Rangaswamy Mookanahally Column: ಸ್ತ್ರೀ ಎಂದರೆ ಕಳೆದ ನಿನ್ನೆಯ ನೆನಪು...
ಬದುಕೆನ್ನುವ ಬಂಡಿ ಎಳೆಯಲು ನೊಗಕ್ಕೆ ಇಬ್ಬರೂ ಹೆಗಲು ಕೊಡಬೇಕು ಎನ್ನುವ ಅರಿವು ಆಕೆಗಿರುತ್ತದೆ. ತಮಗೆ ಬೇಕಾದಾಗ ‘ಹೆಣ್ತನ’ವನ್ನು ಬಳಸಿಕೊಳ್ಳುವ, ಬೇಡವೆಂದಾಗ ಇನ್ನೊಂದು ರೀತಿ ವರ್ತಿಸುವ ಹೆಂಗಸರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಎಲ್ಲಾ ಗಂಡ ಸರೂ ಹೇಗೆ ಕೆಟ್ಟವರಲ್ಲವೋ, ಹಾಗೆ ಎಲ್ಲ ಹೆಂಗಸರು ಕೂಡ ಒಳ್ಳೆಯವರಲ್ಲ

ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ

ವಿಶ್ವರಂಗ
ರಂಗಸ್ವಾಮಿ ಮೂಕನಹಳ್ಳಿ
ಹೆಣ್ಣು ಎಂದರೆ ಕೀಳು ಎನ್ನುವ ಮನಸ್ಥಿತಿ ಇನ್ನೂ ಹೋಗಿಲ್ಲ. ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆ ಇನ್ನೂ ಪೂರ್ಣವಾಗಿ ನಿಂತಿಲ್ಲ. ಪ್ರತಿ 106 ಪುರುಷರಿಗೆ 100 ಮಹಿಳೆ ಯರು ಇದ್ದಾರೆ. ಈ ಲೆಕ್ಕಾಚಾರದಲ್ಲಿ ನೋಡಿದಾಗ, ಸದ್ಯದ ಪರಿಸ್ಥಿತಿಯಲ್ಲಿ 9 ಕೋಟಿ ಗಂಡಸರಿಗೆ ಮದುವೆಯಾಗಲು ಹೆಣ್ಣು ಸಿಗುವುದಿಲ್ಲ ಎನ್ನುವುದು ತಿಳಿಯುತ್ತದೆ.
ಇವತ್ತಿಗೆ ಹೆಣ್ಣು-ಗಂಡು ಎನ್ನುವುದು ದೈಹಿಕ ವ್ಯತ್ಯಾಸಕ್ಕೆ ಮಾತ್ರ ಸೀಮಿತವಾಗಿದೆ. ಏಕೆಂ ದರೆ ಮಹಿಳೆ ಕೂಡ ಇಂದು ನಭವನ್ನು ದಾಟಿದ್ದಾಳೆ. ಬದುಕಿನ ಎಲ್ಲಾ ಮಜಲು ಗಳಲ್ಲೂ ಪುರುಷನ ಭುಜಕ್ಕೆ ಭುಜ ಕೊಟ್ಟು ನಡೆಯುತ್ತಿದ್ದಾಳೆ. ಇದು ಒಂದು ಚಿತ್ರಣ ಮಾತ್ರ! ಇಂದಿಗೂ ಮನೆಯ ಯಜಮಾನರ ಮಾತು ಕೇಳಿ, ಅವರ ಆಣತಿಯಂತೆ ನಡೆಯಬೇಕಾಗಿದ ಸ್ಥಿತಿಯಿರುವ ಕೋಟ್ಯಂತರ ಮಹಿಳೆಯರು ನಮ್ಮಲ್ಲಿದ್ದಾರೆ. ಈ ಚಿತ್ರಣವು ನಮ್ಮಲ್ಲಿ ‘ಅಯ್ಯೋ ಪಾಪ’ ಎನ್ನಿಸುವ ಭಾವನೆಯನ್ನು ಹುಟ್ಟುಹಾಕುತ್ತದೆ. ಆದರೆ, ಇವೆರಡಕ್ಕಿಂತ ಭಿನ್ನವಾದ ಇನ್ನೊಂದು ಚಿತ್ರಣವೂ ಇದೆ. ಹಣಕಾಸು ಸ್ಥಿತಿ ಉತ್ತಮವಿದ್ದೂ, ವಿದ್ಯಾಭ್ಯಾಸ ವಿದ್ದೂ ಗಂಡು ಪ್ರಾಣಿಯನ್ನು ಬಳಸಿ ಕೊಳ್ಳುವ ಹೆಂಗಸರು ಈ ವರ್ಗಕ್ಕೆ ಬರುತ್ತಾರೆ! ಮಾರ್ಚ್ ತಿಂಗಳ ಈ ದಿನದವರೆಗೆ, ಹೆಂಡತಿ ಕಾಟ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಗಂಡಸರ ಸಂಖ್ಯೆ ಎಷ್ಟು ಎಂದು ನಿಖರವಾಗಿ ತಿಳಿಯುತ್ತಿಲ್ಲ. ಆದರೆ ಸುದ್ದಿಯಾದದ್ದು ಮಾತ್ರ 7.
ಇದನ್ನೂ ಓದಿ: Rangaswamy Mookanahalli Column: ಯಾವುದು ವಿದ್ಯೆ ? ಮಂಗಳವಾರದ ಬೆಳಗಿನ ಜಿಜ್ಞಾಸೆ !
ಒಂದು ಸೋಷಿಯಲ್ ಎಕ್ಸ್‌ಪರಿಮೆಂಟ್ ನಡೆಯುತ್ತಿತ್ತು. ಅಲ್ಲಿನ ನವಯುವತಿಯರನ್ನು, “ನೀವು ಮದುವೆ ಆಗುವ ಹುಡುಗ ಎಷ್ಟು ವೇತನ ಗಳಿಸುತ್ತಿರಬೇಕು?" ಎನ್ನುವ ಪ್ರಶ್ನೆಯನ್ನು ಕೇಳಲಾಯಿತು. ಆಗ ಹೊಮ್ಮಿದ ಉತ್ತರಗಳು ತಲೆಸುತ್ತು ತರಿಸುವಂತಿದ್ದವು. ಒಬ್ಬಾಕೆ “ಮಾಸಿಕ 2 ಲಕ್ಷ" ಎಂದರೆ, ಇನ್ನೊಬ್ಬಾಕೆ “ಐದು ಲಕ್ಷ ಮಿನಿಮಮ್ ಇರಬೇಕು" ಎಂದಳು. “ವರ್ಷಕ್ಕೆ ಕೋಟಿ ಇರದಿದ್ದರೆ ಇವತ್ತಿನ ದಿನದಲ್ಲಿ ಒಂದು ಮಟ್ಟಕ್ಕೆ ಬದುಕಲು ಹೇಗೆ ಸಾಧ್ಯ?" ಎಂಬ ಮರುಪ್ರಶ್ನೆ ಹಾಕಿದಾಕೆಯನ್ನು ಮರೆಯುವುದು ಹೇಗೆ? ನಿಜಕ್ಕೂ ಸ್ವಾಭಿ ಮಾನವಿರುವ ಯಾವ ಹೆಣ್ಣು ಕೂಡ ತನ್ನ ಜೀವನ ಸಂಗಾತಿಯನ್ನು ಹಣದ ಮಾನದಂಡ ದಿಂದ ಮಾತ್ರವೇ ನೋಡುವುದಿಲ್ಲ.
ಬದುಕೆನ್ನುವ ಬಂಡಿ ಎಳೆಯಲು ನೊಗಕ್ಕೆ ಇಬ್ಬರೂ ಹೆಗಲು ಕೊಡಬೇಕು ಎನ್ನುವ ಅರಿವು ಆಕೆಗಿರುತ್ತದೆ. ತಮಗೆ ಬೇಕಾದಾಗ ‘ಹೆಣ್ತನ’ವನ್ನು ಬಳಸಿಕೊಳ್ಳುವ, ಬೇಡವೆಂದಾಗ ಇನ್ನೊಂದು ರೀತಿ ವರ್ತಿಸುವ ಹೆಂಗಸರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಯಾಗು ತ್ತಿದೆ. ಎಲ್ಲಾ ಗಂಡಸರೂ ಹೇಗೆ ಕೆಟ್ಟವರಲ್ಲವೋ, ಹಾಗೆ ಎಲ್ಲ ಹೆಂಗಸರು ಕೂಡ ಒಳ್ಳೆಯ ವರಲ್ಲ. ಬದಲಾದ ಸಮಾಜ, ಸನ್ನಿವೇಶಗಳು ಮನುಷ್ಯನ ಆಸೆ-ಆಕಾಂಕ್ಷೆಗಳನ್ನು ಬದಲಿಸಿವೆ. ಹೀಗಾಗಿ ಇದರಲ್ಲಿ ಕೂಡ ಹೆಣ್ಣು-ಗಂಡು ಎನ್ನುವ ವ್ಯತ್ಯಾಸ ಉಳಿದಿಲ್ಲ.
ನೀವು ನಮ್ಮ ಇತಿಹಾಸವನ್ನು ಒಮ್ಮೆ ಸುಮ್ಮನೆ ತೆಗೆದುನೋಡಿ. ನಮ್ಮದು ಎಂದರೆ ಕೇವಲ ಭಾರತೀಯ ಇತಿಹಾಸವಲ್ಲ, ಮನುಷ್ಯನ ಇತಿಹಾಸವನ್ನೂ ಒಮ್ಮೆ ಕೆದಕಿನೋಡಿ. ಸಾವಿರಾರು ವರ್ಷದಿಂದ ಹೆಣ್ಣು-ಗಂಡು ಸುಖವಾಗಿ ಸಹಬಾಳ್ವೆ ನಡೆಸಿಕೊಂಡು ಬಂದದ್ದು ಕಾಣಸಿಗುತ್ತದೆ. ಅಲ್ಲಿ ಕೂಡ ಅಲ್ಲೊಂದು ಇಲ್ಲೊಂದು ಅಪವಾದ ಸಿಗುತ್ತದೆ, ಆದರೆ ದೊಡ್ಡ ಚಿತ್ರಣ ನೋಡಿದಾಗ ಅಲ್ಲಿ ಕಾಣಸಿಗುವುದು- ಹೆಣ್ಣು ಸದಾ ಗಂಡಿನ ಬೆನ್ನಿಗೆ ನಿಂತು ಅವನ ಯಶಸ್ಸಿಗೆ ಕಾರಣವಾಗುತ್ತಿದ್ದಳು ಎಂಬುದು.
ಸಾಮಾನ್ಯ ಕುಟುಂಬ ವ್ಯವಸ್ಥೆಯನ್ನು ನೋಡಿ, ದೈಹಿಕವಾಗಿ ಹೆಂಗಸಿಗಿಂತ ಶಕ್ತಿಶಾಲಿ ಯಾಗಿದ್ದ ಗಂಡಸು ಹೊರಗೆ ದುಡಿಯಲು ಹೋಗುತ್ತಿದ್ದ. ಮಕ್ಕಳು, ಮನೆ, ಕುಟುಂಬದ ನಿರ್ವಹಣೆ ಮುಂತಾದವು ಹೆಂಗಸಿನ ಹೆಗಲೇರುತ್ತಿದ್ದವು. ಎಲ್ಲಿಯ ತನಕ ಈ ವ್ಯವಸ್ಥೆಯನ್ನು ಒಪ್ಪಿಕೊಂಡು ಬದುಕನ್ನು ಸಾಗಿಸಲಾಯಿತೋ ಅಲ್ಲಿಯವರೆಗೆ ಬದುಕಿನಲ್ಲಿ ಸಾಮರಸ್ಯ ವಿತ್ತು.
ಇದೇಕೆ ಅವನೇ ಮಾಡಬೇಕು? ಅದ್ಯಾಕೆ ಅವಳೇ ಮಾಡಬೇಕು? ಎನ್ನುವ ವಿತಂಡವಾದಗಳು ಯಾವಾಗ ಸಮಾಜದಲ್ಲಿ ಶುರುವಾದವೋ, ಆಗ ಮೇಲು-ಕೀಳು ಅಥವಾ ಅವಳಿಗಿಂತ ಇವನು ಶ್ರೇಷ್ಠ ಎನ್ನುವ ಭಾವನೆಗಳು ಟಿಸಿಲೊಡೆದವು. ಪಾಶ್ಚಾತ್ಯ ದೇಶದಲ್ಲಿ ಬೆಳೆದು ಹೆಮ್ಮರವಾದ ಈ ವಾದವು ಭಾರತಕ್ಕೂ ಕಾಲಿಟ್ಟಿತು. ಈಗ ಈ ವಿಷಯದಲ್ಲಿ ಜಗತ್ತೇ ಒಂದು ಮನೆಯಾಗಿದೆ.
‘ಒಂದು ಹೆಣ್ಣಿಗೊಂದು ಗಂಡು, ಹೇಗೋ ಸೇರಿ ಹೊಂದಿಕೊಂಡು, ಕಾಣದೊಂದ ಕನಸು ಕಂಡು, ಮಾತಿಗೊಲಿಯದಮೃತವುಂಡು ದುಃಖ ಹಗುರವೆನುತಿರಿ ಪ್ರೇಮವೆನಲು ಹಾಸ್ಯವೆ’ ಎನ್ನುವ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಮಾತುಗಳು ಇಂದು ಮಂಕಾಗಿವೆ. ಇವತ್ತೇ ನಿದ್ದರೂ ವ್ಯವಹಾರ. ತೀರಾ ಇತ್ತೀಚೆಗೆ ಮಹಾರಾಷ್ಟ್ರದ ನಗರವೊಂದರಲ್ಲಿ, ಹುಡುಗನ ಸಿಬಿಲ್ ಕ್ರೆಡಿಟ್ ಸ್ಕೋರ್ ಚೆನ್ನಾಗಿಲ್ಲ ಎನ್ನುವ ಕಾರಣಕ್ಕೆ ಮದುವೆ ಮುರಿದುಬಿದ್ದಿದ್ದು ನಿಮಗೆ ನೆನಪಿದೆ ಎಂದು ಭಾವಿಸುವೆ.
ಮುಂಬರುವ ದಿನಗಳಲ್ಲಿ ಜಾತಕ ನೋಡುವ ಪ್ರಕ್ರಿಯೆ ನಿಂತು, ಆ ಜಾಗದಲ್ಲಿ ಹುಡುಗ-ಹುಡುಗಿಯ ಬ್ಲಡ್ ರಿಪೋರ್ಟ್ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಹೊಂದಾಣಿಕೆ ಮಾಡುವ ಪರಿಪಾಠ ಶುರುವಾಗುತ್ತದೆ ಎನ್ನುವ ಮಟ್ಟಕ್ಕೆ ಬದುಕು ಬದಲಾಗಲಿದೆ. ಬದಲಾವಣೆ ತಪ್ಪು ಎನ್ನುವುದು ಈ ಬರಹದ ಉದ್ದೇಶವಲ್ಲ.
ಬದಲಿಗೆ, ಬದಲಾವಣೆಯೇ ಜೀವನ ಎನ್ನುವುದನ್ನು ಹೇಳುವುದು ಉದ್ದೇಶ. ಆ ಬದಲಾವಣೆ ಯು ಒಳಿತಿಗಾಗಿ ಆಗಲಿ ಎನ್ನುವುದು ಆಶಯ. ಈ ಮಟ್ಟದ ಭಾವತೀವ್ರತೆ ನಮ್ಮ ಸಮಾಜ ದಲ್ಲಿ, ಒಟ್ಟಾರೆ ಜಗತ್ತಿನಲ್ಲಿ ಏಕಾಯಿತು ಗೊತ್ತಾ? ಹೆಣ್ಣನ್ನು ತೀರಾ ಕೆಟ್ಟದಾಗಿ ನಡೆಸಿ ಕೊಂಡ ಕಾರಣದಿಂದ. ಹೀಗೆಂದು ಧೈರ್ಯವಾಗಿ ಹೇಳಬಹುದು.
‘ಬದುಕಿನ ಬಂಡಿಗೆ ಇಬ್ಬರೂ ಬೇಕು, ಒಬ್ಬರನ್ನು ಬಿಟ್ಟು ಇನ್ನೊಬ್ಬರಿಗೆ ಅಸ್ತಿತ್ವವಿಲ್ಲ’ ಎನ್ನುವುದನ್ನು ಮರೆತುದರ ಕಾರಣ ಇಷ್ಟೊಂದು ಬದಲಾವಣೆ ಆಯಿತು. ನಂಬಿಕೆ ನಿಧಾನಕ್ಕೆ ಕರಗಿ ಅಲ್ಲಿ ವ್ಯವಹಾರ, ಸ್ವಸುಖ ಸ್ಥಾನ ಪಡೆದುಕೊಂಡವು. ನೋಡಿ, ನಾವು ಹೆಣ್ಣನ್ನು ದೇವತೆ ಎನ್ನುತ್ತೇವೆ. ಆಕೆಗೆ ಲಕ್ಷ್ಮಿ, ಸರಸ್ವತಿ, ಪಾರ್ವತಿ ಎನ್ನುತ್ತೇವೆ. ನಮ್ಮೆಲ್ಲಾ ತಪ್ಪನ್ನು ಮನ್ನಿಸುವುದರಿಂದ ‘ಕ್ಷಮಯಾಧರಿತ್ರಿ’ ಎನ್ನುತ್ತೇವೆ.
ಆದರೆ ಅದಕ್ಕೆ ತಕ್ಕ ಹಾಗೆ ನಾವು ನಡೆದುಕೊಳ್ಳುವುದಿಲ್ಲ. ಜಗತ್ತು ಇಂದಿಗೂ ಪುರುಷ-ಪ್ರಧಾನವೇ. ‘ಇದು ಭಾರತದಲ್ಲಿ ಮಾತ್ರ’ ಎಂಬ ತಪ್ಪು ತಿಳಿವಳಿಕೆಯಲ್ಲಿದ್ದರೆ ಅದರಿಂದ ಸ್ವಲ್ಪ ಹೊರಬನ್ನಿ ಪ್ಲೀಸ್. ಏಕೆ ಗೊತ್ತೇ? ಇಲ್ಲಿವೆ ನೋಡಿ ಪುರಾವೆಗಳು:
ಅಮೆರಿಕದ ಹಲವು ರಾಜ್ಯಗಳಲ್ಲಿ ಇಂದಿಗೂ ರೇಪಿಸ್ಟ್ ವ್ಯಕ್ತಿಯು ಮಗುವಿನ ಕಸ್ಟಡಿ ಪಡೆಯ ಬಹುದು. ಅಂದರೆ ಆಕಸ್ಮಿಕವಾಗಿ ಇಂಥ ಸಮಯದಲ್ಲಿ ವಿಕ್ಟಿಮ್ ಮಗುವಿಗೆ ಜನ್ಮವಿತ್ತರೆ, ಆ ಮಗುವಿನ ಪೂರ್ಣ ಕಸ್ಟಡಿ ಅಥವಾ ಜಾಯಿಂಟ್ ಕಸ್ಟಡಿ ಪಡೆಯಬಹುದು. ಕೆಲವು ಸನ್ನಿ ವೇಶದಲ್ಲಿ ಇದು ಸಾಧ್ಯವಿಲ್ಲ ಎನ್ನುವುದು ಬಿಟ್ಟರೆ, ಬಹಳ ವೇಳೆ ರೇಪಿಸ್ಟ್ ಮಗುವಿನ ಕಸ್ಟಡಿ ಪಡೆ ಯಲು ಅಪೀಲ್ ಮಾಡಬಹುದು. ಈ ರೀತಿಯ ಸನ್ನಿವೇಶಗಳು 2022ರವರೆಗೂ ದಾಖ ಲಾಗಿವೆ ಎನ್ನುವುದು ನಾವಿನ್ನೂ ಯಾವ ಶತಮಾನದಲ್ಲಿ ಬದುಕು ತ್ತಿದ್ದೇವೆ ಎನ್ನುವುದನ್ನು ತೋರಿಸುತ್ತದೆ. ಇಂಥ ಕಾನೂನುಗಳಲ್ಲಿ ಬದಲಾವಣೆ ಬೇಕಿದೆ.
ಸೌದಿ ಅರೇಬಿಯಾ ಹೆಂಗಸರಿಗೆ ಮತದಾನದ ಅವಕಾಶ ನೀಡಿದ್ದು 2015ರಲ್ಲಿ, ತೀರಾ ಇತ್ತೀ ಚಿನವರೆಗೆ ಹೆಂಗಸರು ಅಲ್ಲಿ ಡ್ರೈವ್ ಮಾಡುವಂತಿರಲಿಲ್ಲ ಎನ್ನುವುದು ಕೂಡ, ಹೆಣ್ಣು ಎಂದರೆ ಎರಡನೇ ದರ್ಜೆ ಎನ್ನುವುದನ್ನು ತೋರಿಸುತ್ತದೆ.
ಈಜಿಪ್ಟ್‌ನಲ್ಲಿ, ಮದುವೆಯಾದ ಹೆಂಗಸು ತರಕಾರಿ, ಹಾಲು, ಹಣ್ಣು ಇತ್ಯಾದಿಗಳನ್ನು ತರಲು ಮಾತ್ರ ಹೊರಗೆ ಹೋಗಬಹುದು. ಇದಲ್ಲದೆ ಮನೆಯಿಂದ ಹೊರಹೋಗಲು ಆಕೆಗೆ ಗಂಡನ ಅನುಮತಿ ಬೇಕು. ಜತೆಗೆ, ಮನೆಯಲ್ಲಿರುವ ಇನ್ನೊಬ್ಬ ಪುರುಷ, ಅಂದರೆ ಅಣ್ಣ, ತಮ್ಮ, ಅಪ್ಪ, ಮಗ ಹೀಗೆ ಇವರಲ್ಲಿ ಯಾರಾದರೊಬ್ಬರ ಜತೆಯಲ್ಲಿ ಹೋಗಬೇಕು ಎನ್ನುವ ನಿಯಮವಿದೆ.
ಇಂದಿಗೂ ಜಗತ್ತಿನ 30ಕ್ಕೂ ಹೆಚ್ಚು ದೇಶಗಳಲ್ಲಿ ಹೆಂಗಸರು ಪಾಸ್‌ಪೋರ್ಟ್ ಪಡೆಯಲು ಗಂಡನ ಅನುಮತಿ ಪತ್ರ ಬೇಕು ಎಂಬ ಪರಿಸ್ಥಿತಿಯಿದ್ದು, ಇದು ಹೆಣ್ಣು-ಗಂಡಿನ ನಡುವಿನ ತಾರತಮ್ಯ ಕೇವಲ ಬಾಯಿಮಾತಿನದಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.
ನೈಜೀರಿಯಾ ದೇಶದಲ್ಲಿ ಹೆಂಡತಿಯ ತಪ್ಪನ್ನು ತಿದ್ದಲು ಆಕೆಯನ್ನು ಹೊಡೆಯಬಹುದು ಎಂದು ಕಾನೂನು ಅನುಮತಿ ನೀಡಿದೆ. ದೈಹಿಕ ಹಲ್ಲೆಗೆ ಕಾನೂನಿನ ರಕ್ಷಣೆ ಸಿಕ್ಕರೆ ಕೇಳುವು ದಿನ್ನೇನು?
ಲಿಂಗ ತಾರತಮ್ಯದ ವಿರುದ್ಧ ಮಂಡಿಸಿದ ವಿಧೇಯಕವು ರಷ್ಯಾ ದೇಶದಲ್ಲಿ ಕಳೆದ 15 ವರ್ಷ ದಿಂದ ನನೆಗುದಿಗೆ ಬಿದ್ದಿದೆ.
ಇವೆಲ್ಲಾ ಮುಸ್ಲಿಂ ರಾಷ್ಟ್ರಗಳ ಕಥೆಗಳು ಎನ್ನುವ ಸಿನಿಕತೆ ಬೇಡ. 1959ರಲ್ಲಿ ಸ್ವಿಜರ್ಲೆಂಡ್ ದೇಶದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡುವ ಪ್ರಸ್ತಾವಕ್ಕೆ 67 ಪ್ರತಿಶತ ಗಂಡಸರು ವಿರೋDiಸಿ, ಅದನ್ನು ತಡೆದಿದ್ದರು. ಸ್ವಿಸ್ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿದ್ದು 1971ರಿಂದ; ಅದು ಕೂಡ ಎಲ್ಲಾ ರಾಜ್ಯಗಳಲ್ಲಿ ಅಲ್ಲ. ಸ್ವಿಸ್‌ನ ಕೊನೆಯ ರಾಜ್ಯವು ಮತ ದಾನದ ಹಕ್ಕನ್ನು ನೀಡಿದ್ದು 1991ರಲ್ಲಿ.
ಇನ್ನು ಸಮಾನ ವೇತನ ಎನ್ನುವ ಪರಿಕಲ್ಪನೆ ತೀರಾ ಹಾಸ್ಯಾಸ್ಪದವಾಗಿಬಿಟ್ಟಿದೆ. ಕಟ್ಟಡ ಕಟ್ಟುವ ಕೂಲಿ ಮಹಿಳೆಯಿಂದ ಕೋಡಿಂಗ್ ಬರೆಯುವ ಮಹಿಳೆಯವರೆಗೆ, ಭಾರತದಿಂದ ಮೊದಲ್ಗೊಂಡು ಅಮೆರಿಕ, ಯುರೋಪ್ ಮುಂತಾದೆಲ್ಲೆಡೆ ವೇತನದಲ್ಲಿನ ಅಸಮಾನತೆ ಇಂದಿಗೂ ಎದ್ದುಕಾಣುವಷ್ಟಿದೆ. ಮನೆ ಕಟ್ಟುವ ಕೆಲಸದಲ್ಲಿ ಕೈಜೋಡಿಸುವ ನಿಂಗಮ್ಮನಿಗೆ 500 ರುಪಾಯಿ ದಿನಗೂಲಿಯಾದರೆ, ನಿಂಗಪ್ಪನಿಗೆ 1 ಸಾವಿರ!
ಹಾಗೆ ನೋಡಲು ಹೋದರೆ, ಬೀಡಿ, ಸಿಗರೇಟು, ಗುಟ್ಕಾ ಎಂದು ಹೆಚ್ಚು ಬ್ರೇಕ್ ತೆಗೆದು ಕೊಳ್ಳುವುದು ಗಂಡು ಪ್ರಾಣಿ. ವೇತನ ಮಾತ್ರ ಕಡಿಮೆ ಸಿಗುವುದು ಹೆಚ್ಚು ಕೆಲಸ ಮಾಡುವ ಹೆಂಗಸಿಗೆ! ಇನ್ನು ಕೋಡಿಂಗ್ ಮಾಡುವ ಉನ್ನತ ಕೆಲಸದಲ್ಲೂ ವೇತನ ತಾರತಮ್ಯ ಇದ್ದೇ ಇದೆ.
‘ಫಸ್ಟ್ ವರ್ಲ್ಡ್’ ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಮುಂದುವರಿದ ದೇಶಗಳ ಕಥೆ ಕೂಡ ಸೇಮ್ ಕಣ್ರೀ! ಒಟ್ಟಾರೆ, ಹೆಣ್ಣು ಎಂದರೆ ಕೀಳು ಎನ್ನುವ ಮನಸ್ಥಿತಿ ಇನ್ನೂ ಹೋಗಿ ಲ್ಲ. ಭಾರತದಲ್ಲಿ ಹೆಣ್ಣು ಭ್ರೂಣಹತ್ಯೆ ಇನ್ನೂ ಪೂರ್ಣವಾಗಿ ನಿಂತಿಲ್ಲ. ಪ್ರತಿ 106 ಪುರುಷ ರಿಗೆ 100 ಮಹಿಳೆಯರು ಇದ್ದಾರೆ. ಈ ಲೆಕ್ಕಾಚಾರದಲ್ಲಿ ನೋಡಿದಾಗ, ಸದ್ಯದ ಪರಿಸ್ಥಿತಿಯಲ್ಲಿ 9 ಕೋಟಿ ಗಂಡಸರಿಗೆ ಮದುವೆಯಾಗಲು ಹೆಣ್ಣು ಸಿಗುವುದಿಲ್ಲ ಎನ್ನುವುದು ತಿಳಿಯುತ್ತದೆ.
ಇದು ಬಹುದೊಡ್ಡ ಸಮಸ್ಯೆ. ಇದೆಷ್ಟು ದೊಡ್ಡ ಸಂಖ್ಯೆ, ದೊಡ್ಡ ಸಮಸ್ಯೆ ಎನ್ನುವುದಕ್ಕೆ ಒಂದು ಚಿಕ್ಕ ಉದಾಹರಣೆ ನೀಡುತ್ತೇನೆ. ಈ ಸಂಖ್ಯೆ ಹೆಚ್ಚು ಕಡಿಮೆ ಆಸ್ಟ್ರೇಲಿಯಾ ದೇಶದ ಮೂರೂವರೆ ಪಟ್ಟು ಹೆಚ್ಚು! ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜನಸಂಖ್ಯೆಯ ಮೂರು ಪಟ್ಟು, ಎಂಟು ನಾರ್ದಿಕ್ ದೇಶಗಳ ನಾಲ್ಕು ಪಟ್ಟು! ಹತ್ತಾರು ಯುರೋಪಿಯನ್ ದೇಶಗಳ ಒಟ್ಟಾರೆ ಜನಸಂಖ್ಯೆಗೂ ಮೀರಿದ್ದು! ಅಂದರೆ ಗಮನಿಸಿ, ಈ ದೇಶಗಳಲ್ಲಿ ಯಾರಿಗೂ ಮದು ವೆಗೆ ಹೆಣ್ಣು ಸಿಗದೆಹೋದರೆ ಏನಾಗಬಹುದು? ಭಾರತ ಅಂಥ ಒಂದು ಅತಿದೊಡ್ಡ ಸಮಸ್ಯೆ ಯನ್ನು ಎದುರಿಸುತ್ತಿದೆ.
ಇದು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತದೆ. ಜನಸಂಖ್ಯಾ ಸ್ಪೋಟದಿಂದ ಬಳಲುವ ಭಾರತದಲ್ಲಿ ಇದೆಂಥ ಸಮಸ್ಯೆ ಅಲ್ಲವೇ? ಹೆಣ್ಣು ಎಂದರೆ ಹೀಗಳೆಯುವ ಸಮಯವಲ್ಲ ವಿದು. ಪ್ರಕೃತಿಯ ವಿರುದ್ಧ ಹೋದದ್ದಕ್ಕೆ ಸಮಾಜ ಈಗಾಗಲೇ ಬೆಲೆ ತೆರುತ್ತಿದೆ. ಮುಂದಿನ ದಶಕದಲ್ಲಿ ಇದರ ಕಾವು ಇನ್ನಷ್ಟು ಹೆಚ್ಚುತ್ತದೆ. ಆ ಬಿಸಿ ಸಮಾಜವನ್ನು ಸುಡುವ ಮುನ್ನ ಎಚ್ಚರವಾಗಬೇಕಿದೆ. ಸಣ್ಣ ಕಿಡಿಯನ್ನು ನಂದಿಸದೆ ಹೋದರೆ, ಅದು ನಗರವನ್ನೇ ಸುಡು ವಷ್ಟು ಶಕ್ತಿಯನ್ನು ಹೊಂದಿರುತ್ತದೆ ಎಂಬುದನ್ನು ಮರೆಯದಿರೋಣ.