Raghava Sharma Nidle Column: ಬಿಜೆಪಿ-ಅಕಾಲಿದಳ: ಮರುಮದುವೆ ಇಬ್ಬರಿಗೂ ಅನಿವಾರ್ಯ
2027ರ ಫೆಬ್ರವರಿ ತಿಂಗಳ ರಾಜ್ಯ ವಿಧಾನಸಭಾ ಚುನಾವಣೆಗೆ ಪಂಜಾಬ್ನ ರಾಜಕೀಯ ಪಕ್ಷಗಳು ಸಜ್ಜಾಗುತ್ತಿದ್ದು, ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ ಮತ್ತೆ ಮೈತ್ರಿ ಮಾಡಿಕೊಳ್ಳುವ ಮಾತುಕತೆ ಗಳು ಅಂತಿಮ ಹಂತದಲ್ಲಿವೆ. ಕೇಂದ್ರ ಸರ್ಕಾರದ 2020ರ ಕೃಷಿ ಕಾಯ್ದೆಗಳ ವಿವಾದದ ಹಿನ್ನೆಲೆ ಯಲ್ಲಿ ಮುರಿದು ಬಿದ್ದಿದ್ದ ಸುಮಾರು 24 ವರ್ಷಗಳ ರಾಜಕೀಯ ಸಂಬಂಧದ ಮರು ಸ್ಥಾಪನೆ ಬಹುತೇಕ ಖಚಿತವಾಗಿದೆ.
-
ಜನಪಥ
2027ರ ಫೆಬ್ರವರಿ ತಿಂಗಳ ರಾಜ್ಯ ವಿಧಾನಸಭಾ ಚುನಾವಣೆಗೆ ಪಂಜಾಬ್ನ ರಾಜಕೀಯ ಪಕ್ಷಗಳು ಸಜ್ಜಾಗುತ್ತಿದ್ದು, ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ ಮತ್ತೆ ಮೈತ್ರಿ ಮಾಡಿಕೊಳ್ಳುವ ಮಾತುಕತೆ ಗಳು ಅಂತಿಮ ಹಂತದಲ್ಲಿವೆ. ಕೇಂದ್ರ ಸರ್ಕಾರದ 2020ರ ಕೃಷಿ ಕಾಯ್ದೆಗಳ ವಿವಾದದ ಹಿನ್ನೆಲೆ ಯಲ್ಲಿ ಮುರಿದು ಬಿದ್ದಿದ್ದ ಸುಮಾರು 24 ವರ್ಷಗಳ ರಾಜಕೀಯ ಸಂಬಂಧದ ಮರು ಸ್ಥಾಪನೆ ಬಹುತೇಕ ಖಚಿತವಾಗಿದೆ.
ಪಂಜಾಬ್ನ 117 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 47-48 ಸ್ಥಾನಗಳಲ್ಲಿ ತಾನು ಸ್ಪರ್ಧಿಸುತ್ತೇನೆ ಎಂದು ಬಿಜೆಪಿ ಪ್ರತಿಪಾದಿಸಿದೆ. ಮೈತ್ರಿಕೂಟದಲ್ಲಿ 24 ವರ್ಷಗಳ ಕಾಲ ಹಿರಿಯಣ್ಣನಾಗಿದ್ದ ಶಿರೋಮಣಿ ಅಕಾಲಿ ದಳ, ರಾಜಕೀಯವಾಗಿ ದುರ್ಬಲಗೊಂಡಿದ್ದರೂ ಬಿಜೆಪಿಯೊಂದಿಗೆ ಚೌಕಾಶಿ ಮುಂದುವರಿಸಿದೆ.
ಬರುವ ಗುರುನಾನಕ್ ಜಯಂತಿಯ ಆಸುಪಾಸಿನಲ್ಲಿ ಮೈತ್ರಿ ಘೋಷಣೆಯಾಗುವ ಲಕ್ಷಣಗಳಿವೆ. ಹಾಗೆ ನೋಡಿದರೆ, ರಾಜ್ಯ ರಾಜಕಾರಣದಲ್ಲಿ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಬಿಜೆಪಿ-ಎಸ್ಎಡಿ ಎರಡೂ ಪಕ್ಷಗಳಿಗೆ ಈ ಮೈತ್ರಿ ಅನಿವಾರ್ಯ ಎನ್ನುವುದು ವಾಸ್ತವ. ಕೆಲ ದಿನಗಳ ಹಿಂದೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯ್ದ ಪತ್ರಕರ್ತರಿಗಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಸೇರಿ ಪ್ರಮುಖರು ದೀಪಾವಳಿ ಮಿಲನ ಕಾರ್ಯಕ್ರಮ ಆಯೋಜಿಸಿದ್ದರು.
ಪತ್ರಕರ್ತರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದ ನಾಯಕರು, ಅಕಾಲಿದಳದೊಂದಿಗೆ ಮೈತ್ರಿ ಸಾಧ್ಯತೆಯ ಸುಳಿವು ನೀಡಿದ್ದರು. 2022ರ ರಾಜ್ಯ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆಯನ್ನು ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಎರಡೂ ಪಕ್ಷಗಳಿಗೆ, ಫಲಿತಾಂಶ ಹೊರಬಿದ್ದ ನಂತರ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿಯನ್ನು ಎದುರಿಸಲು ತಮ್ಮಿಬ್ಬರ ರಾಜಕೀಯ ಒಗ್ಗೂಡುವಿಕೆ ಎಷ್ಟರಮಟ್ಟಿಗೆ ಅನಿವಾರ್ಯ ಎನ್ನುವುದು ಅರ್ಥವಾಗಿದೆ.
ಇದನ್ನೂ ಓದಿ: Raghava Sharma Nidle Column: ಮೇಲ್ವರ್ಗದ ಮುನಿಸು: ಬಿಜೆಪಿಗೆ ಅಗ್ನಿಪರೀಕ್ಷೆ !
ಶಿರೋಮಣಿ ಅಕಾಲಿದಳಕ್ಕೆ ಇದು ಹಿರಿಯ ನಾಯಕ ಪ್ರಕಾಶ್ ಸಿಂಗ್ ಬಾದಲ್ ಅನುಪಸ್ಥಿತಿಯಲ್ಲಿ (2023ರಲ್ಲಿ ನಿಧನ) ಎದುರಿಸುತ್ತಿರುವ ಮೊದಲ ವಿಧಾನಸಭೆ ಚುನಾವಣೆ. ಪಕ್ಷದ ವಿವಿಧ ಬಣಗಳನ್ನು ಒಗ್ಗೂಡಿಸಿಕೊಂಡು ಮುನ್ನಡೆಸುವಲ್ಲಿ ಪ್ರಕಾಶ್ ಸಿಂಗ್ ಬಾದಲ್ ಹೊಂದಿದ್ದ ಸಾಮರ್ಥ್ಯವನ್ನು ಅವರ ಪುತ್ರ ಸುಖಬೀರ್ ಸಿಂಗ್ ಬಾದಲ್ಗೆ ಇನ್ನೂ ಅದೇ ಮಟ್ಟದಲ್ಲಿ ಪ್ರದರ್ಶಿಸಲು ಸಾಧ್ಯವಾದಂತಿಲ್ಲ.
2022ರ ವಿಧಾನಸಭಾ ಚುನಾವಣೆಯಲ್ಲಿ ಅಕಾಲಿದಳದಿಂದ ಕೇವಲ 3 ಶಾಸಕರು ಆಯ್ಕೆಯಾ ಗಿದ್ದರು. ಅವರಲ್ಲಿ ಒಬ್ಬರು ಆಮ್ ಆದ್ಮಿ ಪಕ್ಷಕ್ಕೆ ಹಾಗೂ ಮತ್ತೊಬ್ಬರು ವಾರಿಸ್ ಪಂಜಾಬ್ ದೇ ಸಂಘಟನೆಗೆ ಸೇರ್ಪಡೆಯಾಗಿರುವುದರಿಂದ ಪಕ್ಷದ ವಿಧಾನಸಭಾ ಪ್ರಾತಿನಿಧ್ಯ ಈಗ ಮತ್ತಷ್ಟು ದುರ್ಬಲಗೊಂಡಿದೆ. ಮಾಲ್ವಾ ಪ್ರದೇಶದ ಕೆಲ ಕ್ಷೇತ್ರಗಳನ್ನು ಹೊರತುಪಡಿಸಿದರೆ, ಪಕ್ಷದಲ್ಲಿ ಎರಡನೇ ಹಂತದ ಪ್ರಭಾವಿ ನಾಯಕರ ಕೊರತೆಯೂ ಕಂಡುಬರುತ್ತಿದೆ. 1997ರಲ್ಲಿ ಅಕಾಲಿ ದಳಕ್ಕೆ ಸ್ವಂತ ಬಹುಮತವಿದ್ದಾಗ ಬಿಜೆಪಿ ಜೊತೆ ಅಧಿಕಾರ ಹಂಚಿಕೊಂಡಿದ್ದ ಪ್ರಕಾಶ್ ಸಿಂಗ್ ಬಾದಲ್ ಅವರ ರಾಜಕೀಯ ಪರಿಸ್ಥಿತಿಗೂ, 2026ರಲ್ಲಿ ಮೈತ್ರಿ ಕುರಿತು ಮಾತುಕತೆ ನಡೆಸುತ್ತಿರುವ ಸುಖಬೀರ್ ಸಿಂಗ್ ಬಾದಲ್ ಅವರ ಹಾಲಿ ಪರಿಸ್ಥಿತಿಗೂ ಮಹತ್ವದ ವ್ಯತ್ಯಾಸವಿದೆ.
ಅಂದು ಅಕಾಲಿದಳ ಬಲಿಷ್ಠ ಪ್ರಾದೇಶಿಕ ಪಕ್ಷವಾಗಿತ್ತು. ಈಗ, 2022ರ ವಿಧಾನಸಭಾ ಚುನಾವಣೆ ಯಲ್ಲಿ ಕೇವಲ ಮೂರು ಸ್ಥಾನಗಳನ್ನು ಗೆದ್ದ ಹಿನ್ನೆಲೆ, ಸಂಘಟನೆಯನ್ನು ಪುನಾರಚಿಸುವ ಸವಾಲನ್ನು ಎದುರಿಸುತ್ತಿದೆ. ಮತ್ತೊಂದೆಡೆ ಬಿಜೆಪಿ, 2024ರ ಲೋಕಸಭಾ ಚುನಾವಣೆಯಲ್ಲಿ ತನ್ನ ಮತಗಳಿಕೆಯನ್ನು ಹೆಚ್ಚಿಸಿಕೊಂಡಿದ್ದರೂ ಪಂಜಾಬ್ನಲ್ಲಿ ಯಾವುದೇ ಲೋಕಸಭಾ ಸ್ಥಾನ ಗೆಲ್ಲಲಿಲ್ಲ.
1996-97ರ ಪಂಜಾಬ್ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ, ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ ಎರಡಕ್ಕೂ ಮೈತ್ರಿ ಮಾಡಿಕೊಳ್ಳಲು ಬಲವಾದ ರಾಜಕೀಯ ಅಗತ್ಯಗಳಿದ್ದವು. ಅದು ಎರಡೂ ಪಕ್ಷಗಳ ಅಸ್ತಿತ್ವಕ್ಕೇ ಅನಿವಾರ್ಯವಾಗಿತ್ತು ಎನ್ನುವುದಕ್ಕಿಂತ, ಪರಸ್ಪರ ರಾಜಕೀಯ ಉದ್ದೇಶಗಳನ್ನು ಸಾಧಿಸಲು ಅನುಕೂಲಕರವಾಗಿತ್ತು.
ಅಕಾಲಿ ದಳಕ್ಕೆ ಸಾಂಪ್ರದಾಯಿಕ ಸಿಖ್ ಮತದಾರರ ಹೊರತಾಗಿ ನಗರ ಪ್ರದೇಶದ ಹಿಂದೂ ಮತದಾರರ ಬೆಂಬಲ ಪಡೆಯುವುದು, ಕಾಂಗ್ರೆಸ್ ವಿರುದ್ಧ ವಿಶಾಲ ರಾಜಕೀಯ ಒಕ್ಕೂಟ ನಿರ್ಮಿಸು ವುದು, ಖಲಿಸ್ತಾನ್ ಉಗ್ರವಾದದ ನಂತರ ಪಂಜಾಬ್ ನಲ್ಲಿ ಹಿಂದೂ-ಸಿಖ್ ಸಾಮರಸ್ಯದ ಸಂದೇಶ ನೀಡುವುದು, ಕೇಂದ್ರ ಸರ್ಕಾರದೊಂದಿಗೆ ಉತ್ತಮ ರಾಜಕೀಯ ಸಂಪರ್ಕ ಬೆಳೆಸುವುದು ಮುಖ್ಯವಾಗಿತ್ತು.
ಬಿಜೆಪಿಗೆ ಪಂಜಾಬ್ನ ಗ್ರಾಮೀಣ ಪ್ರದೇಶಗಳಲ್ಲಿ ಅಕಾಲಿದಳದ ಸಂಘಟನಾ ಬಲದ ನೆರವು ಪಡೆಯುವುದು, ಕಾಂಗ್ರೆಸ್ ವಿರುದ್ಧ ಮತಗಳ ವಿಭಜನೆ ಕಡಿಮೆ ಮಾಡುವುದು, ಸಿಖ್ ಪ್ರಾದೇಶಿಕ ಪಕ್ಷದೊಂದಿಗೆ ಸಹಕಾರದ ಮೂಲಕ ರಾಜಕೀಯ ವ್ಯಾಪ್ತಿಯನ್ನು ವಿಸ್ತರಿಸುವುದು, ರಾಷ್ಟ್ರಮಟ್ಟ ದಲ್ಲಿ ಮಿತ್ರಪಕ್ಷಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಆದ್ಯತೆಯಾಗಿತ್ತು.
ಅಕಾಲಿದಳದ ಗ್ರಾಮೀಣ ಬೆಂಬಲ ಮತ್ತು ಬಿಜೆಪಿಯ ನಗರ ಪ್ರದೇಶದ ಬೆಂಬಲ ಪರಸ್ಪರ ಪೂರಕ ವಾಗಿದ್ದವು. ಈ ಮತದಾರರ ನೆಲೆಗಳು ಸಂಪೂರ್ಣವಾಗಿ ಪ್ರತ್ಯೇಕವಾಗಿರಲಿಲ್ಲವಾದರೂ, ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಚುನಾವಣಾ ಸಹಕಾರದ ಅವಕಾಶ ದೊರೆಯಿತು. ಎರಡೂ ಪಕ್ಷಗಳು ಮೊದಲ ಬಾರಿಗೆ ಮೈತ್ರಿಕೂಟದ ಮೂಲಕ ಚುನಾವಣೆ ಎದುರಿಸಿದ್ದು 1997ರಲ್ಲಿ. ಆ ಚುನಾವಣೆಯಲ್ಲಿ ಅಕಾಲಿದಳ ಏಕಾಂಗಿಯಾಗಿಯೇ 75 ಸ್ಥಾನಗಳನ್ನು ಗೆದ್ದಿತ್ತು. ಸರ್ಕಾರ ರಚನೆಗೆ 59 ಸ್ಥಾನಗಳು ಸಾಕಾಗಿದ್ದವು. ಅಕಾಲಿದಳಕ್ಕೆ ಬಿಜೆಪಿಯ ಬೆಂಬಲ ಅನಿವಾರ್ಯವಾಗಿರಲಿಲ್ಲ. ಆದರೂ ಎರಡೂ ಪಕ್ಷಗಳು ಮೈತ್ರಿಯನ್ನು ಮುಂದುವರಿಸಿದವು.
ಬಿಜೆಪಿ-ಅಕಾಲಿದಳ ಮೈತ್ರಿಯ ಐತಿಹಾಸಿಕ ಬೇರುಗಳು 1960-70ರ ದಶಕಗಳಲ್ಲಿದ್ದರೂ, ಅದರ ಆಧುನಿಕ ರೂಪಕ್ಕೆ 1996ರಲ್ಲಿ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಕ್ಕೆ ನೀಡಿದ ಬೇಷರತ್ ಬೆಂಬಲ ಪ್ರಮುಖ ತಿರುವಾಯಿತು. ವಾಜಪೇಯಿ-ಅಡ್ವಾಣಿ ಅವರ ಮೈತ್ರಿ ರಾಜಕಾರಣ ಮತ್ತು ಬಾದಲ್ ಅವರ ಪಂಜಾಬ್ ಕೇಂದ್ರಿತ ರಾಜಕೀಯ ಕಾರ್ಯತಂತ್ರಗಳು 1997ರ ಮೈತ್ರಿ ಸರ್ಕಾರದಲ್ಲಿ ಒಂದಾದವು.
ಮೈತ್ರಿಯ ಬೇರುಗಳು 1996ಕ್ಕಿಂತಲೂ ಹಿಂದಿನವು. ಬಿಜೆಪಿಯ ಪೂರ್ವರೂಪವಾದ ಭಾರತೀಯ ಜನಸಂಘ ಮತ್ತು ಶಿರೋಮಣಿ ಅಕಾಲಿದಳ 1960-70ರ ದಶಕಗಳಲ್ಲಿ ಕಾಂಗ್ರೆಸ್ ವಿರೋಧಿ ರಾಜಕೀಯದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದವು. 1977ರಲ್ಲಿ ತುರ್ತು ಪರಿಸ್ಥಿತಿಯ ನಂತರ ರೂಪುಗೊಂಡ ಜನತಾ ಪಕ್ಷದ ರಾಜಕೀಯ ವ್ಯವಸ್ಥೆಯಲ್ಲಿಯೂ ಎರಡೂ ಪಕ್ಷಗಳ ನಾಯಕರ ನಡುವೆ ಸಹಕಾರವಿತ್ತು. ಆದರೆ 1980ರ ದಶಕದಲ್ಲಿ ಪಂಜಾಬ್ ಉಗ್ರವಾದ, ಆಪರೇಷನ್ ಬ್ಲೂಸ್ಟಾರ್ ಮತ್ತು 1984ರ ಸಿಖ್ ವಿರೋಧಿ ಹಿಂಸಾಚಾರದ ಪರಿಣಾಮ ರಾಜಕೀಯ ಪರಿಸ್ಥಿತಿ ಬದಲಾಯಿತು.
1990ರ ದಶಕದ ಮಧ್ಯಭಾಗದಲ್ಲಿ ಪಂಜಾಬ್ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ, ಪ್ರಕಾಶ್ ಸಿಂಗ್ ಬಾದಲ್ ಅವರು ಸಿಖ್ ಸಮುದಾಯದ ಹೊರತಾಗಿ ಇತರೆ ಸಮುದಾಯಗಳ ವಿಶಾಲ ಜನಬೆಂಬಲ ಪಡೆಯುವ ರಾಜಕೀಯ ಕಾರ್ಯತಂತ್ರಕ್ಕೆ ಮುಂದಾದರು. ಅಕಾಲಿದಳದ ನಾಯಕರು 1993ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸಿಖ್ ಮತದಾರರಿಗೆ ಬಿಜೆಪಿಯನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದು ಮಹತ್ವ ಪಡೆದುಕೊಂಡಿತ್ತು.
ನಂತರ ದೆಹಲಿಯ ಬಿಜೆಪಿ ಸರ್ಕಾರ ಪಂಜಾಬಿ ಭಾಷೆಯನ್ನು ಎರಡನೇ ಭಾಷೆಯಾಗಿ ಘೋಷಿಸಿದ್ದು ಮತ್ತು 1984ರ ಸಿಖ್ ವಿರೋಧಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರಗಳನ್ನು ತೆಗೆದುಕೊಂಡಿದ್ದು ಎರಡೂ ಪಕ್ಷಗಳ ಮನಸ್ಸು ಗಳನ್ನು ಮತ್ತಷ್ಟು ಸನಿಹಗೊಳಿಸಿತ್ತು.
1996ರ ಲೋಕಸಭಾ ಚುನಾವಣೆಯಲ್ಲಿ ಅಕಾಲಿದಳವು ಕಾನ್ಶಿರಾಮ್ ನೇತೃತ್ವದ ಬಹುಜನ ಸಮಾಜ ಪಕ್ಷದೊಂದಿಗೆ (ಬಿಎಸ್ಪಿ) ಚುನಾವಣಾ ಹೊಂದಾಣಿಕೆ ಮಾಡಿಕೊಂಡಿತ್ತು. ಆದರೆ ಚುನಾವಣೆಯ ನಂತರ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ಪ್ರಕಾಶ್ ಸಿಂಗ್ ಬಾದಲ್ ಅವರು ವಾಜಪೇಯಿ ಸರ್ಕಾರಕ್ಕೆ ಬೇಷರತ್ ಬೆಂಬಲ ಘೋಷಿಸಿದರು. ಈ ನಿರ್ಧಾರ ಬಿಎಸ್ಪಿ ನಾಯಕರಿಗೆ ಅಚ್ಚರಿ ಉಂಟುಮಾಡಿತು. ಬಾದಲ್ ಅವರು ಬಿಜೆಪಿ-ಅಕಾಲಿದಳ ಸಹಕಾರವನ್ನು ಪಂಜಾಬ್ನಲ್ಲಿ ಹಿಂದೂ-ಸಿಖ್ ಏಕತೆಯ ಸಂಕೇತವೆಂದು ಬಿಂಬಿಸಿದರು. ಇದೇ ಬಿಜೆಪಿ-ಅಕಾಲಿದಳ ಮೈತ್ರಿ ರೂಪುಗೊಳ್ಳುವಲ್ಲಿ ನಿರ್ಣಾಯಕ ಬೆಳವಣಿಗೆಯಾಯಿತು.
ಬಿಜೆಪಿ-ಅಕಾಲಿ ದಳ ಮೈತ್ರಿ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಅರುಣ್ ಜೇಟ್ಲಿ ಮಹತ್ವದ ಪಾತ್ರ ವಹಿಸಿದ್ದರು. 1996ರ ಮೈತ್ರಿ ಮಾತುಕತೆಯಲ್ಲಿ ಅವರ ಪಾತ್ರವಿತ್ತು. ನಂತರ ಉಭಯ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಉಂಟಾದ ಸಂದರ್ಭಗಳಲ್ಲಿಯೂ ಅವರು ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದರು. ಐತಿಹಾಸಿಕವಾಗಿ ಅಕಾಲಿದಳ-ಬಿಜೆಪಿ ಮೈತ್ರಿ ಯಶಸ್ವಿಯಾಗಲು ಎರಡೂ ಪಕ್ಷಗಳ ವಿಭಿನ್ನ ಮತದಾರರ ನೆಲೆಗಳು ಪ್ರಮುಖ ಕಾರಣವಾಗಿದ್ದವು. ಅಕಾಲಿದಳ ಗ್ರಾಮೀಣ ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿದ್ದರೆ, ಬಿಜೆಪಿ ಲುಽಯಾನ, ಜಲಂಧರ್ ಮತ್ತು ಅಮೃತಸರದಂತಹ ನಗರ ಪ್ರದೇಶಗಳ ಹಿಂದೂ ವ್ಯಾಪಾರಿ ಸಮುದಾಯಗಳ ನಡುವೆ ಬೆಂಬಲ ಹೊಂದಿತ್ತು. ಆದರೆ ಏಕಾಂಗಿಯಾಗಿ ಸ್ಪರ್ಧಿಸಿದರೆ, ಅಕಾಲಿದಳಕ್ಕೆ ಇಂತಹ ನಗರ ಪ್ರದೇಶಗಳಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುವುದು ಸವಾಲಾಗುತ್ತದೆ. ಅದೇ ರೀತಿ ಬಿಜೆಪಿಗೆ ಕೂಡ ಪಂಜಾಬ್ನ ಗ್ರಾಮೀಣ ಭಾಗಗಳಲ್ಲಿ ಈಗಲೂ ವಿಸ್ತರಣೆ ಹೊಂದಲು ಸಾಧ್ಯವಾಗಿಲ್ಲ. ಪಂಜಾಬ್ನಲ್ಲಿ ಈಗಾಗಲೇ ಆಮ್ ಆದ್ಮಿ ಪಕ್ಷ, ಕಾಂಗ್ರೆಸ್, ಬಿಜೆಪಿ ಹಾಗೂ ವಿವಿಧ ಪಂಥಿಕ್ ರಾಜಕೀಯ ಗುಂಪುಗಳು ಚುನಾವಣಾ ಕಣದಲ್ಲಿವೆ.
ಇಂತಹ ಬಹುಪಕ್ಷೀಯ ಸ್ಪರ್ಧೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿದರೆ ಅಕಾಲಿದಳ ಕೆಲವು ಪ್ರಮುಖ ಜಿಗಳಲ್ಲಿ ಮೂರನೇ ಅಥವಾ ನಾಲ್ಕನೇ ಸ್ಥಾನಕ್ಕೆ ಸೀಮಿತವಾಗಬಹುದು. ಈ ನಡುವೆ, ಪಕ್ಷದೊಳಗಿನ ಭಿನ್ನಮತ, ಶಿರೋಮಣಿ ಅಕಾಲಿದಳ (ಪುನರ್ ಸುರಜೀತ್) ಸೇರಿದಂತೆ ವಿವಿಧ ಬಣಗಳ ಚಟುವಟಿಕೆಗಳು ಹಾಗೂ ಬಾದಲ್ ಕುಟುಂಬದ ವಿರುದ್ಧದ ಅಸಮಾಧಾನವು ಸುಖಬೀರ್ ಸಿಂಗ್ ಬಾದಲ್ ಅವರ ನಾಯಕತ್ವಕ್ಕೆ ಸವಾಲಾಗಿ ಪರಿಣಮಿಸಿವೆ.
ವಿಶೇಷವಾಗಿ 2015ರ ಗುರು ಗ್ರಂಥ ಸಾಹಿಬ್ ಅಪವಿತ್ರಗೊಳಿಸಿದ ಪ್ರಕರಣ ಹಾಗೂ ಹಿಂದಿನ ಅಕಾಲಿದಳ ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದ ವಿವಾದಗಳು ಪಕ್ಷವನ್ನು ಇನ್ನೂ ಕಾಡುತ್ತಿವೆ. ಮೈತ್ರಿ ಪಕ್ಷವಿಲ್ಲದ ಸಂದರ್ಭದಲ್ಲಿ ಈ ರಾಜಕೀಯ ಒತ್ತಡವನ್ನು ಸುಖಬೀರ್ ಸಿಂಗ್ ಬಾದಲ್ ನೇತೃತ್ವವೇ ನೇರವಾಗಿ ಎದುರಿಸಬೇಕಾಗುತ್ತದೆ. 2024ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಬಿಜೆಪಿ ಶೇ.18ಕ್ಕಿಂತ ಹೆಚ್ಚಿನ ಮತಗಳನ್ನು ಪಡೆದಿದ್ದರೆ, ಶಿರೋಮಣಿ ಅಕಾಲಿದಳದ ಮತಗಳಿಕೆ ಶೇ.13ಕ್ಕಿಂತ ಸ್ವಲ್ಪ ಹೆಚ್ಚಿತ್ತು. ಒಂದು ಕಾಲದಲ್ಲಿ ಪಂಜಾಬ್ ರಾಜಕೀಯದಲ್ಲಿ ಪ್ರಬಲ ಪ್ರಾದೇಶಿಕ ಶಕ್ತಿಯಾಗಿದ್ದ ಅಕಾಲಿ ದಳವು ಇತ್ತೀಚಿನ ವರ್ಷಗಳಲ್ಲಿ ತನ್ನ ರಾಜಕೀಯ ಪ್ರಾಬಲ್ಯ ವನ್ನು ಕಳೆದುಕೊಂಡಿದೆ.
ಕೃಷಿ ಕಾಯ್ದೆ ವಿರೋಧಿಸಿ ತಮ್ಮನ್ನು ಕೃಷಿಕರೊಂದಿಗೆ ಗುರುತಿಸಿಕೊಳ್ಳಲು ಸುಖಬೀರ್ ಸಿಂಗ್ ಬಾದಲ್ ಮತ್ತು ಪತ್ನಿ ಹರ್ಸಿಮ್ರತ್ ಸಿಂಗ್ ಬಾದಲ್ ಯತ್ನಿಸಿದರೂ, ರಾಜ್ಯದ ಮತದಾರರು ಈ ಪಕ್ಷವನ್ನು ಮೀರಿ ಆಲೋಚಿಸಿ ಕಳೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಅಭೂತಪೂರ್ವ ರೀತಿಯಲ್ಲಿ ಗೆಲ್ಲಿಸಿದ್ದರು.
ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಉದಯ ಮತ್ತು ಸರ್ಕಾರ ರಚನೆ ಅಕಾಲಿದಳದ ರಾಜಕೀಯ ಸ್ಥಿತಿಯನ್ನು ಮತ್ತಷ್ಟು ಶಕ್ತಿಹೀನಗೊಳಿಸಿತು. ಈಗಿನ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮೈತ್ರಿ ಮಾತುಕತೆಯಲ್ಲಿ ಹೆಚ್ಚಿನ ಸ್ಥಾನಗಳಿಗೆ ಬೇಡಿಕೆ ಇಡುತ್ತಿರುವ ಬಿಜೆಪಿ, 2024ರ ಲೋಕಸಭಾ ಚುನಾವಣೆಯ ಮತಗಳಿಕೆಯನ್ನು ಪ್ರಮುಖ ಆಧಾರವಾಗಿ ಬಳಸಿಕೊಳ್ಳುತ್ತಿದೆ.
ಕಳೆದೆರಡು ವರ್ಷಗಳಿಂದ ಪಕ್ಷದ ಕಾರ್ಯಕರ್ತರು, ಮುಖಂಡರು ರಾಜ್ಯದಲ್ಲಿ ಭಾರೀ ಗ್ರೌಂಡ್ ಮಾಡುತ್ತಿದ್ದು ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಆಪ್, ಕಾಂಗ್ರೆಸ್, ವಾರಿಸ್ ದೇ ಪಂಜಾಬ್ ಪಕ್ಷಗಳನ್ನೊಳಗೊಂಡ ರಾಜ್ಯದ ಬಹುಪಕ್ಷೀಯ ರಾಜಕೀಯ ಪೈಪೋಟಿಯ ನಡುವೆ ಬಿಜೆಪಿ-ಅಕಾಲಿದಳದ ಮತಗಳು ಒಗ್ಗೂಡಿದರೆ ಮೈತ್ರಿಕೂಟದ ಸ್ಪರ್ಧಾತ್ಮಕ ಸಾಮರ್ಥ್ಯ ಹೆಚ್ಚಬಹುದು ಎನ್ನುವುದನ್ನು ಎರಡೂ ಪಕ್ಷಗಳು ಮನಗಂಡಿವೆ.
ಪಂಜಾಬ್ನ ಡ್ರಗ್ ಮಾಫಿಯಾ ಹಾಗೂ ಯುವಕರು ಡ್ರಗ್ ಚಟಕ್ಕೆ ಬಲಿಯಾಗುತ್ತಿರುವುದು, ಇದಕ್ಕೆ ಕಡಿವಾಣ ಹಾಕುವಲ್ಲಿ ಆಪ್ ಸರ್ಕಾರದ ವೈಫಲ್ಯಗಳನ್ನೇ ದೊಡ್ಡ ವಿಷಯವನ್ನಾಗಿಸಿ ಬಿಜೆಪಿ ಪ್ರಚಾರ ಮಾಡುತ್ತಿದೆ. ವಿಚಿತ್ರ ಎಂದರೆ ಅಕಾಲಿದಳದ ಕೆಲ ನಾಯಕರು ರಾಜ್ಯದಲ್ಲಿ ಡ್ರಗ್ ಮಾಫಿಯಾ ಪೋಷಿಸಿ ಬೆಳೆಸಿದ ಆರೋಪಕ್ಕೆ ಗುರಿಯಾಗಿರುವಾಗ ಅದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಬಹುದು.
ಅಕಾಲಿದಳ ನಾಯಕ ಸುಖಬೀರ್ ಸಿಂಗ್ ಬಾದಲ್ ಪತ್ನಿ ಹರ್ಸಿಮ್ರತ್ ಬಾದಲ್ರ ಸೋದರ, ಮಾಜಿ ಸಚಿವ ವಿಕ್ರಮ್ ಸಿಂಗ್ ಮಜೀತಿಯಾ ಮೇಲೆ ಡ್ರಗ್ ಕಳ್ಳಸಾಗಣೆಯ ಆರೋಪಗಳಿದ್ದು, ಈಗಲೂ ವಿಚಾರಣೆ ಎದುರಿಸುತ್ತಿದ್ದಾರೆ. ವಿಶೇಷ ಎಂದರೆ, ವಿಕ್ರಂ ಸಿಂಗ್ ಅಜ್ಜ ಸರ್ದಾರ್ ಸುರ್ಜಿತ್ ಸಿಂಗ್ ಮಜೀತಿಯಾ ಅವರು ಭಾರತೀಯ ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ರಾಜಕೀಯ ಪ್ರವೇಶಿಸಿ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಕೇಂದ್ರ ಸಚಿವ ಸಂಪುಟದಲ್ಲಿ ಸಹಾಯಕ ರಕ್ಷಣಾ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ವಿಕ್ರಂ ಸಿಂಗ್ ಮುತ್ತಜ್ಜ ಸರ್ ಸುಂದರ್ ಸಿಂಗ್ ಮಜೀತಿಯಾ ಅವಿಭಜಿತ ಪಂಜಾಬ್ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಅಮೃತಸರದ ಪ್ರಸಿದ್ಧ ಖಾಲ್ಸಾ ಕಾಲೇಜಿನ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದೇನೆ ಇದ್ದರೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಪ್ರಚಾರಗಳಲ್ಲಿ ಮಾದಕವಸ್ತುಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತು ನೀಡುತ್ತಿರುವ ಸಂದರ್ಭದಲ್ಲಿ, ಡ್ರಗ್ಸ್ ಮಾರಾಟದ ಆರೋಪಗಳನ್ನು ಎದುರಿಸುತ್ತಿರುವ ಮಿತ್ರ ಪಕ್ಷದ ನಾಯಕರ ಬಗೆಗಿನ ಬಿಜೆಪಿ ನಿಲುವುಗಳು ಚುನಾವಣಾ ಕಣದಲ್ಲಿ ಕುತೂಹಲಕ್ಕೆಡೆ ಮಾಡಲಿದೆ.
ಹಿಂದೆ ಪಂಜಾಬ್ನಲ್ಲಿ ಅಧಿಕಾರ ಹಂಚಿಕೊಳ್ಳಲು ಒಂದಾಗಿದ್ದ ಪಕ್ಷಗಳು, ಇಂದು ಕಳೆದುಕೊಂಡ ರಾಜಕೀಯ ನೆಲೆಯನ್ನು ಮರಳಿ ಪಡೆಯಲು ಕೈಜೋಡಿಸುವ ಚರ್ಚೆಯಲ್ಲಿವೆ. ಎರಡು ಪಕ್ಷಗಳ ಮತಗಳನ್ನು ಕೂಡಿಸುವ ರಾಜಕೀಯ ಲೆಕ್ಕಾಚಾರ, ಮತದಾರರ ವಿಶ್ವಾಸವನ್ನೂ ಮರಳಿ ತಂದುಕೊಡಬಹುದೇ?