ಆಧುನಿಕ ನ್ಯಾಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗುತ್ತಿರುವ ವಿಧಿ ವಿಜ್ಞಾನ : ಹೆಚ್ಚಿನ ಉದ್ಯೋಗಾವಕಾಶಗಳಿಗೆ ರಹದಾರಿ
ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್.ಸಿ.ಆರ್.ಬಿ) ಅಂಕಿಅಂಶಗಳ ಪ್ರಕಾರ, ಸೈಬರ್ ಅಪರಾಧಗಳು ಕಳೆದ ಕೆಲ ವರ್ಷಗಳಲ್ಲಿ ವಾರ್ಷಿಕ ಸುಮಾರು ಶೇ 20 ರಿಂದ 25 ರಷ್ಟು ಹೆಚ್ಚಳ ಕಂಡಿದೆ. ಹಣಕಾಸು ವಂಚನೆ, ಡಿಜಿಟಲ್ ಅಪರಾಧಗಳು, ಸಂಘಟಿತ ಅಪರಾಧಗಳು ತನಿಖಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ.
-
ಡಾ. ಎನ್. ಸಿ. ಶರ್ಮಾ, ನ್ಯಾಕ್ ಮಾಜಿ ನಿರ್ದೇಶಕರು ಹಾಗೂ ಶಿಕ್ಷಣ ತಜ್ಞರು
ಫೊರೆನ್ಸಿಕ್ ಸೈನ್ಸ್ ಇಂದು ಅಪರಾಧ ತನಿಖೆ ಮತ್ತು ನ್ಯಾಯ ವಿತರಣಾ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಬೆಳೆದಿದೆ. ಅಪರಾಧ ಹಾಗೂ ನಾಗರಿಕ ಪ್ರಕರಣಗಳಲ್ಲಿ ವೈಜ್ಞಾನಿಕ ನಿಖರತೆ, ಪಾರದರ್ಶ ಕತೆ ಮತ್ತು ವಿಶ್ವಾಸಾರ್ಹತೆಯನ್ನು ಒದಗಿಸುವ ಮೂಲಕ ಫೊರೆನ್ಸಿಕ್ ಸೈನ್ಸ್ ನ್ಯಾಯದ ಮೂಲಾ ಧಾರವಾಗುತ್ತಿದೆ. ಅಪರಾಧಗಳ ಸ್ವರೂಪ ತಂತ್ರಜ್ಞಾನಾಧಾರಿತ ಮತ್ತು ಸಂಕೀರ್ಣ ವಾಗುತ್ತಿರುವ ಹಿನ್ನೆಲೆಯಲ್ಲಿ, ಪಾರಂಪರಿಕ ತನಿಖಾ ವಿಧಾನಗಳು ಸಾಕಾಗದೆ, ವೈಜ್ಞಾನಿಕ ಸಾಕ್ಷ್ಯಗಳ ಅವಶ್ಯಕತೆ ಹೆಚ್ಚುತ್ತಿದೆ.
ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್.ಸಿ.ಆರ್.ಬಿ) ಅಂಕಿಅಂಶಗಳ ಪ್ರಕಾರ, ಸೈಬರ್ ಅಪರಾಧಗಳು ಕಳೆದ ಕೆಲ ವರ್ಷಗಳಲ್ಲಿ ವಾರ್ಷಿಕ ಸುಮಾರು ಶೇ 20 ರಿಂದ 25 ರಷ್ಟು ಹೆಚ್ಚಳ ಕಂಡಿದೆ. ಹಣಕಾಸು ವಂಚನೆ, ಡಿಜಿಟಲ್ ಅಪರಾಧಗಳು, ಸಂಘಟಿತ ಅಪರಾಧಗಳು ತನಿಖಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಡಿಎನ್ಎ ವಿಶ್ಲೇಷಣೆ, ಡಿಜಿಟಲ್ ವಿಧಿವಿಜ್ಞಾನ, ತಂತ್ರಜ್ಞಾನ ವರದಿಗಳು ಮತ್ತು ವೈಜ್ಞಾನಿಕ ದಾಖಲೆಗಳು ನ್ಯಾಯಾಲಯ ಗಳಲ್ಲಿ ಪ್ರಮುಖ ಸಾಕ್ಷಗಳಾಗಿವೆ.
ಇಂದಿನ ನ್ಯಾಯಾಲಯಗಳು ವೈಜ್ಞಾನಿಕ ಸಾಕ್ಷಗಳ ಮೇಲೆ ಹೆಚ್ಚಾಗಿ ಅವಲಂಬಿಸಿದ್ದು, ಫೊರೆನ್ಸಿಕ್ ತಜ್ಞರ ಪಾತ್ರ ತೀರ್ಪುಗಳಲ್ಲಿ ಗುಣಮಟ್ಟವನ್ನು ನೇರವಾಗಿ ಪ್ರಭಾವಿಸುತ್ತಿವೆ. ಇದರಿಂದಾಗಿ ತರಬೇತಿ ಪಡೆದ ವಿಧಿವಿಜ್ಞಾನ ವೃತ್ತಿಪರರ ಅವಶ್ಯಕತೆ ದೇಶಾದ್ಯಂತ ಹೆಚ್ಚುತ್ತಿದೆ.
ಈ ಅಗತ್ಯವನ್ನು ಮನಗಂಡು ಕೇಂದ್ರ ಸರ್ಕಾರ ವಿಧಿ ವಿಜ್ಞಾನ ಮೂಲಸೌಕರ್ಯ ಬಲಪಡಿಸುವತ್ತ ಸ್ಪಷ್ಟ ಹೆಜ್ಜೆಗಳನ್ನಿಟ್ಟಿದೆ. ಕೇಂದ್ರ ಹಾಗೂ ರಾಜ್ಯ ಫೊರೆನ್ಸಿಕ್ ವಿಜ್ಞಾನ ಪ್ರಯೋಗಾಲಯಗಳ (ಸಿಎಫ್ಎಸ್ಎಲ್ ಮತ್ತು ಎಫ್.ಎಸ್.ಎಲ್) ವಿಸ್ತರಣೆ, ಪೊಲೀಸ್ ತನಿಖಾ ವ್ಯವಸ್ಥೆಯ ಆಧುನೀ ಕರಣ ಮತ್ತು ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ (ಎನ್.ಇ.ಎಸ್.ಯು) ಸ್ಥಾಪನೆ ಈ ದಿಕ್ಕಿನ ಪ್ರಮುಖ ಕ್ರಮಗಳಾಗಿವೆ. ಇತ್ತೀಚಿನ ಕ್ರಿಮಿನಲ್ ಕಾನೂನು ಸುಧಾರಣೆಗಳಲ್ಲೂ ವೈಜ್ಞಾನಿಕ ಸಾಕ್ಷ್ಯಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಆದರೂ, ಭಾರತದಲ್ಲಿ ತರಬೇತಿ ಪಡೆದ ಫೊರೆನ್ಸಿಕ್ ತಜ್ಞರ ಕೊರತೆ ಗಂಭೀರವಾಗಿಯೇ ಇದೆ. ಸರ್ಕಾರಿ ಪ್ರಯೋಗಾಲಯಗಳು, ಪೊಲೀಸ್ ಇಲಾಖೆ, ಸೈಬರ್ ಅಪರಾಧ ಘಟಕಗಳು ಹಾಗೂ ನ್ಯಾಯಾಂಗ ಸಹಾಯಕ ಸೇವೆಗಳಲ್ಲಿ ಬೇಡಿಕೆಯಷ್ಟು ಮಾನವ ಸಂಪನ್ಮೂಲ ಲಭ್ಯವಿಲ್ಲ. ಇದರಿಂದ ಫೊರೆನ್ಸಿಕ್ ಸೈನ್ಸ್ ಒಂದು ಅತ್ಯಂತ ವಿಶಿಷ್ಟ ಮತ್ತು ಹೆಚ್ಚಿನ ಉದ್ಯೋಗಾವಕಾಶಗಳ ಕ್ಷೇತ್ರವಾಗಿ ಹೊರಹೊಮ್ಮಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಫೊರೆನ್ಸಿಕ್ ಸೈನ್ಸ್ ಅಪರಾಧ ತನಿಖೆ, ಭಯೋತ್ಪಾದನೆ ನಿಯಂತ್ರಣ, ವಿಪತ್ತು ಸಂದರ್ಭದಲ್ಲಿ ಗುರುತಿಸುವಿಕೆ ಮತ್ತು ಅಂತರರಾಷ್ಟ್ರೀಯ ಅಪರಾಧ ನಿಯಂತ್ರಣದಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ಡಿಎನ್ಎ ತಂತ್ರಜ್ಞಾನ, ಡಿಜಿಟಲ್ ಮತ್ತು ಸೈಬರ್ ಫೊರೆನ್ಸಿಕ್ಸ್, ಫೊರೆನ್ಸಿಕ್ ಮನೋವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆಗೆ ಅಪಾರ ಅವಕಾಶಗಳಿವೆ.
ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ವೇಗವಾದ ಬೆಳವಣಿಗೆ ಗಳನ್ನು ಗಮನದಲ್ಲಿಟ್ಟುಕೊಂಡು ಎಂಇಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಲಯ ಸಂಸ್ಥೆಯು 2026-27 ಶೈಕ್ಷಣಿಕ ವರ್ಷದಿಂದ `ಫೊರೆನ್ಸಿಕ್ ಸೈನ್ಸ್ ನಲ್ಲಿ ಹೊಸ ಪದವಿ ಕೋರ್ಸ್ ಅನ್ನು ಆರಂಭಿಸುವ ಮಹತ್ವದ ಶೈಕ್ಷಣಿಕ ಮುಂದಾಳತ್ರವನ್ನು ಕೈಗೊಂಡಿದೆ. ಈ ಕೋರ್ಸ್ ಅನ್ನು ಡಾ. ಆದರ್ಶ, ಪ್ರಾಂಶುಪಾಲರು, ಹಾಗೂ ಡಾ. ಎಸ್. ಎ. ಹರಿಪ್ರಸಾದ್ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಅವರ ಮಾರ್ಗದರ್ಶನ ಮತ್ತು ಮುಂದಾಳತ್ವದಲ್ಲಿ ಎಂ.ಇ.ಎಸ್ ಸಂಸ್ಥೆಯಡಿ ಪ್ರಾರಂಭಿಸ ಲಾಗುತ್ತಿದೆ.
ಈ ಫೊರೆನ್ಸಿಕ್ ಸೈನ್ಸ್ ಕೋರ್ಸ್ ವಿದ್ಯಾರ್ಥಿಗಳಿಗೆ ದೃಢವಾದ ವೈಜ್ಞಾನಿಕ ಆಧಾರ, ಉನ್ನತ ಮಟ್ಟದ ವಿಶ್ಲೇಷಣಾತ್ಮಕ ಚಿಂತನೆ, ಹಾಗೂ ಆಧುನಿಕ ಪ್ರಾಯೋಗಿಕ ತರಬೇತಿ ಒದಗಿಸುವ ಉದ್ದೇಶವನ್ನು ಹೊಂದಿದೆ. ಪಠ್ಯಕ್ರಮವು ರಾಷ್ಟ್ರೀಯ ಅಗತ್ಯತೆಗಳು ಮತ್ತು ಅಂತರರಾಷ್ಟ್ರೀಯ ಮಾನದಂಡ ಗಳನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡಿದ್ದು, ಅಪರಾಧ ತನಿಖೆ, ನ್ಯಾಯ ವಿಜ್ಞಾನ ಹಾಗೂ ತಂತ್ರಜ್ಞಾನ ಆಧಾರಿತ ಅನ್ವಯಗಳಿಗೆ ಒತ್ತು ನೀಡುತ್ತದೆ.
ಇಂದಿನ ಭಾರತದಲ್ಲಿ ಅರ್ಹ ಫೊರೆನ್ಸಿಕ್ ತಜ್ಞರ ಕೊರತೆ ಗಂಭೀರವಾಗಿರುವ ಸಂದರ್ಭದಲ್ಲಿ, ಈ ಕೋರ್ಸ್ ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ಸರ್ಕಾರಿ ಇಲಾಖೆಗಳು, ರಾಜ್ಯ ಮತ್ತು ಕೇಂದ್ರ ಫೊರೆನ್ಸಿಕ್ ಪ್ರಯೋಗಾಲಯಗಳು, ಕಾನೂನು ಜಾರಿ ಸಂಸ್ಥೆಗಳು, ಸೈಬರ್ ಅಪರಾಧ ಘಟಕಗಳು, ನ್ಯಾಯಾಲಯಗಳಿಗೆ ಸಂಬಂಧಿತ ತಜ್ಞ ಸೇವೆಗಳು ಹಾಗೂ ಖಾಸಗಿ ಸಲಹಾ ಸಂಸ್ಥೆಗಳಲ್ಲಿ ವಿಶಾಲ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
ವಿಜ್ಞಾನ, ಸಮಾಜಸೇವೆ ಮತ್ತು ನ್ಯಾಯದ ಸಂಗಮವನ್ನು ತಮ್ಮ ವೃತ್ತಿಜೀವನದ ಕೇಂದ್ರವಾಗಿಸಿ ಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಪೊರೆನ್ಸಿಕ್ ಸೈನ್ಸ್ ಭವಿಷ್ಯಮುಖಿ ಹಾಗೂ ಸಮಾಜೋತ್ತರ ಪ್ರಾಮುಖ್ಯತೆಯ ವೃತ್ತಿಪಥವಾಗಿದೆ. ಈ ಸಮಯೋಚಿತ ಹಾಗೂ ದೂರದೃಷ್ಟಿಯ ಶೈಕ್ಷಣಿಕ ಮುಂದಾಳತ್ವದ ಮೂಲಕ ಎಂ.ಇ.ಎಸ್ ಕಾಲೇಜ್ ರಾಷ್ಟ್ರದ ಫೊರೆನ್ಸಿಕ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಜೊತೆಗೆ, ಯುವ ಪ್ರತಿಭೆಗಳಿಗೆ ಹೊಸ ಅವಕಾಶಗಳ ದಾರಿಯನ್ನು ತೆರೆದಿಡುತ್ತಿದೆ.