ಸಿನಿಮಾ ಹೇಳುವ ಸೈಕಾಲಜಿ ಕಥೆಗಳು
ಸಿನಿಮಾ ಹೇಳುವ ಸೈಕಾಲಜಿ ಕಥೆಗಳು
Vishwavani News
October 11, 2022
ಸಂವಾದ - ೪೦೭
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸಿನಿಮಾ ಕತೆಗಳ ಮೂಲಕ ಸೈಕಾಲಜಿ ಮರ್ಮ ಕಟ್ಟಿಕೊಟ್ಟ ಡಾ.ಬಿ.ಸಿ.ಶ್ವೇತಾ
ಬೆಂಗಳೂರು: ಸಿನಿಮಾಗಳಲ್ಲಿ ಸೈಕಾಲಜಿ ಅಂಶಗಳನ್ನಿಟ್ಟುಕೊಂಡು ರೂಪಿಸಿರುವ ಕತೆಗಳು ಮತ್ತು ಅವುಗಳ ಸಮಾಜದ ಮೇಲೆ ಬೀರುವ ಪರಿಣಾಮಗಳ ಕುರಿತು ಮನೋಶಾಸಜ್ಞೆ ಡಾ.ಬಿ.ಸಿ. ಶ್ವೇತಾ ಅವರು ಮನೋಜ್ಞವಾಗಿ ವಿವರಿಸಿದರು.
ವಿಶ್ವವಾಣಿ ಕ್ಲಬ್‌ಹೌಸ್‌ನ ಸಿನಿಮಾ ಹೇಳುವ ಸೈಕಾಲಜಿ ಕತೆಗಳು ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ನಾಲ್ಕು ಸಿನಿಮಾಗಳ ಕತೆಗಳನ್ನು ವೀಕ್ಷಕರಿಗೆ ಮನಮುಟ್ಟುವಂತೆ ಹೇಳುವ ಮೂಲಕ ಆ ಕತೆಗಳಲ್ಲಿ ಬರುವ ಸೈಕಾಲಜಿಕಲ್ ಪರಿಭಾಷೆಗಳು, ಆ ಕತೆಗಳು ಸಮಾಜದ ಮೇಲೆ ಬೀರಿದ ಪರಿಣಾಮಗಳ ಕುರಿತು ವಿವರಿಸಿದರು. ಜತೆಗೆ, ಸಿನಿಮಾಗಳಿಂದ ವೀಕಕರಾದ ನಾವೆಲ್ಲರೂ ಕಲಿಯಬೇಕಿರುವ ಸೈಕಲಾಜಿಕಲ್ ಅಂಶ ಗಳನ್ನು ಮನಮುಟ್ಟುವಂತೆ ನಿರೂಪಸಿದರು.
ಇಂಗ್ಲೀಷ್‌ನ ಬ್ಯೂಟಿಫುಲ್ ಮೈಂಡ್, ಕನ್ನಡದ ನಾನು ಯಾರೂ?, ಆಪ್ತಮಿತ್ರ, ಹಿಂದಿಯ ತಾರೇ ಜಮೀನ್ ಪರ್ ಚಲನಚಿತ್ರಗಳನ್ನು ಉದಾಹರಣೆ ಯಾಗಿಟ್ಟುಕೊಂಡು ಮಾತನಾಡಿದ ಡಾ.ಶ್ವೇತಾ ಅವರು, ಇಂಗ್ಲೀಷ್‌ನ ಬ್ಯೂಟಿಫುಲ್ ಮೈಂಡ್ ಚಿತ್ರದಲ್ಲಿ ಇಚ್ಚಿತಾ ಮನೋರೋಗದ ವ್ಯಾಖ್ಯಾನ, ಕನ್ನಡದ ನಾನು ಯಾರೂ? ಚಿತ್ರದಲ್ಲಿನ ತನ್ನನ್ನು ತಾನು ಮರೆಯುವ ಸ್ಥಿತಿ, ಆಪ್ತಮಿತ್ರ ಚಲನಚಿತ್ರದಲ್ಲಿನ ಮಲ್ಟಿಪಲ್ ಡಿಸಾರ್ಡರ್, ಹಿಂದಿಯ ತಾರೇ ಜಮೀನ್ ಪರ್ ಚಿತ್ರದಲ್ಲಿನ ಲರ್ನಿಂಗ್ ಡಿಸಾಬಿಲಿಟಿ ಬಗೆಗಿನ ಚಿತ್ರಣವನ್ನು ಮನಮುಟ್ಟುವಂತೆ ವಿವರಿಸಿದರು.
ಇಂಗ್ಲೀಷ್‌ನ ಬ್ಯೂಟಿಫುಲ್ ಮೈಂಡ್ ಚಿತ್ರದಲ್ಲಿ ನಾಯಕ ತನ್ನ ಸುತ್ತ ಇಲ್ಲದ ಪಾತ್ರಗಳನ್ನು ಮತ್ತು ಸನ್ನಿವೇಶವನ್ನು ಕಲ್ಪಿಸಿಕೊಂಡು ಬದುಕುತ್ತಾ
ಹೋಗುವ ನಾನು ಯಾರು ಚಿತ್ರದಲ್ಲಿ ನಾಯಕ ತನ್ನನ್ನು ತಾನು ಯಾರು ಎಂಬುದನ್ನೇ ಮರೆತಂತಹ ಮಾನಸಿಕ ಸ್ಥಿತಿಯನ್ನು ತಲುಪುವ ಚಿತ್ರಣವನ್ನು
ಕಟ್ಟಿಕೊಡುವ ಸ್ಥಿತಿಯನ್ನು, ಆಪ್ತಮಿತ್ರದಲ್ಲಿ ನಾಯಕಿ ತನ್ನೊಳಗೆ ಮತ್ತೊಂದು ಆತ್ಮವನ್ನು ಕಲ್ಪಿಸಿಕೊಂಡು ತಾನು ಆ ಪಾತ್ರವೇ ಆಗಿಹೋಗುವಂತಹ ಮನಸ್ಥಿತಿಯನ್ನು ಮತ್ತು ತಾರೇ ಜಮೀನ್ ಪರ್ ಚಿತ್ರದಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಗುವಿನ ಮನಸ್ಥಿತಿಯನ್ನು ಚಿತ್ರಿಸುವಂತಹ ಅಭೂತಪೂರ್ವ ಪ್ರಯತ್ನ ನಡೆದಿದೆ ಎಂದು ವಿವರಿಸಿದರು.
ಸಿನಿಮಾಗಳ ಸೈಕಾಲಜಿ: ಇಂತಹ ಸಿನಿಮಾಗಳ ಸೈಕಾಲಜಿಯನ್ನು ನಾವು ನಮ್ಮ ಸುತ್ತಲಿನ ಪಾತ್ರಗಳ, ಮಕ್ಕಳ, ವ್ಯಕ್ತಿಗಳನ್ನು ನೋಡುವ ಮನಸ್ಥಿತಿ ಯನ್ನು ಬದಲಾಯಿಸಿಕೊಳ್ಳಲು ಸಹಕಾರಿಯಾಗುತ್ತದೆ. ಭಾರತೀಯರಿಗೆ ಭಾವನೆಗಳು ಜಾಸ್ತಿ, ಎದುರಿಗಿನವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಹೀಗಾಗಿ, ಇಂತಹ ಸಿನಿಮಾಗಳನ್ನು ನೋಡಿದಾಗ ಅದರಲ್ಲಿನ ಸೈಕಲಾಜಿಕಲ್ ಭಾವನೆಗಳನ್ನು ನಮ್ಮ ಸುತ್ತಲಿನವರೊಂದಿಗೆ ಕಾಣುವ ಮತ್ತು ಅದನ್ನು ಬದಲಾಯಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಸಿನಿಮಾದಲ್ಲಿನ ಉತ್ತಮ ಅಂಶಗಳನ್ನು ನಾವು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು.
ತಾರೇ ಜಮೀನ್ ಪರ್ ಸಿನಿಮಾ ನೋಡಿದ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಕಲಿಕೆಯಲ್ಲಿ ಮುಂದಿರುವ ಇತರೆ ಮಕ್ಕಳೊಂದಿಗೆ ಹೋಲಿಕೆ ಮಾಡುವುದನ್ನು ಬಿಟ್ಟರು ಎಂಬುದನ್ನು ಕೇಳಿದ್ದೇವೆ. ಇಂತಹದ್ದೇ ಪರಿಣಾಮವನ್ನು ಅನೇಕ ಸೈಕಾಲಜಿಕಲ್ ಸಿನಿಮಾಗಳ ಕಟ್ಟಿಕೊಟ್ಟಿವೆ ಎಂದರು.
ಲರ್ನಿಂಗ್ ಡಿಸಾಬಿಲಿಟಿಸ್
ಈ ಸಮಸ್ಯೆ ಇತ್ತೀಚೆಗೆ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ತಾರೆ ಜಮೀನ್ ಪರ್ ಸಿನಿಮಾದಲ್ಲಿ ಮನೋಜ್ಞವಾಗಿ ತೋರಿಸಲಾಗಿದೆ. ಈ ಸಮಸ್ಯೆಯಿಂದ ಮಕ್ಕಳು ಬಳಲುತ್ತಿರುವಾಗ ಅವರನ್ನು ಹೊರತುವ ಪ್ರಯತ್ನವನ್ನು ನಾವು ಮಾಡಬೇಕು. ಮಕ್ಕಳಲ್ಲಿ ಹೋಲಿಕೆ ಮಾಡುವುದನ್ನು ಕಡಿಮೆ
ಮಾಡಬೇಕು. ಅವರ ಕೊರತೆಯನ್ನು ಗುರುತಿಸಿ ಅವರನ್ನು ತಿದ್ದುವ ಪ್ರಯತ್ನ ಮಾಡಬೇಕು.
ಡಿಸ್-ಭಿಯಾ, ಡಿಸ್‌ಗ್ರಾಫಿಯಾ, ಡಿಸ್ ಕ್ಯಾಲಿಕ್ಲಿಯಾದಂತಹ ಸಮಸ್ಯೆಗಳು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಮ್ಮಲ್ಲಿರುವ ಮಕ್ಕಳಿಗೆ ಇರಬಹುದು. ಆದರೆ, ಇದರ ಬಗ್ಗೆ ಜಾಗೃತಿ ಮೂಡಬೇಕಿದೆ. ಇದರಿಂದ ಅವರನ್ನು ಹೊರತರುವ ಪ್ರಯತ್ನ ಮಾಡಬೇಕಿದೆ ಎಂದು ಡಾ. ಶ್ವೇತಾ ಅವರು ಕರೆ ನೀಡಿದರು.
ಮೆಂಟಲ್ ಹೆಲ್ತ್ ಅಂದ್ರೆ ಡೋಂಟ್ ಕೇರ್
ಆರೋಗ್ಯ ಎಂದರೆ ಭಾರತೀಯರಿಗೆ ಕೇರ್‌ಲೆಸ್ ಆಟಿಟ್ಯೂಡ್ . ಇನ್ನು ಮೆಂಟಲ್ ಹೆಲ್ತ್ ಎಂಬುದು ನಮಗೆ ದೂರದ ಮಾತು. ಭಾರತದಲ್ಲಿ ಶೇ. ೫೬ ಮಿ.ಮಂದಿ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ವರದಿಗಳು ಉಲ್ಲೇಖ ಮಾಡುತ್ತಿವೆ. ದೇಶದಲ್ಲಿ ಶೇ. ೩೮ರಷ್ಟು ಮಂದಿ ಅತಿಭೀತಿಯಿಂದ ನರಳುತ್ತಿದ್ದಾರೆ. ದೇಶದಲ್ಲಿ ಸಾವಿರದಲ್ಲಿ ಮೂವರಿಗೆ ಕ್ರಿಸೋಫೋನಿಯಾ ಎಂಬ ಮಾನಸಿಕ ಖಾಯಿಲೆಯಿದೆ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಭಾರತೀಯರು ಮಾನಸಿಕ ಆರೋಗ್ಯ ವನ್ನು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ.
ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡುವುದು ನಮ್ಮ ದೈಹಿಕ ಆರೋಗ್ಯಕ್ಕಿಂತಲೂ ಮುಖ್ಯ ಎಂಬುದು ಗಮನಾರ್ಹ ಸಂಗತಿ. ಈ ನಿಟ್ಟಿನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ಆಚರಣೆ ಬಹುಮುಖ್ಯವಾದುದು ಎಂದು ಡಾ.ಶ್ವೇತಾ ತಿಳಿಸಿದರು.