ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sowmya Sanath Column: ಕನ್ನಡ ಸಾಹಿತ್ಯವನದ ಅಶ್ವತ್ಥ: ಡಿ.ವಿ.ಗುಂಡಪ್ಪನವರು

ಆಧುನಿಕ ಕಾಲದಲ್ಲಿ ಕರ್ನಾಟಕದ ನಾಡು-ನುಡಿಗಳ ರೂಪಣೆ, ಸಮೃದ್ಧಿ, ಸೌಂದರ್ಯವರ್ಧನೆ ಇತ್ಯಾದಿಗಳಿಗಾಗಿ ಶ್ರಮಿಸಿದವರ ಪೈಕಿ ಡಿವಿಜಿ ಅಗ್ರಗಣ್ಯರು. ಅವರ ವ್ಯಕ್ತಿತ್ವ, ವಿದ್ವತ್ತು, ಪ್ರಾಜ್ಞತೆ ಗಳ ಬಗ್ಗೆ ಸಾಕಷ್ಟು ಪ್ರಮಾಣದಲ್ಲಿ ಮಾಹಿತಿ ಲಭ್ಯವಿರುವುದು ಕನ್ನಡಿಗರಾದ ನಮ್ಮ ಸೌಭಾಗ್ಯ.

ಕನ್ನಡ ಸಾಹಿತ್ಯವನದ ಅಶ್ವತ್ಥ: ಡಿ.ವಿ.ಗುಂಡಪ್ಪನವರು

ಅಂಕಣಗಾರ್ತಿ ಸೌಮ್ಯ ಸನತ್

Profile Ashok Nayak Mar 17, 2025 6:55 AM

ತನ್ನಿಮಿತ್ತ

ಸೌಮ್ಯ ಸನತ್

(ಇಂದು ಡಿವಿಜಿ ಜನ್ಮದಿನ)

ರಸ ಸಗ್ಗದಂತಿಹುದು ಮುದ್ಗುಂಡನಾ ಕಗ್ಗ, ಭಾವದಾ ಹಗ್ಗವಾಗಿಹುದದು ತಗ್ಗಿಬಗ್ಗಿ ಓದಿದವಗೆ ಸುಗ್ಗಿಯೇ ಅದರ ತಿರುಳರಿತಾ ಮನಕಲ್ಲಿ ಭಗವದ್ಗೀತೆಯೇ ಅದು ನಿಜ ಪದಮಿಶ್ರಿತದಲಿ... ಮುದ್ದು ಮುದ್ದೇ ನೀ ನೆನೆದಾಗಲೆಲ್ಲಾ ಅತ್ಯಾಪ್ತನು ಗುದ್ದು ಗುದ್ದೇ ಕಲಿಸಿದೆ ಗದ್ಯದ ಒಳಹೊರಗ ಪದ್ಯದಲಿ ಮರೆತೆನೆಂದರೂ ಮರೆತೇನೇ ಪರಮ ಗುರುವನು ನಾ ನಮಸ್ಕರೋಮಿ ಮನಸಾಸ್ಮರಾಮಿ ಪರಮಗುರುವೇ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಅಥವಾ ಡಿ.ವಿ.ಗುಂಡಪ್ಪ ಅಥವಾ ಡಿವಿಜಿ ಎಂದರೆ -ಕ್ಕನೆ ಏನು ನೆನಪಾಗುತ್ತದೆ..... ಮಂಕುತಿಮ್ಮನ ಕಗ್ಗ? ಮರುಳ ಮುನಿಯನ ಕಗ್ಗ? ಬೊಚ್ಚುಬಾಯಿ ಯ ಮುಗ್ಧನಗು? ಕನ್ನಡಕಧಾರಿ? ಕವಿ? ಲೇಖಕ? ಪತ್ರಕರ್ತ? ಅಧ್ಯಾಪಕ? ಕನ್ನಡ ಸಾಹಿತ್ಯ ಲೋಕದ ಪರಮಪೂಜ್ಯ ಡಿವಿಜಿಯವರನ್ನು ನೆನೆಯುತ್ತಿದ್ದರೆ ಹೃದಯದಲ್ಲಿ ಒಂದು ರೀತಿಯ ಗೌರವಭಾವ ಕೆನೆಗಟ್ಟುತ್ತದೆ.

ಡಿವಿಜಿಯವರ ಹೆಸರನ್ನು ಕೇಳದ ಕನ್ನಡ ಸಾಹಿತ್ಯಪ್ರೇಮಿ ಬಹುಶಃ ಯಾರೂ ಇರಲಿಕ್ಕಿಲ್ಲ. ಬದುಕು-ಬರಹ, ಪ್ರತಿಭೆ-ಪಾಂಡಿತ್ಯ, ವೇದಾಂತ-ರಾಜಕಾರಣ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿಕ್ರಮವನ್ನು ಸಾಧಿಸಿದ ಡಿವಿಜಿಯವರು ಜನಿಸಿದ್ದು 1887ರ ಮಾರ್ಚ್ 17ರಂದು ಕೋಲಾರ ತಾಲೂಕಿನ ಮುಳಬಾಗಿಲಿನಲ್ಲಿ.

ಇದನ್ನೂ ಓದಿ: Vishweshwar Bhat Column: ಪರಿಪೂರ್ಣತೆಗೊಂದು ನೆಪ

ಆಧುನಿಕ ಕಾಲದಲ್ಲಿ ಕರ್ನಾಟಕದ ನಾಡು-ನುಡಿಗಳ ರೂಪಣೆ, ಸಮೃದ್ಧಿ, ಸೌಂದರ್ಯ ವರ್ಧನೆ ಇತ್ಯಾದಿಗಳಿಗಾಗಿ ಶ್ರಮಿಸಿದವರ ಪೈಕಿ ಡಿವಿಜಿ ಅಗ್ರಗಣ್ಯರು. ಅವರ ವ್ಯಕ್ತಿತ್ವ, ವಿದ್ವತ್ತು, ಪ್ರಾಜ್ಞತೆಗಳ ಬಗ್ಗೆ ಸಾಕಷ್ಟು ಪ್ರಮಾಣದಲ್ಲಿ ಮಾಹಿತಿ ಲಭ್ಯವಿರುವುದು ಕನ್ನಡಿಗ ರಾದ ನಮ್ಮ ಸೌಭಾಗ್ಯ.

‘ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ’ -‘ಮಂಕುತಿಮ್ಮನ ಕಗ್ಗ’ದ ಈ ಪದ್ಯ ನಾವು ಪುಟ್ಟವರಿದ್ದಾಗಲೇ ನಮ್ಮ ನರನಾಡಿಗಳೊಳಗೆ ಬೆರೆತುಹೋದಂಥದ್ದು. ‘ಒಲವೇಂ, ಸಂಭ್ರಮವೇಂ, ಪ್ರಿಯಾಭಿಸರಮೇಂ, ಲಾವಣ್ಯಮೇಂ ಲೀಲೆಯೇಂ... ಬಲಮಂ ತೋರುವ ಠೀವಿಯೇಂ, ಚಪಲಮೇಂ’ ಎಂದು ಕಾವೇರಿ ನದೀ ಸ್ರೋತದ ವಿಜೃಂಭಣೆಯನ್ನು ವರ್ಣಿಸಿದವರು ಡಿವಿಜಿ.

ಅವರ ಬಹುಮುಖ ಸಾಧನೆಯನ್ನು ನೆನೆಯುವಾಗ ನಮ್ಮಲ್ಲುಂಟಾಗುವುದೂ ಅಂಥದೇ ಭಾವನೆ, ರೋಮಾಂಚನ. ಪಾಂಡಿತ್ಯ, ಸಹೃದಯತೆ, ದಾರ್ಶನಿಕತೆ, ಲೌಕಿಕಾಸಕ್ತಿ, ವೈಚಾರಿ ಕತೆ, ಪರಂಪರಾಶ್ರದ್ಧೆ, ಪ್ರತಿಭೆ, ಪರಿಶ್ರಮ ಈ ವಿವಿಧ ಗುಣಗಳ ಸಮನ್ವಯವನ್ನು ಡಿವಿಜಿ ಯವರಂತೆ ಮೆರೆದವರು ವಿರಳ. ಸಮಾಜಸೇವೆ, ರಾಜಕೀಯ ಚರ್ಚೆಗಳಲ್ಲಿಯೂ, ಪತ್ರಿಕೋ ದ್ಯಮದಲ್ಲಿಯೂ ಅವರು ಮಾಡಿದ ಪರಿಶ್ರಮ, ಅವರ ಸಾಹಿತ್ಯಾತ್ಮಕ ಪರಿಶ್ರಮಕ್ಕಿಂತ ಬಹುಪಾಲು ಮಿಗಿಲಾದದ್ದು.

ಡಿವಿಜಿಯವರನ್ನು ಕನ್ನಡ ಸಾಹಿತ್ಯವನದ ಅಶ್ವತ್ಥವೆಂದೇ ಅನ್ವರ್ಥವಾಗಿ ವಿದ್ವಾಂಸರು ಗುರುತಿಸಿದ್ದಾರೆ. ಅಶ್ವತ್ಥ ವೃಕ್ಷದ ಕೊಂಬೆಗಳ ಹರಹೂ, ಅದರ ಎಲೆಗಳ ಸಮೃದ್ಧಿಯೂ ತುಂಬಾ ಆಕರ್ಷಕ. ವಸಂತಕಾಲದಲ್ಲಿ ಕೆಂಪು ಚಿಗುರುಗಳಿಂದ ಕಂಗೊಳಿಸುವ ಅರ ಳೀಮರವು ಏಕಕಾಲದಲ್ಲಿ ಉಲ್ಲಾಸ ಮತ್ತು ಪಾವಿತ್ರ್ಯಗಳ ಸಂಕೇತವಾಗಿ ತೋರುತ್ತದೆ. ಇದೇ ರೀತಿ, ಡಿವಿಜಿಯವರ ಭಾಷಾಪಾಕವು ಸುಂದರ ಹಾಗೂ ಸರ್ವತೋಮುಖ. ಕವನ, ವಿಮರ್ಶೆ, ಜೀವನಚರಿತ್ರೆ ಮುಂತಾಗಿ ಅನೇಕ ಪ್ರಕಾರಗಳಲ್ಲಿ ಇವರು ಕೃಷಿ ಮಾಡಿದ್ದಾರೆ.

ಡಿವಿಜಿಯವರ ಸಾಹಿತ್ಯ ಸಿಂಧುವು ನಾಟಕ, ನೆನಪಿನ ಚಿತ್ರ, ಜೀವನಚರಿತ್ರೆ, ವೈಚಾರಿಕ ಪ್ರಬಂಧ, ಮಕ್ಕಳ ಸಾಹಿತ್ಯ ಮೊದಲಾದ ಪ್ರಣಾಲಿಗಳಲ್ಲಿ ಹರಿದಿದೆ. ಉಮರ್ ಖಯ್ಯಾಮನ ವಿಶ್ವವಿಖ್ಯಾತ ‘ರುಬಾಯಿಯಾತ್’ನ ಕನ್ನಡ ರೂಪಾಂತರವಾದ ‘ಉಮರನ ಒಸಗೆ’ಯು, “ಇದು ಭಾಷಾಂತರವಲ್ಲ, ಕನ್ನಡದ್ದೇ ಮೂಲಕೃತಿ" ಅನ್ನುವಷ್ಟು ಉತ್ಕೃಷ್ಟವಾಗಿದೆ.

‘ಮಂಕುತಿಮ್ಮನ ಕಗ್ಗ’ ಡಿವಿಜಿಯವರ ಮೇರುಕೃತಿ. ಜೀವನತತ್ತ್ವಗಳನ್ನು ಮಾರ್ಮಿಕವಾಗಿ ನಿರೂಪಿಸುವ ಇದರ ಒಂದೊಂದು ಪದ್ಯವೂ ಆಣಿಮುತ್ತು. ಅವರ ‘ಅಂತಃಪುರ ಗೀತೆಗಳು’ ಹೊಯ್ಸಳ ಶಿಲ್ಪದ ಶಿಲಾಬಾಲಿಕೆಯರನ್ನು ಕುರಿತು ಬರೆದ ಮೊಟ್ಟಮೊದಲ ಕವನ ಸಂಗ್ರಹ. ಇನ್ನು ಡಿವಿಜಿಯವರ ಗದ್ಯವಂತೂ ವಿಶಿಷ್ಟವಾದ ಪ್ರವಚನ ಶೈಲಿಯಲ್ಲಿ ಸಾಗು ತ್ತದೆ.

ಅವರೇ ನಮ್ಮೆದುರು ಹಾಯಾಗಿ ಕುಳಿತು ವಿಚಾರಗಳನ್ನು ನಯವಾಗಿ ವಿವರಿಸುತ್ತಿದ್ದಾ ರೇನೋ ಎಂದು ಭಾಸವಾಗುವಷ್ಟರ ಮಟ್ಟಿಗಿನ ಆಪ್ತವಾದ ಬರವಣಿಗೆಯಿದು. ಅದರಲ್ಲಿ ಸಮನ್ವಯದ ಹದವಿದೆ, ಆದರೆ ವಾಚಕರನ್ನು ಒಪ್ಪಿಸಲೇಬೇಕೆಂಬ ಹಠವಿಲ್ಲ; ಇನ್ನೆಲ್ಲಿ ಯೂ ಕಾಣಸಿಗದ ಕಾಂತಿಯಿದೆ, ಆದರೆ ಅದು ಕಣ್ಣು ಕೋರೈಸುವಂಥದ್ದಲ್ಲ; ಅಧಿಕೃತತೆಗೆ ಕೊರತೆಯಿಲ್ಲ, ಆದರೆ ಅಧಿಕಾರದ ಧೋರಣೆಯಲ್ಲ; ಪಾಂಡಿತ್ಯದ ಪುಷ್ಟಿಯಿದೆ, ಆದರೆ ಅದನ್ನು ಮೆರೆಸಬೇಕೆಂಬ ಪೈತ್ಯವಿಲ್ಲ; ಭಾವತೀವ್ರತೆಯಿದೆ, ಆದರೆ ಅದೆಂದೂ ಭಾರ ವೆನಿಸುವುದಿಲ್ಲ.

ಒಟ್ಟಿನಲ್ಲಿ ಅದೊಂದು ಪಾಕ, ಶುಚಿ-ರುಚಿಗಳ ರಸಪಾಕ. ಇದನ್ನು ಅ.ನ.ಕೃಷ್ಣರಾಯರು ಉmಜ್ಚಿ Pಟoಛಿ ಎಂದು ಬಣ್ಣಿಸಿದ್ದು ಸೂಕ್ತವಾಗಿದೆ. ಡಿವಿಜಿಯವರ ಸಾಧನೆಯ ಪಟ್ಟಿ ಯಲ್ಲಿರುವ ದಾಖಲೆಗಳು ಒಂದೆರಡಲ್ಲ. ಇಂಗ್ಲಿಷ್-ಕನ್ನಡ ನಿಘಂಟಿನ ಸಂಪಾದಕರಾಗಿದ್ದ ಹೆಗ್ಗಳಿಕೆ ಅವರದ್ದು. ೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಲ್ಲಿ ಸಹಕರಿಸಿ, ಮುಂದೆ ಅದರ ಉಪಾಧ್ಯಕ್ಷರಾಗಿ ಹಲವಾರು ಯೋಜನೆಗಳನ್ನು ಕೈಗೊಳ್ಳುವ ಮೂಲಕ ಅದರ ಘನತೆಯನ್ನು ಹೆಚ್ಚಿಸಿದರು.

೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿದ್ದರು. ತದನಂತರದಲ್ಲಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಮೈಸೂರು ರಾಜ್ಯ ಪತ್ರಕರ್ತರ ಸಂಘ, ಷಾರ್ಟ್‌ಹ್ಯಾಂಡ್ ಬರೆಯುವವರ ಬಳಗ ಮುಂತಾದವನ್ನು ಸ್ಥಾಪಿಸಿ ದರು. ಡಿವಿಜಿಯವರ ಎಲ್ಲಾ ಸಾಧನೆಗಳನ್ನು ಮನಗಂಡ ಮೈಸೂರು ವಿಶ್ವವಿದ್ಯಾಲಯವು ಅವರಿಗೆ ೧೯೬೧ರಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನಿಸಿ ಸತ್ಕರಿಸಿತು.

ತಮ್ಮ ಜೀವಿತಾವಧಿಯಲ್ಲಿ ಅನೇಕ ಮಹನೀಯರೊಂದಿಗೆ ಕೆಲಸ ಮಾಡಿದರೂ, ಒಮ್ಮೆ ಯೂ ತಮ್ಮ ಸ್ವಂತ ಕೆಲಸಗಳಿಗೆ ಅವರ ಸಹಾಯ ಬಯಸದ ಮಹಾನತೆ ಡಿವಿಜಿಯವ ರದ್ದು. ಅಭಿಮಾನಿಗಳು ತಮ್ಮನ್ನು ಸನ್ಮಾನಿಸಿ ಅರ್ಪಿಸಿದ ಒಂದು ಲಕ್ಷ ರುಪಾಯಿ ಹಣ ವನ್ನೂ ಗೋಖಲೆ ಸಂಸ್ಥೆಗೆ ದಾನ ಮಾಡಿದ ನಿಸ್ವಾರ್ಥಿ ಅವರು.

ಭಗವದ್ಗೀತೆಯ ಬಗ್ಗೆ ಡಿವಿಜಿಯವರು ನೀಡಿದ ಪ್ರವಚನ ಮಾಲಿಕೆಯು ಪುಸ್ತಕ ರೂಪದಲ್ಲಿ ‘ಭಗವದ್ಗೀತಾ ತಾತ್ಪರ್ಯ’ ಅಥವಾ ‘ಜೀವನಧರ್ಮ ಯೋಗ’ ಎಂದೇ ಪ್ರಸಿದ್ಧಿ ಪಡೆದು 1967ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಭಾರತ ಸರಕಾರವು ಡಿವಿಜಿಯವರಿಗೆ 1974ರಲ್ಲಿ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 1975ರಲ್ಲಿ ಸಾಹಿತ್ಯ ಪ್ರೇಮಿಗಳೆಲ್ಲರನ್ನೂ ಡಿವಿಜಿ ಅಗಲಿದರೂ, ಇಂದಿಗೂ ಕನ್ನಡನಾಡಿನ ಜೀವನಾಡಿಯಾಗಿದ್ದಾರೆ. ಕನ್ನಡವು ಓಜಸ್ಸನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ, ಭಾಷಾಶುದ್ಧಿಗೆ ಗಮನವೀಯದ ಈ ಹೊತ್ತಿನಲ್ಲಿ ಡಿವಿಜಿಯವರಂಥ ಧೀಮಂತರ ಮಾರ್ಗದರ್ಶನವು ನಮಗೆ ಬಹಳ ಅಗತ್ಯವಿದೆ.

(ಲೇಖಕಿ ಶಿಕ್ಷಕಿ)