ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Mohan Vishwa Column: ಹಿಜಾಬ್:‌ ಇರಾನ್‌ʼನಲ್ಲಿ ಬಂಡಾಯ, ರಾಜ್ಯದಲ್ಲಿ ಮಾನ್ಯತೆ

ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯ ಹಂತದಲ್ಲಿರುವ ಸಮಯದಲ್ಲಿ ಆದೇಶವನ್ನು ಪ್ರಕಟಿಸು ವುದು ಸಂವಿಧಾನ ಬಾಹಿರ ಕೆಲಸ. ಹಿಜಾಬ್ ಜೊತೆಗೆ ಜನಿವಾರ, ರುದ್ರಾಕ್ಷಿ ಮತ್ತು ಶಿವದಾರವನ್ನು ಧರಿಸಬಹುದೆಂಬುದನ್ನು ಆದೇಶದಲ್ಲಿ ಹೇಳಿದೆ. ವಿಚಿತ್ರವೆಂದರೆ ಜನಿವಾರ, ಶಿವದಾರವನ್ನು ಹಿಜಾಬ್‌ ನೊಂದಿಗೆ ತಾಳೆ ಮಾಡುವುದು ದೊಡ್ಡ ತಪ್ಪು. ಜನಿವಾರ ಮತ್ತು ಶಿವದಾರವನ್ನು ದಿನದ 24 ಗಂಟೆ ಧರಿಸಲೇ ಬೇಕು.

ಹಿಜಾಬ್:‌ ಇರಾನ್‌ʼನಲ್ಲಿ ಬಂಡಾಯ, ರಾಜ್ಯದಲ್ಲಿ ಮಾನ್ಯತೆ

-

ವೀಕೆಂಡ್‌ ವಿತ್‌ ಮೋಹನ್

ಶಾಲೆ ಮತ್ತು ಕಾಲೇಜಿನಲ್ಲಿ ಹಿಜಾಬ್ ನಿಷೇಧ ಕುರಿತಂತೆ 2022ರ ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅವಿಭಾಜ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ಅಭಿಪ್ರಾಯಪಟ್ಟಿತು. ಜೊತೆಗೆ ಶಿಕ್ಷಣ ಸಂಸ್ಥೆಗಳು ಸಮವಸ್ತ್ರ ನಿಯಮ ಜಾರಿಗೊಳಿಸುವ ಹಕ್ಕು ಹೊಂದಿವೆ ಎಂದು ಹೇಳಿತು.

ಹೈಕೋರ್ಟ್ ತೀರ್ಪು ಸರ್ಕಾರದ ಆದೇಶವನ್ನು ಮಾನ್ಯಗೊಳಿಸಿತು. ಈ ತೀರ್ಪನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದರು. 2022ರ ಅಕ್ಟೋಬರ್‌ನಲ್ಲಿ ಸರ್ವೋಚ್ಛ ನ್ಯಾಯಾಲಯದ ಇಬ್ಬರು ನ್ಯಾಯಮೂರ್ತಿಗಳ ಪೀಠ ವಿಭಜಿತ ತೀರ್ಪು ನೀಡಿತು.

ಇಬ್ಬರು ನ್ಯಾಯಮೂರ್ತಿಗಳ ಅಭಿಪ್ರಾಯ ಭಿನ್ನವಾಗಿದ್ದರಿಂದ ಪ್ರಕರಣವನ್ನು ದೊಡ್ಡ ಪೀಠಕ್ಕೆ ವರ್ಗಾಯಿಸಲಾಯಿತು, ಇಂದಿಗೂ ವಿಷಯ ವಿಚಾರಣೆಯ ಹಂತದಲ್ಲಿದೆ. ಅಂತಿಮ ತೀರ್ಪು ಬಂದಿಲ್ಲ. ಈ ನಡುವೆ ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಶಾಲಾ ಸಮವಸ್ತ್ರದ ವಿಚಾರದಲ್ಲಿ, ಹಿಜಾಬ್ ಧರಿಸುವುದರ ಕುರಿತು ನಿಲುವು ಬದಲಿಸಿ, ಕರ್ನಾಟಕ ಸರ್ಕಾರದ 2022ರ ಹಿಂದಿನ ಆದೇಶವನ್ನು ಅಧಿಕೃತವಾಗಿ ಹಿಂಪಡೆದು, ಶಾಲೆಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದೆ.

ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯ ಹಂತದಲ್ಲಿರುವ ಸಮಯದಲ್ಲಿ ಆದೇಶವನ್ನು ಪ್ರಕಟಿಸುವುದು ಸಂವಿಧಾನ ಬಾಹಿರ ಕೆಲಸ. ಹಿಜಾಬ್ ಜೊತೆಗೆ ಜನಿವಾರ, ರುದ್ರಾಕ್ಷಿ ಮತ್ತು ಶಿವದಾರವನ್ನು ಧರಿಸಬಹುದೆಂಬುದನ್ನು ಆದೇಶದಲ್ಲಿ ಹೇಳಿದೆ. ವಿಚಿತ್ರವೆಂದರೆ ಜನಿವಾರ, ಶಿವದಾರವನ್ನು ಹಿಜಾಬ್‌ನೊಂದಿಗೆ ತಾಳೆ ಮಾಡುವುದು ದೊಡ್ಡ ತಪ್ಪು. ಜನಿವಾರ ಮತ್ತು ಶಿವದಾರವನ್ನು ದಿನದ 24 ಗಂಟೆ ಧರಿಸಲೇ ಬೇಕು.

ಇದನ್ನೂ ಓದಿ: Mohan Vishwa Column: ಗ್ರೇಟ್‌ ನಿಕೋಬಾರ್:‌ ಸಮುದ್ರಾಧಿಪತ್ಯದ ಮಹಾದ್ವಾರ

ಜನಿವಾರವನ್ನು ವರ್ಷಕ್ಕೊಮ್ಮೆ ಬದಲಾಯಿಸುತ್ತಾರೆ. ಸಾಯುವವರೆಗೂ ಜನಿವಾರ ಮತ್ತು ಶಿವದಾರ ದೇಹದ ಮೇಲೆ ಇರಲೇ ಬೇಕು. ಸತ್ತ ನಂತರ ಧರಿಸುವ ವ್ಯಕ್ತಿಯ ದೇಹದೊಂದಿಗೆ ಅವೂ ಕೂಡ ಮಣ್ಣು ಸೇರುತ್ತವೆ. ಜನಿವಾರ ಮತ್ತು ಶಿವದಾರ ಧರಿಸುವುದು, ಸಂವಿಧಾನದ ಪ್ರಕಾರ ಅಗತ್ಯ ಧರ್ಮದ ಆಚರಣೆಯಾಗಿದೆ. ಆದರೆ ದಿನದ 24 ಗಂಟೆ ‘ಹಿಜಾಬ್’ ಧರಿಸುವುದಿಲ್ಲ. ಹಿಜಾಬನ್ನು ಬದಲಾಯಿಸುತ್ತಿರುತ್ತಾರೆ ಹಾಗಾಗಿ ಹಿಜಾಬ್ ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ. ‌

ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ’Pakistan or Partition of India’ ಕೃತಿಯಲ್ಲಿ ಪರ್ದಾ ಪದ್ಧತಿ ಮತ್ತು ಮಹಿಳೆಯರ ಮೇಲೆ ಅದರ ಪರಿಣಾಮಗಳ ಬಗ್ಗೆ ತೀವ್ರ ಟೀಕೆ ಮಾಡಿದ್ದರು. ಮುಸ್ಲಿಂ ಸಮಾಜದಲ್ಲಿ ಮಹಿಳೆಯರನ್ನು ಪ್ರತ್ಯೇಕಿಸಿ, ಬುರ್ಖಾ ಮತ್ತು ಪರ್ದಾ ವ್ಯವಸ್ಥೆಯ ಮೂಲಕ ಸಮಾಜದಿಂದ ದೂರ ಇಡುವುದು ಮಹಿಳೆಯರ ಸ್ವಾತಂತ್ರ್ಯ ಮತ್ತು ಸಾಮಾಜಿಕ ಬೆಳವಣಿಗೆಗೆ ಹಾನಿಕಾರಕ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಅಂಬೇಡ್ಕರ್ ಅವರು ಪರ್ದಾ ಪದ್ಧತಿಯ ಪರಿಣಾಮವಾಗಿ ಮಹಿಳೆಯರು ಶಿಕ್ಷಣ, ಸಮಾಜ ಮತ್ತು ಸಾರ್ವಜನಿಕ ಬದುಕಿನಿಂದ ದೂರವಾಗುತ್ತಾರೆ ಎಂದು ಬರೆದಿದ್ದರು. ಪುರುಷರು ಮತ್ತು ಮಹಿಳೆ ಯರ ನಡುವಿನ ಸಹಜ ಸಾಮಾಜಿಕ ಸಂಪರ್ಕ ಕಡಿತಗೊಳ್ಳುವುದರಿಂದ ಸಮಾಜದ ನೈತಿಕ ಮತ್ತು ಸಾಮಾಜಿಕ ಆರೋಗ್ಯಕ್ಕೂ ಹಾನಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಭಾರತದ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸಿ ಶಾಲೆ ಮತ್ತು ಕಾಲೇಜಿಗೆ ಬರುತ್ತೇವೆಂದು ವಾದ ಮಾಡುತ್ತಿದ್ದಾರೆ. ಆದರೆ ಅತ್ತ ಇಸ್ಲಾಮಿಕ್ ದೇಶ ಇರಾನ್‌ನಲ್ಲಿ ಮಹಿಳೆಯರು ಹಿಜಾಬ್ ಮತ್ತು ಬುರ್ಖಾ ವಿರುದ್ಧ ದೊಡ್ಡ ಹೋರಾಟವನ್ನು ಮಾಡುತ್ತಾ ಬಂದಿದ್ದಾರೆ. ಇರಾನ್ ಎಂದರೆ ಕಡ್ಡಾಯ ಹಿಜಾಬ್, ಬುರ್ಖಾ, ನೈತಿಕ ಪೊಲೀಸ್ ವ್ಯವಸ್ಥೆ ಮತ್ತು ಕಠಿಣ ಇಸ್ಲಾಮಿಕ್ ಕಾನೂನುಗಳು ನೆನಪಾ ಗುತ್ತವೆ. ಆದರೆ ಕೆಲವು ದಶಕಗಳ ಹಿಂದೆ ಇರಾನ್ ಸಂಪೂರ್ಣ ವಿಭಿನ್ನವಾಗಿತ್ತು. ‌

Hijab

1960 ಮತ್ತು 1970ರ ದಶಕಗಳಲ್ಲಿ ಶಾಹ್ ಮೊಹಮ್ಮದ್ ರೆಜಾ ಪಹ್ಲವಿ ಆಡಳಿತದ ಕಾಲದಲ್ಲಿ ಇರಾನ್ ಪಶ್ಚಿಮ ಏಷ್ಯಾದ ಅತ್ಯಂತ ಆಧುನಿಕ ರಾಷ್ಟ್ರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿತ್ತು. ತೆಹ್ರಾನ್‌ನಂತಹ ನಗರಗಳಲ್ಲಿ ಮಹಿಳೆಯರು ಕಾಲೇಜುಗಳಿಗೆ ತೆರಳುತ್ತಿದ್ದರು, ವೈದ್ಯರು, ವಕೀಲರು, ಪ್ರಾಧ್ಯಾಪಕರು ಮತ್ತು ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರು. ಪಾಶ್ಚಾತ್ಯ ಶೈಲಿಯ ಉಡುಪು ಧರಿಸುವುದು ಸಾಮಾನ್ಯವಾಗಿತ್ತು. ಹಿಜಾಬ್ ಧರಿಸುವುದು ವೈಯಕ್ತಿಕ ಆಯ್ಕೆಯಾಗಿತ್ತು; ಅದು ಸರ್ಕಾರದ ಕಡ್ಡಾಯ ನಿಯಮವಾಗಿರಲಿಲ್ಲ.

1963ರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಗಿತ್ತು. ಕುಟುಂಬ ಕಾನೂನುಗಳ ಮೂಲಕ ವಿಚ್ಛೇದನ ಮತ್ತು ಮಕ್ಕಳ ಪಾಲನೆ ವಿಷಯಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಹಕ್ಕುಗಳು ಸಿಕ್ಕಿದ್ದವು. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ವೇಗವಾಗಿ ಹೆಚ್ಚುತ್ತಿತ್ತು. ಆದರೆ ಈ ಪಾಶ್ಚಾತ್ಯೀಕರಣವನ್ನು ಧಾರ್ಮಿಕ ಕಠೋರಪಂಥೀಯರು ತೀವ್ರವಾಗಿ ವಿರೋಧಿಸಿ, ಅಲ್ಲಿನ ಮಹಿಳೆಯರು ಪಾಶ್ಚಾತ್ಯ ಸಂಸ್ಕೃತಿಗೆ ಶರಣಾಗಿzರೆಂದು ಆರೋಪಿಸಿದ್ದರು.

1979ರಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿ ಇರಾನ್‌ನ ರಾಜಕೀಯ ಮತ್ತು ಸಾಮಾಜಿಕ ಚಿತ್ರಣವನ್ನೇ ಬದಲಿಸಿತು. ಶಾಹ್ ಸರ್ಕಾರ ಪತನಗೊಂಡ ಬಳಿಕ ಆಯತೊ ಖೊಮೇನಿ ನೇತೃತ್ವದಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸ್ಥಾಪನೆಯಾಯಿತು. ಅದರ ನಂತರ ಮಹಿಳೆಯರ ಮೇಲೆ ಕಠಿಣ ಧಾರ್ಮಿಕ ನಿಯಮಗಳು ಜಾರಿಯಾದವು. ಹಿಜಾಬ್ ಕಡ್ಡಾಯವಾಯಿತು,‌ ಲಿಂಗ ಪ್ರತ್ಯೇಕತೆ ಹೆಚ್ಚಿಸಲಾಯಿತು.

ಗಷ್ಟ್-ಎ-ಇರ್ಷಾದ್ ಎಂಬ ನೈತಿಕ ಪೊಲೀಸ್ ಪಡೆ ಮಹಿಳೆಯರ ಉಡುಪು, ವರ್ತನೆ ಮತ್ತು ಸಾರ್ವಜನಿಕ ಜೀವನದ ಮೇಲೆ ನಿಗಾವಹಿಸಲು ಆರಂಭಿಸಿತು. ತಲೆಯ ಕೂದಲು ಕಾಣಿಸಿದರೂ ಅಥವಾ ಸರಿಯಾಗಿ ಹಿಜಾಬ್ ಧರಿಸಿಲ್ಲ ಎಂಬ ಆರೋಪಕ್ಕೂ ಮಹಿಳೆಯರನ್ನು ಬಂಽಸಲಾಗುತ್ತಿತ್ತು.

ವರ್ಷಗಳ ಕಾಲ ಈ ಕಠಿಣ ನಿಯಮಗಳ ವಿರುದ್ಧ ಜನರ ಅಸಮಾಧಾನ ಒಳಗೊಳಗೆ ಕುದಿಯುತ್ತಿತ್ತು. ಆದರೆ 2022ರ ಸೆಪ್ಟೆಂಬರ್‌ನಲ್ಲಿ ನಡೆದ ಒಂದು ಘಟನೆ ಇಡೀ ದೇಶವನ್ನು ಸಿಡಿಲಿನಂತೆ ನಡುಗಿಸಿತು. 22 ವರ್ಷದ ಮಹ್ಸಾ ಅಮಿನಿ ಅವರನ್ನು ತೆಹ್ರಾನ್‌ನಲ್ಲಿ ನೈತಿಕ ಪೊಲೀಸರು ಸರಿಯಾಗಿ ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಬಂಧಿಸಿದರು. ಕೆಲವೇ ಗಂಟೆಗಳ ಬಳಿಕ ಅವರು ಪೊಲೀಸ್ ವಶದಲ್ಲಿ‌ ದ್ದಾಗ ಮೃತಪಟ್ಟರು. ಮಾನವ ಹಕ್ಕು ಸಂಘಟನೆಗಳು ಅವರು ಹಗೆ ಒಳಗಾಗಿದ್ದರು ಎಂದು ಆರೋಪಿಸಿದರೆ, ಇರಾನ್ ಸರ್ಕಾರ ಅದನ್ನು ನಿರಾಕರಿಸಿತು. ಆದರೆ ಮಹ್ಸಾ ಅಮಿನಿ ಸಾವು ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಯಿತು.

ಮಹಿಳೆಯರು ಬೀದಿಗೆ ಇಳಿದು ತಮ್ಮ ಹಿಜಾಬ್‌ಗಳನ್ನು ಸಾರ್ವಜನಿಕವಾಗಿ ಸುಟ್ಟರು, ಅನೇಕರು ತಮ್ಮ ಕೂದಲನ್ನು ಕತ್ತರಿಸಿ ಪ್ರತಿಭಟಿಸಿದರು. ಮಹಿಳೆ, ಜೀವನ, ಸ್ವಾತಂತ್ರ್ಯ ಎಂಬ ಘೋಷಣೆ ಇಡೀ ದೇಶದಲ್ಲಿ ಮೊಳಗತೊಡಗಿತು. ಆರಂಭದಲ್ಲಿ ಹಿಜಾಬ್ ವಿರೋಧಿ ಹೋರಾಟವಾಗಿ ಕಾಣಿಸಿಕೊಂಡ ಈ ಚಳವಳಿ ಬೇಗನೆ ಆಡಳಿತ ವಿರೋಧಿ ಜನಾಂದೋಲನವಾಗಿ ರೂಪಾಂತರಗೊಂಡಿತು. ಪ್ರತಿಭಟನಾಕಾರರು ಸುಪ್ರೀಂ ನಾಯಕ ಆಯತೊ ಅಲಿ ಖಮೇನಿ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು.

ವಿಶ್ವವಿದ್ಯಾಲಯ ವಿದ್ಯಾರ್ಥಿಗಳು, ಮಹಿಳಾ ಹೋರಾಟಗಾರರು, ಕಾರ್ಮಿಕರು ಮತ್ತು ಯುವಕರು ಆಡಳಿತದ ವಿರುದ್ಧ ತೆರೆದ ಹೋರಾಟಕ್ಕೆ ಇಳಿದರು, 160ಕ್ಕೂ ಹೆಚ್ಚು ನಗರಗಳಿಗೆ ಪ್ರತಿಭಟನೆ ವ್ಯಾಪಿಸಿತು. ಈ ಹೋರಾಟವನ್ನು ಹತ್ತಿಕ್ಕಲು ಇರಾನ್ ಸರ್ಕಾರ ಭಾರೀ ಬಲಪ್ರಯೋಗ ನಡೆಸಿತು.

ಮಾನವ ಹಕ್ಕು ಸಂಸ್ಥೆಗಳ ಅಂದಾಜು ಪ್ರಕಾರ 500ಕ್ಕೂ ಹೆಚ್ಚು ಪ್ರತಿಭಟನಾಕಾರರು ಸಾವನ್ನಪ್ಪಿ ದರು. ಸುಮಾರು 70 ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. 20000 ರಿಂದ 22000 ಜನರನ್ನು ಬಂಧಿಸಲಾಯಿತು. ಸಾವಿರಾರು ವಿದ್ಯಾರ್ಥಿಗಳು, ಪತ್ರಕರ್ತರು ಮತ್ತು ಮಹಿಳಾ ಹೋರಾಟಗಾರರು ಜೈಲಿಗೆ ಸೇರಿದರು.

ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವುದು, ಪೊಲೀಸ್ ದಾಳಿ, ಗುಂಡಿನ ದಾಳಿ ಮತ್ತು ನಿಗಾ ವ್ಯವಸ್ಥೆ ಹೆಚ್ಚಿಸಲಾಯಿತು. ಕೆಲವರನ್ನು ತ್ವರಿತ ವಿಚಾರಣೆ ಬಳಿಕ ಮರಣದಂಡನೆಗೂ ಒಳಪಡಿಸಲಾಯಿತು.

ಮಾನವ ಹಕ್ಕು ಸಂಘಟನೆಗಳು ಈ ಕ್ರಮಗಳನ್ನು ಭಯ ಹುಟ್ಟಿಸುವ ರಾಜಕೀಯ ದಮನ ಎಂದು ಆರೋಪಿಸಿವೆ. ಇರಾನ್‌ನಲ್ಲಿ ಹಿಜಾಬ್ ಕುರಿತ ಹೋರಾಟ ಈಗ ಕೇವಲ ಉಡುಪು ಕುರಿತ ವಿವಾದ ವಲ್ಲ. ಅದು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸರ್ಕಾರದ ನಿಯಂತ್ರಣದ ನಡುವಿನ ಸಂಘರ್ಷವಾಗಿದೆ.

ಮಹಿಳಾ ಹಕ್ಕುಗಳ ವಿರುದ್ಧ ಧಾರ್ಮಿಕ ಕಠಿಣತೆ, ಜನತಂತ್ರ ವಿರುದ್ಧ ಸರ್ವಾಧಿಕಾರ ಎಂಬ ದೊಡ್ಡ ರಾಜಕೀಯ ಪ್ರಶ್ನೆಗಳ ಸಂಕೇತವಾಗಿ ಅದು ಪರಿಣಮಿಸಿದೆ. ಇಂದಿಗೂ ಅನೇಕ ಇರಾನ್ ಮಹಿಳೆಯ ರು ಸಾರ್ವಜನಿಕವಾಗಿ ಹಿಜಾಬ್ ಧರಿಸದೆ ಕಾಣಿಸಿಕೊಳ್ಳುತ್ತಿದ್ದಾರೆ.

ಇದು ಸರ್ಕಾರದ ಧಾರ್ಮಿಕ ನಿಯಂತ್ರಣಕ್ಕೆ ನೇರ ಸವಾಲಾಗಿದೆ. ಭಾರೀ ದಮನದ ನಡುವೆಯೂ ಯುವಜನತೆ ಮತ್ತು ಮಹಿಳೆಯರಲ್ಲಿ ಸ್ವಾತಂತ್ರ್ಯದ ಬೇಡಿಕೆ ಮತ್ತಷ್ಟು ಬಲವಾಗಿದೆ. ತೆಹ್ರಾನ್‌ನ ಬೀದಿಗಳಲ್ಲಿ ಹಿಜಾಬ್ ಸುಟ್ಟ ಮಹಿಳೆಯರ ಚಿತ್ರಗಳು ಆಧುನಿಕ ಮಧ್ಯಪ್ರಾಚ್ಯದ ಅತ್ಯಂತ ಪ್ರಭಾವಿ ರಾಜಕೀಯ ಸಂಕೇತಗಳಲ್ಲಿ ಒಂದಾಗಿ ಉಳಿದಿವೆ. ಆದರೆ ಕರ್ನಾಟಕದಲ್ಲಿ ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದು ನಮ್ಮ ಧಾರ್ಮಿಕ ಹಕ್ಕೆಂದು ಮಾಧ್ಯಮಗಳ ಮುಂದೆ ಬಂದು ಪತ್ರಿಕಾಗೋಷ್ಠಿ ಮಾಡುತ್ತಿದ್ದಾರೆ.

ಮುಸ್ಲಿಂ ಸಂಘಟನೆಗಳು ಅವರಿಗೆ ಸಾಥ್ ನೀಡುತ್ತಿವೆ. ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ‘ಮುಸ್ಲಿಂ ಪರ್ಸನಲ್ ಬೋರ್ಡ್’. ದುರಂತವೆಂದರೆ ಇಸ್ಲಾಮಿಕ್ ದೇಶ ಇರಾನ್‌ನಲ್ಲಿ ಮಹಿಳೆಯರು ಹಿಜಾಬ್ ಧರಿಸುವುದರಿಂದ ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆಯೆಂದು ಹೋರಾಟ ಮಾಡುತ್ತಿದ್ದರೆ, ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ ಭಾರತದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಶಾಲೆಯಲ್ಲಿ ಹಿಜಾಬ್ ಧರಿಸಲು ಅವಕಾಶ ಕೇಳುತ್ತಿದ್ದಾರೆ.