ನ ‘ಟ್ರಿಗರ್’ (ಕುದುರೆ) ಒತ್ತುವುದು ಮಾತ್ರ ನಿಮ್ಮದೇ ಕೈಯಲ್ಲಿದೆ! ದೈಹಿಕ ಶ್ರಮವಿಲ್ಲದ ದಿನಚರಿ, ತಿನ್ನುವ ಜಂಕ್ ಫುಡ್, ಬೇಕರಿ ತಿಂಡಿಗಳು, ಆಲಸ್ಯ ಮತ್ತು ಬೊಜ್ಜು ಇವೆಲ್ಲವೂ ಆ ಬಂದೂಕಿನ ಟ್ರಿಗರ್ ಒತ್ತುತ್ತವೆ. ಮೈಬೆವರುವಂತೆ ದುಡಿದು, ಸರಿಯಾದ ತೂಕ ಕಾಪಾಡಿಕೊಂಡು ಆ ಟ್ರಿಗರ್ ಒತ್ತದೇ ಇದ್ದರೆ, ದೇಹದಲ್ಲಿ ಗುಂಡು ತುಂಬಿದ ಬಂದೂಕಿದ್ದರೂ ಅದು ಆಜೀವಪರ್ಯಂತ ಪೆಟ್ಟಿಗೆಯಲ್ಲೇ ಸೇಫ್ ಆಗಿರುತ್ತೆ. ಗುಂಡು ಹಾರುವುದೇ ಇಲ್ಲ! ಇದನ್ನು ಅರ್ಥಮಾಡಿಕೊಳ್ಳಲು ಇನ್ನೊಂದು ಉದಾಹರಣೆ : ನಿಮ್ಮ ಜೇಬಿನಲ್ಲಿ ಒಂದಷ್ಟು ಹುಲ್ಲಿನ ಬೀಜಗಳಿವೆ ಅಂದುಕೊಳ್ಳಿ. ಅವುಗಳೇ ನಿಮ್ಮ ‘ಜೆನೆಟಿಕ್ಸ್’. ಆ ಬೀಜಗಳನ್ನು ಕಾಂಕ್ರೀಟ್ ರಸ್ತೆಯ ಮೇಲೆ ಬಿಸಾಕಿದರೆ ಅವು ಮೊಳಕೆಯೊಡೆಯುತ್ತವಾ? ಇಲ್ಲ. ಅವು ಕಮರಿ ಹೋಗುತ್ತವೆ. ಆದರೆ, ಅದೇ ಬೀಜಗಳನ್ನು ಫಲವತ್ತಾದ ಮಣ್ಣಿನಲ್ಲಿ ಹಾಕಿ, ದಿನಾ ನೀರು, ಗೊಬ್ಬರ ಹಾಕಿದರೆ? ಬೆಳೆದು ನಿಲ್ಲುತ್ತವೆ! ಇಲ್ಲಿ ಬೀಜಗಳು ಅಪ್ಪ-ಅಮ್ಮನಿಂದ ಬಂದಿರಬಹುದು, ಆದರೆ ಆ ಹುಲ್ಲಿನ ಬೀಜಗಳಿಗೆ ಜಂಕ್ ಫುಡ್, ಆಲಸ್ಯ ಮತ್ತು ಬೊಜ್ಜು ಎಂಬ ಗೊಬ್ಬರ, ನೀರು ಹಾಕಿದ್ದು ಯಾರು? ನಾವೇ ತಾನೇ? ನಮ್ಮ ಜೀವನಶೈಲಿ ‘ಕಾಂಕ್ರೀಟ್ ರಸ್ತೆ’ಯ ತರಹ ಗಟ್ಟಿಮುಟ್ಟಾಗಿ ದ್ದರೆ (ಅಂದರೆ ಕಟ್ಟುನಿಟ್ಟಾದ ಆಹಾರ ನಿಯಮ ಮತ್ತು ವ್ಯಾಯಾಮ), ಎಷ್ಟೇ ಕೆಟ್ಟ ಅನುವಂಶೀ ಯತೆಯ ಬೀಜಗಳಿದ್ದರೂ ಅವು ಮೊಳಕೆಯೊಡೆಯುವುದು ಕಷ್ಟಸಾಧ್ಯ!
ಸರಪಳಿ ತುಂಡರಿಸುವ ಹೀರೋ ನೀವಾಗಿ!
ಜನರಿಗೆ ಗೊತ್ತಿಲ್ಲದ ಒಂದು ವೈದ್ಯಕೀಯ ಸತ್ಯವೇನೆಂದರೆ, ಸಣ್ಣ ಮಕ್ಕಳಲ್ಲಿ ಬರುವ ಟೈಪ್ 1 ಮಧುಮೇಹಕ್ಕಿಂತ, ದೊಡ್ಡವರಲ್ಲಿ ಬರುವ ‘ಟೈಪ್ 2’ ಡಯಾಬಿಟಿಸ್‌ಗೇ ಅನುವಂಶೀಯತೆಯ ನಂಟು ಹೆಚ್ಚು! ಆದರೆ, ನಮ್ಮ ತಲೆಮಾರಿನಲ್ಲಿ ಎಲ್ಲರಿಗೂ ಮಧುಮೇಹ ಇದೆ, ನನ್ನ ಹಣೆಬರಹವೂ ಅಷ್ಟೇ ಎಂದು ಭಯಪಡುವ ಅಥವಾ ಕೈಚೆಲ್ಲುವ ಅಗತ್ಯವಿಲ್ಲ. ವಿಜ್ಞಾನ ಸ್ಪಷ್ಟವಾಗಿ ಹೇಳುವು ದೇನು ಗೊತ್ತೇ? ನಿಮ್ಮ ತಂದೆ ಮತ್ತು ತಾಯಿ ಇಬ್ಬರಿಗೂ ಡಯಾಬಿಟಿಸ್ ಇದ್ದರೂ ಸರಿ, ನೀವು ಪ್ರತಿದಿನ 45 ನಿಮಿಷ ಬೆವರು ಸುರಿಸಿ ವಾಕಿಂಗ್ ಮಾಡಿ, ಸೊಪ್ಪು-ತರಕಾರಿ-ಸಿರಿಧಾನ್ಯಗಳಿರುವ ನೈಸರ್ಗಿಕ ಊಟ ಮಾಡಿ, ನಿಮ್ಮ ತೂಕವನ್ನು ಹತೋಟಿಯಲ್ಲಿ ಇಟ್ಟುಕೊಂಡರೆ, ಅದು ಹತ್ತಿರ ಸುಳಿಯುವ ಸಾಧ್ಯತೆ ಅತೀ ಕಡಿಮೆ. ತಲೆತಲೆಮಾರು ಗಳಿಂದ ಅಂಟಿಕೊಂಡು ಬರುತ್ತಿರುವ ಆ ಜೆನೆಟಿಕ್ ಸರಪಳಿ’ಯನ್ನು ನಿಮ್ಮ ತಲೆಮಾರಿನಲ್ಲೇ ತುಂಡರಿಸಬಹುದು! ಜ್ಞಾಪಕ ಇರಲಿ ಹಿಮೋ ಫೀಲಿಯಾ, ಥಲಸೀಮಿಯಾ ಅಥವಾ ಕೆಲವು ರೀತಿಯ ನರರೋಗಗಳಂತಹ ಪಕ್ಕಾ ಅನುವಂಶಿಕ ಕಾಯಿಲೆಗಳ ಬಗ್ಗೆ ನಾನು ಹೇಳುತ್ತಿಲ್ಲ, ಆ ಕಾಯಿಲೆಗಳಲ್ಲಿ ಜೀನ್ಸ್ ಪಾತ್ರವೇ ಅಂತಿಮವಾಗಿರ ಬಹುದು. ಆದರೆ ಈ ‘ಟೈಪ್ 2 ಡಯಾಬಿಟಿಸ್’ ವಿಚಾರದಲ್ಲಿ ಮಾತ್ರ, ಅನುವಂಶೀಯತೆ ಎನ್ನುವುದು ಕೇವಲ ಒಂದು ‘ಸಾಧ್ಯತೆ’ ಮಾತ್ರ, ಅದೇನು ಖಚಿತವಾಗಿ ಆಗಿಯೇ ತೀರುವ, ಬದಲಾಯಿಸಲಾಗದ ‘ಹಣೆಬರಹ’ ಖಂಡಿತಾ ಅಲ್ಲ!