ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Interview with MLA Dr. Manthar Gowda: ಕೊಡಗು ಜಿಲ್ಲೆಯ ಅಭಿವೃದ್ದಿಯೇ ನನ್ನ ರಾಜಕೀಯದ ಗುರಿ !

ಕಳೆದ ಮೂರು ವರ್ಷಗಳಿಂದ ಕೊಡಗು ಕ್ಷೇತ್ರದ ಶಾಸಕರಾಗಿರುವ ಡಾ.ಮಂತರ್ ಗೌಡ ಅವರು, ತಮ್ಮ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧರಾಗಿದ್ದಾರೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ, ಕ್ರೀಡೆಗಳ ಅಭಿವೃದ್ಧಿ ಮತ್ತು ಮಾನವ ಆನೆ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿದ್ದಾರೆ

ಕೊಡಗು ಜಿಲ್ಲೆಯ ಅಭಿವೃದ್ದಿಯೇ ನನ್ನ ರಾಜಕೀಯದ ಗುರಿ !

-

Profile
Ashok Nayak Jul 17, 2026 10:31 AM

(ಶಾಸಕ ಡಾ.ಮಂತರ್ ಗೌಡ ವಿಶೇ಼ಷ ಸಂದರ್ಶನ)

ರಾಜಕೀಯ ಎಂದರೆ ಕೇವಲ ಭರವಸೆ ಕೊಡುವುದಲ್ಲ, ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಿ ಫಲಿತಾಂಶ ನೀಡುವುದು! ಇದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಸ್ಪಷ್ಟ ಮಾತು.

ಕಳೆದ ಮೂರು ವರ್ಷಗಳಿಂದ ಕೊಡಗು ಕ್ಷೇತ್ರದ ಶಾಸಕರಾಗಿರುವ ಡಾ.ಮಂತರ್ ಗೌಡ ಅವರು, ತಮ್ಮ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧರಾಗಿದ್ದಾರೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ, ಕ್ರೀಡೆಗಳ ಅಭಿವೃದ್ಧಿ ಮತ್ತು ಮಾನವ ಆನೆ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿದ್ದಾರೆ. ಮೂರು ವರ್ಷದ ಶಾಸಕತ್ವದ ಅನುಭವ, ಕ್ಷೇತ್ರದ ಅಭಿವೃದ್ಧಿ, ಆರೋಗ್ಯ, ರಸ್ತೆ, ಕ್ರೀಡೆ, ಮಾನವ-ಆನೆ ಸಂಘರ್ಷ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಅವರು ‘ವಿಶ್ವವಾಣಿ’ ಜತೆ ಮುಕ್ತ ವಾಗಿ ಮಾತನಾಡಿದ್ದಾರೆ. 2023ರ ಜೂನ್‌ ನಿಂದ ಆರಂಭವಾದ ಶಾಸಕತ್ವದ ಅವಧಿ ನಿರಂತರ ಜನಸೇವೆಯ ಮಧ್ಯೆ, ಮೂರು ವರ್ಷಗಳು ಅತ್ಯಂತ ವೇಗವಾಗಿ ಕಳೆದಿದೆ ಎಂದು ಡಾ.ಮಂತರ್ ಗೌಡ ಹೇಳಿದರು.

ಮೂರು ವರ್ಷಗಳಲ್ಲಿ ಅಭಿವೃದ್ಧಿ

‘ಜನರು ಕೊಟ್ಟಿರುವ ಅವಕಾಶ ಅಪರೂಪದ್ದು. ಅದನ್ನು ಸಂಪೂರ್ಣವಾಗಿ ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅಧಿಕಾರಿಗಳನ್ನು, ಕಾರ್ಯದರ್ಶಿಗಳನ್ನು ಹಾಗೂ ಮುಖ್ಯಮಂತ್ರಿಯನ್ನು ಮನವೊಲಿಸಿ ಅನುದಾನ ತರುವುದು ಒಂದು ಕಲೆಯೇ ಸರಿ. ಹಲವು ಬಾರಿ ಮಂತ್ರಿಗಳ ಕಚೇರಿಗಳಲ್ಲಿ ವಾದಿಸಿ, ಹಠ ಹಿಡಿದು ಅನುದಾನ ತಂದಿದ್ದೇನೆ. ಆದರೆ ಜನರಿಗೆ ಸುಳ್ಳು ಭರವಸೆಗಳನ್ನು ನೀಡುವ ರಾಜಕಾರಣ ನನ್ನದಲ್ಲ’ ಎಂದರು.

ಇದನ್ನೂ ಓದಿ: Indi MLA Yashwant Rayagouda Patil Interview: ಹ್ಯಾಟ್ರಿಕ್‌ ಗೆಲುವಿನ ಅಭಿವೃದ್ಧಿ ಪವರ್‌ ಸಚಿವ ಸ್ಥಾನದ ವಿಶ್ವಾಸ

ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಹೆೆಜ್ಜೆಗಳು

ಕೊಡಗು ಜಿಲ್ಲೆಯ ವೈದ್ಯಕೀಯ ಸೇವೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿರುವುದಾಗಿ ಅವರು ವಿವರಿಸಿದರು. ಮೆಡಿಕಲ್ ಕಾಲೇಜಿ ನಲ್ಲಿ ಮೊದಲ ಬಾರಿ ಎಂಆರ್‌ಐ ಸ್ಕ್ಯಾನರ್ ವ್ಯವಸ್ಥೆ ಕಲ್ಪಿಸಿರುವುದರಿಂದ, ಈ ಹಿಂದೆ ಮೈಸೂರು, ಮಂಗಳೂರು ಅಥವಾ ಹಾಸನಕ್ಕೆ ತೆರಳಬೇಕಾಗಿದ್ದ ರೋಗಿಗಳಿಗೆ ಜಿಲ್ಲೆಯಲ್ಲೇ ಚಿಕಿತ್ಸೆ ಸಿಗುವಂತಾ ಗಿದೆ ಎಂದು ತಿಳಿಸಿದರು.

ಇದರ ಜೊತೆಗೆ, ಹೃದಯ ಸಂಬಂಧಿ ಚಿಕಿತ್ಸೆಗೆ ಅಗತ್ಯವಾದ ಕ್ಯಾತ್ ಲ್ಯಾಬ್ ಸ್ಥಾಪನೆಯ ಕೆಲಸವೂ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಅಳವಡಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ರಸ್ತೆಗಳ ಅಭಿವೃದ್ಧಿಗೆ ಸಾವಿರ ಕೋಟಿ ಅಗತ್ಯ

ಕೊಡಗಿನಲ್ಲಿ ರಸ್ತೆ ಅಭಿವೃದ್ಧಿ ದೊಡ್ಡ ಸವಾಲು ಎಂದು ಒಪ್ಪಿಕೊಂಡ ಶಾಸಕ ಡಾ.ಮಂತರ್ ಗೌಡ, ಜಿಲ್ಲೆಯ ಭೌಗೋಳಿಕ ಪರಿಸ್ಥಿತಿ ಮತ್ತು ವರ್ಷಕ್ಕೆ 100 ರಿಂದ 200 ಇಂಚುಗಳವರೆಗೆ ಸುರಿಯುವ ಮಳೆಯೇ ರಸ್ತೆ ಹಾಳಾಗಲು ಪ್ರಮುಖ ಕಾರಣ ಎಂದರು. ಈಗಾಗಲೇ ಎಸ್‌ಎಚ್‌ಐಡಿಪಿ ಯೋಜನೆ ಯಡಿ 20 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆದಿದ್ದು, ಮುಂದಿನ ಹಂತದಲ್ಲಿ 40 ರಿಂದ 50 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.

ಇದರ ಜೊತೆಗೆ, ಕೆ-ಶಿಪ್ ನಾಲ್ಕನೇ ಹಂತದಡಿ ಕೊಡಲಿಪೇಟೆ- ದೋಣಿಗಲ್ - ಮಡಿಕೇರಿ ನಡುವಿನ 96 ಕಿ.ಮೀ. ರಸ್ತೆ ಅಭಿವೃದ್ಧಿ ಪ್ರಸ್ತಾವ ಸರ್ಕಾರದ ಮುಂದಿದೆ, ಎಂದು ತಿಳಿಸಿದರು. ಆದರೆ ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಸಮರ್ಪಕವಾಗಿ ಅಭಿವೃದ್ಧಿ ಪಡಿಸಲು ಇನ್ನೂ ಕನಿಷ್ಠ 1000 ಕೋಟಿ ರೂ. ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

Screenshot_2 2

ಕ್ರೀಡೆಗೆ ವಿಶೇಷ ಆದ್ಯತೆ

ಕೊಡಗಿನ ರಕ್ತದಲ್ಲೇ ಕ್ರೀಡೆ ಮತ್ತು ದೇಶಸೇವೆ ಇದೆ, ಎಂದು ಹೇಳಿದ ಅವರು, ಜಿಲ್ಲೆಯ ಕ್ರೀಡಾ ಮೂಲ ಸೌಕರ್ಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಕೈಗೊಂಡಿರುವುದಾಗಿ ಡಾ.ಮಂತರ್ ಗೌಡ ವಿವರಿಸಿದರು. ಸೋಮವಾರಪೇಟೆಯ ಹಾಕಿ ಟರ್ಫ್ ಮೈದಾನ ಪೂರ್ಣ‌ ಗೊಂಡಿದ್ದು, ಮಡಿಕೇರಿಯ ಬಾಸ್ಕೆಟ್‌ಬಾಲ್ ಕೋರ್ಟ್ ಅನ್ನು ಸೆಮಿ ಇಂಡೋರ್ ಸ್ಟೇಡಿಯಂ ಆಗಿ ಪರಿವರ್ತಿಸಲಾಗುತ್ತಿದೆ.

ಇದರ ಜೊತೆಗೆ, ಮ್ಯಾನ್ಸ್ ಕಾಂಪೌಂಡ್‌ನಲ್ಲಿ 9 ಕೋಟಿ ರೂ. ವೆಚ್ಚದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಆರಂಭವಾಗಲಿದ್ದು, ಸೋಮವಾರ ಪೇಟೆ ಹಾಗೂ ಕುಶಾಲನಗರದಲ್ಲೂ ಹೊಸ ಕ್ರೀಡಾಂಗಣ ಮತ್ತು ಸೆಮಿ ಇಂಡೋರ್ ಸ್ಟೇಡಿಯಂ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ, ಎಂದು ಹೇಳಿದರು.

Screenshot_3 3

ಮಾನವ ಆನೆ ಸಂಘರ್ಷಕೆ ಶಾಶ್ವತ

ಪರಿಹಾರ ಕೊಡಗಿನ ಬಹುದೊಡ್ಡ ಸಮಸ್ಯೆಯಾಗಿರುವ ಮಾನವ- ಆನೆ ಸಂಘರ್ಷದ ಕುರಿತು ಮಾತನಾಡಿದ ಅವರು, ಅರಣ್ಯದ ಸ್ವರೂಪ ಬದಲಾಗುತ್ತಿರು ವುದೇ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟರು. ಕೇವಲ ಬ್ಯಾರಿಕೇಡ್ ನಿರ್ಮಾಣದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ವೈಜ್ಞಾನಿಕ ಅಧ್ಯಯನ ಹಾಗೂ ಬಹುಮುಖ ದೃಷ್ಟಿಕೋನ ದೊಂದಿಗೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು.

ಮಾನವ ಜೀವಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ಪರಿಹಾರ ಧನಕ್ಕಿಂತ ಜೀವ ರಕ್ಷಣೆ ಮುಖ್ಯ, ಎಂದು ಅವರು ಒತ್ತಿ ಹೇಳಿದರು.

ಕಾಂಗ್ರೆಸ್ ನಾಯಕತ್ವದ ಬೆಂಬಲ

ಪಕ್ಷದ ಕುರಿತು ಮಾತನಾಡಿದ ಅವರು, ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪೂರ್ಣ ಬೆಂಬಲ ಕ್ಷೇತ್ರದ ಅಭಿವೃದ್ಧಿಗೆ ದೊರೆಯುತ್ತದೆ ಎಂದು ಮಂತರ್ ಗೌಡ ಹೇಳಿದರು. ಜತೆಗೆ ಹಿರಿಯ ನಾಯಕ ಸಿದ್ದರಾಮಯ್ಯ ಅವರ ಮಾರ್ಗ ದರ್ಶನವೂ ದೊರಕಿದೆ ಎಂದರು. 2028ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆ ಎರಡಕ್ಕೂ ಒತ್ತು ನೀಡಲಾಗುತ್ತಿದೆ, ಎಂದರು.

ತಂದೆಯ ಮಾರ್ಗದರ್ಶನ ನನ್ನದೇ ಹಾದಿ

ತಮ್ಮ ತಂದೆ ಮಾಜಿ ಶಾಸಕ ಎ.ಮಂಜು ಅವರ ರಾಜಕೀಯ ಹಿನ್ನೆಲೆ ಕುರಿತು ಮಾತನಾಡಿದ ಡಾ. ಮಂತರ್ ಗೌಡ, ಕಾಂಗ್ರೆಸ್ ಸಿದ್ಧಾಂತವನ್ನು ನಂಬಿ ರಾಜಕೀಯ ಪ್ರವೇಶ ಮಾಡಿರುವುದಾಗಿ ಹೇಳಿದರು. ತಂದೆಯವರ ಹೆಸರು ದೊಡ್ಡದು. ಆದರೆ ನನ್ನದೇ ಆದ ಗುರುತು ಮತ್ತು ಇತಿಹಾಸ ವನ್ನು ನಿರ್ಮಿಸಿಕೊಳ್ಳಲು ಬಯಸಿದ್ದೇನೆ. ಚುನಾವಣೆ ಮುಗಿದ ಬಳಿಕ ಕ್ಷೇತ್ರದ ಪ್ರತಿಯೊಬ್ಬ ನಾಗರಿಕನನ್ನೂ ಸಮಾನವಾಗಿ ಕಾಣುವುದು ನನ್ನ ಕರ್ತವ್ಯ, ಎಂದರು.

Screenshot_5 ok

ಸಚಿವ ಸ್ಥಾನದಿಂದ ಅಭಿವೃದ್ಧಿ

ಕೊಡಗು ಜಿಲ್ಲೆಗೆ ಸಚಿವ ಸ್ಥಾನ ದೊರೆತರೆ ಜಿಲ್ಲೆಯ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗುತ್ತದೆ ಎಂದ ಅವರು, ರಾಜಕೀಯದಲ್ಲಿ ಆಸೆ, ಕನಸು ಮತ್ತು ತಾಳ್ಮೆ ಇರಬೇಕು. ಅಂತಿಮವಾಗಿ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ, ಎಂದು ಮಂತರ್ ಗೌಡ ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ

ಎಸ್‌ಐಆರ್ ಪ್ರಕ್ರಿಯೆ ಕುರಿತು ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಯನ್ನು ಕಾನೂನಾತ್ಮಕವಾಗಿ ಬೆಂಬಲಿಸುವುದಾಗಿ ಹೇಳಿದರು. ಅರ್ಹ ಮತದಾರರ ಹೆಸರು ಅನಗತ್ಯವಾಗಿ ಕೈಬಿಡದಂತೆ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ನಿಗಾ ವಹಿಸುತ್ತಿದ್ದು, ನಕಲಿ ಹಾಗೂ ಡುಪ್ಲಿಕೇಟ್ ಮತದಾರ ರನ್ನು ತಡೆಯುವ ಉದ್ದೇಶ ದಿಂದ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿವರಿಸಿದರು.

ವಿಮರ್ಶೆಗಳಿಗೂ ಸ್ವಾಗತ

ಸಂದರ್ಶನದ ಕೊನೆಯಲ್ಲಿ ಮಾಧ್ಯಮಗಳ ಪಾತ್ರವನ್ನು ಮೆಚ್ಚಿದ ಡಾ. ಮಂತರ್ ಗೌಡ, ಮಾಧ್ಯಮ ಗಳ ವಿಮರ್ಶೆಗಳನ್ನು ನಾನು ಸದಾ ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ. ಒಳ್ಳೆಯ ಮತ್ತು ಕ್ರಿಯಾತ್ಮಕ ಟೀಕೆಗಳು ಆಡಳಿತವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಪ್ರೇರೇಪಿಸುತ್ತವೆ. ಅಂತಿಮವಾಗಿ ನನ್ನ ಗುರಿ ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ವಿಶ್ವಾಸ ಉಳಿಸಿಕೊಳ್ಳುವುದಾಗಿದೆ, ಎಂದು ಹೇಳಿದರು.

(ಡಾ. ಮಂತರ್ ಗೌಡ ಅವರ ಸಂದರ್ಶನವನ್ನು ವಿಶ್ವವಾಣಿ ಟಿ.ವಿ. ಯುಟ್ಯೂಬ್ ಚಾನೆಲ್‌ನಲ್ಲಿ ನೋಡಿ)