ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಕಡಲ ತೀರಕ್ಕೆ ಹೊರಟಿತು ಒಂದು ಶ್ವೇತ ನದಿ !

ಸಮುದ್ರದ ತೀರದಲ್ಲಿ ವಾಸಿಸುವವರು ಉಪ್ಪನ್ನು ಸಂಗ್ರಹಿಸಲು ಮತ್ತು ತಯಾರಿಸಲು ಅನುಮತಿ ನೀಡಲಾಯಿತು. ಆದರೆ 1930ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದ ಪ್ರಮುಖ ಬೇಡಿಕೆಯಾದ, ಉಪ್ಪಿನ ಮೇಲೆ ತೆರಿಗೆಯನ್ನು ತೆಗೆದು ಹಾಕುವ ಬೇಡಿಕೆಯನ್ನು ಬ್ರಿಟಿಷರು ಒಪ್ಪಿಕೊಳ್ಳಲಿಲ್ಲ ಮತ್ತು ಆ ತೆರಿಗೆ ನಂತರ ಸುಮಾರು ಒಂದೂವರೆ ದಶಕದ ತನಕವೂ ಮುಂದುವರಿಯಿತು!

ಕಡಲ ತೀರಕ್ಕೆ ಹೊರಟಿತು ಒಂದು ಶ್ವೇತ ನದಿ !

ಶಶಿಧರ ಹಾಲಾಡಿ ಶಶಿಧರ ಹಾಲಾಡಿ Aug 15, 2025 10:31 AM

ಶಶಾಂಕಣ

ಮಾರ್ಚ್ 5 ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ದಿನ. ಮಹಾತ್ಮಾ ಗಾಂಧಿ ಮತ್ತು ಅಂದಿನ ವೈಸ್‌ರಾಯ್ ಇರ‍್ವಿನ್ ನಡುವೆ ಆ ದಿನ ಒಂದು ಒಪ್ಪಂದ ನಡೆಯಿತು (1931) ಮತ್ತು ಇದು ಕಾಂಗ್ರೆಸ್ ಮತ್ತು ಬ್ರಿಟಿಷ್ ರಾಜ್ ನಡುವೆ ನಡೆದ ಪ್ರಮುಖ ಒಪ್ಪಂದಗಳಲ್ಲಿ ಒಂದು. ಗಾಂಧಿಜೀವರು ಉಪ್ಪಿನ ಸತ್ಯಾಗ್ರಹವನ್ನು ಆರಂಭಿಸಿ, ಒಂದು ವರ್ಷದ ನಂತರ ಸಹಿ ಹಾಕಲ್ಪಟ್ಟ ಈ ಒಪ್ಪಂದವು ಬಹು ಪ್ರಚಾರಕ್ಕೆ ಒಳಪಟ್ಟಿದೆ.

ಈ ಒಪ್ಪಂದದ ಪ್ರಕಾರ, ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ಬಂಧನಕ್ಕೆ ಒಳಗಾದ ಸಾವಿರಾರು ಸತ್ಯಾಗ್ರಹಿಗಳನ್ನು ಬಿಡುಗಡೆ ಮಾಡಲಾಯಿತು, ಮದ್ಯದ ಅಂಗಡಿಗಳ ಮುಂದೆ ಮತ್ತು ವಿದೇಶಿ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳ ಮುಂದೆ ಸತ್ಯಾಗ್ರಹ ನಡೆಸಲು ಅನುಮತಿ ನೀಡಲಾಯಿತು, ಕಾಂಗ್ರೆಸ್ ಮೇಲೆ ಇದ್ದ ನಿಷೇಧವನ್ನು ತೆಗೆದು ಹಾಕಲಾಯಿತು, ಜಪ್ತಿಗೆ ಒಳಪಟ್ಟ ಆಸ್ತಿಗಳನ್ನು ಸತ್ಯಾಗ್ರಹಿಗಳಿಗೆ ವಾಪಸು ನೀಡಲಾಯಿತು,

ಸಮುದ್ರದ ತೀರದಲ್ಲಿ ವಾಸಿಸುವವರು ಉಪ್ಪನ್ನು ಸಂಗ್ರಹಿಸಲು ಮತ್ತು ತಯಾರಿಸಲು ಅನುಮತಿ ನೀಡಲಾಯಿತು. ಆದರೆ 1930ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದ ಪ್ರಮುಖ ಬೇಡಿಕೆಯಾದ, ಉಪ್ಪಿನ ಮೇಲೆ ತೆರಿಗೆಯನ್ನು ತೆಗೆದು ಹಾಕುವ ಬೇಡಿಕೆಯನ್ನು ಬ್ರಿಟಿಷರು ಒಪ್ಪಿಕೊಳ್ಳಲಿಲ್ಲ ಮತ್ತು ಆ ತೆರಿಗೆ ನಂತರ ಸುಮಾರು ಒಂದೂವರೆ ದಶಕದ ತನಕವೂ ಮುಂದುವರಿಯಿತು!

ಇದನ್ನೂ ಓದಿ: Shashidhara Halady Column: ನಮ್ಮ ರಾಜ್ಯದಲ್ಲಿ ಎಷ್ಟು ಮದಗದ ಕೆರೆಗಳಿವೆ ?

ಉಪ್ಪಿನ ಸತ್ಯಾಗ್ರಹವು ಪಡೆದ ಪ್ರಚಾರಕ್ಕೆ ಹೋಲಿಸಿದರೆ, 5.3.1931ರಂದು ನಡೆದ ಒಪ್ಪಂದವು ತುಸು ಸಪ್ಪೆ ಎಂದೇ ಹೇಳಬೇಕು. ಇದಕ್ಕೆ ಕಾರಣ ಎನಿಸಿದ ಮೂಲ ವಿದ್ಯಮಾನ ಆರಂಭಗೊಂಡದ್ದು 12.3.1930ರಂದು. ಗಾಂಧೀಜಿಯವರ ನೇತೃತ್ವದಲ್ಲಿ ಅಂದು ಆರಂಭಗೊಂಡ ಉಪ್ಪಿನ ಸತ್ಯಾಗ್ರಹವು 6.4.1930ರ ತನಕ ಮುಂದುವರಿಯಿತು. ಸಂಪೂರ್ಣ ಅಹಿಂಸೆಯ ತತ್ವದಲ್ಲಿ ಈ ಒಂದು ಹೋರಾಟ ವನ್ನು ರೂಪಿಸಿದವರು, ನಾಯಕತ್ವ ವಹಿಸಿದವರು, ಮುನ್ನಡೆಸಿದವರು ಮಹಾತ್ಮಾ ಗಾಂಧಿಯವರು. ಉಪ್ಪಿನ ಮೇಲಿನ ತೆರಿಗೆಯನ್ನು ತೆಗೆಯಬೇಕು ಎಂದು ಬ್ರಿಟಿಷರನ್ನು ಒತ್ತಾಯಿಸುವುದರ ಜತೆಯಲ್ಲೇ, ಅಸಹಕಾರ ಮತ್ತು ಕರ ನಿರಾಕರಣೆಯೂ ಈ ಹೋರಾಟದ ಭಾಗವಾಗಿತ್ತು. ಜತೆಗೆ, 387 ಕಿ.ಮೀ. ಪಾದಯಾತ್ರೆ ಈ ಸತ್ಯಾಗ್ರಹದ ಪ್ರಮುಖ ಮತ್ತು ಎಲ್ಲರ ಗಮನ ಸೆಳೆದ ಅಂಶ.

ಗಾಂಧೀಜಿಯವರು ವಾಸವಿದ್ದ ಸಾಬರಮತಿ ಆಶ್ರಮದಿಂದ, ದಂಡಿ ಅಥವಾ ನವಸಾರಿ ಎಂಬಲ್ಲಿಗೆ ನಡೆದು ಸಾಗುವುದು ಮತ್ತು ದಾರಿಯುದ್ದಕ್ಕೂ ಜನರನ್ನು ಒಗ್ಗೂಡಿಸುವುದು ಈ ಯಾತ್ರೆಯ ಮುಖ್ಯ ಅಜೆಂಡಾ. ಗುಜರಾತ್‌ನಲ್ಲಿದ್ದ ಧರಾಸನಾ ಉಪ್ಪಿನ ಕಾರ್ಖಾನೆಗಳಿರುವ ಜಾಗದ ತನಕ ಸಾಗಿ, ಅಲ್ಲಿ ಪ್ರತಿಭಟನೆ ನಡೆಸಿ, ನಂತರ ಸತ್ಯಾಗ್ರಹವನ್ನು ನಿಲ್ಲಿಸುವುದು ಎಂದು ಗಾಂಧೀಜಿಯವರ ಮೊದಲ ಯೋಚನೆ; ಆದರೆ ಕೊನೆಯಲ್ಲಿ ಅವರನ್ನು ಬಂಧಿಸಿದ್ದರಿಂದ, ಕಾಂಗ್ರೆಸ್‌ನ ಇತರ ಕಾರ್ಯಕರ್ತರು ಆ ಯಾತ್ರೆಯನ್ನು ಮುಂದುವರಿಸಿದರು.

ಈ ಸತ್ಯಾಗ್ರಹದ ಸಮಯದಲ್ಲಿ ಸುಮಾರು 60000 ಜನರನ್ನು ಬ್ರಿಟಿಷ್ ಆಡಳಿತ ಬಂಧಿಸಿತು, ಅಲ್ಲಲ್ಲಿ ಕೆಲವು ಕಾರ್ಯಕರ್ತರು ಮೃತಪಟ್ಟರು. ಬ್ರಿಟಿಷರ ವಿರುದ್ಧ ನಮ್ಮ ದೇಶದ ಹೋರಾಟದ ವಿವರಗಳು ಜಗತ್ತಿಗೆ ಪ್ರಚುರಗೊಳ್ಳುವಲ್ಲಿ ಈ ಸತ್ಯಾಗ್ರಹದ ಪಾತ್ರ ಹಿರಿದು.

61 R

ಕಾಂಗ್ರೆಸ್ ಪಕ್ಷವು ಪೂರ್ಣ ಸ್ವರಾಜ್ಯಕ್ಕೆ ಕರೆ ನೀಡಿದ್ದು 26.1.1930ರಂದು; ಅದರ ನೆನಪಿಗಾಗಿ, 1947ರ ತನಕ ಜನವರಿ 26 ರಂದು ಸಾಂಕೇತಿಕವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿತ್ತು! ಪೂರ್ಣ ಸ್ವರಾಜ್ಯಕ್ಕೆ ಕರೆ ನೀಡಿದ ನಂತರ, ಆ ನಿಟ್ಟಿನಲ್ಲಿ ಹೋರಾಟ ಮುಂದುವರಿಸಲು ಗಾಂಧೀಜಿಯವರಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಜವಾಬ್ದಾರಿಯನ್ನು ನೀಡಿತು. ಅಸಹಕಾರ ಚಳವಳಿಯನ್ನು ಸೂಚಿಸಿದ ಗಾಂಧೀಜಿಯವರ ಸಲಹೆಯನ್ನುಕಾಂಗ್ರೆಸ್ ಒಪ್ಪಿ, ಆ ಕುರಿತು ಯೋಚನೆ ಮುಂದುವರಿ ದಾಗ, ಉಪ್ಪಿನ ಮೇಲಿನ ತೆರಿಗೆಯ ವಿರುದ್ಧ ಹೋರಾಟವನ್ನು ಮುಂದುವರಿಸಿದರೆ, ಭಾರತದ ಜನಸಾಮಾನ್ಯರ ಬೆಂಬಲ ಪಡೆಯಬಹುದು ಎಂಬ ಯೋಚನೆ ಗಾಂಧೀಜಿಯವರದ್ದು.

ಜನಸಾಮಾನ್ಯರು, ಕಡು ಬಡವರು ಅಗತ್ಯವಾಗಿ ಸೇವಿಸುತ್ತಿದ್ದ ಉಪ್ಪಿನ ಮೇಲೆ ಅಧಿಕ ತೆರಿಗೆಯನ್ನು ವಿಧಿಸಿ, ಬ್ರಿಟಿಷರು ಅಪಾರ ಧನ ಸಂಗ್ರಹ ಮಾಡುತ್ತಿದ್ದರು. ಅದರಲ್ಲೂ ಮುಖ್ಯವಾಗಿ, ಬಿಸಿಲಿನ ಬೇಗೆ ಜಾಸ್ತಿಯಾಗಿರುವ ನಮ್ಮ ದೇಶದಲ್ಲಿ ನಿರ್ಜಲೀಕರಣವನ್ನು ತಡೆಯಲು ಎಲ್ಲರೂ ಉಪ್ಪನ್ನು ತಕ್ಕ ಪ್ರಮಾಣದಲ್ಲಿ ನಿರಂತರವಾಗಿ ಸೇವಿಸಬೇಕು; ಅದರ ಮೇಲೆ ತೆರಿಗೆ ವಿಧಿಸಿ, ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ಉಪ್ಪನ್ನು ಸಾಗಿಸುವಾಗ ಅಧಿಕ ಮೊತ್ತದ ತೆರಿಗೆಯನ್ನು ಬ್ರಿಟಿಷರು ಸಂಗ್ರಹಿಸುತ್ತಿದ್ದರು.

ಇದೊಂದು ಕ್ರೂರ ತೆರಿಗೆ ಎಂದು ಹಲವು ಅಧಿಕಾರಿಗಳು, ಯುರೋಪಿನ ತಜ್ಞರು ಹೇಳಿದ್ದರೂ, ತೆರಿಗೆ ಸಂಗ್ರಹ ನಿಂತಿರಲಿಲ್ಲ. ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಬ್ರಿಟಿಷರು ಭಾರತದಿಂದ ಸಂಗ್ರಹಿಸುತ್ತಿದ್ದ ಧನದಲ್ಲಿ, ಶೇ.10ರಷ್ಟು ಉಪ್ಪಿನ ತೆರಿಗೆಯಿಂದಲೇ ಬರುತ್ತಿತ್ತು!

ನಮ್ಮ ದೇಶದ ಭಾಗಗಳನ್ನು ಒಂದೊಂದಾಗಿ ವಶಕ್ಕೆ ಪಡೆದ ನಂತರ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು, ಮೊದಮೊದಲು ನಡೆಸಿದ ಲೂಟಿಗಳಲ್ಲಿ ಈ ಉಪ್ಪಿನ ಮೇಲಿನ ತೆರಿಗೆಯೂ ಒಂದು. ರಾಬರ್ಟ್ ಕ್ಲೈವ್‌ನು ಬಂಗಾಳದಲ್ಲಿ ಅಧಿಕ ಪ್ರಮಾಣದ ಉಪ್ಪಿನ ತೆರಿಗೆಯನ್ನು ಸಂಗ್ರಹಿಸಿ, ಅದರ ದೊಡ್ಡ ಭಾಗವನ್ನು ಇಂಗ್ಲೆಂಡಿನ ಅಧಿಕಾರ ಶಾಹಿಗೆ ನೀಡಿ, ಅವರನ್ನು ಸಂಪ್ರೀತ ಗೊಳಿಸುತ್ತಿದ್ದ. ಹಣ ಪಡೆದ ಬ್ರಿಟಿಷ್ ಅಧಿಕಾರ ಶಾಹಿಯು, ಈಸ್ಟ್ ಇಂಡಿಯಾ ಕಂಪೆನಿಯ ಇಂತಹ ಕ್ರೂರ ಪದ್ಧತಿಗಳಿಗೆ ಸಮ್ಮತಿಯನ್ನೂ ನೀಡುತ್ತಿತ್ತು.

ಜತೆಗೆ, ಉಪ್ಪಿನ ಮೇಲಿನ ತೆರಿಗೆಯು ಅವರ ಆದಾಯದ ಪ್ರಮುಖ ಸೆಲೆಯಾಗಿದ್ದರಿಂದಲೇ, 1857ರ ನಂತರವೂ, ಅಂದರೆ ಬ್ರಿಟನ್ ರಾಣಿಯ ಆಧಿಪತ್ಯದ ನಂತರವೂ, ಉಪ್ಪಿನ ತೆರಿಗೆ ಮುಂದುವರಿ ಯಿತು. ಸಮುದ್ರ ತೀರದ ಪ್ರಾಂತ್ಯ ಮತ್ತು ರಾಜ್ಯಗಳಿಂದ ಉಪ್ಪನ್ನು ಸಲೀಸಾಗಿ ಒಳನಾಡಿಗೆ ಸಾಗಿಸದೇ ಇರುವಂತೆ ತಡೆಯಲು, 2500 ಕಿ.ಮೀ. ಉದ್ದದ ಮುಳ್ಳಿನ ಗಿಡಗಳ ಬೇಲಿಯನ್ನು ನಿರ್ಮಿಸಿ (ಉದಾ ಪಾಪಾಸು ಕಳ್ಳಿ), ಅದನ್ನು ಕಾಯಲು 12000ಕ್ಕೂ ಅಧಿಕ ಸಿಬ್ಬಂದಿ ನೇಮಿಸಿ, ನಿರ್ದಾಕ್ಷಿಣ್ಯ ವಾಗಿ ತೆರಿಗೆ ಸಂಗ್ರಹಿಸುತ್ತಿದ್ದರು!

ಈ ಮುಳ್ಳು ಬೇಲಿಯ ಕಥೆಯೇ ಭಯಾನಕ, ಕ್ರೂರ. ನಮ್ಮ ದೇಶದಲ್ಲಿ ಉಪ್ಪಿನ ಮೇಲೆ ಅಧಿಕ ತೆರಿಗೆ ಸಂಗ್ರಹವನ್ನು ಕಾನೂನುಬದ್ಧಗೊಳಿಸಲು, ಬ್ರಿಟಿಷ್ ಸರಕಾರವು ‘ಉಪ್ಪಿನ ಅಧಿನಿಯಮ 1882’ನ್ನು ಜಾರಿಗೆ ತಂದಿತ್ತು! ಬ್ರಿಟಿಷ್ ರಾಜ್

ಆಡಳಿತದ ಉದ್ದಕ್ಕೂ, ನಮ್ಮ ದೇಶದಿಂದ ಪಡೆದ ಒಟ್ಟು ಆದಾಯದ ಶೇ.8.2ರಷ್ಟು ಉಪ್ಪಿನ ತೆರಿಗೆಯಿಂದ ಬಂದಿತ್ತು. ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ಉಪ್ಪು ಸಾಗಿಸಲು ಅಽಕ ತೆರಿಗೆ ನೀಡಬೇಕಾಗಿತ್ತು. ಒಳನಾಡಿನಲ್ಲಿ ಉಪ್ಪನ್ನು ಖರೀದಿಸುತ್ತಿದ್ದ ಬಡವರಿಗೆ ಇದೊಂದು ದೊಡ್ಡ ಹೊರೆಯಾಗಿತ್ತು. ಇವೆಲ್ಲಾ ಅರಿವಿದ್ದ ಗಾಂಽಜಿಯವರು, ಅಸಹಕಾರ ಚಳವಳಿಯ ಪ್ರಮುಖ ಭಾಗವಾಗಿ, ಉಪ್ಪಿನ ತೆರಿಗೆ ಇಳಿಸುವಂತೆ ಬ್ರಿಟಿಷರನ್ನು ಒತ್ತಾಯಿಸಲು, ತಮ್ಮ ಹೋರಾಟವನ್ನು ರೂಪಿಸಿದರು.

1930ರ ಮಾರ್ಚ್ 12ರಿಂದ ಎಪ್ರಿಲ್ 6ರ ತನಕ ನಡೆದ ಆ ಅಭೂತಪೂರ್ವ 387 ಕಿ.ಮೀ. ಯಾತ್ರೆಯು, ಕಾಂಗ್ರೆಸ್‌ನ ಹೋರಾಟದ ಉನ್ನತ ಕ್ಷಣಗಳಲ್ಲಿ ಒಂದು. ಈ ರೀತಿ ಒಂದು ಪಾದಯಾತ್ರೆಯನ್ನು ನಡೆಸುತ್ತೇವೆ, ಅದು ಸಂಪೂರ್ಣ ಅಹಿಂಸಾತ್ಮಕವಾಗಿರಲಿದೆ ಎಂದು ಗಾಂಧೀಜಿಯವರು ಫೆಬ್ರವರಿ 5 ರಿಂದಲೇ ಹೇಳಿಕೆ ನೀಡತೊಡಗಿದರು.

ಸಾಬರಮತಿ ಆಶ್ರಮದಲ್ಲಿ ಆಗಾಗ ಪತ್ರಿಕಾ ಪ್ರತಿನಿಧಿಗಳ ಸಭೆಗಳನ್ನು ಕರೆದು, ತಾನೇಕೆ ಈ ರೀತಿ ಉಪ್ಪಿನ ಸತ್ಯಾಗ್ರಹ ಮಾಡುತ್ತಿದ್ದೇನೆ ಎಂದು ವಿವರಿಸುತ್ತಿದ್ದರು. ಗಾಂಧೀಜಿಯವರ ಪ್ರಾರ್ಥನಾ ಸಭೆಗಳೇ ಅವರ ಪತ್ರಿಕಾಗೋಷ್ಟಿಗಳೂ ಆಗಿದ್ದವು. ‘ಜೀವನ್ಮರಣದ ಹೋರಾಟವೊಂದನ್ನು ನಾವು ಕೈಗೆತ್ತಿಕೊಳ್ಳುತ್ತಿದ್ದೇವೆ. ಇದೊಂದು ಪವಿತ್ರ ಯುದ್ಧ; ಎಲ್ಲಾ ರೀತಿಯ ತ್ಯಾಗಕ್ಕೂ ನಾವು ಸಿದ್ಧರಿ ದ್ದೇವೆ’ ಎಂದು ಘೋಷಿಸಿದರು.

ವಿಶೇಷವೆಂದರೆ, ಇವರ ಹೇಳಿಕೆಗಳನ್ನು ಕೇಳಿಸಿಕೊಳ್ಳಲು ಎಲ್ಲಾ ಪತ್ರಿಕಾ ಪ್ರತಿನಿಧಿಗಳಿಗೂ ಅವಕಾಶ ವಿತ್ತು; ಅಂದು ಸಂಪೂರ್ಣವಾಗಿ ಬ್ರಿಟಿಷರ ವಶದಲ್ಲಿದ್ದ ಪತ್ರಿಕಾ ರಂಗವು ಗಾಂಧೀಜಿಯವರ ಹೇಳಿಕೆಗಳನ್ನು ದೊಡ್ಡದಾಗಿ ಪ್ರಕಟಿಸುತ್ತಿದ್ದವು. ಜತೆಗೆ, ಅಮೆರಿಕ ಮತ್ತು ಯುರೋಪಿನ ಹಲವು ಪತ್ರಿಕಾ ಪ್ರತಿನಿಧಿಗಳು ಗಾಂಧೀಜಿಯವರನ್ನು ಭೇಟಿ ಮಾಡಲು ಬ್ರಿಟಿಷ್ ಸರಕಾರ ಅನುಮತಿ ನೀಡಿತ್ತು.

ಬಹುಷಃ, ಇಂತಹ ಅಹಿಂಸಾತ್ಮಕ ಹೋರಾಟಕ್ಕೆ ಪ್ರಚಾರ ದೊರಕಿದರೆ, ತನ್ನ ನಿರಂತರ ಆಡಳಿತಕ್ಕೆ ಲಾಭವೇ ಹೊರತು ನಷ್ಟವಿಲ್ಲ ಎಂದು ಬ್ರಿಟಿಷ್ ಸರಕಾರ ಯೋಚಿಸಿತ್ತು, ಆದ್ದರಿಂದಲೇ ಗಾಂಧೀಜಿ ಯವರ ಪತ್ರಿಕಾ ಹೇಳಿಕೆ, ವಿದೇಶಿ ಪತ್ರಕರ್ತರ ಸಂದರ್ಶನ, ಯಾತ್ರೆಯ ಚಲನಚಿತ್ರೀಕರಣ ಗಳಿಗೆ ಬ್ರಿಟಿಷ್ ಅಧಿಕಾರಶಾಹಿಯು ಅನುಮತಿ ಮತ್ತು ಅವಕಾಶ ನೀಡಿತ್ತು ಎನಿಸುತ್ತದೆ.

ಆಗಿನ ದಿನಗಳಲ್ಲಿ ಎಲ್ಲಾ ಪತ್ರಿಕೆಗಳು, ಮಾಧ್ಯಮಗಳು ಬ್ರಿಟಿಷರ ಅನುಮತಿಯ ಮೇರೆಗೆ ಸುದ್ದಿ ಪ್ರಕಟಿಸುತ್ತಿದ್ದವು. ಈ ಯಾತ್ರೆಯ ಪ್ರಚಾರ ಹೇಗಿತ್ತೆಂದರೆ, ಪ್ರತಿ ದಿನ ಯಾವ ಹಳ್ಳಿಯಲ್ಲಿ ತಂಡ ತಂಗುತ್ತದೆ ಎಂಬ ವಿವರವೂ ಸಹ ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ದುಬಾರಿ ವಿದೇಶಿ ಕ್ಯಾಮೆರಾಗಳೊಂದಿಗೆ ವಿದೇಶಿ ಪತ್ರಕರ್ತರು ಸಾಬರಮತಿ ಮತ್ತು ದಂಡಿಯಲ್ಲಿ ಬೀಡುಬಿಟ್ಟಿದ್ದರು.

ಉಪ್ಪಿನ ಸತ್ಯಾಗ್ರಹದ ನಾಯಕತ್ವ ವಹಿಸಿ, ಅದರಲ್ಲಿ ಪಾಲ್ಗೊಳ್ಳುವ ಪ್ರಮುಖರನ್ನು ಗಾಂಧೀಜಿವರೇ ಸ್ವತಃ ಆಯ್ಕೆ ಮಾಡಿದ್ದರು; ಮತ್ತು ಅವರಲ್ಲಿ ಹೆಚ್ಚಿನವರು ಆಶ್ರಮದವರು ಮತ್ತು ಅಹಿಂಸೆಯ ಸಿದ್ದಾಂತಗಳನ್ನು ಗಾಂಧೀಜಿಯವರಿಂದ ಸ್ವತಃ ಬೋಧಿಸಲ್ಪಟ್ಟವರು. ಈ ನಡುವೆ 2.3.1930ರಂದು ಅಂದಿನ ವೈಸ್‌ರಾಯ್ ಇರ‍್ವಿನ್‌ಗೆ ಪತ್ರ ಬರೆದು, ತಾನು ಈ ರೀತಿ ಅಹಿಂಸಾತ್ಮಕ ಹೋರಾಟ ಆರಂಭಿಸ ಲಿದ್ದೇನೆ, ಇದನ್ನು ನಿಲ್ಲಿಸಬೇಕಾದರೆ, 11 ಬೇಡಿಕೆಗಳಿವೆ ಮತ್ತು ಅದರಲ್ಲಿ ಉಪ್ಪಿನ ಮೇಲಿನ ತೆರಿಗೆ ಯನ್ನು ತೆಗೆಯುವುದೂ ಒಂದು ಎಂದು ಗಾಂಧೀಜಿ ಹೇಳಿದ್ದರು.

ಆದರೆ ಇರ‍್ವಿನ್‌ನು ಮೌನವಾಗಿದ್ದನು, ಮಾತ್ರವಲ್ಲ ಈ ಕುರಿತು ಚರ್ಚಿಸಲು ಗಾಂಧೀಜಿಯವರ ಜತೆ ಮಾತನಾಡಲು ಸಹ ನಿರಾಕರಿಸಿದನು. 78 ಆಯ್ದ ಸತ್ಯಾಗ್ರಹಿಗಳೊಂದಿಗೆ 12.3.1930 ರಂದು ಗಾಂಧೀಜಿಯವರು ಸಾಬರಮತಿಯಿಂದ ಹೊರಟರು; ಖಾದಿ ಧರಿಸಿದ್ದ ಸಾವಿರಾರು ಅನುಯಾಯಿ ಗಳು ಅವರ ಹಿಂದೆ ಸಾಲಾಗಿ ನಡೆದರು. ವಿದೇಶಿ ಪತ್ರಿಕೆಗಳು ಇವರ ಯಾತ್ರೆಯನ್ನು ‘ಒಂದು ಶ್ವೇತ ನದಿ ಹರಿದಂತೆ ಇತ್ತು’ ಎಂದು ವರ್ಣಿಸಿದವು.

ಸಾಬರಮತಿ ಆಶ್ರಮದಲ್ಲಿ ಈ ಯಾತ್ರೆಯನ್ನು ನೊಡಲು ಸುಮಾರು 1,00,000 ಲಕ್ಷ ಜನ ಸೇರಿದ್ದ ರೆಂದು, ಬ್ರಿಟಿಷರ ಸಮ್ಮತಿಯ ಮೇರೆಗೆ ಮುದ್ರಣಗೊಳ್ಳುತ್ತಿದ್ದ ‘ದ ಸ್ಟೇಟ್ ಮನ್’ ಪತ್ರಿಕೆ ಬರೆದಿತ್ತು. ಇದಕ್ಕಿಂತ ಹೆಚ್ಚು ಜನರು ಸೇರಿದ್ದರೆಂದು ವಿದೇಶಿ ಪತ್ರಿಕೆಗಳು ಬರೆದಿದ್ದವು. ಮೊದಲ ದಿನ 20 ಕಿ.ಮೀ. ನಡೆದು ಹಳ್ಳಿಯೊಂದರಲ್ಲಿ ತಂಗಿದರು; ಅಲ್ಲಿ ನೆರೆದಿದ್ದ 4000 ಜನರನ್ನುದ್ದೇಶಿಸಿ ಗಾಂಧೀಜಿ ಭಾಷಣ ಮಾಡಿ, ಉಪ್ಪಿನ ಮೇಲಿನ ತೆರಿಗೆ ಎಷ್ಟು ಕ್ರೂರ ಎಂಬುದನ್ನು ವಿವರಿಸುತ್ತಲೇ, ಪೂರ್ಣ ಸ್ವರಾಜ್ಯಕಾಗಿ ನಡೆಯುತ್ತಿರುವ ಅಹಿಂಸಾತ್ಮಕ ಹೋರಾಟ ಇದು ಎಂದು ಹೇಳಿದರು.

ಕೊನೆ ಕೊನೆಗೆ ಯಾತ್ರೆಯು ಮೂರು ಕಿ.ಮೀ. ಉದ್ದವಿತ್ತು. ಈ ಯಾತ್ರೆಗೆ ‘ನ್ಯೂಯಾಕ್ ಟೈಮ್ಸ್’ ನೀಡಿದ ಬೆಂಬಲ ವಿಶೇಷವಾದದ್ದು; ಗುಜರಾತ್‌ನ ಕುಗ್ರಾಮಗಳಲ್ಲಿ ಜನರು ನಡೆಸುತ್ತಿದ್ದ ಅಹಿಂಸಾ ತ್ಮಕ ಹೋರಾಟಕ್ಕೆ ದೂರದ ಅಮೆರಿಕದಿಂದ ಹೊರಬರುವ ಆ ಪತ್ರಿಕೆ ಕವರೇಜ್ ನೀಡಿತ್ತು! ಎಪ್ರಿಲ್ 6 ಮತ್ತು 7 ರಂದು ಎರಡು ಪುಟಗಳ ವಿಶೇಷ ವರದಿಗಳನ್ನು ಪ್ರಕಟಿಸಿತ್ತು.

‘ಟೈಮ್’ ಪತ್ರಿಕೆಯು ವಿಶೇಷ ಕವರೇಜ್ ನೀಡಿತು ಮತ್ತು ನಂತರ, ಆ ‘ವರ್ಷದ ವ್ಯಕ್ತಿ’ಯಾಗಿ ಗಾಂಧೀಜಿಯವರನ್ನು ಆಯ್ಕೆ ಮಾಡಿತ್ತು. ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಹೋರಾಟಗಳಿಗೆ ಅಮೆರಿಕದವರು ಬೆಂಬಲ, ಪ್ರಚಾರ ನೀಡುತ್ತಿದ್ದುದು ವಿಶೇಷ ವಿದ್ಯಮಾನ.

ದಂಡಿಯ ಸಮುದ್ರತೀರಕ್ಕೆ ಎಪ್ರಿಲ್ 5 ರಂದು ಆಗಮಿಸಿದ ಗಾಂಽಜಿವರು, ಅಲ್ಲಿನ ನೆಲದಲ್ಲಿ ತಯಾರಿಸಿದ್ದ ಒಂದು ಮುಷ್ಟಿ ಉಪ್ಪನ್ನು ಕೈಗೆತ್ತಿಕೊಂಡರು; ಆಗ ಅಲ್ಲಿ ನೆರೆದಿದ್ದ ಛಾಯಾಚಿತ್ರ ಗ್ರಾಹಕರು ತೆಗೆದ ಚಿತ್ರ ಸಾಕಷ್ಟು ಪ್ರಸಿದ್ಧ. ಕೈಯಲ್ಲಿ ಉಪ್ಪನ್ನು ಹಿಡಿದ ಗಾಂಧೀಜಿವರು ‘ಇದರ ಮೂಲಕ ನಾನು ಈಗ ಬ್ರಿಟಿಷ್ ಸಾಮ್ರಾಜ್ಯದ ತಳಪಾಯವನ್ನೇ ಅಲುಗಾಡಿಸುತ್ತಿದ್ದೇನೆ’ ಎಂದು ಘೋಷಿಸಿದರು. ಈ ಹೇಳಿಕೆ ಸಹ ವಿಶ್ವಪ್ರಸಿದ್ಧ; ಆದರೆ, ಈಗ ಗಮನಿಸಿದರೆ, ಬ್ರಿಟಿಷರು ನಮ್ಮ ದೇಶವನ್ನು ತೊರೆಯಲು ಮುಂದಿನ 17 ವರ್ಷ ಕಾಯಬೇಕಾಯಿತು!

ಆ ಮಹಾನ್ ಸತ್ಯಾಗ್ರಹವು, ಅತಿ ಹೆಚ್ಚಿನ ಪ್ರಚಾರ ಪಡೆದರೂ, ವಿದೇಶಗಳಲ್ಲಿ ಭಾರತದ ಪರವಾಗಿ ಸಹಾನುಭೂತಿ ಗಳಿಸಲು ನೆರವಾದರೂ, ಬ್ರಿಟಿಷ್ ಸಾಮ್ರಾಜ್ಯದ ತಳಪಾಯವನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ. ದಂಡಿಯ ಸಮುದ್ರ ತೀರದಲ್ಲಿ ಉಪ್ಪು ನೀರನ್ನು ಕುದಿಸಿ ಉಪ್ಪನ್ನು ತಯಾರಿಸಿದ ಗಾಂಧೀಜಿಯವರ ಕಾರ್ಯವನ್ನು, ದೇಶದುದ್ದಗಲಕ್ಕೂ ಹಳ್ಳಿ ಹಳ್ಳಿಗಳ ಜನರು ಅನುಕರಿಸಿದರು, ಎಲ್ಲೆಲ್ಲೂ ಉಪ್ಪು ತಯಾರಿಸಿದರು. ದಂಡಿಯಿಂದ 40 ಕಿ.ಮೀ. ದೂರದಲ್ಲಿದ್ದ ಧರಾಸನಾ ಉಪ್ಪಿನ ಕಾರ್ಖಾನೆಗೆ ದಾಳಿ ಇಡುತ್ತೇನೆ ಎಂದು ವೈಸ್‌ರಾಯ್ ಇರ‍್ವಿನ್‌ಗೆ ಪತ್ರ ಬರೆದರು; ಆಗ ಪೊಲೀಸರು, 4.5.1930ರಂದು ಗಾಂಧೀಯವರನ್ನು ಬಂಧಿಸಿದರು.

ಉಪ್ಪಿನ ಕಾರ್ಖಾನೆಗೆ ಲಗ್ಗೆಯಿಟ್ಟ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಲಾಠಿಯಿಂದ ಬಡಿದರು; ತಲೆ ಒಡೆದರು, ಹೊಟ್ಟೆ ಮತ್ತು ವೃಷಣಗಳಿಗೆ ತುಳಿದರು; ಕನಿಷ್ಠ ಇಬ್ಬರು ಮೃತಪಟ್ಟರು. ಲಾಠಿಯಿಂದ ಬಡಿಯುತ್ತಿದ್ದ ಪೊಲೀಸರ ಎದುರು ಹೋಗಿ ನಿಲ್ಲುತ್ತಿದ್ದ ಸತ್ಯಾಗ್ರಹಿಗಳನ್ನು ಕಂಡು, ಲಾಠಿ ಏಟು ತಿನ್ನುತ್ತಿದ್ದವರ ನೋವು, ಗಾಯಗಳನ್ನು ಕಂಡು ವಿದೇಶಿ ಪತ್ರಕರ್ತರು ನಿಬ್ಬೆರಗಾದರು! ಏಟು ತಿನ್ನುತ್ತಿರುವ ಸತ್ಯಾಗ್ರಹಿಗಳಿಂದ, ಇಂತಹ ಅಹಿಂಸೆ ಹೇಗೆ ಸಾಧ್ಯ ಎಂದು ಅಚ್ಚರಿಗೊಳ ಗಾದರು; ಪೊಲೀಸರ ಈ ದಬ್ಬಾಳಿಕೆಯು ಅಮೆರಿಕ ಮತ್ತು ಯುರೋಪಿನ ಪತ್ರಿಕೆಗಳಲ್ಲಿ ವಿವರವಾಗಿ ವರದಿಯಾಯಿತು.

ಈ ಸತ್ಯಾಗ್ರಹದ ಪರಿಣಾಮವಾಗಿ, 5.3.1931ರಂದು, ಅಂದರೆ ಒಂದು ವರ್ಷದ ನಂತರ, ‘ಗಾಂಧಿ ಇರ‍್ವಿನ್ ಒಪ್ಪಂದ’ ಜಾರಿಗೆ ಬಂತು. ಅದರ ಪ್ರಕಾರ 90000 ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲಾಯಿತು. ಆದರೆ ಉಪ್ಪಿನ ಮೇಲಿನ ತೆರಿಗೆ ಮುಂದುವರಿಯಿತು.‘ಸಮುದ್ರ ತೀರದಲ್ಲಿರುವ ವ್ಯಕ್ತಿಗಳು ಉಪ್ಪನ್ನು ಮುಕ್ತವಾಗಿ ತಯಾರಿಸಬಹುದು’ ಎಂದು ಸರಕಾರ ಅನುಮತಿ ನೀಡಿತೇ ಹೊರತು, ದೇಶದಾದ್ಯಂತ ಉಪ್ಪಿನ ಮೇಲಿನ ತೆರಿಗೆ ರದ್ದುಗೊಳ್ಳಲಿಲ್ಲ.

ಮಾತ್ರವಲ್ಲ, ಆ ತೆರಿಗೆಯು ಮುಂದಿನ 17 ವರ್ಷ ಮುಂದುವರಿಯಿತು! ಕೊನೆಗೆ, 6.4.1946ರಂದು ಗಾಂಧೀಜಿಯವರ ಮನವಿಯ ಮೇರೆಗೆ ವೈಸ್‌ರಾಯ್ ಎಕ್ಸಿಕ್ಯುಟಿವ್ ಕೌನ್ಸಿಲ್‌ನ ಸದಸ್ಯ ರೋಲ್ಯಾಂಡ್ಸ್ ಎಂಬಾತ ಉಪ್ಪಿನ ತೆರಿಗೆ ರದ್ದುಗೊಳಿಸುವ ಆದೇಶ ನೀಡಿದ; ಆದರೆ ವೈಸ್‌ರಾಯ್ ವಾವೆಲ್‌ನು ಅದನ್ನು ತಿರಸ್ಕರಿಸಿದ. ಆ ನಂತರ, ಜವಹರ್‌ಲಾಲ್ ನೆಹರೂ ಅವರು ಮುಖ್ಯಸ್ಥ ರಾಗಿದ್ದ ಮಧ್ಯಂತರ ಸರಕಾರ (ಇಂಟರಿಮ್ ಗವರ್ನಮೆಂಟ್ ಆಫಗ ಇಂಡಿಯಾ)ವು ಉಪ್ಪಿನ ಮೇಲಿನ ತೆರಿಗೆಯನ್ನು 1947ರಲ್ಲಿ ರದ್ದುಗೊಳಿಸಿತು.

1930ರಲ್ಲಿ ಸಾವಿರಾರು ಜನರು ಲಾಠಿ ಏಟು ತಿಂದ ಉಪ್ಪಿನ ಸತ್ಯಾಗ್ರಹದ ಫಲ ಉಣ್ಣಲು 1947ರ ತನಕ, ಅಂದರೆ ಬ್ರಿಟಿಷರು ನಮ್ಮ ದೇಶವನ್ನು ತೊರೆಯುವ ವರ್ಷದ ತನಕ ಕಾಯಬೇಕಾಯಿತು!