Ravi Hunj Column: ಸಾಂಸ್ಕೃತಿಕ ಕ್ಷೇತ್ರದ ಮೇಲೆ ದಾಳಿ...ಯಾರಿಂದ !?
‘ಸಾಂಸ್ಕೃತಿಕ ಕ್ಷೇತ್ರದ ಮೇಲಿನ ಸಂಘ ಪರಿವಾರದ ದಾಳಿ’ ಎನ್ನುವ ಬೆದರುಬೊಂಬೆಯನ್ನು ತೋರುವ ಇವರ ಇತಿಹಾಸ ಅತ್ಯಂತ ಬೀಭತ್ಸ ಬಹುನರರಾಕ್ಷಸ ಸ್ವರೂಪದ್ದಾಗಿದೆ. ಕರುನಾಡಿನ ಹಾಲುಗಲ್ಲದ ಬಾಯಲ್ಲಿ ಬೆರಳಿಟ್ಟರೂ ಕಚ್ಚಲು ಬಾರದ ಜನಪರ, ಜೀವಪರ, ಬಹುತ್ವಪರ ಇತ್ಯಾದಿ ಪರಪರ ಎನ್ನುವ ಭಾವಜೀವಿ ಕಮ್ಯುನಿಸ್ಟರು ಏನನ್ನು ಕುಡಿಯುತ್ತಿದ್ದಾರೋ ಗೊತ್ತಿಲ್ಲ. ತಮ್ಮ ಕಮ್ಯುನಿಸ್ಟ್ ಸಿದ್ಧಾಂತದ ‘ಅ ಆ ಇ ಈ’ ಸಹ ಇವರಿಗೆ ಗೊತ್ತಿಲ್ಲ. ಹಾಗಾಗಿ ಇವರ ಸಿದ್ಧಾಂತದ ಕುರಿತು ಒಂದು ಸಣ್ಣ ಐತಿಹಾಸಿಕ ದತ್ತಾಂಶ ಸಹಿತದ ವಾಸ್ತವಿಕ ಸತ್ಯವನ್ನು ತೋರಿಸೋಣ!
-
ವಚನಾಮೃತ
ರವಿ ಹಂಜ್
ಮೊನ್ನೆ ಅಕ್ಟೋಬರ್ ನಾಲ್ಕರಂದು ಧಾರವಾಡದಲ್ಲಿ ‘ಸಾಂಸ್ಕೃತಿಕ ಕ್ಷೇತ್ರದ ಮೇಲಿನ ಸಂಘ ಪರಿವಾರದ ದಾಳಿ’ಯನ್ನು ಖಂಡಿಸಿ ಫ್ಯಾಸಿಸಂ ವಿರುದ್ಧ ರಾಜ್ಯ ಮಟ್ಟದ ಪ್ರತಿರೋಧ ಸಮಾವೇಶ ಎಂಬ ಸಮಾವೇಶ ನಡೆಯಿತು. ಇದರಲ್ಲಿ ಕರ್ನಾಟಕದ ಬಹುಪಾಲು ಕಮ್ಯುನಿಸ್ಟ್ ಬುದ್ಧಿಜೀವಿಗಳು ಮತ್ತು ಮುಖಂಡರೂ ಭಾಗವಹಿಸಿದ್ದರು. ಅಂದು ಎಂ.ಎಂ.ಕಲಬುರ್ಗಿಯವರ ಮನೆಯಿಂದ ಸಮ್ಮೇಳನದ ಸ್ಥಳದವರೆಗೆ ಬೈಕ್ ಮೆರವಣಿಗೆ ಇದ್ದದ್ದು ವಿಶೇಷವಾಗಿತ್ತು.
ಎಷ್ಟೇ ಆಗಲಿ ಮಾನ್ಯ ಸಂಶೋಧಕ ಪಿತಾಮಹ ಕಲಬುರ್ಗಿಯವರು ತಮ್ಮ ಸುಳ್ಳಿನ ಸಂಕಥನದ ಮೂಲಕ ಧರ್ಮಭಂಜನೆಯನ್ನು ಪ್ರಸಾದಿಸಿದ ಆಧುನಿಕ ಕಮ್ಯುನಿ ಶರಣರೇ ಅಲ್ಲವೇ! ಈ ಸಮ್ಮೇಳನದ ಮೂಲಕ ಮತ್ತೊಮ್ಮೆ ಕಮ್ಯುನಿಸ್ಟರ ಗೋಬೆಲ್ಸ್ ತಂತ್ರ ಬಯಲಾಗಿದೆ. ಇತರರ ಮೇಲೆ ಫ್ಯಾಸಿಸಂ, ಗೋಬೆಲ್ಸ್ ಮುಂತಾದ ವಿಶಿಷ್ಟ ಪದಗಳ ಆರೋಪ ಹೊರಿಸುತ್ತಾ ನಿತ್ಯ ಅದನ್ನೇ ಕಾಯಕವಾಗಿಸಿಕೊಂಡ ಇವರ ತಂತ್ರ ಬಯಲಾಗುತ್ತಲೇ ಇದೆ.
‘ಸಾಂಸ್ಕೃತಿಕ ಕ್ಷೇತ್ರದ ಮೇಲಿನ ಸಂಘಪರಿವಾರದ ದಾಳಿ’ ಎನ್ನುವ ಬೆದರುಬೊಂಬೆಯನ್ನು ತೋರುವ ಇವರ ಇತಿಹಾಸ ಅತ್ಯಂತ ಬೀಭತ್ಸ ಬಹುನರರಾಕ್ಷಸ ಸ್ವರೂಪದ್ದಾಗಿದೆ. ಕರುನಾಡಿನ ಹಾಲುಗಲ್ಲದ ಬಾಯಲ್ಲಿ ಬೆರಳಿಟ್ಟರೂ ಕಚ್ಚಲು ಬಾರದ ಜನಪರ, ಜೀವಪರ, ಬಹುತ್ವಪರ ಇತ್ಯಾದಿ ಪರಪರ ಎನ್ನುವ ಭಾವಜೀವಿ ಕಮ್ಯುನಿಸ್ಟರು ಏನನ್ನು ಕುಡಿಯುತ್ತಿದ್ದಾರೋ ಗೊತ್ತಿಲ್ಲ. ತಮ್ಮ ಕಮ್ಯುನಿಸ್ಟ್ ಸಿದ್ಧಾಂತದ ‘ಅ ಆ ಇ ಈ’ ಸಹ ಇವರಿಗೆ ಗೊತ್ತಿಲ್ಲ. ಹಾಗಾಗಿ ಇವರ ಸಿದ್ಧಾಂತದ ಕುರಿತು ಒಂದು ಸಣ್ಣ ಐತಿಹಾಸಿಕ ದತ್ತಾಂಶ ಸಹಿತದ ವಾಸ್ತವಿಕ ಸತ್ಯವನ್ನು ತೋರಿಸೋಣ!
ಇದನ್ನೂ ಓದಿ: Ravi Hunj Column: ಹಿಂದೂ ಪದಕ್ಕೆ ಕಳ್ಳ ಎಂಬ ಅಪವ್ಯಾಖ್ಯಾನ ಹೇಗೆ ಬಂತು ?
ಸಾಂಸ್ಕೃತಿಕ ಕ್ಷೇತ್ರ ಎನ್ನುವ ಪದ ಬಳಸಿರುವ ಕರುನಾಡ ಕಮ್ಯುನಿಸ್ಟ್ ಹಸುಳೆಗಳಿಗೆ, ಸಂಸ್ಕೃತಿ ಮತ್ತು ಧರ್ಮದ ಮೇಲೆ ಕಮ್ಯುನಿಸ್ಟ್ ದಾಳಿಯ ಇತಿಹಾಸ ಘನಘೋರ ಜನಾಂಗೀಯ ಹತ್ಯೆಯದ್ದಾ ಗಿದೆ ಎಂಬ ಅರಿವೆಯೇ ಇಲ್ಲ. ಇದ್ದರೂ ಅದರ ಪರಿವೆ ಇವರಿಗಿಲ್ಲ.
ಸಂಸ್ಕೃತಿ ಕ್ರಾಂತಿ ಎಂಬ ಹೆಸರಿನಲ್ಲಿ ಒಂದು ಬೃಹತ್ ದೇಶದ ಸಂಸ್ಕೃತಿಯನ್ನೇ ಅಳಿಸಲಾಗಿದೆ. ನಮ್ಮ ಕರುನಾಡಿನ ಹಾಲುಗಲ್ಲದ ಹಸುಳೆಗಳ ಕೆಂಪು ಬಾವುಟದ ಕೆಂಪು, ಕೆಂಗುಲಾಬಿಯದು ಎಂದು ಕೊಂಡಿದ್ದಾರೆ. ಆದರೆ ಆ ಕೆಂಪು, ರಕ್ತದ್ದು ಎಂದು ಇವರಿಗೆ ಗೊತ್ತಿಲ್ಲ. ಗೊತ್ತಿದ್ದರೆ ಅವರು ಇಂತಹ ಪರಪರ ಹೋರಾಟಗಳನ್ನು ಎಂದೂ ಮಾಡುತ್ತಿರಲಿಲ್ಲ.
ಐತಿಹಾಸಿಕವಾಗಿ ಕಮ್ಯುನಿಸ್ಟ್ ಸಿದ್ಧಾಂತ, ಆಗಿ ಹೋದ ಕಮ್ಯುನಿಸ್ಟ್ ಸರ್ಕಾರಗಳು, ಖುದ್ದು ಸರ್ಕಾರಿ ಪ್ರಾಯೋಜನೆಯಲ್ಲಿ ಧರ್ಮನಾಶ, ಮತ್ತು ಆಧ್ಯಾತ್ಮಿಕ ಸಂಸ್ಥೆಗಳನ್ನು ನಿರ್ಮೂಲನೆ ಮಾಡಿ ಉಗ್ರ ನಾಸ್ತಿಕತೆಯನ್ನು ಹೇರಲು ವ್ಯವಸ್ಥಿತವಾಗಿ ಸಂಸ್ಕೃತಿಯನ್ನು ಗುರಿಯಾಗಿಸಿ ದಾಳಿ ನಡೆಸಿವೆ.
ಪ್ರಮುಖವಾಗಿ ಕಮ್ಯುನಿಸ್ಟ್ ಸಿದ್ಧಾಂತದ ಮೂಲವಾದ ಮಾರ್ಕ್ಸ್‌ವಾದಿ ಸಿದ್ಧಾಂತವು ಧರ್ಮವು ಹೇಗೆ ಶ್ರೀಸಾಮಾನ್ಯರ ಅಫೀಮಿನಂತಿರುವುದೋ ಅಂತಹ ಪರ್ಯಾಯವಾಗಿ ಒಂದು ಸಿದ್ಧಾಂತವನ್ನು ತರಬೇಕು ಎಂದು ಬಣ್ಣಿಸಿದೆ.
ಕಾರ್ಲ್ ಮಾರ್ಕ್ಸ್, ಧರ್ಮವು ವರ್ಗ ಶೋಷಣೆಯನ್ನು ಸಮರ್ಥಿಸುವ ಮತ್ತು ಆರ್ಥಿಕ ವಾಸ್ತವ ಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಒಂದು ಸಿದ್ಧಾಂತ ಎಂದು ಪೂರ್ವಾಗ್ರಹ ಪೀಡಿತ ನಾಗಿ ತಿಳಿದಿದ್ದ. ಹಾಲುಗಲ್ಲದ ಹಸುಳೆಗಳು ಅದನ್ನು ನಂಬಿದ್ದವು, ನಂಬಿರುವವು. ಇದು ತಕ್ಕಮಟ್ಟಿಗೆ ಕಾರ್ಲ್ ಮಾರ್ಕ್ಸನ ಕಾಲಮಾನದ ತಾತ್ಕಾಲಿಕ ಅಬ್ರಹಾಮಿಕ್ ಧಾರ್ಮಿಕ ಸಾಮಾಜಿಕ ಸನ್ನಿವೇಶಕ್ಕೆ ಸೂಕ್ತವಿದ್ದಿರಬಹುದು. ಆದರೆ ಇದನ್ನೇ ಹಿಂದೂ ಪ್ರಬೇಧದ ಮತಗಳಿಗೆ ಅನ್ವಯಿಸ ಲಾಗದು. ಈ ಬಗ್ಗೆ ನನ್ನ ಹಿಂದಿನ ವಿಶ್ವವಾಣಿ ‘ಬಸವ ಮಂಟಪ’ ಲೇಖನಗಳಲ್ಲಿ ಚರ್ಚಿಸಲಾಗಿದೆ, ಗಮನಿಸಿ.
ಮಾರ್ಕ್ಸ್ ಸಿದ್ಧಾಂತವನ್ನೇ ಮೂಲಭೂತವಾಗಿ ಪರಿಗಣಿಸಿ ಸರ್ಕಾರಿ ನಾಸ್ತಿಕತೆ ನೀತಿಯಡಿಯಲ್ಲಿ ಸಮಾಜವಾದಿ ಸಮಾಜವನ್ನು ನಿರ್ಮಿಸಲು ಧಾರ್ಮಿಕ ನಂಬಿಕೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದು ಮಾರ್ಕ್ಸ್‌ವಾದಿ- ಲೆನಿನಿಸ್ಟ್ ನಿರೀಶ್ವರ ಸಿದ್ಧಾಂತವು ರೂಪುಗೊಂಡಿತು.
ಧರ್ಮಗಳನ್ನು ಮೂಢನಂಬಿಕೆ, ಹಿಂದುಳಿದ ಮತ್ತು ಕ್ರಾಂತಿ-ವಿರೋಧಿ ಎಂದು ಅತಾರ್ಕಿಕವಾಗಿ ಪ್ರತಿಪಾದಿಸಲಾಯಿತು. ಇದರ ಪರಿಣಾಮವಾಗಿ ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ಆಡಳಿತವು ವ್ಯವಸ್ಥಿತವಾಗಿ ಸಾವಿರಾರು ಚರ್ಚ್, ಮಸೀದಿ, ಮತ್ತು ಸಿನಗಾಗ್‌ಗಳನ್ನು ಡೈನಮೈಟ್‌ಗಳಿಂದ ಧ್ವಂಸಗೊಳಿಸಿತು. ಕೆಲವು ಧಾರ್ಮಿಕ ಕಟ್ಟಡಗಳನ್ನು ಸರ್ಕಾರದ ಉದ್ದೇಶಗಳಿಗಾಗಿ ಬಳಸಿ ಕೊಂಡಿತು. ಧಾರ್ಮಿಕ ಸಂಸ್ಥೆಗಳ ಅಪಾರ ಆಸ್ತಿ ಮತ್ತು ಸಂಪತ್ತನ್ನು ಮುಟ್ಟುಗೋಲು ಹಾಕಿಕೊಂಡಿತು.
1920 ಮತ್ತು 1930ರ ದಶಕದಲ್ಲಿ ಲೆನಿನ್ ಮತ್ತು ಸ್ಟಾಲಿನ್ ನೇತೃತ್ವದಲ್ಲಿ ಸಾವಿರಾರು ಪಾದ್ರಿಗಳು, ಬಿಷಪ್‌ಗಳು, ಇಮಾಮ್‌ಗಳು ಮತ್ತು ಇತರ ಧಾರ್ಮಿಕ ಮುಖಂಡರನ್ನು ಭೀಕರವಾಗಿ ಪೀಡಿಸಿ, ಕಾರ್ಮಿಕ ಶಿಬಿರಗಳಲ್ಲಿ ಬಂಧಿಸಲಾಯಿತು. ಅವರಲ್ಲಿ ಸಾಕಷ್ಟು ಜನರನ್ನು ಗಲ್ಲಿಗೇರಿಸಲಾಯಿತು. ಇದೆಲ್ಲವನ್ನೂ ಸರ್ಕಾರಿ ಸಂಸ್ಥೆಯಾದ, ‘ಲೀಗ್ ಆಫ್ ಮಿಲಿಟೆಂಟ್ ಗಾಡ್‌ಲೆಸ್’ನಂತಹ ಪ್ರಾಯೋಜಿತ ಸಂಸ್ಥೆಗಳ ಮೂಲಕ ಸಂಸ್ಕೃತಿ ಮತ್ತು ಧರ್ಮನಾಶವನ್ನು ಉಗ್ರವಾಗಿ ಹಿಂಸಾತ್ಮಕ ವಾಗಿ ನಡೆಸಲಾಯಿತು.
ಮಾರ್ಕ್ಸ್-ಲೆನಿನ್ ಅವರ ಭೌತವಾದದ ಸಿದ್ಧಾಂತವನ್ನು ಆಧರಿಸಿದ ಕಮ್ಯುನಿಸ್ಟ್ ಸರ್ಕಾರಗಳು, ತಮ್ಮ ಪಕ್ಷದ ಸಂಪೂರ್ಣ ನಿಯಂತ್ರಣವನ್ನು ಸ್ಥಾಪಿಸಲು ಧಾರ್ಮಿಕ ಸಂಸ್ಥೆಗಳನ್ನು ತಮ್ಮ ವೈಚಾರಿಕ ಎದುರಾಳಿಗಳಾಗಿ ನೋಡಿದವು. ಅವುಗಳನ್ನು ಧ್ವಂಸಗೊಳಿಸುವುದೇ ತಮ್ಮ ಬಹುಮುಖ್ಯ ಉದ್ದೇಶವೆಂದು ಬಗೆದು ವಿಧ್ವಂಸಕ ಮತ್ತು ಹಿಂಸಾತ್ಮಕ ಮಾರ್ಗವನ್ನು ಅನುಸರಿಸಿದವು. ಇದರ ಪರಿಣಾಮ ಮಾನವ ಜನಾಂಗದಲ್ಲಿ ಎಂದೂ ಕೇಳರಿಯದಂತಹ ಹತ್ಯೆಗಳು ನಡೆದವು.
ಐತಿಹಾಸಿಕ ದಾಖಲೆಗಳು ಈ ನರಮೇಧದ ತೀವ್ರತೆಯನ್ನು ಅಂಕಿ-ಅಂಶಗಳ ಸಮೇತ ಅನಾವರಣ ಗೊಳಿಸುತ್ತದೆ. 1917ರ ಬೋಲ್ಶೆವಿಕ್ ಕ್ರಾಂತಿಯ ನಂತರ, ಸೋವಿಯತ್ ಸರ್ಕಾರವು ಸರ್ಕಾರಿ ಪ್ರಾಯೋಜಿತ ಉಗ್ರ ನಾಸ್ತಿಕತೆಯನ್ನು ಮೊದಲ ಬಾರಿಗೆ ಅಧಿಕೃತವಾಗಿ ಪರಿಚಯಿಸಿತು. ಜೋಸೆಫ್ ಸ್ಟಾಲಿನ್ ಆಡಳಿತದ ಅವಧಿಯಲ್ಲಿ ಈ ದೌರ್ಜನ್ಯವು ಉತ್ತುಂಗಕ್ಕೇರಿತು.
1937-1938ರ ಸಾಮೂಹಿಕ ಹತ್ಯಾಕಾಂಡದ ಅಧಿಕೃತ ಸೋವಿಯತ್ ದಾಖಲೆಗಳ ಪ್ರಕಾರ, ಈ ಎರಡು ವರ್ಷಗಳಲ್ಲಿ ಸರ್ಕಾರವು 1,68,300 ರಷ್ಯನ್ ಆರ್ಥೊಡಾಕ್ಸ್ ಧರ್ಮಗುರುಗಳನ್ನು ಬಂಧಿಸಿತು.
ಇವರಲ್ಲಿ 1,06,300 ಜನರನ್ನು ಗುಂಡಿಕ್ಕಿ ಕೊಲ್ಲಲಾಯಿತು. 1927ರಲ್ಲಿ ರಷ್ಯಾದಲ್ಲಿ 29,584 ಸಕ್ರಿಯ ಆರ್ಥೊಡಾಕ್ಸ್ ಚರ್ಚ್‌ಗಳಿದ್ದವು. ಆದರೆ 1940ರ ವೇಳೆಗೆ, ಸರ್ಕಾರದ ಕ್ರೂರ ವಿಧ್ವಂಸಕ ನೀತಿಗಳಿಂದಾಗಿ ಈ ಸಂಖ್ಯೆ 500ಕ್ಕಿಂತ ಕಡಿಮೆಗೆ ಕುಸಿಯಿತು. ಅಂದರೆ ಶೇಕಡಾ 98.3%ರಷ್ಟು ಚರ್ಚ್ʼಗಳನ್ನು ನಿರ್ಮೂಲನೆ ಮಾಡಲಾಯಿತು.
ಸಮಗ್ರವಾಗಿ ಇತಿಹಾಸಕಾರರ ಅಂದಾಜಿನ ಪ್ರಕಾರ, ಇಡೀ ಸೋವಿಯತ್ ಅವಧಿಯಲ್ಲಿ ಸುಮಾರು 600 ಬಿಷಪ್‌ಗಳು, 40000 ಪಾದ್ರಿಗಳು ಮತ್ತು 120000 ಸನ್ಯಾಸಿ/ ಸನ್ಯಾಸಿನಿಯರನ್ನು ಕೊಲ್ಲಲಾ ಯಿತು. ಕಮ್ಯುನಿಸ್ಟ್ ಕಾರ್ಮಿಕ ಶಿಬಿರಗಳು (ಇವು ಹಿಟ್ಲರನ ಯಹೂದಿ ಕ್ಯಾಂಪ್ ಮಾದರಿಯವು) ಮತ್ತು ಗಲ್ಲು ಶಿಕ್ಷೆಯ ಮೂಲಕ ಸಾವನ್ನಪ್ಪಿದ ಒಟ್ಟು ಧಾರ್ಮಿಕ ನಂಬಿಕೆಯುಳ್ಳವರ ಸಂಖ್ಯೆ 1.2ರಿಂದ 2 ಕೋಟಿ ಎಂದು ಅಂದಾಜಿಸಲಾಗಿದೆ.
ಕೇವಲ ರಷ್ಯಾ ಅಲ್ಲದೇ ರೊಮೇನಿಯಾ, ಪೋಲೆಂಡ್ ಮತ್ತು ಅಲ್ಬೇನಿಯಾದಲ್ಲಿದ್ದ ಕಮ್ಯುನಿಸ್ಟ್ ಸರ್ಕಾರಗಳು ಸಹ ಧಾರ್ಮಿಕ ಶಿಕ್ಷಣವನ್ನು ಕಾನೂನುಬಾಹಿರಗೊಳಿಸಿದವು. ಚರ್ಚ್‌ಗಳ ಆಡಳಿತ ದಲ್ಲಿ ಹಸ್ತಕ್ಷೇಪ ಮಾಡಿದವು. ಪ್ರತಿಭಟಿಸಿದ ಧರ್ಮಗುರುಗಳನ್ನು ಜೈಲಿಗಟ್ಟಿದವು ಮತ್ತು ಗಲ್ಲಿಗೇರಿಸಿ ದವು. 1967ರಲ್ಲಿ ಕಮ್ಯುನಿಸ್ಟ್ ಕ್ರಾಂತಿಕಾರಿ ಎನ್ವರ್ ಹೋಕ್ಸಾ ಅಲ್ಬೇನಿಯಾವನ್ನು ‘ವಿಶ್ವದ ಮೊದಲ ಅಧಿಕೃತ ನಾಸ್ತಿಕ ರಾಷ್ಟ್ರ’ ಎಂದು ಘೋಷಿಸುವ ಮೂಲಕ ತನ್ನ ದೇಶವನ್ನು ಇತರೆ ಕಮ್ಯುನಿಸ್ಟ್ ಆಡಳಿತದ ದೇಶಗಳಿಗಿಂತ ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡುಹೋದನು.
ಈತನ ಆಡಳಿತವು ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಧಾರ್ಮಿಕ ಆಚರಣೆಗಳನ್ನು ತಕ್ಷಣವೇ ನಿಷೇಧಿಸಿತು. ಇದು 740 ಮಸೀದಿಗಳು ಮತ್ತು 608 ಆರ್ಥೊಡಾಕ್ಸ್ ಚರ್ಚ್‌ಗಳು ಸೇರಿದಂತೆ 2169 ಧಾರ್ಮಿಕ ಕಟ್ಟಡಗಳನ್ನು ಮುಚ್ಚಿತು ಅಥವಾ ಧ್ವಂಸಗೊಳಿಸಿತು. ಇದರಿಂದಾಗಿ ಎರಡು ದಶಕ ಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಧಾರ್ಮಿಕ ನಂಬಿಕೆಯು ಸಂಪೂರ್ಣವಾಗಿ ಇಲ್ಲದಂತಾಗಿತ್ತು.
ಇನ್ನು ಮಾವೋವಾದಿ ಚೈನಾ ನಡೆಸಿದ ಸಂಸ್ಕೃತಿ ಕ್ರಾಂತಿಯ ಅಂಗವಾಗಿ ಚೈನಾ ಕಮ್ಯುನಿಸ್ಟ್ ಪಕ್ಷವು (ಸಿಸಿಪಿ) ಸಂಸ್ಕೃತಿಯ ನಾಲ್ಕು ಅಂಗಗಳಾದ ಸಂಪ್ರದಾಯ, ಸಂಸ್ಕೃತಿ, ಆಚರಣೆ ಮತ್ತು ಆಲೋಚನೆಗಳನ್ನು ಹಳತಾದ ಕೊಳೆತ ವಿಷಯಗಳು ಎಂದು ಘೋಷಿಸಿ ಅವುಗಳನ್ನು ನಾಶ ಮಾಡಲು ಮೊದಲಾಯಿತು. ಇದರ ಪರಿಣಾಮವಾಗಿ ಮಂದಿರಗಳು, ದೇವಸ್ಥಾನಗಳು, ಚರ್ಚ್‌ಗಳು ಮತ್ತು ಬೌದ್ಧ ವಿಹಾರಗಳನ್ನು ಸರ್ವನಾಶಗೊಳಿಸಲಾಯಿತು.
1950ರ ಟಿಬೆಟ್ ಆಕ್ರಮಣದ ನಂತರ, ಸಾಂಸ್ಕೃತಿಕ ಕ್ರಾಂತಿಯ ದೌರ್ಜನ್ಯವು ಹಿಂಸೆಯ ಪರಮಾವಧಿಯನ್ನು ತಲುಪಿತು. ಟಿಬೆಟ್‌ನಲ್ಲಿದ್ದ 6000ಕ್ಕೂ ಹೆಚ್ಚು ಬೌದ್ಧ ವಿಹಾರಗಳು ಮತ್ತು ಪುಣ್ಯಕ್ಷೇತ್ರಗಳನ್ನು ಸಂಪೂರ್ಣವಾಗಿ ಲೂಟಿ ಮಾಡಿ ಧ್ವಂಸಗೊಳಿಸಲಾಯಿತು. ಲಕ್ಷಾಂತರ ಪವಿತ್ರ ಗ್ರಂಥಗಳನ್ನು ಸುಡಲಾಯಿತು ಮತ್ತು ಪವಿತ್ರ ಲೋಹದ ವಿಗ್ರಹಗಳನ್ನು ಕರಗಿಸಿ ಕೈಗಾರಿಕಾ ರದ್ದಿಯನ್ನಾಗಿ ಮಾಡಲಾಯಿತು.
ಟಿಬೆಟ್ ಸಂಘರ್ಷದ ಅವಧಿಯಲ್ಲಿ ಅಪಹಾಸ್ಯ ಮತ್ತು ಹಿಂಸೆಯ ಸಾರ್ವಜನಿಕ ಆಚರಣೆಯಲ್ಲಿ ಸುಮಾರು 92000 ಟಿಬೆಟಿಯನ್ನರು ಸಾವನ್ನಪ್ಪಿದರು. ನಂತರ ಟಿಬೆಟಿಯನ್ನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಕಾರಣದಿಂದಾಗಿ 173000 ಜನರು ಜೈಲುಗಳು ಅಥವಾ ಬಲವಂತದ ಕಾರ್ಮಿಕ ಶಿಬಿರಗಳಲ್ಲಿ ಮರಣ ಹೊಂದಿದರು.
ಕೇವಲ ಬೌದ್ಧ ಧರ್ಮವಲ್ಲದೆ ಕ್ರಿಶ್ಚಿಯನ್ ಮತ್ತು ಇಸ್ಲಾಮಿಕ್ ತಾಣಗಳ ನಿರ್ಮೂಲನೆ ಮಾಡಲಾ ಯಿತು. ಚೀನಾದಾದ್ಯಂತ ಸಾವಿರಾರು ಮಸೀದಿಗಳು ಮತ್ತು ಚರ್ಚ್‌ಗಳನ್ನು ವಿರೂಪಗೊಳಿಸ ಲಾಯಿತು. ಅವುಗಳಲ್ಲಿ ಕೆಲವನ್ನು ಸರ್ಕಾರಿ ಗೋದಾಮುಗಳು ಮತ್ತು ಮಿಲಿಟರಿ ನೆಲೆಗಳಾಗಿ ಮಾರ್ಪಡಿಸಲಾಯಿತು. ಇಂದಿನ ವರ್ತಮಾನದಲ್ಲಿಯೂ ಸಹ ಪ್ರಸ್ತುತ ಚೀನಾ ಕಮ್ಯುನಿಸ್ಟ್ ಪಕ್ಷದ ನೀತಿಗಳು ಧಾರ್ಮಿಕ ಆಚರಣೆಗಳ ಮೇಲೆ ಕಠಿಣ ಸರ್ಕಾರಿ ಮೇಲ್ವಿಚಾರಣೆಯನ್ನು, ಧರ್ಮಗಳನ್ನು ಬಲವಂತವಾಗಿ ಚೀನೀ ಸಂಸ್ಕೃತಿಗೆ ಅನುಗುಣವಾಗಿ ಬದಲಾಯಿಸುವುದನ್ನು, ಧಾರ್ಮಿಕ ಅಲ್ಪಸಂಖ್ಯಾತರನ್ನು ಬಂಧನದಲ್ಲಿಡುವುದನ್ನು ಮತ್ತು ರಹಸ್ಯವಾಗಿ ನಡೆಯುವ ಸ್ವತಂತ್ರ ಚರ್ಚ್‌ಗಳ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸಿವೆ.
ಧರ್ಮಗುರುಗಳ ಸಾಮೂಹಿಕ ಹತ್ಯೆಗಳ ಯುಗವು ಹೆಚ್ಚಾಗಿ ಕಳೆದುಹೋಗಿದ್ದರೂ, ಇಂದಿಗೂ ಇರುವ ಕಮ್ಯುನಿಸ್ಟ್ ದೇಶಗಳು ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಕಠಿಣ ಆಡಳಿತಾತ್ಮಕ ನಿಯಮಗಳು, ಡಿಜಿಟಲ್ ಕಣ್ಗಾವಲು ಮತ್ತು ಕಾನೂನು ಅಡೆತಡೆಗಳನ್ನು ಬಳಸುತ್ತಿವೆ.
ಚೀನಾದ ಸೈನಿಸೈಸೇಶನ್ (ಚೀನೀಕರಣ) ಆದೇಶದ ಪ್ರಸ್ತುತ ನಿಯಮಗಳ ಪ್ರಕಾರ, ಎಲ್ಲಾ ಧಾರ್ಮಿಕ ಗುಂಪುಗಳು ತಮ್ಮ ಬೋಧನೆಗಳನ್ನು ಸಮಾಜವಾದಿ ಮೌಲ್ಯಗಳಿಗೆ ಅನುಗುಣವಾಗಿ ಬದಲಾಯಿಸಿ ಕೊಳ್ಳುವುದು ಕಡ್ಡಾಯವಾಗಿದೆ. 18 ವರ್ಷದೊಳಗಿನ ಅಪ್ರಾಪ್ತ ವಯಸ್ಕರು ಯಾವುದೇ ಧಾರ್ಮಿಕ ಸೇವೆಗಳಲ್ಲಿ ಪಾಲ್ಗೊಳ್ಳುವುದನ್ನು ಅಥವಾ ಧಾರ್ಮಿಕ ಶಿಕ್ಷಣವನ್ನು ಪಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಉಗ್ರಗಾಮಿ ವಿರೋಧಿ ಅಭಿಯಾನದ ಹೆಸರಿನಲ್ಲಿ ಅಂದಾಜು 10 ಲಕ್ಷ ಉಯಿಘರ್ ಮುಸ್ಲಿಮರನ್ನು ಇಂಟರ್ನ್‌ಮೆಂಟ್ ಕ್ಯಾಂಪ್‌ಗಳಲ್ಲಿ (ಖೈದಿ ಶಿಬಿರಗಳು) ಇರಿಸಲಾಗಿದೆ ಮತ್ತು ಸಾವಿರಾರು ಮಸೀದಿಗಳನ್ನು ಧ್ವಂಸಗೊಳಿಸಲಾಗಿದೆ ಅಥವಾ ಮಾರ್ಪಡಿಸಲಾಗಿದೆ ಎಂದು ಮಾನವ ಹಕ್ಕುಗಳ ದತ್ತಾಂಶಗಳು ದಾಖಲಿಸಿವೆ.
ಅಂತಾರಾಷ್ಟ್ರೀಯ ಕ್ರಿಶ್ಚಿಯನ್ ಕನ್ಸರ್ನ್ (ಐಸಿಸಿ) ವಿಶ್ಲೇಷಿಸಿದ ದತ್ತಾಂಶಗಳ ಪ್ರಕಾರ, ಚೀನಾ, ಕ್ಯೂಬಾ, ಉತ್ತರ ಕೊರಿಯಾ ಮತ್ತು ವಿಯೆಟ್ನಾಂನಂತಹ ಸಮಕಾಲೀನ ಕಮ್ಯುನಿಸ್ಟ್ ದೇಶಗಳಲ್ಲಿ ಸರ್ಕಾರದ ಅನುಮತಿ ಇಲ್ಲದೆ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಇಂದಿಗೂ ನೂರಾರು ಧರ್ಮ ವಿಶ್ವಾಸಿಗಳು ಜೈಲಿನಲ್ಲಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ.
ಹೀಗೆ ಕಮ್ಯುನಿಸ್ಟ್ ಆಡಳಿತಗಳಲ್ಲಿ ನಡೆದ ಧರ್ಮ ವಿರೋಧಿ ಅಭಿಯಾನಗಳ ವಿಶ್ಲೇಷಣಾತ್ಮಕ ಮೌಲ್ಯಮಾಪನವನ್ನು ಮಾಡಿದರೆ, ಧಾರ್ಮಿಕ ದಮನವು ಕೇವಲ ರಾಜಕೀಯ ಸರ್ವಾಧಿಕಾರದ ಸಾಂದರ್ಭಿಕ ಪರಿಣಾಮವಾಗಿರದೆ ಅದು ಸರ್ಕಾರವೇ ರೂಪಿಸಿದ ವ್ಯವಸ್ಥಿತ ಆದೇಶವಾಗಿತ್ತು ಎಂಬ ವಾಸ್ತವಿಕ ಸತ್ಯ ಅನಾವರಣವಾಗುತ್ತದೆ.
ಸಮಗ್ರವಾಗಿ ಐತಿಹಾಸಿಕ ವಾಸ್ತವವನ್ನು ಗಮನಿಸಿದಾಗ ಸಮಸಮಾಜ ಕಟ್ಟುವ ಏಕೈಕ ಭರವಸೆ ಎಂಬ ಕಮ್ಯುನಿಸ್ಟ್ ಸಿದ್ಧಾಂತ ಸೃಷ್ಟಿಸಿದ ಐತಿಹಾಸಿಕ ದತ್ತಾಂಶ ಸಹಿತದ ದುರಂತ ಭೀಕರವಾಗಿದೆ. ಇಂತಹ ಸಿದ್ಧಾಂತ ಮನುಕುಲಕ್ಕೆ ಅದೆಷ್ಟು ಮಾರಕ ಎಂದು ಅದರ ಕಾರ್ಯಗಳ ಮೂಲಕ ತೆರೆದುಕೊಳ್ಳುತ್ತದೆ.
ವಿಪರ್ಯಾಸವೆಂದರೆ ಅಂದಿನ ಕಾಲದ ಪ್ರಾಯೋಜಿತ ಬುದ್ಧಿಜೀವಿಗಳು ಇದನ್ನು ಮರೆಮಾಚಿ ಧಾರ್ಮಿಕ ಸಂಪ್ರದಾಯಗಳನ್ನು ಅಪಹಾಸ್ಯ ಮಾಡುತ್ತಾ, ಕಮ್ಯುನಿಸ್ಟ್ -ಪ್ರಣೀತ ಭೌತವಾದ, ನಿರೀಶ್ವರವಾದ, ಮತ್ತು ಸಮಾಜವಾದವನ್ನು ಯುವಪೀಳಿಗೆಯಲ್ಲಿ ಉತ್ತಿಬಿತ್ತಿ ಬೆಳೆಸಿದರು. ಇದರ ಪರಿಣಾಮವೇ ನಮ್ಮ ಭಾರತದ ಕರುನಾಡಿನ ಹಾಲುಗಲ್ಲದ ಬುದ್ಧಿಜೀವಿಗಳಂತವರು ಸೃಷ್ಟಿಯಾದದ್ದು!
ಈಗ ಇವರೂ ಸಹ ಪ್ರಾಯೋಜಿತವಾಗಿಯೋ ಅಪ್ರಾಯೋಜಿತವಾಗಿಯೋ ಅದನ್ನೇ ಮಾಡುತ್ತಿದ್ದಾರೆ. ಇವರ ಗೋಬೆಲ್ಸ್, ಫ್ಯಾಸಿಸಂ ತಂತ್ರಗಳಿಗೆ ಮುಗ್ಧ ಯುವಜನತೆ ಬಲಿಯಾಗುತ್ತಿದೆ. ಇದನ್ನೇ ಯಶಸ್ವಿಯಾಗಿ ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ಸಿದ್ಧಾಂತವನ್ನು ಪ್ರೊ. ಎಂ ಎಂ ಕಲಬುರ್ಗಿಯವರು ತಮ್ಮ ರದ್ದಾಗುವ ಸಂಶೋಧನೆಗಳ ಮೂಲಕ ಪ್ರಯೋಗಿಸಿದ್ದು!
ಹಾಗಾಗಿಯೇ ಧಾರವಾಡದಲ್ಲಿ ನಡೆದ ಈ ಸಮ್ಮೇಳನದ ಬೈಕ್ ಮೆರವಣಿಗೆ ದಿವಂಗತರ ಮನೆಯಿಂದ ಆರಂಭವಾಗಿದ್ದು ಎನಿಸುವುದು. ಇದನ್ನು ಪುಷ್ಟೀಕರಿಸುವಂತೆ ಸಂಶೋಧಕ ಪಿತಾಮಹರ ಸಂಬಂಧಿ ಎಂದು ಹೇಳಿಕೊಳ್ಳುವ ಸಿಂದಗಿ ಮೂಲದ ವ್ಯಕ್ತಿಯೊಬ್ಬರು ಸಿದ್ದಾರೂಡರ ಭಾವಚಿತ್ರ ಹಿಡಿದುಕೊಂಡು ಫ್ಯಾಸಿಸಂ ವಿರುದ್ಧ ರಾಜ್ಯ ಮಟ್ಟದ ಪ್ರತಿರೋಧ ಸಮಾವೇಶ ಎಂಬ ಈ ಸಮಾವೇಶದಲ್ಲಿ ಭಾಗವಹಿಸಿದ್ದರು.
ಒಟ್ಟಾರೆ ತಮ್ಮ ಸಮಾವೇಶಕ್ಕೆ ಸಾಂಸ್ಕೃತಿಕ ಎಂಬ ಪದ ಬಳಸಿದ ಈ ಬುದ್ಧಿಜೀವಿಗಳ ಹಿನ್ನೆಲೆ ಹೀಗಿದೆ. ಮುಂದಿನ ಬಾರಿ ಈ ಬುದ್ಧಿಜೀವಿಗಳ ಬಾಯಲ್ಲಿ ಫ್ಯಾಸಿಸಂ, ಗೋಬೆಲ್ಸ್ ಮುಂತಾದ ಪದಗುಚ್ಛಗಳು ಹರಿದುಬಂದರೆ ಅದು ಅವರದೇ ಅಂಗದ ಅಂತರಂಗದ ದನಿಯಾಗಿದೆ ಎಂದು ಪರಿಗಣಿಸುವಿರಲ್ಲವೇ !