Vishweshwar Bhat Column: ʼಹೇರ್ ಆಫ್ ದಿ ಡಾಗ್ʼ ಅಂದರೇನು ?
ಟೋಪಿ ನೆಲಕ್ಕೆ ಬಿದ್ದ ತಕ್ಷಣ ಆಟಗಾರರು ಸ್ಪರ್ಧೆಯನ್ನು ಶುರುಮಾಡಬೇಕಿತ್ತು. ಅಂದರೆ, ಟೋಪಿ ಕೆಳಗೆ ಬಿದ್ದ ಕ್ಷಣದ ಕೆಲಸ ಆರಂಭವಾಗಬೇಕು ಎಂಬ ಅರ್ಥದಿಂದ ಈ ನುಡಿಗಟ್ಟು ಬಳಕೆಗೆ ಬಂದಿತು. ಹಾಗೆ 'Hair of the Dog' ಎಂಬ ನುಡಿಗಟ್ಟು ಇದೆ. ಇದರ ಪೂರ್ಣ ರೂಪ 'Hair of the dog that bit you'.
-
ಸಂಪಾದಕರ ಸದ್ಯಶೋಧನೆ
ಅನೇಕ ಸಂದರ್ಭಗಳಲ್ಲಿ ನಾವು ನುಡಿಗಟ್ಟುಗಳನ್ನು ಬಳಸುತ್ತೇವೆ. ಅದರ ಅರ್ಥ ಗೊತ್ತಿರುತ್ತದೆ, ಆದರೆ ಅದರ ಬಳಕೆ ಹೇಗೆ ಬಂತು ಮತ್ತು ಅದರ ಹಿಂದಿನ ಅರ್ಥವೇನು ಎಂಬುದನ್ನು ಹೆಚ್ಚಾಗಿ ತಿಳಿದುಕೊಳ್ಳಲು ಹೋಗುವುದಿಲ್ಲ. ಅದರಲ್ಲೂ ಇಂಗ್ಲಿಷ್ ಭಾಷೆಯಲ್ಲಿ ಈ ರೀತಿಯ ಅನುಭವ ಸಾಮಾನ್ಯ. ಉದಾಹರಣೆಗೆ Drop of the hat ಅಂತ ಎಲ್ಲರೂ ಆಗಾಗ ಹೇಳುತ್ತಾರೆ.
ಇದು ಅತ್ಯಂತ ಜನಪ್ರಿಯ ನುಡಿಗಟ್ಟುಗಳಲ್ಲಿ ಒಂದು. ಯಾವುದೇ ವಿಳಂಬ ಮಾಡದೇ, ಆಲೋಚನೆ ಮಾಡದೇ ಅಥವಾ ಕ್ಷಣಾರ್ಧದಲ್ಲಿ ಒಂದು ಕೆಲಸವನ್ನು ಮಾಡಿದರೆ ಅದನ್ನು ವಿವರಿಸಲು ಈ ಶಬ್ದ ವನ್ನು ಬಳಸಲಾಗುತ್ತದೆ. ಇದರ ಮೂಲ 19ನೇ ಶತಮಾನದ ಅಮೆರಿಕದ ಇತಿಹಾಸದಲ್ಲಿದೆ.
ಆ ಕಾಲದಲ್ಲಿ ಬೀದಿ ಜಗಳಗಳು ಅಥವಾ ಕುದುರೆ ರೇಸ್ʼಗಳಂಥ ಸ್ಪರ್ಧೆಗಳನ್ನು ಪ್ರಾರಂಭಿಸಲು ಇಂದಿನಂತೆ ‘ಸ್ಟಾರ್ಟರ್ ಪಿಸ್ತೂಲ್’ ಅಥವಾ ಇಲೆಕ್ಟ್ರಾನಿಕ್ ಸಂಕೇತಗಳಿರಲಿಲ್ಲ. ಆಗ ಪಂದ್ಯದ ಸಂಘಟಕ ಅಥವಾ ತೀರ್ಪುಗಾರ ತನ್ನ ಕೈಯಲ್ಲಿದ್ದ ಹ್ಯಾಟ್ (ಟೋಪಿ) ಅನ್ನು ಕೆಳಕ್ಕೆ ಬಿಡುತ್ತಿದ್ದ ಅಥವಾ ವೇಗವಾಗಿ ಕೆಳಕ್ಕೆ ಬೀಸುತ್ತಿದ್ದ.
ಟೋಪಿ ನೆಲಕ್ಕೆ ಬಿದ್ದ ತಕ್ಷಣ ಆಟಗಾರರು ಸ್ಪರ್ಧೆಯನ್ನು ಶುರುಮಾಡಬೇಕಿತ್ತು. ಅಂದರೆ, ಟೋಪಿ ಕೆಳಗೆ ಬಿದ್ದ ಕ್ಷಣದ ಕೆಲಸ ಆರಂಭವಾಗಬೇಕು ಎಂಬ ಅರ್ಥದಿಂದ ಈ ನುಡಿಗಟ್ಟು ಬಳಕೆಗೆ ಬಂದಿತು. ಹಾಗೆ 'Hair of the Dog' ಎಂಬ ನುಡಿಗಟ್ಟು ಇದೆ. ಇದರ ಪೂರ್ಣ ರೂಪ 'Hair of the dog that bit you'.
ಇದನ್ನೂ ಓದಿ: Vishweshwar Bhat Column: ಒಳ್ಳೆಯ ಯೋಜನೆ, ಕೆಟ್ಟ ಅನುಷ್ಠಾನ
ಇದರ ನೇರ ಅರ್ಥ ‘ನಿನ್ನನ್ನು ಕಚ್ಚಿದ ನಾಯಿಯ ಕೂದಲು’ ಎಂದಾಗಿದ್ದರೂ, ಇದರ ಬಳಕೆಯು ಕುಡಿತ ಮತ್ತು ಹ್ಯಾಂಗೋವರ್‌ಗೆ ಸಂಬಂಧಿಸಿದೆ. ಹಾಗಾದರೆ Hair of the Dog ಅಂದರೆ ಏನು? ಯಾರಾದರೂ ಅತಿಯಾಗಿ ಮದ್ಯಪಾನ ಮಾಡಿ, ಮರುದಿನ ಬೆಳಗ್ಗೆ ಎದ್ದಾಗ ತಲೆನೋವು, ಸುಸ್ತು ಅಥವಾ ತಲೆಸುತ್ತು ಅನುಭವಿಸುತ್ತಿದ್ದರೆ, ಆ ಹ್ಯಾಂಗೋವರ್ ಇಳಿಸಲು ಪುನಃ ಅಲ್ಪ ಪ್ರಮಾಣದಲ್ಲಿ ಮದ್ಯ ಸೇವಿಸುವುದನ್ನು 'Hair of the dog' ಎಂದು ಕರೆಯಲಾಗುತ್ತದೆ.
ಅಂದರೆ, ‘ಯಾವ ವಸ್ತು ನಿನಗೆ ತೊಂದರೆ ನೀಡಿದೆಯೋ, ಅದೇ ವಸ್ತುವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ಆ ತೊಂದರೆ ನಿವಾರಣೆಯಾಗುತ್ತದೆ’ ಎಂಬ ನಂಬಿಕೆ ಇದರ ಹಿಂದಿದೆ. ಈ ನುಡಿಗಟ್ಟು ಬಂದಿದ್ದು ಹೇಗೆ? ಈ ನುಡಿಗಟ್ಟಿನ ಮೂಲವು ಪುರಾತನ ಕಾಲದ ಒಂದು ಮೂಢ ನಂಬಿಕೆ ಅಥವಾ ಜಾನಪದ ವೈದ್ಯಕೀಯ ಪದ್ಧತಿಯಲ್ಲಿದೆ.
ಹಳೆಯ ಕಾಲದಲ್ಲಿ ಯಾರಿಗಾದರೂ ಹುಚ್ಚು ನಾಯಿ ಕಚ್ಚಿದರೆ, ಆ ಗಾಯ ವಾಸಿಯಾಗಲು ಅದೇ ನಾಯಿಯ ಒಂದಷ್ಟು ಕೂದಲನ್ನು ಕಿತ್ತು ಗಾಯದ ಮೇಲೆ ಹಚ್ಚಲಾಗುತ್ತಿತ್ತು. ಹೀಗೆ ಮಾಡುವು ದರಿಂದ ನಾಯಿಯ ವಿಷ ಇಳಿಯುತ್ತದೆ ಮತ್ತು ಗಾಯ ಬೇಗ ಗುಣವಾಗುತ್ತದೆ ಎಂಬ ಬಲವಾದ ನಂಬಿಕೆ ಇತ್ತು. ಲ್ಯಾಟಿನ್ ಭಾಷೆಯಲ್ಲಿ ಒಂದು ಪದಪುಂಜವಿದೆ- ಸಿಮಿಲಿಯಾ ಸಿಮಿಲಿಬಸ್ ಕ್ಯುರೆಂಟರ್ (Similia Similibus Curentur). ಇದರ ಅರ್ಥ ‘ಸಮಾನವಾದದ್ದು ಸಮಾನವಾದದ್ದನ್ನು ಗುಣಪಡಿಸುತ್ತದೆ’.
ಇದೇ ತತ್ವವು ಆಧುನಿಕ ಹೋಮಿಯೋಪತಿಯಲ್ಲೂ ಅಲ್ಪಮಟ್ಟಿಗೆ ಬಳಕೆಯಲ್ಲಿದೆ. ಕಾಲಕ್ರಮೇಣ, ನಾಯಿ ಕಡಿತದ ಈ ಚಿಕಿತ್ಸಾ ಪದ್ಧತಿ ಮಾಯವಾದರೂ, ಭಾಷೆಯಲ್ಲಿ ಈ ನುಡಿಗಟ್ಟು ಉಳಿದು ಕೊಂಡಿತು. 1546ರಲ್ಲಿ ಜಾನ್ ಹೇವುಡ್ ಎಂಬ ಕವಿ ತನ್ನ ಕೃತಿಯಲ್ಲಿ ಹ್ಯಾಂಗೋವರ್‌ಗೆ ಸಂಬಂಧಿಸಿ ದಂತೆ ಈ ಪದವನ್ನು ಬಳಸಿದ ಉದಾಹರಣೆ ಸಿಗುತ್ತದೆ.
ಇದು ವೈಜ್ಞಾನಿಕವಾಗಿ ಸರಿಯೇ? ವೈದ್ಯಕೀಯ ವಿಜ್ಞಾನದ ಪ್ರಕಾರ, ಹ್ಯಾಂಗೋವರ್ ಇಳಿಸಲು ಮತ್ತೆ ಮದ್ಯ ಸೇವಿಸುವುದು ಒಳ್ಳೆಯದಲ್ಲ. ಮದ್ಯಪಾನ ಮಾಡಿದಾಗ ದೇಹದಲ್ಲಿ ಎಥನಾಲ್ ಅಂಶ ಇರುತ್ತದೆ. ಅದು ಮೆಟಬಾಲಿಸಂಗೆ ಒಳಗಾದಾಗ ‘ಅಸಿಟಾಲ್ಡಿಹೈಡ್’ ಎಂಬ ವಿಷಕಾರಿ ಅಂಶವಾಗಿ ಬದಲಾಗುತ್ತದೆ. ಇದು ಹ್ಯಾಂಗೋವರ್‌ಗೆ ಪ್ರಮುಖ ಕಾರಣ.
ಮರುದಿನ ಮತ್ತೆ ಕುಡಿದಾಗ, ದೇಹವು ಹಳೆಯ ವಿಷಕಾರಿ ಅಂಶವನ್ನು ಬಿಟ್ಟು ಹೊಸದಾಗಿ ಬಂದ ಎಥನಾಲ್ ಅನ್ನು ಸಂಸ್ಕರಿಸಲು ಮುಂದಾಗುತ್ತದೆ. ಇದರಿಂದ ತಾತ್ಕಾಲಿಕವಾಗಿ ಆರಾಮ ಎನಿಸಿ ದರೂ, ಇದು ಸಮಸ್ಯೆಯನ್ನು ಮುಂದೂಡುತ್ತದೆಯೇ ಹೊರತು ಗುಣಪಡಿಸುವುದಿಲ್ಲ. ಅಂತಿಮ ವಾಗಿ ಹ್ಯಾಂಗೋವರ್ ಮತ್ತಷ್ಟು ತೀವ್ರವಾಗುತ್ತದೆ. ಅನೇಕ ಇಂಗ್ಲಿಷ್ ಕಾದಂಬರಿಗಳಲ್ಲಿ ಮತ್ತು ಹಳೆಯ ಸಿನಿಮಾಗಳಲ್ಲಿ ಈ ಸಂಭಾಷಣೆಯನ್ನು ನಾವು ಕೇಳಬಹುದು.
ಉದಾಹರಣೆಗೆ, ಒಬ್ಬ ವ್ಯಕ್ತಿ ಬೆಳಗ್ಗೆ ಎದ್ದು ತಲೆ ಹಿಡಿದು ಕುಳಿತಾಗ, ಅವನ ಸ್ನೇಹಿತ ’Take a hair of the dog’ ಎನ್ನಬಹುದು. ಇದರರ್ಥ ‘ಒಂದು ಸಣ್ಣ ಪೆಗ್ ಹಾಕಿಕೋ, ಎಲ್ಲ ಸರಿಯಾಗುತ್ತದೆ’ ಎಂದು.