#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

R T Vittalmurthy Column: ಬೊಮ್ಮಾಯಿ, ನಿರಾಣಿ ರೇಸಿನಲ್ಲಿ ಕಾಣಿಸಿಕೊಂಡರು

ದಿಲ್ಲಿಯಿಂದ ಬರುತ್ತಿರುವ ವರ್ತಮಾನಗಳು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಕಿವಿಗೆ ಹಿತಕರವಾಗಿ ಕೇಳುತ್ತಿಲ್ಲ. ಕಾರಣ? ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅವರನ್ನು ಹೊರತು ಪಡಿಸಿದರೆ ಸೂಟೆಬಲ್ ಆಗಿರುವ ಬೇರೆ ನಾಯಕರ ಬಗ್ಗೆ ಪಕ್ಷದ ವರಿಷ್ಠರು ಮಾಹಿತಿ ಪಡೆಯುತ್ತಿದ್ದಾರೆ

ಬೊಮ್ಮಾಯಿ, ನಿರಾಣಿ ರೇಸಿನಲ್ಲಿ ಕಾಣಿಸಿಕೊಂಡರು

ಅಂಕಣಕಾರ ಆರ್‌.ಟಿ.ವಿಠ್ಠಲಮೂರ್ತಿ

ಮೂರ್ತಿಪೂಜೆ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸಿನಲ್ಲಿ ಇದ್ದಕ್ಕಿದ್ದಂತೆ ಬಸವರಾಜ ಬೊಮ್ಮಾಯಿ ಮತ್ತು ಮುರು ಗೇಶ್ ನಿರಾಣಿಯವರ ಹೆಸರುಗಳು ಕಾಣಿಸಿಕೊಂಡಿವೆ. ಮೊನ್ನೆ ಮೊನ್ನೆಯ ತನಕ, ಹಾಲಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಅಲುಗಾಡಿಸುವುದು ಕಷ್ಟ ಎಂಬ ಮಾತಿತ್ತಾದರೂ ಇದೀಗ ಇದ್ದಕ್ಕಿದ್ದಂತೆ ಆಟ ಬದಲಾಗುವ ಸೂಚನೆಗಳು ಕಾಣಿಸಿಕೊಂಡಿವೆ. ಬಿಜೆಪಿಯ ಮೂಲಗಳ ಪ್ರಕಾರ, ವಿಜಯೇಂದ್ರ ಅವರನ್ನೇ ಪಕ್ಷಾಧ್ಯಕ್ಷ ಸ್ಥಾನದಲ್ಲಿ ಮುಂದು ವರಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರಿಗೆ ಭರವಸೆ ನೀಡಿದ್ದರು. “ಕರ್ನಾಟಕದಿಂದ ನಮಗೆ ಬಂದಿರುವ ಫೀಡ್‌ಬ್ಯಾಕ್ ಪ್ರಕಾರ ವಿಜಯೇಂದ್ರ ಅವರಿಗೆ ಹೆಚ್ಚಿನ ಬೆಂಬಲವಿದೆ.

ಹೀಗಾಗಿ ನೀವು ಆತಂಕಪಡ ಬೇಕಾದ ಅಗತ್ಯವಿಲ್ಲ" ಅಂತ ಅಮಿತ್ ಶಾ ಹೇಳಿದ ಮಾತಿನಿಂದ ಯಡಿಯೂರಪ್ಪ ಅವರೂ ಸಮಾಧಾನ ಮಾಡಿಕೊಂಡಿದ್ದರು.

ಇದನ್ನೂ ಓದಿ: R T Vittalmurthy Column: ವಿಜಯೇಂದ್ರ ಟೀಮಿಗೆ ಸರ್ಜರಿ ಫಿಕ್ಸ್‌

ಆದರೆ ಈಗ ದಿಲ್ಲಿಯಿಂದ ಬರುತ್ತಿರುವ ವರ್ತಮಾನಗಳು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಕಿವಿಗೆ ಹಿತಕರವಾಗಿ ಕೇಳುತ್ತಿಲ್ಲ. ಕಾರಣ? ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅವರನ್ನು ಹೊರತುಪಡಿಸಿದರೆ ಸೂಟೆಬಲ್ ಆಗಿರುವ ಬೇರೆ ನಾಯಕರ ಬಗ್ಗೆ ಪಕ್ಷದ ವರಿಷ್ಠರು ಮಾಹಿತಿ ಪಡೆಯುತ್ತಿದ್ದಾರೆ.

ಅವರು ಪಡೆಯುತ್ತಿರುವ ಮಾಹಿತಿಗಳನ್ನು ಗಮನಿಸಿದರೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ ಅವರ ಹೆಸರುಗಳು ರಾಜ್ಯಾಧ್ಯಕ್ಷ ಸ್ಥಾನದ ರೇಸಿನಲ್ಲಿ ಕಾಣಿಸಿಕೊಂಡಿವೆ. ಈ ಮಧ್ಯೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.‌ ಸಂತೋಷ್ ಅವರು ಸಿ.ಟಿ.ರವಿ ಹೆಸರನ್ನು ಮುಂದೆ ತರಲು ಯತ್ನಿಸುತ್ತಿದ್ದಾರಾದರೂ ಇವತ್ತಿನ ಸನ್ನಿವೇಶದಲ್ಲಿ ಬೊಮ್ಮಾಯಿ ಮತ್ತು ನಿರಾಣಿ ಅವರ ಹೆಸರುಗಳು ಇನ್ನಷ್ಟು ಮುಂದಿವೆ.

ಕುತೂಹಲದ ಸಂಗತಿ ಎಂದರೆ ಬೊಮ್ಮಾಯಿ ಮತ್ತು ಮುರುಗೇಶ್ ನಿರಾಣಿ ಅವರಿಬ್ಬರ ಹೆಸರುಗಳು ಮುಂದೆ ಬರಲು ಅಮಿತ್ ಶಾ ಅವರೇ ಕಾರಣ. ಈ ಪೈಕಿ ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಮೋದಿ-ಅಮಿತ್ ಶಾ ಜೋಡಿಯ ಮಾತನ್ನು ಚಾಚೂ ತಪ್ಪದೆ ಪಾಲಿಸಿ ದವರು.

ಹೀಗೆ ಅವರ ಮಾತನ್ನು ಪಾಲಿಸಿದ ಕಾರಣಕ್ಕಾಗಿ ಬೊಮ್ಮಾಯಿ ಅವರು ಯಡಿಯೂರಪ್ಪವರ ಮುನಿಸಿಗೆ ಗುರಿಯಾಗಬೇಕಾಯಿತು. ಅವತ್ತು ಶುರುವಾದ ಮುನಿಸು ಇವತ್ತಿಗೂ ಮುಂದುವರಿದಿರು ವುದು ರಹಸ್ಯವೇನಲ್ಲ ಹೀಗೆ ತಮಗಾಗಿ ಯಡಿಯೂರಪ್ಪನವರ ಜತೆ ವಿರಸ ಕಟ್ಟಿಕೊಂಡ ಬೊಮ್ಮಾ ಯಿ ಅವರನ್ನು ಲೋಕಸಭಾ ಚುನಾವಣೆಯ ನಂತರ ಕೇಂದ್ರ ಮಂತ್ರಿಯನ್ನಾಗಿ ಮಾಡಲು ಅಮಿತ್ ಶಾ ಯೋಚಿಸಿದ್ದರು.

ಆದರೆ ಮುಖ್ಯಮಂತ್ರಿಯಾದವರಿಗೆ ರಾಜ್ಯ ದರ್ಜೆ ಸಚಿವ ಸ್ಥಾನ ಕೊಡುವುದು ಸರಿಯಲ್ಲ ಎಂಬ ಕಾರಣಕ್ಕಾಗಿ ಅದು ಸಾಧ್ಯವಾಗಲಿಲ್ಲ. ಪರಿಣಾಮ? ಬೊಮ್ಮಾಯಿ ಅವರಿಗೀಗ ಮುಂಚಿನಷ್ಟು ಕೆಲಸ ವಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಅವರು ವಿಧಾನಸಭೆಯ ವಿಪಕ್ಷ ನಾಯಕರಾಗಲು ಬಯಸಿದ್ದರು. ಆದರೆ ಅದು ಸಾಧ್ಯವಾಗದೆ ಹೋದಾಗ, ನೀವು ಕೇಂದ್ರಮಂತ್ರಿ ಯಾಗಿ ಎಂಬ ಅಮಿತ್ ಶಾ ಭರವಸೆಯನ್ನು ನೆಚ್ಚಿ ಲೋಕಸಭಾ ಚುನಾವಣೆಗೆ ನಿಂತು ಗೆದ್ದರು.

ಆದರೆ ಅದೂ ಸಾಧ್ಯವಾಗದೆ ಹೋಗಿದ್ದರಿಂದ ಬೊಮ್ಮಾಯಿ ಅವರಿಗೀಗ ಹೆಚ್ಚು ಕೆಲಸವಿಲ್ಲ.ಹಾಗೆ ನೋಡಿದರೆ ಎಂಥ ಪರಿಸ್ಥಿತಿಯಲ್ಲೂ ಬೊಮ್ಮಾಯಿ ಖಾಲಿ ಕುಳಿತವರಲ್ಲ. ಹಿಂದೆ ಶಾಸಕರಷ್ಟೇ ಆಗಿದ್ದಾಗ ಬೊಮ್ಮಾಯಿ ಅವರು ರಾಜ್ಯ ಸುತ್ತುತ್ತಿದ್ದರು. ಕೃಷ್ಣಾ-ಕಾವೇರಿ ಕೊಳ್ಳದ ನೀರಾವರಿ ಯೋಜನೆಗಳಿಂದ ಹಿಡಿದು ಪ್ರತಿಯೊಂದು ವಿಷಯಗಳ ಬಗ್ಗೆ ಅಧ್ಯಯನ ಪ್ರವಾಸ ಮಾಡುತ್ತಿದ್ದರು. ಆದರೆ ಈಗ ಲೋಕಸಭೆಗೆ ಹೋದ ನಂತರ ಬೊಮ್ಮಾಯಿ ಅವರಿಗೆ ಚಡಪಡಿಕೆ ಶುರುವಾಗಿದೆ.

ಇಂಥ ಬೊಮ್ಮಾಯಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದರೆ ಹೇಗೆ? ಎಂಬುದು ಅಮಿತ್ ಶಾ ಯೋಚನೆ. ಹೀಗಾಗಿ ಅವರು ಅಂಥ ಸಾಧ್ಯತೆಗಳ ಬಗ್ಗೆ ಫೀಡ್‌ಬ್ಯಾಕು ಪಡೆಯಲು ನಡ್ಡಾ ಅವರಿಗೆ ಸೂಚಿಸಿದ್ದಾರೆ. ಇದೇ ರೀತಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ವಿಷಯದಲ್ಲಿ ಅಮಿತ್ ಶಾ ಮನದಲ್ಲಿರುವ ಮತ್ತೊಂದು ಹೆಸರು ಮುರುಗೇಶ್ ನಿರಾಣಿ ಅವರದು.

ಮಾಜಿ ಸಚಿವರಾಗಿರುವ ನಿರಾಣಿ ಇತ್ತೀಚಿನ ವರ್ಷಗಳಲ್ಲಿ ಅಮಿತ್ ಶಾ ಅವರಿಗೆ ಅತ್ಯಾಪ್ತರು. ಹಾಗೆ ನೋಡಿದರೆ 2021ರಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಹೈಕಮಾಂಡ್ ತೀರ್ಮಾನಿಸಿದಾಗ ನಿರಾಣಿ ಅವರಿಗೆ ಪಟ್ಟ ಕಟ್ಟಲು ಅಮಿತ್ ಶಾ ಬಯಸಿದ್ದರು. ಆದರೆ ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬೊಮ್ಮಾಯಿ ಹೆಸರನ್ನು ಕ್ಲಿಯರ್ ಮಾಡಿದ್ದರಿಂದ ನಿರಾಣಿ ನಿರಾಸೆ ಅನುಭವಿಸಬೇಕಾಯಿತು.

ಆದರೆ ಹೀಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿಕೊಂಡರೂ ನಿರಾಣಿ ಅವರೀಗ ಬಿಜೆಪಿಯ ಟಾಪ್ ಲೆವೆಲ್ ಲೀಡರುಗಳಿಗೆ ಮತ್ತಷ್ಟು ಆಪ್ತರಾಗಿದ್ದಾರೆ. ಮಹಾರಾಷ್ಟ್ರದ ಮುಖ್ಯ ಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಂದ ಹಿಡಿದು ಬಿಜೆಪಿಯ ಹಲವು ನಾಯಕರಿಗೆ ಅತ್ಯಾಪ್ತರಾಗಿ ರುವ ನಿರಾಣಿ ಅವರ ಬಗ್ಗೆ ಒಳ್ಳೆಯ ಫೀಡ್‌ಬ್ಯಾಕು ರವಾನೆಯಾಗುತ್ತಿದೆ.

ಅದರ ಪ್ರಕಾರ, ನಿರಾಣಿ ಅಧ್ಯಕ್ಷರಾದರೆ ಪಕ್ಷದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದು ವರಿಯುತ್ತಾರೆ. ಅದೇ ರೀತಿ ಅವರಿಗೆ ಅವಕಾಶ ಸಿಕ್ಕರೆ ಪಂಚಮಸಾಲಿ ಲಿಂಗಾಯತರಿಗೆ ಸಮಾಧಾನ ವಾಗುತ್ತದೆ. ಇವತ್ತು ಸಕ್ಕರೆ ಕಾರ್ಖಾನೆಗಳಿಂದ ಹಿಡಿದು ಹಲವು ಉದ್ಯಮಗಳನ್ನು ನಡೆಸುತ್ತಿರುವ ನಿರಾಣಿ ಅವರಿಗೆ ಪಕ್ಷವನ್ನು ವ್ಯವಸ್ಥಿತವಾಗಿ ಮುನ್ನಡೆಸುವ ಕೌಶಲವಿದೆ ಎಂಬುದು ಈ ಫೀಡ್‌ ಬ್ಯಾಕು.

ಪರಿಣಾಮ? ಬೊಮ್ಮಾಯಿ ಅವರ ಹೆಸರಿನ ಜತೆ ಜತೆಯಲ್ಲಿ ನಿರಾಣಿ ಅವರ ಹೆಸರೂ ರಾಜ್ಯಾಧ್ಯಕ್ಷ ಸ್ಥಾನದ ರೇಸಿನಲ್ಲಿ ಕಾಣಿಸಿಕೊಂಡಿದೆ. ಅಂದ ಹಾಗೆ, ಬೊಮ್ಮಾಯಿ, ನಿರಾಣಿ ಹೆಸರು ರೇಸಿನಲ್ಲಿ ಕಾಣಿಸಿಕೊಂಡಿದೆ ಎಂಬ ಕಾರಣಕ್ಕಾಗಿ ವಿಜಯೇಂದ್ರ ಹೆಸರು ಹಿಂದೆ ಬಿದ್ದಿದೆ ಅಂತಲ್ಲ. ವಸ್ತುಸ್ಥಿತಿ ಎಂದರೆ ಇವತ್ತಿಗೂ ರಾಜ್ಯ ಬಿಜೆಪಿಯ ಹಲ ನಾಯಕರು ವಿಜಯೇಂದ್ರ ಅವರ ಪರವಾಗಿಯೇ ಫೀಡ್‌ಬ್ಯಾಕು ಕೊಡುತ್ತಿದ್ದಾರೆ.

ಅವರ ಪ್ರಕಾರ, ವಿಜಯೇಂದ್ರ ಅವರನ್ನು ಕೆಳಕ್ಕಿಳಿಸಿದರೆ ಕರ್ನಾಟಕದಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗುವುದು ನಿಶ್ಚಿತ. ಯಾಕೆಂದರೆ ಇವತ್ತಿಗೂ ಕರ್ನಾಟಕದ ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಹಿಂಬಾಲಿಸುವ ಲಿಂಗಾಯತರ ಸಂಖ್ಯೆ ದೊಡ್ಡದು. ಹೀಗಾಗಿ ವಿಜಯೇಂದ್ರ ಅವರನ್ನು ಕೆಳಗಿಳಿಸಿದರೆ ಅದು ಯಡಿಯೂರಪ್ಪ ಅವರಿಗೆ ಮಾಡಿದ ಅವಮಾನ ಅಂತ ಭಾವಿಸುವವರು ಹೆಚ್ಚು.

ಆದ್ದರಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಿದರೆ ಪಕ್ಷಕ್ಕೆ ಡ್ಯಾಮೇಜ್ ಆಗುವುದು ನಿಶ್ಚಿತ ಎಂಬು ದು ಇಂಥವರ ಫೀಡ್‌ಬ್ಯಾಕು. ಪರಿಣಾಮ? ಇಂಥ ಫೀಡ್‌ಬ್ಯಾಕುಗಳನ್ನು ಪಡೆಯುತ್ತಿರುವ ಬಿಜೆಪಿ ವರಿಷ್ಠರು ಎಲ್ಲ ಬಣಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೂತನ ಅಧ್ಯಕ್ಷರ ಹೆಸರನ್ನು ಘೋಷಿ ಸುವ ಸಾಧ್ಯತೆ ಜಾಸ್ತಿ.

ಅಮಿತ್ ಶಾ ಅವರಿಗೆ ಕಿರಿಕಿರಿ

ಇನ್ನು, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ವಿಜಯೇಂದ್ರ ಅವರೇ ಮುಂದುವರಿಯುತ್ತಾರೆ ಅಂತ ಪ್ರಾಮಿಸ್ಸು ಮಾಡಿದ್ದ ಅಮಿತ್ ಶಾ ಇದ್ದಕ್ಕಿದ್ದಂತೆ ಆಟ ಬದಲಿಸುತ್ತಿರುವುದೇಕೆ? ಈ ಪ್ರಶ್ನೆ ಕೇಳಿದರೆ ಬಿಜೆಪಿ ಪಾಳಯದಲ್ಲಿ ಗುಸುಗುಸು ಶುರುವಾಗುತ್ತದೆ. ಅದರ ಪ್ರಕಾರ, ಇತ್ತೀಚಿನ ಒಂದು ವದಂತಿ ಯಿಂದ ಅಮಿತ್ ಶಾ ಮನಸ್ಸು ಕೆಡಿಸಿಕೊಂಡಿದ್ದಾರೆ. ಅದೆಂದರೆ ಅಮಿತ್ ಶಾ ಅವರ ಪುತ್ರ ಜಯ್ ಶಾ ಮತ್ತು ವಿಜಯೇಂದ್ರ ಅತ್ಯಾಪ್ತರು. ಇವರಿಬ್ಬರಿಗೆ ವ್ಯಾವಹಾರಿಕ ಸಂಬಂಧವಿದೆ. ಈ ಕಾರಣ ಕ್ಕಾಗಿಯೇ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಅಲುಗಾಡಿಸಲು ಆಗುತ್ತಿಲ್ಲ ಎಂಬುದು. ಅಂದ ಹಾಗೆ, ಇಂಥ ವದಂತಿ ಹಬ್ಬಿಸಿದವರು ಯಾರು ಅಂತ ಯಾರಿಗೂ ಗೊತ್ತಿಲ್ಲ. ಕೇಳಿದರೆ ಬಿಜೆಪಿಯ ಇಬ್ಬಣಗಳಲ್ಲಿ ಬೇರೆ ಬೇರೆ ಮಾತುಗಳು ಕೇಳಿಬರುತ್ತವೆ.

ವಿಜಯೇಂದ್ರ ವಿರೋಧಿ ಕ್ಯಾಂಪಿನ ಪ್ರಕಾರ, ಇಂಥ ವದಂತಿ ಹಬ್ಬಿಸಿದವರು ಸ್ವತಃ ವಿಜಯೇಂದ್ರ ಅವರ ಸುತ್ತ ಇರುವವರು. ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಸಂಘರ್ಷ ಯಾವ ಲೆವೆಲ್ಲಿಗೆ ಹೋದರೂ ವಿಜಯೇಂದ್ರ ಅವರ ಸ್ಥಾನಕ್ಕೆ ಚ್ಯುತಿಯಿಲ್ಲ ಅಂತ ಪ್ರತಿಪಾದಿಸುವ ಸಲುವಾಗಿ ಅವರೇ ಸೃಷ್ಟಿಸಿದ ಕತೆ ಇದು. ಆದರೆ ಅದೀಗ ವಿಜಯೇಂದ್ರ ಅವರಿಗೇ ಬೂಮ್‌ರಾಂಗ್ ಆಗಿದೆ ಅನ್ನುವುದು ಈ ಪಾಳಯದ ಮಾತು. ಆದರೆ ಇದನ್ನು ನಿರಾಕರಿಸುವ ವಿಜಯೇಂದ್ರ ಪಾಳಯ, “ಇದು ವಿಜ ಯೇಂದ್ರ ವಿರೋಧಿಗಳ ಸೃಷ್ಟಿ. ಇಂಥ ವದಂತಿಯನ್ನು ಹಬ್ಬಿಸಿದರೆ ಅಮಿತ್ ಶಾ ಕೋಪಗೊಳ್ಳು ತ್ತಾರೆ. ಹಾಗಾಗಲಿ ಎಂಬ ಉದ್ದೇಶದಿಂದ ಸೃಷ್ಟಿಸಿದ ವದಂತಿ ಇದು" ಎನ್ನುತ್ತದೆ.

ಅದೇನೇ ಆದರೂ, ಇಂಥ ವದಂತಿಯಿಂದ ಅಮಿತ್ ಶಾ ಕೋಪಗೊಂಡಿರುವುದು ಮಾತ್ರ ನಿಜ. ಹೀಗಾಗಿಯೇ ಅವರು ಬಿಜೆಪಿ ರಾಜ್ಯಾಧ್ಯಕ್ಷ ಹುzಯ ರೇಸಿಗೆ ಕಲರ್ ಬರುವಂತೆ ಮಾಡಿದ್ದಾರೆ ಎಂಬುದು ಕೆಲವರ ಮಾತು.

ಯಡಿಯೂರಪ್ಪ ಹೊಸ ಅಸ್ತ್ರ?

ಹೀಗೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯ ವಿಷಯ ಇದ್ದಕ್ಕಿದ್ದಂತೆ ಹೊಸ ತಿರುವು ಪಡೆದಿರುವುದರಿಂದ ಮಾಜಿ ಸಿಎಂ ಯಡಿಯೂರಪ್ಪ ಚಿಂತೆಗೊಳಗಾಗಿzರೆ. ರಾಜ್ಯಾಧ್ಯಕ್ಷ ಹುದ್ದೆಯ ವಿಷಯದಲ್ಲಿ ಯತ್ನಾಳ್ ಆಂಡ್ ಗ್ಯಾಂಗು ತಕರಾರು ಮಾಡುತ್ತಿತ್ತಲ್ಲ? ಈ ಬಗ್ಗೆ ಕೆಲವು ದಿನಗಳ ಹಿಂದೆ ಅಮಿತ್ ಶಾ ಜತೆ ಮಾತನಾಡಿದ ಯಡಿಯೂರಪ್ಪ ತಮ್ಮ ನೋವು ತೋಡಿಕೊಂಡಿದ್ದರು. ಆಗೆಲ್ಲ ಯಡಿಯೂ ರಪ್ಪ ಅವರನ್ನು ಸಮಾಧಾನಿಸಿದ್ದ ಅಮಿತ್ ಶಾ ಈಗ ಇದ್ದಕ್ಕಿದ್ದಂತೆ ರಾಜ್ಯ ಬಿಜೆಪಿಯ ಪ್ರಮುಖ ರನ್ನು ದಿಲ್ಲಿಗೆ ಕರೆಸಿ ಚರ್ಚಿಸುತ್ತಿರುವುದು ಯಡಿಯೂರಪ್ಪ ಅವರ ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿಯೇ ಮೊನ್ನೆಯಿಂದ ಪಕ್ಷದ ಬಹುತೇಕ ನಾಯಕರಿಗೆ ಫೋನು ಮಾಡುತ್ತಿರುವ ಯಡಿಯೂ ರಪ್ಪ, “ಇಂಥ ಕಾಲದಲ್ಲಿ ನೀವು ವಿಜಯೇಂದ್ರರ ಜತೆಗಿರಬೇಕು. ಈ ಕಾಲದಲ್ಲಿ ನನಗೆ ನೋವು ಕೊಡಬೇಡಿ" ಅಂತ ಭಾವನಾತ್ಮಕ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ.

ಒಂದು ವೇಳೆ ಅವರ ಈ ಭಾವನಾತ್ಮಕ ಅಸ್ತ್ರ ಯಶಸ್ವಿಯಾದರೆ ದಿಲ್ಲಿಯಲ್ಲಿ ವಿಜಯೇಂದ್ರರ ಪರ ವಾದ ಲಾಬಿ ಪವರ್ ಫುಲ್ ಅಗುತ್ತದೆ ಮತ್ತು ಆ ಮೂಲಕ ವಿಜಯೇಂದ್ರ ಅವರನ್ನು ಬದಲಿಸಲು ವರಿಷ್ಠರು ಯೋಚಿಸುವಂತಾಗುತ್ತದೆ. ಹೀಗಾಗುತ್ತದಾ? ಕಾದು ನೋಡಬೇಕು.

ಸಿದ್ದುಗೆ ದಿಲ್ಲಿ ಟಾನಿಕ್

ಈ ಮಧ್ಯೆ, ದಿಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಸಿಎಂ ಸಿದ್ದರಾಮಯ್ಯ ಅವರ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಅಂದ ಹಾಗೆ, ಕಾಂಗ್ರೆಸ್ ಪಕ್ಷ ದಿಲ್ಲಿ ವಿಧಾನಸಭೆಯ ಅಧಿಕಾರವನ್ನೇನೂ ಹಿಡಿದಿರಲಿಲ್ಲ. ಆದರೆ ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ಗೆದ್ದರೆ ತನ್ನ ಶಕ್ತಿಯಾದರೂ ಹಿಗ್ಗುತ್ತದೆ ಅಂತ ಅದು ಯೋಚಿಸಿತ್ತು. ಆದರೆ ಅದರ ಶಕ್ತಿ ಹಿಗ್ಗುವ ಕತೆ ಹಾಗಿರಲಿ, ಒಂದೇ ಒಂದು ಕ್ಷೇತ್ರದಲ್ಲೂ ಗೆಲುವು ಗಳಿಸಲಾಗದೆ ಮುದುರಿ ಬಿದ್ದಿದೆ. ಪರಿಣಾಮ? ರಾಷ್ಟ್ರ ರಾಜಕಾರಣದಲ್ಲಿ ಮತ್ತಷ್ಟು ದುರ್ಬಲವಾಗಿರುವ ಅದು ಈಗ ದೇಶದಲ್ಲಿ ಉಳಿದಿರುವ ಕಾಂಗ್ರೆಸ್ ಸರಕಾರಗಳ ಭದ್ರತೆಯ ಬಗ್ಗೆ ಯೋಚಿಸುವ ಸ್ಥಿತಿಗೆ ತಲುಪಿದೆ. ಆ ದೃಷ್ಟಿಯಿಂದ ನೋಡಿದರೆ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕವೇ ಕಾಂಗ್ರೆಸ್ಸಿನ ಭದ್ರನೆಲೆ.

ಇಂಥ ನೆಲೆಯಲ್ಲಿ ಆಗಾಗ ಅಧಿಕಾರ ಹಂಚಿಕೆಯ ಗೊಂದಲ ಕಾಣಿಸುತ್ತಿದೆಯಲ್ಲ? ಇಂಥ ಗೊಂದಲ ಮುಂದಿನ ದಿನಗಳಲ್ಲಿ ಪಕ್ಷವನ್ನು ಕಾಡದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ವರಿಷ್ಠರಿಗೀಗ ಅನಿವಾರ್ಯ. ಅರ್ಥಾತ್, ಸಿದ್ದರಾಮಯ್ಯ ನಾಯಕತ್ವಕ್ಕೆ ಮತ್ತಷ್ಟು ಒತ್ತಾಸೆ ನೀಡುವುದು ಅವರಿಗೆ ಅನಿವಾರ್ಯ. ಈ ಮಧ್ಯೆ ‘ಮುಡಾ’ ಪ್ರಕರಣದ ಸಂಕೋಲೆಗಳು ಒಂದೊಂದಾಗಿ ಕಳಚುತ್ತಿರುವು ದರಿಂದ ಸಿದ್ದರಾಮಯ್ಯ ಕೂಡಾ ಮತ್ತಷ್ಟು ಕಂಫರ್ಟಬಲ್ ಆಗಿzರೆ. ಇದೊಂಥರಾ ‘ಡಬಲ್ ಧಮಾಕಾ’ ಅಂದರೂ ತಪ್ಪೇನಿಲ್ಲ