Shashidhara Halady Column: ನೋಡಲು ಚಂದ, ಆದರೆ ರೈತರಿಗೆ ಕಷ್ಟ !
ಹಕ್ಕಲಿನ ಅಂಚಿನಲ್ಲೋ, ಹಾಡಿಯ ಮಧ್ಯದಲ್ಲೋ ಓಡಾಡುವ ಕಾಡುಕೋಳಿಗಳನ್ನು, ಇನ್ನೂ ಚಿಕ್ಕ ಗಾತ್ರದ ಚಿಟ್‌ಕೋಳಿಗಳನ್ನು ನೋಡಿದ್ದುಂಟು. ಮಳೆಗಾಲದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಾ ಕೂಗು ತ್ತಿದ್ದ ವಾಂಟಕೋಳಿಗಳನ್ನು ನೋಡಿದ್ದು ಹಲವು ಬಾರಿ; ಟಿಟ್ಟಿಭ, ಗೂಬೆ, ನೆತ್ತಿಂಗ ಇವೆಲ್ಲಾ ನಮ್ಮ ಹಳ್ಳಿ ಯಲ್ಲಿ ಸಾಮಾನ್ಯ ಮತ್ತು ಆಗಾಗ ಕಾಣಿಸುತ್ತಿದ್ದವು.
-
ಶಶಾಂಕಣ
ನಮ್ಮ ಹಳ್ಳಿಯ ಜನರಿಗೆ ಅಪರೂಪ ಎನಿಸಿದ್ದ ನವಿಲುಗಳು ಇಂದು ತೀರಾ ಸಾಮಾನ್ಯ ಎನಿಸಿದ್ದು ಮಾತ್ರ ಬೆರಗಿನ ವಿಚಾರ. ಜತೆಗೆ, ಅವುಗಳ ಕಾಟದಿಂದ, ಕೃಷಿಕರು ಬೇಸತ್ತು ಹೋಗಿದ್ದು ಸಹ ನಿಜ. ಭತ್ತ, ಬಸಳೆ, ತರಕಾರಿ ಗಿಡಗಳನ್ನು ಅವು ಕೆದಕಿ, ನೆಲವನ್ನು ಬಗೆದು ಹಾಳುಮಾಡುವುದರಿಂದಾಗಿ, ನವಿಲುಗಳು ನೋಡಲು ಚಂದವಾದರೂ, ಕೃಷಿಕರಿಗೆ ಅವನ್ನು ಕಂಡರೆ ಅಷ್ಟಕ್ಕಷ್ಟೇ.
ನಮ್ಮ ಹಳ್ಳಿಯ ಮನೆಯಲ್ಲಿ ಕುಳಿತರೆ, ಬೆಳಗಿನ ಹೊತ್ತು ಕೇಳಿ ಬರುವ ದೀರ್ಘವಾದ ಕೂಗು ಎಂದರೆ, ನವಿಲುಗಳ ಕೇಕೆ! ಹಾಡಿ, ಹಕ್ಕಲುಗಳ ನಡುವೆ, ಗದ್ದೆ ಬೈಲಿನ ಪಕ್ಕದ ಪೊದೆಗಳ ಹಿಂದೆ ಓಡಾಡುವ ನವಿಲುಗಳು, ಆಗಾಗ ದನಿ ಎತ್ತರಿಸಿ ಕೂಗುವುದುಂಟು. ಬಹು ದೂರದ ತನಕ ಕೇಳಿ ಬರುವ ಆ ದನಿ, ನಮ್ಮ ಹಳ್ಳಿಯವರಿಗೆ ಚಿರಪರಿಚಿತ ಏನಲ್ಲ! ಏಕೆಂದರೆ, ಕೆಲವೇ ವರ್ಷಗಳ ಹಿಂದೆ ನಮ್ಮೂರಲ್ಲಿ ನವಿಲುಗಳಿರಲಿಲ್ಲ!
ಸುಮಾರು 1990ರ ದಶಕದ ತನಕ, ಮಲೆನಾಡಿನಂತಿರುವ ಆದರೆ ಕರಾವಳಿಯ ಭಾಗವಾದ ನಮ್ಮ ಹಳ್ಳಿಯ ಸುತ್ತಮುತ್ತಲಿನ ಕಾಡುಗಳು, ಗುಡ್ಡಗಳು ಹುಲ್ಲುಗಾವಲುಗಳು, ಗದ್ದೆಯಂಚಿನಲ್ಲಿ ನವಿಲು ಗಳು ಕಾಣಿಸುತ್ತಿರಲಿಲ್ಲ. ಇಷ್ಟು ಖಚಿತವಾಗಿ ಹೇಗೆ ಹೇಳುತ್ತಿದ್ದೇನೆಂದರೆ, ನಾವು ಅಂದು ಪ್ರತಿದಿನ ಶಾಲೆಗೆ ಹೋಗುತ್ತಿದ್ದುದು, ಹಾಡಿ ಗುಡ್ಡಗಳ ಮಧ್ಯದ ದಾರಿಯಲ್ಲಿ, ಅದರಲ್ಲೂ ನಡೆದುಕೊಂಡೇ! ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಿಗೆ ಹೋಗಲು ನಮಗೆಲ್ಲಾ ಪ್ರತಿದಿನ ಕನಿಷ್ಠ ೫ ರಿಂದ ೧೦ ಕಿ.ಮೀ. ದೂರದ ನಡಿಗೆ. ಆ ದಾರಿಯು ಹಾಡಿ, ಹಕ್ಕಲು, ಗುಡ್ಡ, ಕಾಡು, ಮಕ್ಕಿ ಗದ್ದೆ, ಬೈಲು ಗದ್ದೆ, ತೋಡು, ತೋಟಗಳ ನಡುವೆ ಸಾಗುತ್ತಿತ್ತು.
ಅಲ್ಲಿ ವಾಸಿಸಿದ್ದ ಬಹುಪಾಲು ಹಕ್ಕಿಗಳು, ಉರಗಗಳು, ಉಭಯಜೀವಿಗಳು, ಕೀಟಗಳು, ಹಾತೆಗಳು, ಹಾರುವ ಓತಿ ಮತ್ತು ಇತರ ಸಣ್ಣಪುಟ್ಟ ಜೀವಿಗಳು ನನಗೆ ಪರಿಚಿತ. ನಮ್ಮ ಪ್ರತಿದಿನದ ಶಾಲಾ ದಾರಿಯ ಪಕ್ಕದಲ್ಲಿದ್ದ ಒಂದು ಪುಟ್ಟ ಅಡಕೆ ತೋಟದಲ್ಲಿ ಹಾರುವ ಓತಿಗಳನ್ನು ಹಲವು ಬಾರಿ ಕಂಡಿದ್ದೆ.
ಹಕ್ಕಲಿನ ಅಂಚಿನಲ್ಲೋ, ಹಾಡಿಯ ಮಧ್ಯದಲ್ಲೋ ಓಡಾಡುವ ಕಾಡುಕೋಳಿಗಳನ್ನು, ಇನ್ನೂ ಚಿಕ್ಕ ಗಾತ್ರದ ಚಿಟ್‌ಕೋಳಿಗಳನ್ನು ನೋಡಿದ್ದುಂಟು. ಮಳೆಗಾಲದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಾ ಕೂಗುತ್ತಿದ್ದ ವಾಂಟಕೋಳಿಗಳನ್ನು ನೋಡಿದ್ದು ಹಲವು ಬಾರಿ; ಟಿಟ್ಟಿಭ, ಗೂಬೆ, ನೆತ್ತಿಂಗ ಇವೆಲ್ಲಾ ನಮ್ಮ ಹಳ್ಳಿಯಲ್ಲಿ ಸಾಮಾನ್ಯ ಮತ್ತು ಆಗಾಗ ಕಾಣಿಸುತ್ತಿದ್ದವು.
ಇದನ್ನೂ ಓದಿ: Shashidhara Halady Column: ಐತಿಹ್ಯಗಳ ಸುರಂಗದಲ್ಲಿ ವಂಡಾರು ಕಂಬಳ ಕೊಡಿ ಹಬ್ಬ
ಆದರೆ ಅಲ್ಲಿ ಆಗ ನವಿಲುಗಳಿರಲಿಲ್ಲ. ನವಿಲು ಸಾಮಾನ್ಯವಾಗಿ ಬಯಲು ಪ್ರದೇಶಗಳಲ್ಲಿ, ಒಣ ಭೂಮಿಯಲ್ಲಿ, ಮಳೆ ಕಡಿಮೆಯಿರುವ ಪ್ರದೇಶಗಳಲ್ಲಿ ವಾಸಿಸುವ ಹಕ್ಕಿ. ನಮ್ಮ ಹಳ್ಳಿಯು ಕಾಡುಗಳಿಂದ ಸುತ್ತುವರಿದ ಪ್ರದೇಶ, ಅದಕ್ಕೇ ಅಲ್ಲಿ ನವಿಲುಗಳಿಲ್ಲ ಎಂಬ ಭಾವನೆ ನಮ್ಮದು.
ನಾವು ಶಾಲೆ ಮಕ್ಕಳು ನವಿಲುಗರಿಗಳನ್ನು ಆಗಾಗ ಅದೆಲ್ಲಿಂದಲೋ ಸಂಪಾದಿಸಿ, ಪುಸ್ತಕದ ನಡುವೆ ಇಟ್ಟು ಅದು ಮರಿ ಹಾಕಿದೆಯೆ ಎಂದು ಪರೀಕ್ಷಿಸಿದ್ದುಂಟು. ಚಿತ್ರಗಳಲ್ಲಿ ನವಿಲನ್ನು ಕಂಡಿದ್ದುಂಟು; ಯಕ್ಷಗಾನದಲ್ಲಿ ನವಿಲು ನರ್ತನ, ಶಾಲಾ ಮಕ್ಕಳ ನವಿಲು ನರ್ತನ ನೋಡಿದ್ದುಂಟು; ಬಿಟ್ಟರೆ, ನಿಜ ನವಿಲಿನ ನೋಟ ನಮಗೆ ದೊರಕಿರಲಿಲ್ಲ. ನವಿಲು ಎಂದರೆ ಬಹು ದೂರದ ಊರುಗಳಲ್ಲಿ ವಾಸಿಸುವ ಹಕ್ಕಿ ಎಂದೇ ನಮ್ಮ ಭಾವನೆಯಾಗಿತ್ತು.
ನಂತರ, ಕಾಲೇಜು ವಿದ್ಯಾಭ್ಯಾಸಕ್ಕೆ ಹೋದಾಗ, ಕೊಲ್ಲೂರು ಸನಿಹದ ಜಡ್ಕಲ್ ಎಂಬ ಊರಿನ ಹತ್ತಿರದ ಒಬ್ಬ ಸಹಪಾಠಿಯ ಪರಿಚಯವಾಯಿತು. ಮಾತಿನ ಮಧ್ಯೆ, ‘ನಮ್ಮ ಹಳ್ಳಿಯಲ್ಲಿ ನವಿಲು ಗಳಿವೆ’ ಎಂದು ಆತ ಹೇಳಿದಾಗ, ನನಗಂತೂ ಬೆರಗು, ಅಚ್ಚರಿ! ಅವರ ಗದ್ದೆಗಳ ಸುತ್ತಮುತ್ತ ನವಿಲು ಗಳು ಓಡಾಡುತ್ತವೆ, ನಮಗೆಲ್ಲಾ ಕಾಣಿಸುತ್ತವೆ ಎಂದು ಆತ ಹೇಳಿದಾಗ, ನವಿಲನ್ನು ನೋಡುವ ಆಸೆಯಾಯಿತು.
‘ಒಂದು ದಿನ ನಿಮ್ಮೂರಿಗೆ ಬರುತ್ತೇನೆ; ಶನಿವಾರ ಕಾಲೇಜು ಮುಗಿಸಿ ಹೋಗುವಾ. ಆಗದಾ? ಆಗ ನವಿಲು ತೋರಿಸುತ್ತೀಯಾ?’ ಎಂದು ಕೇಳಿದ್ದೆ. ಆತ ‘ಹೂಂ, ಖಂಡಿತಾ’ ಎಂದಿದ್ದ. ಆದರೆ ನವಿಲು ಗಳನ್ನು ನೋಡಲು ನಾನು ಆಗ ಜಡ್ಕಲ್ ಎಂಬ ಹಳ್ಳಿಗೆ ಹೋಗಲಿಲ್ಲ, ಬಿಡಿ. ಅದು ಬೇರೆ ವಿಚಾರ. ನಮ್ಮ ಹಳ್ಳಿಯ ಜನರಿಗೆ ಇಷ್ಟು ಅಪರೂಪ ಎನಿಸಿದ್ದ ನವಿಲುಗಳು, ಇಂದು ತೀರಾ ಸಾಮಾನ್ಯ ಎನಿಸಿದ್ದು ಮಾತ್ರ ಮತ್ತೊಂದು ಬೆರಗಿನ ವಿಚಾರ.
ಜತೆಗೆ, ಅವುಗಳ ಕಾಟದಿಂದ, ಕೃಷಿಕರು, ರೈತರು ಸಣ್ಣಗೆ ಬೇಸತ್ತು ಹೋಗಿದ್ದು ಸಹ ನಿಜ. ಭತ್ತ, ಸಳೆ, ತರಕಾರಿ ಗಿಡಗಳನ್ನು ಅವು ಕೆದಕಿ, ನೆಲವನ್ನು ಬಗೆದು ಹಾಳು ಮಾಡುವುದರಿಂದಾಗಿ, ನವಿಲುಗಳು ನೋಡಲು ಚಂದವಾದರೂ, ಕೃಷಿಕರಿಗೆ ಅವುಗಳನ್ನು ಕಂಡರೆ ಅಷ್ಟಕ್ಕಷ್ಟೇ.
1970-80ರ ದಶಕದಲ್ಲಿ, ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ನವಿಲು ಬಹಳ ಅಪರೂಪದ ಪಕ್ಷಿ. ಆದರೆ, ಈಗ ೨-೩ ದಶಕಗಳಿಂದ ನವಿಲುಗಳ ವಾಸಸ್ಥಳ, ವ್ಯಾಪ್ತಿ ಬದಲಾಗಿದೆ. ನಮ್ಮೂರಿನ ಸರಹದ್ದಿನಲ್ಲಿ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇಂದು ಅಕ್ಷರಶಃ ನೂರಾರು ನವಿಲುಗಳಿವೆ!
ಗದ್ದೆಯಂಚಿನ ಪೊದೆಗಳಲ್ಲಿ ಸಂಚರಿಸುತ್ತಾ, ಅಲ್ಲೇ ಮೊಟ್ಟೆಯಿಟ್ಟು ಮರಿಗಳನ್ನು ಬೆಳೆಸಿ, ತನ್ನ ಹಿಂದೆ ನಾಲ್ಕು ಮರಿಗಳನ್ನು ಕರೆದುಕೊಂಡು ಹೋಗುವ ತಾಯಿ ನವಿಲಿನ ದೃಶ್ಯ ಇಂದು ನಮ್ಮೂರಿ ನಲ್ಲಿ ಸಾಮಾನ್ಯ. ಈಚಿನ ವರ್ಷಗಳಲ್ಲಿ ನಮ್ಮ ರಾಜ್ಯದ ಕರಾವಳಿಯುದ್ದಕ್ಕೂ ನವಿಲುಗಳೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿವೆ. ನಮ್ಮ ಹಳ್ಳಿ ಮನೆಯ ಎದುರಿನ ಗದ್ದೆಯಲ್ಲಿ ನವಿಲುಗಳ ಓಡಾಟ ಆಗಾಗ ಇದ್ದೇ ಇರುತ್ತದೆ; ಭತ್ತದ ಬೆಳೆ ಬಂದಾಗ, ಕುಯ್ಲಿನ ಸಮಯದಲ್ಲಿ ಅವುಗಳ ಚಟು ವಟಿಕೆ ಜಾಸ್ತಿ.
ಮುಂಗಾರು ಮೋಡಗಳು ಇರಲಿ ಬಿಡಲಿ, ಗಂಡು ನವಿಲುಗಳು ಆಗಾಗ ತಮ್ಮ ಗರಿಬಿಚ್ಚಿ ಸುಂದರ ವಾಗಿ ನರ್ತಿಸುವುದು ಸಹ ಸಾಮಾನ್ಯ. ಈಗ ನಮ್ಮ ಮನೆಯಲ್ಲಿ ಕುಳಿತೇ, ನವಿಲು ನರ್ತನ ನೋಡುವ ಅವಕಾಶವಿದೆ!
1980ರ ದಶಕದ ತನಕ ಆ ಪ್ರದೇಶದಲ್ಲಿ ಇಲ್ಲದ ನವಿಲುಗಳು ಇಂದೇಕೆ ಅಲ್ಲಿ ಮನೆಮಾಡಿ ಕೊಂಡಿವೆ? ನವಿಲಿನ ನರ್ತನ ಚಂದ; ಜತೆಗೆ ಅದು ಷಣ್ಮುಖನ ವಾಹನ. ಆದರೆ, ನಮ್ಮೂರಿನ ಕೃಷಿಕರಿಗೆ ನವಿಲು ಎಂದರೆ ಈಗಾಗಲೇ ಅಲರ್ಜಿ ಶುರುವಾಗಿದೆ; ಇನ್ನು ಕೆಲವು ವರ್ಷಗಳಲ್ಲಿ, ಗದ್ದೆಗಳಲ್ಲಿ ನವಿಲನ್ನು ಕಂಡರೆ ಅವರಿಗೆ ‘ಚಳಿಜ್ವರ’ ಬರಬಹುದು!
ಏಕೆಂದರೆ, ಕಾಡುಹಂದಿ ಮತ್ತು ಮಂಗಗಳ ನಂತರ, ನಮ್ಮೂರಿನ ಕೃಷಿಕರಿಗೆ ಇಂದು ಅತಿ ಹೆಚ್ಚು ಕಾಟ ಕೊಡುವ ‘ವನ್ಯಜೀವಿ’ ಎಂದರೆ ನವಿಲು! ನಗರಗಳಲ್ಲಿರುವವರಿಗೆ, ಪೇಟೆಯ ಮಂದಿಗೆ ಇದನ್ನು ಕೇಳಿ ಅಚ್ಚರಿ ಎನಿಸಬಹುದು. ಗರಿಬಿಚ್ಚಿ ನರ್ತಿಸುವ ನವಿಲಿನ ನೋಟ ಮಾತ್ರ ಹೆಚ್ಚಿನವರಿಗೆ ಪರಿಚಿತ; ‘ನವಿಲು ಕುಣಿದಾವೆ ನೋಡೆ’ ಎಂಬ ಹಾಡು ಪರಿಚಿತ.
‘ಗರಿಬಿಚ್ಚು ಗರಿಬಿಚ್ಚು ಗರಿಬಿಚ್ಚು ನವಿಲೆ’ ಎಂಬ ಗೀತೆಯ ಗುನುಗು ಪರಿಚಿತ. ಶಾಲಾ ಮಕ್ಕಳು ಬಣ್ಣ ಬಣ್ಣದ ಸಾವಿರ ಕಣ್ಣಿನ ನವಿಲುಗರಿಗಳ ಹೊದಿಕೆಯನ್ನು ಹೊದ್ದು, ಗುಂಪಾಗಿ ನರ್ತಿಸುವ ದೃಶ್ಯ ಪರಿಚಿತ. ಆದರೆ, ಕೃಷಿಕರಿಗೆ ನವಿಲು ಒಂದು ‘ಪೀಡೆ’ ಎಂಬ ವಿಚಾರ ಹೆಚ್ಚಿನವರಿಗೆ ಗೊತ್ತಿಲ್ಲ!
ಭತ್ತದ ಬೆಳೆ ಇನ್ನೇನು ಕೈಗೆ ಬರಬೇಕು ಎನ್ನುವಷ್ಟರಲ್ಲಿ ಹತ್ತೆಂಟು ನವಿಲುಗಳು ಆ ಗದ್ದೆಯ ಕಡೆ ಬಂದವೆಂದರೆ, ಕೃಷಿಕರಿಗೆ ತಲೆನೋವು. ಕೆಲವರಿಗೆ ಅವುಗಳನ್ನು ಓಡಿಸುವುದೇ ಕೆಲಸ! ಬೆಳೆದ ಭತ್ತದ ತೆನೆ ಗಳನ್ನು ಇಡಿಯಾಗಿ ಸ್ವಾಹಾ ಮಾಡುವ ನವಿಲುಗಳು, ಅತ್ತಿತ್ತ ಓಡಾಡಿ, ಬರಬರ ಹಾರಿ, ಇನ್ನೊಂದಿಷ್ಟು ಭತ್ತ ಕೆಳಗೆ ಉದುರುವಂತೆ ಮಾಡುತ್ತವೆ. ಇದರಿಂದಾಗಿ ಶೇ.10ರಷ್ಟು ಭತ್ತದ -ಸಲು ಹಾನಿಯಾಗುತ್ತದೆ ಎಂದು ಒಂದು ಅಂದಾಜು.
ಮಂಗಳೂರು ಸನಿಹದಲ್ಲಿ, ಮನೆಯ ಹಿತ್ತಲಿನಲ್ಲಿ ಬೆಳೆಸಿದ ತೊಂಡೆಕಾಯಿಗಳನ್ನು ನವಿಲುಗಳು ತಿಂದುಹಾಕುತ್ತವೆ ಎಂದು ಸ್ನೇಹಿತರೊಬ್ಬರು ಹೇಳಿದರು. ಕುಂದಾಪುರ ಸನಿಹದ ಕೆಲವು ಮನೆಗಳ ಅಂಗಳಕ್ಕೆ ಬಂದು, ಕೋಳಿಗಳಿಗೆಂದು ಹಾಕಿದ್ದ ಆಹಾರವನ್ನು ನವಿಲುಗಳೇ ಕಬಳಿಸುತ್ತವಂತೆ!
ಹೆಚ್ಚಿನ ಕೃಷಿಕರಿಗೆ ಈಗ ತಮ್ಮ ಗದ್ದೆಗಳ ಹತ್ತಿರ ಸುಳಿದಾಡುವ ನವಿಲುಗಳ ಬಣ್ಣ ನೋಡುವ ಖುಷಿ ಯಿಲ್ಲ. ಅವು ಮಿಡತೆಗಳನ್ನು, ಕೀಟಗಳನ್ನು ಸಹ ತಿನ್ನುತ್ತವೆ ಎಂದರೂ, ಅವುಗಳ ಕಾಟವು ಅವರಿಗೆ ರೇಜಿಗೆ ಹುಟ್ಟಿಸಿದೆ. ತೀರ್ಥಹಳ್ಳಿ ಸುತ್ತಲಿನ ಹಲವು ಕೃಷಿಕರು ಈಚಿನ ವರ್ಷಗಳಲ್ಲಿ ಹೆಚ್ಚಳಗೊಂಡ ನವಿಲುಗಳ ಸಂಖ್ಯೆಯನ್ನು ಕಂಡು ವಿಸ್ಮಯಗೊಂಡಿದ್ದಾರೆ.
ನವಿಲುಗಳ ಸಂಖ್ಯೆ ಜಾಸ್ತಿಯಾಗಿರುವುದರಿಂದ, ಬೇರೆ ಬೇರೆ ಪಾರಿಸರಿಕ ಸಮಸ್ಯೆಗಳು ಉದ್ಭವಿಸ ಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ನಮ್ಮ ಹಳ್ಳಿಯ ಸುತ್ತಮುತ್ತ ನರಿಗಳ ಸಂಖ್ಯೆ ಕಡಿಮೆ ಯಾಗಿದ್ದರಿಂದ, ನವಿಲುಗಳ ಸಂಖ್ಯೆ ಹೆಚ್ಚಳಗೊಂಡಿದೆ ಎಂಬ ಊಹೆಯೂ ಇದೆ; ಇದರ ಕುರಿತು ಸಂಶೋಧನೆ ನಡೆಯಬೇಕಾಗಿದೆ.
ಜತೆಗೆ, ಅದೇಕೆ ಈಚಿನ ವರ್ಷಗಳಲ್ಲಿ ಈ ರೀತಿ ನವಿಲುಗಳ ಸಂಖ್ಯೆ ಹೆಚ್ಚಳಗೊಂಡಿದೆ ಎಂಬುದಕ್ಕೆ ಕಾರಣವನ್ನೂ ಗುರುತಿಸಬೇಕಾಗಿದೆ. ಕರಾವಳಿಯ ಕೆಲವು ಭಾಗಗಳಲ್ಲಿ ಮತ್ತು ಕೇರಳದಲ್ಲಿ ನವಿಲು ಗಳ ಸಂಖ್ಯೆ ಅಧಿಕವಾಗಿದ್ದು, ಕೃಷಿಗೆ ತೊಂದರೆ ಕೊಡುವುದರಿಂದಾಗಿ, ಅವುಗಳ ಸಂಖ್ಯೆಯನ್ನು ಕಡಿಮೆಮಾಡಬೇಕು ಎಂಬ ವಾದವೂ ಇದೆ.
ಆದರೆ, ನಮ್ಮ ದೇಶದಲ್ಲಿ ನವಿಲಿಗೆ ಹಿಂಸೆ ಮಾಡುವಂತಿಲ್ಲ. ಇಲ್ಲಿನ ಕಾನೂನಿನ ಪ್ರಕಾರ ನವಿಲು ಗಳು ವನ್ಯಜೀವಿ ಮತ್ತು ಕಾನೂನಿನ ರಕ್ಷಣೆಯಲ್ಲಿರುವ ಪಕ್ಷಿ. ಅದನ್ನು ಯಾರೂ ಬೇಟೆಯಾಡು ವಂತಿಲ್ಲ; ಅದಕ್ಕೆ ವಿಷ ಉಣಿಸಿದರೆ ಅಪರಾಧವಾಗುತ್ತದೆ. ಜತೆಗೆ, ನವಿಲು ರಾಷ್ಟ್ರೀಯ ಪಕ್ಷಿ ಮತ್ತು ನಮ್ಮ ರಾಜ್ಯದ ಪಕ್ಷಿಯೂ ಹೌದು.
ನಮ್ಮ ರಾಜ್ಯದ ಉತ್ತರ ಭಾಗದ ಕೆಲವು ಜಿಲ್ಲೆಗಳಲ್ಲಿ ಬಹು ಹಿಂದಿನಿಂದಲೂ ನವಿಲುಗಳು ಹೇರಳ ವಾಗಿದ್ದವು. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗ ಸಾಕಷ್ಟು ಸಂಖ್ಯೆ ಯಲ್ಲಿ ನವಿಲುಗಳಿವೆ. ಆದರೆ, ಇಲ್ಲೆಲ್ಲಾ ನವಿಲುಗಳಿಂದಾಗಿ ಕೃಷಿ ಚಟುವಟಿಕೆಗೆ ನಷ್ಟವಾಗುತ್ತಿದೆ ಎಂಬ ಚರ್ಚೆ ನಡೆದಂತಿಲ್ಲ, ನವಿಲುಗಳಿಂದ ತಮಗೆ ತೊಂದರೆಯಾಗುತ್ತಿದೆ ಎಂಬ ದೂರು ಸಾರ್ವತ್ರಿಕ ವಾಗಿಲ್ಲ.
ನವಿಲುಗಳ ಇತಿಹಾಸ, ವಾಸಸ್ಥಳ, ಅವು ಹರಡಿದ ರೀತಿ ಇವುಗಳನ್ನು ಹುಡುಕುತ್ತಾ ಹೋದರೆ ಹಲವು ಕುತೂಹಲಕಾರಿ ವಿಷಯಗಳು ಗಮನಕ್ಕೆ ಬರುತ್ತವೆ. ಜಗತ್ತಿನಲ್ಲಿ ಮೂರು ಪ್ರಭೇದದ ನವಿಲು ಗಳಿವೆ. ಅವುಗಳ ಪೈಕಿ, ಆಫ್ರಿಕಾದ ಕಾಂಗೋ ನವಿಲು ಮತ್ತು ಇಂಡೋನೇಷಿಯನ್ ನವಿಲು-ಇವೆರಡೂ ಪ್ರಭೇದ ಗಳು ಅದಾಗಲೇ ಅವನತಿಯ ಹಾದಿ ಹಿಡಿದಿವೆ.
ಅಲ್ಲಿನ ಜನರು ನಿರಂತರವಾಗಿ ನವಿಲನ್ನು ಬೇಟೆಯಾಡಿ, ಅವುಗಳ ವಾಸಸ್ಥಳವನ್ನು ನಾಶ ಮಾಡಿದ್ದರಿಂದಾಗಿ, ಆ ಎರಡೂ ನವಿಲುಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಇವೆರಡನ್ನು ಬಿಟ್ಟರೆ, ನಮ್ಮ ದೇಶದ ನವಿಲುಗಳು (ಇಂಡಿಯನ್ ಪೀಫೌಲ್) ದೇಶದ ಬಹುಭಾಗಗಳಲ್ಲಿ ಮತ್ತು ಶ್ರೀಲಂಕಾ ದಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಆದರೆ, ಮೊದಲು ಸಾಕಷ್ಟು ಸಂಖ್ಯೆಯಲ್ಲಿದ್ದ ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನವಿಲುಗಳು ನಿರ್ನಾಮವಾಗಿವೆ; ಪಾಕಿಸ್ತಾನದಲ್ಲಿ ಮೊದಲಿನಿಂದಲೂ ಇದ್ದ ನವಿಲುಗಳು ಇಂದು ಕ್ರಮೇಣ ಕಣ್ಮರೆಯಾಗುತ್ತಿವೆ.
ಪುರಾತನ ಕಾಲದಿಂದಲೂ ಸಾಂಸ್ಕೃತಿಕ ಮತ್ತು ಪೂಜ್ಯ ಭಾವನೆಯಿಂದ ನಮ್ಮ ಜನರು ನವಿಲಿಗೆ ನೀಡಿರುವ ರಕ್ಷಣೆಯಿಂದಾಗಿಯೇ, ಅವು ಇಂದು ನಮ್ಮ ದೇಶದಲ್ಲಿ ಸಾಕಷ್ಟು ಉಳಿದುಕೊಂಡಿವೆ ಎಂಬುದು ಸ್ಪಷ್ಟ.ಮತ್ತೊಂದು ವಿಶೇಷವೆಂದರೆ, ಪುರಾತನ ಕಾಲದಿಂದಲೂ ನಮ್ಮ ದೇಶದ ನವಿಲು ಗಳು ವಿಶ್ವದಾದ್ಯಂತ ಪರಿಚಿತ. ಐತಿಹಾಸಿಕ ಮಯೂರ ಸಿಂಹಾಸನ ಜಗದ್ವಿಖ್ಯಾತ.
ಯುರೋಪ್ ಪ್ರದೇಶದಲ್ಲಿ ನವಿಲು ಸಹಜವಾಗಿ ವಾಸಿಸದೇ ಇದ್ದರೂ, ಗ್ರೀಕ್ ಪೌರಾಣಿಕ ಕಥೆಗಳಲ್ಲಿ, ಯುರೋಪಿನ ಹಲವು ಕಥನಗಳಲ್ಲಿ ನವಿಲಿನ ವಿಚಾರ ಬರುತ್ತದೆ. ಸಿಂಧೂ ಕಣಿವೆಯ ನಾಗರಿಕತೆಯ ಚಿತ್ರಗಳಲ್ಲಿ ನವಿಲುಗಳಿವೆ. ಯೆಜ್ದಿ ಜನಾಂಗದವರಿಗೆ ನವಿಲು ಒಂದು ಪವಿತ್ರ ಪಕ್ಷಿ!
ಕೃಷ್ಣನ ಅಲಂಕಾರಕ್ಕೆ ನವಿಲುಗರಿ ಬೇಕು! ಷಣ್ಮುಖನ ವಾಹನವಾಗಿ ನವಿಲು ಇದೆ. ಇಂದು ಜಗತ್ತಿನ ಹಲವು ದೇಶಗಳಲ್ಲಿ ನಮ್ಮ ದೇಶದ ನವಿಲುಗಳೂ ತಮ್ಮ ಸಂತತಿಯನ್ನು ಮುಂದುವರಿಸಿವೆ ಎಂಬುದು ವಿಸ್ಮಯ ಹುಟ್ಟಿಸುತ್ತದೆ! ನವಿಲಿನ ಬಣ್ಣ ಬಣ್ಣದ ಗರಿಯ ಕುರಿತು, ‘ಕಣ್ಣು’ಗಳ ಕುರಿತು ವಿಜ್ಞಾನಿಗಳು ಸಾಕಷ್ಟು ಜಿಜ್ಞಾಸೆ ನಡೆಸಿದ್ದಾರೆ; ನವಿಲುಗರಿಗಳ ಬಣ್ಣ, ಸ್ವರೂಪದ ಕುರಿತು ಚಾರ್ಲ್ಸ್ ಡಾರ್ವಿನ್ ಸಹ ತಲೆಕೆಡಿಸಿಕೊಂಡಿದ್ದುಂಟು.
ಪ್ರಧಾನವಾಗಿ ನಮ್ಮ ದೇಶದಲ್ಲಿ ಕಾಣಿಸುವ ಈ ಸುಂದರ ಹಕ್ಕಿಯು ಇಡೀ ಜಗತ್ತಿನಾದ್ಯಂತ ಸಕಾರಾ ತ್ಮಕವಾಗಿ ಪರಿಚಿತ ಗೊಂಡಿರುವುದೇ ವಿಶಿಷ್ಟ ವಿದ್ಯಮಾನ. ನಮ್ಮ ಹಳ್ಳಿಯಲ್ಲಿ ಹಿಂದೆ ಇಲ್ಲದೇ ಇದ್ದ ನವಿಲ ಗಳು ಇಂದೇಕೆ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಹುಡುಕುತ್ತಾ ಹೋದಾಗ ಕಂಡು ಕೊಂಡ ವಿಚಾರಗಳಿವು.
ಜತೆಗೆ, ನಮ್ಮೂರಿನ ಕೃಷಿಕರಿಗೆ ಅವು ಪೀಡೆ ನೀಡುವ ಜೀವಿಗಳಾಗಿ ಕಾಣಿಸುತ್ತಿರುವುದು ಸಹ ಗಮನಿಸ ಬೇಕಾದ ಅಂಶ. ಸಾಕಷ್ಟು ಕಾಡನ್ನು, ಹಸಿರು ಪ್ರದೇಶಗಳನ್ನು ಹೊಂದಿರುವ ನಮ್ಮ ರಾಜ್ಯದ ಕರಾವಳಿ ಮತ್ತು ಕೇರಳದಲ್ಲಿ ಈಚಿನ ಒಂದೆರಡು ದಶಕಗಳಲ್ಲಿ ನವಿಲುಗಳೇಕೆ ಹೆಚ್ಚಳಗೊಂಡಿವೆ? ಪ್ರಧಾನವಾಗಿ ಬಯಲುನಾಡಿನ ಹಕ್ಕಿ ಗಳೇ ಎಂದು ಗುರುತಿಸಲಾಗಿದ್ದ ಇವು, ಮಲೆನಾಡಿನಲ್ಲೇಕೆ ತಮ್ಮ ವಾಸಸ್ಥಳವನ್ನ ಹುಡುಕಿಕೊಂಡವು? ನಮ್ಮ ಪರಿಸರದ ಸಮತೋಲನ ವ್ಯವಸ್ಥೆಯಲ್ಲಿ ಇನ್ನಿಲ್ಲದಂತೆ ಮೂಗು ತೂರಿಸುತ್ತಿರುವ ಆಧುನಿಕ ಮನುಷ್ಯನ ಕೈವಾಡವೇ ಇದಕ್ಕೆ ಕಾರಣವೇ? ಪರಿಸರ ಮತ್ತು ಇಕಾಲಜಿಯ ಸರಪಣಿಯ ಪ್ರಾಮುಖ್ಯದ ಹಿನ್ನೆಲೆಯಲ್ಲಿ, ಈ ವಿಚಾರದ ಮೂಲ ವನ್ನು ಹುಡುಕುವುದು ಅಗತ್ಯ ಎನಿಸಿದೆ.