ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghav Sharma Nidle Column: ಎನ್‌ಡಿಎಗೆ ತಲೆನೋವಾದ ಮೋದಿ-ನಿತೀಶರ ಹಳೆಯ ಮಿತ್ರ

35 ವರ್ಷಗಳಿಂದ ಬಿಹಾರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿರುವ ಕಾಂಗ್ರೆಸ್ ಬಗ್ಗೆ ಪ್ರಶಾಂತ್ ಕಿಶೋರ್ ತಲೆಕೆಡಿಸಿಕೊಂಡಂತಿಲ್ಲ. ಅವರ ಮುಖ್ಯ ಟಾರ್ಗೆಟ್ ಸಿಎಂ ನಿತೀಶ್ ಕುಮಾರ್ ಮತ್ತು ಸ್ಥಳೀಯ ಬಿಜೆಪಿ ನಾಯಕರೇ ಆಗಿದ್ದಾರೆ. ಭ್ರಷ್ಟಾಚಾರ ವಿಷಯದಲ್ಲಿ ಬಿಜೆಪಿಯ ಸ್ಥಳೀಯ ಪ್ರಭಾವಿ ನಾಯಕರ ನಿದ್ದೆಗೆಡಿಸಿರುವ ಪಿಕೆ, ಎನ್‌ಡಿಎ ಮತಬ್ಯಾಂಕ್ ಬೇಧಿಸುವ ಪಕ್ಕಾ ಲೆಕ್ಕಾಚಾರ ಹಾಕಿ ಕೊಂಡಂತಿದೆ.

ಎನ್‌ಡಿಎಗೆ ತಲೆನೋವಾದ ಮೋದಿ-ನಿತೀಶರ ಹಳೆಯ ಮಿತ್ರ

-

Ashok Nayak Ashok Nayak Sep 21, 2025 11:05 AM

ಚರ್ಚಾ ವೇದಿಕೆ

ರಾಘವ ಶರ್ಮಾ ನಿಡ್ಕೆ

ಜಾತಿ ಮೀರಿ ಯೋಚಿಸಿ, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಜನ ಸುರಾಜ್ ಗೆ ಮತ ಹಾಕಿ ಎಂದು ಪ್ರಚಾರ ಮಾಡುತ್ತಿರುವ ಪ್ರಶಾಂತ್ ಕಿಶೋರ್‌ಗೆ, ರಾಜ್ಯದಲ್ಲಿ ಆಳವಾಗಿ ಬೇರೂರಿರುವ ಜಾತಿ ರಾಜಕಾರಣದ ಶಕ್ತಿಗಳನ್ನು ದುರ್ಬಲಗೊಳಿಸಲು ಸಾಧ್ಯವಾಗುವುದೇ?

ಜಾತಿ ರಾಜಕಾರಣದ ಕೇಂದ್ರಸ್ಥಳ ಬಿಹಾರವೀಗ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದೆ. ಇದು ಎನ್‌ಡಿಎ ಮತ್ತು ಇಂಡಿ ಒಕ್ಕೂಟದ ನಡುವಿನ ದ್ವಿಪಕ್ಷೀಯ ಕದನ ಎಂದು ಈ ಎರಡೂ ಮೈತ್ರಿ ಕೂಟಗಳು ಬಿಂಬಿಸಲು ಯತ್ನಿಸುತ್ತಿದ್ದರೂ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ (ಪಿಕೆ) ರಾಜಕೀಯ ಕಣಕ್ಕೆ ಧುಮುಕಿರುವುದರಿಂದ ಹೊಸ ರಾಜಕೀಯ ಮನ್ವಂತರಕ್ಕೆ ಬಿಹಾರ ತೆರೆದು ಕೊಳ್ಳುತ್ತಿದೆ.

2021ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಚುನಾವಣಾ ತಂತ್ರಗಾರನಾಗಿ, ಬಿಜೆಪಿ ವಿರುದ್ಧದ ಹೈವೋಲ್ಟೇಜ್ ಚುನಾವಣಾ ಕದನದಲ್ಲಿ ಟಿಎಂಸಿ ಗೆಲುವಿಗೆ ಕೊಡುಗೆ ನೀಡಿ ಸಂಭ್ರಮಿಸಿದ್ದ ಪ್ರಶಾಂತ್ ಕಿಶೋರ್, ‘ಇಲ್ಲಿಗೆ ನಾನು ಎಲೆಕ್ಷನ್ ಸ್ಟ್ರಾಟಜಿಸ್ಟ್ ಆಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತಿದ್ದೇನೆ’ ಎಂಬುದಾಗಿ ಘೋಷಿಸಿ, ಬಿಹಾರ ರಾಜಕೀಯ ಪ್ರವೇಶಿ ಸುವ ಸುಳಿವನ್ನು ನೀಡಿದ್ದರು.

2024ರ ಅಕ್ಟೋಬರ್ 2ರಂದು ಜನ ಸುರಾಜ್ ಎಂಬ ಪಕ್ಷ ಸ್ಥಾಪನೆ ಮಾಡಿದ ಪಿಕೆ, ಕಳೆದೊಂದು ವರ್ಷದಲ್ಲಿ ಬಿಹಾರದ ಉದ್ದಗಲ ಪ್ರವಾಸ ಮಾಡಿ, ಎರಡೂ ಮೈತ್ರಿಕೂಟಗಳ ಮತಗಳನ್ನು ಈ ಬಾರಿ ಕಟ್ ಮಾಡಲಿದ್ದೇವೆ. ನಿತೀಶ್ ಕುಮಾರ್‌ರನ್ನು ಮನೆಗಟ್ಟಲಿದ್ದೇವೆ ಎಂದು ಬಹಳ ವಿಶ್ವಾಸದಿಂದ ಮಾತನಾಡುತ್ತಿದ್ದಾರೆ.

ದೇಶದ ಉಪ ಪ್ರಧಾನಿ ಜಗಜೀವನ್ ರಾಮ್ ಸಂಸದರಾಗಿದ್ದ ಸಾಸಾರಾಮ್ ಲೋಕಸಭೆ ವ್ಯಾಪ್ತಿಯ ರೋಹ್ಟಾಸ್ ಜಿಯ ಕೊನಾರ್ ಎಂಬ ಗ್ರಾಮದ ಪ್ರಶಾಂತ್ ಕಿಶೋರ್, ಬ್ರಾಹ್ಮಣ (ಪಾಂಡೆ ಉಪಜಾತಿ) ಸಮದಾಯಕ್ಕೆ ಸೇರಿದವರು. ಅವರ ತಂದೆ ಹಿಂದೆ ಬಿಹಾರ ಸರ್ಕಾರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ದ್ದರು. ಬಿಹಾರ ರಾಜಕಾರಣಕ್ಕೆ ಪಿಕೆ ಹೊಸಬರಾಗಿದ್ದರೂ ಬಿಹಾರಕ್ಕೇನೂ ಹೊಸಬರಲ್ಲ. ಅವರು ದೇಶದ ವಿವಿಧ ನೇತಾಗಳೊಂದಿಗೆ ಕೆಲಸ ಮಾಡಿರುವುದನ್ನು ಬಿಹಾರ ಜನತೆ ನೋಡಿದೆ.

ಇದನ್ನೂ ಓದಿ: Raghava Sharma Nidle Column: ಫೇಕ್‌ ನ್ಯೂಸ್‌ ಫ್ಯಾಕ್ಟರಿಗೆ ಇನ್ನೆಷ್ಟು ಬಲಿ ಬೇಕು ?

ಆದರೆ, ಜಾತಿ ಅಂಕಗಣಿತವೇ ಬಿಹಾರ ರಾಜಕಾರಣದ ವಾಸ್ತವ. ಅಭಿವೃದ್ಧಿ ಬಗ್ಗೆ ಯಾರು ಎಷ್ಟೇ ಭಾಷಣ ಮಾಡಿದರೂ,ಇಲ್ಲಿನ ರಾಜಕೀಯ ಜಾತಿಗಳ ಸುತ್ತವೇ ಗಿರಕಿ ಹೊಡೆಯುತ್ತಿರುತ್ತದೆ. ಮಾತೆತ್ತಿದರೆ ವಿಕಾಸ (ಅಭಿವೃದ್ಧಿ) ಎನ್ನುವ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಸಾಮಾಜಿಕ ಸಮೀಕರಣಗಳನ್ನು ಅವಲಂಬಿಸಿಯೇ ರಾಜಕಾರಣ ಮಾಡಬೇಕು/ಮಾಡುತ್ತಿದ್ದಾರೆ.

ಬಿಹಾರ ಜನರು ಕೂಡ ನಾನಾ ಕಾರಣಗಳಿಂದಾಗಿ ಜಾತಿ ಮೀರಿ ಮತ ಹಾಕುವ ಆಶಯ ತೋರಿದ್ದು ಕಡಿಮೆ. ಇಂಥಾ ಸನ್ನಿವೇಶದಲ್ಲಿ, ಎನ್ಡಿಎ ಮತ್ತು ಮಹಾಮೈತ್ರಿ ಜಾತಿ ಲೆಕ್ಕಾಚಾರಗಳ ಮಧ್ಯೆ ನುಸುಳಿ, ದೊಡ್ಡ ಪ್ರಮಾಣದಲ್ಲಿ ಮತ ಬಾಚಲು ಪ್ರಶಾಂತ್ ಕಿಶೋರ್‌ಗೆ ಸಾಧ್ಯವಾಗಬಹುದೇ ಎಂಬ ಪ್ರಶ್ನೆ ಕಾಡುವುದು ಸಹಜ.

1990ರ ದಶಕದಲ್ಲಿ ಮಂಡಲ ರಾಜಕಾರಣ ಹಾಗೂ ಕಾಂಗ್ರೆಸ್ ವಿರೋಧಿ ಭಾವನೆಗಳನ್ನು ಬಳಸಿ ಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬಡಿದಟ್ಟಿ ಅಧಿಕಾರ ಸ್ಥಾಪಿಸಿದ ಲಾಲು ಪ್ರಸಾದ್ ಯಾದವರ 15 ವರ್ಷಗಳ ಜಂಗಲ್‌ರಾಜ್ ಬಳಿಕ, ನಿತೀಶ್ ಕುಮಾರ್ ಅಧಿಪತ್ಯ ಆರಂಭಗೊಂಡಿತು.

ಇವರಿಬ್ಬರೂ ಜೆಪಿ ಚಳವಳಿಯಿಂದ ಬಂದವರು ಮತ್ತು ಮಂಡಲ ಚಳವಳಿಯಿಂದಲೇ ರಾಜ ಕೀಯದಲ್ಲಿ ನೆಲೆ ಗಳಿಸಿದವರು. ಮಂಡಲ್‌ಗೆ ಪ್ರತಿಯಾಗಿ ಬಿಜೆಪಿ, ಕಮಂಡಲ ರಾಜಕಾರಣದ (ಹಿಂದುತ್ವ ಮತ್ತು ಧರ್ಮ ರಾಜಕಾರಣದ ಗುರುತು) ಮೂಲಕ 2005ರಿಂದ ಬಿಹಾರದಲ್ಲಿ ನೆಲೆ ಕಂಡುಕೊಂಡಿದೆ.

ಇಲ್ಲಿ ಮೇಲ್ವರ್ಗದ ಜಾತಿಗಳು ಸಾಮಾನ್ಯವಾಗಿ ಬಿಜೆಪಿ ಬೆಂಬಲಿಸಿದರೆ, ಯಾದವೇತರ ಹಿಂದುಳಿದ ಜಾತಿಗಳು ನಿತೀಶ್ ಕುಮಾರ್ ಅವರ ಜೆಡಿಯುಗೆ ಮತ ಹಾಕುತ್ತವೆ. ಯಾದವರು ಮತ್ತು ಮುಸ್ಲಿಮರು ಆರ್‌ಜೆಡಿಯನ್ನು ಈಗಲೂ ಬಿಗಿದಪ್ಪಿಕೊಂಡಿದ್ದಾರೆ. ಮುಸ್ಲಿಮರ ಒಂದು ವರ್ಗ ಮತ್ತು ಇತರೆ ಕೆಲ ಜಾತಿಯವರು ಕಾಂಗ್ರೆಸ್ ಬೆನ್ನಿಗೆ ನಿಂತರೆ, ಪಾಸ್ವಾನ್ ಸಮುದಾಯ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಜತೆಗಿದೆ. ಮಾಜಿ ಕೇಂದ್ರ ಸಚಿವ ಉಪೇಂದ್ರ ಖುಶ್ವಾಹ ಮತ್ತು ಮಾಜಿ ಸಿಎಂ ಜೀತನ್ ರಾಮ್ ಮಾಂಜಿ ತಮ್ಮ ಸಣ್ಣ ಸಮುದಾಯಗಳ ನಾಯಕರಾಗಿ ಈಗಲೂ ಅಧಿಕಾರಸ್ಥರೊಂದಿಗಿರುತ್ತಾರೆ.

ನಿತೀಶ್ ಕುಮಾರ್ ಜಾತಿ ಮೀರಿದ ನಾಯಕನಾಗಿ ಬೆಳೆದ ಕಾರಣದಿಂದಲೇ ರಾಷ್ಟ್ರ ರಾಜಕಾರಣದಲ್ಲಿ ಆಗಾಗ್ಗೆ ಪ್ರಧಾನಿ ಹುದ್ದೆಗೂ ಅವರ ಹೆಸರು ಕೇಳಿಬರುತ್ತದೆ. ಒಟ್ಟಿನಲ್ಲಿ ಕಳೆದ 35 ವರ್ಷಗಳಿಂದ ಮಂಡಲ-ಕಮಂಡಲ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾದ ಬಿಹಾರದಲ್ಲೀಗ, ಬ್ರಾಹ್ಮಣ ಸಮುದಾಯದ ಪ್ರಶಾಂತ್ ಕಿಶೋರ್ ಪ್ರವೇಶ ಮಾಡಿ, ಸಾಮಾಜಿಕ ನ್ಯಾಯದ ಪ್ರತಿಪಾದಕರಂತೆ ತೋರ್ಪಡಿಸಿಕೊಳ್ಳುತ್ತಿರುವವರ ಕಾರ್ಯಕ್ಷಮತೆ ಮತ್ತು ಆಡಳಿತವನ್ನು ಪ್ರಶ್ನಿಸುತ್ತಾ, ಬಿಹಾರದ ಅಭಿವೃದ್ಧಿಹೀನ ಪರಿಸ್ಥಿತಿಗೆ ಇವರೇ ಕಾರಣ ಎಂದು ನೇರವಾಗಿ ಗುರಿ ಮಾಡುತ್ತಿದ್ದಾರೆ.

35 ವರ್ಷಗಳಿಂದ ಬಿಹಾರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿರುವ ಕಾಂಗ್ರೆಸ್ ಬಗ್ಗೆ ಪ್ರಶಾಂತ್ ಕಿಶೋರ್ ತಲೆಕೆಡಿಸಿಕೊಂಡಂತಿಲ್ಲ. ಅವರ ಮುಖ್ಯ ಟಾರ್ಗೆಟ್ ಸಿಎಂ ನಿತೀಶ್ ಕುಮಾರ್ ಮತ್ತು ಸ್ಥಳೀಯ ಬಿಜೆಪಿ ನಾಯಕರೇ ಆಗಿದ್ದಾರೆ. ಭ್ರಷ್ಟಾಚಾರ ವಿಷಯದಲ್ಲಿ ಬಿಜೆಪಿಯ ಸ್ಥಳೀಯ ಪ್ರಭಾವಿ ನಾಯಕರ ನಿದ್ದೆಗೆಡಿಸಿರುವ ಪಿಕೆ, ಎನ್‌ಡಿಎ ಮತಬ್ಯಾಂಕ್ ಬೇಧಿಸುವ ಪಕ್ಕಾ ಲೆಕ್ಕಾಚಾರ ಹಾಕಿ ಕೊಂಡಂತಿದೆ.

ಪ್ರಶಾಂತ್ ಕಿಶೋರ್ ತಮ್ಮನ್ನು ತಾವು ಜಾತ್ಯತೀತವಾದಿಯಂತೆ ಬಿಂಬಿಸಿಕೊಳ್ಳುತ್ತಿದ್ದು, ಮುಸ್ಲಿಮ ರನ್ನೂ ಸೆಳೆಯುವ ಯತ್ನ ಮಾಡಿದ್ದಾರೆ. ಕಳೆದ 35 ವರ್ಷಗಳಲ್ಲಿ ಯಾದವರಂತೆ ಮುಸ್ಲಿಮರು ಕೂಡ ಆರ್‌ಜೆಡಿಯನ್ನೇ ಬೆಂಬಲಿಸುತ್ತಾ ಬಂದವರು. ಯಾದವ/ಮುಸ್ಲಿಂ ಕಾಂಬಿನೇಷನ್ ಆರ್‌ಜೆಡಿ ಯ ದೊಡ್ಡ ಶಕ್ತಿ. ಆದರೆ, ಮುಸ್ಲಿಂ ವೋಟ್‌ಬ್ಯಾಂಕ್‌ನ್ನು ಒಡೆಯಲು ಕಿಶೋರ್ ಯತ್ನಿಸುತ್ತಿರುವುದು ಆರ್‌ಜೆಡಿ ಆತಂಕ ಹೆಚ್ಚಿಸಿದೆ. ಧ ವಾಗ್ದಾಳಿ ನಡೆಸಿ, ನಿತೀಶ್ ಕುಮಾರ್ ಭ್ರಷ್ಟಾಚಾರದ ಭೀಷ್ಮ ಪಿತಾಮಹ ಮತ್ತು ಬಿಜೆಪಿ ಅವರ ರಕ್ಷಣಾ ಕವಚ ಎಂದು ಕಿಡಿಕಾರಿದ್ದರು.

ಬೇಗುಸರಾಯ್‌ನಂತಹ ಜಿಗಳಲ್ಲಿ ಕಾರ್ಖಾನೆಗಳು ಏಕಿಲ್ಲ? ಇಲ್ಲಿನ ಜನರೇಕೆ ವಲಸೆ ಹೋಗುತ್ತಿದ್ದಾರೆ ಎನ್ನುವುದಕ್ಕೆ ಅಧಿಕಾರಸ್ತರ ಬಳಿ ಉತ್ತರವಿದೆಯೇ ಎನ್ನುವುದು ಪಿಕೆ ಪ್ರಶ್ನೆ. ಬೆಗುಸರಾಯ್ ನ ಜಾತಿ ಸಮೀಕರಣ ಎನ್‌ಡಿಎಗೆ ಅನುಕೂಲಕರವಾಗಿರುವುದರಿಂದ ಅದನ್ನು ಭೇದಿಸುವುದು ಪಿಕೆ ಗುರಿ.

ಇಲ್ಲಿನ ಜನಸಂಖ್ಯೆಯಲ್ಲಿ ಭೂಮಿಹಾರ್‌ಗಳು ಶೇ.20%ರಷ್ಟಿದ್ದರೆ, ಬ್ರಾಹ್ಮಣರು ಸರಿಸುಮಾರು 10%ರಷ್ಟಿದ್ದಾರೆ. 2020ರ ಚುನಾವಣೆಯಲ್ಲಿ, ಇಲ್ಲಿನ 7 ಕ್ಷೇತ್ರಗಳಲ್ಲಿ ಬಿಜೆಪಿ ಮೂರನ್ನು ಗೆದ್ದಿತ್ತು. ಕೇಂದ್ರ ಸಚಿವ ಗಿರಿರಾಜ್ ಸಿಂಗ್ (ಭೂಮಿಹಾರ್ ಜಾತಿ) ಬೇಗುಸರಾಯ್ ಲೋಕಸಭೆ ಸಂಸದ ಎನ್ನುವುದು ಗಮನಾರ್ಹ.

ಚುನಾವಣಾ ತಂತ್ರಗಾರನಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್ ಕುಮಾರ್, ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್ ಸೇರಿ ಅನೇಕರೊಂದಿಗೆ ಒಡನಾಟ ಸಾಧಿಸಿ, ಅವರ ರಾಜಕಾರಣದ ಒಳಹೊರಗನ್ನು ಅರ್ಥಮಾಡಿಕೊಂಡಿರುವ ಪ್ರಶಾಂತ್ ಕಿಶೋರ್, ಬಿಜೆಪಿ ನಾಯಕರನ್ನು ಕೊಂಚಮಟ್ಟಿಗೆ ಗಲಿಬಿಲಿ ಗೊಳಿಸಿರುವುದರಿಂದಲೇ ಕೆಲ ದಿನಗಳ ಹಿಂದೆ ಗೃಹ ಸಚಿವ ಅಮಿತ್ ಶಾ 2 ದಿನಗಳ ಬಿಹಾರ ಪ್ರವಾಸ ಕೈಗೊಂಡು ಬಂದಿದ್ದಾರೆ.

ಚುನಾವಣಾ ಕಣದಲ್ಲಿ ಕಿಶೋರ್ ಪರಿಣಾಮ ತಗ್ಗಿಸಲು ಅಮಿತ್ ಶಾ ಹೊಸ ವ್ಯೂಹತಂತ್ರ ಹುಡು ಕುವ ಅನಿವಾರ್ಯತೆ ಇದೆ ಎನ್ನಲಾಗುತ್ತಿದೆ. ದೆಹಲಿಯ ಅರವಿಂದ ಕೇಜ್ರಿವಾಲರಂತೆ ಬಿಹಾರದ ಕೇಜ್ರಿವಾಲ್ ಆಗಿ ಪ್ರಶಾಂತ್ ಕಿಶೋರ್ ರೂಪುಗೊಳ್ಳುತ್ತಾರಾ ಎಂಬ ಚರ್ಚೆಗಳು ಕಳೆದೊಂದು ವರ್ಷದಿಂದ ನಡೆಯುತ್ತಿವೆ.

ಆದರೆ, ದಿಲ್ಲಿ-ಬಿಹಾರ ರಾಜಕೀಯಗಳೇ ಬೇರೆ ಬೇರೆ. ದಿಲ್ಲಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಬಗ್ಗೆ ಹತಾಶೆಗೊಂಡಿದ್ದ ಮತದಾರ ಬದಲಾವಣೆಯನ್ನು ಬಯಸಿ, ಕೇಜ್ರಿವಾಲರನ್ನು ಅಧಿಕಾರದ ಗದ್ದುಗೆಗೆ ಏರಿಸಿದ್ದ. ಕಾಂಗ್ರೆಸ್, ಬಿಜೆಪಿ ವಿರೋಧಿ ಅಲೆಯ ಲಾಭವನ್ನು ಕೇಜ್ರಿವಾಲ್ ಬಳಸಿಕೊಂಡರು.

ಮೇಲಾಗಿ, ದಿಲ್ಲಿಯ ಪೊಲಿಟಿಕಲ್ ಡೈನಾಮಿಕ್ಸ್ ಗೆ ಕೇಂದ್ರ ರಾಜಕಾರಣದ ಪ್ರಭಾವವೂ ಇರುತ್ತದೆ. ಹಾಗಾಗಿ, ದಿಲ್ಲಿಯ ಕೇಜ್ರಿವಾಲರಂತೆ ಬಿಹಾರದಲ್ಲಿ ಗೆಲುವು ಕಾಣುವುದು ಸುಲಭದ ಮಾತಲ್ಲ. ಆದರೂ, ಎರಡೂ ಮೈತ್ರಿಕೂಟಗಳ ಬಗ್ಗೆ ಅಸಮಾಧಾನ ಹೊಂದಿರುವ ಮತವರ್ಗ ಪ್ರಶಾಂತ್ ಕಿಶೋರ್ ಕಡೆ ವಾಲುವ ಲಕ್ಷಣಗಳು ಸದ್ಯಕ್ಕೆ ಬಿಹಾರದಲ್ಲಿ ಕಾಣಿಸುತ್ತಿದೆ.

ಪ್ರಶಾಂತ್ ಕಿಶೋರ್ ತಮ್ಮನ್ನು ತಾವು ಜಾತ್ಯತೀತವಾದಿಯಂತೆ ಬಿಂಬಿಸಿಕೊಳ್ಳುತ್ತಿದ್ದು, ಮುಸ್ಲಿಮ ರನ್ನೂ ಸೆಳೆಯುವ ಯತ್ನ ಮಾಡಿದ್ದಾರೆ. ಕಳೆದ 35 ವರ್ಷಗಳಲ್ಲಿ ಯಾದವರಂತೆ ಮುಸ್ಲಿಮರು ಕೂಡ ಆರ್‌ಜೆಡಿಯನ್ನೇ ಬೆಂಬಲಿಸುತ್ತಾ ಬಂದವರು. ಯಾದವ/ಮುಸ್ಲಿಂ ಕಾಂಬಿನೇಷನ್ ಆರ್‌ಜೆಡಿ ಯ ದೊಡ್ಡ ಶಕ್ತಿ. ಆದರೆ, ಮುಸ್ಲಿಂ ವೋಟ್‌ಬ್ಯಾಂಕ್‌ನ್ನು ಒಡೆಯಲು ಕಿಶೋರ್ ಯತ್ನಿಸುತ್ತಿರುವುದು ಆರ್‌ಜೆಡಿ ಆತಂಕ ಹೆಚ್ಚಿಸಿದೆ.

ಕಳೆದ 20 ವರ್ಷಗಳಿಂದ ಮಹಿಳಾ ಪರ ನಿಲುವುಗಳಿಂದಲೇ ಮನೆಮಾತಾಗಿದ್ದ ನಿತೀಶರ ಜೆಡಿಯು ಮತಗಳನ್ನು ಒಡೆಯಲು ಮಹಿಳೆಯರಿಗೆ ಹೆಚ್ಚು ಟಿಕೆಟ್ ನೀಡುತ್ತೇವೆ ಎಂದು ಪಿಕೆ ಘೋಷಿಸಿದ್ದಾರೆ. 2015ರಲ್ಲಿ ಜೆಡಿಯು ಚುನಾವಣಾ ತಂತ್ರಗಾರನಾಗಿ ಕೆಲಸ ಮಾಡಿದ್ದ ಪಿಕೆ, ನಿತೀಶ್ ಕುಮಾರ್‌ಗೆ ಅತ್ಯಾಪ್ತರಾಗಿಬಿಟ್ಟಿದ್ದರು.

ಚುನಾವಣೆ ಗೆದ್ದ ಬಳಿಕ ಕಿಶೋರ್‌ರನ್ನು ಜೆಡಿಯು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ನಂತರದಲ್ಲಿ ನಿತೀಶ್ ಜತೆಗೆ ಭಿನ್ನಾಭಿಪ್ರಾಯ ಹೆಚ್ಚಾಗಿ, ಪಕ್ಷದಿಂದ ಕಿಶೋರ್ ರನ್ನು ಉಚ್ಚಾಟಿಸಲಾಯಿತು. ಈಗ ನಿತೀಶ್ ಅವರ ಕಟು ಟೀಕಾಕಾರನಾಗಿ ಬದಲಾಗಿರುವ ಪಿಕೆ, 243 ಸೀಟುಗಳಲ್ಲಿ ನಿತೀಶ್ 25ಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ರಾಜಕೀಯ ತೊರೆಯುವುದಾಗಿ ಸವಾಲು ಹಾಕಿದ್ದಾರೆ.

2020ರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್‌ರನ್ನು ಎಲ್‌ಜೆಪಿಯ ಚಿರಾಗ್ ಪಾಸ್ವಾನ್ ಬಲಹೀನ ಗೊಳಿಸಿದ್ದರು. ಈ ಬಾರಿ ಆ ಕೆಲಸವನ್ನು ಪ್ರಶಾಂತ್ ಕಿಶೋರ್ ಮಾಡುವ ಲಕ್ಷಣ ಗೋಚರಿಸಿದೆ. ಒಂದೇ ವ್ಯತ್ಯಾಸ ಏನೆಂದರೆ; ಪಾಸ್ವಾನ್ ಬೆನ್ನ ಹಿಂದೆ ಬಿಜೆಪಿ ಇದ್ದರೆ, ಪಿಕೆ ಏಕಾಂಗಿ ಅಷ್ಟೇ. ಬಿಹಾರ ಜನತೆ ಮತ್ತು ಮತದಾರರ ಮನಸ್ಥಿತಿ ಅರ್ಥಮಾಡಿಕೊಳ್ಳಲೆಂದೇ ರಾಜ್ಯದಲ್ಲಿ 3000 ಕಿಮೀ ಪಾದಯಾತ್ರೆ ನಡೆಸಿ, ನಂತರ 2024ರಲ್ಲಿ ಜನ ಸುರಾಜ್ ಪಕ್ಷ ಸ್ಥಾಪನೆ ಮಾಡಿದ್ದ ಪ್ರಶಾಂತ್ ಕಿಶೋರ್, ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಮಹಾತ್ಮ ಗಾಂಧಿಯವರ ಭೀತಿ ಹರ್ವ ಆಶ್ರಮದಿಂದ ಪಾದಯಾತ್ರೆ ಪ್ರಾರಂಭಿಸಿದ್ದ ಪಿಕೆ, ಗಾಂಽಯೇ ತಮ್ಮ ಸ್ಪೂರ್ತಿ ಎಂದು ಆಗಾಗ್ಗೆ ಹೇಳಿಕೊಳ್ಳುತ್ತಾರೆ.

ಹಳ್ಳಿ-ಹಳ್ಳಿಗೆ ಹೋಗಿ, ಜನರ ನಾಡಿಮಿಡಿತ ತಿಳಿದುಕೊಳ್ಳುವುದು ಅವರ ತಂತ್ರಗಾರಿಕೆಯ ಭಾಗ. ಪಾದಯಾತ್ರೆ ಕೂಡ ಇದರ ಒಂದು ಭಾಗ. ಪಿಕೆ ಸ್ಥಾಪಿಸಿದ್ದ ರಾಜಕೀಯ ಸಲಹಾ ಗುಂಪು (ಪೊಲಿಟಿ ಕಲ್ ಕನ್ಸಲ್ಟೆನ್ಸಿ ಗ್ರೂಪ್) ‘ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ’ ಇಂಥದ್ದೇ ತಂತ್ರಗಳನ್ನು ಅನುಸರಿಸಿ ಕೆಲಸ ಮಾಡಿದೆ.

2014ರಲ್ಲಿ ಬಿಜೆಪಿಗೆ ‘ಚಾಯ್ ಪೆ ಚರ್ಚಾ’, 2015ರ ವಿಧಾನಸಭೆ ಚುನಾವಣೆಗೆ ಜೆಡಿಯುಗೆ ‘ನಿತೀಶ್ ಕೆ ಸಾತ್ ನಿಶ್ಚಯ್’, 2020ರ ದಿಲ್ಲಿ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷಕ್ಕೆ ‘ಲಗೇ ರಹೋ ಕೇಜ್ರಿವಾಲ’, 2017ರ ಪಂಜಾಬ್ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ಗೆ ‘ಪಂಜಾಬ್ ದ ಕ್ಯಾಪ್ಟನ್’, 2021ರ ಬಂಗಾಳ ವಿಧಾನಸಭೆ ಚುನಾವಣೆಗೆ ಟಿಎಂಸಿಗೆ ‘ಬಂಗ್ಲಾ ನಿಜೇರ್ ಮೆಯೆಕಿ ಚಾಯ’, ಎಂಬೆ ಅತ್ಯಾಕರ್ಷಕ ಘೋಷವಾಕ್ಯಗಳನ್ನು ರೂಪಿಸಿ, ಜನಮನದಲ್ಲಿ ಪಕ್ಷಗಳ ಬಗ್ಗೆ ಒಲವು ಮೂಡು ವಂತೆ ಮಾಡಿದ್ದ ಪ್ರಶಾಂತ್ ಕಿಶೋರ್, ದೇಶ ಕಂಡ ಪ್ರಖರ ಚುನಾವಣಾ ಚಾಣಕ್ಯ.

ಆದರೆ, ತಂತ್ರಗಾರ ರಾಜಕಾರಣಿಯಾಗಿ ಬದಲಾದಾಗ ಅದನ್ನು ಜನಸಮೂಹ ಹೇಗೆ ಸ್ವೀಕರಿಸುತ್ತದೆ ಎನ್ನುವುದು ಪ್ರಶ್ನೆ. ಬಿಹಾರ್ ಬದ್ಲಾವ್ ಎಂಬ ಘೋಷವಾಕ್ಯದ ಮೂಲಕ ಮನೆ-ಮನಗಳನ್ನು ತಲುಪುತ್ತಿರುವ ಪಿಕೆ, ಮುಖ್ಯವಾಗಿ ಯುವ ಮತದಾರರಲ್ಲಿ ಭರವಸೆ ತುಂಬುತ್ತಿದ್ದಾರೆ. ಶಿಕ್ಷಣ, ಅಭಿವೃದ್ಧಿ, ಉದ್ಯೋಗ, ವಲಸೆ ತಡೆಯ ಮಾತುಗಳ ಮೂಲಕ ಆ ವರ್ಗದ ಹೃದಯದೊಳಗೆ ಸ್ಥಾನ ಭದ್ರಪಡಿಸುವ ಯತ್ನದಲ್ಲಿದ್ದಾರೆ.

ಆದರೆ, ಬಿಜೆಪಿಯಂತೆ ದೃಢವಾದ ಸಂಘಟನಾ ವ್ಯಾಪ್ತಿ, ಹಣಬಲ, ತಾಂತ್ರಿಕ ಮೂಲಸೌಕರ್ಯ, ಆರ್‌ಜೆಡಿ ಹೊಂದಿರುವ ರಾಜಕೀಯ ಬಳುವಳಿ, ಸ್ಥಾಪಿತ ಸಂಘಟನಾ ಜಾಲ ಮತ್ತು ವೋಟ್ ಬ್ಯಾಂಕ್ ಜನ ಸುರಾಜ್ ಪಕ್ಷದಲ್ಲಿಲ್ಲ. ಪ್ರಶಾಂತ್ ಕಿಶೋರ್ ಎಂಬ ರಣನೀತಿಕಾರ ಜನ ಸುರಾಜ್ ಪಕ್ಷದ ಏಕೈಕ ದೊಡ್ಡ ಆಸ್ತಿ. ಎನ್‌ಡಿಎ ಮತ್ತು ಇಂಡಿ ಒಕ್ಕೂಟವನ್ನು ಹತ್ತಿಕ್ಕಲು ಈ ಆಸ್ತಿ ಒಂದೇ ಸಾಕೇ?

ಲೇಖಕರು ಹಿರಿಯ ಪತ್ರಕರ್ತರು