ಇರುವೆಯ ಹಾದಿಯೇ ಮಾದರಿ
ಇರುವೆ ಅತ್ಯಂತ ಚಿಕ್ಕ ಜೀವಿ. ನಮ್ಮ ಕಾಲಡಿಗೆ ಸಿಕ್ಕಿ ಕ್ಷಣ ಮಾತ್ರದಲ್ಲಿ ಪ್ರಾಣ ಕಳೆದುಕೊಳ್ಳುವಂತ ಹುದು. ಇರುವೆ ಚಿಕ್ಕದಾದರೂ ಅದು ನಮಗೆ ಹೇಳಿಕೊಡುವ ಪಾಠ ಬಹು ದೊಡ್ಡದು.‘ಗಚ್ಛನ್ ಪಿಪೀಲಿಕೋ ಯಾತಿ ಯೋಜನಾನಾಂ ಶತಾನ್ಯಪಿ | ಅಗಚ್ಛನ್ ವೈನತೇಯೋಪಿ ಪದಮೇಕಂ ನ ಗಚ್ಛತಿ’ ಎಂಬ ಮಾತಿದೆ.
-
ವಿದ್ಯಾಶಂಕರ ಶರ್ಮಾ, ಸಿದ್ದಾಪುರ
ಪ್ರಾಣಿಗಳೇ ಗುಣದಲ್ಲಿ ಮೇಲು, ಮಾನವನದಕ್ಕಿಂತ ಕೀಳು ಎಂಬ ಹಾಡಿನ ಸಾಲುಗಳು ದಿನವೂ ನೆನಪಾಗುತ್ತವೆ. ಪಶು-ಪ್ರಾಣಿಗಳು ತಮ್ಮ ಸ್ವಭಾವವನ್ನು ಮೀರಿ ಎಂದೂ ವರ್ತಿಸುವುದಿಲ್ಲ. ಆದರೆ ಮನುಜ ಹಾಗಲ್ಲ; ತಾನು ಎಲ್ಲಾ ನೀತಿ- ನಿಯಮಗಳಿಗೂ ಹೊರತಾದವನು ಎಂಬ ಅಹಂಕಾರದಲ್ಲಿಯೇ ವ್ಯವಹರಿಸುತ್ತಾನೆ. ಸದ್ಗುಣಗಳಿಗೆ ಮತ್ತು ಸದಾಚಾರಗಳಿಗೆ ಮೂಕ ಪ್ರಾಣಿಗಳು ನಮಗೆ ಮಾದರಿಯಾಗಿರುವುದು ವಿಪರ್ಯಾಸವೆನಿಸಿದರೂ ಸತ್ಯ!
ಇರುವೆ ಅತ್ಯಂತ ಚಿಕ್ಕ ಜೀವಿ. ನಮ್ಮ ಕಾಲಡಿಗೆ ಸಿಕ್ಕಿ ಕ್ಷಣ ಮಾತ್ರದಲ್ಲಿ ಪ್ರಾಣ ಕಳೆದುಕೊಳ್ಳುವಂತ ಹುದು. ಇರುವೆ ಚಿಕ್ಕದಾದರೂ ಅದು ನಮಗೆ ಹೇಳಿಕೊಡುವ ಪಾಠ ಬಹು ದೊಡ್ಡದು.‘ಗಚ್ಛನ್ ಪಿಪೀಲಿಕೋ ಯಾತಿ ಯೋಜನಾನಾಂ ಶತಾನ್ಯಪಿ | ಅಗಚ್ಛನ್ ವೈನತೇಯೋಪಿ ಪದಮೇಕಂ ನ ಗಚ್ಛತಿ’ ಎಂಬ ಮಾತಿದೆ. ನಿರಂತರ ಪ್ರಯತ್ನ ಮಾಡುತ್ತಾ ಸಾಗಿದರೆ, ಇರುವೆ ಕೂಡ ಸಹಸ್ರಾರು ಮೈಲಿಗಳನ್ನು ದಾಟಬಲ್ಲದು. ಆದರೆ ಚಲಿಸಲು ಪ್ರಯತ್ನವನ್ನೇ ಮಾಡದಿದ್ದರೆ, ಗರುಡನಷ್ಟು ಬಲಶಾಲಿಯಾಗಿದ್ದರೂ ಒಂದು ಹೆಜ್ಜೆಯನ್ನೂ ಮುನ್ನಡೆಯಲಾಗುವುದಿಲ್ಲ. ಸತತ ಪ್ರಯತ್ನ ಮತ್ತು ಸೋಮಾರಿತನಗಳ ನಡುವೆ ಇರುವ ಅಂತರವನ್ನು ಬಹು ಸುಂದರವಾಗಿ ಹೇಳುವ ಶ್ಲೋಕವಿದು.
ಇದನ್ನೂ ಓದಿ: Leena Joshi Column: ಗಡಿಯಾಚೆ ಉಳಿದ ಮರಳಿ ಹೋಗದೂರು
ಇರುವೆಗಳ ಸಾಲನ್ನು ನೋಡಿದಾಗ ನಮಗೆ ಆಶ್ಚರ್ಯವಾಗುತ್ತದೆ. ಚಿಕ್ಕ ಜೀವಿಯಾದ ಅದು ಶಿಸ್ತಿನ ಸಾಲಿನಲ್ಲಿ ಸಾಗುತ್ತಾ ಆಹಾರದ ಹುಡುಕಾಟವನ್ನು ಮಾಡುತ್ತದೆ. ತನಗಿಂತ ತೂಕವಿರುವ ಆಹಾರ ವನ್ನು ಅದು ಹೊರುವುದು ಕೂಡ ಒಂದು ಸೋಜಿ ಗವೇ! ಕ್ಷಣಕ್ಷಣದ ಅಡೆತಡೆಗಳನ್ನು ದಾಟುತ್ತ ತಮ್ಮ ಗುರಿಯನ್ನು ತಲುಪುವ ಏಕಾಗ್ರತೆ ಮತ್ತು ದೃಢತೆ ಅವುಗಳಲ್ಲಿವೆ.
ಇದು ನಮಗೆ ಬಹು ದೊಡ್ಡ ಕಿವಿಮಾತನ್ನು ಹೇಳುತ್ತದೆ. ಸಾಧನೆಯ ಪಥವನ್ನು ಚಿಕ್ಕ ಚಿಕ್ಕ ಹೆಜ್ಜೆಗಳಿಂದಲೇ ಪ್ರಾರಂಭಿಸಬೇಕಾಗಿದೆ. ಒಮ್ಮೆಲೇ ಯಶಸ್ಸನ್ನು ಪಡೆಯುತ್ತೇನೆ ಎಂಬ ಧಾವಂತ ಎಂದೂ ಫಲ ನೀಡದು. ಪ್ರಯತ್ನಗಳಿಗೆ ಹೆದರಿ ಸುಮ್ಮನಿದ್ದರೆ ಗುರಿಯ ಕಡೆಗೆ ನಮ್ಮ ಪಯಣ ಎಂದೂ ಶುರುವಾಗುವುದಿಲ್ಲ, ಹತಾಶೆಯಷ್ಟೇ ಬಳುವಳಿಯಾಗಿ ಸಿಗುತ್ತದೆ. ಅಧ್ಯಾತ್ಮ ಸಾಧನೆಯ ಬಗೆಗೆ ಹೇಳುವ ಈ ಸಂಸ್ಕೃತದ ಮಾತುಗಳು ಜೀವನದ ಎಲ್ಲ ಸಾಧನೆಗಳಿಗೂ ಅನ್ವಯವಾಗುತ್ತವೆ.