ಭೂಮಿ ಒದ್ದೆಯಾಗಿದ್ದುದೇ ಜಲದಿಗ್ಬಂಧನಕ್ಕೆ ಕಾರಣ
ಭೂಮಿ ಒದ್ದೆಯಾಗಿದ್ದುದೇ ಜಲದಿಗ್ಬಂಧನಕ್ಕೆ ಕಾರಣ
Vishwavani News
September 9, 2022
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ಏನಿದು ಮಳೆ? ಕಾರ್ಯಕ್ರಮದಲ್ಲಿ ಭೂವಿಜ್ಞಾನಿ ಡಾ.ಎಚ್.ಎಸ್.ಎಂ.ಪ್ರಕಾಶ್
ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು
ಕಳೆದ ಕೆಲ ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಗೆ ಬಹುತೇಕ ಪ್ರದೇಶಗಳಲ್ಲಿ ನೀರು ನುಗ್ಗಿ ಜನರ
ಜೀವನ ಹೈರಾಣಾಗಿದೆ. ಮಳೆ ಕಡಿಮೆಯಾದರೂ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಮಳೆ ಅನಾಹುತ ಇಷ್ಟೊಂದು ದೀರ್ಘಾವಧಿ ಉಳಿಯಲು ಕಾರಣವೇನು?
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಏನಿದು ಮಳೆ?’ ಕಾರ್ಯ ಕ್ರಮದಲ್ಲಿ ಭೂವಿಜ್ಞಾನಿ ಡಾ.ಎಚ್.ಎಸ್.ಎಂ. ಪ್ರಕಾಶ್ ಈ ಕುರಿತು ಮಾಹಿತಿ ನೀಡಿದ್ದಾರೆ. ಹೌದು, ಪ್ರಸ್ತುತ ಬೆಂಗ ಳೂರಿನ ಉತ್ತರ ಭಾಗದಲ್ಲಿ ಬಂದಿರುವ ಪರಿಸ್ಥಿತಿಯಂತೆಯೇ 2019ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯದಲ್ಲೂ ಆಗಿತ್ತು. ಈ ಪ್ರವಾಹಕ್ಕೆ ಉತ್ತರ ಕಂಡು ಹಿಡಿಯಲೇ ಬೇಕೆಂದು 2018-19ರಲ್ಲಿ ವ್ಯಾಪಕ ಸಂಶೋಧನೆ ಮಾಡಿದೆ. ಆಗ ನನಗೆ ಈ ರೀತಿಯ ದುರಂತಗಳಿಗೆ ಕಾರಣವೇನು ಎಂದು ತಿಳಿದು ಬಂತು.
ಅದೇ ರೀತಿಯಲ್ಲಿ ಇಂದಿನ ಬೆಂಗಳೂರಿನ ಸ್ಥಿತಿಗೂ ಕಾರಣವನ್ನು ತಿಳಿದಿದ್ದೇನೆ. ಮುಂಗಾರು ಆರಂಭವಾಗಿದ್ದರಿಂದ 5 ಬಾರಿ ಬೆಂಗಳೂರಿನಲ್ಲಿ ಹೆಚ್ಚಿನ ಮಳೆ ಬಿದ್ದಿದೆ. ಕೆಲವು ಪ್ರದೇಶ ಗಳಲ್ಲಿ ಮಣ್ಣು ಶುದ್ಧೀಕರಣಗೊಂಡಿದೆ. ಹೀಗಾಗಿ ಈಗಾಗಲೇ ಮಣ್ಣಿನಲ್ಲಿ ತೇವಾಂಶ ಉಳಿದಿರುವುದರಿಂದ ಮತ್ತು ಅದರ ಹಿಂದೆಯೇ ಮತ್ತೆ ಭಾರೀ ಮಳೆ ಬಿದ್ದಿದ್ದರಿಂದ ಮಳೆ ನೀರು ಭೂಮಿಯೊಳಗೆ
ಇಂಗಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಬಿದ್ದ ಮಳೆ ನೀರು ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಪೂರ್ವ
ಬೆಂಗಳೂರಿನಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಇದನ್ನೇ ಕೊಂಚ ಕೂಲಂಕಶವಾಗಿ ಪರಿಶೀಲಿಸಿದಾಗ ಭೂ ವಿಜ್ಞಾನದಲ್ಲಿ ನಗರ ಭೂ ವಿಜ್ಞಾನ ಎಂಬ ಒಂದು ವಿಭಾಗವಿದೆ. ಅದರ
ಸಹಾಯದಿಂದ ದೊಡ್ಡ ನಗರ ಮತ್ತು ಪಟ್ಟಣಗಳ ವಿನ್ಯಾಸದ ಹಂತದಲ್ಲಿ ಆ ಸ್ಥಳದ ಭೂವೈಜ್ಞಾನಿಕ ವ್ಯವಸ್ಥೆಯನ್ನು ಗಮನ ದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗುತ್ತದೆ. ನಮ್ಮ ಹಳೆಯ ಬೆಂಗಳೂರಿನಲ್ಲಿ ಜಯನಗರ ಬಡಾವಣೆ ನಿರ್ಮಾಣವಾಗುವ ತನಕ ಒಳ್ಳೆಯ ತಾಣಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ತದನಂತರದ ಬೆಳವಣಿಗೆ ಗೊಂದಲ ಸೃಷ್ಠಿಸಿದೆ ಮತ್ತು ತಪ್ಪುಗಳಾಗಿವೆ. ಬಿಡಿಎ, ಬಿಬಿಎಂಪಿ, ನಗರಾಭಿವೃದ್ಧಿ ಮತ್ತು ಕಂದಾಯ ಇಲಾಖೆ ಅಥವಾ ಸರಕಾರದಲ್ಲಿ ಯಾವೊಬ್ಬ ವೃತ್ತಿನಿರತ ಭೂ ವಿಜ್ಞಾನಿಗಳು ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟರು.
ದಕ್ಷಿಣ ಮತ್ತು ಪೂರ್ವ ಬೆಂಗಳೂರಿನಲ್ಲಿ ಮತ್ರ ಏಕೆ ಈ ಸಮಸ್ಯೆ ಎಂಬುದು ಅನೇಕರನ್ನು ಕಾಡುವ ಪ್ರಶ್ನೆ. ವೈಜ್ಞಾನಿಕ ತಳಹ
ದಿಯಲ್ಲಿ ಈ ಬಗ್ಗೆ ಗಮನಿಸುವುದಾದರೆ,ದಕ್ಷಿಣ ಭಾಗದ ಬೆಂಗಳೂರನ್ನು ತಗ್ಗು ಪ್ರದೇಶ ಎಂದು ಕರೆಯಲಾಗುತ್ತದೆ. ಹೀಗಾಗಿ ಮಳೆ
ಬಂದಾಗ ನೀರು ದಕ್ಷಿಣ ಭಾಗಕ್ಕೆ ಹೆಚ್ಚಾಗಿ ಹರಿದುಬರುತ್ತದೆ. ಇದನ್ನು ತಿಳಿದೇ ಮತ್ತು ಈ ನೀರಿನ ಉಪಯೋಗ ಪಡೆಯಲು ಹಿಂದಿ
ನವರು ಈ ಭಾಗದಲ್ಲಿ ಸಾಕಷ್ಟು ಕೆರೆಗಳನ್ನು ನಿರ್ಮಿಸಿದ್ದರು. ಇದರಿಂದ ಜನರಿಗೂ ಅನುಕೂಲವಾಗುತ್ತಿತ್ತು.
ನಂತರದಲ್ಲಿ ಆ ಭಾಗದ ೧೫೦ ಹಳ್ಳಿಗಳನ್ನು ನಗರಕ್ಕೆ ಸೇರಿಸಿಕೊಳ್ಳಲಾಯಿತು. ಆಗ ಕೆರೆಗಳೂ ನಗರಕ್ಕೆ ಸೇರಿದರು. ಈ ಸಂದರ್ಭ ದಲ್ಲಿ ಕೆರೆಗಳನ್ನು ಸಂರಕ್ಷಿಸಲು, ಅದರಲ್ಲಿನ ನೀರು ಹಾದು ಹೋಗಲು ಸರಿಯಾದ ವ್ಯವಸ್ಥೆ ಮಾಡದೇ ಇರುವುದೇ ಈ ಎಲ್ಲಾ ಪ್ರಮಾದಕ್ಕೆ ಕಾರಣ. ಕೆರೆಗಳ ಜಾಗದಲ್ಲಿ ಕಟ್ಟಡ, ವಾಕಿಂಗ್ ಪಾಥ್‌ಗಳನ್ನು ನಿರ್ಮಿಸಿ ನೀರು ಹರಿಯದಂತೆ ತಡೆದಿದ್ದೇವೆ.
ಹೀಗಿರುವಾಗ ನೀರು ರಸ್ತೆ, ಬಡಾವಣೆಗಳಿಗೆ ನುಗ್ಗದೆ ಬೇರೆಲ್ಲಿ ಹೋಗಲು ಸಾಧ್ಯ ಎಂದು ಪ್ರಶ್ನಿಸಿದರು.
ಕಾಲುವೆ ನಿರ್ಮಾಣ ಅಗತ್ಯ
ಕೆರೆಗಳ ನೀರು ಹರಿದು ಹೋಗಲು ಸೂಕ್ತ ಕಾಲುವೆ ನಿರ್ಮಾಣ ಮಾಡುವುದು ಉತ್ತಮ. ಆದರೆ ಇದನ್ನು ಕೇವಲ ಭೂವಿಜ್ಞಾನಿ ಗಳು ಮಾತ್ರ ಮಾಡಲು ಸಾಧ್ಯ. ಆದ್ದರಿಂದ ಆ ಕೆಲಸಕ್ಕಾಗಿ ತಜ್ಞರ ಒಂದು ಟಾಸ್ಕ್ ಫೋರ್ಸ್ ಮತ್ತು ತಾಂತ್ರಿಕ ತಂಡವನ್ನು
ರಚಿಸಬೇಕು. ಅದರಲ್ಲಿ ಭೂವಿಜ್ಞಾನಿಗಳಿಗೂ ಅವಕಾಶ ನೀಡಿದರೆ ಖಂಡಿತವಾಗಿಯೂ ಬೆಂಗಳೂರಿನಲ್ಲಿ ಮಳೆ ಬಂದಾಗ
ಉದ್ಭವಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಡಾ.ಎಚ್.ಎಸ್.ಎಂ. ಪ್ರಕಾಶ್ ಹೇಳಿದರು.
ಹಿಂದಿನ ಕಾಲದಲ್ಲಿ ಒಂದು ಕರೆಯಿಂದ ಮತ್ತೊಂದು ಕೆರೆಗೆ ನೀರು ಹರಿಯುವ ಸಂಪರ್ಕ ವ್ಯವಸ್ಥೆ ಇತ್ತು. ಆದರೆ, ಈಗ
ಸಂಪರ್ಕ ಕಡಿತಗೊಂಡು ನೀರು ಎಲ್ಲೆಂದರಲ್ಲಿ ನುಗ್ಗುತ್ತದೆ. ವೈಜ್ಞಾನಿಕ ಅಂಶಗಳಿಗೆ ಒತ್ತು ನೀಡದೆ ಬೆಂಗಳೂರಿನಲ್ಲಿ ದೊಡ್ಡ ಬಡಾವಣೆಗಳ ನಿರ್ಮಾಣ ಮಾಡಿರುವುದು ಈ ಎಲ್ಲಾ ತೊಂದರೆಗಳಿಗೆ ದಾರಿ ಮಾಡಿಕೊಟ್ಟಿದೆ. ಮಳೆ ಬಂದಾಗ ಕೆರೆಗಳಿಗೆ ಒಳ ಹರಿವು ಹೆಚ್ಚಾಗಿ ಹೊರಹರಿವಿಗೆ ಅವಕಾಶವಿಲ್ಲದಿರುವ ಕಾರಣ ಮಳೆ ನೀರು ಬಡಾವಣೆಗಳಿಗೆ ನುಗುತ್ತಿವೆ.