ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

K V Chandramouli Column: ಕಾವೇರಿ: ಸಂಘರ್ಷದಿಂದ ಪರಿಹಾರವಿಲ್ಲ, ವೈಜ್ಞಾನಿಕ ಜಲಾಡಳಿತದಿಂದ ನ್ಯಾಯ

2026ರ ಮುಂಗಾರು ಮಳೆಯ ಕೊರತೆಯಿಂದ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನಿರೀಕ್ಷಿತ ಮಟ್ಟದ ನೀರು ಸಂಗ್ರಹವಾಗದ ಸಂದರ್ಭದಲ್ಲಿ, ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಕರ್ನಾಟಕ ಪ್ರತಿದಿನ 3500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂದು ನಿರ್ದೇಶಿಸಿದೆ. ಈ ನಿರ್ಧಾರ ರೈತರಲ್ಲಿ ಆತಂಕವನ್ನೂ, ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನೂ ಹುಟ್ಟು ಹಾಕಿದೆ.

ಕಾವೇರಿ: ಸಂಘರ್ಷದಿಂದ ಪರಿಹಾರವಿಲ್ಲ, ವೈಜ್ಞಾನಿಕ ಜಲಾಡಳಿತದಿಂದ ನ್ಯಾಯ

-

Profile
Ashok Nayak Aug 7, 2026 6:01 AM

ಜಲತರಂಗ

ಕೆ.ವಿ ಚಂದ್ರಮೌಳಿ

(ಭಾಗ 1)

ನದಿಗಳು ರಾಜ್ಯಗಳ ಗಡಿಗಳನ್ನು ಗುರುತಿಸುವುದಿಲ್ಲ; ಅವು ಜೀವವನ್ನು ಮಾತ್ರ ಸಾಗಿಸುತ್ತವೆ. ಆದ್ದರಿಂದ ನದಿನೀರಿನ ಹಂಚಿಕೆಯೂ ಸಂಘರ್ಷದಿಂದಲ್ಲ, ವಿಜ್ಞಾನ, ನ್ಯಾಯ ಮತ್ತು ಸಹಕಾರ ದಿಂದ ನಡೆಯಬೇಕು. ಕಾವೇರಿ ನದಿ ಕರ್ನಾಟಕ ಮತ್ತು ತಮಿಳುನಾಡಿನ ಕೋಟ್ಯಂತರ ಜನರ ಜೀವನಾಡಿ. ಕುಡಿಯುವ ನೀರು, ಕೃಷಿ, ಕೈಗಾರಿಕೆ, ಪರಿಸರ ಸಂರಕ್ಷಣೆ, ಮೀನುಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆ-ಇವೆಲ್ಲವೂ ಕಾವೇರಿ ಜಲವ್ಯವಸ್ಥೆಯ ಮೇಲೆ ಅವಲಂಬಿತವಾಗಿವೆ. ಆದ್ದರಿಂದ ಕಾವೇರಿ ವಿವಾದವನ್ನು ಕೇವಲ ಎರಡು ರಾಜ್ಯಗಳ ನಡುವಿನ ರಾಜಕೀಯ ಅಥವಾ ಭಾವನಾತ್ಮಕ ಸಂಘರ್ಷವೆಂದು ನೋಡುವುದು ವಾಸ್ತವಿಕತೆಯನ್ನು ಸರಳೀಕರಿಸುವ ಪ್ರಯತ್ನವಾಗುತ್ತದೆ.

2026ರ ಮುಂಗಾರು ಮಳೆಯ ಕೊರತೆಯಿಂದ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನಿರೀಕ್ಷಿತ ಮಟ್ಟದ ನೀರು ಸಂಗ್ರಹವಾಗದ ಸಂದರ್ಭದಲ್ಲಿ, ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಕರ್ನಾಟಕ ಪ್ರತಿದಿನ 3500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂದು ನಿರ್ದೇಶಿಸಿದೆ. ಈ ನಿರ್ಧಾರ ರೈತರಲ್ಲಿ ಆತಂಕವನ್ನೂ, ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನೂ ಹುಟ್ಟು ಹಾಕಿದೆ.

ಈ ಲೇಖನದ ಉದ್ದೇಶ ಯಾವುದೇ ಕಾನೂನುಬದ್ಧ ಸಂಸ್ಥೆಯ ಅಧಿಕಾರವನ್ನು ಪ್ರಶ್ನಿಸುವುದಲ್ಲ. ಬದಲಾಗಿ, ಪಾರದರ್ಶಕತೆ, ವೈಜ್ಞಾನಿಕ ಜಲಾಡಳಿತ ಮತ್ತು ದೀರ್ಘಕಾಲಿಕ ಶಾಶ್ವತ ಪರಿಹಾರದ ಅಗತ್ಯವನ್ನು ಚರ್ಚಿಸುವುದಾಗಿದೆ.

ಇದನ್ನೂ ಓದಿ: K V Chandramouli Column: ಸಿಎಂ ಡಿಕೆಶಿಗೊಂದು ಮುಕ್ತ ಪತ್ರ: ಕಡಿಮೆ ಸರಕಾರ, ಹೆಚ್ಚು ಆಡಳಿತ ಹೇಗೆ ?

ಜಲಾಶಯದ ನೀರೆಲ್ಲ ಬಳಕೆಗಿಲ್ಲ

ಜಲಾಶಯದಲ್ಲಿ ಇಷ್ಟು ಟಿಎಂಸಿ ನೀರಿದೆ ಎಂಬ ಹೇಳಿಕೆಗಳು ಸಾಮಾನ್ಯ. ಆದರೆ ಜಲಶಾಸ್ತ್ರದ ದೃಷ್ಟಿಯಿಂದ ಇದು ಸಂಪೂರ್ಣ ಚಿತ್ರವಲ್ಲ. ಪ್ರತಿಯೊಂದು ಜಲಾಶಯದಲ್ಲೂ ಮೂರು ಪ್ರಮುಖ ಸಂಗ್ರಹ ಮಟ್ಟಗಳಿವೆ: ಒಟ್ಟು ಸಂಗ್ರಹ ಸಾಮರ್ಥ್ಯ (Gross Storage), ಜೀವಂತ ಸಂಗ್ರಹ (Live Storage), ಡೆಡ್ ಸ್ಟೋರೇಜ್ (Dead Storage).

ಜಲಾಶಯ ಸಂಪೂರ್ಣವಾಗಿ ತುಂಬಿದಾಗ ಅದರಲ್ಲಿ ಸಂಗ್ರಹಿಸಬಹುದಾದ ಒಟ್ಟು ನೀರಿನ ಪ್ರಮಾಣವನ್ನು ಒಟ್ಟು ಸಂಗ್ರಹ ಸಾಮರ್ಥ್ಯ ಎಂದು ಕರೆಯಲಾಗುತ್ತದೆ. ಇದರಲ್ಲಿ ಬಳಕೆಗೆ ಯೋಗ್ಯವಾದ ನೀರು ಹಾಗೂ ಕೆಳಭಾಗದಲ್ಲಿ ಉಳಿಯುವ ನೀರು ಎರಡೂ ಸೇರಿರುತ್ತವೆ. ಜಲಾಶಯ ದಿಂದ ಗೇಟ್‌ಗಳು, ಕಾಲುವೆಗಳು ಅಥವಾ ಪೈಪ್‌ಗಳ ಮೂಲಕ ಕುಡಿಯುವ ನೀರು, ನೀರಾವರಿ, ವಿದ್ಯುತ್ ಉತ್ಪಾದನೆ ಹಾಗೂ ಇತರ ಬಳಕೆಗಳಿಗೆ ಹೊರಹರಿಸಬಹುದಾದ ನೀರಿನ ಪ್ರಮಾಣವನ್ನು ಜೀವಂತ ಸಂಗ್ರಹ ಎಂದು ಕರೆಯಲಾಗುತ್ತದೆ.

ಪ್ರಾಯೋಗಿಕವಾಗಿ ಜನರಿಗೆ ಉಪಯೋಗವಾಗುವ ನೀರು ಇದೇ. ಬಳಕೆಗೆ ಲಭ್ಯವಾಗುವುದು ಜೀವಂತ ಸಂಗ್ರಹ ಮಾತ್ರ. ಡೆಡ್ ಸ್ಟೋರೇಜ್‌ನಲ್ಲಿರುವ ನೀರನ್ನು ಗುರುತ್ವಾಕರ್ಷಣೆಯ ಮೂಲಕ ಸಂಪೂರ್ಣ ವಾಗಿ ಹೊರಹರಿಸಲು ಸಾಧ್ಯವಿಲ್ಲ. ಇದಕ್ಕಿಂತಲೂ ಪ್ರಮುಖವಾದ ಅಂಶವೆಂದರೆ ಹೂಳು ತುಂಬಿಕೆ. ಹಲವು ದಶಕಗಳಿಂದ ಜಲಾಶಯಗಳಲ್ಲಿ ಸೇರುತ್ತಿರುವ ಹೂಳು ಜೀವಂತ ಸಂಗ್ರಹ ಸಾಮರ್ಥ್ಯ ವನ್ನು ಕ್ರಮೇಣ ಕಡಿಮೆ ಮಾಡುತ್ತದೆ. ಹೀಗಾಗಿ ನಿರ್ಮಾಣದ ವೇಳೆಯಲ್ಲಿದ್ದ ಮೂಲ ಸಾಮರ್ಥ್ಯವೇ ಇಂದಿಗೂ ಲಭ್ಯವಿದೆ ಎಂದು ಪರಿಗಣಿಸುವುದು ವೈಜ್ಞಾನಿಕವಾಗಿ ಸರಿಯಲ್ಲ.

72 ಒಕ

ಜಲಾಶಯದ ತಳಭಾಗದಲ್ಲಿ, ನೀರು ಬಿಡುವ ಕವಾಟಗಳ ಮಟ್ಟಕ್ಕಿಂತ ಕೆಳಗೆ ಉಳಿಯುವ ನೀರನ್ನು ಡೆಡ್ ಸ್ಟೋರೇಜ ಎಂದು ಕರೆಯಲಾಗುತ್ತದೆ. ಈ ನೀರನ್ನು ಗುರುತ್ವಾಕರ್ಷಣೆಯ ಮೂಲಕ ಹೊರ ಹರಿಸಲು ಸಾಧ್ಯವಿಲ್ಲ. ಇದು ಮುಖ್ಯವಾಗಿ ಹೂಳು ಸಂಗ್ರಹವಾಗಲು, ಪರಿಸರ ಸಮತೋಲನ ಕಾಪಾಡಲು ಮತ್ತು ಜಲಾಶಯದ ಕಾರ್ಯಾಚರಣೆಗೆ ಮೀಸಲು.

ಎರಡು ರಾಜ್ಯಗಳ ಸವಾಲು

ಕರ್ನಾಟಕದ ಪ್ರಮುಖ ಕಾವೇರಿ ಜಲಾಶಯಗಳ ಮೂಲ ಸಾಮರ್ಥ್ಯ ಹೀಗಿದೆ: ಕೃಷ್ಣರಾಜಸಾಗರ- ಸುಮಾರು 49.45 ಟಿಎಂಸಿ, ಡೆಡ್ ಸ್ಟೋರೇಜ್ 4.45 ಟಿಎಂಸಿ. ಹೇಮಾವತಿ (ಗೊರೂರು)- ಸುಮಾರು 37.00 ಟಿಎಂಸಿ, ಡೆಡ್ ಸ್ಟೋರೇಜ್ 5.84 ಟಿಎಂಸಿ. ಕಬಿನಿ- ಸುಮಾರು 19.52 ಟಿಎಂಸಿ, ಡೆಡ್ ಸ್ಟೋರೇಜ್ 3.51ಟಿಎಂಸಿ. ಹಾರಂಗಿ- ಸುಮಾರು 8.50 ಟಿಎಂಸಿ ಡೆಡ್ ಸ್ಟೋರೇಜ್ 0.56 ಟಿಎಂಸಿ.

ನಾಲ್ಕು ಪ್ರಮುಖ ಜಲಾಶಯಗಳ ಒಟ್ಟು ವಿನ್ಯಾಸ ಸಂಗ್ರಹ ಸಾಮರ್ಥ್ಯ ಸುಮಾರು 114.57 ಟಿಎಂಸಿ. ಅವುಗಳ ಡೆಡ್ ಸ್ಟೋರೇಜ್ ಒಟ್ಟಾರೆ ಸುಮಾರು 14.36 ಟಿಎಂಸಿ. ಆದಾಗ್ಯೂ, ಈ ಸಂಪೂರ್ಣ ಸಂಗ್ರಹಿತ ನೀರು ಬಳಕೆಗೆ ಲಭ್ಯವಿಲ್ಲ. ಜಲಾಶಯಗಳಲ್ಲಿ ವರ್ಷಗಳಿಂದ ಸಂಗ್ರಹವಾಗಿರುವ ಹೂಳು, ಡೆಡ್ ಸ್ಟೋರೇಜ್, ಕುಡಿಯುವ ನೀರಿಗಾಗಿ ಕಡ್ಡಾಯವಾಗಿ ಕಾಯ್ದಿರಿಸಬೇಕಾದ ಸಂಗ್ರಹ ಹಾಗೂ ಪರಿಸರ ಸಮತೋಲನಕ್ಕಾಗಿ ಅಗತ್ಯವಾದ ಹರಿವುಗಳನ್ನು ಪರಿಗಣಿಸಿದ ನಂತರವೇ ವಾಸ್ತವವಾಗಿ ಬಳಕೆಗೆ ಲಭ್ಯವಿರುವ ಜೀವಂತ ಸಂಗ್ರಹ (Available Live Storage) ಎಷ್ಟು ಎಂಬುದನ್ನು ವೈಜ್ಞಾ ನಿಕವಾಗಿ ನಿರ್ಧರಿಸಬಹುದು.

ಇದೇ ವಾಸ್ತವಿಕತೆ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೂ ಅನ್ವಯಿಸುತ್ತದೆ. ಈ ಜಲಾಶಯದ ಒಟ್ಟು ವಿನ್ಯಾಸ ಸಂಗ್ರಹ ಸಾಮರ್ಥ್ಯ ಸುಮಾರು 93.47 ಟಿಎಂಸಿ, ಡೆಡ್ ಸ್ಟೋರೇಜ್ ಸುಮಾರು 20 ಟಿಎಂಸಿ ಇದೆ. ಹೀಗಾಗಿ ಇದರ ಸಂಪೂರ್ಣ ಸಂಗ್ರಹ ಸಾಮರ್ಥ್ಯವೂ ಬಳಕೆಗೆ ಲಭ್ಯವಿರುವ ನೀರಲ್ಲ. ಅಲ್ಲಿಯೂ ಹಲವು ದಶಕಗಳಿಂದ ಸಂಗ್ರಹವಾಗಿರುವ ಹೂಳು, ಜೀವಂತ ಸಂಗ್ರಹ ಸಾಮರ್ಥ್ಯದ ಇಳಿಕೆ, ಕಾವೇರಿ ಡೆಲ್ಟಾದ ನೀರಾವರಿ ಅವಶ್ಯಕತೆಗಳು ಹಾಗೂ ಕುಡಿಯುವ ನೀರಿನ ಮೀಸಲುಗಳನ್ನು ಪರಿಗಣಿಸಿದ ನಂತರವೇ ವಾಸ್ತವವಾಗಿ ಲಭ್ಯವಿರುವ ನೀರಿನ ಪ್ರಮಾಣ ನಿರ್ಧರಿಸಬಹುದು. ಆದ್ದರಿಂದ ಇದು ಕಾವೇರಿ ಜಲಾನಯನ ಪ್ರದೇಶವನ್ನು ಹಂಚಿಕೊಂಡಿರುವ ಎರಡೂ ರಾಜ್ಯಗಳು ಎದುರಿಸುತ್ತಿರುವ ಸಾಮಾನ್ಯ ಜಲಸಂಪನ್ಮೂಲ ನಿರ್ವಹಣೆಯ ಸವಾಲು.

ಪುನರುಜ್ಜೀವನಕ್ಕೆ ಮೊದಲ ಆದ್ಯತೆ

ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಕೆ. ಬೋರಯ್ಯ ಹಾಗೂ ಪ್ರಧಾನ ಕಾರ್ಯ ದರ್ಶಿ ಸುನಂದಾ ಜಯರಾಮ್ ಅವರು ಹಲವು ವರ್ಷಗಳಿಂದ ದೂರದೃಷ್ಟಿಯ ಒಂದು ಮಹತ್ವದ ಸಲಹೆಯನ್ನು ಮುಂದಿಟ್ಟಿದ್ದಾರೆ. ಅವರ ಅಭಿಪ್ರಾಯವೆಂದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಹೊಸ ಜಲಾಶಯಗಳು ಅಥವಾ ಹೊಸ ಜಲಸಂಗ್ರಹ ಯೋಜನೆಗಳನ್ನು ನಿರ್ಮಿಸುವ ಬಗ್ಗೆ ಯೋಚಿಸುವ ಮೊದಲು, ಇರುವ ಜಲಸಂಗ್ರಹ ಮೂಲಸೌಕರ್ಯವನ್ನು ಅದರ ಮೂಲ ಸಾಮರ್ಥ್ಯ ಕ್ಕೆ ಸಾಧ್ಯವಾದಷ್ಟು ಮರುಸ್ಥಾಪಿಸಬೇಕು. ಈ ದೃಷ್ಟಿಕೋನವು ಆಧುನಿಕ ಜಲಸಂಪನ್ಮೂಲ ನಿರ್ವಹಣೆಯ ಮೂಲಭೂತ ತತ್ವಗಳಿಗೂ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ.

ಕರ್ನಾಟಕದ ಪ್ರಮುಖ ನಾಲ್ಕು ಜಲಾಶಯಗಳಾದ ಕೃಷ್ಣರಾಜಸಾಗರ (49.45 ಟಿಎಂಸಿ), ಹೇಮಾವತಿ (37.10 ಟಿಎಂಸಿ), ಕಬಿನಿ (19.52 ಟಿಎಂಸಿ) ಹಾಗೂ ಹಾರಂಗಿ (8.50 ಟಿಎಂಸಿ) ಸೇರಿ ಒಟ್ಟು 114.57 ಟಿಎಂಸಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ. ತಮಿಳುನಾಡಿನ ಮೆಟ್ಟೂರು (ಸ್ಟಾನ್ಲಿ) ಜಲಾಶಯದ ಮೂಲ ವಿನ್ಯಾಸ ಸಾಮರ್ಥ್ಯ 93.47 ಟಿಎಂಸಿ. ಈ ಎರಡೂ ರಾಜ್ಯಗಳ ಪ್ರಮುಖ ಜಲಾಶಯಗಳ ಒಟ್ಟು ವಿನ್ಯಾಸ ಸಾಮರ್ಥ್ಯ ಸುಮಾರು 208 ಟಿಎಂಸಿ.

ಆದರೆ ಈ ಸಾಮರ್ಥ್ಯ ಇಂದು ಸಂಪೂರ್ಣವಾಗಿ ಲಭ್ಯವಿದೆ ಎಂದು ಹೇಳಲು ಸಾಧ್ಯವಿಲ್ಲ. ಹಲವು ದಶಕಗಳಿಂದ ಹರಿದು ಬಂದ ಹೂಳು ಜಲಾಶಯಗಳ ತಳಭಾಗದಲ್ಲಿ ಸಂಗ್ರಹವಾಗುತ್ತಾ ಬಂದಿರುವು ದರಿಂದ ಜೀವಂತ ಸಂಗ್ರಹ ಸಾಮರ್ಥ್ಯ ನಿರಂತರವಾಗಿ ಕಡಿಮೆಯಾಗುತ್ತಿದೆ. ಕೇಂದ್ರ ಜಲ ಆಯೋಗ ಹಾಗೂ ವಿವಿಧ ಜಲವಿಜ್ಞಾನ ಅಧ್ಯಯನಗಳು ದೇಶದ ಅನೇಕ ಹಳೆಯ ಜಲಾಶಯಗಳಲ್ಲಿ ಮೂಲ ಸಂಗ್ರಹ ಸಾಮರ್ಥ್ಯದ 10 ರಿಂದ 30 ಶೇಕಡಾ ಹೂಳು ತುಂಬಿರುವುದನ್ನು ದಾಖಲಿಸಿವೆ.

ಈ ನೈಜ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಜಲಾಶಯಗಳ ತಳಭಾಗದ ಆಳಮಾಪನ ಸಮೀಕ್ಷೆ ಅತ್ಯಗತ್ಯ. ಸೋನಾರ್, ಜಿಪಿಎಸ್ ಹಾಗೂ ಇತರ ಆಧುನಿಕ ತಂತ್ರಜ್ಞಾನಗಳ ಮೂಲಕ ನಡೆಸುವ ಈ ಸಮೀಕ್ಷೆಯು ಜಲಾಶಯದ ತಳಭಾಗದ ಆಕೃತಿ, ಹೂಳು ಸಂಗ್ರಹದ ಪ್ರಮಾಣ ಹಾಗೂ ಉಳಿದಿರುವ ನೈಜ ಜೀವಂತ ಸಂಗ್ರಹ ಸಾಮರ್ಥ್ಯವನ್ನು ನಿಖರವಾಗಿ ನಿರ್ಧರಿಸುತ್ತದೆ. ದುರದೃಷ್ಟವಶಾತ್, ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಗೆ ಸಂಬಂಧಿಸಿದ ಇತ್ತೀಚಿನ ಸಮಗ್ರ ಸಮೀಕ್ಷಾ ವರದಿಗಳು ಸಾರ್ವಜನಿಕವಾಗಿ ಲಭ್ಯವಿಲ್ಲ.

ಕಾವೇರಿ ಜಲಭದ್ರತೆ ಕೇವಲ ಪ್ರಮುಖ ಜಲಾಶಯಗಳ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ಕೊಡಗಿನ ಮೇಲ್ಕಾವೇರಿ ಪ್ರದೇಶದ ಕೆರೆಗಳು ಮತ್ತು ಅಣೆಕಟ್ಟುಗಳು, ಮಂಡ್ಯದ ಕಾಲುವೆ ವ್ಯಾಪ್ತಿಯ ಟ್ಯಾಂಕ್ ಸರಪಳಿಗಳು, ಮೈಸೂರು, ಹಾಸನ ಹಾಗೂ ಚಾಮರಾಜನಗರ ಜಿ‌ಲ್ಲೆಗಳ ಸಣ್ಣ ನೀರಾವರಿ ಕೆರೆಗಳು, ವಿವಿಧ ಉಪನದಿಗಳ ಮೇಲಿನ ನೂರಾರು ಚೆಕ್‌ಡ್ಯಾಂಗಳು ಸ್ಥಳೀಯ ಜಲಸಂಗ್ರಹ ಹಾಗೂ ಅಂತರ್ಜಲ ಪುನರ್ಭರ್ತಿಗೆ ಮಹತ್ವದ ಕೊಡುಗೆ ನೀಡುತ್ತಿವೆ. ಅದೇ ರೀತಿ ತಮಿಳುನಾಡಿನ ಮೆಟ್ಟೂರು, ಮುಕ್ಕೊಂಬು, ಐತಿಹಾಸಿಕ ಕಲ್ಲಣೈ, ಭವಾನಿಸಾಗರ, ಅಮರಾವತಿ ಹಾಗೂ ಕಾವೇರಿ ಡೆಲ್ಟಾದ ಸಾವಿರಾರು ಸಾಂಪ್ರದಾಯಿಕ ಏರಿ ವ್ಯವಸ್ಥೆಗಳೂ ಸಮಾನ ಪ್ರಾಮುಖ್ಯ ಹೊಂದಿವೆ.

ಸರಕಾರಿ ಅಂದಾಜುಗಳ ಪ್ರಕಾರ ಕರ್ನಾಟಕದ ಸಣ್ಣ ಜಲಸಂಗ್ರಹ ವ್ಯವಸ್ಥೆಗಳು ಸುಮಾರು 10-15 ಟಿಎಂಸಿ, ತಮಿಳುನಾಡಿನ ಏರಿ ಮತ್ತು ಟ್ಯಾಂಕ್ ವ್ಯವಸ್ಥೆಗಳು 40-55 ಟಿಎಂಸಿ ನೀರನ್ನು ಸಂಗ್ರಹಿಸ ಬಲ್ಲವು. ಅಂದರೆ ಎರಡೂ ರಾಜ್ಯಗಳ ಸಣ್ಣ ಜಲಸಂಗ್ರಹ ಮೂಲಸೌಕರ್ಯಗಳು ಸೇರಿ 50-70 ಟಿಎಂಸಿ ಹೆಚ್ಚುವರಿ ಸಂಗ್ರಹ ಸಾಮರ್ಥ್ಯ ಹೊಂದಿವೆ. ಹೀಗಾಗಿ ಪ್ರಮುಖ ಜಲಾಶಯಗಳು ಮತ್ತು ಸಣ್ಣ ಜಲಸಂಗ್ರಹ ವ್ಯವಸ್ಥೆಗಳನ್ನು ಸೇರಿಸಿದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಈಗಾಗಲೇ 250 ಟಿಎಂಸಿಗೂ ಅಧಿಕ ಜಲಸಂಗ್ರಹ ಮೂಲಸೌಕರ್ಯ ಅಸ್ತಿತ್ವದಲ್ಲಿದೆ.

ವೈಜ್ಞಾನಿಕ ಹೂಳು ತೆಗೆಯುವಿಕೆ, ಜಲಾನಯನ ಪ್ರದೇಶ ಸಂರಕ್ಷಣೆ ಮತ್ತು ಮಣ್ಣಿನ ಕೊರೆತ ನಿಯಂತ್ರಣ ಕಾರ್ಯಕ್ರಮಗಳನ್ನು ಸಮನ್ವಯವಾಗಿ ಜಾರಿಗೊಳಿಸಿದರೆ, ಒಟ್ಟಾರೆ 10 ರಿಂದ 20 ಟಿಎಂಸಿ ಹೆಚ್ಚುವರಿ ಜೀವಂತ ಸಂಗ್ರಹ ಸಾಮರ್ಥ್ಯವನ್ನು ಮರುಪಡೆಯುವ ಸಾಧ್ಯತೆ ಇದೆ ಎಂದು ಜಲಸಂಪನ್ಮೂಲ ತಜ್ಞರು ಅಂದಾಜಿಸಿದ್ದಾರೆ. ಸಾಮಾನ್ಯ ವರ್ಷಗಳಲ್ಲಿ ಈ ಪ್ರಮಾಣ ಅಲ್ಪವೆನಿಸ ಬಹುದು; ಆದರೆ ಬರಗಾಲದಲ್ಲಿ ಇದೇ ನೀರು ಲಕ್ಷಾಂತರ ರೈತರ ಬೆಳೆ ಉಳಿಸುವುದಕ್ಕೂ, ಕೋಟ್ಯಂತರ ಜನರ ಕುಡಿಯುವ ನೀರಿನ ಭದ್ರತೆಯನ್ನು ಕಾಪಾಡುವುದಕ್ಕೂ ಮತ್ತು ಪರಿಸರ ಹರಿವುಗಳನ್ನು ನಿರ್ವಹಿಸುವುದಕ್ಕೂ ಅತ್ಯಂತ ಮಹತ್ವದ ಯುಕ್ತಿಯುತ ಜಲ ಮೀಸಲು ಆಗಬಹುದು.

ಹೂಳು ತೆಗೆಯುವಿಕೆ ಕಾರ್ಯಕ್ರಮ

ಈ ಹಿನ್ನೆಲೆಯಲ್ಲಿ ಭಾರತ, ಕರ್ನಾಟಕ, ತಮಿಳುನಾಡು ಸರಕಾರಗಳು ಹಾಗೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಜಂಟಿಯಾಗಿ ರಾಷ್ಟ್ರೀಯ ಕಾವೇರಿ ಜಲಸಂಗ್ರಹ ಪುನರುಜ್ಜೀವನ ಮತ್ತು ಹೂಳು ತೆಗೆಯುವಿಕೆ ಕಾರ್ಯಕ್ರಮ (National Cauvery Reservoir Restoration and Desiltation Programme) ಆರಂಭಿಸುವುದು ಸಮಯೋಚಿತ.

ಈ ಕಾರ್ಯಕ್ರಮದ ಪ್ರಮುಖ ಅಂಶಗಳು: 1. ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಪ್ರಮುಖ ಜಲಾಶಯಗಳು, ಬ್ಯಾರೇಜುಗಳು, ಅಣೆಕಟ್ಟುಗಳು, ನೀರಾವರಿ ಕೆರೆಗಳು, ಚೆಕ್‌ಡ್ಯಾಂಗಳು ಹಾಗೂ ಏರಿ ವ್ಯವಸ್ಥೆಗಳ ಸಮಗ್ರ ತಳಭಾಗದ ಆಳಮಾಪನ ಸಮೀಕ್ಷೆ ನಡೆಸುವುದು. 2. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ಸಂಗ್ರಹ ಸಾಮರ್ಥ್ಯ ಮತ್ತು ಹೂಳು ಸಂಗ್ರಹಣೆಯ ಸಮಗ್ರ ಅಟ್ಲಸ್ ಸಿದ್ಧಪಡಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸುವುದು. 3. ಪ್ರತಿಯೊಂದು ಜಲಸಂಗ್ರಹ ವ್ಯವಸ್ಥೆಗೆ ಮೂಲ ವಿನ್ಯಾಸ ಸಾಮರ್ಥ್ಯ, ಪ್ರಸ್ತುತ ಜೀವಂತ ಸಂಗ್ರಹ, ಡೆಡ್ ಸ್ಟೋರೇಜ್, ಹೂಳು ಸಂಗ್ರಹಣೆಯ ಪ್ರಮಾಣ, ವಾರ್ಷಿಕ ಸಾಮರ್ಥ್ಯ ಕುಸಿತ, ಮರುಪಡೆಯಬಹುದಾದ ಜೀವಂತ ಸಂಗ್ರಹ ಹಾಗೂ ವೆಚ್ಚ-ಲಾಭ ವಿಶ್ಲೇಷಣೆಯನ್ನು ಪ್ರಕಟಿಸುವುದು. 4. ವೆಚ್ಚ-ಲಾಭ ಅನುಪಾತ ಅತ್ಯಧಿಕವಾಗಿರುವ ಜಲಾಶಯಗಳು, ಕೆರೆಗಳು ಮತ್ತು ಏರಿ ವ್ಯವಸ್ಥೆಗಳಿಗೆ ಆದ್ಯತೆ ನೀಡಿ ವೈಜ್ಞಾನಿಕ ಹೂಳು ತೆಗೆಯುವಿಕೆ ಕೈಗೊಳ್ಳುವುದು. 5. ಜಲಾನಯನ ಪ್ರದೇಶ ಸಂರಕ್ಷಣೆ ಮತ್ತು ಪುನಶ್ಚೇತನ ಕಾರ್ಯಕ್ರಮ, ಮಣ್ಣಿನ ಕೊರೆತ ನಿಯಂತ್ರಣ, ವೃಕ್ಷಾರೋಪಣ ಹಾಗೂ ಮಳೆ‌ ನೀರು ಸಂರಕ್ಷಣೆ ಮೂಲಕ ಭವಿಷ್ಯದ ಹೂಳು ಸಂಗ್ರಹಣೆಯನ್ನು ಕಡಿಮೆ ಮಾಡುವುದು. 6. ಪ್ರಮುಖ ಜಲಾಶಯ ಗಳಲ್ಲಿ ಕನಿಷ್ಠ ಐದು ವರ್ಷಗಳಿಗೊಮ್ಮೆ ಮರು ಸಮೀಕ್ಷೆ ನಡೆಸಿ ಸಂಗ್ರಹ ಸಾಮರ್ಥ್ಯದಗುವ ಬದಲಾವಣೆಗಳನ್ನು ದಾಖಲಿಸಿ ಸಾರ್ವಜನಿಕರಿಗೆ ಪ್ರಕಟಿಸುವುದು.

ಈ ರೀತಿಯಾಗಿ ಈಗಿರುವ ಜಲಸಂಗ್ರಹ ಮೂಲಸೌಕರ್ಯವನ್ನು ವೈಜ್ಞಾನಿಕವಾಗಿ ಪುನರುಜ್ಜೀವನ ಗೊಳಿಸಿ ಅದರ ಮೂಲ ಸಾಮರ್ಥ್ಯವನ್ನು ಸಾಧ್ಯವಾದಷ್ಟು ಮರುಸ್ಥಾಪಿಸಲು ಸಾಧ್ಯವಾದರೆ, ಗಮನಾರ್ಹ ಪ್ರಮಾಣದ ಹೆಚ್ಚುವರಿ ನೀರನ್ನು ಸಂಗ್ರಹಿಸುವುದರ ಜೊತೆಗೆ ಹೊಸ ಜಲಾಶಯಗಳ ನಿರ್ಮಾಣದ ಅಗತ್ಯ, ಅವುಗಳ ಆರ್ಥಿಕ ನ್ಯಾಯಸಮ್ಮತತೆ, ಪರಿಸರ ಪರಿಣಾಮ ಮತ್ತು ಸಾಮಾಜಿಕ ವೆಚ್ಚಗಳನ್ನು ಹೆಚ್ಚು ವಾಸ್ತವಿಕ ಹಾಗೂ ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಲು ಸಾಧ್ಯ ವಾಗುತ್ತದೆ. ಇದರಿಂದ ಸಾರ್ವಜನಿಕ ಹಣದ ಸಮರ್ಥ ಬಳಕೆ, ಪರಿಸರ ಸಂರಕ್ಷಣೆ ಮತ್ತು ಅಂತಾ ರಾಜ್ಯ ಜಲಸಂಪನ್ಮೂಲಗಳ ನ್ಯಾಯಯುತ ನಿರ್ವಹಣೆ- ಈ ಮೂರು ಉದ್ದೇಶಗಳೂ ಏಕಕಾಲದಲ್ಲಿ ಸಾಧಿಸಬಹುದು.

ಆದ್ದರಿಂದ ಮೊದಲು ಪುನರುಜ್ಜೀವನ, ನಂತರವೇ ಹೊಸ ಸಂಗ್ರಹ ಎಂಬ ತತ್ವ ಕೇವಲ ತಾಂತ್ರಿಕ ಶಿಫಾರಸ್ಸಲ್ಲ; ಭಾರತದ ಭವಿಷ್ಯದ ಜಲಸಂಪನ್ಮೂಲ ಯೋಜನೆಗಳಿಗೆ ಮಾರ್ಗದರ್ಶಕ ರಾಷ್ಟ್ರೀಯ ನೀತಿಯಾಗಬೇಕು. ಕಾವೇರಿ ಕಣಿವೆಯಲ್ಲಿ ಈ ತತ್ವವನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸಾಧ್ಯ ವಾದರೆ, ಅದು ದೇಶದ ಇತರ ಅಂತಾರಾಜ್ಯ ನದಿ ಜಲಾನಯನ ಪ್ರದೇಶಗಳಿಗೂ ಅನುಕರಣೀಯ ಮಾದರಿಯಾಗಬಹುದು.

ಮೊದಲು ಕುಡಿಯುವ ನೀರು

ಭಾರತದ ರಾಷ್ಟ್ರೀಯ ಜಲ ನೀತಿ ಹಾಗೂ ವಿವಿಧ ನ್ಯಾಯಾಂಗ ತೀರ್ಪುಗಳು ಸ್ಪಷ್ಟವಾಗಿ ಹೇಳುವ ಮೂಲ ತತ್ವವೆಂದರೆ ಮಾನವ ಜೀವ ರಕ್ಷಣೆಗೆ ಅಗತ್ಯವಾದ ಕುಡಿಯುವ ನೀರಿಗೆ ಮೊದಲ ಆದ್ಯತೆ. ಅದಾದ ನಂತರವೇ: ಕೃಷಿ, ಕೈಗಾರಿಕೆ, ವಿದ್ಯುತ್ ಉತ್ಪಾದನೆ ಹಾಗೂ ಇತರ ಬಳಕೆಗಳು.

ಹೀಗಾಗಿ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಕರ್ನಾಟಕದ ನಗರಗಳು ಹಾಗೂ ಗ್ರಾಮಗಳ ಕುಡಿಯುವ ನೀರಿನ ಭದ್ರತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದೇ ರೀತಿ ತಮಿಳುನಾಡಿನ ಜನರ ಕುಡಿಯುವ ನೀರಿನ ಅಗತ್ಯವೂ ಸಮಾನ ಗೌರವಕ್ಕೆ ಪಾತ್ರವಾಗಿದೆ. ಆದ್ದರಿಂದ ಕಾವೇರಿ ಪ್ರಶ್ನೆಯನ್ನು ಕರ್ನಾಟಕ ವಿರುದ್ಧ ತಮಿಳುನಾಡು ಎಂಬ ದೃಷ್ಟಿಯಿಂದ ಅಲ್ಲ, ಮಾನವ ಜೀವನ, ಸಂವಿಧಾನಾ ತ್ಮಕ ಆದ್ಯತೆ ಮತ್ತು ನ್ಯಾಯಸಮ್ಮತ ಜಲ ನಿರ್ವಹಣೆ ಎಂಬ ದೃಷ್ಟಿಯಿಂದ ನೋಡಬೇಕು.

ಕರ್ನಾಟಕದ ಮಂಡ್ಯ ರೈತ ಮಳೆಯ ಕೊರತೆಯಿಂದ ಸಂಕಷ್ಟದಲ್ಲಿದ್ದಾನೆ. ತಮಿಳುನಾಡಿನ ಕಾವೇರಿ ಡೆಲ್ಟಾದ ರೈತನೂ ಅದೇ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾನೆ. ಭಾಷೆ ಬೇರೆ. ರಾಜ್ಯ ಬೇರೆ. ಆದರೆ ರೈತನ ಕಣ್ಣೀರಿಗೆ ಭಾಷೆಯಿಲ್ಲ. ಆದ್ದರಿಂದ ರೈತರನ್ನು ಪರಸ್ಪರ ಎದುರಾಳಿಗಳಂತೆ ಚಿತ್ರಿಸುವ ರಾಜಕೀಯವು ಸಮಸ್ಯೆಯನ್ನು ಪರಿಹರಿಸುವುದಿಲ್ಲ.