Dr Sadhanashree Column: ಮಳೆ ಹೋಯಿತು ಬಿಸಿಲು ಬಂತು: ʼಇದೇ ಶರದೃತುʼ
ಮಳೆಗಾಲದ ನಂತರ ಬರುವ ಈ ಋತುವಿನಲ್ಲಿ ಪಿತ್ತದ ಪ್ರಭಾವ ಹೆಚ್ಚಾಗುವ ಸಾಧ್ಯತೆ ಇರುವು ದರಿಂದ ಆಹಾರದ ಆಯ್ಕೆಯಲ್ಲಿ ಸ್ವಲ್ಪ ಹೆಚ್ಚಿನ ಜಾಗ್ರತೆ ಅಗತ್ಯ. ಮಳೆಗಾಲದ ನಂತರ ದೇಹದಲ್ಲಿ ಏನಾಗುತ್ತದೆ? ಆಯುರ್ವೇದವು ವರ್ಷವನ್ನು ಆರು ಋತುಗಳಾಗಿ ವಿಂಗಡಿಸುತ್ತದೆ. ಶಿಶಿರ, ವಸಂತ, ಗ್ರೀಷ್ಮ, ವರ್ಷಾ, ಶರತ್ ಮತ್ತು ಹೇಮಂತ.ಇವುಗಳಲ್ಲಿ ಶರದೃತು ಮಧ್ಯಮ ಬಲದ ಋತು ಎಂದು ಪರಿಗಣಿಸಲಾಗುತ್ತದೆ.
-
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ದಸರೆಯ ಹಬ್ಬದ ಸಂಭ್ರಮ ಶುರುವಾಗುವ ಹೊತ್ತಿಗೆ ವಾತಾವರಣದಲ್ಲೂ ಒಂದು ವಿಶೇಷ ಬದಲಾವಣೆ ಕಾಣಿಸುತ್ತದೆ. ಮಳೆ ಕಡಿಮೆಯಾಗುತ್ತದೆ. ಆಕಾಶ ನಿರ್ಮಲವಾಗುತ್ತದೆ. ಮೋಡಗಳ ನಡುವಿನಿಂದ ಸೂರ್ಯನ ಕಿರಣಗಳು ಮತ್ತೆ ತೀಕ್ಷ್ಣವಾಗಿ ನೆಲಕ್ಕಿಳಿಯುತ್ತವೆ. ಬೆಳಗಿನ ಗಾಳಿಯಲ್ಲಿ ಮಳೆಯ ತೇವದ ಬದಲು ಒಂದು ಬಗೆಯ ಉಷ್ಣತೆ ಕಾಣಿಸಿಕೊಳ್ಳುತ್ತದೆ.
ಹಬ್ಬದ ದಿನಗಳಲ್ಲಿ ನಮ್ಮ ಗಮನ ಸಾಮಾನ್ಯವಾಗಿ ಹೊಸ ಬಟ್ಟೆ, ಸಿಹಿತಿಂಡಿ, ಹಬ್ಬದ ಅಡುಗೆ, ಪ್ರವಾಸ ಮತ್ತು ಬಂಧುಬಳಗದ ಭೇಟಿಗಳ ಕಡೆಗೆ ಇರುತ್ತದೆ. ಆದರೆ ಇದೇ ಸಮಯದಲ್ಲಿ ದೇಹ ತನ್ನದೇ ಆದ ರೀತಿಯಲ್ಲಿ ಋತು ಬದಲಾವಣೆಗೆ ಹೊಂದಿ ಕೊಳ್ಳುತ್ತಿರುತ್ತದೆ. ಮಳೆಗಾಲದಲ್ಲಿ ಬದಲಾಗಿದ್ದ ಜೀರ್ಣಕ್ರಿಯೆ, ಆಹಾರ ಸೇವನೆಯ ಅಭ್ಯಾಸ ಮತ್ತು ದೇಹದ ದೋಷಗಳ ಸ್ಥಿತಿ ಮತ್ತೆ ಹೊಸ ಪರಿಸರಕ್ಕೆ ಹೊಂದಿಕೊಳ್ಳಬೇಕಾಗುತ್ತದೆ.
ಈ ಹೊಂದಾಣಿಕೆಯನ್ನು ನಿರ್ಲಕ್ಷಿಸಿದಾಗ ಸಣ್ಣ ಅಜೀರ್ಣದಿಂದ ಹಿಡಿದು ವಿವಿಧ ಆರೋಗ್ಯ ತೊಂದರೆ ಗಳವರೆಗೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಪ್ರಕೃತಿಯಲ್ಲಿ ಈ ಬದಲಾವಣೆ ಆಗುತ್ತಿರು ವಾಗ ನಮ್ಮ ದೇಹ ಮಾತ್ರ ಅದೇ ಹಳೆಯ ದಿನಚರಿಯಲ್ಲಿ ಮುಂದು ವರಿಯಲು ಸಾಧ್ಯವೇ? ಆಯುರ್ವೇದದ ಪ್ರಕಾರ, ಇಲ್ಲ. ಋತು ಬದಲಾಗುವಾಗ ದೇಹವೂ ತನ್ನೊಳಗೆ ಬದಲಾಗುತ್ತದೆ. ಆ ಬದಲಾವಣೆಗೆ ತಕ್ಕಂತೆ ಆಹಾರ ಮತ್ತು ಜೀವನಶೈಲಿಯನ್ನು ಹೊಂದಿಸಿಕೊಳ್ಳುವುದೇ ಋತು ಚರ್ಯೆಯ ಉದ್ದೇಶ.ಈಗ ನಾವು ಪ್ರವೇಶಿಸಿರುವುದು ಶರದೃತು.
ಮಳೆಗಾಲದ ನಂತರ ಬರುವ ಈ ಋತುವಿನಲ್ಲಿ ಪಿತ್ತದ ಪ್ರಭಾವ ಹೆಚ್ಚಾಗುವ ಸಾಧ್ಯತೆ ಇರುವು ದರಿಂದ ಆಹಾರದ ಆಯ್ಕೆಯಲ್ಲಿ ಸ್ವಲ್ಪ ಹೆಚ್ಚಿನ ಜಾಗ್ರತೆ ಅಗತ್ಯ. ಮಳೆಗಾಲದ ನಂತರ ದೇಹದಲ್ಲಿ ಏನಾಗುತ್ತದೆ? ಆಯುರ್ವೇದವು ವರ್ಷವನ್ನು ಆರು ಋತುಗಳಾಗಿ ವಿಂಗಡಿಸುತ್ತದೆ. ಶಿಶಿರ, ವಸಂತ, ಗ್ರೀಷ್ಮ, ವರ್ಷಾ, ಶರತ್ ಮತ್ತು ಹೇಮಂತ.ಇವುಗಳಲ್ಲಿ ಶರದೃತು ಮಧ್ಯಮ ಬಲದ ಋತು ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: Dr Sadhanashree Column: ಹಬ್ಬ ಮುಗಿದ ಮೇಲೆ ದೇಹಕ್ಕೆ ರಜೆ ಏಕೆ ?
ಮಳೆಗಾಲದಲ್ಲಿ ವಾತಾವರಣ ತೇವಾಂಶಪೂರ್ಣವಾಗಿರುತ್ತದೆ. ಈ ಅವಧಿಯಲ್ಲಿ ದೇಹದಲ್ಲಿ ಪಿತ್ತದ ಸಂಚಯಕ್ಕೆ ಅನುಕೂಲವಾದ ಪರಿಸ್ಥಿತಿ ಉಂಟಾಗುತ್ತದೆ. ಮಳೆ ಕಡಿಮೆಯಾಗಿ ಸೂರ್ಯನ ತಾಪ ಮತ್ತೆ ತೀವ್ರವಾದಾಗ, ಸಂಚಿತವಾಗಿದ್ದ ಪಿತ್ತವು ಪ್ರಕುಪಿತವಾಗುತ್ತದೆ. ಅದರ ಪರಿಣಾಮವಾಗಿ ಕೆಲವರಲ್ಲಿ ಜ್ವರ, ಹುಳಿತೇಗು, ಎದೆ ಉರಿ, ಕೈಕಾಲುಗಳಲ್ಲಿ ಉರಿ, ಕಣ್ಣಿನ ತೊಂದರೆ, ಅರ್ಧ ತಲೆನೋವು, ಚರ್ಮದ ಸಮಸ್ಯೆಗಳು, ಸರ್ಪಸುತ್ತು ಮುಂತಾದ ಪಿತ್ತ ಮತ್ತು ರಕ್ತ ಸಂಬಂಧಿತ ತೊಂದರೆಗಳು ಕಾಣಿಸಿಕೊಳ್ಳಬಹುದು.
ಇದಕ್ಕಾಗಿಯೇ ನವರಾತ್ರಿ ಮತ್ತು ದಸರೆಯ ಸಮಯದಲ್ಲಿ ಹಬ್ಬದ ಊಟವನ್ನು ಕೇವಲ ರುಚಿಯ ದೃಷ್ಟಿಯಿಂದ ನೋಡುವುದಕ್ಕಿಂತ, ಋತುವಿಗೆ ಅದು ಹೊಂದಿಕೆಯಾಗುತ್ತದೆಯೇ ಎಂಬುದನ್ನೂ ಗಮನಿಸುವುದು ಮುಖ್ಯ.
ಶರದೃತುವಿನ ತಟ್ಟೆಯ ಮೂಲಮಂತ್ರ: ಈ ಋತುವಿನಲ್ಲಿ ಆಹಾರ ಆಯ್ಕೆ ಮಾಡುವಾಗ ಒಂದು ಸರಳ ಸೂತ್ರವನ್ನು ನೆನಪಿಟ್ಟುಕೊಳ್ಳಬಹುದು: ಮಧುರ + ತಿಕ್ತ + ಕಷಾಯ, ಪಿತ್ತಕ್ಕೆ ಹಿತಕರ. ಅಂದರೆ ಸಿಹಿ, ಕಹಿ ಮತ್ತು ಒಗರು ರುಚಿಗಳಿರುವ ಆಹಾರಗಳಿಗೆ ಆದ್ಯತೆ ನೀಡುವುದು ಉತ್ತಮ. ಜೀರ್ಣಿಸಲು ಸುಲಭವಾದ, ಹೆಚ್ಚು ಜಡವಾಗಿರದ ಆಹಾರ ಈ ಕಾಲದಲ್ಲಿ ಸೂಕ್ತ.
ಹಿಂದಿನ ವರ್ಷದ ಧಾನ್ಯಗಳನ್ನು ಬಳಸುವುದು ಆಯುರ್ವೇದದಲ್ಲಿ ಪ್ರಶಸ್ತವೆಂದು ಹೇಳಲಾಗಿದೆ. ಅಕ್ಕಿ, ಗೋಧಿ, ಜವೆ, ಜೋಳ, ರಾಗಿ ಮುಂತಾದ ಧಾನ್ಯಗಳನ್ನು ನಮ್ಮ ಪ್ರಾದೇಶಿಕ ಆಹಾರ ಪದ್ಧತಿಗೆ ಅನುಗುಣವಾಗಿ ಬಳಸಬಹುದು. ಅನ್ನವಾಗಲಿ, ರವೆಯಾಗಲಿ, ನುಚ್ಚಾಗಲಿ ಅಥವಾ ಹಿಟ್ಟಿನ ರೂಪವಾಗಲಿ, ಆಹಾರ ಸರಳವಾಗಿರುವುದು ಮುಖ್ಯ.
ಉಪವಾಸ ಹೇಗಿರಬೇಕು: ಉಪವಾಸ ಎಂದರೆ ಏನು ಬೇಕಾದರೂ ತಿನ್ನುವುದಲ್ಲ! ಇಂದಿನ ದಿನಗಳಲ್ಲಿ ಉಪವಾಸಕ್ಕೂ ಒಂದು ವಿಶಿಷ್ಟ ಮೆನು ಇದೆ! ಹುಳಿ ಹಾಕಿದ ಅವಲಕ್ಕಿ, ಗೊಜ್ಜು ಅವಲಕ್ಕಿ, ಅವಲಕ್ಕಿ ಮತ್ತು ಮೊಸರು ಮುಂತಾದವುಗಳನ್ನು ಉಪವಾಸದ ಆಹಾರವೆಂದು ಪರಿಗಣಿಸುವ ಅಭ್ಯಾಸ ಕೆಲವರಲ್ಲಿದೆ. ಆದರೆ ಶರದೃತುವಿನಲ್ಲಿ ಇಂತಹ ಸಂಯೋಜನೆಗಳು ಪಿತ್ತವನ್ನು ಮತ್ತಷ್ಟು ಕೆರಳಿಸಬಹುದು. ಹಾಗೆಯೇ ಹಲವು ದಿನ ಫ್ರಿಜ್‌ನಲ್ಲಿ ಇಟ್ಟು ಹುಳಿಯಾಗಿ ರುವ ಇಡ್ಲಿ ಅಥವಾ ದೋಸೆ ಹಿಟ್ಟನ್ನು ಬಳಸುವ ಅಭ್ಯಾಸವೂ ಉತ್ತಮವಲ್ಲ. ಹಿಟ್ಟನ್ನು ಸಾಧ್ಯ ವಾದಷ್ಟು ತಾಜಾವಾಗಿ ಬಳಸುವುದು ಒಳಿತು. ಇದೇ ವಿಚಾರ ಚಪಾತಿ ಹಿಟ್ಟಿಗೂ ಅನ್ವಯಿಸುತ್ತದೆ. ಉಪವಾಸ ಎಂಬ ಹೆಸರಿದ್ದರೆ ಆಹಾರ ಸ್ವಯಂಚಾಲಿತವಾಗಿ ಪಥ್ಯವಾಗುವುದಿಲ್ಲ. ಆಹಾರದ ಗುಣ, ಸಂಯೋಜನೆ ಮತ್ತು ಋತುವಿನ ಹೊಂದಾಣಿಕೆ ಮುಖ್ಯ.
ಬೇಳೆ ಮತ್ತು ಕಾಳುಗಳಲ್ಲೂ ಆಯ್ಕೆ ಬೇಕು: ಎಲ್ಲಾ ಬೇಳೆಗಳೂ ಒಂದೇ ರೀತಿಯಲ್ಲ. ಹೆಸರು ಬೇಳೆ, ತೊಗರಿಬೇಳೆ, ಚೆನ್ನಂಗಿ ಬೇಳೆ ಮತ್ತು ಮೆಂತ್ಯೆ ಮುಂತಾದವುಗಳನ್ನು ಈ ಋತುವಿನಲ್ಲಿ ಬಳಸಬಹುದು. ಇನ್ನೊಂದೆಡೆ ಸಿಪ್ಪೆಸಹಿತ ಕಾಳುಗಳು, ಮೊಳಕೆ ಕಾಳುಗಳು ಮತ್ತು ಕೆಲವು ಜೀರ್ಣಕ್ಕೆ ಜಡವಾದ ದ್ವಿದಳ ಧಾನ್ಯಗಳನ್ನು ಪ್ರತಿದಿನ ಸೇವಿಸುವುದನ್ನು ತಪ್ಪಿಸುವುದು ಉತ್ತಮ. ಅವರೆ, ಉದ್ದು, ಹುರಳಿ, ಅಲಸಂದೆ, ಬಟಾಣಿ, ರಾಜ್ಮಾ ಮುಂತಾ ದವುಗಳನ್ನು ಮಿತಿಯಲ್ಲಿ ಇಡಬಹುದು. ಉದ್ದನ್ನು ಸಂಪೂರ್ಣವಾಗಿ ಬಿಡಬೇಕೆಂದಿಲ್ಲ. ಸಾಂದರ್ಭಿಕ ಬಳಕೆ ಮಾಡಬಹುದು. ಸೋಯಾ ಬೀನ್ ಮುಂತಾದ ಕೆಲವು ದ್ವಿದಳಧಾನ್ಯಗಳು ಎಲ್ಲರಿಗೂ ಸಮಾನವಾಗಿ ಹೊಂದುವುದಿಲ್ಲ ಎಂಬು ದನ್ನೂ ಗಮನಿಸಬೇಕು.
ಹಬ್ಬದ ಸಿಹಿಗೂ ಋತುಚರ್ಯೆಯ ಸ್ಪರ್ಶ: ಶರದೃತು ಎಂದಾಕ್ಷಣ ಸಿಹಿತಿಂಡಿಗೆ ಸಂಪೂರ್ಣ ವಿದಾಯ ಹೇಳಬೇಕೆಂದೇನಿಲ್ಲ! ಅಕ್ಕಿ, ಗೋಧಿ ಅಥವಾ ರಾಗಿಯಿಂದ ತಯಾರಿಸಿದ ಹಾಲ್ಬಾಯಿ, ಕುಂಬಳಕಾಯಿ ಹಲ್ವಾ, ಕಾಯಿ ಹೋಳಿಗೆ, ಹೆಸರುಬೇಳೆ ಹೋಳಿಗೆ, ಹೆಸರುಬೇಳೆಯ ಸಿಹಿತಿನಿಸುಗಳು ಮುಂತಾದವುಗಳನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಬಹುದು. ಪೊಂಗಲ, ಸಜ್ಜಿಗೆ, ಹಾಲಿನ ಪಾಯಸಗಳು ಮತ್ತು ಕಬ್ಬಿನ ಹಾಲಿನಿಂದ ತಯಾರಿಸಿದ ಪದಾರ್ಥಗಳೂ ಈ ಋತುವಿನಲ್ಲಿ ಬಳಸಬಹುದಾದ ಆಹಾರಗಳು.ಅಂದರೆ ಹಬ್ಬದ ಊಟದಲ್ಲಿ ಪ್ರಮಾಣ ಮತ್ತು ಆಯ್ಕೆ ಎರಡನ್ನೂ ಗಮನಿಸಿದರೆ ಸಂಭ್ರಮವೂ ಉಳಿಯುತ್ತದೆ, ಆರೋಗ್ಯವೂ ಉಳಿಯುತ್ತದೆ.
ತರಕಾರಿಗಳ ಆಯ್ಕೆ: ನಮ್ಮ ಅಡುಗೆಮನೆಯಲ್ಲಿ ಯಾವ ತರಕಾರಿಗಳು ಇರಬೇಕು? ಶರದೃತುವಿ ನಲ್ಲಿ ಸ್ವಲ್ಪ ಕಹಿ ಅಥವಾ ಒಗರು ರುಚಿಯ ತರಕಾರಿಗಳಿಗೆ ಆದ್ಯತೆ ನೀಡಬಹುದು. ಹೀರೆಕಾಯಿ, ಪಡವಲಕಾಯಿ, ಬಣ್ಣದ ಸೌತೆಕಾಯಿ, ಹಾಗಲಕಾಯಿ, ಹಾಲುಗುಂಬಳ, ಬೂದುಗುಂಬಳ ಮತ್ತು ಚೌಳಿಕಾಯಿ ಮುಂತಾದವುಗಳನ್ನು ಅಡುಗೆಯಲ್ಲಿ ಸೇರಿಸಬಹುದು. ಸೊಪ್ಪುಗಳಲ್ಲಿ ಹರಿವೆ, ಪಾಲಕ್, ಮೆಂತ್ಯೆ, ಚಕೋತ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪುಗಳು ಉತ್ತಮ ಆಯ್ಕೆಗಳು.
ಮೆಂತ್ಯೆ ತಂಬುಳಿ, ಹೀರೆಕಾಯಿ ತಂಬುಳಿ, ಪಡವಲಕಾಯಿ ತಂಬುಳಿ ಅಥವಾ ಅಮೃತಬಳ್ಳಿ ಚಿಗುರಿನ ತಂಬುಳಿಯಂತಹ ಸಾಂಪ್ರದಾಯಿಕ ಅಡುಗೆಗಳು ಈ ಋತುವಿನ ತಟ್ಟೆಗೆ ಸೂಕ್ತವಾದ ಸೇರ್ಪಡೆಗಳು.
ಖಾರ ಕಡಿಮೆಯಾದರೆ ಅಡುಗೆ ರುಚಿ: ನಮ್ಮ ನಾಲಿಗೆಗೆ ಖಾರ ಇಷ್ಟವಾದರೂ, ಋತುವಿಗೆ ಅದು ಯಾವಾಗಲೂ ಇಷ್ಟವಾಗಬೇಕೆಂದಿಲ್ಲ! ಪಿತ್ತದ ಪ್ರಭಾವ ಹೆಚ್ಚಾಗುವ ಶರದೃತು ವಿನಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಪುದಿನ, ಚಕ್ಕೆ, ಮೆಣಸು, ತಾಜಾ ಶುಂಠಿ ಮುಂತಾದ ಉಷ್ಣಕಾರಕ ಮಸಾಲೆಗಳನ್ನು ಅತಿಯಾಗಿ ಬಳಸುವುದನ್ನು ಕಡಿಮೆ ಮಾಡುವುದು ಉತ್ತಮ.
ಖಾರ ಬೇಕಾದರೆ ಒಣ ಶುಂಠಿ ಮತ್ತು ಒಣ ಮೆಣಸನ್ನು ಮಿತವಾಗಿ ಬಳಸಬಹುದು. ಹುಳಿಗಾಗಿ ಟೊಮ್ಯಾಟೊವನ್ನು ಹೆಚ್ಚಾಗಿ ಅವಲಂಬಿಸುವ ಬದಲು ನೆಲ್ಲಿಪುಡಿ, ಹಳೆಯ ಹುಣಸೆಹಣ್ಣು ಅಥವಾ ದಾಳಿಂಬೆಯ ಹುಳಿಯನ್ನು ಬಳಸಬಹುದು. ಉಪ್ಪಿನಲ್ಲಿ ಸೈಂಧವ ಲವಣವನ್ನು ಬಳಸಬಹುದು.
ತೆಂಗಿನಕಾಯಿ, ಎಳನೀರು ಮತ್ತು ಸಿಹಿ ಹಣ್ಣುಗಳು: ಶರದೃತುವಿನಲ್ಲಿ ತೆಂಗಿನಕಾಯಿ ಮತ್ತು ತೆಂಗಿನ ಹಾಲಿನಿಂದ ತಯಾರಿಸಿದ ಅಡುಗೆಗಳು ಹಿತಕರವಾಗಿರಬಹುದು. ಎಳನೀರನ್ನೂ ಸೇವಿಸ ಬಹುದು. ಹಣ್ಣುಗಳಲ್ಲಿ ದಾಳಿಂಬೆ, ಸಪೋಟ, ಸೀತಾಫಲ, ಅಂಜೂರ ಮತ್ತು ಖರ್ಜೂರ ಮುಂತಾದ ಸಿಹಿ ಹಾಗೂ ತಂಪು ಗುಣದ ಹಣ್ಣುಗಳನ್ನು ಆಯ್ಕೆ ಮಾಡಬಹುದು. ದೈನಂದಿನ ಆಹಾರದಲ್ಲಿ ತುಪ್ಪಕ್ಕೂ ಸ್ಥಾನವಿರಲಿ. ಹಾಲು ಮತ್ತು ಬೆಣ್ಣೆಯನ್ನು ಬಳಸಬಹುದು. ಆದರೆ ಮೊಸರು, ಹುಳಿ ಮಜ್ಜಿಗೆ, ಚೀಸ್ ಮತ್ತು ಪನ್ನೀರ್‌ಗಳ ನಿರಂತರ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ. ಮೊಸರು ತಂಪಾಗಿದೆ ಎಂಬ ಕಾರಣಕ್ಕೆ ಅದು ಶರದೃತುವಿನಲ್ಲಿ ಎಲ್ಲರಿಗೂ ಸೂಕ್ತ ಎಂದು ಭಾವಿಸುವುದು ಸರಿಯಲ್ಲ.
ಆಯುರ್ವೇದದ ಪ್ರಕಾರ ಮೊಸರು ದೇಹದ ಉಷ್ಣತೆಯನ್ನು ಹೆಚ್ಚಿಸುವ ಸ್ವಭಾವ ಹೊಂದಿದ್ದು, ಪಿತ್ತ ಮತ್ತು ರಕ್ತದ ಸಮಸ್ಯೆ ಇರುವವರಿಗೆ ವಿಶೇಷವಾಗಿ ಗಮನ ಅಗತ್ಯ. ಆಯುರ್ವೇದದಲ್ಲಿ ಶರದೃತುವಿನಲ್ಲಿ ಮೊಸರಿನ ಸೇವನೆಗೆ ವಿಶೇಷ ನಿರ್ಬಂಧವಿದೆ. ಅದರಲ್ಲೂ ರಾತ್ರಿ ಸಮಯದಲ್ಲಿ ಮೊಸರು ಸೇವಿಸುವುದನ್ನು ಸಂಪೂರ್ಣವಾಗಿ ತಪ್ಪಿಸುವುದು ಉತ್ತಮ. ಮೊಸರಿನ ಬದಲು ಸ್ವಲ್ಪವೂ ಹುಳಿಯಿಲ್ಲದ ಮೊಸರಿಗೆ ಸಾಕಷ್ಟು ನೀರು ಸೇರಿಸಿ ಚೆನ್ನಾಗಿ ಕಡೆದು ತಯಾರಿಸಿದ ಮಜ್ಜಿಗೆಯನ್ನು ಬಳಸಬಹುದು. ಇದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ತಯಾರಿಸುವ ಸಿಹಿ ಮಜ್ಜಿಗೆ ಶರದೃತುವಿನಲ್ಲಿ ಹೆಚ್ಚು ಹಿತಕರವಾದ ಆಯ್ಕೆಯಾಗಿದೆ.
ಕರಿದ ತಿಂಡಿ ತಿನ್ನಲೇಬಾರದೇ? : ದಸರೆಯ ಹಬ್ಬದಲ್ಲಿ ಕರಿದ ತಿಂಡಿಗಳನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದು ಕಷ್ಟವಾಗಬಹುದು. ಆದರೆ ತಿಂಡಿಯಷ್ಟೇ ಮುಖ್ಯ ಅದರ ತಯಾರಿಕೆಯ ವಿಧಾನ ಮತ್ತು ಸಂಗ್ರಹಣೆ. ತುಪ್ಪ ಅಥವಾ ಬೆಣ್ಣೆಯಲ್ಲಿ ತಯಾರಿಸಿದ ಕರಿದ ಪದಾರ್ಥಗಳನ್ನು ಮಿತವಾಗಿ ಸೇವಿಸಬಹುದು. ತುಪ್ಪ ಮತ್ತು ಉತ್ತಮ ಗುಣಮಟ್ಟದ ಫಿಲ್ಟರ್ಡ್ ಎಣ್ಣೆಯನ್ನು ಸೇರಿಸಿ ಬಳಸಬಹುದು. ಆದರೆ ತಿಂಡಿಗಳನ್ನು ತಯಾರಿಸಿ ತಿಂಗಳುಗಟ್ಟಲೆ ಇಟ್ಟು ಸೇವಿಸುವುದು ಮಾತ್ರ ಒಳ್ಳೆಯ ಅಭ್ಯಾಸವಲ್ಲ. ತಾಜಾ ಆಹಾರ, ಕಡಿಮೆ ಸಂಗ್ರಹಣೆ, ಮಿತ ಪ್ರಮಾಣ ಎಂಬ ಮೂರು ವಿಚಾರಗಳು ಹಬ್ಬದ ದಿನಗಳಲ್ಲೂ ನೆನಪಿರಲಿ.
ಹಾಲು, ಮಜ್ಜಿಗೆ ಮತ್ತು ತಂಬುಳಿ, ಒಂದೇ ವರ್ಗವಲ್ಲ: ಈ ಋತುವಿನಲ್ಲಿ ಹಾಲು ಮತ್ತು ಬೆಣ್ಣೆ ಬಳಸಬ ಹುದಾದರೂ, ಹುಳಿ ಮಜ್ಜಿಗೆ ಅಥವಾ ಮೊಸರಿನ ನಿರಂತರ ಬಳಕೆಯನ್ನು ತಪ್ಪಿಸುವುದು ಉತ್ತಮ. ಅದರ ಬದಲಿಗೆ ಕಹಿ ಮತ್ತು ಒಗರು ಪದಾರ್ಥಗಳಿಂದ ತಯಾರಿಸಿದ ತಂಬುಳಿಗಳನ್ನು ಬಳಸಬಹುದು. ಇದು ನಮ್ಮ ಸಾಂಪ್ರದಾಯಿಕ ಅಡುಗೆ ಪದ್ಧತಿಯಲ್ಲಿರುವ ಒಂದು ಸುಂದರವಾದ ಋತುಜ್ಞಾನವೇ ಸರಿ.
ಮಾಂಸಾಹಾರಿಗಳಿಗೆ: ಮಾಂಸಾಹಾರ ಸೇವಿಸುವವರು ನೀರು ಬಾತುಕೋಳಿ ಮೊಟ್ಟೆ, ಕೋಳಿ ಮೊಟ್ಟೆಯ ಬಿಳಿಭಾಗ, ಆಡಿನ ಮಾಂಸ ಮತ್ತು ಸಿಹಿನೀರಿನ ಸಣ್ಣ ಮೀನುಗಳನ್ನು ಆಯ್ಕೆ ಮಾಡಬಹುದು. ಸಮುದ್ರದ ಜೀವಿಗಳ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ. ಮಾಂಸಾಹಾರದ ಜೊತೆಗೆ ಹಾಲು ಅಥವಾ ಮೊಸರನ್ನು ಸೇವಿಸುವುದನ್ನೂ ತಪ್ಪಿಸುವುದು ಸೂಕ್ತ.
ನೀರಿಗೂ ಋತುಚರ್ಯೆ ಬೇಕು: ಶರದೃತುವಿನಲ್ಲಿ ಕೇವಲ ಆಹಾರವಲ್ಲ, ನೀರಿನ ಆಯ್ಕೆಯಲ್ಲೂ ಸ್ವಲ್ಪ ಗಮನ ಕೊಡಬಹುದು. ಕೊತ್ತಂಬರಿ ಬೀಜದ ಪುಡಿ ಅಥವಾ ಒಣ ಶುಂಠಿಯ ಪುಡಿಯನ್ನು ನೀರಿಗೆ ಹಾಕಿ ಕುದಿಸಿ ಬಳಸಬಹುದು. ದಿನವಿಡೀ ಬಾಯಾರಿಕೆಗೆ ಅನುಗುಣವಾಗಿ ಇದನ್ನು ಸೇವಿಸಬಹುದು. ಒಣದ್ರಾಕ್ಷಿ ನೀರು, ಲಾವಂಚ ನೀರು ಮತ್ತು ಭದ್ರಮುಷ್ಟಿ ನೀರನ್ನೂ ಬಳಸಬಹುದು. ಎಳನೀರು ಸಹ ಉತ್ತಮ ಆಯ್ಕೆ. ಹಬ್ಬದ ದಿನ ಭೂರಿ ಭೋಜನ ಮಾಡಿ ಅಜೀರ್ಣ, ಹುಳಿತೇಗು ಅಥವಾ ಎದೆ ಉರಿ ಉಂಟಾದಾಗಲೂ ಇಂತಹ ಸರಳ ಪಾನೀಯಗಳು ಉಪಯುಕ್ತ ವಾಗಬಹುದು. ಆದರೆ ನೀರು ಕುಡಿಯುವುದಕ್ಕೂ ಒಂದು ಸರಳ ನಿಯಮವಿದೆ. ಬಾಯಾರಿಕೆಯನ್ನು ಗಮನಿಸಿ ಕುಡಿಯಿರಿ. ಊಟದ ಸಂದರ್ಭದಲ್ಲಿ ಅಗತ್ಯವಿರುವಷ್ಟು ಸ್ವಲ್ಪ ಸ್ವಲ್ಪವಾಗಿ ಸೇವಿಸಬಹುದು.
ಋತುವನ್ನು ಅನುಸರಿಸುವುದೇ ನಿಜವಾದ ಹೆಲ್ತ್ ಟ್ರೆಂಡ್: ಇಂದು ಆರೋಗ್ಯದ ಬಗ್ಗೆ ತಿಳಿದು ಕೊಳ್ಳಲು ನಮ್ಮ ಮುಂದೆ ಸಾವಿರಾರು ರೀಲ್ಸ್, ವಿಡಿಯೋಗಳು ಮತ್ತು ಸಲಹೆಗಳಿವೆ. ಆದರೆ ಎಲ್ಲರಿಗೂ, ಎಲ್ಲ ಕಾಲದಲ್ಲೂ ಒಂದೇ ಸಲಹೆ ಅನ್ವಯಿಸುವುದಿಲ್ಲ. ಹೇಮಂತದಲ್ಲಿ ಶಕ್ತಿವರ್ಧಕ ವಾಗಿರುವ ಆಹಾರ ಅಥವಾ ವ್ಯಾಯಾಮ ಗ್ರೀಷ್ಮದಲ್ಲಿ ಸೂಕ್ತವಾಗದೇ ಇರಬಹುದು. ಒಂದು ಋತುವಿನಲ್ಲಿ ಹಿತವಾಗಿರುವ ಪದಾರ್ಥ ಮತ್ತೊಂದು ಋತುವಿನಲ್ಲಿ ಅಷ್ಟೇ ಹಿತಕರವಾ ಗಿರಬೇಕೆಂದಿಲ್ಲ. ಆದ್ದರಿಂದ ಆರೋಗ್ಯಕರ ಜೀವನಶೈಲಿಗೆ ನಮ್ಮ ರೆಫರೆನ್ಸ್ ಪಾಯಿಂಟ್ ಯಾವುದೋ ಒಂದು ಟ್ರೆಂಡಿಂಗ್ ವಿಡಿಯೋ ಆಗುವುದಕ್ಕಿಂತ ಪ್ರಕೃತಿಯ ಋತುಚಕ್ರವೇ ಆಗಬೇಕು. ಶರದೃತು ನಮಗೆ ಹೇಳುವ ಪಾಠವೂ ಇದೇ. ಪ್ರಕೃತಿ ಬದಲಾಗುವಾಗ, ನಮ್ಮ ತಟ್ಟೆಯೂ ಸ್ವಲ್ಪ ಬದಲಾಗಲಿ. ಪಿತ್ತವನ್ನು ಶಮನಗೊಳಿಸುವ ಸರಳ, ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಆರಿಸಿಕೊಳ್ಳೋಣ. ಹಬ್ಬವನ್ನು ಮನಸಾರೆ ಆಚರಿಸೋಣ; ಆದರೆ ಹಬ್ಬದ ಸಂಭ್ರಮದ ಬೆಲೆ ನಮ್ಮ ಜೀರ್ಣಾಂಗ ಮತ್ತು ಆರೋಗ್ಯವಾಗದಂತೆ ನೋಡಿಕೊಳ್ಳೋಣ.
ಋತುವನ್ನು ಅರಿತು ಬದುಕುವುದು ಎಂದರೆ ಪ್ರಕೃತಿಯೊಂದಿಗೆ ಹೆಜ್ಜೆ ಹಾಕುವುದು. ನಮ್ಮ ಹಿರಿಯರು ಋತು ಗಳಿಗೆ ತಕ್ಕಂತೆ ಆಹಾರ ಪದ್ಧತಿಗಳನ್ನು ರೂಪಿಸಿಕೊಂಡಿದ್ದರ ಹಿಂದೆ ಕೇವಲ ಸಂಪ್ರದಾಯವಲ್ಲ, ದೇಹ ಮತ್ತು ಪ್ರಕೃತಿಯ ನಡುವಿನ ಸೂಕ್ಷ್ಮ ಸಂಬಂಧದ ಅರಿವೂ ಇತ್ತು. ಇಂದು ನಮ್ಮ ಜೀವನಶೈಲಿ ವೇಗವಾಗಿ ಬದಲಾಗುತ್ತಿದ್ದರೂ, ಆ ಮೂಲ ಜ್ಞಾನವನ್ನು ಆಧುನಿಕ ಬದುಕಿಗೆ ಅರ್ಥಪೂರ್ಣವಾಗಿ ಅಳವಡಿಸಿಕೊಳ್ಳಬಹುದು.
ಹಬ್ಬದ ದಿನಗಳಲ್ಲಿ ವೈವಿಧ್ಯಮಯ ಆಹಾರಗಳನ್ನು ಸವಿಯುವುದು ತಪ್ಪಲ್ಲ. ಆದರೆ ದೇಹದ ಸೂಚನೆಗಳನ್ನು ಆಲಿಸಿ, ಹಸಿವಿಗೆ ತಕ್ಕಂತೆ ತಿನ್ನುವುದು, ಅತಿಭೋಜನವನ್ನು ತಪ್ಪಿಸುವುದು ಮತ್ತು ಋತುವಿಗೆ ಹೊಂದುವ ಆಹಾರವನ್ನು ಆಯ್ಕೆ ಮಾಡುವುದು ನಮ್ಮ ಕೈಯಲ್ಲಿದೆ. ಪ್ರಕೃತಿಯ ಲಯವನ್ನು ಗೌರವಿಸಿದಾಗ, ಆರೋಗ್ಯವೂ ನಮ್ಮ ದೈನಂದಿನ ಬದುಕಿನ ಸಹಜ ಭಾಗವಾಗುತ್ತದೆ.