ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Archana R Column: ಮಿಂಚಿ ಮರೆಯಾದ ಬೆಳ್ಳಿಮೋಡ

ತ್ರಿವೇಣಿಯವರು ಸಾಮಾಜಿಕ, ಕೌಟುಂಬಿಕ, ಮನೋವೈಜ್ಞಾನಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಅವರ ಕಾದಂಬರಿಗಳು ಏಕಕಾಲಕ್ಕೆ ಕೌಟುಂಬಿಕ, ಮನೋವೈಜ್ಞಾನಿಕ ಕಾದಂಬರಿಗಳೂ ಆಗಿರ ಬಹುದು. ತ್ರಿವೇಣಿಯವರ ಎಲ್ಲಾ ಕೃತಿಗಳ ಕೇಂದ್ರ ಸ್ತ್ರೀಯರು. ಅಂದಿಗೆ ಹೊಸದಾದ ‘ಮನೋ ವಿಜ್ಞಾನ ಸಂವೇದನೆ’ಯನ್ನು ಸೃಜನಶೀಲ ಸಾಹಿತ್ಯದಲ್ಲಿ ದುಡಿಸಿಕೊಂಡಿದ್ದು, ತ್ರಿವೇಣಿಯವರ ಅಪರೂಪದ ಕಲಾಸೃಷ್ಟಿಗೆ ಸಾಕ್ಷಿಯಾಗಿದೆ.

Dr Archana R Column: ಮಿಂಚಿ ಮರೆಯಾದ ಬೆಳ್ಳಿಮೋಡ

-

Profile
Ashok Nayak Aug 30, 2026 11:38 AM

ಡಾ.ಅರ್ಚನಾ ಆರ್

ಕನ್ನಡದಲ್ಲಿ ವಿಶಿಷ್ಟ ಮನೋ ವೈಜ್ಞಾನಿಕ ಕಾದಂಬರಿಗಳನ್ನು ರಚಿಸಿದ ತ್ರಿವೇಣಿಯವರ ಜನ್ಮದಿನ ಸೆಪ್ಟೆಂಬರ್ 1.

ಕಳೆದ ಶತಮಾನದ 50ರ ದಶಕದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರ ಪ್ರವೇಶಿಸಿ ಕಾದಂಬರಿ ಲೋಕದಲ್ಲಿ ನೆಲೆ ಕಂಡುಕೊಂಡ ಲೇಖಕಿ ತ್ರಿವೇಣಿ. ಮೂರು ಕಥಾ ಸಂಕಲನಗಳು ಮತ್ತು 21 ಕಾದಂಬರಿಗಳನ್ನು ರಚಿಸಿ ಅನಾರೋಗ್ಯದಿಂದ ಬೇಗನೆ ನಮ್ಮನ್ನಗಲಿದರೂ, ಇಂದಿಗೂ ಕನ್ನಡ ಸಾಹಿತ್ಯಲೋಕದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅದಕ್ಕೆ ಕಾರಣ ಅವರು ಆಯ್ಕೆ ಮಾಡಿಕೊಂಡ ವಸ್ತುಗಳ ಗಹನತೆ, ಕತೆಯ ಆಳ ಅಗಲಗಳು, ಅಂದಿನ ಕಾಲಕ್ಕೆ ಹೊಸತಾದ ಮನೋವಿಶ್ಲೇಷಣಾತ್ಮಕ ರಚನೆ, ನವಿರಾದ ಪ್ರೇಮ, ಪ್ರಣಯ, ಮಿತಿಮೀರದ ಬಂಡಾಯದ ಗುಣ.

ತ್ರಿವೇಣಿಯವರು ಸಾಮಾಜಿಕ, ಕೌಟುಂಬಿಕ, ಮನೋವೈಜ್ಞಾನಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಅವರ ಕಾದಂಬರಿಗಳು ಏಕಕಾಲಕ್ಕೆ ಕೌಟುಂಬಿಕ, ಮನೋವೈಜ್ಞಾನಿಕ ಕಾದಂಬರಿಗಳೂ ಆಗಿರ ಬಹುದು. ತ್ರಿವೇಣಿಯವರ ಎಲ್ಲಾ ಕೃತಿಗಳ ಕೇಂದ್ರ ಸ್ತ್ರೀಯರು. ಅಂದಿಗೆ ಹೊಸದಾದ ‘ಮನೋ ವಿಜ್ಞಾನ ಸಂವೇದನೆ’ಯನ್ನು ಸೃಜನಶೀಲ ಸಾಹಿತ್ಯದಲ್ಲಿ ದುಡಿಸಿಕೊಂಡಿದ್ದು, ತ್ರಿವೇಣಿಯವರ ಅಪರೂಪದ ಕಲಾಸೃಷ್ಟಿಗೆ ಸಾಕ್ಷಿಯಾಗಿದೆ.

ಭಾರತೀಯ ಸಾಮಾಜಿಕ ಸಂದರ್ಭದಲ್ಲಿ ಮಹಿಳೆ ಅಪಾರ ಒತ್ತಡಗಳಿಗೆ ಒಳಗಾಗಿರುತ್ತಾಳೆ. ಪುರುಷ ಪ್ರಧಾನ ಸಮಾಜದಲ್ಲಿ ತಾಯಿಯಾಗಿ, ಹೆಂಡತಿಯಾಗಿ ಸೊಸೆಯಾಗಿ ಅವಳು ಪಡುವ ಯಾತನೆ ಅಸಾಧ್ಯವಾದುದು. ಈ ಹೊಣೆಗಾರಿಕೆಯ ನಿರ್ವಹಣೆಯಲ್ಲಿ ಹೆಣ್ಣು ಅನುಭವಿಸುವ ಮಾನಸಿಕ ಒತ್ತಡವೂ ಅಪಾರ. ಇಂತಹ ಸ್ಥಿತಿ ಅವಳನ್ನ ಮಾನಸಿಕ ಅಸ್ವಸ್ಥತೆಯತ್ತ ತಳ್ಳಬಹುದು. ತ್ರಿವೇಣಿ ಅವರಿಗೆ ಕೌಟುಂಬಿಕ ಒತ್ತಡದಲ್ಲಿ ಮಾನಸಿಕ ಅಸ್ವಸ್ಥರಾಗುವ ಮಹಿಳೆಯರ ಸ್ಥಿತಿಗಳು ತೀವ್ರವಾಗಿ ಕಾಡಿದಂತೆ ಕಂಡುಬರುತ್ತದೆ. ಅದಕ್ಕಾಗಿಯೇ ಏನೋ ಅವರು ತಮ್ಮ ಕಾದಂಬರಿ ಗಳಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯರ ಸ್ಥಿತಿಗತಿಗಳನ್ನು ಅತ್ಯಂತ ಕರುಣಾಜನಕವಾಗಿ ಕಟ್ಟಿಕೊಟ್ಟಿದ್ದಾರೆ.

ಇದನ್ನೂ ಓದಿ: Shashidhara Halady Column: ಕೆರೆಯಲ್ಲಿ ನೀರು ತುಂಬಿತು! ಕಣ್ಣಲ್ಲಿ ನೀರು ಜಿನುಗಿತು !

ಮನೋವಿಜ್ಞಾನ ಮತ್ತು ಸಾಹಿತ್ಯ ಅಂತರ್ ಶಿಸ್ತಿನ ಕ್ಷೇತ್ರಗಳಾಗಿವೆ ಸಾಹಿತ್ಯ ಕೃತಿಯೊಂದು ಮನೋ ವಿಜ್ಞಾನವನ್ನು ಅಂತರ್ಗತ ಮಾಡಿಕೊಂಡಾಗ ಅದು ಕಟ್ಟಿಕೊಡುವ ಒಳನೋಟಗಳು ವಿಶೇಷ ವಾಗಿರುತ್ತವೆ ಎಂಬುದಕ್ಕೆ ತ್ರಿವೇಣಿಯವರ ಕಾದಂಬರಿಗಳೇ ಸಾಕ್ಷಿ. ಸಿಗ್ಮಂಡ್ ಫ್ರಾಯ್ಡ್, ಯೂಂಗ್, ಆಡ್ಲರ್ ಮುಂತಾ ದವರ ಮನೋವೈಜ್ಞಾನಿಕ ಸಿದ್ಧಾಂತಗಳು ತ್ರಿವೇಣಿ ಯವರ ಶರಪಂಜರ, ಬೆಕ್ಕಿನ ಕಣ್ಣು, ಮುಚ್ಚಿದ ಬಾಗಿಲು, ದೂರದ ಬೆಟ್ಟ ಕಾದಂಬರಿಗಳಲ್ಲಿ ಅಂತರ್ಗತವಾಗಿವೆ.

ಕನ್ನಡದಲ್ಲಿ ಮೊದಲ ಬಾರಿಗೆ ಮನೋವೈಜ್ಞಾನಿಕ ತಂತ್ರಗಳನ್ನು ಕಾದಂಬರಿಗಳಿಗೆ ತ್ರಿವೇಣಿ ಅವರ ಈ ಹೊಸ ದೃಷ್ಟಿಕೋನದ ಸಾಹಿತ್ಯ ಸೃಷ್ಟಿ ಅವರಿಗೆ ಅಪಾರ ಜನಪ್ರಿಯತೆಯನ್ನು ಗಳಿಸಿಕೊಟ್ಟಿತು. ಇವರು ತಮ್ಮ ಕೃತಿಗಳಲ್ಲಿ ಚರ್ಚಿಸಿರುವ ಮನೋರೋಗಗಳಾದ ಹಿಸ್ಟೀರಿಯಾ, ಖಿನ್ನತೆ, ಫೋಬಿಯಾ, ನಿದ್ರಾಹೀನತೆ, ನಿದ್ರಾಸಂಚಾರಗಳು ಅಂದಿನ ಕಾದಂಬರಿ ಪ್ರಪಂಚಕ್ಕೆ ಹೊಸದಾಗಿದ್ದವು.

ಈ ಮಾನಸಿಕ ಸಮಸ್ಯೆಗಳ ಕುರಿತು ಹೇಳುವಾಗ ಅವು ಕೇವಲ ‘ಕೇಸ್ ಹಿಸ್ಟರಿ’ ಯಾಗದೆ ಮನಶ್ಶಾಸ್ತ್ರದ ತತ್ವಗಳಿಗೆ ಬದ್ಧವಾಗಿದ್ದು ಹಾಗೂ ಹೃದಯಸ್ಪರ್ಶಿ ಮಾನವೀಯ ದಾಖಲೆಗಳು ಆಗಿವೆ. ಅವರು ತಮ್ಮ ಕಾದಂಬರಿಗಳ ಮೂಲಕ ಮಾನಸಿಕವಾಗಿ ಅಸ್ವಸ್ಥರಾದವರ ಪರ ಹೊರಗಿನ ಸಮಾಜ ಕರುಣೆ, ಪ್ರೀತಿ, ಔದಾರ್ಯ, ನಿಸ್ವಾರ್ಥದಿಂದ ವರ್ತಿಸಬೇಕು ಎಂಬ ಕಾಳಜಿಯನ್ನು ವ್ಯಕ್ತಪಡಿಸಿ ದ್ದಾರೆ.

ಮನೋವಿಜ್ಞಾನದಂತೆಯೇ ತ್ರಿವೇಣಿಯವರ ಕಾದಂಬರಿಗಳು ಸ್ತ್ರೀವಾದದ ಹಿನ್ನೆಲೆಯಲ್ಲಿಯೂ ಪ್ರಮುಖ ಎನಿಸಿವೆ. ಸ್ತ್ರೀ ಪುರುಷ ಸಂಬಂಧಗಳ ಬಗ್ಗೆ ಮತ್ತು ಕುಟುಂಬ ವ್ಯವಸ್ಥೆಯ ಬಗ್ಗೆ ಬಹುತೇಕ ಸ್ವಾತಂತ್ರ್ಯೋತ್ತರ ಕಾಲದ ಲೇಖಕರಂತೆ ತ್ರಿವೇಣಿ ಯವರಿಗೆ ತೀವ್ರ ಸಂದಿಗ್ಧ ಇದ್ದಂತೆ ಕಂಡು ಬರುತ್ತದೆ. ಇಂದು ಕ್ಷಿಪ್ರವಾಗಿ ಬದಲಾವಣೆಗೆ ಒಳಗಾಗುತ್ತಿರುವ ಸಮಾಜದಲ್ಲಿ ನಾವಿದ್ದೇವೆ. ಜ್ಞಾನದ ಅಭೂತ ಪೂರ್ವ ಬೆಳವಣಿಗೆಯಿಂದ ಜಗತ್ತು ಜಾಗತೀಕರಣ ದತ್ತ ಸಾಗುತ್ತಿದೆ.

ಸಾಮಾಜಿಕ, ಧಾರ್ಮಿಕ, ವೈಜ್ಞಾನಿಕ ಪ್ರಗತಿಯು ಮಾನವ ಜೀವನದ ಎಲ್ಲ ಕ್ಷೇತ್ರಗಳನ್ನು ಆವರಿ ಸಿದೆ. ಪ್ರಪಂಚದ ಇಂತಹ ಪರಿವರ್ತನೆಯ ಪ್ರಭಾವಕ್ಕೆ ನಮ್ಮ ದೇಶದ ಸಾಮಾಜಿಕ ವ್ಯವಸ್ಥೆಯ ಮೂಲಭೂತ ಅಂಶಗಳಾದ ಕುಟುಂಬ, ಜಾತಿ, ಧರ್ಮ, ಶಿಕ್ಷಣ, ಅಧಿಕಾರ ಎಲ್ಲವೂ ಒಳಗಾಗಿವೆ. ಮಹಿಳೆಯ ಬದುಕಿನ ಬದಲಾವಣೆಯ ಹಂತಗಳನ್ನು ಮತ್ತು ಇಂದಿನ ಮಹಿಳೆಯರ ಸಾಧನೆ ಮತ್ತು ಸಮಸ್ಯೆಗಳನ್ನು ಬಹಳ ಹಿಂದೆಯೇ ತ್ರಿವೇಣಿ ಮನೋಜ್ಞವಾಗಿ ಚಿತ್ರಿಸಿದ್ದಾರೆ.

ಇಂದಿನ ಮಹಿಳೆ ತನ್ನ ಹಿಂದೆ ಸೋದರ ನಾಗಿ, ತಂದೆಯಾಗಿ, ಪತಿಯಾಗಿ ಪುರುಷನ ಬೆಂಬಲ ವಿರಬೇಕೆಂದು ಬಯಸುತ್ತಾಳೆ. ಆದರೆ ಅದು ರಕ್ಷಣೆ ಉದ್ದೇಶ ಹೊಂದಿರಬೇಕೇ ವಿನಃ ಶೋಷಣೆಯೂ ಆಗಬಾರದು ಎಂಬ ನಿರೀಕ್ಷೆ ಅವಳದು. ಇಂತಹ ಆಧುನಿಕ ಮಹಿಳೆಯ ಮನಸ್ಥಿತಿಯನ್ನು ಐವತ್ತರ ದಶಕದಲ್ಲಿ ತ್ರಿವೇಣಿ ತಮ್ಮ ಕಾದಂಬರಿಗಳಲ್ಲಿ ವಿವರಿಸಿದ್ದಾರೆ.

ಒಟ್ಟಾರೆಯಾಗಿ ಅನುಸೂಯಾ ಶಂಕರ್ (1.9.1928-29.7.1963) ಅವರು ‘ತ್ರಿವೇಣಿ’ ಕಾವ್ಯನಾಮ ದಿಂದ ಕನ್ನಡ ಓದುಗರಿಗೆ ಚಿರಪರಿಚಿತ ರಾಗಿ ಸಾಹಿತ್ಯದಲ್ಲಿ ಹೊಸ ಲೋಕವನ್ನು ಪರಿಚಯಿಸಿ ದವರು. ಸ್ತ್ರೀವಾದಿ ಧೋರಣೆ, ಮನೋವೈಜ್ಞಾನಿಕ ವಿಶ್ಲೇಷಣೆಗಳಿಗೆ ಹೆಸರಾದ ಅವರ ಕಾದಂಬರಿ ಗಳು ಆಧುನಿಕ ಕನ್ನಡ ಗದ್ಯ ಬರವಣಿಗೆಯಲ್ಲಿ ಮಹತ್ವದ ಸ್ಥಾನವನ್ನು ಪಡೆದಿವೆ. ತ್ರಿವೇಣಿ ಅವರು ಬದುಕಿದ್ದು ಅಲ್ಪಕಾಲವೇ ಆದರೂ ಕನ್ನಡಕ್ಕೆ ಅವರ ಕೊಡುಗೆ ಅಪರೂಪದ್ದು.