ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‌T Devidas Column: ಚುನಾವಣಾ ಆಯೋಗಕ್ಕೆ ಪ್ರಕಾಶ್ ರಾಜ್ ಒಂದು ಹೆಸರು, ಅಷ್ಟೆ!

SIR- Special Intensive Revision& ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಎಂಬುದು ಕಾಲಕಾಲಕ್ಕೆ ನಡೆದುಕೊಂಡ ಪ್ರಕ್ರಿಯೆ. ಇದರಲ್ಲಿ ವಿಶೇಷವೇನೂ ಇಲ್ಲ. ತನ್ನ ಹೆಸರು ಕಾಣೆ ಯಾಗಿದೆ ಎಂಬುದೇ ಪ್ರಕಾಶ ರಾಜ್‌ಗೆ ವಿಶೇಷವಾಗಿರಬಹುದು. ಹಾಗಂತ ಹೆಸರುಗಳು ಕಾಣೆಯಾಗುವುದು ಈ ಪ್ರಕ್ರಿಯೆಯಲ್ಲಿ ಅಸಹಜವೇನಲ್ಲ

ಚುನಾವಣಾ ಆಯೋಗಕ್ಕೆ ಪ್ರಕಾಶ್ ರಾಜ್ ಒಂದು ಹೆಸರು, ಅಷ್ಟೆ!

-

Profile
Ashok Nayak Aug 14, 2026 6:00 AM

ಮತಭೇದ

ಟಿ. ದೇವಿದಾಸ್

ನಾನು ಹುಟ್ಟಿದ್ದು ಇಲ್ಲೇ, ವಿದ್ಯಾಭ್ಯಾಸ ಮಾಡಿದ್ದು ಇಲ್ಲೇ, ರಂಗಭೂಮಿಯಲ್ಲಿ ಬೆಳೆದಿದ್ದು ಇಲ್ಲೇ, ಇದೇ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸಿದ್ದೇನೆ. ಹಾಗಿದ್ದರೂ ನನ್ನ ಹೆಸರು ಮತದಾರರ ಪಟ್ಟಿಯಿಂದ ಏಕೆ ಕಾಣೆಯಾಗಿದೆ? ನಟ ಪ್ರಕಾಶ್ ರಾಜ್ ಹೀಗೆ ಹೇಳಿದ ವಿಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ಕಂಡಿತು.

ಹಾಗಂತ, ಪ್ರಕಾಶ್ ರಾಜ್ ಅವರ ಹೆಸರನ್ನು ಅಂತಿಮವಾದ ಮತದಾರರ ಪಟ್ಟಿಯಿಂದ ಅಳಿಸ ಲಾಗಿದೆಯೇ? ಅದು ಸಾಧ್ಯವೇ ಇಲ್ಲ. ಲಭ್ಯವಿರುವ ವರದಿಗಳ ಪ್ರಕಾರ, ಅವರ ಹೆಸರು ಎಸ್‌ಐಆರ್ ಪರಿಶೀಲನೆಯ ಸಂದರ್ಭದಲ್ಲಿ ASDDO-Absent, Shifted, Dead, Duplicate and Others ವರ್ಗದಲ್ಲಿ ಗುರುತಿಸಲ್ಪಟ್ಟಿದೆ. ಅವರ ಹಳೆಯ ಮತದಾರರ ದಾಖಲೆಯಲ್ಲಿದ್ದ ವಿಳಾಸ ದಲ್ಲಿ ಅವರು ವಾಸಿಸುತ್ತಿಲ್ಲ ಎಂಬುದು ಪರಿಶೀಲನೆಯ ಸಂದರ್ಭದಲ್ಲಿ ಕಂಡುಬಂದಿದೆಯಾದ್ದರಿಂದ ಹೆಸರು ಕಾಣೆಯಾಗಿದೆ. ಅದಕ್ಕೆ ವಿಡಿಯೋ ಮಾಡಿ ಹಾಕಬೇಕಾದ ಅಗತ್ಯವಾಗಲೀ ಅಥವಾ ಅನಿವಾ ರ್ಯತೆಯಾಗಲೀ ಪ್ರಕಾಶ ರಾಜ್ ಅವರಿಗೆ ಇರಲಿಲ್ಲವಾಗಿತ್ತು. ತನ್ನನ್ನು ತಾನು ತೀರಾ ಗಂಭೀರ ವ್ಯಕ್ತಿ, ಚುನಾವಣಾ ಆಯೋಗ ಮುಖ್ಯವಾಗಿ ಪರಿಗಣಿಸಬೇಕಾದ ವ್ಯಕ್ತಿ ಅಂತ ಅವರು ತಿಳಿದುಕೊಂಡಂತಿದೆ.

SIR- Special Intensive Revision& ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಎಂಬುದು ಕಾಲಕಾಲಕ್ಕೆ ನಡೆದುಕೊಂಡ ಪ್ರಕ್ರಿಯೆ. ಇದರಲ್ಲಿ ವಿಶೇಷವೇನೂ ಇಲ್ಲ. ತನ್ನ ಹೆಸರು ಕಾಣೆ ಯಾಗಿದೆ ಎಂಬುದೇ ಪ್ರಕಾಶ ರಾಜ್‌ಗೆ ವಿಶೇಷವಾಗಿರಬಹುದು. ಹಾಗಂತ ಹೆಸರುಗಳು ಕಾಣೆಯಾಗು ವುದು ಈ ಪ್ರಕ್ರಿಯೆಯಲ್ಲಿ ಅಸಹಜವೇನಲ್ಲ. ಮತದಾರರ ಪಟ್ಟಿಯನ್ನು ಕಾಲಕಾಲಕ್ಕೆ ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳು ಸರಿಯಾಗಿ ಇರುವಂತೆ ಮಾಡುವುದು.

ಇದನ್ನೂ ಓದಿ: T Devidas Column: ಪ್ರಜ್ಞೆ, ವಾಸ್ತವ ಮತ್ತು ರಾಮಚಂದ್ರ ಗುಹಾ

ನಿಧನವಾದವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ನಕಲಿ ಅಥವಾ ದ್ವಂದ್ವ ನೋಂದಣಿಗಳು ಮತ್ತು ಇತರ ಅನರ್ಹ ದಾಖಲೆಗಳನ್ನು ಗುರುತಿಸುವುದು ಈ ಪ್ರಕ್ರಿಯೆಯ ಪ್ರಮುಖ ಉದ್ದೇಶಗಳು. ಕರ್ನಾಟಕದಲ್ಲಿ ಈ ಬೃಹತ್ ಅಭಿಯಾನವು 24 ವರ್ಷಗಳ ಅನಂತರ ಸಮಗ್ರವಾಗಿ ನಡೆಯುತ್ತಿದೆ. ಇದೇನು ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷವನ್ನು ಗುರಿಯಾಗಿಸಿಕೊಂಡು ನಡೆಸುವ ಪ್ರಕ್ರಿಯೆಯಲ್ಲ ಅಂತ ಹಳ್ಳಿಯ ಹೆಡ್ಡನಿಗೆ ಗೊತ್ತು. ಸಿಟಿಯ ಹೆಡ್ಡನಿಗೆ ಗೊತ್ತಾಗಬೇಕಷ್ಟೆ!

ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ, ಎಸ್‌ಐಆರ್ ಸಂದರ್ಭದಲ್ಲಿ ಬೆಂಗಳೂರಿನ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕಾಣೆಯಾಗಿರುವುದರ ಬಗ್ಗೆ ಪ್ರಕಾಶ್ ರಾಜ್ ಅವರು ಅಸಮಾಧಾನವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ. ಅವರು ವ್ಯಂಗ್ಯಭರಿತ ವಾಗಿ, Nice joke, game on ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿ, ತಮ್ಮ ಮತದಾನದ ಹಕ್ಕನ್ನು ಮರಳಿ ಪಡೆಯಲು ಮುಂದಿನ ಪ್ರಕ್ರಿಯೆ ಏನು ಎಂದು ಪ್ರಶ್ನಿಸಿದ್ದಾರೆ.

ತಮ್ಮ ಜನ್ಮಸ್ಥಳ, ವಿದ್ಯಾಭ್ಯಾಸ, ರಂಗಭೂಮಿ ಮತ್ತು ಹಿಂದಿನ ಚುನಾವಣಾ ಸ್ಪರ್ಧೆಯನ್ನೂ ಅವರು ಉಲ್ಲೇಖಿಸಿದ್ದಾರೆ. ವೆಲ, ಪ್ರಕಾಶ್ ರಾಜ್ ಅವರಂತೆ ಹೆಸರು ಕಾಣೆಯಾದವರೆಲ್ಲ ವಿಡಿಯೋ ಮಾಡಿ ತನ್ನ ವಿವರಗಳನ್ನು ಹೇಳಿಕೊಳ್ಳುವ ಅಗತ್ಯವಿರುವುದಿಲ್ಲ. ಕಾಣೆಯಾಗಿದೆ ಅಂದರೆ ಅದಕ್ಕೆ ಸರಿಯಾದ ಕಾರಣವೇನು ಎಂಬುದನ್ನು ಸಂಬಂಧಪಟ್ಟವರಲ್ಲಿ ವಿಚಾರಿಸಿ, ತಾನೇನು ಮಾಡಬೇಕು ಎಂಬುದನ್ನು ತಿಳಿದುಕೊಂಡು ಆ ಕ್ರಮಕ್ಕೆ ಮುಂದಾಗಬೇಕು. ಅದನ್ನು ಬಿಟ್ಟು ವಿಡಿಯೋ ಮಾಡುತ್ತ ಪ್ರಧಾನಿ ನರೇಂದ್ರ ಮೋದಿಯವರು ಆಡುವ ಪದಗಳನ್ನು ಹೇಳುತ್ತ ಅಣಕಿಸುವ ಅಭಿನಯವೇಕೆ? ತನ್ನ ಹೆಸರನ್ನು ಮರು ನೋಂದಣಿ ಮಾಡಿಕೊಳ್ಳಲು ಕಾನೂನುಬದ್ಧ ಪ್ರಕ್ರಿಯೆ ಲಭ್ಯವಿದೆ ಎಂಬ ವಿಚಾರ ಪ್ರಕಾಶ್ ರಾಜ್‌ಗೆ ಗೊತ್ತಿಲ್ಲವೇನು?

PrakashRaj

ಕರ್ನಾಟಕದ ಎಸ್‌ಐಆರ್ ಕುರಿತಂತೆ, ರಾಜ್ಯಾದ್ಯಂತ ಸುಮಾರು 84 ಲಕ್ಷ ಮತದಾರರ ಹೆಸರುಗಳು ಕರಡು ಪಟ್ಟಿಯ ಹಂತದಲ್ಲಿ ತೆಗೆದು ಹಾಕುವ ಸಾಧ್ಯತೆಯ ವರ್ಗದಲ್ಲಿ ಗುರುತಿಸಲ್ಪಟ್ಟಿವೆ ಎಂಬ ವರದಿಯಿದೆ. ಅಂದರೆ ಸುಮಾರು 15% ಮಾತ್ರ. ಆದರೆ ಇವರೆಲ್ಲ ಅಂತಿಮವಾಗಿ ಮತದಾನದ ಹಕ್ಕು ಕಳೆದುಕೊಂಡವರು ಎಂದು ಲೇಬಲ್ ಮಾಡಿದ್ದಲ್ಲ. ಪರಿಶೀಲನೆ ಆಗಬೇಕಿದೆ.

ಅನಂತರದಲ್ಲಿ, ಕ್ಲೇಮ್ಸ್ ಮತ್ತು ಒಬ್ಜೆಕ್ಷನ್ಸ್ ಅವಕಾಶವಿದೆ. ಇದೆಲ್ಲ ಪ್ರಕ್ರಿಯೆ ಮುಗಿದ ಮೇಲೆ ಅಂತಿಮ ಮತದಾರರ ಪಟ್ಟಿ ಸಿದ್ಧಗೊಳ್ಳುತ್ತದೆ. ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾ ರರು ಎಎಸ್‌ಡಿಡಿಒ ವರ್ಗದಲ್ಲಿದ್ದಾರೆ ಎಂಬ ವರದಿಯಾಗಿದೆ. ಪರಿಶೀಲನೆಯ ಪಟ್ಟಿಯಿಂದ ಹೊರಗಿರುವವರು, ಪರಿಶೀಲನೆಯ ಪಟ್ಟಿಗೆ ಒಳಪಟ್ಟವರು- ಇವೆರಡರ ಮಧ್ಯದಲ್ಲಿ ಅಂತರವಿದೆ. ವ್ಯತ್ಯಾಸವೂ ಇದೆ. ಪ್ರಕಾಶ್ ರಾಜ್ ಹೆಸರು ಮೊದಲಿನ ವರ್ಗಕ್ಕೆ ಸೇರಿರಬಹುದು.

2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಕಾಶ್ ರಾಜ್ ಅವರ ವಿರುದ್ಧ ಬಹು ರಾಜ್ಯಗಳಲ್ಲಿ ಮತದಾರ ನೋಂದಣಿಯನ್ನು ಚುನಾವಣಾ ಅಫಿಡಾವಿಟ್‌ನಲ್ಲಿ ವಿವರಗಳನ್ನು ಮರೆಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಬೆಂಗಳೂರಿನ ನ್ಯಾಯಾಲಯದಲ್ಲಿ ಇನ್ನೂ ನಡೆಯುತ್ತಿದೆ. 2026ರ ಜುಲೈಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಕಾಶ್ ರಾಜ್ ಬೇಲ್ ಪಡೆದುಕೊಂಡಿದ್ದಾರೆಂದು ಮಾಧ್ಯಮಗಳಲ್ಲಿ ಓದಿದ ನೆನಪು. ಈ ಪ್ರಕರಣದ ಆರೋಪಗಳು ಇನ್ನೂ ನ್ಯಾಯಾಲಯದ ವಿಚಾರಣೆಯಲ್ಲಿದೆ.

ಒಂದು ಸಾಮಾನ್ಯ ಜ್ಞಾನ ಏನೆಂದರೆ, ಮತದಾರರ ಪಟ್ಟಿ ಪರಿಶೀಲನೆಯ ಸಂದರ್ಭದಲ್ಲಿ ನೀಡಿದ್ದ ವಿಳಾಸಕ್ಕೆ ಬಿಎಲ್‌ಒಗಳು ಭೇಟಿ ನೀಡಿದಾಗ ವಾಸ ಇಲ್ಲದಿರುವುದು ಕಂಡುಬಂದಿದ್ದರೆ, ನಿಯಮಾನು ಸಾರ ಅವರ ಹೆಸರು ಎಎಸ್‌ಡಿಡಿಒ ವರ್ಗಕ್ಕೆ ಸೇರುತ್ತದೆ.

ಒಂದು ವೇಳೆ ಕೊಟ್ಟ ವಿಳಾಸದ ವಾಸ ವಿದ್ದರೆ ದಾಖಲೆಗಳ ಸಹಿತ ಹೆಸರನ್ನು ಮತ್ತೆ ಮತದಾರರ ಪಟ್ಟಿಯಲ್ಲಿ ಸೇರಿಸಲು ಕಾನೂನುಬದ್ಧ ಅವಕಾಶವಿರುತ್ತದೆ. ತನ್ನ ಹೆಸರು ಕಾಣೆಯಾಗಿದೆ ಅಂದ ಮಾತ್ರಕ್ಕೆ ಇದೊಂದು ರಾಜಕೀಯ ಸಂಚು ಎನ್ನುವುದಕ್ಕಿಂತ ವಾಸ್ತವಾಂಶಗಳನ್ನು ಪರಿಶೀಲಿಸು ವುದು ಅತೀ ಮುಖ್ಯ. ತನ್ನ ಹೆಡ್ಡತನಕ್ಕೆ ಇನ್ಯಾ ರನ್ನೋ ಗುರಿಯಾಗಿಸಿಕೊಂಡು ವ್ಯಂಗ್ಯವಾಗಿ ವಿಡಿಯೋ ಮಾಡುವುದರ ಮರ್ಮ ಏನು, ಅಗತ್ಯ ವಾದರೂ ಏನಿದೆ?

ವ್ಯಕ್ತಿಯೊಬ್ಬ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತದಾರನಾಗಿ ನೋಂದಾಯಿಸಿಕೊಳ್ಳಲು ಸಾಧ್ಯ ವಿಲ್ಲ. ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾ ರೆಂದು ತನ್ನ ಮೇಲಿನ ಆರೋಪದ ಬಗ್ಗೆ ಸಾರ್ವಜನಿಕವಾಗಿ ತಾನು ಸ್ಪಷ್ಟಪಡಿಸುವ ಅಗತ್ಯವಿದೆ ಯೆಂದು ಅನಿಸಿ ಒಂದು ವಿಡಿಯೋವನ್ನು ಪ್ರಕಾಶ್ ರಾಜ್ ಯಾಕೆ ಮಾಡಲಿಲ್ಲ ಅಂತ ನನ್ನ ಪ್ರಶ್ನೆಯಿದೆ.

ಹೆಚ್ಚು ಕಡಿಮೆ ಎಲ್ಲದಕ್ಕೂ ವಿಡಿಯೋ ಮಾಡುವ ಪ್ರಕಾಶ್ ರಾಜ್ ಇದಕ್ಕೂ ಒಂದು ವಿಡಿಯೋ ಮಾಡಿದ್ದರೆ ಅವರ ಪ್ರಶ್ನಾ ಮನೋಭಾವದ ಸಾರ್ವಜನಿಕ ಅಸ್ಮಿತೆಯ ಕ್ರೆಡಿಬಿಲಿಟಿ ಇನ್ನೂ ಎತ್ತರ ಕ್ಕೇರುತ್ತಿತ್ತು. ಅವರು ಹಾಗೆ ಮಾಡದೆ ಉದ್ದೇಶಪೂರ್ವಕವಾಗಿ ತನ್ನ ಹೆಸರನ್ನು ತೆಗೆಯಲಾಗಿದೆ ಎಂಬ ಧೋರಣೆಯಲ್ಲಿ ತನ್ನ ಮತದಾನದ ಹಕ್ಕಿನ ಕುರಿತು ಪ್ರಧಾನಿಗಳನ್ನೇ ಪರೋಕ್ಷವಾಗಿ ಗುರಿ ಯಾಗಿಸಿ ವ್ಯಂಗ್ಯವಾಗಿ ಡಿಯರ್ ಫ್ರೆಂಡ್ಸ್‌, ಸಾಥಿಯೋಂ ಎನ್ನುತ್ತಲೇ ನನ್ನನ್ನು 65 ಲಕ್ಷ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ.

ಜನರನ್ನು ಮತದಾನದಿಂದ ದೂರ ಇಡಬಹುದು. ಆದರೆ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಜನರ ಶಕ್ತಿಯನ್ನು ತಡೆಯಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಮೋದಿಯ ವರನ್ನು ಪ್ರಶ್ನಿಸಲೆಂದೇ ವಿಡಿಯೊ ಮಾಡಿದಂತೆ ಕಾಣುತ್ತದೆ. ಇಂಥ ಅವಕಾಶಕ್ಕಾಗಿಯೇ ಕಾಯು ತ್ತಿದ್ದು, ಒಳಗೊಳಗೇ ನಗುತ್ತ ಬಂದು ವಿಡಿಯೊ ಮಾಡಿದಂತೆಯೂ ಕಾಣುತ್ತದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಪ್ರಕಾರ, ಶಾಂತಿನಗರ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 1, ಕ್ರಮ ಸಂಖ್ಯೆ 970ರಲ್ಲಿ ನೋಂದಾಯಿತರಾಗಿದ್ದ ಪ್ರಕಾಶ್ ರಾಜ್ ಅವರ ವಿಳಾಸವಾದ ಫ್ಲ್ಯಾಟ್ ನಂ. 266, ಗಾರ್ಡನ್ ಅಪಾರ್ಟ್ಮೆಂಟ್ಸ್, ವಿಠಲ್ ಮಲ್ಯ ರಸ್ತೆಗೆ 16-06-2026 ರಂದು ಬಿಎಲ್‌ಒ ಮನೆ-ಮನೆ ಪರಿಶೀಲನೆ ನಡೆಸಿದಾಗ, ಫ್ಲ್ಯಾಟ್ ಖಾಲಿಯಾಗಿರುವುದು ಕಂಡುಬಂದಿದೆ.

ಅಪಾರ್ಟ್ಮೆಂಟ್ ಮಾಲೀಕರು ಹಾಗೂ ಪ್ರಾಪರ್ಟಿ ಮ್ಯಾನೇಜರ್ ನೀಡಿದ ಮಾಹಿತಿಯಂತೆ, ಪ್ರಕಾಶ್ ರಾಜ್ ಅವರು ಸುಮಾರು ನಾಲ್ಕು ವರ್ಷ ಗಳಿಂದ ಅಲ್ಲಿ ವಾಸಿಸುತ್ತಿಲ್ಲ. ಮತ್ತು ಬೇರೊಬ್ಬರು ಅಲ್ಲಿ ವಾಸಿಸು ತ್ತಿದ್ದಾರೆ. ಈ ಆಧಾರದ ಮೇಲೆ ನಿಯಮಾನುಸಾರ ಅವರ ಹೆಸರನ್ನು ‘ಶಿಫ್ಟೆಡ್’ ಎಂದು ಗುರುತಿಸ ಲಾಗಿದೆ. ಅಂದರೆ, ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಟ್ಟಿದ್ದಲ್ಲ ಎಂಬುದಂತೂ ಸುಸ್ಪಷ್ಟ.

11-08-2026ರಂದು ಪಾಲಿಕೆ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ಚುನಾವಣಾ ಅಧಿಕಾರಿಯಾದ ಜಗದೀಶ್ ಜಿ. ಅವರು ಪ್ರಕಾಶ್ ರಾಜ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದಾಗ, ತಾವು ಅದೇ ಕಟ್ಟಡದಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದರೂ ನಿಖರವಾದ ಫ್ಲ್ಯಾಟ್ ಸಂಖ್ಯೆಯನ್ನು ಖಚಿತಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅನಂತರ, ತಾವು ಹಳೆಯ ವಿಳಾಸದಲ್ಲಿಲ್ಲದೆ ಶಾಂತಿ ನಗರ ವಿಧಾನಸಭಾ ಕ್ಷೇತ್ರದ ಮತ್ತೊಂದು ವಿಳಾಸದಲ್ಲಿ ನೆಲೆಸಿರುವುದಾಗಿ ನಟ ಸ್ವತಃ ದೃಢಪಡಿಸಿ ದ್ದಾರೆ.

ಅಲ್ಲದೆ, ಫಾರಂ-6 ದಾಖಲೆಗಳ ಪರಿಶೀಲನೆಯಲ್ಲಿ ಅವರು ಮತ್ತೊಂದು ವಿಳಾಸದಲ್ಲಿ ಮತದಾರ ರಾಗಿ ನೋಂದಾಯಿತರಾಗಿರುವುದು ಕಂಡುಬಂದಿದೆ ಎಂದು ಪಾಲಿಕೆ ತಿಳಿಸಿದೆ. ಪರಿಶೀಲನೆಯ ಸಂದರ್ಭದಲ್ಲಿ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಚುನಾವಣಾ ನಿಯಮಾನುಸಾರ ಕೈಗೊಂಡ ಆಡಳಿತಾತ್ಮಕ ಕ್ರಮ ಎಂದು ಪಾಲಿಕೆ ಸ್ಪಷ್ಟಪಡಿಸಿದೆ. ಆದ್ದರಿಂದ ಇದರಲ್ಲಿ ಯಾವುದೇ ರಾಜಕೀಯವಿಲ್ಲ.

ಅಷ್ಟಕ್ಕೂ ಪ್ರಕಾಶ್ ರಾಜ್ ಹೆಸರನ್ನು ತೆಗೆದು ಹಾಕಬೇಕಾದ ದರ್ದಾದರೂ ಯಾರಿಗಿದೆ? ಯಾರಿಗಿ ದ್ದೀತು? ಯಾಕಿದ್ದೀತು? ಯಾಕೆಂದರೆ, ಅವರೊಬ್ಬರ ಹೆಸರನ್ನು ತೆಗೆದು ಹಾಕಿದ ಮಾತ್ರಕ್ಕೆ ಅಥವಾ ಅವರ ಒಂದು ಓಟಿನಿಂದ ಯಾರೊಬ್ಬರ ಸೋಲಾಗಲಿ ಗೆಲುವಾಗಲಿ ನಿರ್ಧಾರ ಆಗಿಯೇ ಬಿಡುತ್ತದೆ ಅಂತ ಯಾರೂ ಭಾವಿಸಲಾಗದು. ಹಾಗೆ ಪ್ರಕಾಶ್ ರಾಜ್ ಕೂಡ ಭಾವಿಸಲಾಗದು ಅಂತ ಭಾವಿಸು ತ್ತೇನೆ. ಹಾಗಂತ ಒಂದು ಓಟು ಪ್ರಾಮುಖ್ಯವಲ್ಲ ಅಂತ ನನ್ನ ಮಾತಿನ ಅರ್ಥವಲ್ಲ. ಒಂದೊಂದು ಓಟೂ ಮುಖ್ಯವೇ ಆಗಿರುತ್ತದೆ. ಆದರೆ ಒಂದು ಓಟು ಮಾತ್ರ ಮುಖ್ಯವಲ್ಲ.

ಕರ್ನಾಟಕದಲ್ಲಿರುವ ಸರಿಸುಮಾರು ಐದೂವರೆ ಕೋಟಿ (ಇದು ಅಂದಾಜಷ್ಟೆ) ಮತದಾರರಲ್ಲಿ ಪ್ರಕಾಶ್ ರಾಜ್ ಕೂಡ ಒಬ್ಬರು. ಅವರೇ ಪ್ರಧಾನರೂ ಅಲ್ಲ. ಅವರೇ ಅಪ್ರಮುಖರೂ ಅಲ್ಲ. ಪ್ರಕಾಶ್ ರಾಜ್ ಅಂದುಕೊಂಡಂತೆ ಅವರ ಹೆಸರನ್ನು ತೆಗೆದುಹಾಕಲಿಕ್ಕೆ ಅವರೇನು ಮೇಲಿಂದ ಕೆಳಗಿಳಿದು ಬಂದವರೂ ಅಲ್ಲ. ಅನುಭವದ ಮಾತೇನೆಂದರೆ, ತಮ್ಮನ್ನು ತಾವು ಯಾರೂ ತೀರಾ ಗಂಭೀರವಾಗಿ ತೆಗೆದುಕೊಳ್ಳ ಬಾರದು. ಯಾಕೆಂದರೆ, ಇತರರು ಗಂಭೀರವಾಗಿ ತೆಗೆದುಕೊಳ್ಳದೇ ಇರಬಹುದು. ಭಾರತೀಯ ಚುನಾವಣಾ ಆಯೋಗಕ್ಕೆ ಪ್ರಕಾಶ್ ರಾಜ್ ಎಂಬುದು ಜಸ್ಟ್ ಒಂದು ಮತದಾರನ ಹೆಸರು, ಅಷ್ಟೆ! ಅದಕ್ಕಿಂತ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ.