Yagati Raghu Nadig Column: ಸಾಫ್ಟ್ʼವೇರ್ ಬ್ರೇನ್...!!
ವಾತಾವರಣದಲ್ಲಿ ತುಂಬಿಕೊಂಡಿದ್ದ ಗಾಢ ವಾದ ಮೋಡಗಳು ಹಾಗೂ ಮಂಜಿನ ಕಾರಣ ದಿಂದ ಪೈಲಟ್‌ಗೆ ಹೆಲಿಕಾಪ್ಟರ್ ಈಗ ಯಾವ ಪ್ರದೇಶದಲ್ಲಿ ಹಾರಾಡುತ್ತಿದೆ ಎಂದು ತೀರ್ಮಾ ನಕ್ಕೆ ಬರುವುದು ಕಷ್ಟವಾಯಿತು. ಇಷ್ಟಾಗಿಯೂ ಗಗನಚುಂಬಿ ಕಟ್ಟಡವೊಂದು ಅವನ ಕಣ್ಣಿಗೆ ಮಸುಕು ಮಸುಕಾಗಿ ಕಾಣಿಸಿತು. ತಕ್ಷಣ ಆ ಕಡೆಗೆ ಹೆಲಿಕಾಪ್ಟರ್ ತಿರುಗಿಸಿದ ಪೈಲಟ್, “ನಾನೀಗ ಎಲ್ಲಿದ್ದೇನೆ?" ಎಂದು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ ಕೈಬರಹದ ಸೈನ್‌ಬೋರ್ಡ್ ಅನ್ನು ಬೀಸುತ್ತಾ ಆ ಕಟ್ಟಡವನ್ನು ಸುತ್ತುಹಾಕತೊಡಗಿದ


ಯಗಟಿ ರಘು ನಾಡಿಗ್
ಅದು ಚಳಿಗಾಲ. ಬೃಹತ್ ನಗರವೊಂದರ ಮೇಲೆ ಒಂದು ಹೆಲಿಕಾಪ್ಟರ್ ಹಾರಾಡುತ್ತಿತ್ತು. ಅದೇನಾಯಿತೋ ಏನೋ ಗೊತ್ತಿಲ್ಲ, ಅದರ ಉಪಕರಣಗಳಲ್ಲಿ ವ್ಯತ್ಯಯವುಂಟಾಗಿ, ಇಲೆಕ್ಟ್ರಾನಿಕ್ ದಿಕ್ಸೂಚಿಯ ವ್ಯವಸ್ಥೆಯು ಗಬ್ಬೆದ್ದುಹೋಯಿತು ಹಾಗೂ ವಾಯುಯಾನ ನಿಯಂತ್ರಣ ಕೇಂದ್ರದೊಂದಿಗಿನ ಸಂಪರ್ಕವೂ ಕಡಿದುಹೋಯಿತು. ವಾತಾವರಣದಲ್ಲಿ ತುಂಬಿಕೊಂಡಿದ್ದ ಗಾಢ ವಾದ ಮೋಡಗಳು ಹಾಗೂ ಮಂಜಿನ ಕಾರಣದಿಂದ ಪೈಲಟ್‌ಗೆ ಹೆಲಿಕಾಪ್ಟರ್ ಈಗ ಯಾವ ಪ್ರದೇಶದಲ್ಲಿ ಹಾರಾಡುತ್ತಿದೆ ಎಂದು ತೀರ್ಮಾನಕ್ಕೆ ಬರುವುದು ಕಷ್ಟವಾಯಿತು. ಇಷ್ಟಾಗಿಯೂ ಗಗನಚುಂಬಿ ಕಟ್ಟಡವೊಂದು ಅವನ ಕಣ್ಣಿಗೆ ಮಸುಕು ಮಸುಕಾಗಿ ಕಾಣಿಸಿತು. ತಕ್ಷಣ ಆ ಕಡೆಗೆ ಹೆಲಿಕಾಪ್ಟರ್ ತಿರುಗಿಸಿದ ಪೈಲಟ್, “ನಾನೀಗ ಎಲ್ಲಿದ್ದೇನೆ?" ಎಂದು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ ಕೈಬರಹದ ಸೈನ್‌ಬೋರ್ಡ್ ಅನ್ನು ಬೀಸುತ್ತಾ ಆ ಕಟ್ಟಡವನ್ನು ಸುತ್ತುಹಾಕತೊಡಗಿದ. ಅವನ ಉದ್ದೇಶ ಸ್ಪಷ್ಟವಾಗಿತ್ತು.
ಇದನ್ನೂ ಓದಿ: Yagati Raghu Naadig Column: ಹೀಗೊಬ್ಬ ಮಹಾನ್ ಜ್ಞಾನಿ !
ನಿರಂತರವಾಗಿ ಕಟ್ಟಡದ ಸುತ್ತ ಹೆಲಿಕಾಪ್ಟರ್ ಸುತ್ತುಹಾಕುವುದರಿಂದ ಅಲ್ಲಿ ಕೆಲಸ ಮಾಡುವ ಜನರ ಗಮನವನ್ನು ಅದು ಸೆಳೆದೇ ಸೆಳೆಯುತ್ತದೆ, ಅಲ್ಲಿರುವವರು ತನಗೆ ಖಂಡಿತಾ ಉತ್ತರ ನೀಡುತ್ತಾರೆ ಎಂಬುದೇ ಅವನ ವಿಶ್ವಾಸವಾಗಿತ್ತು. 8-10 ಬಾರಿ ಆ ಕಟ್ಟಡವನ್ನು ಸುತ್ತುಹಾಕಿದ ನಂತರ ಅಲ್ಲಿನ ಜನ ಪ್ರತಿಕ್ರಿಯಿಸಲು ಪ್ರಾರಂಭಿಸಿದರು ಹಾಗೂ ಕಟ್ಟಡದ ಕೊನೇ ಅಂತಸ್ತಿನ ಕಿಟಿಕಿಯೊಂದರ ಆಚೆಯಿಂದ ಕಾಣುವಂತೆ ದಪ್ಪದಪ್ಪ ಅಕ್ಷರಗಳಲ್ಲಿ ಬರೆದ ಸೈನ್‌ಬೋರ್ಡ್ ಅನ್ನು ತೂಗಾಡಿಸಲು ಪ್ರಾರಂಭಿಸಿದರು. ಅದರಲ್ಲಿ ಹೀಗೆ ಬರೆದಿತ್ತು: “ನೀವೀಗ ಹೆಲಿಕಾಪ್ಟರ್‌ನಲ್ಲಿದ್ದೀರಿ!"ಅವರ ಆ ಪ್ರತಿಕ್ರಿಯೆ ನೋಡಿ ಮುಗುಳ್ನಕ್ಕ ಪೈಲಟ್, ಥ್ಯಾಂಕ್ಸ್ ಹೇಳುವಂತೆ ಅವರ ಕಡೆಗೆ ಒಮ್ಮೆ ಕೈಬೀಸಿ, ತನ್ನಲ್ಲಿದ್ದ ಭೂಪಟವನ್ನು ಒಮ್ಮೆ ನೋಡಿ, ಯಾವುದೇ ಗೊಂದಲವಿಲ್ಲದವನಂತೆ ಸನಿಹದ ಹೆಲಿಪ್ಯಾಡ್ ಒಂದರಲ್ಲಿ ಹೆಲಿಕಾಪ್ಟರ್ ಅನ್ನು ಕ್ಷೇಮವಾಗಿ ಲ್ಯಾಂಡ್‌ಮಾಡಿದ.
ಇಷ್ಟನ್ನೂ ಬೆರಗುಗಣ್ಣುಗಳಿಂದಲೇ ನೋಡುತ್ತಿದ್ದ ಅವನ ಸಹಾಯಕ ಪೈಲಟ್‌ಗೆ ಇದು ಅಚ್ಚರಿಯನ್ನುಂಟುಮಾಡಿತ್ತು. ಹೆಲಿಕಾಪ್ಟರ್ ನಿಂದ ಇಳಿದು ಬರುವಾಗ ಆತ ಕೇಳಿಯೇ ಬಿಟ್ಟ: “ಅಲ್ಲಾ ಸರ್, ವಾತಾವರಣ ತೀವ್ರ ಪ್ರತಿಕೂಲವಾಗಿತ್ತು, ಮೋಡ ಮತ್ತು ಮಂಜಿ ನಿಂದಾಗಿ ಏನೂ ಕಾಣುತ್ತಿರಲಿಲ್ಲ; ಸುಮ್ಮನೇ ಆ ಕಟ್ಟಡದ ಸುತ್ತ ಸುತ್ತುಹಾಕಿದ ನಂತರ ಇಷ್ಟು ಸೇಫ್ ಆಗಿ ಹೇಗೆ ಲ್ಯಾಂಡ್ ಮಾಡಿದಿರಿ?"ಪೈಲಟ್ ತನ್ನ ಕೈಯಲ್ಲಿದ್ದ ಸಿಗಾರ್ ಅನ್ನು ಒಮ್ಮೆ ತುಟಿಗಿಟ್ಟುಕೊಂಡು ದೀರ್ಘವಾಗಿ ‘ದಮ್’ ಎಳೆದು, ಅದಕ್ಕಿಂತ ದೀರ್ಘವಾಗಿ ಹೊಗೆ ಹೊರಬಿಟ್ಟು, ವೀರಪ್ಪನ್ ಶೈಲಿಯಲ್ಲಿ ಮೀಸೆ ತಿರುಗಿಸಿ ಗಹಗಹಿಸಿ ನಗುತ್ತಾ, “ಮೈ ಬಾಯ್... ‘ನಾನೀಗ ಎಲ್ಲಿದ್ದೇನೆ?’ ಎಂದು ಕೇಳಿದ್ದಕ್ಕೆ, ‘ನೀವೀಗ ಹೆಲಿಕಾಪ್ಟರ್‌ನಲ್ಲಿದ್ದೀರಿ’ ಅಂತ Technically Correct ಆಗಿರುವ, ಆದರೆ Completely Useless ಆಗಿರುವ ಉತ್ತರವನ್ನು ಅಲ್ಲಿ ದ್ದವರು ಕೊಟ್ಟಿದ್ದು ನೋಡಿ, ಈ ಕಟ್ಟಡವು ಡೆಫನೆಟ್ಟಾಗಿ ’ಸೈಕೋ ಸಾಫ್ಟ್’ ಸಾಫ್ಟ್ ವೇರ್ ಕಂಪನಿಯದೇ ಅಂತ ನನಗೆ ಖಾತ್ರಿಯಾಗಿ ಹೋಯಿತು! ತಕ್ಷಣ ಮ್ಯಾಪ್ ತೆಗೆದು ನೋಡಿ, ಅಂದಾಜಿನ ಮೇಲೆ ಈ ಹೆಲಿಪ್ಯಾಡ್ನಲ್ಲಿ ಸೇಫಾಗಿ ಲ್ಯಾಂಡ್ ಮಾಡಿದೆ.." ಎಂದು ಹೇಳಿ ಬಾಯಿಂದ ಮತ್ತೊಮ್ಮೆ ಹೊಗೆಬಿಟ್ಟ. ಈ ಮಾತು ಕೇಳಿದ ಸಹಾಯಕ ಪೈಲಟ್‌ಗೆ ಎರಡೂ ಕಿವಿಗಳಿಂದ ಹೊಗೆ ಬರಲಾರಂಭಿಸಿತು...!!