Dr H G Daddi Column: ಪೌರಕಾರ್ಮಿಕರಿಗೆ ಯೋಗ್ಯ ಬದುಕು ಮನುಷ್ಯತ್ವದ ಜರೂರು
ಪೌರಕಾರ್ಮಿಕರು, ಸವಿತಾ ಸಮಾಜದ ಬಂಧುಗಳು, ಬಟ್ಟೆ ಹೊಲಿಯುವ ಸಿಂಪಿಗರು, ನಮ್ಮ ಚಪ್ಪಲಿ-ಬೂಟುಗಳನ್ನು ಹೊಲಿಯುವ ಮತ್ತು ಅವು ಮಿರಮಿರನೆ ಮಿಂಚುವಂತೆ ಮಾಡುವ ಚಮ್ಮಾರರು ಮತ್ತು ಅಡುಗೆ ಕೆಲಸ ಮಾಡುವವರೆಲ್ಲ ನಾಗರಿಕ ಸಮಾಜವು ಬಯಸುವ ಸೌಂದರ್ಯ ಮತ್ತು ಶುಚಿತ್ವಗಳ ನಿರ್ಮಾತೃಗಳು ಎನ್ನುವುದು ನನ್ನ ಅಭಿಪ್ರಾಯ.
-
ಪೌರಹಿತ
ಡಾ.ಎಚ್.ಜಿ.ದಡ್ಡಿ, ಜಮಖಂಡಿ
ಭಾರತದ ಸಾಧನೆಗಳು ಬೆಟ್ಟದಷ್ಟಿವೆ ನಿಜ. ನಮ್ಮಲ್ಲಿ ವೇದೋಪನಿಷತ್ತುಗಳು, ಮಹಾಕಾವ್ಯ ಗಳು, ಹಲವು ಧರ್ಮಗಳು, ಒಳ್ಳೆಯ ಸಂವಿಧಾನ, ಅಧ್ಯಾತ್ಮ ವಿದ್ಯೆ, ಸಂತ ಪರಂಪರೆ, ಆಧುನಿಕ ಪ್ರಗತಿ, ಕೈಗಾರಿಕೆ ಮತ್ತು ತಂತ್ರಜ್ಞಾನ ಬೆಳವಣಿಗೆ, ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ನಡೆಯುತ್ತಿರುವ ಪ್ರಗತಿ.
ಹೀಗೆ ನಾವು ಮೆಚ್ಚುಗೆಯಿಂದ ಮಾತನಾಡಲು ಹತ್ತಾರು ಸಂಗತಿಗಳಿವೆ. ಆದರೆ, ಈ ಸಮಾಜ ವನ್ನು ಸ್ವಚ್ಛವಾಗಿಡಲು ದೀನವಾಗಿ ಶ್ರಮಿಸುವ ಪೌರಕಾರ್ಮಿಕ ಸಮುದಾಯದ ಸಬಲೀ ಕರಣ ನಮ್ಮಲ್ಲಿನ್ನೂ ಸಾಧ್ಯವಾಗಿಲ್ಲ ಎನ್ನುವುದು ಕೇವಲ ಬೇಸರದ ವಿಚಾರ ಮಾತ್ರವಲ್ಲ, ಅದಕ್ಕಿಂತ ಹೆಚ್ಚಾಗಿ ತಲೆ ತಗ್ಗಿಸುವಂತಹ ವಾಸ್ತವ.
ಪೌರಕಾರ್ಮಿಕರು, ಸವಿತಾ ಸಮಾಜದ ಬಂಧುಗಳು, ಬಟ್ಟೆ ಹೊಲಿಯುವ ಸಿಂಪಿಗರು, ನಮ್ಮ ಚಪ್ಪಲಿ-ಬೂಟುಗಳನ್ನು ಹೊಲಿಯುವ ಮತ್ತು ಅವು ಮಿರಮಿರನೆ ಮಿಂಚುವಂತೆ ಮಾಡುವ ಚಮ್ಮಾರರು ಮತ್ತು ಅಡುಗೆ ಕೆಲಸ ಮಾಡುವವರೆಲ್ಲ ನಾಗರಿಕ ಸಮಾಜವು ಬಯಸುವ ಸೌಂದರ್ಯ ಮತ್ತು ಶುಚಿತ್ವಗಳ ನಿರ್ಮಾತೃಗಳು ಎನ್ನುವುದು ನನ್ನ ಅಭಿಪ್ರಾಯ.
ಇವರುಗಳಿಲ್ಲದ ಸಮಾಜ, ಸಂಸ್ಕೃತಿ ಮತ್ತು ನಾಗರಿಕತೆಗಳನ್ನು ಸುಮ್ಮನೆ ನಾಲ್ಕು ದಿನಗಳ ಮಟ್ಟಿಗೆ ಕಲ್ಪಿಸಿಕೊಂಡು ನೋಡಿದರೆ, ಇವರೆಲ್ಲರೂ ಈ ಸಮಾಜದ ಚೆಲುವಿಗೆ ಎಷ್ಟೊಂದು ಅನಿವಾರ್ಯ ಮತ್ತು ಅಗತ್ಯ ಎನ್ನುವುದು ಗೊತ್ತಾಗುತ್ತದೆ. ನಾವು ಬೇಕಾದರೆ ಒಂದಿಷ್ಟು ದಿನಗಳ ಮಟ್ಟಿಗೆ ಸರಕಾರ ಇಲ್ಲದೆ ಇದ್ದರೂ ಇರಬಹುದು. ಅದೇ ಒಂದು ವೇಳೆ, ಪೌರಕಾ ರ್ಮಿಕರು ಒಂದು ವಾರ ಮುಷ್ಕರ ಹೂಡಿದರೆ ನಮ್ಮ ಅವಸ್ಥೆ ಏನಾಗಬಹುದು? ಮನೆ ಯಲ್ಲಿ ಕಸ ಕೊಳೆಯುತ್ತದೆ, ಬೀದಿಗಳು ಗಬ್ಬೆದ್ದು ನಾರುತ್ತವೆ, ಕಸದ ತೊಟ್ಟಿಗಳು ತುಂಬಿ ತುಳುಕುತ್ತವೆ, ರೋಗರುಜಿನಗಳು ಹರಡುತ್ತವೆ.
ಇದನ್ನೂ ಓದಿ: K V Chandramouli Column: ಕಾರ್ಪೊರೇಟ್ ಆಸ್ಪತ್ರೆ ಅನುಭವ: ಚಿಕಿತ್ಸೆ, ಸಹನೆ, ಖರ್ಚಿನ ಪಾಠ
ಆದರೆ, ಈ ‘ಸಭ್ಯ ಸಮಾಜ’ವು ಪೌರಕಾರ್ಮಿಕರ ಕೆಲಸಕ್ಕಿರುವ ಮಹತ್ತ್ವವನ್ನು ಅರಿತು ಕೊಂಡಿಲ್ಲ; ಅವರನ್ನು ಮಾನವ ಘನತೆಯಿಂದ ನಡೆಸಿಕೊಳ್ಳುತ್ತಿಲ್ಲ. ಬದಲಿಗೆ ಪೌರ ಕಾರ್ಮಿಕರಲ್ಲಿ ಕೀಳರಿಮೆ ಹುಟ್ಟಿಸಿ, ಅವರ ಬದುಕು ‘ಶಾಪಗ್ರಸ್ತ’ ಎನ್ನುವಂತೆ ಮಾಡಲಾ ಗಿದೆ. ತನ್ನ ಅರ್ಥಪೂರ್ಣ ಅಸ್ತಿತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವ ಒಂದು ಸಮಾಜ ಇದಕ್ಕೆ ರಚನಾತ್ಮಕ ಕ್ರಮಗಳ ರೂಪದಲ್ಲಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಆದರೆ, ಇಂದು ದುರಂತ ನೋಡಿ. ಕರ್ನಾಟಕ ಸರಕಾರದ ಅಂಕಿಅಂಶಗಳ ಪ್ರಕಾರ, ನಮ್ಮಲ್ಲಿರುವ ಪೌರ ಕಾರ್ಮಿಕರ ಸಂಖ್ಯೆ ಕೇವಲ 7-8 ಸಾವಿರವಂತೆ!
ಇನ್ನು ಭಾರತದ ಮಟ್ಟದಲ್ಲಿ ಇರುವ ಈ ಬಂಧುಗಳ ಸಂಖ್ಯೆ 60 ಸಾವಿರದ ಆಸುಪಾಸು ಎಂದು ಹೇಳಲಾಗುತ್ತಿದೆ!! ಇದು ಸತ್ಯವನ್ನು ಮರೆಮಾಚುವ ಆತ್ಮವಂಚನೆ. ಏಕೆಂದರೆ, ಬೆಂಗಳೂರು ನಗರವೊಂದರ 50 ಸಾವಿರಕ್ಕಿಂತ ಹೆಚ್ಚು ಪೌರಕಾರ್ಮಿಕರು ದಿನ ಬೆಳಗಾದರೆ ಕೆಲಸ ಮಾಡುತ್ತಿದ್ದಾರೆ. ಇನ್ನು ನಮ್ಮಲ್ಲಿರುವ ಪುರಸಭೆಗಳು, ಪಟ್ಟಣ ಪಂಚಾಯಿತಿಗಳು, ನಗರಸಭೆಗಳು, ಮಹಾನಗರ ಪಾಲಿಕೆಗಳು, ಗ್ರೇಟರ್ ಎನ್ನುವ ಹೆಸರಿನ ನಗರಗಳು ಇವೆಲ್ಲ ವನ್ನೂ ಪರಿಗಣಿಸಿ, ಇವುಗಳ ವ್ಯಾಪ್ತಿಯಲ್ಲಿರುವ ಜನಸಂಖ್ಯೆ, ಪೇಟೆ-ಪಟ್ಟಣಗಳ ಸ್ವರೂಪ ವನ್ನು ಕಣ್ಮುಂದೆ ತಂದುಕೊಂಡರೆ, ನಮ್ಮಲ್ಲಿ ಎಷ್ಟು ಲಕ್ಷ ಪೌರಕಾರ್ಮಿಕರು ವೃತ್ತಿನಿರತ ರಾಗಿದ್ದಾರೆ ಎನ್ನುವುದರ ಚಿತ್ರಣ ಖಂಡಿತ ಗೊತ್ತಾಗುತ್ತದೆ.
ಇದು 21ನೇ ಶತಮಾನದ ಅತ್ಯಾಧುನಿಕ ಯುಗ. ವಿಜ್ಞಾನ-ತಂತ್ರಜ್ಞಾನಗಳ ಪರಾಕಾಷ್ಠೆಯ ಯುಗವಿದು. ನಮ್ಮ ಒಳಿತಿಗೆ ಬೇಕಾದ ತಂತ್ರಜ್ಞಾನವನ್ನು ಕೆಲವೇ ತಿಂಗಳುಗಳಲ್ಲಿ ನಾವು ಅಭಿವೃದ್ಧಿ ಪಡಿಸಬಹುದಾದ ಪರಿಣತಿಯನ್ನು ಸಾಧಿಸಿದ್ದೇವೆ. ಆದರೆ ಈ ಹೆಮ್ಮೆಯು ಎಲ್ಲರಂತೆಯೇ ಮನುಷ್ಯರಾಗಿರುವ ಪೌರಕಾರ್ಮಿಕರ ಸಬಲೀಕರಣಕ್ಕೆ ಒದಗಿಬಂದಿಲ್ಲ ಎನ್ನುವುದು ದುರ್ದೈವದ ಸಂಗತಿ.
ಹೀಗಾಗಿಯೇ, ಈಗಲೂ ಯಾವುದೇ ಕನಿಷ್ಠ ಸುರಕ್ಷತಾ ಕ್ರಮಗಳೂ ಇಲ್ಲದೆ ಕೈಯಲ್ಲಿ ಮಲದ ಗುಂಡಿಯನ್ನು ಸ್ವಚ್ಛ ಮಾಡುವ ಅಮಾನುಷತೆ ನಮ್ಮಲ್ಲಿದೆ. ಇದೊಂದು ರೌರವ ನರಕದ ಬರ್ಬರತೆ. ಹಾಗಾದರೆ, ಘನತೆಯ ಬದುಕಿನ ಕಲ್ಪನೆಗೆ ಅರ್ಥವೇನು? ಇವೆಲ್ಲ ಬರೀ ಭಾಷಣ ಕ್ಕೆ ಸೀಮಿತವೇ? ಈ ಅಮಾನವೀಯತೆ ನಮ್ಮ ಅಂತರಂಗವನ್ನು ಕಲಕಬೇಡವೇ? ನಮ್ಮ ಅಭಿವೃದ್ಧಿ, ಸುಸ್ಥಿರತೆ ಇವಕ್ಕೆಲ್ಲ ಅರ್ಥವೆಲ್ಲಿದೆ? ಇದು ನಿಜಕ್ಕೂ ಪಿಚ್ಚೆನಿಸುವ ಚಿತ್ರಣ. ಅದರಲ್ಲೂ ಪೌರಕಾರ್ಮಿಕರಲ್ಲಿ ಮುಕ್ಕಾಲು ಪಾಲು ಮಹಿಳೆಯರೇ ಇದ್ದಾರೆ ಎನ್ನುವುದು ಸಮಾಜದ ಆತ್ಮಸಾಕ್ಷಿಯನ್ನು ಕಲಕಬೇಕು.
ಮೊದಲಿನಿಂದಲೂ ಈ ಕಸುಬನ್ನು ಮಾಡುತ್ತಿರುವವರು ಸಾಮಾಜಿಕವಾಗಿ ಕಟ್ಟಕಡೆಯ ಸ್ಥಾನದಲ್ಲಿರುವ ಸಮುದಾಯದ ಸೋದರ-ಸೋದರಿಯರು. ಇವರ ಬದುಕಿನಲ್ಲಿ ಆರ್ಥಿಕ ಸಂಕಷ್ಟ, ಜಾತಿ ವ್ಯವಸ್ಥೆಯ ಸಂಕೋಲೆ, ಗುತ್ತಿಗೆದಾರರಿಂದ ನಡೆಯುವ ಶೋಷಣೆ, ಬೇರೆ ವೃತ್ತಿಗಳು ಗೊತ್ತಿಲ್ಲದ ಮಿತಿ, ಶಿಕ್ಷಣದ ಕೊರತೆ, ಬಡತನದ ಬವಣೆ... ಇವುಗಳ ಚಕ್ರವ್ಯೂಹ ಇದ್ದೇಇದೆ.
ನಿಜ ಹೇಳಬೇಕೆಂದರೆ, ದೇಶದಲ್ಲಿ ಎಲ್ಲ ಕಡೆಗಳಲ್ಲೂ ‘ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್’ ಅನ್ನು ನಿಷೇಧಿಸಲಾಗಿದೆ. ಆದರೆ, ಎಲ್ಲ ಚಾರಿತ್ರಿಕ ಕಾನೂನುಗಳಂತೆಯೇ ಇದು ಕೂಡ ಹೆಚ್ಚಾಗಿ ಕಾಗದದ ಮೇಲೆಯೇ ಇದೆ. ಹೀಗಾಗಿ ಕೈಗವಸು, ಮಾಸ್ಕ್, ಹೆಲ್ಮೆಟ್ ಏನೂ ಇಲ್ಲದೆ, ಜೀವದ ಬಗ್ಗೆ ಲೆಕ್ಕಿಸದೆ ಮಲದ ಗುಂಡಿ, ಚರಂಡಿ ಇತ್ಯಾದಿಗಳಿಗೆ ಇಳಿದು, ಇವರೆಲ್ಲ ಸಾವನ್ನು ಬರಮಾಡಿಕೊಳ್ಳುತ್ತಿದ್ದಾರೆ. ಅಥವಾ ಈ ವ್ಯವಸ್ಥೆಯೇ ಅವರನ್ನೆಲ್ಲ ಮೃತ್ಯವಿನ ದವಡೆಗೆ ನೂಕುತ್ತಿದೆ.
ಏಕೆಂದರೆ, ಮಲದ ಗುಂಡಿಯಲ್ಲಿ ಸೃಷ್ಟಿಯಾಗುವ ವಿಷಕಾರಿ ಮೀಥೇನ್ ಅನಿಲ ಇವರ ಪ್ರಾಣವನ್ನೇ ಕ್ಷಣಾರ್ಧದಲ್ಲಿ ಕಸಿದುಕೊಂಡು ಬಿಡುತ್ತದೆ. ಬದುಕುಳಿದಿರುವವರಲ್ಲಿ ಕೀಳರಿಮೆಯ ಮಾನಸಿಕ ಸಮಸ್ಯೆಯ ಜೊತೆಗೆ ಶ್ವಾಸಕೋಶದ ಸೋಂಕು ಇತ್ಯಾದಿ ದೈಹಿಕ ಅನಾರೋಗ್ಯವೂ ಕಾಡುತ್ತದೆ. ಇವರಿಗೆ ಆಯುಷ್ಮಾನ್ ಭಾರತ್ ತರಹದ ಯೋಜನೆಗಳ ಸೌಲಭ್ಯವಿದೆ, ನಿಜ. ಆದರೆ, ಆಧುನಿಕ ತಂತ್ರಜ್ಞಾನಾಧಾರಿತ ಸ್ಕ್ಯಾವೆಂಜಿಂಗ್ ವ್ಯವಸ್ಥೆ ಯನ್ನೇ ನಾವು ಸೃಷ್ಟಿಸಿ, ಪ್ರಾಮಾಣಿಕವಾಗಿ ಜಾರಿಗೆ ತರಬೇಕಾಗಿದೆ. ಇದೇ ಮಾನವೀಯತೆಗೆ ನಿಜವಾದ ಭೂಷಣ!
ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗ ಅಸ್ತಿತ್ವಕ್ಕೆ ಬಂದು 32 ವರ್ಷಗಳೇ ಆಗಿವೆ. ಆದರೆ, ಅದು ಸಾಧಿಸಿರುವ ಪ್ರಗತಿ ನಿರೀಕ್ಷಿತ ವೇಗದಲ್ಲಿಲ್ಲ. ಪುನರ್ವಸತಿ, ಒಳ್ಳೆಯ ವೇತನ, ಸುರಕ್ಷತಾ ಕ್ರಮಗಳು, ಉಚಿತ ಆರೋಗ್ಯಸೇವೆ, ಈ ಕುಟುಂಬಗಳ ಮಕ್ಕಳಿಗೆ ಆಧುನಿಕ ಶಿಕ್ಷಣ, ಜಾಗೃತಿ ಇವೆಲ್ಲವನ್ನೂ ನಾವು ಒದಗಿಸಬೇಕಾಗಿದೆ. 2013ರ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆಯ ಪ್ರಕಾರ, ನಮ್ಮ ಸಮಾಜವು ರೋಬೋಟಿಕ್ ಸ್ಕ್ಯಾವೆಂಜಿಂಗ್ ಯಂತ್ರ ಗಳ ಆವಿಷ್ಕಾರದ ಕಡೆಗೆ ಹೋಗಬೇಕಾಗಿದೆ.
ಕೇಂದ್ರ ಸರಕಾರವು 2023ರ ಜುಲೈನಲ್ಲಿ ಪೌರಕಾರ್ಮಿಕರಶ್ರೇಯಸ್ಸಿಗೆಂದು ‘ನಮಸ್ತೆ’ ( NAMASTE- National Action for Mechanised Sanitation Ecosystem) ಯೋಜನೆಯನ್ನು ರೂಪಿಸಿ, ಇದಕ್ಕೆಂದು 359 ಕೋಟಿ ರೂಪಾಯಿ ಕೊಟ್ಟಿದೆ. ನಗರ ಸ್ಥಳೀಯ ಸಂಸ್ಥೆಗಳ ಮಟ್ಟ ದಲ್ಲಿನ ಈ ಯೋಜನೆಯಡಿ ‘ಸ್ಯಾನಿಟೇಶನ್ ಯಂತ್ರ’ಗಳ ಖರೀದಿಗೆಂದು 3.5 ಲಕ್ಷ ರುಪಾಯಿ ಸಬ್ಸಿಡಿ ಕೊಡಲಾಗುತ್ತಿದೆ.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಜತೆಗೂಡಿ ಜಾರಿಗೆ ತರುತ್ತಿರುವ ಈ ಯೋಜನೆಯಡಿ ಸೂಕ್ತ ತರಬೇತಿ, ಸ್ವಸಹಾಯ ಗುಂಪುಗಳ ರಚನೆ, ಆರೋಗ್ಯ ವಿಮೆ, ಸುರಕ್ಷತಾ ಕ್ರಮಗಳು, ಆರ್ಥಿಕ ನೆರವು, ಸ್ಯಾನಿಪ್ರೆನ್ಯೂರ್ ಬೆಳೆಸುವ ಪರಿಕಲ್ಪನೆ ಮುಂತಾದ ಉದ್ದೇಶಗಳಿವೆ.
ಪೌರಕಾರ್ಮಿಕರ ಸಬಲೀಕರಣ ಕೇವಲ ಸರಕಾರಗಳಿಂದ ಆಗುವಂಥದ್ದಲ್ಲ. ಬದಲಿಗೆ, ನಮ್ಮ ಸಮಾಜದ ಮನೋಭಾವದ ಬಗೆಯಲ್ಲಿ ಕ್ರಾಂತಿಕಾರಕ ಪರಿವರ್ತನೆ ಆಗಬೇಕಾಗಿದೆ. ಅಂತಹ ಸಂಕಲ್ಪ ನಮ್ಮೆಲ್ಲರದೂ ಆಗಬೇಕು. ಈ ಹೊಣೆಗಾರಿಕೆಯನ್ನು ನಾವೆಲ್ಲರೂ ಅರಿತು, ಮುಂದಡಿ ಇಡಬೇಕು. ಕುವೆಂಪು ತಮ್ಮ 24ನೇ ವಯಸ್ಸಿನಲ್ಲಿ ಬರೆದ ‘ಜಲಗಾರ’ ನಾಟಕದಲ್ಲಿ, ಸಾಕ್ಷಾತ್ ಶಿವನನ್ನೇ ಜಾಡಮಾಲಿಯ ಮುಂದೆ ತಂದು ನಿಲ್ಲಿಸುತ್ತಾರೆ. ಇದರಲ್ಲಿ ಅಪಮಾನಿತ ಬದುಕು ನಡೆಸುವವರ ಉನ್ನತೀಕರಣವಿದೆ. ಈಗ ತಂತ್ರಜ್ಞಾನದ ಮೂಲಕ ನಾವಿದನ್ನು ಸಾಧಿಸಬೇಕು.