ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Someshwara Column: ತಟ್ಟೆಯಲ್ಲಿ ನಾರು, ಲೋಟದಲ್ಲಿ ನೀರು, ಕಾಲನಲ್ಲಿ ಚಲನೆ, ಮನಸ್ಸಿನಲ್ಲಿ..

ನಾಲಿಗೆಗೆ ದಾಸರಾದ ನಮ್ಮ ಪೂರ್ವಜರು, ಶರೀರದ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಪರಿಪೂರ್ಣ ಆಹಾರ ಸೇವಿಸುವುದರ ಬದಲು, ರುಚಿಗೆ ಆದ್ಯತೆ ನೀಡಿದರು. ಮಲಬದ್ಧತೆಯ ಸಮಸ್ಯೆ ಮತ್ತಷ್ಟು ಪ್ರಬಲವಾಯಿತು. ಜೊತೆಗೆ ಮನುಷ್ಯ ಕೆಲವು ಆಲೋಚನೆಗಳಿಗೆ ಸಾರ್ವಕಾಲಿಕವಾಗಿ ಕಟ್ಟು ಬಿದ್ದದ್ದು ಸಮಸ್ಯೆಯನ್ನು ಉಲ್ಭಣಿಸಿತು. ಒಬ್ಬ ಆರೋಗ್ಯವಂತ ಮನುಷ್ಯ ಪ್ರತಿದಿನವೂ ನಿಗದಿತ ಸಮಯಕ್ಕೆ ಸರಿಯಾಗಿ ಮಲವಿಸರ್ಜನೆ ಮಾಡಲೇಬೇಕು ಎಂಬ ನಿಲುವು.

ತಟ್ಟೆಯಲ್ಲಿ ನಾರು, ಲೋಟದಲ್ಲಿ ನೀರು, ಕಾಲನಲ್ಲಿ ಚಲನೆ, ಮನಸ್ಸಿನಲ್ಲಿ..

-

ಹಿಂದಿರುಗಿ ನೋಡಿದಾಗ

ಅನಾದಿ ಕಾಲದಿಂದಲೂ ಮನುಷ್ಯನನ್ನು ಕಾಡಿಕೊಂಡು ಬರುತ್ತಿರುವ ಹಲವು ಕಾಯಿಲೆಗಳಲ್ಲಿ ಮಲಬದ್ಧತೆಯು ಮುಖ್ಯವಾದದ್ದು. ಜಗತ್ತಿನ ವಿವಿಧ ಭಾಗಗಳಲ್ಲಿ ಹಲವು ಸಂಸ್ಕೃತಿಗಳು ಉದಯಿಸಿದವು. ನಾಗರಿಕತೆಗಳು ಅರಳಿದವು. ಕೃಷಿಯ ಸುಧಾರಣೆಯಿಂದ ನಾನಾ ಸ್ವರೂಪದ ಧಾನ್ಯಗಳು ಆಹಾರ ರೂಪದಲ್ಲಿ ನಮ್ಮ ತಟ್ಟೆಯನ್ನು ತುಂಬಿದವು. ನಾಲಿಗೆಗೆ ದಾಸರಾದ ನಮ್ಮ ಪೂರ್ವಜರು, ಶರೀರದ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಪರಿಪೂರ್ಣ ಆಹಾರ ಸೇವಿಸುವುದರ ಬದಲು, ರುಚಿಗೆ ಆದ್ಯತೆ ನೀಡಿದರು. ಮಲಬದ್ಧತೆಯ ಸಮಸ್ಯೆ ಮತ್ತಷ್ಟು ಪ್ರಬಲವಾಯಿತು. ಜೊತೆಗೆ ಮನುಷ್ಯ ಕೆಲವು ಆಲೋಚನೆ ಗಳಿಗೆ ಸಾರ್ವಕಾಲಿಕವಾಗಿ ಕಟ್ಟು ಬಿದ್ದದ್ದು ಸಮಸ್ಯೆಯನ್ನು ಉಲ್ಭಣಿಸಿತು. ಒಬ್ಬ ಆರೋಗ್ಯವಂತ ಮನುಷ್ಯ ಪ್ರತಿದಿನವೂ ನಿಗದಿತ ಸಮಯಕ್ಕೆ ಸರಿಯಾಗಿ ಮಲವಿಸರ್ಜನೆ ಮಾಡಲೇಬೇಕು ಎಂಬ ನಿಲುವು.

ಈ ನಿಲುವು ಸಾವಿರಾರು ವರ್ಷಗಳಿಂದ ಮನುಕುಲವನ್ನು ಕಾಡುತ್ತಲೇ ಬಂದಿದೆ. ಮಲವಿಸರ್ಜನೆ ಸಹಜ ಶಾರೀರಿಕ ಕ್ರಿಯೆಯಾದರೂ, ಮಲಬದ್ಧತೆ ಕಂಡುಬರುವುದು ಅಸಹಜವೇನಲ್ಲ. ಇದಕ್ಕೆ ನಮ್ಮ ದೇಹ, ಮನಸ್ಸು, ಆಹಾರ ಮತ್ತು ಜೀವನಶೈಲಿ ಪ್ರಧಾನವಾಗಿ ಕಾರಣ ಎನ್ನುವುದರ ಬಗ್ಗೆ ನಾವು ಹೆಚ್ಚು ಆಲೋಚನೆಯನ್ನೇ ಮಾಡುವುದಿಲ್ಲ.

ಮಲಬದ್ಧತೆ: ಪ್ರತಿದಿನವೂ ನಿಗದಿತ ಸಮಯಕ್ಕೆ ಸರಿಯಾಗಿ ಮಲವಿಸರ್ಜನೆ ಆಗಲೇಬೇಕು ಎನ್ನುವುದು ಕಡ್ಡಾಯ ನಿಯಮವೇನಲ್ಲ. ಅದು ಅವರವರ ದೇಹ ಪ್ರಕೃತಿ, ಮನಸ್ಸು, ಆಹಾರ, ವ್ಯಾಯಾಮ, ಜೀವನ ಶೈಲಿಯನ್ನು ಆಧರಿಸಿ, ಕೆಲವರಿಗೆ ದಿನಕ್ಕೆ ಎರಡು ಬಾರಿ ಮಲವಿಸರ್ಜನೆ ಸಹಜವಾಗಿ ಆಗಬಹುದು; ಮತ್ತೊಬ್ಬ ರಿಗೆ ಎರಡು ದಿನಕ್ಕೊಮ್ಮೆ ಆಗುವುದೂ ಸಹಜವಾಗಿರುತ್ತದೆ.

ಇದನ್ನೂ ಓದಿ: Dr N Someshwara Column: ಎರಡು ಹುಚ್ಚುನಾಯಿಗಳು ಹಾಗೂ ಅವುಗಳ ನಿಯಂತ್ರಣ !

ಆದರೆ ಸಾಮಾನ್ಯವಾಗಿ, ವಾರಕ್ಕೆ ಮೂರಕ್ಕಿಂತ ಕಡಿಮೆ ಬಾರಿ ಮಲವಿಸರ್ಜನೆಯಾಗುವುದು, ಮಲ ತುಂಬ ಗಟ್ಟಿಯಾಗಿರುವುದು, ವಿಸರ್ಜನೆಗೆ ಬಹಳ ಒತ್ತಡ ಹಾಕಬೇಕಾಗುವುದು, ಮಲ ಸಂಪೂರ್ಣ ವಾಗಿ ವಿಸರ್ಜನೆಯಾಗಿಲ್ಲ ಎಂಬ ಅತೃಪ್ತಿ ಕಾಡುವುದು, ಮಲದ್ವಾರದಲ್ಲಿ ಏನೋ ಅಡ್ಡಿಯಿರು ವಂತೆ ಅನಿಸುವುದು - ಈ ಮೇಲಿನ ಲಕ್ಷಣಗಳಲ್ಲಿ ಒಂದು ಅಥವಾ ಹೆಚ್ಚಿನ ಲಕ್ಷಣಗಳು ಪದೇಪದೆ ಕಂಡುಬಂದರೆ, ಅದನ್ನು ಮಲಬದ್ಧತೆ ಎಂದು ಪರಿಗಣಿಸಬಹುದು. ಆಹಾರದಲ್ಲಿ ನಾರಿನ ಕೊರತೆ, ನೀರಿನ ಕೊರತೆ, ವ್ಯಾಯಾಮದ ಅಭಾವ, ಮಲವಿ ಸರ್ಜನೆಯ ಒತ್ತಡ ವುಂಟಾದಾಗ, ತಕ್ಷಣವೇ ಮಲವಿಸರ್ಜನೆ ಮಾಡದೇ, ಪದೇಪದೆ ತಡೆದುಕೊಳ್ಳುವುದು, ಕೆಲವು ಔಷಧಗಳು ಹಾಗೂ ಮಧುಮೇಹ, ಥೈರಾಯ್ಡ್ ಸಮಸ್ಯೆ, ಪಾರ್ಕಿನ್ಸನ್ ರೋಗ ಮುಂತಾದ ಕಾಯಿಲೆಗಳು ಇವೂ ಸಹ ಕೆಲವರಲ್ಲಿ ಮಲಬದ್ಧತೆಗೆ ಕಾರಣವಾಗಬಹುದು.

ಮಲಬದ್ಧತೆಗೆ ಚಿಕಿತ್ಸೆ: ಮಲಬದ್ಧತೆಯ ಚಿಕಿತ್ಸೆಯ ಇತಿಹಾಸವೇ ಒಂದು ಕುತೂಹಲಕರ ಕಥೆ. ಪ್ರಾಚೀನ ಈಜಿಪ್ಟಿನ ವೈದ್ಯಕೀಯ ಪಠ್ಯಗಳಲ್ಲಿ ಹರಳೆಣ್ಣೆ, ಅಂಜೂರ, ಧಾನ್ಯಗಳ ಹೊಟ್ಟು ಮತ್ತು ಕೆಲವು ಸಸ್ಯೋತ್ಪನ್ನಗಳನ್ನು ವಿರೇಚಕವಾಗಿ ಬಳಸಿದ ಉಲ್ಲೇಖಗಳಿವೆ. ಹರಳೆಣ್ಣೆಯ ವಿರೇಚಕ ಗುಣ ಇಂದಿಗೂ ವೈದ್ಯಕೀಯವಾಗಿ ಮಾನ್ಯ ವಾಗಿದೆ. ಅದರ ಮುಖ್ಯ ಕ್ರಿಯಾಶೀಲ ಪದಾರ್ಥವಾದ ರಿಸಿನೋಲಿಕ್ ಆಸಿಡ್ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. (ನಮ್ಮ ಬಾಲ್ಯದಲ್ಲಿ ಪ್ರತಿ ತಿಂಗಳಿಗೊಮ್ಮೆ, ಯಾವುದಾದರೂ ಭಾನುವಾರ ಹರಳೆಣ್ಣೆಯನ್ನು ಕಡ್ಡಾಯವಾಗಿ ಕುಡಿದು ನಮ್ಮ ಕರುಳನ್ನು ಸ್ವಚ್ಛಗೊಳಿಸಿ ಕೊಳ್ಳುವುದು ಅನಿವಾರ್ಯವಾಗಿತ್ತು) ಭಾರತೀಯ ಪರಂಪರೆಯ ವೈದ್ಯಕೀಯದಲ್ಲಿ ಮಲಬದ್ಧತೆಯನ್ನು ಕೇವಲ ‘ಮಲ ವಿಸರ್ಜನೆಯ ಸಮಸ್ಯೆ’ ಎಂದು ಲಘು ವಾಗಿ ನೋಡದೆ, ಆಹಾರ, ಜೀರ್ಣಕ್ರಿಯೆ ಮತ್ತು ದಿನಚರಿ ಯೊಂದಿಗೆ ಸಂಬಂಧಿಸಿ ನೋಡುವ ವೈಜ್ಞಾನಿಕ ವಿಧಾನವು ಬಳಕೆಯಲ್ಲಿದೆ.

ಹರಿತಕಿ, ತ್ರಿಫಲಾ, ತುಪ್ಪ, ಕೆಲವು ಎಣ್ಣೆಗಳನ್ನು ಬಳಸಿ ಮಲಬದ್ಧತೆಯನ್ನು ನಿವಾರಿ ಸುವರು. ಹಾಗೆಯೇ ಆಯಾ ವ್ಯಕ್ತಿಯ ಆಹಾರ ಪದ್ಧತಿಯಲ್ಲಿ ಕೆಲವು ಪರಿವರ್ತನೆಗಳನ್ನು ತಂದು ಮಲಬದ್ಧತೆ ಯನ್ನು ನಿವಾರಿಸುವ ಪದ್ಧತಿಯಿದೆ. ಜಗತ್ತಿನ ಪ್ರತಿಯೊಂದು ನಾಗರಿಕತೆಯೂ ತನ್ನದೇ ಆದ ಮಲಬದ್ಧತೆಯ ನಿವಾರಣಾ ಔಷಧಗಳನ್ನು ಹಾಗೂ ವಿಧಿ ವಿಧಾನಗಳನ್ನು ರೂಪಿಸಿದೆ.

Screenshot_8

ಆದರೆ ಪರಿಣಾಮಕಾರಿಯಾದ ಹಾಗೂ ಸುರಕ್ಷಿತ ಔಷಧವಿನ್ನೂ ದೊರೆತಿಲ್ಲ. 1970ರ ದಶಕದ ಅಮೆರಿಕ ದಲ್ಲಿ ಮಲಬದ್ಧತೆಯನ್ನು ನಿವಾರಿಸಲು 700 ನಮೂನೆಯ ಔಷಧಗಳು ಮಾರಾಟ ದಲ್ಲಿದ್ದವು ಎನ್ನುವ ವಿಚಾರವು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ.

ಪ್ರಾಚೀನ ಮಲಬದ್ಧತೆಯ ನಿವಾರಕ ಪ್ರಯತ್ನ ಗಳಲ್ಲಿ ಗ್ರೀಕ್ ವೈದ್ಯ ಹಿಪೋಕ್ರೇಟಸ್ ರೂಪಿಸಿದ ಎನಿಮಾ ಪರಿಣಾಮಕಾರಿಯಾಗಿತ್ತು ಹಾಗೂ ಅದು ಇಂದಿಗೂ ಬಳಕೆಯಲ್ಲಿದೆ. ಎನಿಮಾ ಎಂದರೆ ಗುದನಾಳದ ಮೂಲಕ ಕರುಳಿನೊಳಗೆ ನಿರ್ದಿಷ್ಟ ದ್ರವವನ್ನು ಚಿಮ್ಮಿ ಮಲ ವಿಸರ್ಜನೆಯನ್ನು ಪ್ರಚೋದಿಸುವ ಅಥವಾ ಕರುಳನ್ನು ಶುಚಿಗೊಳಿಸುವ ವೈದ್ಯಕೀಯ ವಿಧಾನವಾಗಿದೆ. ಈಗ ಈ ಪದ್ಧತಿಯನ್ನು ಸಾಮಾನ್ಯವಾಗಿ ಮಲಬದ್ಧತೆ ನಿವಾರಿಸಲು ಇಲ್ಲವೇ ಹೊಟ್ಟೆಯ ತಪಾಸಣೆ/ಶಸ್ತ್ರಚಿಕಿತ್ಸೆಗೆ ಮೊದಲು ಕರುಳನ್ನು ಸ್ವಚ್ಛಗೊಳಿಸಲು ಎನಿಮಾವನ್ನು ನೀಡುವ ಪದ್ಧತಿಯಿದೆ. ಹೀಗಾಗಿ ಮಲಬದ್ಧತೆಯ ಚಿಕಿತ್ಸೆ ಮಾನವ ವೈದ್ಯಕೀಯ ಇತಿಹಾಸದ ಅತ್ಯಂತ ಹಳೆಯ ಚಿಕಿತ್ಸಾ ಪರಂಪರೆಗಳಲ್ಲಿ ಒಂದಾಗಿದೆ.

ಅದ್ಭುತ ವಿರೇಚಕ: 1871ರಲ್ಲಿ ಜರ್ಮನಿಯ ಪ್ರಸಿದ್ಧ ರಸಾಯನಶಾಸ್ತ್ರಜ್ಞ ಅಡಾಲ್ ವಾನ್ ಬೇಯರ್ (1835-1917) ಫಿನಾಲ್ತಲೀನ್ ಎಂಬ ರಾಸಾಯನಿಕವನ್ನು ಸಂಶ್ಲೇಷಿಸಿದರು. ರಸಾಯನ ಶಾಸ್ತ್ರದ ವಿದ್ಯಾರ್ಥಿಗಳಿಗೆ ಇದು ಪರಿಚಿತವಾದ ಪದಾರ್ಥ. ಆಮ್ಲೀಯ ದ್ರಾವಣದಲ್ಲಿ ಬಣ್ಣವಿಲ್ಲದ ಇದು ಕ್ಷಾರೀಯ ದ್ರಾವಣದಲ್ಲಿ ಗುಲಾಬಿ ಬಣ್ಣ ತಾಳುತ್ತದೆ. ಆದ್ದರಿಂದ ರಸಾಯನ ಶಾಸ್ತ್ರ ಪ್ರಯೋ ಗಾಲಯಗಳಲ್ಲಿ ಆಸಿಡ್-ಬೇಸ್ ಇಂಡಿ ಕೇಟರ್ ಆಗಿ ಪ್ರಸಿದ್ಧವಾಯಿತು. ಆದರೆ ವೈದ್ಯರು ಅದರಲ್ಲಿ ಇನ್ನೊಂದು ಗುಣವನ್ನು ಕಂಡುಕೊಂಡರು. ಅದು ಕರುಳನ್ನು ಉತ್ತೇಜಿಸಿ ಮಲವಿಸರ್ಜನೆ ಸರಾಗ ವಾಗಿ ಉಂಟುಮಾಡುತ್ತಿತ್ತು. ಹೀಗಾಗಿ 20ನೆಯ ಶತಮಾನದ ಆರಂಭದಲ್ಲಿ ಫಿನಾಲ್ತಲೀನ್ ಮಲ ಬದ್ಧತೆಯ ಜನಪ್ರಿಯ ನಿವಾರಕವಾಗಿ ಪ್ರಸಿದ್ಧವಾಯಿತು.

ಚಾಕೊಲೇಟ್: 1906ರಲ್ಲಿ ಮ್ಯಾಕ್ಸ್ ಕಿಸ್ ಎಂಬ ವ್ಯಕ್ತಿಯು ಒಂದು ಕುತೂಹಲಕರವಾದ ಉತ್ಪನ್ನ ವನ್ನು ಪರಿಚಯ ಮಾಡಿದ. ಅವನು ಚಾಕೋಲೆಟ್ಟಿನಲ್ಲಿ ಫಿನಾಲ್ತಲೀನ್ ಬೆರೆಸಿದ. ಅದಕ್ಕೆ ಎಕ್ಸ್-ಲ್ಯಾಕ್ಸ್ ಎಂದು ಹೆಸರನ್ನಿಟ್ಟ. ಮಾರಾಟಕ್ಕೆ ಬಿಟ್ಟ. ಆಬಾಲ ವೃದ್ಧರಾಗಿ ಎಲ್ಲರೂ ಎಕ್ಸ್-ಲ್ಯಾಕ್ಸನ್ನು ಬಳಸಲಾರಂಭಿಸಿದರು. ಔಷಧವನ್ನು ಕುಡಿಯಲು ಇಲ್ಲವೇ ಗುಳಿಗೆಯನ್ನು ನುಂಗಲು ರಗಳೆ ಮಾಡುವ ಮಕ್ಕಳೂ ಎಕ್ಸ್-ಲ್ಯಾಕ್ಸನ್ನು ಇಷ್ಟಪಟ್ಟು ಚಾಕೋಲೆಟ್ಟಿನಂತೆ ಚೀಪಲಾರಂಭಿಸಿ ದರು. ಹಾಗಾಗಿ ಎಕ್ಸ್-ಲ್ಯಾಕ್ಸ್ ಒಂದು ಔಷಧ ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ಜನಪ್ರಿಯ ಚಾಕೋಲೆಟ್ ಎಂದು ಹೆಸರನ್ನು ಪಡೆಯಿತು. ಹಾಗಾಗಿ ಎಕ್ಸ್-ಲ್ಯಾಕ್ಸ್ ಎಲ್ಲರ ಮನೆಗಳ ಔಷಧಪಟ್ಟಿಯಲ್ಲಿ ಒಂದು ಶಾಶ್ವತ ಸ್ಥಾನವನ್ನು ಪಡೆಯಿತು. ಹಾಗಾಗಿ ಎಕ್ಸ್-ಲ್ಯಾಕ್ಸ್ ಮಾರಾಟವು ಅಬಾಧಿತವಾಗಿ ಮುಗಿಲನ್ನು ಮುಟ್ಟಿತು.

ಸುರಕ್ಷಿತವೆ?: ಅಂದಿನ ಅಮೆರಿಕನ್ ಸಮಾಜವು ಮಲ ಬದ್ಧತೆ ನಿವಾರಿಸುವಲ್ಲಿ ಫಿನಾಲ್ತಲೀನ್ ಒಂದು ಅತ್ಯುತ್ತಮ ಔಷಧ ಹಾಗೂ ಸುರಕ್ಷಿತ ಔಷಧ ಎಂದು ನಂಬಿ ಬಳಸುತ್ತಿತ್ತು. ಆದರೆ ವೈದ್ಯರಿಗೂ ಹಾಗೂ ಸಂಶೋಧಕರಿಗೂ ಫಿನಾಲ್ತಲೀನ್ ಸುರಕ್ಷತೆಯನ್ನು ಬಗ್ಗೆ ಸ್ವಲ್ಪ ಅನುಮಾನ ವಿತ್ತು. ಏಕೆಂದರೆ ಯಾವುದೇ ಒಂದು ಔಷಧವನ್ನು ಸುರಕ್ಷಿತ ಔಷಧ ಎಂದು ಪರಿಗಣಸ ಬೇಕಾದರೆ, ಅದರ ತತ್‌ಕ್ಷಣದ ಹಾಗೂ ದೀರ್ಘ ಕಾಲದ ಪಾರ್ಶ್ವಪರಿಣಾಮಗಳನ್ನು ಅಧ್ಯಯನ ಮಾಡಬೇಕಾ ಗಿತ್ತು. ಗರ್ಭಿಣಿಯರಿಗೆ, ಬಾಣಂತಿಯರಿಗೆ, ಮೂತ್ರ ಪಿಂಡ ಇಲ್ಲವೇ ಯಕೃತ್ ರೋಗಿಗಳಿಗೆ ಸುರಕ್ಷಿತ ಎನ್ನುವುದಕ್ಕೆ ಪುರಾವೆ ದೊರೆಯಬೇಕಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ನಿಗದಿತ ಔಷಧವು ಕ್ಯಾನ್ಸರ್ ಕಾರಕವಲ್ಲ ಎನ್ನುವುದಕ್ಕೆ ಪುರಾವೆಯು ದೊರೆಯಬೇಕಿತ್ತು. ಫಿನಾಲ್ತಲೀನ್ ಸಂಬಂಧ ಪಟ್ಟ ಹಾಗೆ ಇಂತಹ ಅಧ್ಯಯನಗಳು ನಡೆದಿರಲಿಲ್ಲ.

ಹಾಗಾಗಿ ಅಮೆರಿಕದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯು (ನ್ಯಾಶನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್) ಈ ವಿಷಯದಲ್ಲಿ ಅಧ್ಯಯನ ನಡೆಸ ಬೇಕೆಂದು ಸೂಚಿಸಿತು. ಆಗ ಅಮೆರಿಕ ಸರಕಾರವು ರಾಷ್ಟ್ರೀಯ ವಿಷಾಧ್ಯಯನ ಯೋಜನೆಯನ್ನು (ನ್ಯಾಶನಲ್ ಟಾಕ್ಸಿಕಾಲಜಿ ಪ್ರೋಗ್ರಾಮ್) ರೂಪಿಸಿತು. ಫಿನಾಲ್ತಲೀನ್ ಇಲಿಗಳ ಮತ್ತು ಸುಂಡಿಲಿಗಳ (ಮೈಸ್) ಮೇಲೆ ಯಾವ ಪರಿಣಾಮವನ್ನು ಬೀರಬಲ್ಲುದು ಎನ್ನುವುದರ ಬಗ್ಗೆ ದೀರ್ಘಕಾಲಿಕ ಪರೀಕ್ಷೆಗಳನ್ನು ಆರಂಭವಾದವು. ವಿವಿಧ ಪ್ರಮಾಣದ ಫಿನಾಲ್ತಲೀನ್ ನನ್ನು ಆಹಾರದಲ್ಲಿ ಬೆರೆಸಿ ಪ್ರಾಣಿಗಳಿಗೆ ಸುಮಾರು ಎರಡು ವರ್ಷಗಳ ಕಾಲ ನೀಡಿದರು. ಈ ಅಧ್ಯಯನದ ಫಲಿತಾಂಶವು ಎಲ್ಲರಲ್ಲೂ ಆತಂಕ ಉಂಟುಮಾಡಿತು. ಗಂಡು ಇಲಿಗಳಲ್ಲಿ ಅಡ್ರಿನಲ್ ಗ್ರಂಥಿಯ ತಿರುಳಿನಲ್ಲಿ ಫಿಯೋಕ್ರೋಮೋಸೈಟೋಮ ಎಂಬ ಗಂತಿ ಬೆಳೆಯಿತು. ಮೂತ್ರಪಿಂಡದ ಮೂತ್ರೋ ತ್ಪಾದಕ ನಳಿಕೆಗಳಲ್ಲಿ ಗಂತಿಗಳು ತೀವ್ರ ಸ್ವರೂಪದಲ್ಲಿ ಹುಟ್ಟಿಕೊಂಡವು. ಗಂಡು ಸುಂಡಿಲಿಗಳಲ್ಲಿ ಹಿಸ್ಟಿಯೋಸೈಟಿಕ್ ಸಾರ್ಕೋಮ, ಲಿಂಫೋಮ ಮತ್ತು ಒವೇರಿಯನ್ ಸೆಕ್ಸ್-ಕಾರ್ಡ್ ಸ್ಟ್ರೋಮಲ್ ಟ್ಯೂಮರ್‌ಗಳ ಪ್ರಮಾಣವು ಅಧಿಕವಾದವು. ಜೊತೆಗೆ ಇವು ಇಲಿಗಳ ಕ್ರೋಮೋ ಸೋಮುಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ ಎನ್ನುವುದಕ್ಕೆ ಅಗತ್ಯವಾದ ಪುರಾವೆಯೂ ದೊರೆಯಿತು. ಇದರೊಂದಿಗೆ ಸುಮಾರು 9 ದಶಕಗಳಿಂದ ಮಾರುಕಟ್ಟೆ ಯಲ್ಲಿ ಅಪಾರ ಜನಪ್ರೀತಿ ಗಳಿಸಿದ್ದ ಎಕ್ಸ್-ಲ್ಯಾಕ್ಸ್ ಮತ್ತು ಫಿನಾಲ್ತಲೀನ್ ಒಳಗೊಂಡ ಇತರ ಔಷಧ ಗಳ ಮಾರಾಟವು ಇದ್ದಕ್ಕಿದ್ದ ಹಾಗೆ 1996ರಲ್ಲಿ ಒಮ್ಮೆಲೆ ನಿಂತು ಹೋಯಿತು.

ನಾವು ಬಹಳ ಕಾಲದಿಂದ ಬಳಸುತ್ತಿದ್ದೇವೆ; ಎಕ್ಸ್-ಲ್ಯಾಕ್ಸ್ ಸುರಕ್ಷಿತ ಔಷಧ ಎಂದು ಹೆಮ್ಮೆಯಿಂದ ಹಾಡಿಹೊಗಳುತ್ತಿದ್ದ ಜನರ ನಂಬಿಕೆಯು ಹಠಾತ್ತನೆ ಕುಸಿಯಿತು. ಕಾಳಿದಾಸ ಮಹಾಕವಿ ಬರೆದ ‘ಪುರಾಣಮಿಥ್ಯೇವ ನ ಸಾಧು ಸರ್ವಮ್...’ ಎಂಬ ಶ್ಲೋಕ ನೆನಪಿಗೆ ಬರುತ್ತಿದೆ.

ಹಳೆದೆಲ್ಲವೂ ಸರ್ವಶ್ರೇಷ್ಠವಾಗಿರಬೇಕಾಗಿಲ್ಲ. ಹೊಸ ದೆಲ್ಲವೂ ಕಳಪೆಯಾಗಿರಬೇಕಾಗಿಲ್ಲ. ತಿಳಿದವರು ಪರೀಕ್ಷಿಸಿದ ನಂತರ ಯಾವುದೇ ಶ್ರೇಷ್ಠ-ಯಾವುದು ಕಳಪೆ ಎನ್ನುವುದನ್ನು ನಿರ್ಧರಿಸುತ್ತಾರೆ ಎನ್ನುವುದು ಮಹಾ ಕವಿಯ ಅಭಿಮತ. ಹಾಗಾಗಿ ವೈಜ್ಞಾನಿಕ ಅಧ್ಯಯನಗಳು ಫಿನಾಲ್ತಲೀನ್ ಕ್ಯಾನ್ಸರ್‌ಕಾರಕ ಎನ್ನುವುದಕ್ಕೆ ಅಗತ್ಯ ಋಜುವಾತು ದೊರೆತಕೂಡಲೇ ಅದನ್ನು ಸಾರ್ವಜನಿಕರ ಬಳಕೆಗೆ ಸದಾಕಾಲಕ್ಕೂ ನಿಷೇಧವನ್ನು ಹೇರಲಾಯಿತು.

ಪರಿಹಾರವೇನು?: ಫಿನಾಲ್ತಲೀನ್ ಔಷಧಕ್ಕೇನೋ ನಿಷೇಧ ಹೇರಲಾಯಿತು. ಅದು ಸರಿ. ಆದರೆ ಮಲ ಬದ್ಧತೆಯ ಸಮಸ್ಯೆಗೆ ಏನು ಮಾಡುವುದು? ಅದು ಇನ್ನೂ ಜಗತ್ತಿನ ಬಹುಪಾಲು ಜನರನ್ನು ದಿನನಿತ್ಯ ಕಾಡು ತ್ತಿದೆಯಲ್ಲ ಎಂಬ ಪ್ರಶ್ನೆಯು ಎದ್ದಿತು. ಇದಕ್ಕೆ ಸೂಕ್ತ ಉತ್ತರವೆಂದರೆ ಜನಸಾಮಾನ್ಯರು ತಮ್ಮ ಜೀವನಶೈಲಿ ಯಲ್ಲಿ ಅಗತ್ಯ ಬದಲಾವಣೆ ತರಬೇಕಾದ ಅಗತ್ಯ. ಆನಂತರ ಅಗತ್ಯ ಬಿದ್ದರೆ ಔಷಧಗಳನ್ನು ನಿಗದಿತ ಅವಧಿಗೆ ಮಾತ್ರ ಬಳಸಬೇಕು.

ನಾರು ಹೆಚ್ಚಿಸಿ: ದೈನಂದಿನ ಆಹಾರ ಪದ್ಧತಿಯಲ್ಲಿ ಜಂಕ್ ಆಹಾರ ಸೇವನೆ ಕಡಿಮೆ ಮಾಡಬೇಕು. ಮೈದಾ ಮತ್ತು ಡಬಲ್ ಪಾಲಿಷ್ ಅಕ್ಕಿಯನ್ನು ತ್ಯಜಿಸಬೇಕು. ತರಕಾರಿ, ಹಣ್ಣು, ಸಂಪೂರ್ಣ ಧಾನ್ಯ, ಕಾಳು ಗಳು, ಬೇಳೆ ಮತ್ತು ಬೀಜಗಳನ್ನು ಹೆಚ್ಚು ಸೇವಿಸ ಬೇಕು. ಅವು ಮಲದ ಗಾತ್ರ ಹೆಚ್ಚಿಸಿ ಮೃದುವಾಗಿಸಲು ಸಹಾಯ ಮಾಡುತ್ತವೆ. ವಯಸ್ಕರು ಸಾಮಾನ್ಯವಾಗಿ ದಿನಕ್ಕೆ ಸುಮಾರು 22-34 ಗ್ರಾಂ ನಾರಿನ ಪದಾರ್ಥ ವನ್ನು ಸೇವಿಸಬೇಕಾಗುತ್ತದೆ. ಅವರು ನಾರಿನ ಪ್ರಮಾಣವನ್ನು ಏಕಾಏಕಿ ಹೆಚ್ಚಿಸದೆ ನಿಧಾನವಾಗಿ ಹೆಚ್ಚಿಸುವುದು ಉತ್ತಮ.

ಸಾಕಷ್ಟು ದ್ರವ ಸೇವಿಸಿ: ನಾರು ಪದಾರ್ಥಗಳನ್ನು ಹೆಚ್ಚು ಹೆಚ್ಚು ತಿಂದು ನೀರನ್ನು ಕಡಿಮೆ ಸೇವಿಸಿದರೆ ಪ್ರಯೋಜನವಿಲ್ಲ. ದೇಹದಲ್ಲಿ ನೀರಿನಂಶ ಕಡಿಮೆ ಯಾದರೆ ಕೆಲವರಲ್ಲಿ ಮಲ ಇನ್ನಷ್ಟು ಗಟ್ಟಿಯಾಗ ಬಹುದು. ಹಾಗಾಗಿ ಒಂದು ಕೆಜಿ ದೇಹ ತೂಕಕ್ಕೆ 30-40 ಎಂ.ಎಲ್ ನೀರನ್ನು ಸೇವಿಸಬೇಕು. ಇದರಲ್ಲಿ ಕಾಫಿ, ಚಹ, ಹಾಲು, ಹಣ್ಣಿನರಸ, ಸೂಪ್, ಮಜ್ಜಿಗೆ ಇತ್ಯಾದಿಗಳು ಸೇರಿರಬಾರದು. ಶುದ್ಧವಾದ ನೀರನ್ನು ಕುಡಿಯಬೇಕು.

ಪ್ರತಿದಿನ ನಡೆಯಿರಿ: ನಾವು ಪ್ರತಿದಿನವೂ ನಡೆಯುತ್ತಿ ದ್ದರೆ, ನಮ್ಮ ದೇಹದ ಜೊತೆಯಲ್ಲಿ ಕರುಳಿನ ಚಲನೆಯೂ ಉತ್ತಮಗೊಳ್ಳುತ್ತಾ ಹೋಗುತ್ತದೆ. ನಿಯಮಿತ ನಡಿಗೆ, ವ್ಯಾಯಾಮ ಮತ್ತು ದೈಹಿಕ ಚಟುವಟಿಕೆ ಮಲಬದ್ಧತೆಯನ್ನು ತಡೆಯಲು ಸಹಾಯಮಾಡುತ್ತವೆ.

‘ಮಲ ಬರುತ್ತಿದೆ’ ಎಂಬ ಸೂಚನೆ ನಿರ್ಲಕ್ಷಿಸಬೇಡಿ: ಸಭೆ ಇದೆ, ಸಿನಿಮಾ ನಡೆಯುತ್ತಿದೆ, ಮೊಬೈಲ್ ಕೈಯಲ್ಲಿದೆ ಎಂದು ಮಲವಿಸರ್ಜನೆಯ ಒತ್ತಡವನ್ನು ಪದೇಪದೆ ತಡೆದುಕೊಳ್ಳುವು ದರಿಂದ ಸಹಜ ಮಲ ವಿಸರ್ಜನಾ ಸೂಚನೆ ದುರ್ಬಲವಾಗಬಹುದು. ಮಲಬದ್ಧತೆಯ ತೀವ್ರತೆ ಹೆಚ್ಚಬಹುದು. ಬೆಳಗಿನ ಉಪಾಹಾರವಾದ 15-45 ನಿಮಿಷಗಳ ನಂತರ ಜಠರ-ಕರುಳಿನ ಮರುವರ್ತಿಕ ಕ್ರಿಯೆಯು (ಗ್ಯಾಸ್ಟ್ರೋ-ಕೋಲಿಕ್ ರಿಫ್ಲೆಕ್ಸ್) ಚುರುಕಾಗುವುದ ರಿಂದ ಶೌಚಾಲಯಕ್ಕೆ ಹೋಗಲು ಇದು ಒಳ್ಳೆಯ ಸಮಯವಾಗಬಹುದು.

ಸರಿಯಾದ ಕುಳಿತುಕೊಳ್ಳುವ ಭಂಗಿ: ಪಾಶ್ಚಾತ್ಯ ಶೌಚಾಲಯ ಬಳಸುವವರು ಕಾಲಿನ ಕೆಳಗೆ ಚಿಕ್ಕ ಕಾಲುಮಣೆಯನ್ನು (ಫೂಟ್ ಸ್ಟೂಲ್) ಇಟ್ಟು ಮೊಣಕಾಲುಗಳನ್ನು ಸ್ವಲ್ಪ ಮೇಲಕ್ಕೆ ತರುವುದು ಕೆಲವರಿಗೆ ಮಲವಿಸರ್ಜನೆಯನ್ನು ಸುಲಭಗೊಳಿಸ ಬಹುದು.

ವಿರೇಚಕಗಳನ್ನು ಅಭ್ಯಾಸ ಮಾಡಿಕೊಳ್ಳಬೇಡಿ: ಅವಶ್ಯಕತೆ ಇzಗ ವೈದ್ಯರು ಹೆಚ್ಚುವರಿ ನಾರು ಪದಾರ್ಥ ಪೂರೈಕೆ, ಮಲ ಮೃದುಕಾರಕಗಳನ್ನು, ಮಲವಿಸರ್ಜನಾ ಪ್ರಚೋದಕಗಳನ್ನು ಇಲ್ಲವೇ ಇತರ ಔಷಧಗಳನ್ನು ನಿಗದಿತ ಅವಧಿಯವರೆಗೆ ಸೇವಿಸು ವಂತೆ ಹೇಳಬಹುದು. ಪ್ರತಿರಾತ್ರಿ ಮಲಗುವ ಮೊದಲು ‘ಒಂದು ಗುಳಿಗೆ ನುಂಗಬೇಕು’ ಎನ್ನುವ ಅಭ್ಯಾಸ ರೂಢಿಸಿಕೊಳ್ಳದಿರುವುದೇ ಒಳ್ಳೆಯದು.

ಎಚ್ಚರಿಕೆಯ ಗಂಟೆ: ಮಲಬದ್ಧತೆಯನ್ನು ಯಾವಾಗಲೂ ಸಣ್ಣ ಸಮಸ್ಯೆ ಎಂದು ನಿರ್ಲಕ್ಷಿಸಬಾರದು. ಹೊಸದಾಗಿ ಆರಂಭವಾದ ತೀವ್ರ ಮಲಬದ್ಧತೆ, ಮಲದಲ್ಲಿ ರಕ್ತ, ಕಾರಣವಿಲ್ಲದ ತೂಕವಿಳಿಕೆ, ನಿರಂತರ ಹೊಟ್ಟೆನೋವು, ವಾಂತಿ, ಜ್ವರ, ಮಲದ ಸ್ವರೂಪದಲ್ಲಿ ಸ್ಪಷ್ಟ ಬದಲಾವಣೆ ಅಥವಾ ರಕ್ತಹೀನತೆ ಕಂಡುಬಂದರೆ ವೈದ್ಯಕೀಯ ಪರಿಶೀಲನೆ ಅಗತ್ಯ. ವಿಶೇಷವಾಗಿ ವೃದ್ಧರಲ್ಲಿ ಇದ್ದಕ್ಕಿದ್ದಂತೆ ಮಲವಿಸರ್ಜನೆ ಯ ಪ್ರಕೃತಿಯಲ್ಲಿ ಬದಲಾವಣೆಗಳು ಕಂಡುಬಂದರೆ, ಕಾರಣ ಪತ್ತೆಹಚ್ಚುವುದು ಮುಖ್ಯ.

‘ಕರುಳಿನ ಸ್ವಚ್ಛತೆ’ ಎಂಬ ಆಧುನಿಕ ಮೋಹ: ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಡಿಟಾಕ್ಸ್, ಕೊಲಾನ್ ಕ್ಲೀನ್ಸರ್, ಹರ್ಬಲ್ ಬಾವೆಲ್ ಕ್ಲೀನಿಂಗ್ ಎಂಬ ಹೆಸರಿನಲ್ಲಿ ಅನೇಕ ಪದಾರ್ಥಗಳು ಮಾರಾಟ ವಾಗುತ್ತಿವೆ. ಆರೋಗ್ಯ ವಂತ ವ್ಯಕ್ತಿಯ ಕರುಳನ್ನು ವಾರಕ್ಕೊಮ್ಮೆ ಔಷಧ ಸೇವಿಸಿ ‘ಕರುಳನ್ನು ಸ್ವಚ್ಛಗೊಳಿಸುವ’ ಅಗತ್ಯವಿಲ್ಲ. ನಮ್ಮ ಜೀರ್ಣಾಂಗ ವ್ಯವಸ್ಥೆಯೇ ನಿರಂತರವಾಗಿ ತನ್ನ ಕೆಲಸ ತಾನು ನಿಯಮಿತವಾಗಿ ಮಾಡುತ್ತದೆ. ಹಾಗಾಗಿ ದೇಹಕ್ಕೆ ದುಬಾರಿ ಡಿಟಾಕ್ಸ್ ಅಗತ್ಯವಿಲ್ಲ. ಕೊನೆಯಲ್ಲಿ ಮಲಬದ್ಧತೆ ತಡೆಯುವ ಸೂತ್ರವನ್ನು ಒಂದು ಸಾಲಿನಲ್ಲಿ ನೆನಪಿಟ್ಟುಕೊಳ್ಳಬಹುದು: ‘ತಟ್ಟೆಯಲ್ಲಿ ನಾರು, ಲೋಟದಲ್ಲಿ ನೀರು, ಕಾಲಿನಲ್ಲಿ ಚಲನೆ, ಮನಸ್ಸಿ ನಲ್ಲಿ ಶೌಚದ ನಿಯಮ.’ ಔಷಧ ಅಗತ್ಯವಾದಾಗ ಸಹಾಯ ಮಾಡುತ್ತದೆ. ಆದರೆ ಆರೋಗ್ಯಕರ ಕರುಳಿನ ಅತ್ಯುತ್ತಮ ಸ್ನೇಹಿತ ಗುಳಿಗೆ ಅಲ್ಲ - ನಮ್ಮ ಜೀವನಶೈಲಿ ಎಂಬುದನ್ನು ಸದಾ ಕಾಲಕ್ಕೂ ನೆನಪಿಡಬೇಕು.