Ravi Sajangadde Column: ಡೇಟಾ ಸೆಂಟರ್ʼಗಳು ಮತ್ತು ನೀರಿಗಾಗಿ ಹಾಹಾಕಾರ
ಎಐ ‘ಚಾಟ್ಬಾಟ್’ಗಳಿಗೆ ನಾವು ನೀಡುವ ಒಂದು ಸಣ್ಣ ‘ಪ್ರಾಂ’ನ ಹಿನ್ನೆಲೆಯಲ್ಲಿ ನಡೆಯುವ ಅಗಾಧ ಕಂಪ್ಯೂಟಿಂಗ್ ಪ್ರಕ್ರಿಯೆಯು ಪರಿಸರದ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಗಳ ‘ಬಯೋಡೇಟಾ’ ಇಲ್ಲಿದೆ! ಇತ್ತೀಚಿನ ವಿವಿಧ ಸಂಶೋಧನಾ ವರದಿಗಳ ಪ್ರಕಾರ, ಜಗತ್ತಿನಾದ್ಯಂತ ಸಕ್ರಿಯವಾಗಿರುವ ಸುಮಾರು 12000ಕ್ಕೂ ಅಧಿಕ ಡೇಟಾ ಸೆಂಟರ್ಗಳ ಪೈಕಿ ಬಹುಪಾಲು ಸೆಂಟರ್ಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಸ್ಥಾಪಿತವಾಗಿವೆ.
-
ತಂತ್ರ ಕ್ರಾಂತಿ
ರವೀ ಸಜಂಗದ್ದೆ
ವಿಕಾಸವಾದ ಮತ್ತು ಅಭಿವೃದ್ಧಿ ಎನ್ನುವುದು ನಿರಂತರ ಹರಿಯುವ ನದಿ ನೀರಿನಂತೆ. ಕಾಲಾಂತರ ದಲ್ಲಿ ವಿವಿಧ ಆವಿಷ್ಕಾರಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿ ವಿಚಾರದಲ್ಲಿ ಮಾನವ ಬಹಳಷ್ಟು ಸಾಧನೆ ಮಾಡಿ ಮುಂದಡಿ ಇಡುತ್ತಿದ್ದಾನೆ. ಮನುಷ್ಯರ ಆಲೋಚನೆ ಮತ್ತು ಪ್ರಾವೀಣ್ಯಕ್ಕೆ ಎಣೆಯಿಲ್ಲ. ಆಧುನಿಕ ತಂತ್ರಜ್ಞಾನದ ಇತಿಹಾಸದಲ್ಲಿ 1990ರ ದಶಕದ ಇಂಟರ್ನೆಟ್ ಕ್ರಾಂತಿ ಹಾಗೂ 2000ರ ದಶಕದ ಮೊಬೈಲ್ ಆವಿಷ್ಕಾರದ ನಂತರದ ಸ್ಥಾನವನ್ನು ಮಾಹಿತಿ ತಂತ್ರಜ್ಞಾನ ಮತ್ತು ‘ಕೃತಕ ಬುದ್ಧಿಮತ್ತೆ (ಎಐ) ಯುಗ’ ಆಕ್ರಮಿಸಿಕೊಂಡಿದೆ, ಆವರಿಸಿಕೊಂಡಿದೆ!
ದಿನನಿತ್ಯದ ಕಚೇರಿ ಕೆಲಸಗಳಿಂದ ಹಿಡಿದು ವೈದ್ಯಕೀಯ ಸಂಶೋಧನೆಗಳವರೆಗೆ... ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಎಐ ಅನಿವಾರ್ಯ ಎನಿಸುವಷ್ಟು ಪ್ರಭಾವ-ಅವಲಂಬನೆ ಹೊಂದಿರುವುದು ಡಿಜಿಟಲ್ ಕ್ರಾಂತಿಯ ವೇಗವನ್ನು ಸಾರುತ್ತದೆ. ಈ ತಂತ್ರಜ್ಞಾನದ ಬೆಳವಣಿಗೆಯ ಜೊತೆಜೊತೆಯ ಜಗತ್ತಿನ ಹಲವಾರು ಕಡೆಗಳಲ್ಲಿ ತಲೆ ಎತ್ತುತ್ತಿರುವ ಬೃಹತ್ ಡೇಟಾ ಸೆಂಟರ್ ಗಳು ತೀವ್ರವಾದ ಪರಿಸರ ಸಂಘರ್ಷ, ಸಂಪನ್ಮೂಲ ಗಳ ಕೊರತೆ ಮತ್ತು ಗಂಭೀರ ಮಟ್ಟದ ಹವಾಮಾನ ಸವಾಲು ಗಳನ್ನು ಹುಟ್ಟುಹಾಕಿವೆ.
ಎಐ ‘ಚಾಟ್ಬಾಟ್’ಗಳಿಗೆ ನಾವು ನೀಡುವ ಒಂದು ಸಣ್ಣ ‘ಪ್ರಾಂ’ನ ಹಿನ್ನೆಲೆಯಲ್ಲಿ ನಡೆಯುವ ಅಗಾಧ ಕಂಪ್ಯೂಟಿಂಗ್ ಪ್ರಕ್ರಿಯೆಯು ಪರಿಸರದ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಗಳ ‘ಬಯೋಡೇಟಾ’ ಇಲ್ಲಿದೆ! ಇತ್ತೀಚಿನ ವಿವಿಧ ಸಂಶೋಧನಾ ವರದಿಗಳ ಪ್ರಕಾರ, ಜಗತ್ತಿನಾದ್ಯಂತ ಸಕ್ರಿಯವಾಗಿರುವ ಸುಮಾರು 12000ಕ್ಕೂ ಅಧಿಕ ಡೇಟಾ ಸೆಂಟರ್ಗಳ ಪೈಕಿ ಬಹುಪಾಲು ಸೆಂಟರ್ಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಸ್ಥಾಪಿತವಾಗಿವೆ.
ಇದನ್ನೂ ಓದಿ: Ravi Sajangadde Column: ಅರಾಜಕತೆಯ ಕಾಡ್ಗಿಚ್ಚು: ಭಾರತ ಸುರಕ್ಷಿತವೆ ?
ಅಮೆರಿಕಾದಲ್ಲಿ ಬರೋಬ್ಬರಿ 5400ಕ್ಕೂ ಹೆಚ್ಚು ಡೇಟಾ ಸೆಂಟರ್ಗಳಿದ್ದು, ಜಾಗತಿಕ ಮಾರುಕಟ್ಟೆ ಯನ್ನು ನಿಯಂತ್ರಿಸುತ್ತಿವೆ. ಜರ್ಮನಿ (529), ಇಂಗ್ಲೆಂಡ್ (523) ಹಾಗೂ ಚೀನಾ (449) ಕ್ರಮವಾಗಿ ಮುಂದಿನ ಸ್ಥಾನಗಳಲ್ಲಿವೆ. ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳೂ ಈ ಮೂಲಸೌಕರ್ಯ ವಿಸ್ತರಣೆಯಲ್ಲಿ ತೊಡಗಿವೆ. ಸದ್ಯದ ಲಭ್ಯವಿರುವ ವಿವರಗಳ ಪ್ರಕಾರ, ಭಾರತದಲ್ಲಿ ಪೂರ್ಣ ಪ್ರಮಾಣದ ಎಐ ಡೇಟಾ ಸೆಂಟರ್ಗಳು ಇನ್ನೂ ಇಲ್ಲ. ಸಾಮಾನ್ಯ ಡೇಟಾ ಸೆಂಟರ್ಗಳ ಲೆಕ್ಕದಲ್ಲಿ ಸುಮಾರು 360ರಷ್ಟು ಸಂಖ್ಯೆಯ ಅಧಿಕೃತ ಡೇಟಾ ಸೆಂಟರ್ಗಳು ಕಾರ್ಯಾಚರಣೆಯಲ್ಲಿದ್ದು, ಮುಂಬೈ, ಚೆನ್ನೈ, ಬೆಂಗಳೂರು, ನೋಯ್ಡಾ ಮತ್ತು ಹೈದರಾಬಾದ್ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮಿವೆ.
ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ಮೆಟಾದಂತಹ ದೈತ್ಯ ಸಂಸ್ಥೆಗಳು ನಿರ್ಮಿಸುತ್ತಿರುವ ‘ಹೈಪರ್ಸ್ಕೇಲ್’ ಕೇಂದ್ರಗಳು ಜಾಗತಿಕ ಮಟ್ಟದಲ್ಲಿ ಸಂಪನ್ಮೂಲಗಳ ಅಸಮತೋಲನಕ್ಕೆ, ವಿದ್ಯುತ್ ಕೊರತೆಗೆ, ತಾಪಮಾನ ಏರಿಕೆಗೆ ಮತ್ತು ನೀರಿನ ತತ್ವಾರಕ್ಕೆ ಕಾರಣವಾಗಿವೆ. ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ (ಐಇಎ) ವರದಿಗಳ ಪ್ರಕಾರ, ಜಾಗತಿಕ ವಿದ್ಯುತ್ ಬಳಕೆಯ ಶೇಕಡಾ 1.5ರಿಂದ 2ರಷ್ಟು (ಸುಮಾರು 415ರಿಂದ 485 ಟೆರಾವಾಟ) ವಿದ್ಯುತ್ ಡೇಟಾ ಸೆಂಟರ್ಗಳ ನಿರ್ವಹಣೆಗೆ ಉಪಯೋಗವಾಗುತ್ತಿದೆ.
ಇದು ಜರ್ಮನಿಯಂತಹ ಇಡೀ ದೇಶದ ವಾರ್ಷಿಕ ವಿದ್ಯುತ್ ಉತ್ಪಾದನೆಗೆ ಸಮ! ಅಮೆರಿಕಾದಂತಹ ದೇಶಗಳಲ್ಲಿ ಒಟ್ಟು ವಿದ್ಯುತ್ ಬಳಕೆಯ ಶೇಕಡಾ 5ರಷ್ಟು ಡೇಟಾ ಸೆಂಟರ್ಗಳ ನಿರ್ವಹಣೆಗೆ ಬಳಕೆ ಯಾಗುತ್ತಿದೆ. ವರ್ಜೀನಿಯಾದಂತಹ ರಾಜ್ಯಗಳಲ್ಲಿ ಈ ವಿದ್ಯುತ್ ಬಳಕೆಯ ಪ್ರಮಾಣ ಶೇಕಡಾ 25ನ್ನು ದಾಟಿದೆ. ಐರ್ಲೆಂಡ್ನಲ್ಲಿ ರಾಷ್ಟ್ರೀಯ ಗ್ರಿಡ್ನ ಶೇಕಡಾ 20ಕ್ಕೂ ಹೆಚ್ಚು ಭಾಗ ಇವುಗಳ ಪಾಲಾಗಿದೆ.
ಭಾರತದಲ್ಲಿ ಡೇಟಾ ಸೆಂಟರ್ ಗಳಿಗೆ ಬಳಸುವ ವಿದ್ಯುತ್ ಪ್ರಮಾಣ ದೇಶದ ಒಟ್ಟು ಬಳಕೆಯ 1.25%ದಷ್ಟು ಎಂದು ಸದ್ಯದ ಅಂದಾಜು. ಎಐ ತಂತ್ರಜ್ಞಾನದ ಅತಿವೇಗದ ಬೆಳವಣಿಗೆಯಿಂದಾಗಿ 2030ರ ವೇಳೆಗೆ ಡೇಟಾ ಸೆಂಟರ್ಗಳಿಗೆ ಬೇಕಾದ ವಿದ್ಯುತ್ ಬೇಡಿಕೆ ಪ್ರಮಾಣ ಹಲವು ಪಟ್ಟು ಏರಿಕೆ ಆಗುವ ನಿರೀಕ್ಷೆಯಿದೆ. ಪ್ರಪಂಚದ ಹೆಚ್ಚಿನ ಕಡೆಗಳಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಜಾಲ ಗಳನ್ನು ಅವಲಂಬಿಸಿರುವುದರಿಂದ, ಈ ಕೇಂದ್ರಗಳ ಇಂಧನ ಬೇಡಿಕೆಯು ನೇರವಾಗಿ ಇಂಗಾಲದ ಹೊರಸೂಸುವಿಕೆ ಮತ್ತು ಜಾಗತಿಕ ತಾಪಮಾನ ಏರಿಕೆಗೆ ಪರೋಕ್ಷವಾಗಿ ಕಾರಣವಾಗುತ್ತಿದೆ.
ಡೇಟಾ ಸೆಂಟರ್ಗಳಲ್ಲಿ 24/7 ಆವರ್ತನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷಾಂತರ ಸರ್ವರ್ ಗಳಿಂದ ಬಿಡುಗಡೆಯಾಗುವ ಅಪಾರ ಉಷ್ಣತೆಯನ್ನು ನಿಯಂತ್ರಿಸಿ, ಅಲ್ಲಿನ ವಾತಾವರಣ ತಂಪಾಗಿಸಲು ಅಗಾಧ ಪ್ರಮಾಣದ ನೀರಿನ ಅವಶ್ಯಕತೆಯಿದೆ. ಈ ಡೇಟಾ ಸೆಂಟರ್ಗಳು ಅಗಾಧ ಪ್ರಮಾಣದಲ್ಲಿ ನೀರನ್ನು ಬಳಸುತ್ತವೆ. ಈ ನೀರಿನ ಬಳಕೆಯಲ್ಲಿ ಎರಡು ವಿಧ. ಮೊದಲನೆಯದು ‘ನೇರ ನೀರಿನ ಬಳಕೆ’. ಸರ್ವರ್ ಗಳನ್ನು ನೇರವಾಗಿ ತಂಪಾಗಿಸಲು ಬಳಸುವ ನೀರು. ಕೂಲಿಂಗ್ ಟವರ್ಗಳಲ್ಲಿ ಆವಿಯಾಗುವ ನೀರಿನ ಪರಮಾಣವೂ ಈ ರೀತಿಯ ಬಳಕೆಯಲ್ಲಿ ಸೇರಿಕೊಂಡಿದೆ. ಎರಡನೆಯದು ‘ಪರೋಕ್ಷ ನೀರಿನ ಬಳಕೆ’.
ಈ ಡೇಟಾ ಸೆಂಟರ್ಗಳಿಗೆ ವಿದ್ಯುತ್ ಪೂರೈಸುವ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಬಳಕೆಯಾಗುವ ನೀರು. ಮಾಹಿತಿಗಳ ಪ್ರಕಾರ ಮಧ್ಯಮ ಗಾತ್ರದ ಒಂದು ಡೇಟಾ ಸೆಂಟರ್ ವಾರ್ಷಿಕವಾಗಿ 11 ಕೋಟಿ ಗ್ಯಾಲನ್ಗಳಿಗೂ ಅಧಿಕ ಪ್ರಮಾಣದ ಶುದ್ಧ ನೀರನ್ನು ಬಳಸುತ್ತದೆ, ಇದು ಸುಮಾರು 50000 ಜನಸಂಖ್ಯೆಯುಳ್ಳ ಪ್ರದೇಶದ ವಾರ್ಷಿಕ ನೀರಿನ ಬಳಕೆಗೆ ಸಮ!
ಬೆಂಗಳೂರು ಮತ್ತು ಚೆನ್ನೈನಂತಹ ಈಗಾಗಲೇ ತೀವ್ರ ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ನಗರಗಳಲ್ಲಿ ಹೆಚ್ಚು ಹೆಚ್ಚು ಡೇಟಾ ಸೆಂಟರ್ಗಳು ಸ್ಥಾಪನೆಯಾದರೆ ಒಟ್ಟಾರೆಯಾಗಿ ಇದು ಸ್ಥಳೀಯ ಜನಜೀವನಕ್ಕೆ ತೊಂದರೆಯಾಗಿ ನೀರಿನ ಬೇಡಿಕೆ ಮತ್ತು ಪೂರೈಕೆಯಲ್ಲಿ ದೊಡ್ಡ ವ್ಯತ್ಯಾಸ ಉಂಟಾಗಿ ಖಂಡಿತಾ ಅಲ್ಲೋ ಲಕಲ್ಲೋಲ ಸೃಷ್ಟಿಯಾಗಲಿದೆ.
ಡೇಟಾ ಸೆಂಟರ್ಗಳ ನಿರ್ವಹಣೆಗೆ ನೀರಿನ ಅಗಾಧ ಪ್ರಮಾಣದ ಬಳಕೆಯ ಕುರಿತು ಕ್ರಾಸ್ ಡಿಪೆಂಡೆನ್ಸಿ ಇನಿಷಿಯೇಟಿವ್ ಹೆಸರಿನ ಸಂಸ್ಥೆಯ ವರದಿಯು ಬಹಳ ಕಳವಳಕಾರಿ ಸಂಗತಿಗಳನ್ನು ಮುನ್ನಲೆಗೆ ತಂದಿದೆ. ಉದ್ದೇಶಿತ ಡೇಟಾ ಸೆಂಟರ್ಗಳು ಎದುರಿಸಲಿರುವ ಹವಾಮಾನ ಅಪಾಯದ ದೃಷ್ಟಿಯಿಂದ ಭಾರತವು ಜಾಗತಿಕವಾಗಿ 11ನೇ ಸ್ಥಾನದಲ್ಲಿದೆ. ಭಾರತದ ಪ್ರಮುಖ ತಂತ್ರಜ್ಞಾನ ಕೇಂದ್ರಗಳು ಮತ್ತು ಡೇಟಾ ಸೆಂಟರ್ಗಳು ಇರುವ ತಮಿಳುನಾಡು, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳು ಅತಿಯಾದ ತಾಪಮಾನ ಏರಿಕೆಯಾಗಿ, ದೈನಂದಿನ ಕಾರ್ಯಾಚರಣೆ ಮತ್ತು ನಿತ್ಯ ಜೀವನದಲ್ಲಿ ಅಡಚಣೆ ಎದುರಿಸಲಿರುವ ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶಗಳ ಪಟ್ಟಿಯ ಮೊದಲ 30ರಲ್ಲಿ ಸ್ಥಾನ ಪಡೆದಿವೆ!
ಜಾಗತಿಕವಾಗಿ ಅಂದಾಜು ಶೇಕಡಾ 79ರಷ್ಟು ಡೇಟಾ ಸೆಂಟರ್ಗಳ ಸಾಮರ್ಥ್ಯವು ದೀರ್ಘಕಾಲೀನ ಹವಾಮಾನ ಒತ್ತಡಗಳ ವ್ಯಾಪ್ತಿಯಲ್ಲಿದೆ. ಸರ್ವರ್ ರೂಮ್ಗಳಿಂದ ಹೊರಬರುವ ಬಿಸಿಗಾಳಿಯು ಸ್ಥಳೀಯವಾಗಿ ಉಷ್ಣಾಂಶವನ್ನು ಹೆಚ್ಚಿಸುವುದಲ್ಲದೆ, ಇಂಥಾ ದೀರ್ಘಕಾಲದ ತೀವ್ರ ಉಷ್ಣತೆಯಿಂದಾಗಿ ಉಪಕರಣಗಳ ಕಾರ್ಯಕ್ಷಮತೆ ಕುಗ್ಗಿ, ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಂಭವವಿದೆ. ಮನುಕುಲದ ಒಳ್ಳೆಯ ಉದ್ದೇಶ, ಉಪಯೋಗಕ್ಕೆಂದು ಸ್ಥಾಪಿತವಾದ ಈ ರೀತಿಯ ಡೇಟಾ ಸೆಂಟರ್ ಗಳು ಪ್ರಕೃತಿ, ಪರಿಸರ ಮತ್ತು ಜನರ ಬದುಕನ್ನು ಮತ್ತಷ್ಟು ದುಸ್ತರಗೊಳಿಸುವು ದರಲ್ಲಿ ಅನುಮಾನವಿಲ್ಲ!
ಇನ್ನು ‘ಇಂಥಾ ಡೇಟಾ ಸೆಂಟರ್ಗಳು ಆರ್ಥಿಕವಾಗಿ ಬಹಳ ಅನುಕೂಲ ಕಲ್ಪಿಸುತ್ತವೆ, ಹಲವಾರು ಉದ್ಯೋಗಾವಕಾಶಗಳೂ ಬರಲಿವೆ’ ಎನ್ನುವುದು ಮತ್ತೊಂದು ವಾದ. ನಮ್ಮೆದುರು ಇರುವ ವಿವರ ಗಳನ್ನು ಅವಲೋಕಿಸಿದಾಗ ವಾಸ್ತವದಲ್ಲಿ ಇವು ಕೇವಲ ಎಐ ಸರ್ವರ್ಗಳನ್ನು ಹೊಂದಿರುವ ಬೃಹತ್ ಗೋದಾಮುಗಳು, ಅಷ್ಟೇ!
ಇಲ್ಲಿ ಯಾವುದೇ ನಿರಂತರ ತಂತ್ರಜ್ಞಾನ ಅಭಿವೃದ್ಧಿ ಅಥವಾ ಸ್ಥಳೀಯರಿಗೆ ಕೌಶಲ್ಯ ತರಬೇತಿ ನಡೆಸಲಾಗುವುದಿಲ್ಲ! ಸೀಮಿತ ಸಂಖ್ಯೆಯ ತಾಂತ್ರಿಕ ಸಿಬ್ಬಂದಿಗಳು, ಸುರಕ್ಷತಾ ಸಿಬ್ಬಂದಿ ಮತ್ತು ಸ್ವಚ್ಛತಾ ಸಿಬ್ಬಂದಿಗಳಷ್ಟೇ ಇದನ್ನು ನಿರ್ವಹಿಸಲು ಬೇಕಾಗುತ್ತಾರೆ. ಅಮೆರಿಕಾ, ಯುರೋಪ್ ಸೇರಿದಂತೆ ಜಗತ್ತಿನಾದ್ಯಂತ ಡೇಟಾ ಸೆಂಟರ್ಗಳ ವಿರುದ್ಧ ಸ್ಥಳೀಯರು ಪ್ರತಿರೋಧ ವ್ಯಕ್ತಪಡಿಸು ತ್ತಿದ್ದಾರೆ.
2025ರಲ್ಲಿ ಸ್ಥಳೀಯ ವಿರೋಧದಿಂದಾಗಿ ಸುಮಾರು 152 ಬಿಲಿಯನ್ ಡಾಲರ್ ಮೌಲ್ಯದ ಡೇಟಾ ಸೆಂಟರ್ ಯೋಜನೆಗಳು ಅಮೆರಿಕಾದಲ್ಲಿ ಸ್ಥಗಿತಗೊಂಡವು. ಕಳೆದ ಶನಿವಾರ/ಆದಿತ್ಯವಾರ ಯುರೋಪಿನ ಪ್ರಮುಖ ನಗರಗಳಲ್ಲಿ ಜನರು ಈ ಎಐ ಡೇಟಾ ಸೆಂಟರ್ಗಳ ಸ್ಥಾಪನೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ಸ್ಕಾಟ್ಲೆಂಡ್ ರಾಜಧಾನಿ ಎಡಿನ್ಬಗ್ ನಲ್ಲಿ ಸಾವಿರಾರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
‘ದಿನನಿತ್ಯದ ಬಳಕೆಗೆ ಮತ್ತು ಕುಡಿಯಲು ನೀರು ಉಳಿಸುವುದು ನಮಗೆ ಮುಖ್ಯ. ಇರುವ ನೀರನ್ನು ಡಾಟಾ ಸೆಂಟರ್ಗಳ ನಿರ್ವಹಣೆಗೆ ಬಳಸಿದರೆ, ಬಾಯಾರಿಕೆಯಾದಾಗ ನಿಮ್ಮ ಡೇಟಾವನ್ನು ಕುಡಿಯಲು ಸಾಧ್ಯವೇ?’ ‘ನಮ್ಮ ನೀರು, ನಮ್ಮ ಹಕ್ಕು, ನಮ್ಮ ಪರಿಸರ ಮತ್ತು ಜೀವನದಿಂದ ತೊಲಗಿ’ ಎಂಬ ವಿವಿಧ ಭಿತ್ತಿಪತ್ರಗಳನ್ನು ಹಿಡಿದು, ಮೆರವಣಿಗೆ ನಡೆಸಿ ಈ ಡೇಟಾ ಸೆಂಟರ್ಗಳ ಕುರಿತ ತಮ್ಮ ಆಕ್ರೋಶ ಹೊರಹಾಕಿದರು. ಇನ್ನು ಈ ವಿಚಾರವಾಗಿ ಭಾರತದಲ್ಲಿ ಸನ್ನಿವೇಶ ಹೇಗಿದೆ ಎಂದು ಅರಿಯೋಣ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ಅಂಕಾಪಲ್ಲಿ ಜಿಲ್ಲೆಗಳಲ್ಲಿ ಗೂಗಲ್-ಅದಾನಿ ಯೋಜನೆಗಳ ವಿರುದ್ಧ ಸ್ಥಳೀಯರು ಮತ್ತು ಪರಿಸರ ಹೋರಾಟಗಾರರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.
ಕುಡಿಯುವ ನೀರಿನ ಮೂಲಗಳಿಗೆ ಹಾಗೂ ಅರಣ್ಯಗಳಿಗೆ ಧಕ್ಕೆಯಾಗುವ ಆತಂಕವಿದ್ದರೂ, ಸರ್ಕಾರಗಳು ಈ ಯೋಜನೆಗಳಿಗೆ ವಿದ್ಯುತ್ ಹಾಗೂ ನೀರಿನ ಸಬ್ಸಿಡಿ ನೀಡಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ರಿಲಾಯ-ಮೆಟಾದ ಜಾಮ್ನಗರ ಯೋಜನೆ ಹಾಗೂ ನವಿ ಮುಂಬೈ ವಿಸ್ತರಣೆಗಳಿಗೂ ಸ್ಥಳೀಯ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ದತ್ತಾಂಶ ಕೇಂದ್ರಗಳಿಂದ ದೇಶದ ಜನರಿಗೆ ಗರಿಷ್ಠ ಪ್ರಯೋಜನ ದೊರೆಯುವಂತೆ ಮಾಡಲು ಕಾರ್ಯತಂತ್ರ ರೂಪಿಸುವುದಾಗಿ ಸರ್ಕಾರಗಳು ಹೇಳಿಕೊಂಡಿದ್ದರೂ, ಸ್ಥಳೀಯರು ಮಾತ್ರ ತಮ್ಮ ಪ್ರದೇಶದಲ್ಲಿ ಇಂಥಾ ಡೇಟಾ ಸೆಂಟರ್ಗಳ ಸ್ಥಾಪನೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಜಗತ್ತಿನ ಹಲವೆಡೆ ಇದೇ ಪರಿಸ್ಥಿತಿ ಮತ್ತು ಪ್ರತಿರೋಧ ವ್ಯಕ್ತವಾಗುತ್ತಿದೆ. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ವೇಗವನ್ನು ನಿರ್ಲಕ್ಷಿಸಿ ಆಧುನಿಕ ಜಗತ್ತಿನ ಮುನ್ನಡೆ ಅಸಾಧ್ಯವೆನ್ನುವುದು ಸತ್ಯ. ಅಂತೆಯೇ ಪ್ರಕೃತಿಯನ್ನು ಬಲಿ ತೆಗೆದುಕೊಂಡು ಅಭಿವೃದ್ಧಿ ಸಾಧಿಸುವುದು ಅಷ್ಟೇ ವಿನಾಶಕಾರಿ! ಈ ಬಿಕ್ಕಟ್ಟಿಗೆ ಪರಿಹಾರವಾಗಿ ನವೀನ ಮಾದರಿಯ ‘ಹಸಿರು ದತ್ತಾಂಶ ಕೇಂದ್ರಗಳು’ ಅಥವಾ ತತ್ಸಮಾನ ಪ್ರಕೃತಿಗೆ ಕನಿಷ್ಠ ತೊಂದರೆ ಉಂಟು ಮಾಡುವ ಆವಿಷ್ಕಾರ ಮತ್ತು ಪರಿಕಲ್ಪನೆಯನ್ನು ಅಳವಡಿಸಿ ಕೊಳ್ಳುವುದು ಅನಿವಾರ್ಯ ಮತ್ತು ಅದು ನಮ್ಮ ಸಾಮಾಜಿಕ ಜವಾಬ್ದಾರಿಯೂ ಹೌದು.
ಇನ್ನು ಎಐ ಡೇಟಾ ಸೆಂಟರ್ಗಳ ಅತಿಯಾದ ವಿದ್ಯುತ್ ಮತ್ತು ನೀರಿನ ಬಳಕೆಯನ್ನು ಕಡಿಮೆ ಮಾಡಲು ಸಂಶೋಧಕರು ಅಗ್ಗದ ಡಿಯೋನೈ ನೀರು ಮತ್ತು ಕುದಿಯುವ ವಿಶೇಷ ಕೂಲಂಟ್ ಹನಿಗಳನ್ನು ಸಂಯೋಜಿಸುವ ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಇನ್ನೂ ಪ್ರಯೋಗದ ಹಂತದಲ್ಲಿದ್ದು, ಹಾಗೇನಾದರೂ ಈ ಆವಿಷ್ಕಾರ ಯಶಸ್ವಿ ಎನಿಸಿದರೆ ಡೇಟಾ ಸೆಂಟರ್ ನಿರ್ವಹಣೆಯಲ್ಲಿ ನೀರಿನ ಬಳಕೆಯ ಪ್ರಮಾಣ ಗಣನೀಯವಾಗಿ ತಗ್ಗಲಿದೆ.
ಚೀನಾ ದೇಶ ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಮುದ್ರದ ನೀರಿನೊಳಗೆ ಈ ಡೇಟಾ ಸೆಂಟರ್ಗಳ ಸ್ಥಾಪನೆ, ನಿರ್ವಹಣೆಯ ಕುರಿತಾದ ಸಾಧ್ಯಾಸಾಧ್ಯತೆಗಳನ್ನು ಅವಲೋಕಿಸು ತ್ತಿದೆಯಂತೆ! ಅಬ್ಬಾ! ಹೀಗೆ ಮುಂದುವರಿದರೆ ಸಮುದ್ರದ ನೀರೂ ಬಿಸಿನೀರಾಗಿ ಮಾರ್ಪಾಡಾಗಿ ಜಾಗತಿಕ ತಾಪಮಾನ ಮತ್ತಷ್ಟು ಏರಿಕೆ ಆಗಲಿದೆ!
ಸೌರ ಮತ್ತು ಪವನ ವಿದ್ಯುತ್ನಂತಹ ನವೀಕರಿಸಬಹುದಾದ ಇಂಧನಗಳ ಬಳಕೆ, ಆಧುನಿಕ ಲಿಕ್ವಿಡ್ ಕೂಲಿಂಗ್ ತಂತ್ರಜ್ಞಾನಗಳು (ಎನ್ವಿಡಿಯಾ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಕಡಿಮೆ ನೀರು ಬೇಡುವ ನೂತನ ತಂತ್ರಜ್ಞಾನಗಳು), ಗಾಳಿಯಲ್ಲಿನ ತೇವಾಂಶ ಉಪಯೋಗಿಸಿ ಡೇಟಾ ಸೆಂಟರ್ಗಳ ತಾಪಮಾನ ನಿರ್ವಹಿಸುವ ವ್ಯವಸ್ಥೆ ಮತ್ತು ನೀರಿನ ಕಟ್ಟುನಿಟ್ಟಾದ ಮರುಬಳಕೆ ನೀತಿಗಳನ್ನು ಸರ್ಕಾರಗಳು ಕಡ್ಡಾಯಗೊಳಿಸಬೇಕು. ಆಗ ಮಾತ್ರ ಪರಿಸರ ಮತ್ತು ನಾಗರಿಕತೆಯ ಮೇಲಿನ ಹೊರೆ ಮತ್ತು ವಾತಾವರಣ ಕಲುಷಿತವಾಗುವುದನ್ನು ಕನಿಷ್ಠಗೊಳಿಸಲು ಸಾಧ್ಯ.
ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಲು ಮತ್ತು ಅದರ ಅನಿರೀಕ್ಷಿತ ದುಷ್ಪರಿಣಾಮ ಗಳನ್ನು ಮುಂಚಿತವಾಗಿಯೇ ಅವಲೋಕಿಸಿ ತಡೆಗಟ್ಟಲು ಸಾಧ್ಯವಾಗುವ ಎಐ ತಂತ್ರಜ್ಞಾನ ಇನ್ನೂ ನಿರ್ಮಾಣ ಆದಂತಿಲ್ಲ! ಎಐಗೆ ಪ್ರಾಂಪ್ಟ್ಗಳನ್ನು ನೀಡಿ ನಮಗೆ ಬೇಕಾದ ವಿವರ, ಮಾಹಿತಿ, ಉತ್ತರ ಪಡೆದುಕೊಳ್ಳುವ ನಾವು, ಪ್ರಕೃತಿಯನ್ನು ಉಳಿಸಿಕೊಳ್ಳಲು ಅಗತ್ಯವಿರುವ ಪರಿಸರಸ್ನೇಹಿ ಕ್ರಮಗಳನ್ನು ತುರ್ತಾಗಿ ಕಾರ್ಯರೂಪಕ್ಕೆ ತರಬೇಕಿದೆ. ಹಾಗಾದೀತೇ!?