ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayaka M Bhatta Column: ದೇವರು: ಗುಂಡಪ್ಪನವರ ವಿಶಿಷ್ಟ ವಿಚಾರಧಾರೆ

ದೇವರೆಂದರೆ ಯಾರು, ಎಲ್ಲಿದ್ದಾನೆ, ಅವನ ಸ್ವರೂಪ ಎಂಥದ್ದು? ಅವನಿರುವುದು ನಿಜವೇ? ಇದ್ದರೆ ನಮಗೇಕೆ ಕಾಣುವುದಿಲ್ಲ, ಕರೆದಾಗೇಕೆ ಬರುವುದಿಲ್ಲ? ಜೀವನವು ಸ್ವಾಭಾವಿಕವಾಗಿ ನಡೆದುಕೊಂಡು ಹೋಗುತ್ತಿರುವಾಗ ದೇವರಿಂದ ನಮಗೆ ಆಗಬೇಕಾ ದ್ದೇನು? ಮುಂತಾದ ಪ್ರಶ್ನೆಗಳು ‘ದೇವರನ್ನು ನಂಬುತ್ತೇವೆ’ ಎನ್ನುವವರಲ್ಲೂ ಇರುವಂಥವೇ! ಇನ್ನು, ಪಾಪ-ಪುಣ್ಯಗಳು, ಅದರಿಂ ದುಂಟಾಗುವ ಫಲ-ಪರಿಣಾಮಗಳ ಕುರಿತೂ ಚರ್ಚೆಗಳಿವೆ. ಹಿಂದೂ ಧರ್ಮದ ಸೈದ್ಧಾಂತಿಕ ನಿಲುವಾದ ಪುನರ್ಜನ್ಮದ ಕುರಿತೂ ನಮಗೆ ನಂಬಿಕೆ-ಅಪನಂಬಿಕೆಗಳಿವೆ.

ದೇವರು: ಗುಂಡಪ್ಪನವರ ವಿಶಿಷ್ಟ ವಿಚಾರಧಾರೆ

Profile Ashok Nayak Mar 9, 2025 12:10 PM

ವಿದ್ಯಮಾನ

ವಿನಾಯಕ ವೆಂ ಭಟ್ಟ, ಅಂಬ್ಲಿಹೊಂಡ

ದೇವರ ಕುರಿತಾಗಿ ನಾವು, ‘ಎಲ್ಲಾ ದೇವರ ದಯೆ, ದೇವರು ದೊಡ್ಡವನು, ದೇವರೇ ಕಾಪಾಡಿದ್ದು, ಎಲ್ಲಾ ದೈವೇಚ್ಛೆ’ ಮುಂತಾ ಗಿ ಮಾತಾಡುವುದಿದೆ. ‘ನಾನು ಆತ್ಮಸಾಕ್ಷಿಯನ್ನು ನಂಬಿ ನಡೆಯುವವನು, ನನಗೆ ದೇವರು-ದಿಂಡರ ಮೇಲೆ ನಂಬಿಕೆಯಿಲ್ಲ’ ಎನ್ನುವವರನ್ನೂ ನಾವು ನೋಡುತ್ತೇವೆ. ದೇವರ ಅಸ್ತಿತ್ವವನ್ನು ನಂಬುವವರನ್ನು ‘ಆಸ್ತಿಕರು’ ಎಂತಲೂ, ನಂಬದವರನ್ನು ‘ನಾಸ್ತಿಕರು’ ಎಂತಲೂ ಕರೆಯವುದು ಸಮಾಜದ ರೂಢಿ.

ಹಾಗೆಯೇ, ದೇವರೆಂದರೆ ಯಾರು, ಎಲ್ಲಿದ್ದಾನೆ, ಅವನ ಸ್ವರೂಪ ಎಂಥದ್ದು? ಅವನಿರುವುದು ನಿಜವೇ? ಇದ್ದರೆ ನಮಗೇಕೆ ಕಾಣುವುದಿಲ್ಲ, ಕರೆದಾಗೇಕೆ ಬರುವುದಿಲ್ಲ? ಜೀವನವು ಸ್ವಾಭಾವಿಕವಾಗಿ ನಡೆದುಕೊಂಡು ಹೋಗುತ್ತಿರುವಾಗ ದೇವರಿಂದ ನಮಗೆ ಆಗಬೇಕಾದ್ದೇನು? ಮುಂತಾದ ಪ್ರಶ್ನೆಗಳು ‘ದೇವರನ್ನು ನಂಬುತ್ತೇವೆ’ ಎನ್ನುವವರಲ್ಲೂ ಇರುವಂಥವೇ! ಇನ್ನು, ಪಾಪ-ಪುಣ್ಯಗಳು, ಅದರಿಂದುಂಟಾಗುವ ಫಲ-ಪರಿಣಾಮಗಳ ಕುರಿತೂ ಚರ್ಚೆಗಳಿವೆ. ಹಿಂದೂ ಧರ್ಮದ ಸೈದ್ಧಾಂತಿಕ ನಿಲುವಾದ ಪುನರ್ಜನ್ಮದ ಕುರಿತೂ ನಮಗೆ ನಂಬಿಕೆ-ಅಪನಂಬಿಕೆಗಳಿವೆ. ಸಣ್ಣಮಕ್ಕಳು “ಅಪ್ಪಾ! ದೇವರು ನಿಜಕ್ಕೂ ಇದ್ದಾನಾ?" ಎಂದು ಕೇಳಿದರೆ, ಸಾಮಾನ್ಯವಾಗಿ “ಹೌದು, ಖಂಡಿತ ಇದ್ದಾನೆ" ಎನ್ನುವಲ್ಲಿಗೆ ಹಿರಿಯರ ಉತ್ತರ ನಿಂತು ಬಿಡುತ್ತದೆ; ಇದನ್ನು ದಾಟಿ ಬರುವ ಮುಂದಿನ ಪ್ರಶ್ನೆಗಳಿಗೆ ತಿಳಿವಳಿಕೆಯ ಕೊರತೆಯಿಂದಾಗಿ ನಮ್ಮಲ್ಲಿ ಉತ್ತರವಿರುವುದಿಲ್ಲ ತಾನೆ? ಪ್ರತ್ಯಕ್ಷವಾಗಿ ಕಾಣುವುದು ಮಾತ್ರವೇ ಸತ್ಯ ಎಂದು ನಂಬುವ ನಮ್ಮಂಥ ‘ಶಿಶುಬುದ್ಧಿ’ ಯವರಿಗೆ, ನಮ್ಮ ಆರು ದರ್ಶನಗಳಲ್ಲಿ ಹೇಳಿದ ಇನ್ನೂ ಐದು ಪ್ರಮಾಣಗಳಿವೆ ಎಂಬ ಪರಿಜ್ಞಾನವೇ ಇರುವುದಿಲ್ಲ.

ಈ ಎಲ್ಲ ೬ ಪ್ರಮಾಣಗಳಿಂದ ಸಿದ್ಧವಾದರೆ ಮಾತ್ರವೇ ವಿಷಯವು ಸಿದ್ಧಾಂತವಾಗುತ್ತದೆ. ಪ್ರಮಾಣಗಳೆಂದರೆ ಜ್ಞಾನಕ್ಕೆ ಸಾಧನ. ಯಾವುದೇ ಜ್ಞಾನಕ್ಕೆ ಸಂಬಂಧಿಸಿ ೩ ವಿಷಯಗಳಿರುತ್ತವೆ. ಅವನ್ನು ಕ್ರಮವಾಗಿ ಪ್ರಮೇಯ, ಪ್ರಮತ ಮತ್ತು ಪ್ರಮಾಣ ಎನ್ನಲಾಗುತ್ತದೆ. ‘ಪ್ರಮೇಯ’ವು ಜ್ಞಾನದ ವಸ್ತುವಾಗಿದ್ದರೆ, ‘ಪ್ರಮತ’ವು ಜ್ಞಾನಿಯೂ, ‘ಪ್ರಮಾಣ’ವು ಜ್ಞಾನದ ಸಾಧನವೂ ಆಗಿರುತ್ತದೆ. ಸರಿಯಾದ ಮನಸ್ಥಿತಿಯಲ್ಲಿರುವ ಪ್ರಮತವು, ಪ್ರಮೇಯಕ್ಕೆ ಸಂಬಂಧಿಸಿ ಸರಿಯಾದ ಪ್ರಮಾಣ ಗಳನ್ನು ಬಳಸಿದಾಗ, ಪ್ರಮತನಿಗೆ ಸರಿಯಾದ ಜ್ಞಾನ ದೊರಕುತ್ತದೆ; ಇಲ್ಲದಿದ್ದರೆ ಭ್ರಮೆ ಅಥವಾ ತಪ್ಪುಜ್ಞಾನ ಮಾತ್ರ ಇರುತ್ತದೆ.

ಅದ್ವೈತ ವೇದಾಂತ ತತ್ತ್ವಶಾಸ್ತ್ರದ ಪ್ರಕಾರ, ನಾವು ಎದುರಿಸುವ ವಿವಿಧ ವಿಷಯಗಳ ಜ್ಞಾನವನ್ನು ಪಡೆಯಲು ಪ್ರಜ್ಞಾ ಪೂರ್ವ ಕವಾಗಿ ಅಥವಾ ಅರಿವಿಲ್ಲದೆ ೬ ಪ್ರಮಾಣಗಳನ್ನು ಬಳಸುತ್ತೇವೆ. ಅವು- ಪ್ರತ್ಯಕ್ಷ, ಅನುಮಾನ, ಉಪಮಾನ, ಅರ್ಥೋಪತ್ತಿ, ಅನುಪಲಬ್ಧಿ ಮತ್ತು ಶಬ್ದ. ಪ್ರತ್ಯಕ್ಷ: ಇದು ನೇರ, ತಕ್ಷಣದ ಅರಿವನ್ನು ಸೂಚಿಸುವಂಥದ್ದು. ಇದು ಬಾಹ್ಯ ಮತ್ತು ಆಂತರಿಕ ವಾಗಿರಬಹುದು. ಬಾಹ್ಯ ಗ್ರಹಿಕೆ ಎಂದರೆ ಇಂದ್ರಿಯಗಳ ಮೂಲಕ ಆಗುವಂಥ ಅರಿವು; ಆಂತರಿಕ ಗ್ರಹಿಕೆ ಎಂದರೆ, ನೋವು, ಆನಂದ ಮುಂತಾದ ಭಾವನೆಗಳ ನೇರ ಮತ್ತು ತಕ್ಷಣದ ಅರಿವು ಮತ್ತು ನಮ್ಮ ಮನದಲ್ಲಿನ ವಿವಿಧ ವಸ್ತುಗಳ ಜ್ಞಾನ ಮತ್ತು ಅಜ್ಞಾನ.

ಇದನ್ನೂ ಓದಿ: Vinayaka M Bhatta Column: ಕನ್ನಡಿಗರಿಗೊಲಿದ ಅದಿಕಾವ್ಯದ ಅಧ್ಯಯನ ಸೌಲಭ್ಯ

ಬಾಹ್ಯಗ್ರಹಿಕೆ ಎಂದರೆ ೫ ಇಂದ್ರಿಯಗಳು ಲೌಕಿಕ ವಸ್ತುಗಳೊಂದಿಗೆ ಪರಸ್ಪರ ಕ್ರಿಯೆಯಿಂದ ಉದ್ಭವಿಸುವಂಥದ್ದು. ನೇರ ಗ್ರಹಿಕೆಯಲ್ಲಿ ಜ್ಞಾನವು ಅತ್ಯಂತ ಸ್ಪಷ್ಟವಾಗಿರುತ್ತದೆ, ಆದರೆ ಅದರ ವ್ಯಾಪ್ತಿಯು ತುಂಬಾ ಸೀಮಿತವಾಗಿರುತ್ತದೆ. ನಾವು ನೇರವಾಗಿ ನೋಡಬಹುದಾದದ್ದು ಈ ವಿಶ್ವದಲ್ಲಿ ಅಸ್ತಿತ್ವದಲ್ಲಿರುವ ವಸ್ತುಗಳ ವಿಶಾಲ ವರ್ಣಪಟಲದ ಅತ್ಯಂತ ಸಣ್ಣಭಾಗ ಮಾತ್ರವಲ್ಲ, ನೇರವಾಗಿ ತಿಳಿದಿರುವುದು ಹಲವೊಮ್ಮೆ ಸತ್ಯದಿಂದ ದೂರವಿರುತ್ತದೆ.

ಅದಕ್ಕಾಗಿಯೇ, ‘ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು’ ಎನ್ನುವುದು. ನಮಗೆ ಪ್ರತ್ಯಕ್ಷವಾಗಿ ಗೋಚರಿಸಿದ್ದರೂ, ಉಳಿದ ೫ ಪ್ರಮಾಣಗಳ ಆಸರೆ ಪಡೆದು ಅದನ್ನು ‘ಸತ್ಯ’ ಎಂದು ತೀರ್ಮಾನಿಸಬೇಕಾಗುತ್ತದೆ. ಅನುಮಾನ: ಒಂದರ ಅರ್ಥ/ಜ್ಞಾನವನ್ನು ಮತ್ತೊಂದು ಜ್ಞಾನದ ಸಹಾಯದಿಂದ ಪಡೆಯುವ ವಿಧಾನವೇ ‘ಅನುಮಾನ’. ಆದ್ದರಿಂದ, ಹೀಗೆ ಪಡೆದ ಜ್ಞಾನವು, ನೇರ, ತಕ್ಷಣದ್ದಲ್ಲ ಮತ್ತು ಎರಡು ವಿಷಯಗಳ ನಡುವಿನ ಬದಲಾಗದ ಸಂಬಂಧದ ಪೂರ್ವಜ್ಞಾನದಿಂದ ಇದನ್ನು ಪಡೆಯಲಾಗುತ್ತದೆ. ಉದಾಹರಣೆಗೆ, ‘ಬೆಂಕಿಯಿಲ್ಲದೆ ಹೊಗೆ ಬರುವುದಿಲ್ಲ, ಹೊಗೆ ಬೆಂಕಿಯಿಂದ ಹುಟ್ಟುತ್ತದೆ ಮತ್ತು ಹೊಗೆ ಇರುವಲ್ಲಿ ಯಾವಾ ಗಲೂ ಬೆಂಕಿಯೂ ಇರುತ್ತದೆ’ ಎಂಬ ನೇರಜ್ಞಾನ. ಆದ್ದರಿಂದ, ದೂರದ ಬೆಟ್ಟದಲ್ಲಿನ ಹೊಗೆಯನ್ನು ಮಾತ್ರ ನೋಡಿ, ‘ಅಲ್ಲಿ ಬೆಂಕಿಯೂ ಇರಬೇಕು’ ಎಂದು ನಾವು ಅನುಮಾನಿಸುತ್ತೇವೆ. ಇದು ತರ್ಕದಿಂದ ನಿರ್ಣೀತವಾಗುವ ಜ್ಞಾನ. ಹೊಗೆಯ ಪ್ರತ್ಯಕ್ಷದ ಆಧಾರದ ಮೇಲೆ ಬೆಂಕಿಯ ಅಸ್ತಿತ್ವವನ್ನು ಅನುಮಾನದ ಆಧಾರದ ಮೇಲೆ ಕಂಡುಕೊಳ್ಳಲಾಗುತದೆ.

ಉಪಮಾನ: ಹೀಗೆಂದರೆ ಹೋಲಿಕೆ ಮತ್ತು ಸಾದೃಶ್ಯ. ಹೋಲಿಕೆಯ ವಿಷಯವನ್ನು ಔಪಚಾರಿಕವಾಗಿ ‘ಉಪಮೇಯ’ ಎಂದೂ, ಹೋಲಿಕೆಯ ವಸ್ತುವನ್ನು ‘ಉಪಮಾನ’ ಎಂದೂ ಕರೆಯಲಾಗುತ್ತದೆ. ನಮಗೆ ತಿಳಿಯದಿರುವ ವಸ್ತು- ವಿಷಯಗಳನ್ನು, ತಿಳಿದಿರುವ ವಸ್ತು-ವಿಷಯಗಳಿಗೆ ಹೋಲಿಸಿ ‘ಇದರಂತಿದೆ’ ಎಂದು ಹೇಳಿದಾಗ ಸ್ಪಷ್ಟವಾಗಿ ಅರ್ಥ ವಾಗುತ್ತದೆ.

ಅರ್ಥೋಪತ್ತಿ: ಹೀಗೆಂದರೆ ಒಂದು ಸತ್ಯದ ಆಧಾರ ಕಲ್ಪನೆ ಅಥವಾ ಊಹೆ. ಇದು ಸಾಂದರ್ಭಿಕ ಸೂಚನೆಯಿಂದ ಪಡೆದ ಜ್ಞಾನ. ಉದಾಹರಣೆಗೆ, ದಪ್ಪಗಿರುವ ವ್ಯಕ್ತಿಯೊಬ್ಬ ಊಟ ಮಾಡುವುದಿಲ್ಲ ಎಂದರೆ, ಆತ ಎಲ್ಲರಿಗೂ ಕಾಣುವಂತೆ ಹಗಲಿನಲ್ಲಿ ಊಟ ಮಾಡುವುದಿಲ್ಲ ಎಂದು ಅರ್ಥೈಸಲಾಗುತ್ತದೆ. ಊಟ ಮಾಡದಿದ್ದರೆ ದಢೂತಿಯಾಗಲು ಹೇಗೆ ಸಾಧ್ಯ? ಬೇರೇನೋ ವ್ಯವಸ್ಥೆ ಇರಬೇಕು ಎಂದು ನಾವು ಸುಲಭವಾಗಿ ಊಹಿಸಬಹುದು.

ಅನುಪಲಬ್ಧಿ: ಒಂದು ಜಾಗದಲ್ಲಿ ವಸ್ತುವಿನ ಅಸ್ತಿತ್ವವಿಲ್ಲದಿದ್ದರೆ ಅದು ಇಲ್ಲ ಎಂದು ಮಾತ್ರ ಗ್ರಹಿಸಲಾಗುತ್ತದೆ. ವಸ್ತು ಆ ಜಾಗದಲ್ಲಿ ಇಲ್ಲ ಅಷ್ಟೇ, ವಸ್ತುವೇ ಇಲ್ಲ ಎಂದಲ್ಲ ಎನ್ನುವುದು ತರ್ಕ. ನಾವು ಹಿಮಾಲಯ ಪರ್ವತವನ್ನು ನೋಡಲಿಲ್ಲ ಎನ್ನುವ ಕಾರಣಕ್ಕೆ ‘ಅದು ಇಲ್ಲ’ ಎನ್ನುವ ತೀರ್ಮಾನಕ್ಕೆ ಬರಬಾರದು. ಅದು ಇದೆ, ನೋಡಿದವರಿದ್ದಾರೆ; ಆದರೆ ನಾವು ನೋಡಲಿಲ್ಲ ಅಷ್ಟೇ.

ಶಬ್ದ: ಶಬ್ದ ಪ್ರಮಾಣವು ಮೌಖಿಕ ಸಾಕ್ಷ್ಯವಾಗಿದ್ದು, ಇದು ‘ಆಪ್ತ-ವಾಕ್ಯ’ (ವಿಶ್ವಾಸಾರ್ಹ ವ್ಯಕ್ತಿಯ ಹೇಳಿಕೆ) ಮಾನ್ಯ ಜ್ಞಾನವನ್ನು ತಿಳಿಸುತ್ತದೆ. ಮೌಖಿಕ ಹೇಳಿಕೆಯು ದೋಷ ಗಳಿಂದ ಮುಕ್ತವಾಗಿರುವ ಅಽಕೃತ ಮೂಲವನ್ನು ಹೊಂದಿರಬೇಕು. ಜ್ಞಾನವಂತ ಸಮರ್ಥ ಮಾತ್ರ ನಿಖರಜ್ಞಾನವನ್ನು ನೀಡಬಲ್ಲ. ಅಂಥ ಜ್ಞಾನಕ್ಕೆ ಯಾವುದೇ ಪರಿಶೀಲನೆ ಅಗತ್ಯ ವಿರುವುದಿಲ್ಲ. ಅದರ ವಿಶ್ವಾಸಾರ್ಹತೆಯ ಬಗ್ಗೆ ಸಂದೇಹ ವಿಲ್ಲದಿದ್ದರೆ, ಜ್ಞಾನವನ್ನು ರವಾನಿಸಲು ಮತ್ತು ಪಡೆಯಲು ಅದು ಸಹಜವಾಗಿಯೇ ಮನುಷ್ಯನ ಅತ್ಯಂತ ಪ್ರಬಲ ಸಾಧನ ವಾಗುತ್ತದೆ. ಇದೇ ಆಪ್ತವಾಕ್ಯದ ಆಧಾರದಲ್ಲಿ ‘ಪಿತ್ರಂಗೀ ಕರಣ’ ಆಗುತ್ತದೆ. ಮಗುವೊಂದು ವ್ಯಕ್ತಿಯೊಬ್ಬರನ್ನು ತನ್ನ ತಂದೆಯಾಗಿ ಅಂಗೀಕರಿಸುವ ಪ್ರಕ್ರಿಯೆಯೇ ಪಿತ್ರಂಗೀಕರಣ. ಹುಟ್ಟಿದ ಮಗುವಿಗೆ ತನ್ನ ತಾಯಿಯ ಜತೆಗಿನ ಬಾಂಧವ್ಯವು, ಹುಟ್ಟುವ ಮೊದಲೇ ಸಹಜವಾಗಿ ಇರುತ್ತದೆ. ಆದರೆ ತಂದೆಯ ಜತೆಗೆ ಹಾಗಲ್ಲ, ಹುಟ್ಟಿದ ನಂತರ ನಂಬಿಕೆಯ ಆಧಾರದಲ್ಲಿ ಬೆಳೆಯುವ ಸಂಬಂಧವದು. ಆ ನಂಬಿಕೆಯೆಂದರೆ, ಅದು ತಾಯಿಯ ಮಾತು, ಆಪ್ತವಾಕ್ಯ ಅಥವಾ ಮಾತೃವಾಕ್ಯದ ಪ್ರಮಾಣ. ‘ನೋಡು ಅಪ್ಪ ಬಂದರು’ ಅಂತ ಒಬ್ಬ ವ್ಯಕ್ತಿಯನ್ನು ಆಕೆಯು ಮಗುವಿಗೆ ಪದೇಪದೆ ಪರಿಚಯಿಸಿದ್ದರಿಂದ, ಆತನನ್ನು ಆ ಮಗು ‘ಅಪ್ಪ’ ಎಂದು ನಂಬುತ್ತದೆ. ಅದಿಲ್ಲದಿದ್ದರೆ ಇವನೇ ನನ್ನ ತಂದೆಯೆನ್ನಲು ಯಾವ ಪುರಾವೆಯಿದೆ? ನಂಬುವುದು ಹೇಗೆ? ತನಗೆ ಅತ್ಯಂತ ಆಪ್ತಳಾದ ತಾಯಿ ಸುಳ್ಳು ಹೇಳುವುದಿಲ್ಲ ಎಂಬ ನಂಬಿಕೆಯ ಆಧಾರದಲ್ಲಿ ತಂದೆಯ ಅಂಗೀಕಾರವಾಗುತ್ತದೆ.

ಬಹುಪತಿತ್ವವಿದ್ದ ಜಗತ್ತಿನ ಕೆಲ ಸಮಾಜಗಳಲ್ಲಿ ಆಸ್ತಿಗಳ ಹಂಚಿಕೆಯಾಗುವಾಗಲೂ ತನ್ನ ನಾಲ್ಕು ಜನ ಗಂಡಂದಿರಲ್ಲಿ ಇವನು ಈ ಹುಡುಗನ ಅಪ್ಪ ಎಂದು ತಾಯಿಯಾದವಳು ಹೇಳಬೇಕಾಗುತ್ತಿತ್ತಂತೆ, ಹಾಗೆ ಹೇಳಿದ ಮೇಲೆ ಆಸ್ತಿಯ ಉತ್ತರಾಧಿಕಾರ ಸಾಬೀತಾಗುತಿ ತ್ತಂತೆ, ತಂದೆಯ ಆಸ್ತಿಗೆ ಹುಡುಗ ವಾರಸುದಾರನಾಗುತ್ತಿದ್ದ ನಂತೆ. ಅಲ್ಲಿ ಅದೇ ಕಾನೂನು. ಹೀಗೆ ದೇವರ ಅಸ್ತಿತ್ವವನ್ನು ಹೇಳುವಾಗಲೂ, ನಮಗೆ ಪ್ರತ್ಯಕ್ಷವಾಗಿ ಕಾಣದಿದ್ದರೂ, ವೇದಮಾತೆಯ ನುಡಿ ಇರುವುದರಿಂದ ನಾವು ಒಪ್ಪಬೇಕು ಎನ್ನುವ ನ್ಯಾಯ ಇಲ್ಲಿ ಅನ್ವಯವಾಗುತ್ತದೆ.

ಹೀಗೆ, ಧರ್ಮ ಮತ್ತು ದೇವರು, ಪವಾಡ, ನಂಬಿಕೆ ಮುಂತಾದ ಗಹನ ವಿಷಯಗಳ ಕುರಿತಾದ ವಿವಿಧ ತರ್ಕಬದ್ಧ ಪ್ರಶ್ನೆಗಳಿಗೆ ಉತ್ತರಿಸುವ ಸಾರ್ಥಕ ಪ್ರಯತ್ನವನ್ನು ಡಿ.ವಿ.ಗುಂಡಪ್ಪನವರು (ಡಿವಿಜಿ) ‘ದೇವರು ಒಂದು ವಿಚಾರಲಹರಿ’ ಎನ್ನುವ ಕಿರು ಪುಸ್ತಕದಲ್ಲಿ ಮಾಡಿದ್ದಾರೆ. ೧೯೭೨ರಲ್ಲಿ ಪ್ರಕಟಣೆಗೊಂಡು ಮುಂದೆ ಅನೇಕ ಮರುಮುದ್ರಣಗಳನ್ನು ಕಂಡ ಈ ಕೃತಿ ಗಾತ್ರದಲ್ಲಿ ಪುಟ್ಟದಾದರೂ, ಅಪಾರ ಮಾಹಿತಿ ಮತ್ತು ಉಲ್ಲೇಖಗಳನ್ನು ಹೊಂದಿದೆ.

ಅರಿಯದ ಮುಗ್ಧರಿಗೂ, ಸತ್ಯಶೋಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವವರಿಗೂ ಅನೇಕ ಒಳನೋಟಗಳನ್ನು ನೀಡು ವಂಥದಾಗಿದೆ. ‘ದೇವರು’ ಎಂಬ ತಲೆಬರಹದ ೨ ಕೃತಿಗಳು ಕನ್ನಡದಲ್ಲಿ ಪ್ರಸಿದ್ವಿದ್ದು, ಒಂದು ಡಿವಿಜಿಯವರದ್ದಾದರೆ, ಮತ್ತೊಂದು ಎ.ಎನ್.ಮೂರ್ತಿರಾಯರದ್ದು. ದೇವರ ಕುರಿತು ಮನುಷ್ಯರಲ್ಲಿ ಉದ್ಭವಿಸಬಹುದಾದ ಗಹನವಾದ ಪ್ರಶ್ನೆಗಳಿಗೆ ಸರಳವಾಗಿ ಸಮಾಧಾನ ಹೇಳಲು ಈ ಕೃತಿಯಲ್ಲಿ ಡಿವಿಜಿ ಯತ್ನಿಸಿದ್ದಾರೆ. ಈ ಪ್ರಬಂಧದಲ್ಲಿನ ಭಾವಸ್ಪಷ್ಟತೆ ಓದುಗನ ಮನದಾಳದ ಅನೇಕ ಸಂಶಯಗಳಿಗೆ ಸಮಾಧಾನ ನೀಡುವಂಥದ್ದಾಗಿದೆ.

ಡಿವಿಜಿಯವರು ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗ ಈ ವಿಷಯಗಳನ್ನು ಹೇಳಿ, ತಮ್ಮ ಮಗ ಡಾ.ಬಿ.ಜಿ. ಎಲ್.ಸ್ವಾಮಿಯವರಿಂದ, ಎಸ್.ಆರ್.ರಾಮಸ್ವಾಮಿ, ಬಿ.ಎಸ್.ಸುಬ್ಬರಾಯ, ಡಿ.ಆರ್.ವೆಂಕಟರಮಣ ಮುಂತಾದ ಸ್ನೇಹಿತ ರಿಂದ ಬರೆಸಿದ್ದಂತೆ. ‘ಈ ವಿಷಯದ ಪ್ರಸ್ತುತಿ ಹಿಂದೆಂದಿಗಿಂತ ಈಗ ಹೆಚ್ಚಿರುವುದರಿಂದ, ಸಂಕ್ಷಿಪ್ತವಾಗಿಯಾದರೂ ಹೇಳಲೇ ಬೇಕು ಎನ್ನುವ ಮನಸ್ಸಾಯಿತು, ಹೆಚ್ಚಿನ ಒಳನೋಟಗಳಿಗೆ ಓದುಗರು ನನ್ನ ಭಗವದ್ಗೀತಾ ತಾತ್ಪರ್ಯ ಮುಂತಾದ ಗ್ರಂಥಗಳನ್ನು ಅನುಸರಿಸಬಹುದು’ ಎಂದು ಡಿವಿಜಿ ಈ ಕೃತಿಯ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ.

ದೇವರ ಇರುವಿಕೆಯ ಕುರಿತು ಮುಗ್ಧರು ಮೊದಮೊದಲು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದಾದರೆ, ದೇವರು ಎನ್ನುವು ದೊಂದು ಚೈತನ್ಯ, ಚಲನಶೀಲವಾದ ತೇಜಸ್ಸು. ಇದರ ಮಹಿಮೆಗೆ ಅಥವಾ ಪ್ರಭಾವಕ್ಕೆ ಒಳಪಡದ ಯಾವುದೂ ಈ ಪ್ರಕೃತಿಯಲ್ಲಿಲ್ಲ. ಎಲ್ಲ ಮಾನುಷೀಯ ವ್ಯಾಪಾರಗಳೂ ಈ ತತ್ತ್ವದ ಅಧೀನದಲ್ಲೇ ನಡೆಯುತ್ತವೆ. ಕಾರಣ, ಈ ಗೋಚರ ಪ್ರಪಂಚದ ಹುಟ್ಟು, ಸ್ಥಿತಿ ಮತ್ತು ನಾಶಗಳು ಅವನಿಂದಲೇ ಆಗುತ್ತಿರುವುದು ಎನ್ನುತ್ತಾರೆ ಡಿವಿಜಿ.

ಇದಕ್ಕೆ ಪುಷ್ಟಿ ನೀಡುವಂತೆ ಶ್ವೇತಾಶ್ವತರೋಪನಿಷತ್ತಿನ ‘ಏಕೋ ದೇವಃ ಸರ್ವಭೂತೇಷು ಗೂಢಃ ಸರ್ವವ್ಯಾಪೀ ಸರ್ವ ಭೂತಾಂತರಾತ್ಮಾ | ಕರ್ಮಾ ಧ್ಯಕ್ಷಃ ಸರ್ವಭೂತಾಧಿವಾಸಃ ಸಾಕ್ಷೀ ಚೇತಾ ಕೇವಲೋ ನಿರ್ಗುಣಶ್ಚ||’ ಎಂಬ ವಾಕ್ಯವನ್ನು ಡಿವಿಜಿ ವಿವರಿಸುತ್ತಾರೆ. ನಾವು ನಂಬಲಿ ನಂಬದಿರಲಿ, ದೇವರೆಂಬ ಚೈತನ್ಯವಂತೂ ಇದ್ದೇ ಇದೆ ಎಂಬುದು ಅವರ ಸ್ಪಷ್ಟ ಅಭಿಪ್ರಾಯ.

ಮುಂದೆ, ನಾವೇಕೆ ದೇವರನ್ನು ನಂಬಬೇಕು? ಎನ್ನುವವರಿಗೆ, ದೇವರ ಅಸ್ತಿತ್ವವನ್ನು ನಂಬುವುದರಿಂದ ಉಂಟಾಗುವ ಧೈರ್ಯ, ಧರ್ಮ, ಪಾಪ-ಪುಣ್ಯಗಳು ಮತ್ತು ಉತ್ತಮ ಸಮಾಜ, ವಿಶ್ವವ್ಯವಸ್ಥೆಗಳೆಂಬ ಪ್ರಯೋಜನಗಳ ಬಗ್ಗೆ ಮನೋಜ್ಞವಾಗಿ ಬರೆಯುತ್ತಾರೆ. ಪವಾಡಗಳಿಂದಾಗಿ ದೇವರಲ್ಲಿ ನಂಬಿಕೆಗಳು ಹುಟ್ಟುವುದು ಅಥವಾ ಹೆಚ್ಚುವುದು ಆದರೂ, ದೇವರನ್ನು ನಂಬಲು ಪವಾಡಗಳ ಅವಶ್ಯಕತೆಯಿರುವುದಿಲ್ಲ, ಆಸ್ತಿಕತೆ ಎನ್ನುವಂಥದ್ದು ಸ್ವತಂತ್ರವಾದದ್ದು ಎನ್ನುತ್ತಾರೆ ಡಿವಿಜಿ. ಅವರ ಪ್ರಕಾರ ಆಲೋಚನೆ ಮಾಡುವವರಿಗೆ ಜಗತ್ತೇ ಒಂದು ಪವಾಡ; ನಿತ್ಯ ಸರಿಯಾದ ಸಮಯಕ್ಕಾಗುವ ಸೂರ್ಯೋದಯ-ಸೂರ್ಯಾಸ್ತಗಳು, ಜೀವಿಗಳ ಹುಟ್ಟು- ಸಾವುಗಳು, ನಿದ್ರೆ-ಸ್ವಪ್ನಗಳು ಎಲ್ಲವೂ ಪವಾಡಗಳೇ.

ದೇವರಿದ್ದಾನೆ, ಯಾವಾಗಲೂ ಎಲ್ಲೆಲ್ಲಿಯೂ ಎಲ್ಲ ಚರಾಚರ ವಸ್ತುಗಳಲ್ಲೂ ಅಡಗಿದ್ದಾನೆ; ಪುಣ್ಯಕ್ಕೆ ಶುಭವನ್ನೂ ಪಾಪಕ್ಕೆ ದಂಡನೆಯನ್ನೂ ವಿಧಿಸುವ ಕರ್ಮಾಧಿಕಾರಿಯಾಗಿ ದೇವರು ಕೆಲಸ ಮಾಡುತ್ತಾನೆ ಮುಂತಾಗಿ ಸಿದ್ಧಾಂತಗಳನ್ನು ಕೊನೆಯಲ್ಲಿ ಡಿವಿಜಿ ಬರೆಯುತ್ತಾರೆ. ಆವಾವುದೊಳಿತೋ ನಿನಗದು| ಜೀವಹಿತಕ್ಕಾವುದೊಳಿತೋ ಸತ್ಯಂ ನಿತ್ಯಂ|| ಆ ವಸ್ತು ವೇ ಆ ಸತ್ವವೇ ದೇವಂ ಜಗದೀಶನಾತ್ಮ ತತ್ವಂ ಬ್ರಹ್ಮಂ|| ಅರಿವೆ ಜಗಜ್ಯೋತಿಯಾತ್ಮ ಕಿರಣಂ ದೈವಂ| ಆವೊಂದನರಿಯೆ ನೈಜದಿ| ನೀ ವಿಶ್ವದೊಳೊಂದುಮೊಂದು ಮೆಲ್ಲದರರಿವೋ|| ಆ ವಿವಿಧದ ಏಕ ಮೂಲಮೆ ದೇವಂ| ದೇವರೆಂಬ ಮಹಾ ಒಗಟಿಗೆ ಋಷಿದೃಷ್ಟಿಯ ಗುಂಡಪ್ಪನ ವರ ಈ ಮೇಲಿನ ಸರಳ ವ್ಯಾಖ್ಯಾನಗಳಿಗೆ ಹೋಲಿಕೆ ಇರಲಿಕ್ಕೆ ಸಾಧ್ಯವಿಲ್ಲ.