Ranjith H Ashwath Column: ಬೌ ಬೌ ಸಂಘರ್ಷ ಗಂಭೀರವಾದುದು
ಬೀದಿನಾಯಿಗಳಿಗೆ ರೇಬಿಸ್ ಲಸಿಕೆ ನೀಡುವುದಕ್ಕಾಗಿಯೇ ಬಿಬಿಎಂಪಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸುಮಾರು 4.71 ಕೋಟಿ ರು. ಹಣವನ್ನು ಎತ್ತಿಟ್ಟಿದೆ. ಪೌಷ್ಟಿಕಾಂಶ ಅಥವಾ ಆಹಾರ ಸಿಗದ ಸಮಯದಲ್ಲಿ ಜನರ ಮೇಲೆ ಎಗರುತ್ತವೆ ಎನ್ನುವ ಕಾರಣಕ್ಕೆ ಬಿಬಿಎಂಪಿಯಿಂದಲೇ ಬೀದಿನಾಯಿ ಗಳಿಗೆ ಆಹಾರ ನೀಡುವ ಉಪಕ್ರಮಕ್ಕೆಂದೇ 2.88 ಕೋಟಿ ರು. ಮೀಸಲಿಡಲಾಗಿದೆ.


ಅಶ್ವತ್ಥಕಟ್ಟೆ
ranjith.hoskere@gmail.com
ಮನುಷ್ಯನಿಗೆ ಅತಿ ಪ್ರಿಯವಾದ ಪ್ರಾಣಿಗಳ ಪಟ್ಟಿಯಲ್ಲಿ ‘ಶ್ವಾನ’ ಮೊದಲ ಮೂರು ಸ್ಥಾನದಲ್ಲಿ ಬರುವುದರಲ್ಲಿ ಎರಡನೇ ಮಾತಿಲ್ಲ. ಅದೆಷ್ಟೋ ಜನ ನಾಯಿಗಳನ್ನು ತಮ್ಮ ಮಕ್ಕಳಂತೆ ಕಾಣುತ್ತಾರೆ ಎನ್ನುವುದು ವಾಸ್ತವ. ನಿಯತ್ತಿಗೆ ಹೆಸರಾಗಿರುವ ನಾಯಿಗಳ ವಿಷಯದಲ್ಲಿ ಬಹುಪಾಲು ಮಂದಿ ‘ಸಾಫ್ಟ್ ಕಾರ್ನರ್’ ಹೊಂದಿದ್ದರೂ, ಇತ್ತೀಚಿನ ದಿನದಲ್ಲಿ ಬೀದಿನಾಯಿಗಳ ಗದ್ದಲ ರಾಷ್ಟ್ರಮಟ್ಟ ದಲ್ಲಿ ಸದ್ದಾಗಿದೆ.
ನಾಯಿ ವಿಷಯವೂ ಸುಪ್ರೀಂ ಕದ ತಟ್ಟಿ, ಒಂದೆರಡು ದಿನ ‘ಟಾಪ್ ಟ್ರೆಂಡ್’ ಆಗಿತ್ತು. ಅದರಲ್ಲಿಯೂ ದೆಹಲಿಯ ಬೀದಿನಾಯಿಗಳನ್ನು ‘ಶೆಲ್ಟರ್’ಗೆ ಕಳುಹಿಸಬೇಕು ಎನ್ನುವ ಸುಪ್ರೀಂ ಕೋರ್ಟ್ ತೀರ್ಪು, ಬಳಿಕ ಸುಪ್ರೀಂ ಕೋರ್ಟ್ ತ್ರಿಸದಸ್ಯರ ಪೀಠದ ‘ಈ ಹಿಂದೆ ನಾಯಿಗಳು ಎಲ್ಲಿದ್ದವೋ ಅಲ್ಲಿಯೇ ಬಿಟ್ಟು ಬನ್ನಿ’ ಎನ್ನುವ ಆದೇಶ ಈಗ ಬಹುಚರ್ಚಿತ ವಿಷಯಗಳು.
ಬೀದಿನಾಯಿಗಳ ವಿಷಯದಲ್ಲಿ ಸದಾ ಭಿನ್ನರಾಗವಿರುವುದನ್ನು ನೋಡಿದ್ದೇವೆ. ಬೀದಿನಾಯಿಗಳ ಹಾವಳಿಯಿಂದ ‘ಸಂಕಷ್ಟ’ ಅನುಭವಿಸಿರುವ ಅಥವಾ ದಾಳಿಯ ಆತಂಕದಲ್ಲಿರುವ ಗುಂಪು ಒಂದು ಕಡೆಯಾದರೆ, ‘ಬೀದಿನಾಯಿಗಳಿಗೇನೂ ಮಾಡಬೇಡಿ’ ಎಂದು ಶ್ವಾನಪ್ರಿಯರ ಹೆಸರಲ್ಲಿ ಬೊಬ್ಬೆ ಹಾಕುವ ಗುಂಪು ಇನ್ನೊಂದೆಡೆ. ಬೀದಿನಾಯಿಯನ್ನು ಮುಟ್ಟಬೇಡಿ ಎಂದು ಹೇಳುವ ಬಹುತೇಕರು,
ಆ ನಾಯಿಗಳಿಂದ ಹಸುಳೆ, ಮಕ್ಕಳು, ವೃದ್ಧರು ಅಷ್ಟೇ ಏಕೆ ಯುವಕ- ಯುವತಿಯರಿಗೆ ಆಗಿರುವ ಸಂಕಷ್ಟದ ಬಗ್ಗೆ ಯೋಚಿಸುವುದಿಲ್ಲ. ಈ ಬಗ್ಗೆ ಪ್ರಸ್ತಾಪಿಸಿದಾಗಲ್ಲೆಲ್ಲ, ‘ಭೂಮಿಯು ಕೇವಲ ಮನುಷ್ಯನ ಸೊತ್ತಲ್ಲ’ ಎನ್ನುತ್ತಾರೆ. ಆದರೆ ಈ ಬೀದಿ ನಾಯಿಗಳ ಅನಿಯಂತ್ರಿತ ಹಾವಳಿಗೆ ಪರಿಹಾರವೇನು? ಎನ್ನುವ ಪ್ರಶ್ನೆಗೆ ಮಾತ್ರ ‘ಮೌನ’ ವಹಿಸುತ್ತಾರೆ.
ಇದನ್ನೂ ಓದಿ: Ranjith H Ashwath Column: ಬುರುಡೆ ಪ್ರಕರಣದಲ್ಲಿ ಕೊನೆಗೆ ಸಿಕ್ಕಿದ್ದೇನು ?
ಹಾಗೆ ನೋಡಿದರೆ, ನಾಯಿಗಳನ್ನು ಶೆಲ್ಟರ್‌ಗಳಿಗೆ ಹಾಕಿ ಎನ್ನುವ ಆದೇಶವನ್ನು ಮಾರ್ಪಡಿಸಿರುವ ಸುಪ್ರೀಂ ತೀರ್ಪು ಕಾನೂನಾತ್ಮಕವಾಗಿ ಸರಿ ಎನಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಗೆ ಬೀದಿನಾಯಿಗಳ ಆಕ್ರಮಣಶೀಲ ವರ್ತನೆ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣ ವಾಗಿದೆ. ಅದರಲ್ಲಿಯೂ ಕಳೆದೊಂದು ತಿಂಗಳಲ್ಲಿ ಕರ್ನಾಟಕದಲ್ಲಿಯೇ ಹಲವಾರು ದಾಳಿ ಪ್ರಕರಣಗಳು ಬೆಳಕಿಗೆ ಬಂದಿವೆ.
ಇದರೊಂದಿಗೆ ಮೂರಕ್ಕೂ ಹೆಚ್ಚು ಜನ ಬೀದಿನಾಯಿಗಳ ದಾಳಿಗೆ ಮೃತಪಟ್ಟಿದ್ದಾರೆ. ಬೀದಿನಾಯಿ ಗಳ ದಾಳಿಗೆ ಬೆದರಿ, ಸಾರ್ವಜನಿಕರು ಬೀದಿನಾಯಿಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಜನರು ಮತ್ತು ಬೀದಿನಾಯಿಗಳ ನಡುವಿನ ಈ ಸಂಘರ್ಷಕ್ಕೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ. ಬೀದಿನಾಯಿಗಳ ಈ ಸಮಸ್ಯೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾತನಾಡುತ್ತಿರುವುದನ್ನು ನೋಡಿದ ಅನೇಕರಿಗೆ ಮೇಲ್ನೋಟಕ್ಕೆ ಇದು ಹಾಸ್ಯಾಸ್ಪದ ಎನಿಸ ಬಹುದು.
ಆದರೆ ವನ್ಯಜೀವಿ ಹಾಗೂ ಮಾನವ ಸಂಘರ್ಷಕ್ಕಿಂತ ಈ ಬೀದಿನಾಯಿಗಳ ಸಂಘರ್ಷ ‘ಗಂಭೀರ’ ವಾಗಿದೆ. ಏಕೆಂದರೆ, ಕಾಡಾನೆ, ಚಿರತೆ, ಹುಲಿ ದಾಳಿಗಳು ಹೆಚ್ಚೆಂದರೆ ಕಾಡಂಚಿನಲ್ಲಿರುವ ಹಳ್ಳಿಗಳ ಮೇಲೆ ನಡೆಯುತ್ತವೆ. ಆದರೆ ಬೀದಿನಾಯಿಗಳು ಇಲ್ಲದ ಊರಿಲ್ಲ. ಹೀಗಿರುವಾಗ, ಇದನ್ನು ಗಂಭೀರ ವಾಗಿ ಪರಿಗಣಿಸದೇ ಶಾಶ್ವತ ಪರಿಹಾರ ನೀಡದಿದ್ದರೆ ಮುಂದೊಂದು ದಿನ ಈಗಿರುವ ‘ಮನುಷ್ಯ- ವನ್ಯಜೀವಿ’ ಸಂಘರ್ಷಕ್ಕಿಂತ ದೊಡ್ಡ ಪ್ರಮಾಣದಲ್ಲಿ ಅದು ಸದ್ದು ಮಾಡುತ್ತದೆ.

ಬೀದಿನಾಯಿಗಳಿಗೆ ಆಹಾರ ನೀಡುವ ವ್ಯವಸ್ಥೆಯ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದ್ದರಿಂದ ನಿರ್ದಿಷ್ಟ ಜಾಗದಲ್ಲಿ ಆಹಾರ ಸಿಗುವಂತೆ ಸರಕಾರ ಮಾಡಬೇಕು ಎನ್ನುವುದು ‘ಪೇಟಾ’ ಸಂಘಟನೆಯ ಆಗ್ರಹವಾಗಿದೆ. ಇದೇ ರೀತಿಯ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಸಹ ನೀಡಿದೆ. ಆದರೆ ಪ್ರಾಯೋಗಿಕವಾಗಿ ಈ ರೀತಿ ಮಾಡುವುದು ಯಾವುದೇ ಸರಕಾರಕ್ಕೆ ‘ಕಷ್ಟಸಾಧ್ಯ’ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಿದೆ.
ಪೇಟಾ ಹೋರಾಟ, ಸುಪ್ರಿಂ ಕೋರ್ಟ್ ನಿರ್ದೇಶನದ ಬಗ್ಗೆ ನೋಡುವುದಕ್ಕಿಂತ ಮೊದಲು ಇತ್ತೀಚಿನ ದಿನದಲ್ಲಿ ಬೀದಿನಾಯಿಗಳ ಹಾವಳಿಯನ್ನು ಗಮನಿಸಬೇಕಿದೆ. ಕರ್ನಾಟಕವೊಂದರಲ್ಲಿಯೇ ಬೀದಿನಾಯಿಗಳ ಹಾವಳಿಯನ್ನು ಗಮನಿಸುವುದಾದರೆ, 2025ರಲ್ಲಿಯೇ ರಾಜ್ಯಾದ್ಯಂತ ಸುಮಾರು 2.81 ಲಕ್ಷ ಜನರಿಗೆ ಬೀದಿನಾಯಿಗಳು ಕಡಿದಿರುವ ಬಗ್ಗೆ ಅಧಿಕೃತ ದೂರುಗಳು ದಾಖಲಾಗಿವೆ.
ಕಚ್ಚಿದ್ದರೂ ಅದರ ಬಗ್ಗೆ ದೂರು ನೀಡದಿರುವವರ ಸಂಖ್ಯೆ ಇನ್ನೂ ಹೆಚ್ಚಿರುತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಸರಕಾರವೇ ನೀಡಿರುವ ಅಧಿಕೃತ ಅಂಕಿ-ಅಂಶದ ಪ್ರಕಾರ 2025ರ ಜನವರಿ ಯಿಂದ ಜುಲೈವರೆಗೆ ರಾಜ್ಯದಲ್ಲಿ ಒಟ್ಟು 2.31 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳಲ್ಲಿ 19 ಜನರು ರೇಬಿಸ್‌ನಿಂದ ಮೃತಪಟ್ಟಿದ್ದಾರೆ.
ಆಘಾತಕಾರಿ ವಿಷಯವೆಂದರೆ, ವರ್ಷದಿಂದ ವರ್ಷಕ್ಕೆ ಬೀದಿನಾಯಿ ಹಾವಳಿ ಹೆಚ್ಚಾಗುತ್ತಲೇ ಇದೆ. ಎರಡು ವರ್ಷ ಹಿಂದಕ್ಕೆ ಹೋಲಿಸಿದರೆ, ಈ ಬಾರಿ ನಾಯಿ ಕಡಿತದ ಪ್ರಕರಣ ಶೇ.36.30ರಷ್ಟು ಹೆಚ್ಚಾಗಿವೆ ಎನ್ನುತ್ತಿವೆ ಅಧಿಕೃತ ದಾಖಲೆಗಳು. ಹಾಗೆಂದು ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸುವುದಕ್ಕೆ ಕರ್ನಾಟಕದಲ್ಲಿ ಕಾನೂನು ಇಲ್ಲವೆಂದಲ್ಲ.
ಆದರೆ ಅದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಈಗಾಗಲೇ ಕರ್ನಾಟಕ ಸರಕಾರ, ೨೦೨೨ರಲ್ಲಿಯೇ ರೇಬಿಸ್ ಅನ್ನು ಅಸೂಚಿತ ರೋಗವೆಂದು ಘೋಷಿಸಿದೆ. ಇದರಿಂದ ನಾಯಿಕಡಿತ ಪ್ರಕರಣ ಹಾಗೂ ರೇಬಿಸ್ ಸಾವುಗಳ ಬಗ್ಗೆ ಅಧಿಕೃತವಾಗಿ ದಾಖಲೆ ಸಿಗುತ್ತಿದೆ. ಆದರೆ ಈಗಲೂ ಅನೇಕರು ಕಚ್ಚಿಸಿ ಕೊಂಡರೂ ಆ ಕುರಿತು ಅಧಿಕೃತವಾಗಿ ದೂರು ದಾಖಲಿಸುವುದಿಲ್ಲ.
ಹಾಗೆ ನೋಡಿದರೆ, ಕರ್ನಾಟಕದಲ್ಲಿ ಅದರಲ್ಲಿಯೂ ಬೆಂಗಳೂರು ವ್ಯಾಪ್ತಿಯಲ್ಲಿ ಬೀದಿನಾಯಿಗಳ ಉಪಟಳವನ್ನು ನಿಯಂತ್ರಿಸಲು ಬಿಬಿಎಂಪಿ ಪ್ರತಿವರ್ಷ ಕೋಟ್ಯಂತರ ರುಪಾಯಿ ಹಣವನ್ನು ವ್ಯಯಿಸುತ್ತಿದೆ. ಅದರಲ್ಲಿ ಪ್ರಮುಖವಾಗಿ ಸಂತಾನಶಕ್ತಿಹರಣ ಚಿಕಿತ್ಸೆ, ಶ್ವಾನಗಳಿಗಾಗಿ ಶೆಲ್ಟರ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಕಳೆದ ಐದು ವರ್ಷದಲ್ಲಿ ಬಿಬಿಎಂಪಿಯೊಂದರಲ್ಲಿಯೇ 2.75 ಲಕ್ಷ ಬೀದಿನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಲಾಗಿದೆ. ಆದರೂ, ಬೀದಿ ನಾಯಿಗಳ ಸಂಖ್ಯೆಯಲ್ಲಿ ಮಾತ್ರ ‘ಬಹುದೊಡ್ಡ’ ವ್ಯತ್ಯಾಸ ಕಾಣುತ್ತಿಲ್ಲ. ಬದಲಿಗೆ ವರ್ಷದಿಂದ ವರ್ಷಕ್ಕೆ ಬೀದಿನಾಯಿಗಳ ಸಂಖ್ಯೆ ಹಾಗೂ ಹಾವಳಿ ಎರಡೂ ಹೆಚ್ಚಾಗಿವೆ.
ಬೀದಿನಾಯಿಗಳಿಗೆ ರೇಬಿಸ್ ಲಸಿಕೆ ನೀಡುವುದಕ್ಕಾಗಿಯೇ ಬಿಬಿಎಂಪಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸುಮಾರು 4.71 ಕೋಟಿ ರು. ಹಣವನ್ನು ಎತ್ತಿಟ್ಟಿದೆ. ಪೌಷ್ಟಿಕಾಂಶ ಅಥವಾ ಆಹಾರ ಸಿಗದ ಸಮಯದಲ್ಲಿ ಜನರ ಮೇಲೆ ಎಗರುತ್ತವೆ ಎನ್ನುವ ಕಾರಣಕ್ಕೆ ಬಿಬಿಎಂಪಿಯಿಂದಲೇ ಬೀದಿನಾಯಿ ಗಳಿಗೆ ಆಹಾರ ನೀಡುವ ಉಪಕ್ರಮಕ್ಕೆಂದೇ 2.88 ಕೋಟಿ ರು. ಮೀಸಲಿಡಲಾಗಿದೆ.
ಜನರಿಗೆ ಬೀದಿನಾಯಿಗಳಿಂದ ರಕ್ಷಣೆ ನೀಡಲೆಂದೇ ಈ ಯೋಜನೆಗಳನ್ನು ಕಾಗದದಲ್ಲಿ ಜಾರಿ ಗೊಳಿಸಿದೆ. ಆದರೆ ‘ಬೀದಿ’ಯಲ್ಲಿ ಎಷ್ಟರ ಮಟ್ಟಿಗೆ ಅದು ಜಾರಿಗೊಂಡಿದೆ ಎನ್ನುವುದಕ್ಕೆ ‘ಉತ್ತರ’ ಸಿಗುತ್ತಿಲ್ಲ. ದೆಹಲಿಯಲ್ಲಿರುವ ಬೀದಿನಾಯಿಗಳನ್ನು ಶೆಲ್ಟರ್‌ಗೆ ಹಾಕಿ ಎನ್ನುವ ಸುಪ್ರೀಂ ಕೋರ್ಟ್ ಸೂಚನೆಯನ್ನು ಬಿಬಿಎಂಪಿಗೆ ನೀಡಿದರೆ, ಶಾಶ್ವತವಾಗಿ ಬೀದಿನಾಯಿಗಳನ್ನು ಶೆಲ್ಟರ್‌ನಲ್ಲಿ ಹಾಕಲು ಜಾಗವಿಲ್ಲ ಎನ್ನುವ ಉತ್ತರ ಬರಲಿದೆ.
ಬೀದಿ ನಾಯಿ, ಬೀದಿ ಹಸುಗಳ ಪುನರ್ವಸತಿ ಕಲ್ಪಿಸಲು ಅನುದಾನದ ಜತೆಜತೆಗೆ ಜಾಗವನ್ನು ಗುರುತಿಸುವುದಾಗಿ ಬಿಬಿಎಂಪಿ ಹೇಳಿತ್ತು. ಆದರೆ ಈವರೆಗೆ ಇದು ಪೂರ್ಣಗೊಂಡಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪೂರ್ಣಪ್ರಮಾಣದಲ್ಲಿ ಬೀದಿನಾಯಿಗಳನ್ನು ಕಟ್ಟಿಹಾಕಲು ಅಥವಾ ಬೀದಿಗೆ ಬಾರದಂತೆ ಮಾಡಲು ಶಾಶ್ವತ ಶೆಲ್ಟರ್ ವ್ಯವಸ್ಥೆಯಿಲ್ಲ. ಈ ವಿಷಯದಲ್ಲಿ ಅಧಿಕಾರಿಗಳು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ಬೀದಿನಾಯಿಗಳ ವಿಷಯದಲ್ಲಿ ಯಾವುದೇ ಲೋಪಗಳಾ ದರೂ ನಾಯಿಗಳೇನು ಆರ್‌ಟಿಐನಲ್ಲಿ ಅರ್ಜಿ ಸಲ್ಲಿಸುವುದಿಲ್ಲವಲ್ಲ!
ಬೀದಿನಾಯಿಗಳ ವಿಷಯದಲ್ಲಿ ಬಿಬಿಎಂಪಿ ಕಳೆದೊಂದು ತಿಂಗಳಲ್ಲಿ ತೆಗೆದುಕೊಂಡ ಎರಡು ತೀರ್ಮಾನಗಳು ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದ್ದವು. ಅದರಲ್ಲಿ ಮೊದಲನೆ ಯದಾಗಿ ಬೀದಿನಾಯಿಗಳಿಗೆ ಬಿರಿಯಾನಿ ನೀಡಬೇಕು ಎನ್ನುವುದು ಹಾಗೂ ಬೀದಿನಾಯಿಗಳಿಗೆ ಪೊಲೀಸ್ ಡಾಗ್ ತರಬೇತಿ ನೀಡಬೇಕು ಎನ್ನುವುದು.
ದೇಶಾದ್ಯಂತ ಬೀದಿನಾಯಿಗಳನ್ನು ನಿಯಂತ್ರಿಸುವುದು ಹೇಗೆ? ಎನ್ನುವ ಬಗ್ಗೆ ಚಿಂತನೆಗಳು ನಡೆಯುತ್ತಿದ್ದರೆ ಬಿಬಿಎಂಪಿ ಅಧಿಕಾರಿಗಳು, ನಾಯಿಗಳಿಗೆ ಪೊಲೀಸ್ ಡಾಗ್ ಟ್ರೇನಿಂಗ್ ಕೊಡ ಬೇಕೆಂಬ ಆಲೋಚನೆಯಲ್ಲಿದ್ದರು. ಈ ತರಬೇತಿ ನೀಡುವುದರಿಂದ ಬೀದಿನಾಯಿಗಳು ಶಿಸ್ತು ಕಾಪಾಡಿಕೊಂಡರೆ ಒಪ್ಪಿತ.
ಆದರೆ ಪೊಲೀಸ್ ನಾಯಿಗಳ ರೀತಿಯಲ್ಲಿ ಚುರುಕಾಗಿ, ಇನ್ನಷ್ಟು ಅಗ್ರೇಸಿವ್ ಆದರೆ ಗತಿಯೇನು? ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಈ ರೀತಿಯ ಯೋಜನೆಗಳು ಮುನ್ನೆಲೆಗೆ ಬರುವುದೇ ‘ಅನುದಾನ’ ವನ್ನು ಖಾಲಿ ಮಾಡಬೇಕೆಂಬ ಕಾರಣಕ್ಕೆ. ಈ ರೀತಿಯ ಅನವಶ್ಯಕ ಚಿಂತನೆಗಳ ಬದಲು, ರಾಜಧಾನಿ ಯಲ್ಲಿರುವ ಅಥವಾ ರಾಜ್ಯದಲ್ಲಿರುವ ಬೀದಿನಾಯಿಗಳ ನಿಯಂತ್ರಣ ಹೇಗೆ ಎನ್ನುವ ಬಗ್ಗೆ ಯೋಚಿಸುವುದು ಸೂಕ್ತವಲ್ಲವೇ? ಹಾಗೆ ನೋಡಿದರೆ, ಬೀದಿನಾಯಿಗಳ ಬಗ್ಗೆ ‘ಅನುಕಂಪ’ ಹೊರ ಹಾಕುತ್ತಿರುವ ಅನೇಕರು ಅದೇ ಬೀದಿನಾಯಿಗಳಿಂದ ಹಲ್ಲೆಗೊಳಗಾದವರ ಬಗ್ಗೆಯಾಗಲಿ, ಬೀದಿ ನಾಯಿ ದಾಳಿಯಿಂದ ಮೃತಪಟ್ಟಿರುವ ಕುಟುಂಬದ ಬಗ್ಗೆಯಾಗಲಿ ಯೋಚಿಸುತ್ತಿಲ್ಲ.
ಈ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆ ‘ಇಡೀ ಭೂಮಿ ಮನುಷ್ಯರಿಗೆ ಮಾತ್ರವಷ್ಟೇ ಸೀಮಿತವೇ? ಇತರೆ ಪ್ರಾಣಿಗಳು ಬದುಕಬಾರದೇ?’ ಎನ್ನುವ ಮಾತುಗಳನ್ನು ಪ್ರಾಣಿಪ್ರಿಯರು ಆಡುತ್ತಾರೆ. ಈ ವಾದವನ್ನು ಒಪ್ಪಲೇಬೇಕು. ಬೀದಿನಾಯಿಗಳ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವವರು, ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುವವರೆಲ್ಲ ಅವರ ವರ ಬೀದಿಯಲ್ಲಿರುವ ಐದೈದು ಬೀದಿನಾಯಿಗಳಿಗೆ ‘ಆಶ್ರಯ’ ನೀಡಿದರೆ ಈಗಿರುವ ಬಹುದೊಡ್ಡ ಸಮಸ್ಯೆ ಬಗೆಹರಿಯುತ್ತದೆ.
ಆದರೆ ‘ಜವಾಬ್ದಾರಿ’ ತೆಗೆದುಕೊಳ್ಳುವ ವಿಷಯ ಬಂದಾಗ ‘ಇದು ಸರಕಾರದ ಕೆಲಸ’ ಎಂದು ಹೇಳುತ್ತಾರೆ. ಅದೇ ಸರಕಾರ ಈ ಬೀದಿನಾಯಿಗಳನ್ನು ನಿಯಂತ್ರಿಸಲು ಅಥವಾ ಸ್ಥಳಾಂತರಿಸಲು ಮುಂದಾದ ಸಮಯದಲ್ಲಿ ನಾಯಿಗಳ ಹಕ್ಕಿನ ಬಗ್ಗೆ ಮಾತನಾಡುತ್ತಾ ‘ಬೀದಿ’ಗೆ ಇಳಿಯುತ್ತಾರೆ. ಪ್ರಾಣಿಪ್ರಿಯರು ಈ ದ್ವಿಮುಖ ನೀತಿಯಿಂದ ಹೊರಬಂದು ಸಲಹೆಗಳನ್ನು ನೀಡದಿದ್ದರೆ ಬೀದಿ ನಾಯಿ ಹಾಗೂ ಮನುಷ್ಯರ ನಡುವಿನ ಸಂಘರ್ಷ ಮುಂದೊಂದು ದಿನ ರಾಷ್ಟ್ರೀಯ ಸಮಸ್ಯೆ ಯಾಗುವುದರಲ್ಲಿ ಅನುಮಾನವೇ ಇಲ್ಲ.
ಸುಪ್ರೀಂ ಕೋರ್ಟ್ ದೆಹಲಿ ಸೇರಿದಂತೆ ದೇಶದ ಎಲ್ಲ ರಾಜ್ಯಗಳಿಗೆ ಬೀದಿನಾಯಿ ನಿಯಂತ್ರಣ ಹಾಗೂ ರಕ್ಷಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿಯೊಂದನ್ನು ಜಾರಿಗೊಳಿಸಲು ನಿರ್ದೇಶನ ನೀಡಿದೆ. ಇದರೊಂದಿಗೆ ದೆಹಲಿಯಲ್ಲಿ ಈಗಾಗಲೇ ಹಿಡಿದಿರುವ ಬೀದಿನಾಯಿಗಳನ್ನು, ಯಾವ ಬೀದಿಯಿಂದ ತಂದಿದ್ದರೋ ಅಲ್ಲಿಗೆ ಬಿಟ್ಟುಬರಬೇಕೆಂಬ ಸೂಚನೆಯನ್ನೂ ನೀಡಿದೆ. ಬೀದಿನಾಯಿಗಳ ನಿಯಂತ್ರಣದ ವಿಷಯದಲ್ಲಿ, ಅವನ್ನು ತಂದಿರುವ ಸ್ಥಳಗಳಿಗೆ ಬಿಟ್ಟು ಬರಬೇಕು ಎನ್ನುವ ಸೂಚನೆ ಮೇಲ್ನೋಟಕ್ಕೆ ‘ಅಸಾಧ್ಯ’.
ಇನ್ನು ರಾಷ್ಟ್ರೀಯ ನೀತಿ ರಚನೆಯ ಸಮಯದಲ್ಲಿ, ಕೇವಲ ಬೀದಿನಾಯಿಗಳನ್ನು ಗಮನ ದಲ್ಲಿರಿಸಿ ಕೊಂಡು ಮಾಡಿ, ಆ ನೀತಿಯಿಂದ ಬೀದಿನಾಯಿಗಳನ್ನು ಮುಟ್ಟದ ರೀತಿಯಲ್ಲಿ ಮಾಡಿಕೊಂಡು, ಭವಿಷ್ಯದಲ್ಲಿ ನಾಯಿಗಳ ಕಾಟದಿಂದ ಮನುಷ್ಯರು ಬೀದಿಯಲ್ಲಿ ಓಡಾಡದ ರೀತಿಯಲ್ಲಿ ಮಾಡಿ ಕೊಳ್ಳಬಾರದಷ್ಟೇ!