Jitendra Kundeshwara Column: ತುಳುವರ ದಶಕಗಳ ಹಕ್ಕೊತ್ತಾಯಕ್ಕೆ ಅಧಿಕೃತ ಮನ್ನಣೆ
ಇದು ತುಳು ಭಾಷೆಯ ಚರಿತ್ರೆಗೆ ಮಹತ್ವದ ಮುನ್ನುಡಿ ಬರೆಯಬಹುದು ಎನ್ನುವ ಆಸೆಯಲ್ಲಿ ಇಡೀ ತುಳುನಾಡು ಕಾಯುತ್ತಿದೆ. ಇದು ಸಂಘರ್ಷದ ಹಾದಿಯಲ್ಲ. ಬದಲಿಗೆ ತಾಯಿ ಭುವನೇಶ್ವರಿಯ ಮಡಿಲಲ್ಲಿ ಕುಳಿತ ತಾಯಿ ತುಳುವಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರವು ಅಪಾರ ಪ್ರೀತಿ ಮತ್ತು ಗೌರವದಿಂದ ಒಪ್ಪಿಸುತ್ತಿರುವ ಸಾಂಸ್ಕೃತಿಕ ಕಿರೀಟ ಎನ್ನಬಹುದು.
-
ದೇಶಭಾಷೆ
ಜಿತೇಂದ್ರ ಕುಂದೇಶ್ವರ
ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಇಂದು (ಸೆ.18) ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳುವನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಸಾಧ್ಯತೆಗಳು ದಟ್ಟವಾಗಿದೆ. ಇದು ತುಳು ಭಾಷೆಯ ಚರಿತ್ರೆಗೆ ಮಹತ್ವದ ಮುನ್ನುಡಿ ಬರೆಯಬಹುದು ಎನ್ನುವ ಆಸೆಯಲ್ಲಿ ಇಡೀ ತುಳುನಾಡು ಕಾಯುತ್ತಿದೆ. ಇದು ತುಳುವರು ಬಹು ವರ್ಷಗಳಿಂದ ಕಾಯುತ್ತಿರುವ ಗಳಿಗೆ
ದೈವಾರಾಧನೆಯ ಪಾವಿತ್ರ್ಯ, ಯಕ್ಷಗಾನದ ಝೇಂಕಾರ, ಜನಪದ ನಂಬಿಕೆಗಳ ಜೀವನಾಡಿಯಾಗಿ ರುವ ದೇವರ ನಾಡು ತುಳುನಾಡಿನ ಆಡು ಭಾಷೆಗೆ ಈಗ ಕರ್ನಾಟಕದ ಹೃದಯಸಿಂಹಾಸನದಲ್ಲಿ ರಾಜಮರ್ಯಾದೆ ಸಿಗುವ ಕಾಲ ಸನ್ನಿಹಿತವಾಗಿದೆ. ಬೆರ್ಮೆರ್ ಮೂಲದ, ಪರಶುರಾಮ ಸೃಷ್ಟಿಯ ತುಳುನಾಡಿನ ಮಂದಿ ಕಳೆದ ಐದು ದಶಕಗಳಿಂದ ಎದೆಗಿಳಿಸಿಕೊಂಡು ಬಂದ ಅಭಿಮಾನದ ತಪಸ್ಸಿಗೆ ಸಾಕ್ಷಿಯಾಗಿ, ಮಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳುವನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಸಾಧ್ಯತೆಗಳು ದಟ್ಟವಾಗಿದೆ.
ಇದು ತುಳು ಭಾಷೆಯ ಚರಿತ್ರೆಗೆ ಮಹತ್ವದ ಮುನ್ನುಡಿ ಬರೆಯಬಹುದು ಎನ್ನುವ ಆಸೆಯಲ್ಲಿ ಇಡೀ ತುಳುನಾಡು ಕಾಯುತ್ತಿದೆ. ಇದು ಸಂಘರ್ಷದ ಹಾದಿಯಲ್ಲ. ಬದಲಿಗೆ ತಾಯಿ ಭುವನೇಶ್ವರಿಯ ಮಡಿಲಲ್ಲಿ ಕುಳಿತ ತಾಯಿ ತುಳುವಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರವು ಅಪಾರ ಪ್ರೀತಿ ಮತ್ತು ಗೌರವದಿಂದ ಒಪ್ಪಿಸುತ್ತಿರುವ ಸಾಂಸ್ಕೃತಿಕ ಕಿರೀಟ ಎನ್ನಬಹುದು.
ಇದನ್ನೂ ಓದಿ: Jitendra Kundeshwara Column: ರಾಮಮಂದಿರ ಹೆಸರಲ್ಲಿ ಬಡವರಿಗೆ ನೂರಾರು ಸೂರು!
ಐದು ದಶಕಗಳ ಸಾರ್ಥಕ ಪಯಣ
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಕುರಿತಾಗಿ ಅನೇಕ ಅಭಿಮಾನದ ಹೋರಾಟಗಳು ನಡೆದಿವೆ. ಅದರಲ್ಲಿ ಸಾರ್ವಜನಿಕ ಗಮನಕ್ಕೆ ಬಂದ ಕೆಲವೊಂದು ಹೋರಾಟಗಳನ್ನು ಉಲ್ಲೇಖಿ ಸುವುದಾದರೆ: 1970ರಲ್ಲಿ ಮಂಗಳೂರಿನಲ್ಲಿ ‘ತುಳು ಕೂಟ’ ಸ್ಥಾಪನೆಯಾದ ದಿನದಿಂದ ಭಾಷಾ ಮಾನ್ಯತೆಯ ಪ್ರೀತಿಯ ಕೂಗು ಅಚ್ಚುಕಟ್ಟಾಗಿ ಆರಂಭವಾಯಿತು. ಭಾಷಾಭಿಮಾನಿಗಳು, ವಿದ್ವಾಂಸರು ಮನೆಮನೆಗಳಲ್ಲಿ ತುಳುವಿನ ಅಸ್ಮಿತೆಯನ್ನು ಜಾಗೃತಗೊಳಿಸಿದರು.
2003ರಲ್ಲಿ ಕೇಂದ್ರ ಸರ್ಕಾರ 92ನೇ ಸಂವಿಧಾನ ತಿದ್ದುಪಡಿಯ ಮೂಲಕ ಉಗ್ರವಾದಿಯ ಕಪಿಮುಷ್ಟಿ ಯಲ್ಲಿದ್ದ ಪ್ರದೇಶದ ಬೋಡೋ, ಡೋಗ್ರಿ, ಸಂತಾಲಿ ಹಾಗೂ ಮೈಥಿಲಿ ಭಾಷೆಗಳಿಗೆ 8ನೇ ಪರಿಚ್ಛೇದದ ಮಾನ್ಯತೆ ನೀಡಿದಾಗ, ಪರಿಗಣನೆಯ ಹಂತದಲ್ಲಿದ್ದ ತುಳುವಿಗೆ ತಾಂತ್ರಿಕ ಕಾರಣ ಗಳಿಂದ ಅವಕಾಶ ಮರೀಚಿಕೆಯಾಯಿತು. ಆದರೂ ತುಳುವರು ಧೃತಿಗೆಡದೆ ತಮ್ಮ ಹಕ್ಕೊತ್ತಾಯವನ್ನು ಇನ್ನಷ್ಟು ಸೃಜನಶೀಲಗೊಳಿಸಿದರು. 2009ರ ಡಿಸೆಂಬರ್‌ನಲ್ಲಿ ಧರ್ಮಸ್ಥಳದ ಉಜಿರೆಯಲ್ಲಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ನಡೆದ ಐತಿಹಾಸಿಕ ‘ವಿಶ್ವ ತುಳು ಸಮ್ಮೇಳನ’ ಜಗತ್ತಿನ ಮೂಲೆಮೂಲೆಗಳಲ್ಲಿರುವ ತುಳುವರನ್ನು ಭಾವನಾತ್ಮಕವಾಗಿ ಒಗ್ಗೂಡಿಸಿತು.
ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಮಹಾಸಮ್ಮೇಳನ ದಲ್ಲಿ ಪಾಲ್ಗೊಂಡು ತುಳುವಿಗೆ ಸಾಂವಿಧಾನಿಕ ಸ್ಥಾನಮಾನ ದೊರಕಿಸಲು ಸರ್ಕಾರದ ಸಂಪೂರ್ಣ ಶಕ್ತಿ ನೀಡುವುದಾಗಿ ಘೋಷಿಸಿ ಹೊಸ ಚೈತನ್ಯ ತುಂಬಿದರು. ನಂತರ 2013ರ ಸೆಪ್ಟೆಂಬರ್ 7ರಂದು ಜಿವಿಎಸ್ ಉಳ್ಳಾಲ್ ನೇತೃತ್ವದ ‘ನಮ್ಮ ತುಳುನಾಡ್ ಟ್ರಸ್ಟ್’ ಸಂಘಟಿಸಿದ ಹಕ್ಕೊತ್ತಾಯ ಜಾಥಾ ಕರಾವಳಿಯ ಸ್ವಾಭಿಮಾನಿ ನಡಿಗೆಯಾಗಿ ಇತಿಹಾಸದ ಪುಟ ಸೇರಿತು.
ಮಂಗಳೂರಿನ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾಹಿತಿಗಳು, ರಂಗಕರ್ಮಿಗಳು, ಯಕ್ಷಗಾನ ಕಲಾವಿದರು ಹಾಗೂ ಸಾರ್ವಜನಿಕರು ಒಟ್ಟಾಗಿ ಹೆಜ್ಜೆ ಹಾಕಿ ತಮ್ಮ ಬೇಡಿಕೆಯನ್ನು ಪ್ರೀತಿಯಿಂದಲೇ ಸರ್ಕಾರದ ಮುಂದೆ ಮಂಡಿಸಿದರು.
ಆಡಳಿತಾತ್ಮಕ ಹೆಜ್ಜೆಗಳು
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ವಿ.ಸುನಿಲ್ ಕುಮಾರ್ ಅವರು ನಾಡಿನ ಹಿರಿಯ ವಿದ್ವಾಂಸ, ಶಿಕ್ಷಣ ತಜ್ಞ ಡಾ.ಎಂ.ಮೋಹನ ಆಳ್ವ ಅವರ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚಿಸಿ ಭಾಷಾ ಮಾನ್ಯತೆಗೆ ಭದ್ರ ಅಡಿಪಾಯ ಹಾಕಿದರು. ಈ ಸಮಿತಿಯು ತುಳುವಿನ ಸಾಹಿತ್ಯಿಕ ಶ್ರೀಮಂತಿಕೆ, ಪ್ರಾಚೀನತೆ ಹಾಗೂ ಶಾಸನಬದ್ಧ ಸಾಧ್ಯತೆಗಳ ಸಮಗ್ರ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಹಸ್ತಾಂತರಿಸಿತು.
2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದ ಪ್ರಸ್ತುತ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಶ್ರದ್ಧೆಯಿಂದ ಈಡೇರಿಸುವ ಕಡೆಗೆ ದೃಢ ಹೆಜ್ಜೆಯಿಟ್ಟಿತು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ವಿಧಾನಸಭೆಯ ಪ್ರಥಮ ಅಧಿವೇಶನದ ತುಳುವಿನ ಬಗ್ಗೆ ಪ್ರಬಲ ದನಿ ಎತ್ತಿದರು. ಅಷ್ಟಕ್ಕೇ ನಿಲ್ಲದೆ, ಕಂಬಳ ಕೂಟದ ಸಮಾಲೋಚನೆಯ ನಂತರ ಸಚಿವಾಲಯ ಮಟ್ಟದಲ್ಲಿ ನಿರಂತರವಾಗಿ ಕಡತಗಳನ್ನು ಬೆನ್ನತ್ತಿ ಆಡಳಿತಾತ್ಮಕ ಕೆಲಸಗಳಿಗೆ ವೇಗ ನೀಡಿದರು.
ತುಳುನಾಡಿನ ತುಳು ಮಾತನಾಡುವ ಎಲ್ಲಾ ಶಾಸಕರು ಕೂಡ ತುಳು ಲಿಪಿಯ ಬಗ್ಗೆ ಅಭಿಯಾನ ದಲ್ಲಿ ಪಾಲ್ಗೊಂಡರು. ಅಧಿವೇಶನದ ತುಳು ಭಾಷೆಯವರಾದ ಸ್ಪೀಕರ್ ಯು.ಟಿ ಖಾದರ್ ಜೊತೆ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ರಾಜೇಶ್ ನಾಯ್ಕ, ಯಶ್‌ಪಾಲ್ ಸುವರ್ಣ ಮೊದಲಾದವರು ತುಳು ಭಾಷೆಯಲ್ಲಿ ಮಾತನಾಡುತ್ತಾ ತುಳುವನ್ನು ಇಡೀ ರಾಜ್ಯದ ಜನಪ್ರತಿನಿಧಿ ಗಳ ವಿಶೇಷ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.
ಕೇವಲ ಭಾಷಣಗಳಿಗೆ ಸೀಮಿತವಾಗದೆ, ಸಚಿವಾಲಯದ ಒಳಗೆ ಕಡತಗಳನ್ನು ಮುನ್ನಡೆಸಲು ಸಂವಿಧಾನದ 345, 346 ಮತ್ತು 347ನೇ ವಿಧಿಗಳ ಆಳವಾದ ಅಧ್ಯಯನ ನಡೆಯಿತು. ಇತರ ರಾಜ್ಯಗಳು ಹೆಚ್ಚುವರಿ ಭಾಷೆಗಳಿಗೆ ಹೇಗೆ ಮಾನ್ಯತೆ ನೀಡಿವೆ ಎಂಬುದನ್ನು ಸಾಕ್ಷ ಸಮೇತ ಕ್ರೋಡೀಕರಿಸಲು ಕಾನೂನು ಇಲಾಖೆಯ ಸಲಹೆ ಪಡೆಯಲಾಯಿತು.
ಇದರ ಭಾಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ಎನ್. ಮಂಜುಳಾ ಅವರು ಸ್ವತಃ ಆಡಳಿತಾತ್ಮಕ ಜವಾಬ್ದಾರಿ ಹೊತ್ತು, 2024ರ ಜನವರಿ 18ರಂದು ಆಂಧ್ರಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಅರೆ-ಸರ್ಕಾರಿ (D.O.) ಪತ್ರಗಳನ್ನು ಬರೆದರು. ಆಂಧ್ರಪ್ರದೇಶದಲ್ಲಿ ತೆಲುಗಿನೊಂದಿಗೆ ಉರ್ದು, ಬಿಹಾರದಲ್ಲಿ ಬಂಗಾಳಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಪಂಜಾಬಿ ಮತ್ತು ಉರ್ದು ಭಾಷೆಗಳನ್ನು ಅಧಿಕೃತಗೊಳಿಸಿದ ನಿಯಮಾವಳಿ ಮತ್ತು ಕಾರ್ಯವಿಧಾನಗಳ ನಕಲುಗಳನ್ನು ಒದಗಿಸುವಂತೆ ಕೋರಲಾಯಿತು.
ಇದಕ್ಕೆ ಸ್ಪಂದಿಸಿದ ಆಂಧ್ರಪ್ರದೇಶ ಸರ್ಕಾರವು 1966ರ ಭಾಷಾ ಕಾಯ್ದೆ ಹಾಗೂ 2022ರ ತಿದ್ದುಪಡಿ ಕಾಯ್ದೆಯ ಅಧಿಕೃತ ಪ್ರತಿಗಳನ್ನು ಕರ್ನಾಟಕಕ್ಕೆ ಕಳುಹಿಸಿಕೊಟ್ಟಿತು. ಈ ಮಾದರಿಯನ್ನು ಖುದ್ದು ಅಧ್ಯಯನ ಮಾಡಲು ಕರ್ನಾಟಕದ ಉನ್ನತ ನಿಯೋಗ ಆಂಧ್ರಪ್ರದೇಶಕ್ಕೆ ತೆರಳುವ ಸಂದರ್ಭದಲ್ಲಿ ಕೊನೆಕ್ಷಣದ ತಾಂತ್ರಿಕ ತೊಡಕುಗಳು ಎದುರಾದಾಗ, ಸಭಾಧ್ಯಕ್ಷ ಯು.ಟಿ. ಖಾದರ್ ಅವರು ತಕ್ಷಣ ಆಂಧ್ರದ ಸಚಿವರು ಹಾಗೂ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ಸರಿಪಡಿಸಿದರು.
ಪರಿಣಾಮವಾಗಿ ಕರ್ನಾಟಕದ ನಿಯೋಗಕ್ಕೆ ಪೂರ್ಣ ಸಹಕಾರ ದೊರೆತು ಅಧ್ಯಯನ ಯಶಸ್ವಿ ಯಾಯಿತು. ಜೊತೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಭಾಷೆಯ ಸಾಹಿತ್ಯಿಕ, ಶಾಸನಬದ್ಧ ಮತ್ತು ಐತಿಹಾಸಿಕ ದಾಖಲೆಗಳನ್ನು ಒದಗಿಸುವಲ್ಲಿ ಇಲಾಖೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕಾರ್ಯನಿರ್ವಹಿಸಿತು. ರಾಜಕೀಯ ಮುಖಂಡರು, ಅಧಿಕಾರಿಗಳು, ತುಳು ವಿದ್ವಾಂಸರು ಹಾಗೂ ಹೋರಾಟಗಾರರ ನಿಸ್ವಾರ್ಥ ಶ್ರಮದ ಫಲವಾಗಿ ಕಡತಗಳು ತಾರ್ಕಿಕ ಹಂತ ತಲುಪಿದವು.
ತುಳು ಸಾಹಿತ್ಯ ಅಕಾಡೆಮಿಯ ಮುಂದಿರಿಸಿಕೊಂಡು ಯಕ್ಷಗಾನ ಅಕಾಡೆಮಿಯ ಸದಸ್ಯ ಜಿವಿಎಸ್ ಉಳ್ಳಾಲ್ ಈ ಎ ಕೆಲಸಕಾರ್ಯಗಳ ಫಾಲೋ ಅಪ್ ಮಾಡಿದರು.
ಅಧಿಕೃತ ಭಾಷೆಗೆ ಸಿಗುವ ಸವಲತ್ತುಗಳು
ಸ್ಥಳೀಯ ಆಡಳಿತದಲ್ಲಿ ತುಳು ಬಳಕೆ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳು, ತಾಲೂಕು ಕೇಂದ್ರಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ತುಳು ಭಾಷೆಯಲ್ಲಿ ಅರ್ಜಿ ಸಲ್ಲಿಕೆ, ನಾಮಫಲಕ ಅಳವಡಿಕೆ ಹಾಗೂ ಪ್ರಕಟಣೆಗಳು ಅಧಿಕೃತಗೊಳ್ಳುತ್ತವೆ.
ಶಿಕ್ಷಣ ಹಾಗೂ ಸಂಶೋಧನೆಗೆ ಬಲ: ಕರಾವಳಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ಗಳಲ್ಲಿ ತುಳು ಭಾಷಾ ಅಧ್ಯಯನ, ಪಠ್ಯಕ್ರಮ ವಿಸ್ತರಣೆ ಮತ್ತು ಭಾಷಾ ಸಂಶೋಧನೆಗೆ ಸರ್ಕಾರದ ಪೂರ್ಣ ಪ್ರಮಾಣದ ನೆರವು ದೊರೆಯುತ್ತದೆ.
ಅಭಿವೃದ್ಧಿ ಪ್ರಾಧಿಕಾರದ ರಚನೆ: ತುಳು ಸಾಹಿತ್ಯ ಅಕಾಡೆಮಿಯು ಉನ್ನತ ಮಟ್ಟದ ಅಭಿವೃದ್ಧಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಲಿದ್ದು, ಭಾಷಾ ಬೆಳವಣಿಗೆಗೆ ಬಜೆಟ್‌ನಲ್ಲಿ ಕೋಟ್ಯಂತರ ರೂಪಾಯಿಗಳ ನಿಗದಿತ ಅನುದಾನ ಹರಿದುಬರುತ್ತದೆ.
8ನೇ ಪರಿಚ್ಛೇದಕ್ಕೆ ಸೇರಿದರೆ ನಾಡಿಗೆ ದಕ್ಕುವ ರಾಷ್ಟ್ರೀಯ ಮನ್ನಣೆ
ರಾಷ್ಟ್ರೀಯ ಹೆಗ್ಗುರುತು ಮತ್ತು ಕರೆನ್ಸಿ: ಭಾರತದ ಅಧಿಕೃತ ಪ್ರಮುಖ ಭಾಷೆಗಳ ಸಾಲಿನಲ್ಲಿ ತುಳು ರಾರಾಜಿಸಲಿದ್ದು, ದೇಶದ ಕರೆನ್ಸಿ ನೋಟುಗಳ ಮೇಲೆ ತುಳು ಲಿಪಿಯ ಅಕ್ಷರಗಳು ಮುದ್ರ ಣಗೊಳ್ಳಲಿವೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವಕಾಶ: ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಗಳನ್ನು ತುಳು ಭಾಷೆಯ ಬರೆಯಲು ಹಾಗೂ ಐಚ್ಛಿಕ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ದೇಶದ ವಿದ್ಯಾರ್ಥಿ ಗಳಿಗೆ ಸುವರ್ಣಾವಕಾಶ ಸಿಗುತ್ತದೆ.
ಕೇಂದ್ರ ಅನುದಾನ ಹಾಗೂ ಸಂಶೋಧನಾ ಪೀಠಗಳು: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹಾಗೂ ಯುಜಿಸಿಯಿಂದ ಭಾಷಾಭಿವೃದ್ಧಿಗಾಗಿ ವಾರ್ಷಿಕ ನೂರಾರು ಕೋಟಿ ರೂಪಾ ಯಿಗಳ ಅನುದಾನ, ವಿಶ್ವವಿದ್ಯಾಲಯಗಳಲ್ಲಿ ಪ್ರತ್ಯೇಕ ಭಾಷಾ ಅಧ್ಯಯನ ಪೀಠಗಳು ಸ್ಥಾಪನೆ ಯಾಗುತ್ತವೆ.
ಸಂಸತ್ತಿನಲ್ಲಿ ತುಳು ದನಿ ಮತ್ತು ಅಕಾಡೆಮಿ ಪ್ರಶಸ್ತಿ: ಸಂಸತ್ ಕಲಾಪಗಳಲ್ಲಿ ಸಂಸದರು ತುಳುವಿನಲ್ಲಿ ಭಾಷಣ ಮಾಡಲು ಅವಕಾಶ ದೊರೆಯಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಪ್ರಶಸ್ತಿಗಳು ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯ ಕ್ರಮಗಳು ನಿರಂತರವಾಗಿ ಪ್ರಸಾರವಾಗಲಿವೆ. ಮಂಗಳೂರಿನ ಮಣ್ಣಿನಲ್ಲಿ ರಾಜ್ಯ ಸರ್ಕಾರವು ತುಳು ಭಾಷೆಗೆ ಅಧಿಕೃತ ಭಾಷೆಯ ಗೌರವ ಮುದ್ರೆ ಒತ್ತಿದರೆ, ಅದು ದೆಹಲಿಯ ಮಟ್ಟದಲ್ಲಿ ಸಂವಿಧಾನದ 8ನೇ ಪರಿಚ್ಛೇದದ ಹೆಬ್ಬಾಗಿಲನ್ನು ಸಲೀಸಾಗಿ ತೆರೆಯಲು ಕರ್ನಾಟಕ ಒದಗಿಸುವ ಅತಿದೊಡ್ಡ ಸಾಂವಿಧಾನಿಕ ಬಲವಾಗಲಿದೆ.