Siddaramaiah Record: ಸಿದ್ದುಗೆ ಬಲ ತಂದ ಬೆಣ್ಣೆನಗರಿ
ದಿ.ದೇವರಾಜು ಅರಸು ನಂತರ ಸುದೀರ್ಘ ಅವಧಿಗೆ ಸಿಎಂ ಆಗಿ ದಾಖಲೆ ಮಾಡಲಿರುವ ಸಿಎಂ ಸಿದ್ದರಾಮಯ್ಯ ಅವರಿಗೂ ರಾಜಕೀಯ ಮರುಹುಟ್ಟು ಕೊಟ್ಟಿದ್ದು, ತಮ್ಮ ರಾಜಕೀಯ ಬಲ ಪ್ರದರ್ಶನಕ್ಕೆ ಅವರು ವೇದಿಕೆಯನ್ನಾಗಿಸಿಕೊಂಡಿದ್ದು ಇದೇ ಮಧ್ಯ ಕರ್ನಾಟಕ ದಾವಣಗೆರೆ ಯನ್ನು.
-
ಗಣೇಶ್ ಕಮ್ಲಾಪುರ,
ಜಿಲ್ಲಾ ವರದಿಗಾರರು, ದಾವಣಗೆರೆ
ದಿ.ದೇವರಾಜು ಅರಸು ನಂತರ ಸುದೀರ್ಘ ಅವಧಿಗೆ ಸಿಎಂ ಆಗಿ ದಾಖಲೆ ಮಾಡಲಿ ರುವ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಕೀಯ ಮರುಹುಟ್ಟು ಕೊಟ್ಟಿದ್ದು, ತಮ್ಮ ರಾಜಕೀಯ ಬಲಪ್ರದರ್ಶನಕ್ಕೆ ಅವರು ವೇದಿಕೆಯನ್ನಾಗಿಸಿಕೊಂಡಿದ್ದು ಮಧ್ಯ ಕರ್ನಾಟಕವನ್ನು. ತಮ್ಮ ನಾಯಕನ ಬಲಪ್ರದರ್ಶನಕ್ಕೆ ದಾವಣಗೆರೆಯನ್ನೇ ಆಯ್ಕೆ ಮಾಡಿಕೊಂಡು 2022ರ ಆಗಸ್ಟ್‌ನಲ್ಲಿ ಸಿದ್ದರಾಮ್ಯಯನವರ 75ನೇ ಜನ್ಮದಿನಾಚರಣೆ ಅಂಗವಾಗಿ ʼಸಿದ್ದರಾಮೋತ್ಸವʼ ಆಚರಿಸಿದ್ದು ಐತಿಹಾಸಿಕ ಕಾರ್ಯಕ್ರಮವಾಗಿ ದಾಖಲಾಯಿತು.
ಯಾವುದೇ ರಾಜಕೀಯ ಪಕ್ಷಗಳಿಗೆ, ರಾಜ್ಯ- ರಾಷ್ಟ್ರೀಯ ನಾಯಕರಿಗೆ ಪುನರ್‌ಜನ್ಮ ಕೊಟ್ಟ ಭೂಮಿ, ಹೋರಾಟ -ಚಳವಳಿಗಳಿಗೆ ಸಂಚಲನ ತಂದ ಮಧ್ಯ ಕರ್ನಾಟಕದ ಅದೃಷ್ಟದ ನೆಲವೇ ದಾವಣಗೆರೆ. ಎಲ್ಲಾ ಪಕ್ಷಗಳ ನಾಯಕರಿಗೆ, ಮಾತೃಪಕ್ಷದಿಂದ ಸಿಡಿದೆದ್ದು ಬಂದ ನಾಯಕರಿಗೆ ದೊಡ್ಡ ಶಕ್ತಿ ತುಂಬಿದ್ದು ಇದೇ ದಾವಣಗೆರೆ. ಕೆಲವರಿಗೆ ಅಧಿಕಾರಕ್ಕೆ ತರದಿದ್ದರೂ ರಾಜಕೀಯ ಪುನರ್ಜನ್ಮ ನೀಡಿದ, ಅಸ್ತಿತ್ವ ಗಟ್ಟಿಗೊಳಿಸಿದ ನೆಲವದು. ಸಿದ್ದರಾಮಯ್ಯ, ದಿ.ಎಸ್.ಬಂಗಾರಪ್ಪ, ಬಿ.ಎಸ್. ಯಡಿಯೂರಪ್ಪ ಯಾರೇ ಆಗಿರಬಹುದು. ಅಷ್ಟರಮಟ್ಟಿಗೆ ಮಧ್ಯ ಕರ್ನಾಟಕದ ಈ ನೆಲ ತಮ್ಮ ರಾಜಕೀಯ ಹಾದಿ ಬದಲಿಸುತ್ತದೆಂಬ ನಂಬಿಕೆ ರಾಜಕೀಯ ನಾಯಕರದ್ದಾಗಿದೆ. ಅದಕ್ಕೆ ಕಳೆದ ಮೂರ‍್ನಾಲ್ಕು ದಶಕದಿಂದ ಇಲ್ಲಿ ಆದ ರಾಜಕೀಯ ಸಮಾವೇಶ, ಜಾತಿ ಸಮಾವೇಶ, ನಾಯಕರ ಜನ್ಮದಿನಾಚರಣೆ ನಡೆಯುತ್ತಿರುವುದೇ ಸಾಕ್ಷಿ.
ಎಡ, ಬಲ ಪಕ್ಷ ಯಾವುದೇ ಪಕ್ಷವಾದರೂ, ಯಾವ ಪಕ್ಷದ ನಾಯಕರಾದರೂ ಈ ಊರು ತಮ್ಮ ಅದೃಷ್ಟದ ತಾಣವೆಂಬುದನ್ನಂತೂ ಅಲ್ಲಗೆಳೆಯುವುದಿಲ್ಲ, ಅಲ್ಲದೆ ರಾಜ್ಯದ ಕೇಂದ್ರಬಿಂದುವಾದ ದಾವಣಗೆರೆ ಜಿಲ್ಲೆಗೆ ದಶ ದಿಕ್ಕುಗಳಿಂದ ಬಂದು ಹೋಗಲು ಅನುಕೂಲ ವಾದ ಸ್ಥಳ ಎಂಬುದು ಬಹುತೇಕ ರಾಜಕೀಯ ನಾಯಕರ ಲೆಕ್ಕಾಚಾರ.
ದಿ.ದೇವರಾಜು ಅರಸು ನಂತರ ಸುದೀರ್ಘ ಅವಧಿಗೆ ಸಿಎಂ ಆಗಿ ದಾಖಲೆ ಮಾಡಲಿರುವ ಸಿಎಂ ಸಿದ್ದರಾಮಯ್ಯ ಅವರಿಗೂ ರಾಜಕೀಯ ಮರುಹುಟ್ಟು ಕೊಟ್ಟಿದ್ದು, ತಮ್ಮ ರಾಜಕೀಯ ಬಲ ಪ್ರದರ್ಶನಕ್ಕೆ ಅವರು ವೇದಿಕೆಯನ್ನಾಗಿಸಿಕೊಂಡಿದ್ದು ಇದೇ ಮಧ್ಯ ಕರ್ನಾಟಕ ದಾವಣಗೆರೆಯನ್ನು.
ಇದನ್ನೂ ಓದಿ: Siddaramaiah Record: ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ʼಸಿದ್ದʼಹಸ್ತ
2006ರಲ್ಲಿ ಜೆಡಿಎಸ್‌ನಿಂದ ಹೊರ ಬಂದ ಸಿದ್ದರಾಮಯ್ಯ ಅವರು, 2007ರಲ್ಲಿ ಎ.ಐ.ಸಿ.ಸಿ ಅಧ್ಯಕ್ಷೆ ಸೋನಿಯಾಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಮಾತ್ರ ಶ್ರಮಿಸದೆ, ಇಡೀ ರಾಜ್ಯ ಸುತ್ತಿ ಕಾಂಗ್ರೆಸ್ ಪರ ಪ್ರಚಾರ ಮಾಡಿ ಪಕ್ಷದ ಭಾರೀ ಗೆಲುವಿಗೆ ಕಾರಣರಾಗಿ ಮೊದಲ ಬಾರಿಗೆ ಮುಖ್ಯಮಂತ್ರಿ ಯಾದರು, ಆದರೆ ಮುಖ್ಯಮಂತ್ರಿಯಾಗುವ ಮುನ್ನ ಅಂದರೆ 2012ರಲ್ಲಿ ಕುರುಬರ ಹಾಲುಮತ ಸಮುದಾಯದ ಸಮಾವೇಶ ನಡೆಸಿ ಸಮಾಜದ ಶಕ್ತಿ ಪ್ರದರ್ಶಿಸಿದ್ದು ಇದೇ ಬೆಣ್ಣೆನಗರಿಯಲ್ಲಿ. ಅಂದೇ ಸಿದ್ದು ಸಿಎಂ ಆಗುವ ಮುನ್ಸೂಚನೆ ದೊರೆತಿತ್ತು.
ಸಿದ್ದು ಅದೃಷ್ಟ ನೆಲ
ಚುನಾವಣೆ ವೇಳೆ ದಾವಣಗೆರೆಯಲ್ಲಿ ಸಮಾವೇಶ ಮಾಡಿದರೆ ಅಧಿಕಾರ ಚುಕ್ಕಾಣಿ ಗ್ಯಾರಂಟಿ ಎಂಬ ವಾಡಿಕೆ ಮೊದಲಿನಿಂದಲೂ ಇದೆ. ಅದರಂತೆ, ಅಂದಿನ ಸಮಾವೇಶದಲ್ಲಿ ದಾವಣಗೆರೆ ಮಾತ್ರವಲ್ಲದೆ ರಾಜ್ಯದ ಜಿಲ್ಲೆಗಳ ನಾಲ್ಕೈದು ಲಕ್ಷ ಜನ ಪಾಲ್ಗೊಂಡು ಸಿದ್ದರಾಮಯ್ಯರನ್ನು ಬೆಂಬಲಿಸಿದ್ದರು. ಇದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸರಕಾರದ ಎರಡು ವರ್ಷದ ಸಾಧನೆಯನ್ನು ರಾಜಧಾನಿಯಲ್ಲಿ ನಡೆಸದೇ, ತಮ್ಮ ಅದೃಷ್ಟದ ನೆಲ ದಾವಣಗೆರೆಯಲ್ಲಿ ಸಾಧನಾ ಸಮಾವೇಶ ನಡೆಸಿದ್ದರು.
ವೇದಿಕೆಯಲ್ಲಿ ಅವರಾಡುವ ಅಪ್ಪಟ ಮೈಸೂರು ಸೀಮೆಯ ಗ್ರಾಮಭಾಷೆ ಮಧ್ಯ ಕರ್ನಾಟಕದ ಜನರನ್ನು ಬೆಣ್ಣೆಯಂತೆ ಕರಗಿಸಿದೆ. ಶೋಷಿತ ವರ್ಗಗಳ ಕಷ್ಟ ಕಾರ್ಪಣ್ಯ ಗಳಿಗಾಗಿ ಸದಾ ದುಡಿಯುವ, ಸ್ಪಂದಿಸುವ ಗುಣಕ್ಕೆ ಕೇವಲ ಕುರುಬ, ಅಂದ ಮಾತ್ರವಲ್ಲದೆ ಸರ್ವಜನಾಂಗದ ಜನರೂ ಒಪ್ಪಿದ್ದು ಇದೇ ಕಾರಣಕ್ಕೆ, ಹಾಗಾಗಿ ಈ ಭಾಗದಲ್ಲಿ ಸಿದ್ದರಾಮಯ್ಯನವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.
ಬಲ ತುಂಬಿದ ಮಧ್ಯಕರ್ನಾಟಕ
ಈ ಹಿಂದೆ ಜನತಾ ಪರಿವಾರ, ಕಾಂಗ್ರೆಸ್, ಬಿಜೆಪಿ, ಭಾರತ ಕಮ್ಯುನಿಸ್ಟ್ ಪಕ್ಷ, ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷಗಳು ದಾವಣಗೆರೆಯಲ್ಲೇ ಸಮಾವೇಶ, ಚುನಾವಣೆ ಪೂರ್ವದ ಕಾರ್ಯವನ್ನು ಇಲ್ಲಿಂದಲೇ ಆರಂಭಿಸಿ, ಅದೃಷ್ಟ ಹುಡುಕಿದ್ದಾರೆ, ಬಹುತೇಕರು ಯಶಸ್ಸು ಕಂಡಿದ್ದಾರೆ. ಇದನ್ನೆ ಮಾನದಂಡವನ್ನಾಗಿಟ್ಟುಕೊಂಡ ಸಿದ್ದರಾಮಯ್ಯ ಬೆಂಬಲಿಗರು ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ, ಸಿದ್ದು ಬಲಪ್ರದರ್ಶನಕ್ಕೆ ದಾವಣಗೆರೆಯನ್ನೇ ಆಯ್ಕೆ ಮಾಡಿಕೊಂಡು 2022ರ ಆಗಸ್ಟ್‌ನಲ್ಲಿ ಸಿದ್ದರಾಮ್ಯಯನವರ 75ನೇ ಜನ್ಮದಿನಾಚರಣೆ ಅಂಗವಾಗಿ ‘ಸಿದ್ದರಾಮೋತ್ಸವ’ ಆಚರಿಸಿದ್ದು ಐತಿಹಾಸಿಕ ಕಾರ್ಯಕ್ರಮವಾಗಿ ದಾಖಲಾಯಿತು.
ಕಾಂಗ್ರೆಸ್‌ಗೆ ಬಲ ತುಂಬಿದ್ದು ಇದೇ ಸಿದ್ದರಾಮೋತ್ಸವ. ಅಂದು ದಾವಣಗೆರೆ ಸಮಾವೇಶ ದಲ್ಲಿ ಕೇವಲ ಹುಟ್ಟುಹಬ್ಬಕ್ಕಾಗಿ ಸೇರಿದ್ದ ಲಕ್ಷಾಂತರ ಜನಸ್ತೋಮ ಕಂಡು ಸ್ವತಃ ರಾಹುಲ್ ಗಾಂಧಿಯವರೇ ಬೆರಗಾಗಿದ್ದರು.
ರಾಜಕಾರಣದಲ್ಲಿ ವೋಟು ಹಾಕಿಸುವ ಸಾಮರ್ಥ್ಯಕ್ಕೆ ಕಿಮ್ಮತ್ತು ಜಾಸ್ತಿ, ಹಾಗಾಗಿ ನಿಸ್ಸಂದೇ ಹವಾಗಿ ಕಾಂಗ್ರೆಸ್‌ನಲ್ಲಿ ಸಿದ್ದು ಏಕಚಕ್ರಾಧಿಪತಿ, ಉಳಿದವರ ಸರದಿ ಏನಿದ್ದರೂ ತದನಂತರ ಅನ್ನುವುದನ್ನು ಸೇರಿದ್ದ ಜನಸ್ತೋಮವೇ ಸ್ಪಷ್ಟಪಡಿಸಿತ್ತು. ಇದರಿಂದ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯಗೆ ಮತ್ತೊಮ್ಮೆ ಸಿಎಂ ಅವಕಾಶ ಪಕ್ಕ ಎಂಬುದು ಸ್ಪಷ್ಟವಾಗಿತ್ತು.
ಈ ಹಿಂದೆ ಗಾಂಧಿ ಕುಟುಂಬದ ಅಧಿಕಾರದ ಕಾಲದಲ್ಲಿ ಒಬ್ಬ ರಾಜ್ಯ ನಾಯಕರ ಹುಟ್ಟು ಹಬ್ಬಕ್ಕೆ ದಿಲ್ಲಿಯಿಂದ ಗಾಂಧಿ ಪರಿವಾದವರು ಬಂದ ಉದಾಹರಣೆಗಳೇ ಇಲ್ಲ. ಆದರೆ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಬಂದಿದ್ದಲ್ಲದೇ, ಜನಸಾಗರ ದಿಂದಾಗಿ ಸಮಾವೇಶದ ಸ್ಥಳಕ್ಕೆ ಬರಲು ಪರದಾಡಿದ್ದರು. ರಾಷ್ಟ್ರೀಯ ನಾಯಕನಾದರೂ ವೇದಿಕೆ ಮೇಲೆ ತಾಸುಗಟ್ಟಲೇ ಕುಳಿತು ಸಿದ್ದರಾಮಯ್ಯ ಭಾಷಣ ಆಲಿಸಿದ್ದರು. ಇದೆಲ್ಲಾ ಕಾಂಗ್ರೆಸ್ ಸಂಸ್ಕೃತಿಯಲ್ಲಿ ಹಿಂದೆಂದೂ ಕಂಡಿರಲಿಲ್ಲ. ಆದರೆ ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಿರುವ ಅಂದಿನ ಸ್ಥಿತಿಯ ನಡುವೆ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಪಕ್ಷಕ್ಕೆ ಬಲ ತುಂಬಿದ್ದರು. ಹಾಗಾಗಿಯೇ ಸ್ವತಃ ಗಾಂಧಿಗಳು ಸಿದ್ದರಾಮಯ್ಯ ನಡೆದುಕೊಂಡಿದ್ದಕ್ಕೆಲ್ಲ ಎಸ್ ಎನ್ನುವಂತಾಯಿತು. ಇಂತಹದಕ್ಕೆಲ್ಲಾ ಕಾರಣವಾಗಿದ್ದು ಇದೇ ಮಧ್ಯಕರ್ನಾಟಕ.
2023ರಲ್ಲಿ ಎರಡನೇ ಬಾರಿಗೆ ಸಿದ್ದ ರಾಮಯ್ಯ ಸಿಎಂ ಆದ ತಕ್ಷಣ ತವರುಕ್ಷೇತ್ರಕ್ಕೆ ತೆರಳದೆ, ವಾರದಲ್ಲೇ ಅವರು ಮೊದಲಿಗೆ ಕಾಲಿಟ್ಟಿದ್ದು ಇದೇ ದಾವಣಗೆರೆಗೆ. ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ದಾವಣಗೆರೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿದ್ದರು. 2024ರಲ್ಲಿ ಕೋಟೆನಾಡು ಚಿತ್ರದುರ್ಗ ದಲ್ಲಿ ಶೋಷಿತರ ಜಾಗೃತಿಗಾಗಿ ಸಮಾವೇಶ ಏರ್ಪಡಿಸಿ ಅಹಿಂದ ಶಕ್ತಿ ಪ್ರದರ್ಶನದ ಮೂಲಕ ಸಿದ್ದುಗೆ ಬಲ ತುಂಬಿದ್ದು ಇದೇ ಮಧ್ಯಕರ್ನಾಟಕದ ಜನತೆ.
ಒಂದಿಲ್ಲೊಂದು ಕಾರಣಕ್ಕೆ ಸಿದ್ದರಾಮಯ್ಯ ಮಧ್ಯಕರ್ನಾಟಕ್ಕೆ ಬರುತ್ತಲೇ ಇರುತ್ತಾರೆ. 2025ರ ಜನವರಿ 5ರಂದು 537ನೇ ಕನಕ ಜಯಂತಿ ಹಿನ್ನೆಲೆಯಲ್ಲಿ ಕುರುಬ ಸಮುದಾಯ ಹಾಗೂ ಅಂದ ಶೋಷಿತ ವರ್ಗಗಳ ಶಕ್ತಿ ಪ್ರದರ್ಶನ ವೇದಿಕೆಯಲ್ಲೂ ಸಿದ್ದರಾಮಯ್ಯ ಮಿಂಚಿದ್ದರು. ಅಹಿಂದ ಸಮಾವೇಶಗಳು ರಾಜ್ಯದ ಹುಬ್ಬಳ್ಳಿ, ಮೈಸೂರು, ಹಾಸನ ಮತ್ತಿತರೆಡೆಗಳಲ್ಲಿ ನಡೆದಿವೆಯಾದರೂ ಸಿದ್ದರಾಮಯ್ಯಗೆ ರಾಜಕೀಯ ಶಕ್ತಿ, ಬಲ ತಂದುಕೊಂಡಿದ್ದು ಮಾತ್ರ ಇದೇ ದಾವಣಗೆರೆ.
‘ನುಡಿದಂತೆ ನಡೆಯುತ್ತೇವೆ’ ಎಂಬ ಘೋಷವಾಕ್ಯ ದೊಂದಿಗೆ ನಡೆದು ರಾಜ್ಯದ ಜನರ ಬಳಿ ಬಂದ ಸಿದ್ದುಗೆ ಜನರ ಜೈಕಾರ ಘೋಷಣೆ ಹೆಚ್ಚುತ್ತಲೇ ಇದೆ, ಜತೆಗೆ ರಾಜ್ಯದ ಮಾಸ್ ಲೀಡರ್‌ಗಳಾಗಿದ್ದ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪರವರು ವಯೋ ಸಹಜವಾಗಿ ನಿವೃತ್ತಿಯ ಅಂಚಿನಲ್ಲಿರುವುದರಿಂದ ಪ್ರಸ್ತುತ ದಿನಮಾನ ಗಳಲ್ಲಿ ಮಾಸ್ ಲೀಡರ್ ಪಟ್ಟಿಯಲ್ಲಿ ಸಿದ್ದುಗೆ ಸರಿಸಾಟಿ ಮತ್ತೊಬ್ಬರಿಲ್ಲ ದಂತಾಗಿದೆ.