ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Pravasi Prapancha: ಧರೆಗಿಳಿದ ಸೀತಾರಾಮ; ರಾಮನಗರದ ಚನ್ನಮಾನಹಳ್ಳಿಯ ಶ್ರೀ ಸೀತಾರಾಮಚಂದ್ರ ದೇವಾಲಯ

ರಾಮನಗರದ ಚನ್ನಮಾನಹಳ್ಳಿಯಲ್ಲಿ ನಿರ್ಮಿಸಲ್ಪಟ್ಟ ಈ ಶ್ರೀ ಸೀತಾರಾಮಚಂದ್ರ ದೇವಾಲಯವು ಕೇವಲ ಒಂದು ಕಟ್ಟಡವಾಗಿರದೆ, ಅತ್ಯಂತ ಸುಂದರ ಹಾಗೂ ವೈಭವಯುತ ಕಲಾಕೃತಿಯಾಗಿ ಮೂಡಿಬರಲು ದೇಶದ ಹೆಸರಾಂತ ತಜ್ಞರು, ಅನುಭವಿ ಸ್ಥಪತಿಗಳು, ಶಿಲ್ಪಿಗಳು ಮತ್ತು ಚಿತ್ರಕಲಾವಿದರು ಶ್ರಮಿಸಿದ್ದಾರೆ. ತಮಿಳುನಾಡು ಸರಕಾರದ ಪ್ರಸಿದ್ಧ ಸ್ಥಪತಿಗಳಾದ, ಪದ್ಮಶ್ರೀ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮುತ್ತಯ್ಯ ಸ್ಥಪತಿಗಳ ಉನ್ನತ ನೇತೃತ್ವದಲ್ಲಿ ಚನ್ನಮಾನಹಳ್ಳಿಯ ಈ ದೇವಾಲಯದ ಸಂಪೂರ್ಣ ವಿನ್ಯಾಸ ನೆರವೇರಿತು.

ಗಮನ ಸೆಳೆವ ಚನ್ನಮಾನಹಳ್ಳಿಯ ಸೀತಾರಾಮಚಂದ್ರ ದೇವಾಲಯ

-

Ramesh Ballamoole
Ramesh Ballamoole Jul 11, 2026 6:58 PM

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ಅತ್ಯಂತ ಪವಿತ್ರವಾದ ನಾಥ ಪರಂಪರೆಯ ಪುರಾಣ ಇತಿಹಾಸವಿದೆ. ಕಲ್ಲು ಬಂಡೆಗಳಿಂದ ಆವೃತವಾದ ಸುಂದರ ನಿಸರ್ಗದ ನಡುವಿನ ಬೆಟ್ಟದಲ್ಲಿ ಪರಶಿವನು ಸ್ವತಃ ಸಿದ್ಧಿಯೋಗಿ ಅವತಾರದಲ್ಲಿ ತಪಸ್ಸನ್ನು ಆಚರಿಸಿದ ಅದ್ಭುತ ಪುಣ್ಯಕ್ಷೇತ್ರವಿದು ಎಂಬ ಜಾನಪದ ಹಾಗೂ ಪುರಾಣ ಐತಿಹ್ಯಗಳು ನಮ್ಮಲ್ಲಿ ಜೀವಂತವಾಗಿವೆ. ಪ್ರಸ್ತುತ ಜಗದ್ಗುರುಗಳಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ದಿವ್ಯ ನೇತೃತ್ವದಲ್ಲಿ, ಮಹಾಸಂಸ್ಥಾನದ ಕ್ಷೇತ್ರಪಾಲಕನಾದ ಶ್ರೀ ಕಾಲಭೈರವೇಶ್ವರ ಸ್ವಾಮಿಯ ಅಪಾರ ಅನುಗ್ರಹದಿಂದ ಈ ಪವಿತ್ರ ಮಠವು ನಾಡಿನ ಮುಕುಟ ಮಣಿಯಂತೆ ಜಗತ್ತಿನಾದ್ಯಂತ ಕಂಗೊಳಿಸುತ್ತಿದೆ.

ತಾಯಿಯ ಹರಕೆ

ವಿಶ್ವ ಪರಂಪರೆಯ ಇಂಥದ್ದೇ ಒಂದು ಸದಾಚಾರದ ಹಾದಿಯಲ್ಲಿ ನಡೆದು ಬಂದ ಗೌರವಾನ್ವಿತ ಕುಟುಂಬವೊಂದು ರಾಮನಗರದ ಸಮೀಪದ ಚನ್ನಮಾನಹಳ್ಳಿಯಲ್ಲಿದೆ. ಅಲ್ಲಿ ಜೋಡಿ ಜಮೀನ್ದಾರ್ ಸಾಹುಕಾರ್ ತಂದೆ ತಮ್ಮಯ್ಯ ಎಂದೇ ಇಡೀ ಭಾಗದಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದ ಬಿ. ಕೆ. ತಮ್ಮಯ್ಯನವರು ಹಾಗೂ ರಂಗಮ್ಮನವರ ದಂಪತಿ ಸುಮಾರು 75 ವರ್ಷಗಳ ಹಿಂದೆ ನೆಲೆಸಿದ್ದರು. ಇವರು ಅಪಾರ ದೈವಭಕ್ತರಾಗಿದ್ದು, ದಾನ-ಧರ್ಮ ಹಾಗೂ ಧಾರ್ಮಿಕ ಕಾರ್ಯಗಳಿಗೆ ಇಡೀ ಸಮಾಜದಲ್ಲಿ ಖ್ಯಾತಿ ಪಡೆದಿದ್ದರು. ಈ ದಂಪತಿಯ ಪುತ್ರನೇ ಬಿ. ಟಿ. ರಾಮಚಂದ್ರ.

Rama Paduke

ಅಂದು ತಾಯಿ ಶ್ರೀಮತಿ ರಂಗಮ್ಮ ರಾಮನಗರದ ಪ್ರಸಿದ್ಧ ರಾಮದೇವರ ಬೆಟ್ಟದ ಶ್ರೀ ರಾಮಚಂದ್ರ ಸ್ವಾಮಿಯಲ್ಲಿ ಅತ್ಯಂತ ಶ್ರದ್ಧೆಯಿಂದ ಒಂದು ಹರಕೆಯನ್ನು ಹೊತ್ತಿದ್ದರು. ತಮಗೆ ಮುಂದೆ ಜನಿಸುವ ಮಗು ಗಂಡು ಮಗುವಾಗಲಿ, ಆ ಮಗುವಿಗೆ 'ರಾಮಚಂದ್ರ' ಎಂದು ನಾಮಕರಣ ಮಾಡಿ, ಚನ್ನಮಾನಹಳ್ಳಿ ಗ್ರಾಮದಲ್ಲಿ ಶ್ರೀ ಸೀತಾರಾಮಚಂದ್ರ ದೇವಾಲಯವನ್ನು ನಿರ್ಮಾಣ ಮಾಡಿ ಇಡೀ ಗ್ರಾಮಕ್ಕೆ ಅರ್ಪಿಸುವುದಾಗಿ ಅವರು ದೇವರಲ್ಲಿ ಬೇಡಿಕೊಂಡಿದ್ದರು. ದೇವರ ಕೃಪೆಯಿಂದ ಅವರಿಗೆ ಗಂಡು ಮಗು ಜನಿಸಿದಾಗ ತಾಯಿಯ ಇಚ್ಛೆಯಂತೆ ಮಗನಿಗೆ 'ರಾಮಚಂದ್ರ' ಎಂದು ನಾಮಕರಣ ಮಾಡಲಾಯಿತು. ತಕ್ಷಣಕ್ಕೆ ಸಂಪೂರ್ಣ ದೇವಾಲಯ ನಿರ್ಮಿಸಲು ಸಾಧ್ಯವಾಗದಿದ್ದಾಗ, ತಾಯಿ ರಂಗಮ್ಮನವರು ಅಂದೇ ಗ್ರಾಮದಲ್ಲಿ ಭಕ್ತಿಪೂರ್ವಕವಾಗಿ ಒಂದು 'ಶ್ರೀ ರಾಮ ಭಜನಾ ಮಂದಿರ'ವನ್ನು ನಿರ್ಮಿಸಿಕೊಟ್ಟರು. ಜತೆಗೆ, ಭಜನಾ ಮಂದಿರದ ಕೈಂಕರ್ಯಗಳು ಯಾರಿಗೂ ಹೊರೆಯಾಗದೆ ನಿರಂತರವಾಗಿ ನಡೆಯಲಿ ಎಂಬ ಉದಾತ್ತ ಯೋಚನೆಯಿಂದ ಅದರ ಪಕ್ಕದಲ್ಲಿ ಮೂರು ಅಂಗಡಿ ಮಳಿಗೆಗಳನ್ನು ನಿರ್ಮಿಸಿ, ಅದರಿಂದ ಬರುವ ಬಾಡಿಗೆ ಆದಾಯವನ್ನು ದೇವರ ಪೂಜಾ ಕಾರ್ಯಗಳಿಗೆ ವಿನಿಯೋಗಿಸುವಂತೆ ವ್ಯವಸ್ಥೆ ಮಾಡಿದ್ದರು. ಇದು ಅವರ ಅಪ್ರತಿಮ ಸೇವಾ ಮನೋಭಾವಕ್ಕೆ ಅತ್ಯುತ್ತಮ ಸಾಕ್ಷಿಯಾಗಿದೆ.

ಬಂಗಾರ ಅಡವಿಟ್ಟು 30 ಕೋಟಿ ರುಪಾಯಿ ಸಾಮ್ರಾಜ್ಯ ಕಟ್ಟಿದ ಕಥೆ

ಭೂದಾನ ಚಳವಳಿಯ ಪ್ರೇರಣೆ

ಬಿ. ಕೆ. ತಮ್ಮಯ್ಯ ಮತ್ತು ರಂಗಮ್ಮನವರ ಜಮೀನ್ದಾರ್ ಕುಟುಂಬವು ಕೇವಲ ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗಿರಲಿಲ್ಲ. ವಿನೋಬಾ ಭಾವೆ ಅವರ ಐತಿಹಾಸಿಕ 'ಭೂದಾನ ಚಳವಳಿ'ಯಿಂದ ತೀವ್ರವಾಗಿ ಪ್ರೇರೇಪಿತರಾದ ಈ ಕುಟುಂಬವು ತಮಗೆ ಸೇರಿದ ಅಪಾರ ಪ್ರಮಾಣದ ಸ್ವಂತ ಜಮೀನನ್ನು ಗ್ರಾಮದ ಹಲವಾರು ಬಡ ಜನರಿಗೆ ಕೃಷಿಗಾಗಿ ಉಚಿತವಾಗಿ ದಾನ ಮಾಡಿತು.

ಅಷ್ಟೇ ಅಲ್ಲದೆ, ಅಂದಿನ ದಿನಗಳಲ್ಲಿ ಚನ್ನಮಾನಹಳ್ಳಿ ಗ್ರಾಮದಲ್ಲಿ ಮಕ್ಕಳಿಗೆ ಓದಲು ಸೂಕ್ತ ಶಾಲಾ ಸೌಲಭ್ಯವಿಲ್ಲದಿದ್ದಾಗ, ತಾಯಿ ರಂಗಮ್ಮನವರು ಭಜನಾ ಮಂದಿರದ ಪಕ್ಕದಲ್ಲಿದ್ದ ತಮ್ಮ ಸ್ವಂತ ಜಾಗವನ್ನು ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಅತ್ಯಂತ ಸಂತೋಷದಿಂದ ದಾನವಾಗಿ ನೀಡಿದರು. ಆ ಪವಿತ್ರ ಜಾಗದಲ್ಲಿ, ಇಡೀ ದೇಶದಲ್ಲೇ ಅತ್ಯಾಕರ್ಷಕ ವಾಸ್ತುಶೈಲಿಯ ಶಕ್ತಿ ಸೌಧವಾದ 'ವಿಧಾನಸೌಧ'ವನ್ನು ಕಟ್ಟಿಸಿದ ಪ್ರಾತಃಸ್ಮರಣೀಯ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಸಹೋದರ ಹಾಗೂ ದಾನಿ ನಂಜಪ್ಪನವರೆಂದೇ ಪ್ರಖ್ಯಾತರಾಗಿದ್ದ ಶ್ರೀ ನಂಜಪ್ಪನವರು, ಅವರ ಧರ್ಮಪತ್ನಿ ಅನುಸೂಯಮ್ಮ ಹಾಗೂ ಎಸ್. ಲಕ್ಷ್ಮಣ್ ಸೇನಾಪತಿ ವೈಟ್ಲೆ ಲಿಮಿಟೆಡ್‌ನವರು ಧರ್ಮಾರ್ಥವಾಗಿ ಧನಸಹಾಯ ನೀಡಿದರು. ಗ್ರಾಮಸ್ಥರ ಸಕ್ರಿಯ ಸಹಕಾರದೊಂದಿಗೆ ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದ ಗ್ರಾಮದ ಹಿರಿಯರಾದ ಶಿವಲಿಂಗೇಗೌಡರ ನಿರಂತರ ಶ್ರಮದ ಫಲವಾಗಿ ಅಲ್ಲಿ ಒಂದು ಸುಂದರ ಮಾಧ್ಯಮಿಕ ಶಾಲಾ ಕಟ್ಟಡವು ತಲೆಯೆತ್ತಿತು. ಈ ಶಾಲಾ ಕಟ್ಟಡವನ್ನು 1988ರ ಸೆಪ್ಟೆಂಬರ್ 24ರಂದು ಆದಿಚುಂಚನಗಿರಿ ಮಹಾಸಂಸ್ಥಾನದ ಅಂದಿನ ಪೀಠಾಧಿಪತಿಗಳಾಗಿದ್ದ ಪರಮಪೂಜ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ಗ್ರಾಮಕ್ಕೆ ಅರ್ಪಿಸಿದರು.

Rama Temple

ತಾಯಿಯ ಕನಸಿಗೆ ಮರುಜೀವ

ಕಾಲಕ್ರಮೇಣ ಬಿ.ಟಿ. ರಾಮಚಂದ್ರ ಅವರ ಕುಟುಂಬವು ವ್ಯಾಪಾರ ವ್ಯವಹಾರಗಳ ನಿಮಿತ್ತ ಬೆಂಗಳೂರು ಮಹಾನಗರಕ್ಕೆ ಬಂದು ನೆಲೆಸಿತು. ದೇವರ ಆಶೀರ್ವಾದದಿಂದ ಅವರ ವ್ಯವಹಾರಗಳು ದಿನದಿಂದ ದಿನಕ್ಕೆ ಅಭಿವೃದ್ಧಿಗೊಂಡು ಕುಟುಂಬವು ಅತ್ಯಂತ ಸಮೃದ್ಧಿಯಾಗಿ ಬೆಳೆಯಿತು. ದಶಕಗಳು ಉರುಳಿದಂತೆ, ಬಿ. ಟಿ. ರಾಮಚಂದ್ರ ಅವರು ತಮ್ಮ ಸ್ವಗ್ರಾಮವಾದ ಚನ್ನಮಾನಹಳ್ಳಿಯ ನೇರ ಸಂಪರ್ಕದಿಂದ ಸ್ವಲ್ಪ ದೂರ ಉಳಿದಿದ್ದರು. ಆದರೆ ಗ್ರಾಮದ ಕೆಲವು ಹಿರಿಯರು ಮಾತ್ರ ಇವರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬೆಂಗಳೂರಿನ ಮನೆಗೆ ಆಗಾಗ ಬಂದು ಹೋಗುತ್ತಿದ್ದರು.

ಸುಮಾರು 70 ವರ್ಷಗಳಿಗೂ ಹೆಚ್ಚು ಸುದೀರ್ಘ ಸಮಯದ ನಂತರ, ಒಂದು ದಿನ ಬಿ. ಟಿ. ರಾಮಚಂದ್ರ ಅವರು ಕಾರ್ಯನಿಮಿತ್ತ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದಾಗ, ತಮಗೆ ಹೆದ್ದಾರಿ ಸಮೀಪವೇ ಇರುವ ಸ್ವಗ್ರಾಮ ಚನ್ನಮಾನಹಳ್ಳಿಯ ನೆನಪಾಗಿ ಅಲ್ಲಿಗೆ ಭೇಟಿ ನೀಡಿದರು. ವರ್ಷಗಳ ನಂತರ ಗ್ರಾಮಕ್ಕೆ ಆಗಮಿಸಿದ ತಮ್ಮ ಜಮೀನ್ದಾರ್ ಕುಟುಂಬದ ಕುಡಿಯನ್ನು ಗ್ರಾಮಸ್ಥರು ಅತ್ಯಂತ ಪ್ರೀತಿ, ಆದರ ಹಾಗೂ ಹಾರ್ದಿಕತೆಯಿಂದ ಬರಮಾಡಿಕೊಂಡರು. ಈ ಭೇಟಿಯು ಇಡೀ ಗ್ರಾಮದೊಂದಿಗೆ ಅವರಿಗಿದ್ದ ಅವಿನಾಭಾವ ಹಳೆಯ ಸಂಬಂಧವನ್ನು ಮತ್ತೆ ಜೀವಂತಗೊಳಿಸಿತು.

ಈ ಸಂದರ್ಭದಲ್ಲಿ ಅಂದು ಅವರ ತಾಯಿ ರಂಗಮ್ಮ 75 ವರ್ಷಗಳ ಹಿಂದೆ ನಿರ್ಮಿಸಿಕೊಟ್ಟಿದ್ದ ರಾಮ ಭಜನಾ ಮಂದಿರವು ಸಂಪೂರ್ಣವಾಗಿ ಶಿಥಿಲಗೊಂಡಿರುವುದನ್ನು ಗ್ರಾಮಸ್ಥರು ತೋರಿಸಿ, ಅದನ್ನು ಪುನರ್ನಿರ್ಮಿಸಿಕೊಡಬೇಕೆಂದು ಬಿ. ಟಿ. ರಾಮಚಂದ್ರ ಅವರಲ್ಲಿ ಅತ್ಯಂತ ವಿನಮ್ರವಾಗಿ ಮನವಿ ಮಾಡಿಕೊಂಡರು. ಗ್ರಾಮಸ್ಥರ ಕೋರಿಕೆಗೆ ತಕ್ಷಣವೇ ಸ್ಪಂದಿಸಿದ ರಾಮಚಂದ್ರ ಅವರು, ‘ಖಂಡಿತವಾಗಿಯೂ ನನ್ನ ತಾಯಿಯವರ ಪವಿತ್ರ ಹರಕೆಯಂತೆ ಅದೇ ಜಾಗದಲ್ಲಿ ಭವ್ಯವಾದ ಶ್ರೀ ಸೀತಾರಾಮಚಂದ್ರ ದೇವಾಲಯವನ್ನು ನಿರ್ಮಿಸಿಕೊಡುತ್ತೇನೆ’ ಎಂದು ಶಪಥ ಮಾಡಿದರು. ಆ ಸಮಯದಲ್ಲಿ ಕೆಲವರು ಆ ಜಾಗವನ್ನು ತಮಗೆ ಮಾರಾಟ ಮಾಡುವಂತೆ ಹಣದ ಆಮಿಷ ಒಡ್ಡಿದರೂ, ‘ಧರ್ಮಕ್ಕೆ ಎಂದು ಮೀಸಲಿಟ್ಟ ಜಾಗದಿಂದ ನಮಗೆ ಯಾವುದೇ ಲಾಭ ಬೇಡ, ಧರ್ಮದ ಜಾಗ ಧರ್ಮ ಕಾರ್ಯಕ್ಕೇ ಇರಲಿ’ ಎಂದು ತಾಯಿಯ ಉದಾತ್ತ ಹಾದಿಯಲ್ಲೇ ನಡೆದು ದೇವಾಲಯದ ಮಹತ್ಕಾರ್ಯಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡರು.

Ramachandra

ಚೆನ್ನೈನಿಂದ ಚನ್ನಮಾನಹಳ್ಳಿಯವರೆಗೆ

ರಾಮನಗರದ ಚನ್ನಮಾನಹಳ್ಳಿಯಲ್ಲಿ ನಿರ್ಮಿಸಲ್ಪಟ್ಟ ಈ ಶ್ರೀ ಸೀತಾರಾಮಚಂದ್ರ ದೇವಾಲಯವು ಕೇವಲ ಒಂದು ಕಟ್ಟಡವಾಗಿರದೆ, ಅತ್ಯಂತ ಸುಂದರ ಹಾಗೂ ವೈಭವಯುತ ಕಲಾಕೃತಿಯಾಗಿ ಮೂಡಿಬರಲು ದೇಶದ ಹೆಸರಾಂತ ತಜ್ಞರು, ಅನುಭವಿ ಸ್ಥಪತಿಗಳು, ಶಿಲ್ಪಿಗಳು ಮತ್ತು ಚಿತ್ರಕಲಾವಿದರು ಶ್ರಮಿಸಿದ್ದಾರೆ. ತಮಿಳುನಾಡು ಸರಕಾರದ ಪ್ರಸಿದ್ಧ ಸ್ಥಪತಿಗಳಾದ, ಪದ್ಮಶ್ರೀ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮುತ್ತಯ್ಯ ಸ್ಥಪತಿಗಳ ಉನ್ನತ ನೇತೃತ್ವದಲ್ಲಿ ಚನ್ನಮಾನಹಳ್ಳಿಯ ಈ ದೇವಾಲಯದ ಸಂಪೂರ್ಣ ವಿನ್ಯಾಸ ನೆರವೇರಿತು.

ದೇವಾಲಯದ ಪವಿತ್ರ ಭೂಮಿ ಪೂಜೆ ಮತ್ತು ಆರಂಭಿಕ ಕಟ್ಟಡದ ಭಾಗವನ್ನು ಪ್ರಸಿದ್ಧ ಗುತ್ತಿಗೆದಾರರಾದ ಶ್ರೀ ತಿರುಮಲ ಅವರು ನೆರವೇರಿಸಿದರೆ, ಸಂಪೂರ್ಣ ಕಲ್ಲಿನ ದೇವಾಲಯದ ಗರ್ಭಗುಡಿ ಸೇರಿದಂತೆ ಇಡೀ ಶಿಲ್ಪಕಲಾ ರಚನೆಯನ್ನು ಬೆಂಗಳೂರಿನ ಪ್ರಸಿದ್ಧ ಶ್ರೀ ರಾಜರಾಜೇಶ್ವರಿ ದೇವಾಲಯ ನಿರ್ಮಾಣದ ಮುಖ್ಯ ಸ್ಥಪತಿಗಳಾಗಿದ್ದ ಸೆಲ್ವರಾಜ್ ಅವರು ಅತ್ಯಂತ ಶಾಸ್ತ್ರೋಕ್ತವಾಗಿ ನಿರ್ಮಿಸಿಕೊಟ್ಟರು. ದೇವಾಲಯದ ಮಹಾದ್ವಾರದ ಕಲ್ಲಿನ ಹೊಸ್ತಿಲನ್ನು ತಮಿಳುನಾಡಿನ ಕಾರೈಕುಡಿ ಸಮೀಪದ ದೇವಕೋಟೆಯಲ್ಲಿ, ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿಗಳಾದ ಶ್ರೀ ಕರುಪಯ್ಯ ಹಾಗೂ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಅವರ ವಿಶೇಷ ಸಲಹೆಯ ಮೇರೆಗೆ ಅತ್ಯಂತ ಕಲಾತ್ಮಕವಾಗಿ ಕೆತ್ತಿಸಿ, ಮೊದಲು ಚೆನ್ನೈಗೆ ತರಿಸಿ ಅಲ್ಲಿಂದ ಬೆಂಗಳೂರು ಮಾರ್ಗವಾಗಿ ಚನ್ನಮಾನಹಳ್ಳಿಗೆ ಸುರಕ್ಷಿತವಾಗಿ ತಲುಪಿಸಲಾಯಿತು. ದೇವಾಲಯದ ಬಲಿಷ್ಠ ಮಹಾದ್ವಾರದ ಸಾಂಪ್ರದಾಯಿಕ ಕೀಲಿ ಹಾಗೂ ಬೀಗವನ್ನು ತಮಿಳುನಾಡಿನ ದಿಂಡಿಗಲ್ಲಿನ ಪ್ರಸಿದ್ಧ ಸಾಂಪ್ರದಾಯಿಕ ಬೀಗ ತಯಾರಕರಿಂದ, ತಮಿಳುನಾಡು ಸರಕಾರದ ಮಾಜಿ ಸಭಾಪತಿಗಳು ಹಾಗೂ ಶಾಸಕರೂ ಆದ ಗಾಂಧಿರಾಜನ್ ಅವರ ಮಾರ್ಗದರ್ಶನದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಯಿತು.

ದೇವಾಲಯದ ನಯನಮನೋಹರ ಕಟ್ಟಡದ ಎಂಜಿನಿಯರಿಂಗ್ ನಕ್ಷೆಯನ್ನು ಬೆಂಗಳೂರಿನ ಪ್ರತಿಷ್ಠಿತ ಆರ್. ವಿ. ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊಫೆಸರ್ ಕೆ. ಪಿ. ನರಸಿಂಹಮೂರ್ತಿ ಅವರು ಸಿದ್ಧಪಡಿಸಿಕೊಟ್ಟರು. ಮಹಾದ್ವಾರದ ಸುಂದರ ಮರಗೆಲಸವನ್ನು ವೆಂಕಟೇಶ್ ಅವರು ನಿರ್ವಹಿಸಿದರೆ, ರಾಮನಗರದ ಮುನೀರ್ ಅವರು ಮಹಾದ್ವಾರವನ್ನು ಜೋಡಿಸಿಕೊಟ್ಟರು. ದೇವಾಲಯದ ಅತ್ಯಾಕರ್ಷಕ ಪೇಂಟಿಂಗ್ ಕಾರ್ಯವನ್ನು ಮುನಿರಾಜ್ ಅವರು ಅಚ್ಚುಕಟ್ಟಾಗಿ ಮುಗಿಸಿದರು. ಈ ಇಡೀ ಮಹತ್ಕಾರ್ಯದಲ್ಲಿ ಶ್ರೀ ಬಿ. ಸಿ. ಶಿವರಾಜ್ ಸೇರಿದಂತೆ ಅದೆಷ್ಟೋ ಹಿತೈಷಿಗಳು ಜತೆಯಾಗಿ ನಿಂತರು.

ನಾಲ್ಕು ತಲೆಮಾರುಗಳ ಸೇವೆ

ಬಿ.ಟಿ. ರಾಮಚಂದ್ರ ಅವರ ಕುಟುಂಬಕ್ಕೆ ಸಮಾಜಮುಖಿ ಸೇವೆಯ ನಾಲ್ಕು ತಲೆಮಾರುಗಳ ಭವ್ಯ ಇತಿಹಾಸವಿದೆ. ಇವರ ತಂದೆ ಸಾಹುಕಾರ್ ಗದ್ದೆ ತಮ್ಮಯ್ಯನವರಷ್ಟೇ ಅಲ್ಲದೆ, ಅವರ ಸಹೋದರರಾದ ಡಾ. ರಂಗಸ್ವಾಮಿ ರಾಜು ಹಾಗೂ ಶ್ರೀನಿವಾಸರಾಜು ಸಹ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಡಾ. ರಂಗಸ್ವಾಮಿ ರಾಜು ಅವರು ಅಂದಿನ ದಿನಗಳಲ್ಲೇ ಅಂದರೆ 1948 ರಷ್ಟು ಮುಂಚಿತವಾಗಿ ಭೀಕರ ಸಮುದ್ರ ಮಾರ್ಗದಲ್ಲಿ ಹಡಗಿನ ಮೂಲಕ ಪ್ರಯಾಣ ಬೆಳೆಸಿ, ಲಂಡನ್ ಮಾರ್ಗವಾಗಿ ಅಮೆರಿಕದ ಪ್ರತಿಷ್ಠಿತ ಫಿಲಿಡೆಲ್ಫಿಯಾ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್‌ನ ಉನ್ನತ ವೈದ್ಯಕೀಯ ಶಿಕ್ಷಣವನ್ನು ಮುಗಿಸಿ, ಮರಳಿ ಬೆಂಗಳೂರಿಗೆ ಬಂದು ಸಾರ್ವಜನಿಕರಿಗೆ ಅಮೋಘ ವೈದ್ಯಕೀಯ ಸೇವೆ ಸಲ್ಲಿಸಿದ ಕೀರ್ತಿವಂತರು.

ಇಂಥ ಶ್ರೇಷ್ಠ ಪರಂಪರೆಯ ದಾರಿಯಲ್ಲಿ ನಡೆಯುತ್ತಿರುವ ಬಿ. ಟಿ. ರಾಮಚಂದ್ರ ಅವರ ಎಲ್ಲ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳ ಹಿಂದೆ ಅವರ ಧರ್ಮಪತ್ನಿ ಪುಷ್ಪಾ ರಾಮಚಂದ್ರ ಅವರು ಸಂಪೂರ್ಣ ಸಹಕಾರ ನೀಡುತ್ತಾ, ಇಡೀ ಸಮಾಜದ ಶ್ರೇಯಸ್ಸನ್ನು ಬಯಸುವ ಆದರ್ಶ ಗೃಹಿಣಿಯಾಗಿದ್ದಾರೆ. ಇವರ ಮಕ್ಕಳಾದ ಶಶಿಧರ ರಾಮಚಂದ್ರ, ಸೊಸೆ ನಿವೇದಿತಾ ಶಶಿಧರ್ ಹಾಗೂ ಮೊಮ್ಮಕ್ಕಳಾದ ಮಿನೇಹಾ ಮತ್ತು ವಿನು ಪ್ರಸ್ತುತ ಯುಕೆಯ ಸ್ಕಾಟ್‌ಲ್ಯಾಂಡ್‌ನಲ್ಲಿ ನೆಲೆಸಿದ್ದಾರೆ. ಮಗಳು ಹೇಮಾ ಅರವಿಂದ್, ಅಳಿಯ ಅರವಿಂದ್ ಹಾಗೂ ಮೊಮ್ಮಕ್ಕಳಾದ ಅಕ್ಷತಾ ಮತ್ತು ವಿಯಾನ್ ಅಮೆರಿಕದಲ್ಲಿದ್ದಾರೆ.

ಮತ್ತೊಬ್ಬ ಪುತ್ರರಾದ ಸುನೀಲ್ ಕುಮಾರ್ ರಾಮಚಂದ್ರ ಬೆಂಗಳೂರಿನಲ್ಲಿ ತಂದೆ-ತಾಯಿಯೊಂದಿಗಿದ್ದುಕೊಂಡು, ತಮ್ಮದೇ ಆದ ಸ್ವಂತ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ ದೇಶಾದ್ಯಂತ ವ್ಯವಹಾರವನ್ನು ವಿಸ್ತರಿಸಿದ್ದಾರೆ. ಇವರ ಪತ್ನಿ ಶ್ರುತಿ ಪತಿಯ ವ್ಯವಹಾರದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಯಶಸ್ಸಿನ ಪಾಲುದಾರರಾಗಿದ್ದಾರೆ. ಮೊಮ್ಮಗಳು ಸಿನೋನ್ ಸೇರಿದಂತೆ ಇಡೀ ಕುಟುಂಬ ವರ್ಗವು ಬಿ. ಟಿ. ರಾಮಚಂದ್ರ ಅವರ ಎಲ್ಲ ಜನಕಲ್ಯಾಣ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಸಂಪೂರ್ಣ ಪ್ರೋತ್ಸಾಹ ನೀಡುತ್ತಿದೆ.

ಲೋಕಾರ್ಪಣಾ ಮಹೋತ್ಸವ ಮತ್ತು ಕುಂಭಾಭಿಷೇಕ

ರಾಮನಗರ ತಾಲೂಕಿನ ಚನ್ನಮಾನಹಳ್ಳಿಯಲ್ಲಿ ಅತ್ಯಂತ ಕಲಾತ್ಮಕವಾಗಿ ನಿರ್ಮಾಣಗೊಂಡ ಶ್ರೀ ಸೀತಾರಾಮಚಂದ್ರ ದೇವಾಲಯದ ಭವ್ಯ ಲೋಕಾರ್ಪಣ ಮಹೋತ್ಸವವು ದಿನಾಂಕ 4 ಸೆಪ್ಟೆಂಬರ್ 2023 ರಂದು ಅತ್ಯಂತ ವೈಭವದಿಂದ ನೆರವೇರಿತು. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ದಿವ್ಯ ಅಮೃತ ಹಸ್ತದಿಂದ ಈ ಪ್ರಾಣ ಪ್ರತಿಷ್ಠಾಪನೆ ಹಾಗೂ ಲೋಕಾರ್ಪಣ ಕಾರ್ಯವು ಸಂಪೂರ್ಣಗೊಂಡಿತು. ಇದು ಇಡೀ ಗ್ರಾಮದ ಇತಿಹಾಸದಲ್ಲೇ ಒಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಸಂದರ್ಭವಾಗಿತ್ತು.

ಇದರೊಂದಿಗೆ ಒಂದು ಅಪರೂಪದ ಕಾಕತಾಳೀಯ ಹಾಗೂ ವಿಶೇಷ ಸಂದರ್ಭವೂ ಸಾಕ್ಷಿಯಾಯಿತು. ದೇವಾಲಯದ ಪಕ್ಕದಲ್ಲೇ ಇರುವ ಶಾಲಾ ಕಟ್ಟಡವನ್ನು 1988 ರಲ್ಲಿ ದೊಡ್ಡ ಗುರುಗಳಾದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ಲೋಕಾರ್ಪಣೆಗೊಳಿಸಿದ್ದರು. ಸರಿಯಾಗಿ 35 ವರ್ಷಗಳ ನಂತರ, ಅದೇ ಜಾಗದಲ್ಲಿ ಭವ್ಯವಾಗಿ ನಿರ್ಮಾಣಗೊಂಡ ಸೀತಾರಾಮಚಂದ್ರ ದೇವಾಲಯವನ್ನು ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ಲೋಕಾರ್ಪಣೆಗೊಳಿಸಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ಈ ದಾನಿ ಕುಟುಂಬದ ಮೇಲಿರುವ ಅಪಾರ ನಂಬಿಕೆ, ಪ್ರೀತಿ ಹಾಗೂ ದೈವಿಕ ಬಾಂಧವ್ಯದ ಸಂಕೇತವಾಗಿದೆ. ಈ ಧಾರ್ಮಿಕ ಮಹೋತ್ಸವದಲ್ಲಿ ಮೈಸೂರಿನ ಆದಿಚುಂಚನಗಿರಿ ಶಾಖಾಮಠದ ಪೂಜ್ಯ ಶ್ರೀ ಸೋಮನಾಥ ಸ್ವಾಮೀಜಿಗಳು ಆಗಮಿಸಿ ಪವಿತ್ರ ಕುಂಭಾಭಿಷೇಕ ಹಾಗೂ ದೇವತಾ ಪೂಜಾ ಕೈಂಕರ್ಯಗಳಲ್ಲಿ ಸ್ವತಃ ಪಾಲ್ಗೊಂಡು ನೆರೆದಿದ್ದ ಸಹಸ್ರಾರು ಭಕ್ತ ಸಮೂಹವನ್ನು ಆಶೀರ್ವದಿಸಿದರು. ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಇಡೀ ಕಾರ್ಯಕ್ರಮವು ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ರಾಮನಗರದ ಅರ್ಚಕರಹಳ್ಳಿಯ ಶ್ರೀ ಅನ್ನದಾನೇಶ್ವರ ಸ್ವಾಮೀಜಿಗಳು ಶಾಸ್ತ್ರೋಕ್ತವಾಗಿ ಕುಂಭಾಭಿಷೇಕ, ಹೋಮ, ಹವನ ಮತ್ತು ವಿಶೇಷ ಯಜ್ಞ ಯಾಗಾದಿಗಳನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿಕೊಟ್ಟರು. ತದನಂತರ ಭಕ್ತರಿಗೆ ಭವ್ಯ ಮಹಾಪ್ರಸಾದ ವಿನಿಯೋಗವನ್ನು ಆಯೋಜಿಸಲಾಗಿತ್ತು. ದೇವಾಲಯದ ಪ್ರತಿಷ್ಠಾಪನೆಯಾಗಿ 48 ದಿನಗಳ ನಂತರ, ಅತ್ಯಂತ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮಂಡಲ ಪೂಜೆಯನ್ನು ಹೋಮ-ಹವನಗಳ ಮೂಲಕ ಬಿ. ಟಿ. ರಾಮಚಂದ್ರ ಅವರ ಇಡೀ ಕುಟುಂಬ ವರ್ಗದವರು ಗ್ರಾಮಸ್ಥರೊಂದಿಗೆ ಅತ್ಯಂತ ಭಕ್ತಿಯಿಂದ ನೆರವೇರಿಸಿದರು.

ರ‍್ಯಾಡಿಸನ್ ಬ್ಲೂ ಏಟ್ರಿಯಾ; 3 ದಶಕಗಳ ಆತಿಥ್ಯ ಪರಂಪರೆ

ಬೆಳ್ಳಿ ರಥದ ಮೆರವಣಿಗೆ

ಚನ್ನಮಾನಹಳ್ಳಿ ಗ್ರಾಮದಲ್ಲಿ ಈಗಾಗಲೇ ಶ್ರೀ ಆಂಜನೇಯ ಸ್ವಾಮಿ ದೇವಾಲಯ, ಗ್ರಾಮ ದೇವತೆಗಳಾದ ಶ್ರೀ ಮುತ್ಯಾಲಮ್ಮ, ಮಾರಮ್ಮ, ಪಟ್ಟಾಲದಮ್ಮ, ಕಮಲೇಶ್ವರ, ಶ್ರೀ ಶನೇಶ್ವರ ಸ್ವಾಮಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯಗಳು ಗ್ರಾಮದ ದಿಕ್ಪಾಲಕರಂತೆ ರಕ್ಷಣೆಯಾಗಿ ನೆಲೆ ನಿಂತಿವೆ. ಇದರ ನಡುವೆ ಈಗ ಬಿ.ಟಿ. ರಾಮಚಂದ್ರ ಕಲ್ಲುಗಳಿಂದ ಅತ್ಯಂತ ವೈಭವದಿಂದ ನಿರ್ಮಿಸಿರುವ ಶ್ರೀ ಸೀತಾರಾಮಚಂದ್ರ ದೇವಾಲಯವು ಸಾಕ್ಷಾತ್ ಧರೆಗಿಳಿದ ವೈಕುಂಠದಂತೆ ಇಡೀ ಗ್ರಾಮಕ್ಕೆ ಒಂದು ಭವ್ಯ ಮುಕುಟ ಮಣಿಯಂತೆ ರಾರಾಜಿಸುತ್ತಿದೆ.

ಬಿ.ಟಿ. ರಾಮಚಂದ್ರ ಮತ್ತು ಪುಷ್ಪಾ ರಾಮಚಂದ್ರ ದಂಪತಿಯ ಈ ನಿಸ್ವಾರ್ಥ ಅಪ್ರತಿಮ ದೈವಿಕ ಸೇವೆಯನ್ನು ಸ್ಮರಿಸಿ, ಚನ್ನಮಾನಹಳ್ಳಿ ಗ್ರಾಮಸ್ಥರು ಮುಕ್ತ ಕಂಠದಿಂದ ಶ್ಲಾಘಿಸಿದರು. ಇಡೀ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಅತ್ಯಂತ ಪ್ರೀತಿಯಿಂದ ಈ ದಂಪತಿಗಳನ್ನು ಭವ್ಯವಾದ 'ಬೆಳ್ಳಿ ರಥ'ದಲ್ಲಿ ಕೂರಿಸಿ, ಕಲಾತಂಡಗಳಾದ ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ ಹಾಗೂ ಮಂಗಲ ವಾದ್ಯ ಮೇಳಗಳ ಜಯಘೋಷದೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ಮಾಡಿದರು. ದೇವಾಲಯದಲ್ಲಿ ವಿಶೇಷ ಅಭಿಷೇಕ, ಅರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿಸಿದ ಬಳಿಕ, ಭವ್ಯ ವೇದಿಕೆಯಲ್ಲಿ ಗ್ರಾಮಸ್ಥರೆಲ್ಲರ ಪರವಾಗಿ ಶ್ರೀ ಸೀತಾ, ಲಕ್ಷ್ಮಣ, ಭರತ, ಶತ್ರುಘ್ನ ಸಮೇತ ಆಂಜನೇಯ ಸ್ವಾಮಿ ಇರುವ ಅತ್ಯಂತ ಸುಂದರ ಪಂಚಲೋಹದ ವಿಗ್ರಹವನ್ನು ದಂಪತಿಗೆ ನೆನಪಿನ ಉಡುಗೊರೆಯಾಗಿ ನೀಡಿ ಸನ್ಮಾನಿಸಿದ್ದು ಅತ್ಯಂತ ಭಾವನಾತ್ಮಕ ಹಾಗೂ ಅರ್ಥಪೂರ್ಣವಾಗಿತ್ತು.

Channamanahalli Rama Temple

image

ಇದು ಯಾವುದೋ ಜನ್ಮದ ಪುಣ್ಯದ ಬಾಂಧವ್ಯ. 75 ವರ್ಷಗಳ ಹಿಂದೆ ನನ್ನ ಹೆತ್ತ ತಾಯಿ ಹೊತ್ತ ಹರಕೆಯ ಫಲವಾಗಿ ನಾನು ಜನಿಸಿದೆ. ನನಗೆ ರಾಮಚಂದ್ರ ಎಂದು ಹೆಸರಿಟ್ಟು ಅಂದು ಒಂದು ಸಣ್ಣ ಭಜನಾ ಮಂದಿರ ಕಟ್ಟಿಸಿದ್ದರು. ನನ್ನ ತಾಯಿ ಕಣದಲ್ಲಿ ಭತ್ತದ ರಾಶಿ ಮಾಡುವಾಗ ಯಾರಾದರೂ ಬಡವರು ಬಂದು ಮಗಳ ಮದುವೆಗೆ ಸಹಾಯ ಕೇಳಿದರೆ, ನಿನಗೆ ಎಷ್ಟು ಬೇಕೋ ಅಷ್ಟು ಚೀಲ ತುಂಬಿಕೊಂಡು ಹೋಗು ಎನ್ನುವಷ್ಟು ವಿಶಾಲ ಮನಸಿನವರಾಗಿದ್ದರು. ಅವರ ಆಶೀರ್ವಾದವೇ ಇಂದು ನಮ್ಮನ್ನು ಕಾಯುತ್ತಿದೆ. ಭವಿಷ್ಯದಲ್ಲಿ ನಮ್ಮ ಮುಂದಿನ ಪೀಳಿಗೆಯೂ ಈ ಚನ್ನಮಾನಹಳ್ಳಿ ಗ್ರಾಮದೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು, ಈ ಗ್ರಾಮದ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಸಮಾಜಕ್ಕೆ ಏನಾದರೂ ಒಂದು ಕೊಡುಗೆ ನೀಡುತ್ತಿರಬೇಕು. ಈ ಸೀತಾರಾಮಚಂದ್ರ ಸ್ವಾಮಿಯ ಅನುಗ್ರಹವು ಇಡೀ ಗ್ರಾಮದ ಪ್ರತಿಯೊಬ್ಬರ ಮೇಲಿರಲಿ, ಇಲ್ಲಿನ ಮಕ್ಕಳಿಗೆ ಉಜ್ವಲ ಭವಿಷ್ಯ ಸಿಗಲಿ.

- ಬಿ.ಟಿ. ರಾಮಚಂದ್ರ