Yagati Raghu Naadig Column: ʼಸುವರ್ಣʼ ಇತಿಹಾಸ ಬರೆದ ʼಬಂಗಾರʼದ ಮನುಷ್ಯ
ಚಿತ್ರರಸಿಕರು ಇಂಥ ಟೀಕೆ-ಟಿಪ್ಪಣಿಗಳನ್ನು ಕಿವಿಗೆ ಹಾಕಿಕೊಳ್ಳದೆ, ‘ಬಂಗಾರದ ಮನುಷ್ಯ’ ಬಿಂಬಿಸಿದ ಉತ್ತಮಿಕೆಗಳಿಗೆ ಓಗೊಟ್ಟು ಪ್ರವಾಹದೋಪಾದಿಯಲ್ಲಿ ಚಿತ್ರಮಂದಿರಗಳಿಗೆ ದಾಂಗುಡಿಯಿಟ್ಟರು. ಇದಕ್ಕೆ ಪುರಾವೆ ಎಂಬಂತೆ, ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ (ಈಗ ಭೂಮಿಕಾ ಎಂದಾಗಿದೆ) ಬಿಡುಗಡೆ ಯಾದ ಈ ಚಿತ್ರ ಬರೋಬ್ಬರಿ 2 ವರ್ಷಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡರೆ, ಮೈಸೂರಿನ ಚಾಮುಂಡೇಶ್ವರಿ ಚಿತ್ರಮಂದಿರದಲ್ಲಿ 60 ವಾರಗಳವರೆಗೆ ಓಡಿತು. ಮಾತ್ರವಲ್ಲದೆ, ರಾಜ್ಯದ ವಿವಿಧೆಡೆ 25 ವಾರಗಳ ಪ್ರದರ್ಶನ ಭಾಗ್ಯವನ್ನು ಕಂಡಿತು. 1988ರಲ್ಲಿ ಮರು ಬಿಡುಗಡೆಯಾದಾಗಲೂ 25 ವಾರಗಳ ಪ್ರದರ್ಶನ ಕಂಡ ಹೆಗ್ಗಳಿಕೆ ‘ಬಂಗಾರದ ಮನುಷ್ಯ’ನದ್ದು.
-
ಪತ್ತೇದಾರಿ ಕಾದಂಬರಿಗಳಿಂದಾಗಿ ಪ್ರಸಿದ್ಧರಾಗಿದ್ದ ಟಿ.ಕೆ.ರಾಮರಾವ್ ಅವರ ಇದೇ ಹೆಸರಿನ ಸಾಮಾಜಿಕ ಕಾದಂಬರಿಯನ್ನು ಆಧರಿಸಿ ರೂಪುಗೊಂಡ ಚಿತ್ರವೇ ‘ಬಂಗಾರದ ಮನುಷ್ಯ’. ಸಿದ್ದಲಿಂಗಯ್ಯನವರ ನಿರ್ದೇಶನ, ಜಿ.ಕೆ.ವೆಂಕಟೇಶ್ ಅವರ ಸಂಗೀತ, ಹುಣಸೂರು ಕೃಷ್ಣಮೂರ್ತಿ, ಆರ್.ಎನ್.ಜಯಗೋಪಾಲ್, ವಿಜಯನಾರಸಿಂಹ, ಚಿ.ಉದಯಶಂಕರ್ ಅವರ ಅನುಪಮ ಗೀತೆ ಗಳನ್ನು ಒಳಗೊಂಡಿದ್ದ ಈ ಚಿತ್ರದ ಮುಖ್ಯ ಪಾತ್ರಧಾರಿಗಳು ಡಾ.ರಾಜ್‌ಕುಮಾರ್, ಭಾರತಿ, ಟಿ.ಎನ್.ಬಾಲಕೃಷ್ಣ, ದ್ವಾರಕೀಶ್, ಆದವಾನಿ ಲಕ್ಷ್ಮೀದೇವಿ, ವಜ್ರಮುನಿ ಮುಂತಾದವರು.
ಮಾನವ ಬದುಕಿನ ವಿವಿಧ ಹಂತಗಳನ್ನು ಸಾರಿ ಹೇಳುವ ‘ನಗುನಗುತಾ ನಲಿ ನಲಿ ಏನೇ ಆಗಲಿ’ ಎಂಬ ಸುಂದರ ಗೀತೆಯೊಂದಿಗೆ ಶುರುವಾಗುವ ಚಿತ್ರ, ಹಾಡು ಮುಗಿಯುತ್ತಿದ್ದಂತೆ ದುರಂತದ ದೃಶ್ಯಕ್ಕೆ ತೆರೆದುಕೊಳ್ಳುತ್ತದೆ. ಅಲ್ಲಿಯವರೆಗೂ ‘ನಗುನಗುತಾ ನಲಿ ನಲಿ’ ಎಂದು ನಲಿಯುತ್ತಾ ಹಾಡಿಕೊಂಡು ಬಂದಿದ್ದ ಕಥಾನಾಯಕ ರಾಜೀವ, ತನ್ನ ಅಕ್ಕನ ಮನೆಯ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಸೂತಕದ ಛಾಯೆ ಮುಖಕ್ಕೆ ರಾಚುತ್ತದೆ.
ಕಾರಣ, ಆತನ ಭಾವ ಅಸು ನೀಗಿರುತ್ತಾರೆ. ಅಕ್ಕನಿಗೆ ಮತ್ತು ಆಕೆಯ ಮನೆಗೆ ಆಸರೆಯಾಗಿದ್ದ ಯಜಮಾನ ಇಲ್ಲವಾಗಿ, ಹಿರಿಯ ಸೋದರನೂ ಹೊಣೆಗಾರಿಕೆಯ ನೊಗದಿಂದ ಕಳಚಿಕೊಳ್ಳುತ್ತಾನೆ. ಓದು ಮುಗಿಸಿಕೊಂಡು ಪಟ್ಟಣದಿಂದ ಬಂದಿದ್ದ ರಾಜೀವ ಅಕ್ಕನ ಕುಟುಂಬಕ್ಕೆ ಆಸರೆಯಾಗಿ ನಿಲ್ಲಲು ಸಂಕಲ್ಪಿಸುತ್ತಾನೆ.
ನಂಬಿದವರನ್ನು ಭೂತಾಯಿ ಕೈಬಿಡುವುದಿಲ್ಲ ಎಂಬ ಗ್ರಹಿಕೆಯನ್ನು ಗಟ್ಟಿಯಾಗಿಸಿಕೊಂಡು, ಇದ್ದ ಕಲ್ಲುಹೊಲದಲ್ಲೇ ಕೃಷಿಗೆ ಇಳಿದು, ಬೆವರು-ರಕ್ತವನ್ನು ಬಸಿದು ದುಡಿಯುತ್ತಾನೆ. ವೈಯಕ್ತಿಕ ಸಂತಸ, ಕೌಟುಂಬಿಕ ಸುಖವನ್ನು ಬದಿಗೊತ್ತಿ, ಅಕ್ಕನ ಮಕ್ಕಳ ಶಿಕ್ಷಣ, ಉದ್ಯೋಗ, ಮದುವೆಗೆ ಅನುವು ಮಾಡಿ ಕೊಡುತ್ತಾನೆ.
ಇಷ್ಟೆಲ್ಲಾ ತ್ಯಾಗ ಮಾಡಿದ ನಂತರವೂ, ಯಾರದೋ ಚಾಡಿಮಾತನ್ನು ಕೇಳಿ ಅಕ್ಕನ ಮಗನೊಬ್ಬ ತನ್ನ ಬಗ್ಗೆ ಇಲ್ಲ ಸಲ್ಲದ ಮಾತಾಡಿ, ‘ನಮ್ಮ ಮನೆಯಲ್ಲಿ ತಿನ್ನೋಕ್ಕೆ ಬಿದ್ದಿರುವವನು’ ಎಂದು ಅವಹೇಳನದ ಮಾತಾಡಿದಾಗ, ನಿಂತ ನಿಲುವಿಗೇ ಮನೆಯಿಂದಾಚೆ ನಡೆದು ಅನಂತದೆಡೆಗೆ ಹೆಜ್ಜೆ ಹಾಕುತ್ತಾನೆ ಕಥಾನಾಯಕ ರಾಜೀವ. ಕೊನೆಗೆ ಸತ್ಯಸಂಗತಿ ತಿಳಿದು ಮನೆಯವರು ರಾಜೀವನನ್ನು ಹುಡುಕಲು ಮಾಡಿದ ಕಸರತ್ತು ವಿಫಲವಾಗುತ್ತದೆ. ಇದಿಷ್ಟು ‘ಬಂಗಾರದ ಮನುಷ್ಯ’ನ ಸ್ಥೂಲ ಕಥಾವಸ್ತು. ಈ ಕಥೆಗೆ ಹಾಸ್ಯ, ಸುಮಧುರ ಗೀತೆಗಳು, ಸಮಾಜದಲ್ಲಿ ಪರಸ್ಪರರು ಕೂಡಿ ಬಾಳ ಬೇಕಿರುವುದರ ಅನಿವಾರ್ಯತೆ, ಚಕ್ರಬಡ್ಡಿ ಹೇರಿ ಬಡವರ ರಕ್ತ ಹೀರದೆ ಧನಸಹಾಯ ಮಾಡುವ ‘ರಾಸಿ ರೊಕ್ಕದ ಧಣಿ ರಾಚೂಟಪ್ಪ’, ಆತನ ಹೊಣೆಗೇಡಿ ಮಗ, ‘ನಂಬಿದವರನ್ನು ಕೃಷಿ ಕೈಬಿಡುವು ದಿಲ್ಲ’ ಎಂಬ ಸಾರ್ವಕಾಲಿಕ ಸತ್ಯ ಮುಂತಾದ ಅಂಶಗಳನ್ನು ಹದವಾಗಿ ಹೆಣೆದು ಒಂದು ಸುಂದರ ದೃಶ್ಯಕಾವ್ಯವಾಗಿಸಿದ್ದಾರೆ ನಿರ್ದೇಶಕ ಸಿದ್ದಲಿಂಗಯ್ಯನವರು.
ಗಂಡನನ್ನು ಕಳೆದುಕೊಂಡು ಕಂಗಾಲಾಗಿರುವ ಅಕ್ಕನಿಗೆ ಧನಸಹಾಯ ಮಾಡಬೇಕೆಂಬ ಆಶಯ ವನ್ನು ರಾಜೀವ ‘ಅಮ್ಮಾವ್ರ ಗಂಡ’ನಾದ ತನ್ನ ಹಿರಿಯ ಸೋದರನಲ್ಲಿ ಸೂಚ್ಯವಾಗಿ ವ್ಯಕ್ತ ಪಡಿಸುತ್ತಾನೆ. ಆದರೆ ಆತನ ಹೆಂಡತಿ, “ನಮಗೆ ಬರುತ್ತಿರೋ ಸಂಬಳ ನಮ್ಮ ಜೀವನಕ್ಕೇ ಸಾಲುತ್ತಿಲ್ಲ, ಮಗಳನ್ನು ಓದಿಸೋಕ್ಕೆ ಅಂತ ನಾವೇ ಅವರಿವರಲ್ಲಿ ಸಾಲ ಮಾಡುವಂತಾಗಿದೆ" ಎಂದು ತಾರಮ್ಮಯ್ಯ ಮಾಡುತ್ತಾಳೆ. ಆಗ ರಾಜೀವ, “ಅಯ್ಯೋ ಪಾಪ. ನಿಮಗೆ ಬರುತ್ತಿರೋ 900 ರುಪಾಯಿ ಸಂಬಳದಲ್ಲಿ ಬದುಕು ಸಾಗಿಸೋಕೆ ಆಗದೆ ಸಾಲ ಬೇರೆ ಮಾಡ್ತಾ ಇದ್ದೀರೋ?!" ಎಂಬರ್ಥದಲ್ಲಿ ವಿಷಾದದ ನಗೆ ಬೀರುತ್ತಾನೆ.
‘900 ರುಪಾಯಿ ಸಂಬಳ’ದ ಸಂಭಾಷಣೆಯನ್ನು ಇಲ್ಲಿ ಉಲ್ಲೇಖಿಸಲು ಕಾರಣವಿದೆ- ಈ ಚಿತ್ರ ಬಿಡುಗಡೆಯಾಗಿದ್ದು 1972ರ ಮಾರ್ಚ್ 31ರಂದು. ಆಗಿನ 900 ರುಪಾಯಿಗೆ ಪ್ರಸಕ್ತ ಕಾಲಘಟ್ಟ ದಲ್ಲಿನ ಮೌಲ್ಯವನ್ನು ಸಮೀಕರಿಸಿಕೊಂಡರೆ ಕಥೆಯ ಆಳಕ್ಕೆ ಇಳಿಯಲು ನೆರವಾಗುತ್ತದೆ. ಚಿತ್ರದ ಮಿಕ್ಕ ಎಲ್ಲ ಅಂಶಗಳೂ ಅಂದಿಗೂ ಇಂದಿಗೂ ಅನ್ವಯವಾಗುವ ‘ಸಾರ್ವಕಾಲಿಕ ರಸಘಟ್ಟಿಗಳೇ’ ಆಗಿವೆ ಎಂಬುದು ನಿರ್ವಿವಾದ.
ಇನ್ನು, ಚಿತ್ರದ ಒಬ್ಬೊಬ್ಬ ಪಾತ್ರಧಾರಿಯ ಪಾತ್ರಪೋಷಣೆ ಮತ್ತು ಅವರಿಂದ ಹೊಮ್ಮಿರುವ ಅಭಿನಯ ಇವೆಯಲ್ಲಾ, ಅದು ಕಳಿತ ರಸಬಾಳೆ ಹಣ್ಣನ್ನು ಜೇನಿನಲ್ಲಿ ಅದ್ದಿ ತೆಗೆದಂತಿದೆ. ಹೀಗಾಗಿ ‘ಬಂಗಾರದ ಮನುಷ್ಯ’ ನೋಡುಗರೆಲ್ಲರ ಮನವನ್ನು ಆಪ್ತವಾಗಿ ಮುಟ್ಟುತ್ತಾನೆ, ತಟ್ಟುತ್ತಾನೆ.
ಇಷ್ಟಾಗಿಯೂ, ಬರಹಗಾರರು/ವಿಮರ್ಶಕರ ವಲಯದ ಕೆಲವರು ಚಿತ್ರದ ಒಂದಿಷ್ಟು ದೃಶ್ಯಗಳ ಕುರಿತು ಕೊಂಕು ತೆಗೆದಿದ್ದುಂಟು. ಖ್ಯಾತ ಕಾದಂಬರಿಕಾರ ಶ್ರೀಕೃಷ್ಣ ಆಲನಹಳ್ಳಿ ಅವರು, “ಬಂಗಾರದ ಮನುಷ್ಯ ಚಿತ್ರದ ಆರಂಭದಲ್ಲಿಯೇ ನಾಯಕನ ಪಾದರಕ್ಷೆಗಳನ್ನು ‘ಕ್ಲೋಸ್-ಅಪ್’ ಕೋನದಲ್ಲಿ ತೋರಿಸಲಾಗಿದೆ. ಈ ಮೂಲಕ ಪ್ರೇಕ್ಷಕರಿಗೆ ಅಗೌರವ ತೋರಲಾಗಿದೆ.
ಇದು ‘ವ್ಯಕ್ತಿಪೂಜೆ’ಯನ್ನು ಪ್ರೋತ್ಸಾಹಿಸುತ್ತದೆ" ಎಂದು ಹೇಳಿಕೊಂಡರೆ, ಮತ್ತೋರ್ವ ಸಾಹಿತಿ ಯು.ಆರ್.ಅನಂತಮೂರ್ತಿಯವರು, “ಬಂಗಾರದ ಮನುಷ್ಯ ಚಿತ್ರವು ನೋಡುಗರನ್ನು ಮೋಸಗೊ ಳಿಸುವಂತಿದೆ. ಕಥಾನಾಯಕ ರಾಜೀವನಂತೆ ಯುವಜನರು ರಾತ್ರೋರಾತ್ರಿ ಶ್ರೀಮಂತರಾಗುತ್ತಾರೆ ಎಂದು ನಂಬುವಂತೆ ಮಾಡಲಾಗಿದೆ" ಎಂದಿದ್ದು ಇದಕ್ಕೆ ಸಾಕ್ಷಿ.
ಚಿತ್ರರಸಿಕರು ಇಂಥ ಟೀಕೆ-ಟಿಪ್ಪಣಿಗಳನ್ನು ಕಿವಿಗೆ ಹಾಕಿಕೊಳ್ಳದೆ, ‘ಬಂಗಾರದ ಮನುಷ್ಯ’ ಬಿಂಬಿಸಿದ ಉತ್ತಮಿಕೆಗಳಿಗೆ ಓಗೊಟ್ಟು ಪ್ರವಾಹದೋಪಾದಿಯಲ್ಲಿ ಚಿತ್ರಮಂದಿರಗಳಿಗೆ ದಾಂಗುಡಿಯಿಟ್ಟರು. ಇದಕ್ಕೆ ಪುರಾವೆ ಎಂಬಂತೆ, ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ (ಈಗ ಭೂಮಿಕಾ ಎಂದಾಗಿದೆ) ಬಿಡುಗಡೆಯಾದ ಈ ಚಿತ್ರ ಬರೋಬ್ಬರಿ 2 ವರ್ಷಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡರೆ, ಮೈಸೂರಿನ ಚಾಮುಂಡೇಶ್ವರಿ ಚಿತ್ರಮಂದಿರದಲ್ಲಿ 60 ವಾರಗಳವರೆಗೆ ಓಡಿತು. ಮಾತ್ರವಲ್ಲದೆ, ರಾಜ್ಯದ ವಿವಿಧೆಡೆ 25 ವಾರಗಳ ಪ್ರದರ್ಶನ ಭಾಗ್ಯವನ್ನು ಕಂಡಿತು. 1988ರಲ್ಲಿ ಮರು ಬಿಡುಗಡೆ ಯಾದಾಗಲೂ 25 ವಾರಗಳ ಪ್ರದರ್ಶನ ಕಂಡ ಹೆಗ್ಗಳಿಕೆ ‘ಬಂಗಾರದ ಮನುಷ್ಯ’ನದ್ದು. ತರುವಾಯ ದಲ್ಲೊಮ್ಮೆ ‘ಫೋರ್ಬ್ಸ್’ ನಿಯತಕಾಲಿಕವು ಈ ಚಿತ್ರದಲ್ಲಿ ಹೊಮ್ಮಿದ ಡಾ.ರಾಜ್ ಕುಮಾರ್ ಅವರ ಅಭಿನಯವನ್ನು ‘ಭಾರತೀಯ ಸಿನಿಮಾದ 25 ಶ್ರೇಷ್ಠ ನಟನಾ ಪ್ರದರ್ಶನಗಳ ಪಟ್ಟಿ’ಯಲ್ಲಿ ಸೇರಿಸಿದ್ದೂ ಉಂಟು.
ನೋಡುಗರನ್ನು ‘ಬಂಗಾರದ ಮನುಷ್ಯ’ ಪ್ರಭಾವಿಸಿದ ಪರಿ ಹೇಗಿತ್ತು ಎಂದರೆ, ಕೆಲವು ‘ನಗರ-ಕೇಂದ್ರಿತ’ ಯುವಕರು ತಾವು ನಿರ್ವಹಿಸುತ್ತಿದ್ದ ಉದ್ಯೋಗಗಳನ್ನು ತೊರೆದು, ತಂತಮ್ಮ ಹಳ್ಳಿಗೆ ಹಿಂದಿರುಗಿ ಕೃಷಿಕಾರ್ಯದಲ್ಲಿ ವ್ಯಸ್ತರಾದರು!
ಸಾಮಾಜಿಕ ಒಗ್ಗಟ್ಟು, ಸಹಕಾರಿ ಚಳವಳಿ, ಗ್ರಾಮೀಣಾಭಿವೃದ್ಧಿ, ಕೃಷಿಯಲ್ಲಿ ಆಧುನಿಕ ಪದ್ಧತಿ ಗಳನ್ನು ಅಳವಡಿಸಿಕೊಳ್ಳಬೇಕಾಗಿರುವುದರ ಅನಿವಾರ್ಯತೆ, ಪ್ರಾಮಾಣಿಕ ಪ್ರೀತಿ, ಸಮರ್ಪಣಾ ಮನೋಭಾವ ಮುಂತಾದ ಪರಿಕಲ್ಪನೆಗಳು ಈ ಚಿತ್ರದ ವಿವಿಧ ಪಾತ್ರಗಳಲ್ಲಿ ಮತ್ತು ಸನ್ನಿವೇಶ ಗಳಲ್ಲಿ ಕೆನೆಗಟ್ಟಿವೆ. ಹಳ್ಳಿಗಳಿಂದ ತುಂಬಿರುವ ಮತ್ತು ಕೃಷಿಯೇ ಜೀವನಾಡಿಯಾಗಿರುವ ಭಾರತ ದಂಥ ದೇಶದಲ್ಲಿ, ರೈತರಿಗೆ ಎದುರಾಗುವ ಸಂಕಷ್ಟಗಳೇನು? ಅವನ್ನು ಹೇಗೆ ಜಯಿಸಿ ಮುಂದೆ ಬರಬಹುದು? ಎಂಬ ಅಂಶಗಳನ್ನು ಅನಕ್ಷರಸ್ಥರಿಗೂ ಮನಮುಟ್ಟುವ ರೀತಿಯಲ್ಲಿ ಬಿಂಬಿಸಿರುವ ‘ಬಂಗಾರದ ಮನುಷ್ಯ’ ಒಂದು ಸಾರ್ವಕಾಲಿಕ ಶ್ರೇಷ್ಠ ಚಿತ್ರ ಎಂಬುದರಲ್ಲಿ ಅನುಮಾನವಿಲ್ಲ. ದನ್ನು ಇನ್ನೂ ವೀಕ್ಷಿಸಿಲ್ಲ ಎನ್ನುವವರು ಒಮ್ಮೆ ಕಣ್ತುಂಬಿಕೊಂಡು ಧನ್ಯರಾಗಲು ಇದು ಸಕಾಲ...