ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮತಪತ್ರದ ಚುನಾವಣೆ: ಬೇಕು ಚಿಂತನೆ

ಪ್ರತಿ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತವರು ತಮಗೆ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗುವುದು ಸಹಜ. ಆದರೆ, ಮರು ಎಣಿಕೆಯ ಸಂದರ್ಭದಲ್ಲಿ ಇವಿಎಂ ಯಂತ್ರದಲ್ಲಿನ ಅಂಕಿ-ಅಂಶಗಳು ಬದಲಾಗುವ ಸಂಭವ ಬಹಳ ಕಡಿಮೆ ಇರುತ್ತದೆ. ಆದರೆ, ಚುನಾವಣಾ ಕೆಲಸಕ್ಕೆ ನಿಯೋಜನೆಯಾಗಿರುವ ಅಧಿಕಾರಿಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ‘ಪೋಸ್ಟಲ್ ಬ್ಯಾಲೆಟ್’ ಅಥವಾ ಅಂಚೆ ಮತ ಪತ್ರಗಳ ಹೆಚ್ಚಿನ ಸಮಸ್ಯೆಗಳು ಕಂಡುಬರುತ್ತಿವೆ.

ಮತಪತ್ರದ ಚುನಾವಣೆ: ಬೇಕು ಚಿಂತನೆ

-

Profile
Ashok Nayak May 13, 2026 10:13 AM

ಪ್ರಸ್ತುತ

ಗೊರೂರು ಶಿವೇಶ್

ಶೃಂಗೇರಿ ಮತ ಕ್ಷೇತ್ರದ ಮತಪತ್ರಗಳ ಮರು ಎಣಿಕೆ ವಿಚಾರವು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇದೇ ಸಮಯದಲ್ಲಿ, ಕಡಿಮೆ ಅಂತರದಲ್ಲಿ ಅಭ್ಯರ್ಥಿಗಳು ಗೆದ್ದಿರುವ ಹಲವು ಮತಕ್ಷೇತ್ರಗಳ ಮರು ಎಣಿಕೆಗೆ ಸಂಬಂಽಸಿದ ಅರ್ಜಿಗಳು ನ್ಯಾಯಾಲಯದ ವಿವಿಧ ಹಂತಗಳಲ್ಲಿವೆ. ಈ ಸಂದರ್ಭದಲ್ಲಿ, ಕರ್ನಾಟಕ ಸರಕಾರವು ಇವಿಎಂ ಬದಲಾಗಿ ಮತಪತ್ರಗಳ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಕುರಿತು ನಿರ್ಧಾರ ಕೈಗೊಂಡಿದೆ. ಇದಕ್ಕೆ ರಾಜ್ಯಪಾಲರ ಅಂಕಿತವೂ ದೊರಕಿ, ಚುನಾವಣೆಗಳು ಮತಪತ್ರಗಳ ಆಧಾರದ ಮೇಲೆ ನಡೆಯುತ್ತಿರುವ ಈ ಹೊತ್ತು, ಸರಕಾರದ ನಿರ್ಧಾರದ ಕುರಿತು ಮರುಚಿಂತನೆ ಮಾಡಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿದೆ.

ಪ್ರತಿ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತವರು ತಮಗೆ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗುವುದು ಸಹಜ. ಆದರೆ, ಮರು ಎಣಿಕೆಯ ಸಂದರ್ಭದಲ್ಲಿ ಇವಿಎಂ ಯಂತ್ರದಲ್ಲಿನ ಅಂಕಿ-ಅಂಶಗಳು ಬದಲಾಗುವ ಸಂಭವ ಬಹಳ ಕಡಿಮೆ ಇರುತ್ತದೆ. ಆದರೆ, ಚುನಾವಣಾ ಕೆಲಸಕ್ಕೆ ನಿಯೋಜನೆಯಾಗಿರುವ ಅಧಿಕಾರಿಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ‘ಪೋಸ್ಟಲ್ ಬ್ಯಾಲೆಟ್’ ಅಥವಾ ಅಂಚೆ ಮತ ಪತ್ರಗಳ ಹೆಚ್ಚಿನ ಸಮಸ್ಯೆಗಳು ಕಂಡುಬರುತ್ತಿವೆ.

ಇದನ್ನೂ ಓದಿ: Lokesh Kayarga Column: ಕುಕ್ಕೆ ಹೀಗೆ ಕುಕ್ಕರ್ ಆದ್ರೆ ಹೇಗೆ ಸ್ವಾಮಿ !?

ಚುನಾವಣೆ ಮುಗಿದು ಮತದಾನದ ದಿನದ ಹಿಂದಿನ ದಿನದವರೆಗೂ ಈ ಪೋಸ್ಟಲ್ ಬ್ಯಾಲೆಟ್ ಚಲಾಯಿಸಲು ಅವಕಾಶ ಇರುವುದರಿಂದ, ಅಭ್ಯರ್ಥಿಗಳು ಈ ಮತಪತ್ರಗಳನ್ನು ಸಾವಿರಾರು ರುಪಾಯಿಗಳಿಗೆ ಕೊಂಡು, ತಾವೇ ಮತ ಚಲಾಯಿಸಿ ಪೆಟ್ಟಿಗೆಗಳಿಗೆ ತುಂಬಿರುವ ದೃಷ್ಟಾಂತಗಳು ಸಾಕಷ್ಟಿವೆ.

ಚುನಾವಣಾ ತರಬೇತಿಯ ಸಂದರ್ಭದಲ್ಲಿಯೇ ಮತ ಚಲಾಯಿಸಲು ಅವಕಾಶ ನೀಡಲಾ ಗಿದ್ದರೂ, ಬಹಳಷ್ಟು ಸಿಬ್ಬಂದಿ ಮತ ಚಲಾಯಿಸುವುದಿಲ್ಲ. ಬದಲಿಗೆ, ಕೊನೆಯ ದಿನದ ವರೆಗೂ ಆ ಮತಕ್ಕೆ ಸಿಗಬಹುದಾದ ‘ಸೂಕ್ತ ಬೆಲೆ’ಗಾಗಿ ಕಾಯುತ್ತಿರುತ್ತಾರೆ. ಬಹುತೇಕ ಶಿಕ್ಷಕರೇ ಚಲಾಯಿಸುವ ಮತಪತ್ರಗಳಲ್ಲಿ ಶೇ.5ರಿಂದ 10ರಷ್ಟು ಪತ್ರಗಳು ಪ್ರಿಸೈಡಿಂಗ್ ಅಧಿಕಾರಿ/ಗೆಜೆಟೆಡ್ ಅಧಿಕಾರಿಯ ಸಹಿ ಇಲ್ಲದ ಕಾರಣ ತಿರಸ್ಕೃತವಾಗುತ್ತವೆ.

ಇನ್ನುಳಿದಂತೆ, ಒಬ್ಬ ಅಭ್ಯರ್ಥಿಗಿಂತ ಹೆಚ್ಚು ಮಂದಿಗೆ ಗುರುತು ಮಾಡುವುದರಿಂದಲೂ ಮತ ಪತ್ರಗಳು ಅಸಿಂಧುವಾಗುತ್ತವೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಮತಚೋರಿ ನಡೆದಿದೆ, ಇವಿಎಂ ತಿರುಚಲಾಗಿದೆ ಎಂಬ ಆಪಾದನೆಗಳು ಕೇಳಿ ಬಂದಿದೆ.

ಸ್ಥಳೀಯ ಸಂಸ್ಥೆಗಳ ಪೈಕಿ ಗ್ರಾಪಂ ಚುನಾವಣೆಗಳನ್ನು ಮತಪತ್ರಗಳಲ್ಲಿಯೇ ನಡೆಸ ಬೇಕಾಗುತ್ತದೆ. ಏಕೆಂದರೆ, ಕೆಲವು ಮತಗಟ್ಟೆಗಳಲ್ಲಿ ಮತದಾರರು ಎರಡು ಅಥವಾ ಮೂರು ಮತಗಳನ್ನು ಚಲಾಯಿಸಬೇಕಾದ ಹಕ್ಕು ಹೊಂದಿರುತ್ತಾರೆ; ಇವಿಎಂ ವ್ಯವಸ್ಥೆಯಲ್ಲಿ ಸದ್ಯಕ್ಕೆ ಇದು ಸಾಧ್ಯವಿಲ್ಲ.

ಹಾಗಾಗಿ ಅಲ್ಲಿ ಮತಪತ್ರ ಅನಿವಾರ್ಯ. ಆದರೆ, ಉಳಿದಂತೆ ತಾಪಂ, ಜಿಪಂ, ನಗರಸಭೆ ಹಾಗೂ ‘ಗ್ರೇಟರ್ ಬೆಂಗಳೂರು’ ಚುನಾವಣೆಗಳನ್ನು ಮತಪತ್ರಗಳ ಮೂಲಕ ನಡೆಸುವುದು ಹಲವು ಸಮಸ್ಯೆಗೆ ದಾರಿಯಾಗುತ್ತದೆ. ಮತಪತ್ರದ ಹಿಂದೆ ಆಯಾ ಕೇಂದ್ರದ ವಿಶಿಷ್ಟ ಮುದ್ರೆ ಇದೆಯೇ ಮತ್ತು ನಿಗದಿತ ಚಿಹ್ನೆಯ ಮೇಲೆ ಬಾಣದ ಗುರುತು ಕ್ರಮಬದ್ಧವಾಗಿ ಇದೆಯೇ ಎಂದು ಪರಿಶೀಲಿಸಬೇಕು.

ಆದರೆ, ಶೇ.10ರಿಂದ 15ರಷ್ಟು ಜನರು ಗೆರೆಯ ಮೇಲೆ ಅಥವಾ ಎರಡು ಚಿಹ್ನೆಗಳ ನಡುವೆ ಗುರುತು ಮಾಡಿರುತ್ತಾರೆ. ಕೆಲವೊಮ್ಮೆ ಶೇ.90ರಷ್ಟು ಗುರುತು ಒಬ್ಬ ಅಭ್ಯರ್ಥಿಯ ಚಿಹ್ನೆಯ ಮೇಲಿದ್ದರೆ, ಇನ್ನುಳಿದ ಭಾಗ ಇನ್ನೊಬ್ಬ ಅಭ್ಯರ್ಥಿಯ ಚಿಹ್ನೆಯ ಮೇಲೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಎಣಿಕೆ ಕೇಂದ್ರದಲ್ಲಿರುವ ಏಜೆಂಟ್ ಆ ಮತವನ್ನು ತಮ್ಮ ಅಭ್ಯರ್ಥಿಗೆ ಸೇರಿಸಬೇಕೆಂದು ವಾದಿಸುತ್ತಾರೆ. ಆದರೆ, ಚುನಾವಣಾ ನಿಯಮಾವಳಿಗಳ ಪ್ರಕಾರ ಅವುಗಳನ್ನು ‘ಕುಲಗೆಟ್ಟ ಮತಗಳು’ ಎಂದು ಪರಿಗಣಿಸಲಾಗುತ್ತದೆ.

ಮತಪತ್ರಗಳು ನಾಪತ್ತೆಯಾಗುವ ಸಾಧ್ಯತೆ ಇರುತ್ತದೆ. ಇಂದು ಪ್ರತಿ ಚುನಾವಣೆಗೆ ಅಭ್ಯರ್ಥಿ ಗಳು ಲಕ್ಷಾಂತರ ರುಪಾಯಿ ಖರ್ಚು ಮಾಡುವುದರಿಂದ, ಅವರು ಕಡಿಮೆ ಅಂತರದ ಸೋಲನ್ನು ಸುಲಭವಾಗಿ ಒಪ್ಪುವುದಿಲ್ಲ. ಅಧಿಕಾರಿಗಳು ಫಲಿತಾಂಶ ಘೋಷಿಸಿದರೂ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗುತ್ತಾರೆ.

ಇದಕ್ಕೆ ಸೂಕ್ತ ಪರಿಹಾರವೆಂದರೆ ಮೊದಲು ಗ್ರಾಪಂ ಚುನಾವಣೆಯನ್ನು ಮತಪತ್ರದ ಆಧಾ ರದಲ್ಲಿ ನಡೆಸಿ ಅದರ ಸಾಧಕ-ಬಾಧಕಗಳನ್ನು ಗಮನಿಸಿ ನಂತರ ತಾಪಂ, ಜಿಪಂ ಹಾಗೂ ಗ್ರೇಟರ್ ಬೆಂಗಳೂರು ಚುನಾವಣೆಗಳಿಗೆ ಮತಪತ್ರ ಬಳಸಬೇಕೇ ಅಥವಾ ಇವಿಎಂ ಬಳಸಬೇಕೇ ಎಂಬ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಉಚಿತ. ಇಲ್ಲವೇ ಪಾರದರ್ಶಕ ಚುನಾವಣೆಗಾಗಿ ಇವಿಎಂ ಜತೆಗೆ ವಿವಿಪ್ಯಾಟ್ ಜೋಡಿಸಿ ಚುನಾವಣೆ ನಡೆಸಬಹುದು.