S N Bhat Column: ಮರದ ಬಟ್ಟಲು ಮತ್ತು ಮರೆಯದ ಪಾಠ
ಮಗನ ಈ ಮಾತು ತಂದೆ-ತಾಯಿಯ ಎದೆಗೆ ಬಿದ್ದ ಚಾಕುವಿನಂತಾಯಿತು. ತಾವು ಇಂದು ಪೋಷಕರನ್ನು ನಡೆಸಿಕೊಳ್ಳುತ್ತಿರುವ ರೀತಿಯಲ್ಲೇ, ನಾಳೆ ತಮ್ಮ ಮಕ್ಕಳೂ ತಮ್ಮನ್ನು ನಡೆಸಿ ಕೊಳ್ಳುತ್ತಾರೆ ಎಂಬುದು ಅಂದು ಅವರಿಗೆ ಅರ್ಥವಾಯಿತು. ಅಂದೇ ಅವರು ಅಜ್ಜನನ್ನು ಮತ್ತೆ ತಮ್ಮ ಜತೆಯ ಗೌರವಾದರ ಗಳೊಂದಿಗೆ ಕೂರಿಸಿಕೊಂಡು ಊಟ ಮಾಡಿಸಲು ಆರಂಭಿಸಿದರು.
-
ಎಸ್.ಎನ್.ಭಟ್. ಸೈಪಂಗಲ್ಲು
ತಂದೆ, ತಾಯಿ, ಎಂಟು ವರ್ಷದ ಮಗ ಮತ್ತು ಅಜ್ಜ ಇವರುಗಳಿದ್ದ ಒಂದು ಪುಟ್ಟ ಕುಟುಂಬವಿತ್ತು. ವಯೋಸಹಜವಾಗಿ ಅಜ್ಜನ ಕೈಗಳು ನಡುಗುತ್ತಿದ್ದವು, ಕಣ್ಣುಗಳು ಮಂಜಾಗಿದ್ದವು. ಊಟ ಮಾಡುವಾಗ ಅಜ್ಜನ ಕೈಯಿಂದ ಅನ್ನವು ಪದೇ ಪದೆ ತಟ್ಟೆ ಕೆಳಗೆ ಬಿದ್ದು ಚೆಲ್ಲುತ್ತಿತ್ತು, ಗಾಜಿನ ಲೋಟಗಳು ಒಡೆದುಹೋಗುತ್ತಿದ್ದವು.
ಇದರಿಂದ ಬೇಸತ್ತ ಮಗ ಮತ್ತು ಸೊಸೆ, ಅಜ್ಜನಿಗೆ ಊಟ ಮಾಡಲು ಮನೆಯ ಮೂಲೆಯಲ್ಲಿ ಒಂದು ಸಣ್ಣ ಮರದ ಮೇಜನ್ನು ಹಾಕಿಕೊಟ್ಟರು. ಅಜ್ಜ ಅಲ್ಲಿ ಒಬ್ಬರೇ ಕುಳಿತು ಊಟ ಮಾಡಬೇಕಿತ್ತು.
ಅಷ್ಟೇ ಅಲ್ಲದೆ, ಗಾಜಿನ ತಟ್ಟೆ ಒಡೆಯುತ್ತಾರೆಂಬ ಕಾರಣಕ್ಕೆ ಅವರಿಗೆ ಒಂದು ಹಳೆಯ ಮರದ ಬಟ್ಟಲಿನಲ್ಲಿ ಊಟ ನೀಡಲಾರಂಭಿಸಿದರು. ಅಜ್ಜ ಕಣ್ಣೀರು ಹಾಕುತ್ತಾ ಒಬ್ಬರೇ ಕುಳಿತು ಊಟ ಮಾಡುತ್ತಿದ್ದರು. ಒಂದು ದಿನ ಸಾಯಂಕಾಲ, ಆ ಮನೆಯ ಸಣ್ಣ ಮಗ ನೆಲದ ಮೇಲೆ ಕುಳಿತು ಮರದ ತುಂಡುಗಳಲ್ಲಿ ಏನನ್ನೋ ಕೆತ್ತುತ್ತಿರುವುದನ್ನು ಗಮನಿಸಿದ ತಂದೆ, “ಏನು ಮಾಡುತ್ತಿದ್ದೀಯಾ ಮಗನೇ?" ಎಂದು ಪ್ರೀತಿಯಿಂದ ಕೇಳಿದ.
ಆ ಮಗು ಮುಗ್ಧವಾಗಿ ಉತ್ತರಿಸಿತು: “ನಾನು ನಿಮಗಾಗಿ ಮತ್ತು ಅಮ್ಮನಿಗಾಗಿ ಎರಡು ಮರದ ಬಟ್ಟಲುಗಳನ್ನು ತಯಾರು ಮಾಡುತ್ತಿದ್ದೇನೆ. ವಯಸ್ಸಾದಾಗ ನಿಮಗೆ ಇದರಲ್ಲಿಯೇ ಊಟ ಕೊಡಲು ಸುಲಭವಾಗುತ್ತದಲ್ಲವೇ?".
ಇದನ್ನೂ ಓದಿ: S N Bhat Column: ಭ್ರಷ್ಟಾಚಾರ- ಮುಕ್ತ ಭಾರತ: ಕನಸಾಗಿ ಉಳಿಯುವುದೇ ?
ಮಗನ ಈ ಮಾತು ತಂದೆ-ತಾಯಿಯ ಎದೆಗೆ ಬಿದ್ದ ಚಾಕುವಿನಂತಾಯಿತು. ತಾವು ಇಂದು ಪೋಷಕರನ್ನು ನಡೆಸಿಕೊಳ್ಳುತ್ತಿರುವ ರೀತಿಯಲ್ಲೇ, ನಾಳೆ ತಮ್ಮ ಮಕ್ಕಳೂ ತಮ್ಮನ್ನು ನಡೆಸಿ ಕೊಳ್ಳುತ್ತಾರೆ ಎಂಬುದು ಅಂದು ಅವರಿಗೆ ಅರ್ಥವಾಯಿತು. ಅಂದೇ ಅವರು ಅಜ್ಜನನ್ನು ಮತ್ತೆ ತಮ್ಮ ಜತೆಯ ಗೌರವಾದರಗಳೊಂದಿಗೆ ಕೂರಿಸಿಕೊಂಡು ಊಟ ಮಾಡಿಸಲು ಆರಂಭಿಸಿದರು.
ಈ ಕಥೆಯು ಕೇವಲ ಒಂದು ಘಟನೆಯಲ್ಲ, ಬದಲಾಗಿ ನಮ್ಮ ಬದುಕಿನ ಪ್ರತಿಬಿಂಬ. ನಾವು ನಮ್ಮ ಪೋಷಕರ ಅಸಹಾಯಕತೆಯನ್ನು ‘ಮರದ ಬಟ್ಟಲಿನಂತೆ’ ಕಡೆಗಣಿಸಿದರೆ, ಅದೇ ಸಂಸ್ಕೃತಿಯು ನಮ್ಮ ಮಕ್ಕಳ ಮೂಲಕ ನಮಗೇ ಮರಳಿ ಬರುತ್ತದೆ ಎಂಬ ಕಟುಸತ್ಯವನ್ನು ಇದು ನೆನಪಿಸುತ್ತದೆ.
ವಯಸ್ಸಾದಾಗ ಪೋಷಕರು ನಮ್ಮ ಪಾಲಿಗೆ ಅಕ್ಷರಶಃ ಮಕ್ಕಳಂತೆಯೇ ಆಗಿಬಿಡುತ್ತಾರೆ. ಇದು ಕೇವಲ ದೈಹಿಕ ಅಗತ್ಯಕ್ಕಲ್ಲ, ನಮ್ಮೊಳಗಿನ ಸಂಸ್ಕಾರದ ಪರೀಕ್ಷೆಗಾಗಿ. ಆ ಪುಟ್ಟ ಬಾಲಕ ಮರದ ಬಟ್ಟಲು ಕೆತ್ತಿದಂತೆ, ನಾವು ಇಂದು ತೋರುವ ಅಸಡ್ಡೆ ನಾಳೆಯ ನಮ್ಮ ಭವಿಷ್ಯದ ಅಡಿಪಾಯವಾಗ ಬಾರದು. ಆದ್ದರಿಂದ, ಪೋಷಕರನ್ನು ಗೌರವದಿಂದ ಕಾಣುವುದು ಕೇವಲ ನಮ್ಮ ಕರ್ತವ್ಯವಲ್ಲ, ಅದು ನಮ್ಮ ಮುಂದಿನ ಪೀಳಿಗೆಗೆ ನಾವು ನೀಡುವ ಅತ್ಯಂತ ಶ್ರೇಷ್ಠವಾದ ಹಾಗೂ ಜೀವಂತವಾದ ಜೀವನ ಪಾಠವಾಗಿದೆ.
ಬದುಕು ಒಂದು ಸುಂದರ ವೃತ್ತ. ನಾವು ಎಲ್ಲಿಂದ ಆರಂಭಿಸುತ್ತೇವೆಯೋ, ಒಂದು ಹಂತದಲ್ಲಿ ಮತ್ತೆ ಅಲ್ಲಿಗೇ ಬಂದು ನಿಲ್ಲುತ್ತೇವೆ. ನಮ್ಮನ್ನು ಈ ಭೂಮಿಗೆ ತಂದು, ನಮ್ಮ ಪ್ರತಿ ಅಳುವಿಗೂ ಸ್ಪಂದಿಸಿ, ನಮ್ಮ ಅಂಬೆಗಾಲಿಗೊಂದು ಆಸರೆಯಾದವರು ನಮ್ಮ ಪೋಷಕರು. ಆದರೆ ಕಾಲ ಉರುಳಿದಂತೆ, ಪ್ರಕೃತಿಯ ನಿಯಮದಂತೆ ನಮಗೆ ಜನ್ಮ ನೀಡಿದವರೇ ನಮಗೆ ಮಕ್ಕಳಾಗುವ ಕಾಲವೊಂದು ಬರುತ್ತದೆ.
ಇದು ಕೇವಲ ವಯಸ್ಸಿನ ಬದಲಾವಣೆಯಲ್ಲ, ಇದು ಭಾವನೆಗಳ ಮತ್ತು ಅವಲಂಬನೆಯ ಅದ್ಭುತ ಪಲ್ಲಟ. ಒಂದು ಕಾಲದಲ್ಲಿ ನಮಗೆ ದಾರಿದೀಪವಾಗಿದ್ದವರು ಇಂದು ತಾವೇ ದಾರಿ ಮರೆಯಬಹುದು. ನಾವು ಹತ್ತಾರು ಬಾರಿ ಕೇಳಿದ ಪ್ರಶ್ನೆಗೆ ಅವರು ಅಂದು ಬೇಸರವಿಲ್ಲದೆ ಉತ್ತರಿಸಿದ್ದರು. ಇಂದು ಅವರ ಸರದಿ- ಅವರು ಇಂದು ಹೇಳಿದ ವಿಷಯವನ್ನೇ ನಾಳೆ ಮರೆಯಬಹುದು, ಹೇಳಿದ್ದನ್ನೇ ಪದೇ ಪದೆ ಹೇಳಬಹುದು. ಅವರ ನಡೆಯ ವೇಗ ಕಡಿಮೆಯಾಗಬಹುದು, ಕೈಗಳು ನಡುಗಬಹುದು. ಈ ಹಂತ ದಲ್ಲಿ ಅವರನ್ನು ‘ವಯಸ್ಸಾದವರು’ ಎಂದು ನೋಡುವ ಬದಲು ‘ಎರಡನೇ ಬಾಲ್ಯದ ಮಕ್ಕಳು’ ಎಂದು ನೋಡಿದಾಗ ನಮ್ಮಲ್ಲಿ ತಾಳ್ಮೆ ತಾನಾಗಿಯೇ ಮೂಡುತ್ತದೆ.
ಅನೇಕ ಬಾರಿ ನಾವು ನಮ್ಮ ಕೆಲಸದ ಒತ್ತಡದಲ್ಲಿ ಪೋಷಕರ ಈ ಅಸಹಾಯಕತೆಯನ್ನು ಒಂದು ಹೊರೆ ಎಂದು ಭಾವಿಸಿ ಬಿಡುತ್ತೇವೆ. ಆದರೆ ನೆನಪಿಡಿ, ಇಂದು ನಾವು ಗಳಿಸಿರುವ ಈ ಸುಖ, ಸಂಪತ್ತು ಮತ್ತು ಸ್ಥಾನಮಾನಗಳ ಹಿಂದೆ ಅವರ ಹಗಲಿರುಳಿನ ಪರಿಶ್ರಮವಿದೆ. ಅವರ ಸೇವೆಯನ್ನು ಮಾಡು ವುದು ನಮಗೊಂದು ಕಷ್ಟದ ಕೆಲಸವಾಗಬಾರದು; ಬದಲಾಗಿ, ಅವರು ನಮಗಾಗಿ ಸುರಿಸಿದ ಬೆವರು ಮತ್ತು ತೋರಿದ ಅಪಾರ ಪ್ರೀತಿಗೆ ನಾವು ಸಲ್ಲಿಸುತ್ತಿರುವ ಪ್ರೀತಿಯ ಕೃತಜ್ಞತೆ ಇದಾಗಬೇಕು. ಅವರ ಮುಸ್ಸಂಜೆಯ ಬದುಕಿನಲ್ಲಿ ನಾವು ಅವರ ಕೈಹಿಡಿದು ನಡೆಸುವ ಕ್ಷಣಗಳೇ ಬದುಕಿನ ಅತ್ಯಂತ ಶ್ರೇಷ್ಠ ಕ್ಷಣಗಳು.
ವೃದ್ಧಾಪ್ಯದಲ್ಲಿ ಪೋಷಕರು ನಿರೀಕ್ಷಿಸುವುದು ನಿಮ್ಮ ಹಣವನ್ನಲ್ಲ, ಬದಲಾಗಿ ನಿಮ್ಮ ಪ್ರೀತಿಯ ಎರಡು ಮಾತುಗಳನ್ನು. ಇಂದಿನ ಡಿಜಿಟಲ್ ಯುಗದಲ್ಲಿ ಪಕ್ಕದ ಇದ್ದರೂ ನಾವು ಮೊಬೈಲ್‌ನಲ್ಲಿ ಮುಳುಗಿರುತ್ತೇವೆ. ಆದರೆ ವಾರಕ್ಕೊಮ್ಮೆ ನೀಡುವ ಹಣಕ್ಕಿಂತ, ದಿನಕ್ಕೆ ಐದು ನಿಮಿಷ ಅವರ ಪಕ್ಕ ಕುಳಿತು ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವುದಕ್ಕೆ ಹೆಚ್ಚಿನ ಶಕ್ತಿಯಿದೆ. ಒಂದು ದಿನ ಆ ಫೋನ್ ರಿಂಗ್ ಆಗುವುದು ನಿಂತುಹೋಗುತ್ತದೆ, ಅವರು ಕುಳಿತು ಮಾತಾಡುತ್ತಿದ್ದ ಆ ಜಾಗ ಬರಿದಾಗುತ್ತದೆ. ಆ ಶೂನ್ಯ ಆವರಿಸುವ ಮುನ್ನವೇ ಅವರಿಗೆ ಸಾಧ್ಯವಾದಷ್ಟು ಪ್ರೀತಿಯನ್ನು ನೀಡಿ. ಹಿರಿಯರು ತಮಗೆ ನೋವಾದಾಗ ಅಥವಾ ಏನಾದರೂ ಬೇಕಾದಾಗ ನೇರವಾಗಿ ಕೇಳಲು ಹಿಂಜರಿಯುತ್ತಾರೆ.
ತಾವು ಮಕ್ಕಳಿಗೆ ಭಾರವಾಗುತ್ತಿದ್ದೇವೆ ಎಂಬ ಕೀಳರಿಮೆ ಅವರನ್ನು ಕಾಡುತ್ತಿರುತ್ತದೆ. ಅಂಥ ಸಮಯ ದಲ್ಲಿ ಅವರ ಮನಸ್ಸನ್ನು ಓದುವ ಜವಾಬ್ದಾರಿ ನಮ್ಮದಾಗಬೇಕು. ಅವರು ಪ್ರೀತಿಯಿಂದ ಮಾಡಿದ ಸಣ್ಣ ಅಡುಗೆಯನ್ನು ಮೆಚ್ಚುವುದು ಅಥವಾ ಅವರು ಹೇಳುವ ಹಳೆಯ ಕಥೆಗಳನ್ನು ಮೊದಲ ಬಾರಿ ಕೇಳುವಂತೆ ಕುತೂಹಲದಿಂದ ಆಲಿಸುವುದು ಅವರಿಗೆ ಜಗತ್ತಿನ ಅತಿ ದೊಡ್ಡ ಸಮಾಧಾನವನ್ನು ನೀಡುತ್ತದೆ. ಅವರ
ಅಸ್ತಿತ್ವವೇ ನಮ್ಮ ಬದುಕಿನ ಶಕ್ತಿ ಎಂಬುದನ್ನು ಅವರಿಗೆ ಪದೇ ಪದೆ ನೆನಪಿಸುತ್ತಿರಬೇಕು. ನಾವು ನಮ್ಮ ಪೋಷಕರನ್ನು ಹೇಗೆ ನಡೆಸಿಕೊಳ್ಳುತ್ತೇವೆಯೋ, ಅದೇ ಸಂಸ್ಕಾರವನ್ನು ನಮ್ಮ ಮಕ್ಕಳು ಕಲಿಯುತ್ತಾರೆ. ಮನೆಯಲ್ಲಿ ಹಿರಿಯರಿದ್ದರೆ ಅದು ಕೇವಲ ನಾಲ್ಕು ಗೋಡೆಗಳಲ್ಲ, ಅದೊಂದು ಮೌಲ್ಯಗಳ ಪಾಠಶಾಲೆ. ನಾವು ನಮ್ಮ ಹೆತ್ತವರನ್ನು ಅಸಡ್ಡೆಯಿಂದ ನೋಡಿದರೆ, ನಾಳೆ ನಮ್ಮ ಮಕ್ಕಳೂ ನಮ್ಮನ್ನು ಅದೇ ರೀತಿ ನಡೆಸಿಕೊಳ್ಳಬಹುದು ಎಂಬ ಸತ್ಯ ನಮಗೆ ತಿಳಿದಿರಲಿ. ಪೋಷಕರ ಆಶೀರ್ವಾದದ ಹಸ್ತ ನಮ್ಮ ತಲೆಯ ಮೇಲಿರುವವರೆಗೆ ನಮ್ಮ ಬದುಕಿಗೆ ಯಾವುದೇ ವಿಘ್ನಗಳು ಬರುವುದಿಲ್ಲ.
ಜೀವನದಲ್ಲಿ ಕಳೆದುಕೊಂಡ ಎಲ್ಲವನ್ನೂ ಮತ್ತೆ ಗಳಿಸಬಹುದು, ಆದರೆ ಕಳೆದುಕೊಂಡ ಪೋಷಕ ರನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ನಾಳೆ ಸಮಯ ಸಿಕ್ಕಾಗ ಮಾತಾಡೋಣ ಎಂಬ ಮುಂದೂ ಡಿಕೆ ಬೇಡ. ಇಂದೇ ಅವರ ಹತ್ತಿರ ಕುಳಿತು ಮಾತಾಡಿ, ಅವರ ಕೈಹಿಡಿದು ಸಮಾಧಾನ ನೀಡಿ. ಅವರು ಬದುಕಿzಗ ನೀಡುವ ಒಂದು ಸಣ್ಣ ಮೃದುವಾದ ಮಾತು, ಅವರು ಹೋದ ಮೇಲೆ ಸುರಿಸುವ ನೂರು ಹನಿ ಕಣ್ಣೀರಿಗಿಂತಲೂ ಶ್ರೇಷ್ಠವಾದುದು. ಅವರ ಮುಸ್ಸಂಜೆಯ ಬದುಕಿಗೆ ನಾವು ಬೆಳಕಾಗೋಣ.