ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಐತಿಹ್ಯಗಳ ಸುರಂಗದಲ್ಲಿ ವಂಡಾರು ಕಂಬಳ ಕೊಡಿ ಹಬ್ಬ

ಕರಾವಳಿಯುದ್ದಕ್ಕೂ ಸಾಗಿದ್ದ ಹೆದ್ದಾರಿಯಂಚಿನಲ್ಲಿದ್ದ ಊರು ಅದು. ಮೊದಲಿನಿಂದಲೂ ವಿದ್ಯಾ ಭ್ಯಾಸದ ಸೌಕರ್ಯವಿದ್ದ ಸ್ಥಳ. ಜತೆಯಲ್ಲಿ, ಕೇವಲ ೩ ಕಿ.ಮೀ. ದೂರದ ಕುಂದಾಪುರದಲ್ಲಿ ಕಾಲೇಜು, ಸರಕಾರಿ ಆಸ್ಪತ್ರೆ, ಎಡ್ವರ್ಡ್ ಮೆಮೋರಿಯಲ್ ಗ್ರಂಥಾಲಯ (ಸರಕಾರದ ಸುಪರ್ದಿನಲ್ಲಿದ್ದ ಸಾರ್ವಜನಿಕ ಗ್ರಂಥಾಲಯ), ಕಡಲು, ಕಿನಾರೆ, ಶೋಲಾ ಕಾಡು, ನದಿಸಂಗಮದ ತಾಣ ಎಲ್ಲವೂ ಇದ್ದ ಊರು.

ಐತಿಹ್ಯಗಳ ಸುರಂಗದಲ್ಲಿ ವಂಡಾರು ಕಂಬಳ ಕೊಡಿ ಹಬ್ಬ

-

ಶಶಾಂಕಣ

ಕೊಡಿ ಹಬ್ಬ ಅಥವಾ ಕೋಟೇಶ್ವರ ಹಬ್ಬವು ಕರಾವಳಿಯ ಆ ಪ್ರದೇಶದಲ್ಲಿ ತುಂಬಾ ಪ್ರಸಿದ್ಧ. ನಿನ್ನೆ ತಾನೆ ಆ ಸಂಬಂಧ ರಥೋತ್ಸವ ಸಂಪನ್ನಗೊಂಡರೂ, ಹಬ್ಬದ ಆಚರಣೆಯು ಇನ್ನೂ ಕೆಲವು ದಿನ ಮುಂದುವರಿಯುತ್ತದೆ; ಹಬ್ಬದ ಹಸರಕ್ಕೆ ಜನ ಬರುವುದು ನಡೆಯುತ್ತಲೇ ಇದೆ. ಕೊಡಿ ಹಬ್ಬದ ಸುತ್ತ ಬೆಳೆದಿರುವ ಕಥೆಗಳು, ಐತಿಹ್ಯಗಳು, ನಂಬಿಕೆಗಳು, ಆಚರಣೆಗಳು ಇವೆಲ್ಲವುದರ ಕುರಿತು ಬರೆಯುತ್ತಾ ಹೋದರೆ ಒಂದು ಪುಸ್ತಕವೇ ಆದೀತು!

ಬಾಲ್ಯದಲ್ಲಿ ನಾ ಕಂಡ ಕೋಟೇಶ್ವರ ಹಬ್ಬದ ನೆನಪುಗಳು, ಆಗಾಗ ಸುರುಳಿ ಸುತ್ತುತ್ತಾ, ಮನದೊಳಗೆ ಮಧುರ ಭಾವನೆಗಳನ್ನು ಮೂಡಿಸುವುದುಂಟು. ನಮ್ಮ ಹಳ್ಳಿಯಿಂದ ಕೋಟೇಶ್ವರಕ್ಕೆ ಸುಮಾರು ೨೦ ಕಿ.ಮೀ. ನಮ್ಮ ಮನೆಯಿದ್ದುದು ಒಂದು ಕುಗ್ರಾಮದಲ್ಲಿ. ಬಸ್ ರಸ್ತೆ ನೋಡಬೇಕೆಂದರೆ, ಕಡ್ಡಾಯ ವಾಗಿ ೨ ಕಿ.ಮೀ. ದೂರ ಗದ್ದೆ ಬಯಲಿನ ನಡುವೆ, ಕಾಡುದಾರಿಯಲ್ಲಿ ನಡೆಯಲೇಬೇಕಿದ್ದ ಅನಿವಾ ರ್ಯತೆ. ಕೋಟೇಶ್ವರವು, ನನ್ನ ಬಾಲ್ಯಕಾಲದ ಸನ್ನಿವೇಶದಲ್ಲಿ, ಒಂದು ದೊಡ್ಡಪಟ್ಟಣ ಅಥವಾ ಮಹಾನಗರ!

ಕರಾವಳಿಯುದ್ದಕ್ಕೂ ಸಾಗಿದ್ದ ಹೆದ್ದಾರಿಯಂಚಿನಲ್ಲಿದ್ದ ಊರು ಅದು. ಮೊದಲಿನಿಂದಲೂ ವಿದ್ಯಾ ಭ್ಯಾಸದ ಸೌಕರ್ಯವಿದ್ದ ಸ್ಥಳ. ಜತೆಯಲ್ಲಿ, ಕೇವಲ ೩ ಕಿ.ಮೀ. ದೂರದ ಕುಂದಾಪುರದಲ್ಲಿ ಕಾಲೇಜು, ಸರಕಾರಿ ಆಸ್ಪತ್ರೆ, ಎಡ್ವರ್ಡ್ ಮೆಮೋರಿಯಲ್ ಗ್ರಂಥಾಲಯ (ಸರಕಾರದ ಸುಪರ್ದಿನಲ್ಲಿದ್ದ ಸಾರ್ವ ಜನಿಕ ಗ್ರಂಥಾಲಯ), ಕಡಲು, ಕಿನಾರೆ, ಶೋಲಾ ಕಾಡು, ನದಿಸಂಗಮದ ತಾಣ ಎಲ್ಲವೂ ಇದ್ದ ಊರು.

ಇದನ್ನೂ ಓದಿ: Shashidhara Halady Column: ಬಾ ಎನ್ನ ಓದುಗನೇ, ಇಲ್ಲಿದೆ ಜ್ಞಾನವಿಧಿ !

ಆದ್ದರಿಂದ, ಆ ಎರಡೂ ಊರುಗಳು ಪ್ರಮುಖ ಸಾಂಸ್ಕೃತಿಕ ಮತ್ತು ವಾಣಿಜ್ಯಕ ಕೇಂದ್ರಗಳಾಗಿ ಬೆಳೆದಿದ್ದವು. ಮುಖ್ಯವಾಗಿ ಕೋಟಿ ಲಿಂಗೇಶ್ವರ ಅಥವಾ ಕೋಟೇಶ್ವರ ದೇವಸ್ಥಾನವಿರುವ ಊರು ಕೋಟೇಶ್ವರ. ಪ್ರತಿವರ್ಷ ಡಿಸೆಂಬರ್‌ನಲ್ಲಿ ಅಲ್ಲಿ ನಡೆಯುವ ಜಾತ್ರೆ ಬಹು ಪ್ರಸಿದ್ಧ. ಆ ಸುತ್ತಲಿನ ಯಾರದೇ ಮನೆಯಲ್ಲಿ ಮದುವೆಯಾದರೂ, ಮದುಮಕ್ಕಳು ಆ ವರ್ಷ ಖಂಡಿತವಾಗಿ ಕೋಟೇಶ್ವರ ಜಾತ್ರೆಯಲ್ಲಿ ಭಾಗವಹಿಸಬೇಕೆಂಬ ನಂಬಿಕೆ.

ಕೊಡಿ ಹಬ್ಬ ಎಂಬುದು ಪ್ರತಿ ವರ್ಷದ ಒಂದು ಪ್ರಮುಖ ವಿದ್ಯಮಾನ. ಕೊಡಿ ಹಬ್ಬ ಆದ ಮೇಲೆ ಆ ಕೆಲಸ ಮಾಡುತ್ತೇನೆ ಅಥವಾ ಕೊಡಿ ಹಬ್ಬದ ಮುಂಚೆಯೇ ಮಾಡಿ ಮುಗಿಸುತ್ತೇನೆ ಎಂದು, ವಾಯಿದೆ ಹೇಳಿಕೊಳ್ಳುವಂಥ ಪ್ರಮುಖ ಹಬ್ಬ ಅದು. ಅದರಲ್ಲೂ ಮುಖ್ಯವಾಗಿ, ಆ ವರ್ಷ ಮದುವೆ ಯಾದವರು, ಕೊಡಿ ಹಬ್ಬಕ್ಕೆ ಹೋಗಿ, ಜಾತ್ರೆಯನ್ನು ನೋಡಿ ಸಂತಸಪಡಬೇಕು ಮತ್ತು ಪೂಜೆ ಮಾಡಿಸಬೇಕು ಎನ್ನುತ್ತಾರೆ. ಈ ನಂಬಿಕೆ ಬಹಳ ವಿಶೇಷ ಎನಿಸುತ್ತದೆ. ಇಂಥದ್ದೇ ಒಂದು ನಂಬಿಕೆಯು, ನಮ್ಮ ಹಳ್ಳಿಯಿಂದ ಆರೆಂಟು ಕಿ.ಮೀ. ದೂರದಲ್ಲಿರುವ ವಂಡಾರು ಕಂಬಳದ ಕುರಿತೂ ಇದೆ!

ನಮ್ಮ ಹಳ್ಳಿಯ ಸುತ್ತಮುತ್ತಲಿನ ಎಲ್ಲಾ ಗ್ರಾಮೀಣರೂ, ತಮ್ಮ ಮನೆ ಯಲ್ಲಿ ಆ ವರ್ಷ ಮದುವೆ ಯಾದ ದಂಪತಿಯನ್ನು ವಂಡಾರು ಕಂಬಳಕ್ಕೆ ಕಳುಹಿಸುತ್ತಾರೆ. ಅಲ್ಲಿನ ಜಾತ್ರೆ, ಹಸರವನ್ನು ನೋಡಿಕೊಂಡು ಬರಲು ಹೇಳುತ್ತಾರೆ. ಜತೆಗೆ, ಅನುಕೂಲವಿದ್ದವರು ಕಂಬಳದ ಗದ್ದೆಯಲ್ಲಿ ಕೋಣ ಗಳನ್ನೂ ಓಡಿಸುತ್ತಾರೆ.

Ratha

ಇವೆರಡೂ ಸ್ಥಳಗಳ ಕುರಿತು ಇನ್ನೊಂದು ಐತಿಹ್ಯ ನಮ್ಮೂರಿನಲ್ಲಿದೆ. ಅದಾವ ರೀತಿ ಇದೊಂದು ನಂಬಿಕೆ ರೂಢಿಗೆ ಬಂತೋ, ಊಹಿಸಲು ಕಷ್ಟ. ಈ ಐತಿಹ್ಯದ ಹಿಂದು ಮುಂದುಗಳನ್ನು ಅರಸುತ್ತಾ ಹೊರಟರೆ, ನಾವೇ ಐತಿಹ್ಯದ ಸುರಂಗದೊಳಗೇ ಪ್ರವೇಶಿಸಬಹುದು!

ಅದೇನೆಂದರೆ, ಕೋಟೇಶ್ವರ ಕೆರೆಗೂ, ವಂಡಾರು ಕಂಬಳಗದ್ದೆಗೂ, ಪುರಾತನ ಕಾಲದಲ್ಲಿ ನಿರ್ಮಿಸ ಲಾದ ಒಂದು ಸುರಂಗದ ಮೂಲಕ ಸಂಪರ್ಕವಿದೆ ಎಂಬ ನಂಬಿಕೆಯಿದೆ. ಈ ಎರಡನ್ನೂ ದೇವತೆ ಗಳು ನಿರ್ಮಿಸಿದರು, ವಂಡಾರು ಕಂಬಳಗದ್ದೆಯು, ಬಹು ಹಿಂದೆ ಕೆರೆಯಾಗಿತ್ತು ಎಂಬ ನಂಬಿಕೆಯೂ ಉಂಟು! ಕೋಟೇಶ್ವರ ದೇಗುಲದ ಸನಿಹದಲ್ಲೂ ಒಂದು ವಿಶಾಲವಾದ ಕೆರೆ ಇದೆ!

ಅಲ್ಲಿನ ಕೆರೆ ಮತ್ತು ವಂಡಾರು ಕಂಬಳ ಗದ್ದೆಯ ವಿಸ್ತೀರ್ಣವೂ ಸಮಾನವಾದುದು ಎಂಬ ನಂಬಿಕೆ ಇದೆ. ಇಂಥ ಪ್ರಸಿದ್ಧ ಕೋಟೇಶ್ವರ ಜಾತ್ರೆಗೆ ನನ್ನನ್ನು ಕರೆದುಕೊಂಡು ಹೋಗಬೇಕು ಎಂಬುದು ನಮ್ಮ ಅಮ್ಮಮ್ಮನ ಅಭಿಲಾಷೆ. ನಾನಾಗ ಐದನೆಯ ತರಗತಿಯಲ್ಲಿದ್ದೆ ಎನಿಸುತ್ತದೆ. ನಮ್ಮ ಸುತ್ತಲಿನ ಬೇರೆ ಬೇರೆ ಹಳ್ಳಿಗಳಲ್ಲಿ ನಡೆಯುವ ಜಾತ್ರೆ, ಹಬ್ಬ, ಮದುವೆ ಮೊದಲಾದವುಗಳನ್ನು ನೋಡಿ, ನನ್ನ ಸಾಮಾನ್ಯಜ್ಞಾನ ಅಭಿವೃದ್ಧಿಯಾಗಲಿ ಎಂಬ ಇಂಗಿತ ಅವರದ್ದು.

ಒಂದು ಮುಂಜಾನೆ, ಚಳಿಗಾಲದ ಬೆಳಗಿನ ಹಿಮ (ಮಸುಕು) ಕರುಗುವ ಮೊದಲೇ, ಮನೆಯಿಂದ ಹೊರಟು, ೨ ಕಿ.ಮೀ. ನಡೆದು, ಬಸ್ ಹತ್ತಿ, ಕೋಟೇಶ್ವರದಲ್ಲಿ ಇಳಿದೆವು. ಆ ದಿನ, ಅಲ್ಲಿನ ರಥಬೀದಿ ಯಲ್ಲಿ ಜನವೋ ಜನ. ದಾರಿಯುದ್ದಕ್ಕೂ ತರಹೇವಾರಿ ಅಂಗಡಿಗಳ ಸಾಲು. ಬೆಂಡು, ಬತ್ತಾಸು, ಆಟದ ಸಾಮಾನುಗಳನ್ನು ಮಾರುವ ಅಂಗಡಿಗಳು, ಐಸ್‌ಕ್ಯಾಂಡಿ ಎಂದು ಕೂಗುವ ಸೈಕಲ್‌ವಾಲಾ, ಮಿನಿ ಸರ್ಕಸ್, ತೂಗು ತೊಟ್ಟಿಲು, ಸೈಕಲ್ ಬ್ಯಾಲೆನ್ಸ್ ಎಲ್ಲವನ್ನೂ ನೋಡುತ್ತಾ ಸಾಗಿದೆವು.

ಇವೆಲ್ಲವನ್ನೂ ಉಚಿತವಾಗಿ ನೋಡಬಹುದು. ಆದರೆ ‘ಐದು ಕಾಲಿನ ಹಸು’ ಎಂದು ಬೋರ್ಡ್ ಹಾಕಿದ್ದ ಪುಟಾಣಿ ಟೆಂಟ್ ಒಳಗೆ ಹೋಗಲು ದುಡ್ಡು ಕೊಡಬೇಕು; ಆ ರೀತಿ ದುಡ್ಡು ಕೊಟ್ಟು ನೋಡುವ ಕೆಲವು ಐಟಂಗಳೂ ಇದ್ದವು. ತೂಗುತೊಟ್ಟಿಲಿನಲ್ಲಿ ತೇಲಿ ಬರಲು ಶುಲ್ಕವಿತ್ತು. ರಥಬೀದಿ ಯುದ್ದಕ್ಕೂ ಎರಡೂ ಕಡೆ ಸಾಲಾಗಿ ಮನೆಗಳಿದ್ದವು. ಅವುಗಳಲ್ಲಿನ ಒಂದು ಮನೆಗೆ ನಮ್ಮ ಅಮ್ಮಮ್ಮನನ್ನು ಕರೆದುಕೊಂಡು ಹೋದೆವು.

ಅದು ಹಂಜಾರ್ ಅವರ ಮನೆ. ನಮ್ಮೂರಿನಲ್ಲಿದ್ದ ನಮ್ಮ ಪಕ್ಕದ ಮನೆಯವರು, ಇಲ್ಲೊಂದು ಬಾಡಿಗೆ ಮನೆ ಮಾಡಿದ್ದರು. ಅಲ್ಲಿದ್ದ ಸುಶೀಲಮ್ಮ ಎಂಬುವವರು ನಮ್ಮ ಅಮ್ಮಮ್ಮನಿಗೆ ಆಪ್ತರು. ಅವರ ಬಳಿ ಕ್ಷೇಮಸಮಾಚಾರವಾಯಿತು. ಅವರ ಮನೆಯಲ್ಲಿ ಬೆಲ್ಲ, ನೀರು ಕುಡಿದು ಬಾಯಾರಿಕೆ ತಣಿಸಿಕೊಂಡು, ಜಾತ್ರೆ ನೋಡಲು ಹೊರಟೆವು. ಈ ರೀತಿ ಬೇರೆ ಊರಿನವರು ಜಾತ್ರೆಗೆ ಬಂದಾಗ, ಪರಿಚಿತರ ಮನೆಗೆ ಭೇಟಿ ನೀಡುವುದು ಸಾಮಾನ್ಯ. ಎಷ್ಟೋ ಮನೆಯವರು ಆ ದಿನ ವಿಶೇಷ ಅಡುಗೆ ಮಾಡಿ, ಬಂದವರಿಗೆಲ್ಲಾ ಬಡಿಸುತ್ತಿದ್ದರು. ಆದರೆ ನಾವು ಮಾತ್ರ ಈ ದಿನದಂದು ದೇವಸ್ಥಾನದವರು ಏರ್ಪಡಿಸಿದ್ದ ಸಾಮೂಹಿಕ ಭೋಜನಕ್ಕೆ ಹೋದೆವು.

ಕೋಟೇಶ್ವರ ರಥದ ಎತ್ತರ, ಅದಕ್ಕೆ ಸಿಕ್ಕಿಸಿದ್ದ ನೂರಾರು ಪುಟಾಣಿ ಬಾವುಟಗಳನ್ನು, ಅವುಗಳ ಬಣ್ಣವನ್ನು ಕಂಡು ನಾನು ನಿಜಕ್ಕೂ ಬೆರಗಾದೆ. ಊಟ ಮುಗಿಸಿ ರಥಬೀದಿಗೆ ಬಂದು ನೋಡಿದರೆ, ಇನ್ನಷ್ಟು ಜನ ಸೇರಿದ್ದರು! ಗೌಜುಗದ್ದಲದ ನಡುವೆ ಜಾತ್ರೆಗೆ ಕಳೆಯೇರಿತ್ತು. ನಮ್ಮ ಅಮ್ಮಮ್ಮ ನನಗೆ ಸಣ್ಣದೊಂದು ಆಟದ ಸಾಮಾನು ಕೊಡಿಸಿದರು ಎಂದು ನೆನಪು.

ಆದರೆ, ನನಗೆ ಆ ಆಟದ ಸಾಮಾನಿನ ಮೇಲೆ ಇದ್ದ ಪ್ರೀತಿಗಿಂತಾ, ಅಲ್ಲಿನ ಬಸ್‌ನಿಲ್ದಾಣದ ಬಳಿಯ ಪತ್ರಿಕೆ ಮಾರುವ ಅಂಗಡಿಯಲ್ಲಿದ್ದ ಬಾಲಮಿತ್ರನ ಮೇಲೆ ಹೆಚ್ಚು ಪ್ರೀತಿ ಉಕ್ಕಿತು! ಚಂದಮಾಮ ಪತ್ರಿಕೆಯ ಪಡಿಯಚ್ಚಿನಂತೆ, ಆಗ ‘ಬಾಲಮಿತ್ರ’ ಪ್ರಕಟವಾಗುತ್ತಿತ್ತು. ಅದೇ ರೀತಿಯ ರೇಖಾಚಿತ್ರಗಳು, ಬಣ್ಣದ ಪುಟಗಳು, ಅದೇ ಗಾತ್ರ ಎಲ್ಲವೂ.

‘ಬಾಲಮಿತ್ರ’ ಪತ್ರಿಕೆ ಕೊಡಿಸಿ ಎಂದು ಅಮ್ಮಮ್ಮನಿಗೆ ದುಂಬಾಲುಬಿದ್ದೆ. ‘ಆಟದ ಸಾಮಾನು ತಗಂಡಾಯ್ತಲ್ಲ! ಈ ಪುಸ್ತಕ ನಿನಗೆಂತಕೆ?’ ಎಂದರು. ‘ನನಗೆ ಆಟಕೆಗಿಂತಲೂ, ಪುಸ್ತಕವೇ ಹೆಚ್ಚು ಇಷ್ಟ’ ಎಂದೆ. ಆ ಮಕ್ಕಳಪುಸ್ತಕದ ಬೆಲೆ ಆಗ ರು. 1.25 ಇದ್ದಿತ್ತು ಎಂದು ನೆನಪು. ನನ್ನ ಓದುವ ಆಸಕ್ತಿಯನ್ನು ಕಂಡು, ಅಮ್ಮಮ್ಮ ‘ಬಾಲಮಿತ್ರ’ ಕೊಡಿಸಿದರು. ಆಗಿನ ದಿನಗಳಲ್ಲಿ, ಅವರಿಗೆ ಅದು ತುಸು ದೊಡ್ಡ ಮೊತ್ತವೇ ಇರಬೇಕು. ಅಂತೂ ‘ಬಾಲಮಿತ್ರ’ ಪತ್ರಿಕೆಯನ್ನು ತಂದು, ಮನೆಯಲ್ಲಿಟ್ಟು ಕೊಂಡು, ಅಲ್ಲಿದ್ದ ಮಕ್ಕಳ ಕಥೆಗಳನ್ನು ಹಲವು ದಿನ ಓದಿದೆ!

ಕೋಟೇಶ್ವರದ ಕುರಿತು ಬರೆದರೆ, ಬಹಳಷ್ಟಾದೀತು ಎಂದೆನಲ್ಲ, ಅದನ್ನೇ ವಿಸ್ತರಿಸುವುದಾದರೆ, ಕೋಟೇಶ್ವರಕ್ಕೆ ಹೆಸರು ಹೇಗೆ ಬಂತು ಎಂಬ ಕುತೂಹಲಕಾರಿ ಮಾಹಿತಿಯೊಂದು ನನ್ನ ಬಳಿ ಇದೆ. ಈ ವಿಚಾರ ಹೆಚ್ಚು ಪ್ರಚಾರ ಪಡೆದಿಲ್ಲ. ನಾನು ಕೋಟೇಶ್ವರ ಜಾತ್ರೆ ನೋಡಿದ ಬಹಳ ವರ್ಷಗಳ ನಂತರ, ವಿದ್ಯಾಭ್ಯಾಸ ಮುಗಿಸಿ, ವೃತ್ತಿ ನಿಮಿತ್ತ ದೂರದೂರು ಸೇರಿ, ರಜೆಯಲ್ಲಿ ಊರಿಗೆ ಬಂದಾಗ, ವೃದ್ಧ ಮಹಿಳೆಯೊಬ್ಬಳು ವಿಶೇಷವಾದ ಒಂದು ಮಾಹಿತಿ ತಿಳಿಸಿದಳು.

ಆ ಮಹಿಳೆಯ ಭೇಟಿಯಾದದ್ದೂ ವಿಶೇಷ ಸಂದರ್ಭದಲ್ಲಿ. ನಮ್ಮೂರಿನ ಸುತ್ತಮುತ್ತಲೂ ಬಹಳ ಪ್ರಸಿದ್ಧ ಎನಿಸಿರುವ ‘ವಂಡಾರು ಕಂಬಳ’ ಹತ್ತಿರ ಬರುತ್ತಿದ್ದಂತೆ, ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ನಾನಾ ರೀತಿಯ ಉತ್ಸಾಹ ಗರಿಗೆದರುವುದುಂಟು. ಹಲವು ಜನಪದ ಆಚರಣೆಗಳೂ ಆ ಸಮಯದಲ್ಲಿ ಪ್ರಕಟಗೊಳ್ಳುತ್ತವೆ. ಅದರಲ್ಲಿ ಒಂದು ಎಂದರೆ, ಕೋಲಾಟದ ಪದ ಹೇಳುತ್ತಾ, ಎರಡು ಉದ್ದನೆ ಯಕೋಲು ಹಿಡಿದು, ಮನೆ ಮನೆಗೆ ಸುತ್ತಾಡುವ ಮಹಿಳೆಯರು.

ಬತ್ತದ ಕುಯಿಲು ಆದ ಮನೆಯವರ ಅಂಗಳದಲ್ಲಿ ನಿಂತು, ಕೋಲುಗಳನ್ನು ತಾಳಕ್ಕೆ ಸರಿಯಾಗಿ ಹೊಡೆಯುತ್ತಾ, ಪದ್ಯ ಹೇಳಿದ್ದಕ್ಕೆ ಪ್ರತಿಯಾಗಿ, ಕೆಲವು ಮುಷ್ಟಿ ಭತ್ತ ಪಡೆಯುತ್ತಿದ್ದರು, ಆ ಮಹಿಳೆ ಯರು. ಅಂಥ ಒಬ್ಬ ವೃದ್ಧ ಮಹಿಳೆ, ನಮ್ಮ ಮನೆಯ ಬಳಿ ತನ್ನ ಸಂಗಾತಿ ಮಹಿಳೆಯ ಜತೆ ಬಂದು, ಕೋಲಾಟ ಪದ ಹೇಳಿದ ನಂತರ, ನಮ್ಮ ಮನೆಯ ಅಂಗಳದಲ್ಲೇ ಕುಳಿತು, ಕುಡಿಯಲು ನೀರು ಕೇಳಿದಳು. ನಾನು ಅವಳನ್ನು ಕುತೂಹಲದಿಂದ ಮಾತಿಗೆಳೆದೆ. ಆಕೆ ಹೇಳಿದ ಕಥೆಯಿದು.

‘ನಾವು ಅಂದರೆ ನಮ್ಮ ಹಿಂದಿನವರು ಘಟ್ಟದ ಮೇಲಿನವರು, ಗೊತ್ತಾ ಅಯ್ಯಾ’ ಎಂದು ತನ್ನ ಕಥೆಯನ್ನು ಅವಳು ಆರಂಭಿಸಿದಳು. ಸ್ಥಳೀಯ ಜನಪದ ಹಾಡುಗಳನ್ನು ತನ್ನದೇ ಧಾಟಿಯಲ್ಲಿ ಹಾಡುವ ಈಕೆಯ ಮೂಲ, ನಮ್ಮ ರಾಜ್ಯದ ಬಯಲುಸೀಮೆ ಎಂದು ಆಕೆ ಹೇಳಿದಾಗ ಅಚ್ಚರಿ ಯಾಯ್ತು.

‘ಅದು ಹೇಗೆ?’ ಎಂದೆ.

‘ಅಯ್ಯಾ, ನಾವು ಉಪ್ಪಾರರು. ನಮ್ಮ ಕುಲದವರು ಘಟ್ಟದ ಮೇಲಿನಿಂದ ಬಹು ಹಿಂದೆ ಬಂದವರು- ನೀವು ಘಟ್ಟದ ಮೇಲೆ ಕೆಲಸ ಮಾಡ್ತೀದಿರಲ್ಲಾ - ನೀವು ಅಲ್ಲೂ ಉಪ್ಪಾರರನ್ನು ಕಂಡಿರಬಹುದು ಅಲ್ಲವೆ?’ ಎಂದು ನನ್ನನ್ನೇ ಮರು ಪ್ರಶ್ನಿಸಿದಳು. ನಾನು ವೃತ್ತಿ ನಿರ್ವಹಿಸುತ್ತಿದ್ದ ಅರಸಿಕೆರೆ, ಹೊಸ ದುರ್ಗ ಸುತ್ತಮುತ್ತ ಅಂಥ ಅಡ್ಡಹೆಸರು ಇದ್ದ ಸಾಕಷ್ಟು ಜನರಿದ್ದಾರೆ.

‘ಹೌದು’ ಎಂದೆ. ಆಕೆ ತನಗೆ ಗೊತ್ತಿದ್ದ, ತನ್ನ ಹಿರಿಯರು ಹೇಳಿದ್ದ ಕಥೆಯನ್ನು ಮುಂದುವರಿಸಿದಳು. ಆಕೆ ಹೇಳಿದ ಪ್ರಕಾರ, ನೂರಾರು ವರ್ಷಗಳ ಹಿಂದೆ, ಘಟ್ಟದ ಮೇಲೆ ಅವರಿದ್ದ ಸೀಮೆಯಲ್ಲಿ ಬಹು ದೊಡ್ಡ ಗಲಾಟೆ ಆಯ್ತಂತೆ. ಅವರ ಕುಲದವರು ಲಿಂಗವನ್ನು ಧರಿಸಿದ್ದರಿಂದ, ಅದಕ್ಕೆ ವಿರುದ್ಧವಾಗಿ ನಡೆದ ಗಲಾಟೆ ಅದು. ಅದೆಷ್ಟು ದೊಡ್ಡಗಲಾಟೆ ಎಂದರೆ, ಆ ದೊಂಬಿಯ ತೀವ್ರತೆಯನ್ನು ತಡೆಯಲಾರದೆ, ಅವರ ಕುಲದ ಒಂದಷ್ಟು ಜನ, ತಮ್ಮ ಊರನ್ನು ತೊರೆದು ಘಟ್ಟವಿಳಿದು, ಗುಳೆ ಬರಬೇಕಾಯಿತು.

ತಾವು ಹೊಸದಾಗಿ ಧರಿಸಿದ್ದ ಲಿಂಗದಿಂದ ಈ ಗಲಾಟೆಯಾದ್ದರಿಂದ, ಅದನ್ನು ವಿಸರ್ಜಿಸುವುದೇ ಸರಿ ಎಂದು ಕುಲದ ಹಿರಿಯರು ನಿರ್ಧರಿಸಿದರು. ಅಂದು ಧ್ವಜೇಶ್ವರ ಎಂದು ಪ್ರಸಿದ್ಧವಾಗಿದ್ದ ಕೋಟೇಶ್ವರದ ವಿಶಾಲ ಕೆರೆಯಲ್ಲಿ ತಾವು ಧರಿಸಿದ್ದ ಲಿಂಗಗಳನ್ನು ಎಲ್ಲರೂ ವಿಸರ್ಜಿಸಿದರಂತೆ. ‘ಈ ರೀತಿ ತುಂಬಾ ಜನರು ಲಿಂಗಗಳನ್ನು ವಿಸರ್ಜಿಸಿದ್ದರಿಂದ ಆ ಜಾಗಕ್ಕೆ, ಕೆರೆಗೆ ಕೋಟಿ ಲಿಂಗೇಶ್ವರ ಎಂಬ ಹೆಸರು ಬಂತು’ ಎಂದಳು ಆ ವೃದ್ಧ ಮಹಿಳೆ!

ಕೋಟೇಶ್ವರ ಎಂಬ ಹೆಸರು ಬರಲು ತಮ್ಮ ಹಿರಿಯರ ತ್ಯಾಗವೂ ಮುಖ್ಯವಾಗಿತ್ತು ಎಂಬ ವಿಚಾರ ವನ್ನು ಆಕೆ ಹೆಮ್ಮೆಯಿಂದ ಹೇಳಿಕೊಂಡಳು! ಈ ಕಥೆಯು ಜನಪದ ನಂಬಿಕೆಯ ರೂಪದಲ್ಲಿ, ಅವರ ಕುಟುಂಬದಲ್ಲಿ ಉಳಿದುಕೊಂಡಿದೆ. ಕಲ್ಯಾಣದ ಕ್ರಾಂತಿಯಾದಾಗ, ಸಾಕಷ್ಟು ಜನರು ಊರು ತೊರೆದು ಉಳವಿ ಮುಂತಾದ ಮಲೆನಾಡಿನ ಪ್ರದೇಶಗಳಿಗೆ ವಲಸೆ ಹೋಗಿರುವ ಕಥೆ ಇತಿಹಾಸದಲ್ಲಿ ದಾಖಲಾಗಿದೆ; ಅಂಥ ಒಂದು ವಿದ್ಯಮಾನದ ನೆನಪುಗಳನ್ನೇ ಆ ವೃದ್ಧ ಮಹಿಳೆ ಹೇಳಿರಬಹುದೇ? ಇದು ಸಂಶೋಧನೆಗೆ ಸೂಕ್ತವಾದ ವಿಷಯ ಎನ್ನಬಹುದು.

ಇಂದು ಕೋಟೇಶ್ವರದ ಕೆರೆಯಲ್ಲಿ ಸೂಕ್ತ ಉತ್ಖನನ ನಡೆದರೆ, ಈ ಮಹಿಳೆ ಹೇಳಿದ ವಿದ್ಯಮಾನ ಮತ್ತು ನೂರಾರು ಪುಟಾಣಿ ಲಿಂಗಗಳ ವಿಸರ್ಜನೆಯ ಕಥೆಗೆ ಪುರಾವೆ ದೊರಕೀತು! ಅದೇ ರೀತಿ, ಇಂದಿನ ಆಧುನಿಕ ತಂತ್ರಜ್ಞಾನ ಬಳಸಿ, ವಂಡಾರು ಕಂಬಳಗದ್ದೆ ಮತ್ತು ಕೋಟೇಶ್ವರ ಕೆರೆಯ ನಡುವೆ ಪುರಾತನ ಕಾಲದಲ್ಲಿ ಸುರಂಗವೋ, ಕಾಲುವೆಯೋ ಇದ್ದಿರಬಹುದೇ ಎಂದು ಯಾರಾದರೂ ಉತ್ಸಾಹಿಗಳು ಹುಡುಕಿ ನೋಡಲಿ ಎಂಬ ಆಸೆಯೂ ನನ್ನಲ್ಲಿದೆ!