M J Akbar Column: ಪಾಕಿಸ್ತಾನದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಡಾ.ಸ್ಟ್ರೇಂಜ್ ಲವ್ !
ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾಗ ಬೇಕು ಎಂಬ ಜಿನ್ನಾ ಪ್ರಯತ್ನ ಕೇವಲ ಸ್ವಾರ್ಥದ್ದಾಗಿತ್ತೇ ಹೊರತು ಅದರಲ್ಲಿ ಇಸ್ಲಾಮ್ ಧರ್ಮಕ್ಕೆ ಅನುಕೂಲ ಮಾಡಿಕೊಡುವ ಅಥವಾ ಭಾರತದ ಮುಸ್ಲಿಮರಿಗೆ ಒಳ್ಳೆಯ ದನ್ನು ಮಾಡುವ ಯಾವ ಉದ್ದೇಶವೂ ಇರಲಿಲ್ಲ. ಜಿನ್ನಾರಿಗೆ ದೇಶವನ್ನು ಆಳಬೇಕಿತ್ತು. ಅದು ಏಕೀಕೃತ ಭಾರತದಲ್ಲಿ ಸಾಧ್ಯವಿರಲಿಲ್ಲ.


ಅಕ್ಬರ್ ನಾಮಾ
ಎಂ.ಜೆ.ಅಕ್ಬರ್
ಪಾಕಿಸ್ತಾನವೆಂಬುದು ಒಂದು ದೇಶವಲ್ಲ. ಅದೊಂದು ಮನಸ್ಥಿತಿ. ಒಂಥರಾ ವಿಚಿತ್ರವಾದ ಮೇಲರಿಮೆ, ಇತರ ನಂಬಿಕೆಗಳಿಂದ ಅಂತರ ಕಾಯ್ದುಕೊಂಡು ಬೆಳೆದ ಸಂಕುಚಿತವಾದ ಹಾಗೂ ಹಿಂದೂಗಳ ಮೇಲಿನ ದ್ವೇಷದಿಂದ ಸುದೀರ್ಘ ಅವಧಿಯಲ್ಲಿ ರೂಪುಗೊಂಡ ಕುತ್ಸಿತನ ಸ್ಥಿತಿಯದು.
ಈ ಮನಸ್ಥಿತಿಯೇ ದಶಕಗಳ ಹಿಂದೆ ಶುದ್ಧ ಇಸ್ಲಾಮ್‌ನ ಆಚರಣೆಯ ನೆಪದಲ್ಲಿ ಅಥವಾ ಧಾರ್ಮಿಕ ಶುದ್ಧೀಕರಣದ ಕಲ್ಪನೆಯಲ್ಲಿ ಪಾಕಿಸ್ತಾನೀಯರಿಗೆ ಭಾರತದಿಂದ ಬೇರೆಯಾಗಲು ಪ್ರೇರೇಪಣೆ ನೀಡಿತು. ಹಿಂದೂಗಳಿಂದ ದೂರ ಉಳಿಯಬೇಕು ಎಂಬ ಸಿದ್ಧಾಂತದಿಂದ ಹುಟ್ಟಿದ ಕಲ್ಪನೆಯೇ ಪಾಕಿಸ್ತಾನ. ಭಾರತೀಯ ಉಪಖಂಡದಲ್ಲಿದ್ದುಕೊಂಡೇ ಈ ಸಿದ್ಧಾಂತವನ್ನು ಮೊದಲು ಹರಿ ಬಿಟ್ಟವನು ಶಾ ವಲೀಉಲ್ಲಾ. ಸುದೀರ್ಘ ಎರಡು ಶತಮಾನಗಳ ಬಳಿಕ 1940ರ ದಶಕದಲ್ಲಿ ದೇಶ ವಿಭಜನೆಯ ಹೆಸರಿನಲ್ಲಿ ಈ ಸಿದ್ಧಾಂತ ಮತ್ತೆ ಚಿಗಿತುಕೊಂಡಿತು. ಶಾ ವಲೀಉಲ್ಲಾನ ಸಿದ್ಧಾಂತದ ಮರುಹುಟ್ಟಿಗೆ ಕಾರಣನಾದ ವ್ಯಕ್ತಿ ಇಸ್ಲಾಂ ಬಗ್ಗೆ ಸ್ವಲ್ಪವೇ ಸ್ವಲ್ಪ ತಿಳಿವಳಿಕೆ ಹೊಂದಿದ್ದ ಮೊಹಮ್ಮದ್ ಅಲಿ ಜಿನ್ನಾ.
ಆದರೆ ಆತ ‘ಇಸ್ಲಾಂ ಅಪಾಯದಲ್ಲಿದೆ’ ಎಂಬ ಸುಳ್ಳು ಪ್ರಚಾರದ ಲಾಭ ಪಡೆದು ತಮ್ಮ ಬೇಳೆ ಬೇಯಿಸಿಕೊಳ್ಳಲು ಭಾರತದ ಏಕತೆಯನ್ನು ನಾಶಪಡಿಸಿದರು. ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾಗ ಬೇಕು ಎಂಬ ಜಿನ್ನಾ ಪ್ರಯತ್ನ ಕೇವಲ ಸ್ವಾರ್ಥದ್ದಾಗಿತ್ತೇ ಹೊರತು ಅದರಲ್ಲಿ ಇಸ್ಲಾಮ್ ಧರ್ಮಕ್ಕೆ ಅನುಕೂಲ ಮಾಡಿಕೊಡುವ ಅಥವಾ ಭಾರತದ ಮುಸ್ಲಿಮರಿಗೆ ಒಳ್ಳೆಯದನ್ನು ಮಾಡುವ ಯಾವ ಉದ್ದೇಶವೂ ಇರಲಿಲ್ಲ. ಜಿನ್ನಾರಿಗೆ ದೇಶವನ್ನು ಆಳಬೇಕಿತ್ತು. ಅದು ಏಕೀಕೃತ ಭಾರತದಲ್ಲಿ ಸಾಧ್ಯವಿರಲಿಲ್ಲ.
ಜಿನ್ನಾ ಅವರ ಪರಂಪರೆಯೇ ದ್ವೇಷದ ಪರಂಪರೆ. ಅದರಿಂದ ಜನಿಸಿದ ಪ್ರಮುಖ ಉತ್ಪನ್ನವೆಂದರೆ ಹಿಂಸೆ. ಮೊದಲು ಯುದ್ಧದ ರೂಪದಲ್ಲಿ, ನಂತರ ಭಯೋತ್ಪಾದನೆಯ ರೂಪದಲ್ಲಿ ಪಾಕ್ ಪ್ರೇರಿತ ಹಿಂಸಾಚಾರ ನಿರಂತರವಾಗಿ ಚಾಲ್ತಿಯಲ್ಲಿದೆ. ಇದಕ್ಕೆ ಮೂಲಪುರುಷ ಜಿನ್ನಾ. 1947ರ ಅಕ್ಟೋಬರ್ ನಲ್ಲೇ ಅವರು ಭಾರತದ ವಿರುದ್ಧ ಮೊದಲ ಯುದ್ಧಕ್ಕೆ ಆದೇಶ ನೀಡಿದ್ದರು. ನಿರಂತರವಾದ ಸೋಲಿನ ಬಳಿಕವೂ ಅವರ ಉತ್ತರಾಧಿಕಾರಿಗಳು ಭಾರತದ ವಿರುದ್ಧ ಯುದ್ಧ ಮುಂದುವರಿಸಿದರು.
ಕೊನೆಗೆ ನೇರ ಯುದ್ಧದಿಂದ ಪ್ರಯೋಜನವಿಲ್ಲ ಎಂದು ಅರಿತು ಭಯೋತ್ಪಾದನೆಯೆಂಬ ರಾಕ್ಷಸ ನನ್ನು ಸೃಷ್ಟಿಸಿದರು. ಆತನ ಮೂಲಕ ಮುಗ್ಧ ಭಾರತೀಯರ ಮಾರಣಹೋಮ ನಡೆಸಿದರು. ಭಯೋತ್ಪಾದನೆಯೆಂಬುದು ಯಾವುದೇ ನಾಗರಿಕತೆ ಅಥವಾ ಧರ್ಮದಲ್ಲೂ ಅಪ್ಪಟ ಅಪರಾಧ. ಆದರೆ ಪಾಕಿಸ್ತಾನ ತನ್ನ ಪರಂಪರೆಯನ್ನು ಉಳಿಸಿಕೊಳ್ಳಲು ಇದೇ ರಾಕ್ಷಸನಿಗೆ ಶರಣಾಗಿದೆ. ಅಭಿವೃದ್ಧಿ ಹೊಂದಲು ಒಳ್ಳೆಯ ಯಾವ ಮಾರ್ಗಗಳ ಬಗ್ಗೆಯೂ ಯೋಚಿಸದ ಪಾಕಿಸ್ತಾನ, ಕೇವಲ ಪೈಶಾಚಿಕ ನಡತೆಯನ್ನೇ ತನ್ನ ದಿನನಿತ್ಯದ ಆಹಾರವೆಂಬಂತೆ ಸೇವಿಸುತ್ತಾ ಬಂದಿದೆ.
ಇದನ್ನೂ ಓದಿ: M J Akbar Column: ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಅತಿದೊಡ್ಡ ಗಿಫ್ಟ್ ಇದು !
ಅದರ ಪರಿಣಾಮವಾಗಿ ದಿನದಿಂದ ದಿನಕ್ಕೆ ಕುಸಿಯುತ್ತಾ ಅಧಃಪತನದತ್ತ ಸಾಗುತ್ತಿದೆ. ಪಾಕ್ ಪ್ರೇರಿತ ಭಯೋತ್ಪಾದನೆಯು ದಶಕದ ಹಿಂದಿನವರೆಗೆ ಭಾರತದ ಎಲ್ಲಾ ಮೂಲೆಗಳಲ್ಲೂ ಸಾವು ನೋವಿಗೆ ಕಾರಣವಾಗುತ್ತಿತ್ತು. ಆದರೆ ಈಗ ಅದು ಭಾರತದ ಮುಕುಟಪ್ರಾಯವಾಗಿರುವ ಕಾಶ್ಮೀರವನ್ನೇ ತನ್ನ ಮುಖ್ಯ ರಣಾಂಗಣವನ್ನಾಗಿ ಮಾಡಿಕೊಂಡಿದೆ.
ಜಿನ್ನಾ ಅವರ ಹೊಸ ಅವತಾರವೇ ಪಾಕಿಸ್ತಾನದ ಸೇನಾಪಡೆಯ ಮುಖ್ಯಸ್ಥ ಜನರಲ್ ಆಸಿಮ್ ಮುನಿರ್. ಈತ ತನ್ನ ಬುದ್ಧಿವಂತಿಕೆ ಅಥವಾ ಆಡಳಿತದ ಚತುರತೆಯಿಂದ ಅಥವಾ ಮಿಲಿಟರಿ ಕೌಶಲಗಳಿಂದ ಯಾವತ್ತೂ ಪ್ರಸಿದ್ಧನಾಗಿಲ್ಲ. ಪಾಕಿಸ್ತಾನದಲ್ಲೇ ಇವನನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅಂಥ ವ್ಯಕ್ತಿ ಕಳೆದ ವಾರ ಬಹಿರಂಗವಾಗಿ ಭಯೋತ್ಪಾದನೆಯನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದಾನೆ. ಈ ಹಿಂದೆಯೂ ಪಾಕಿಸ್ತಾನದ ಅನೇಕ ನಾಯಕರು ಭಯೋತ್ಪಾದನೆಯನ್ನು ಸಮರ್ಥಿಸಿಕೊಂಡಿದ್ದರು.

ಅದಕ್ಕಿದು ಹೊಸ ಸೇರ್ಪಡೆ. ನಮಗೆ ಸಾವಿರ ಗಾಯಗಳಾಗಿವೆ, ಅವುಗಳನ್ನು ಗುಣಪಡಿಸಿಕೊಳ್ಳಲು ಇಂಥ ಮಾರ್ಗ ಅಗತ್ಯ ಎಂಬುದು ಭಯೋತ್ಪಾದನೆಗೆ ಪಾಕಿಸ್ತಾನ ನೀಡುವ ಸಮರ್ಥನೆ. ಮುನಿರ್ ಮಾತನಾಡುವಾಗ ಪಾಕಿಸ್ತಾನದ ಅಸ್ತಿತ್ವವನ್ನು ಬಲವಾಗಿ ಪ್ರತಿಪಾದಿಸುತ್ತಾ, ಕಾಶ್ಮೀರವನ್ನು ಏಕೆ ಭಾರತದಿಂದ ಬೇರ್ಪಡಿಸಬೇಕು ಎಂಬುದಕ್ಕೂ ತನ್ನದೇ ಆದ ವ್ಯಾಖ್ಯಾನ ನೀಡಿದ್ದಾನೆ.
ಇಷ್ಟಕ್ಕೂ ಆತ ಕಾಶ್ಮೀರದ ಸ್ವಾತಂತ್ರ್ಯಕ್ಕೆ ನೀಡಿದ ಕಾರಣ ಅದೇ ಹಳಸಲಾದ ಹಳೆಯ ಹೇಳಿಕೆ. “ಮುಸ್ಲಿಮರು ಎಲ್ಲಾ ರೀತಿಯಲ್ಲೂ ಹಿಂದೂಗಳಿಗಿಂತ ಭಿನ್ನ. ನಮ್ಮ ಧರ್ಮ ಭಿನ್ನ. ನಮ್ಮ ಯೋಚನೆ ಭಿನ್ನ. ನಮ್ಮ ಗುರಿಗಳೂ ಭಿನ್ನ. ಈ ಕಾರಣಕ್ಕಾಗಿಯೇ ಭಾರತ ವಿಭಜನೆಯಾಯಿತು. ನಾವಿಬ್ಬರೂ ಬೇರೆ ಬೇರೆ ದೇಶಗಳು. ಯಾವತ್ತೂ ಒಂದಾಗಲು ಸಾಧ್ಯವಿಲ್ಲ. ಎರಡು ದೇಶಗಳ ಥಿಯರಿ ಹುಟ್ಟಿದ್ದೇ ಈ ಕಾರಣಕ್ಕೆ. ಆದ್ದರಿಂದಲೇ ಕಾಶ್ಮೀರವು ಭಾರತದಿಂದ ಬೇರೆಯಾಗಬೇಕು"- ಇದು ಮುನಿರ್‌ನ ಪ್ರತಿಪಾದನೆ.
ಮುನಿರ್‌ಗೆ ಯಾರಾದರೂ ಗಣಿತದ ಮೂಲಪಾಠ ಮಾಡುವ ಅಗತ್ಯವಿದೆ. ಲೆಕ್ಕ ಹಾಕುವುದು ಹೇಗೆಂಬುದನ್ನು ಮೊದಲು ಈ ಮನುಷ್ಯನಿಗೆ ಕಲಿಸಬೇಕು. ಬಹುಶಃ ಪಾಕಿಸ್ತಾನದ ಈ ಜನರಲ್‌ಗೆ ಅಮ್ನೇಶಿಯಾ ಕಾಯಿಲೆ ಇರಬಹುದು. ‘ಎರಡು ದೇಶ’ ಸಿದ್ಧಾಂತ 1971ರಲ್ಲಿ ‘ಮೂರು ದೇಶಗಳ’ ಸಿದ್ಧಾಂತವಾಯಿತು. ಅದಕ್ಕೆ ಕಾರಣ ಬಂಗಾಳದ ಮುಸ್ಲಿಮರು ಕಡಿಮೆ ಮುಸ್ಲಿಮರಾಗಿದ್ದರು ಎಂಬುದಲ್ಲ. ಬದಲಿಗೆ ಅವರು ಕಡಿಮೆ ಪಾಕಿಸ್ತಾನಿಗಳಾಗಿದ್ದರು ಎಂಬ ಕಾರಣಕ್ಕೆ ಮೂರನೇ ದೇಶ ಹುಟ್ಟಿಕೊಂಡಿತು. ಪೂರ್ವ ಬಂಗಾಳಿಗಳು ತಮ್ಮನ್ನು ತಾವು ಸ್ವತಂತ್ರಗೊಳಿಸಿಕೊಂಡು ಬಾಂಗ್ಲಾದೇಶ ವೆಂದು ಹೆಸರಿಟ್ಟುಕೊಂಡರು.
ಇವತ್ತೇನೋ ಬಾಂಗ್ಲಾದೇಶದಲ್ಲಿರುವ ಚುನಾಯಿತವಲ್ಲದ ಸರಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಪಾಕಿಸ್ತಾನದ ಜತೆ ಕೈಜೋಡಿಸಲು ಹೊರಟಿದ್ದಾರೆ. ಆದರೆ, 1971ರಿಂದ ಕಳೆದ ವರ್ಷ ದವರೆಗೂ ಬಾಂಗ್ಲಾದೇಶಕ್ಕೆ ಪಾಕಿಸ್ತಾನವನ್ನು ಕಂಡರೆ ಆಗುತ್ತಿರಲಿಲ್ಲ. ಹಿಂದೆ 1971ರ ಮಾರ್ಚ್ ನಿಂದ ಡಿಸೆಂಬರ್ ನಡುವೆ ಬಾಂಗ್ಲಾದೇಶದಲ್ಲಿ ಪಾಕಿಸ್ತಾನ ನಡೆಸಿದ ಮಾರಣಹೋಮಕ್ಕೆ ಪರಿಹಾರ ಧನವಾಗಿ ನೂರಾರು ಕೋಟಿ ಡಾಲರ್ ನೀಡಬೇಕೆಂದು ಬಾಂಗ್ಲಾದೇಶವು ಪಾಕಿಸ್ತಾನದ ಬಳಿ ಕೇಳಿದ್ದುಂಟು. ಅದನ್ನೆಲ್ಲ ಯೂನಸ್ ಮರೆತಂತಿದೆ.
ಪಾಕಿಸ್ತಾನದ ಮಸೀದಿಗಳು ಮತ್ತು ಕಂಟೋನ್ಮೆಂಟ್‌ಗಳು ಹಳೆಯ ಮಾರಣ ಹೋಮವನ್ನು ಜನರ ನೆನಪಿನಿಂದ ಅಳಿಸಿ ಹಾಕಲು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಬಹುಶಃ ಹಾಗೆ ಮಾಡಬೇಕು ಎಂದು ಅವುಗಳಿಗೆ ಕಟ್ಟುನಿಟ್ಟಿನ ಆದೇಶವಿರಬಹುದು. ಬಾಂಗ್ಲಾ ಯುದ್ಧಕ್ಕೂ ಮುನ್ನ ಪಾಕ್ ನಡೆಸಿದ ಹಿಂಸಾಚಾರದಿಂದಾಗಿ ಅನಾಮತ್ತು ಒಂದು ಕೋಟಿ ಬಂಗಾಳಿ ಮುಸ್ಲಿಮರು ಮತ್ತು ಹಿಂದೂಗಳು ಭಾರತಕ್ಕೆ ಓಡಿಬಂದು ಆಶ್ರಯ ಪಡೆದುಕೊಂಡರು.
ನಂತರ ಪೂರ್ಣ ಪ್ರಮಾಣದ ಯುದ್ಧ ನಡೆದು, ಭಾರತದ ಸಹಾಯದಿಂದ ಪಾಕಿಸ್ತಾನದ ರೆಕ್ಕೆಪುಕ್ಕ ಕತ್ತರಿಸಿ, ಪಾಕಿಸ್ತಾನದ ರಕ್ತದಾಹಿ ಸರ್ವಾಧಿಕಾರಿಗಳ ಕೈಲಿ ಸಿಲುಕಿದ್ದ ಮಿಲಿಟರಿಯನ್ನು ಸ್ವತಂತ್ರ ಗೊಳಿಸಿದ ಮೇಲೆ ಈ ನಿರಾಶ್ರಿತರು ಮರಳಿ ತಮ್ಮ ದೇಶಕ್ಕೆ ಹೋಗಿ ನೆಲೆ ಕಂಡುಕೊಂಡರು. ಮೂರು ದೇಶಗಳ ಸಿದ್ಧಾಂತ ಸ್ಫೋಟಿಸಿದಾಗ ಆಸಿಮ್ ಮುನಿರ್‌ಗೆ ಮೂರು ವರ್ಷ. ಇಮಾಂ ಆಗಿದ್ದ ಈತನ ತಂದೆ ತನ್ನ ಮಗನಿಗೆ ಬಾಂಗ್ಲಾದೇಶದ ಹುಟ್ಟಿನ ಬಗ್ಗೆ ಹೇಳುವುದಕ್ಕೆ ಮರೆತಿರಬೇಕು. ಇವನು ಓದಿದ ಶಾಲೆಗಳು ಕೂಡ 1947ರಲ್ಲಿ ಪಾಕಿಸ್ತಾನ ಜನಿಸಿತು, ಬಳಿಕ 1971ರಲ್ಲಿ ‘ಹಿಂದೂಗಳಾಗಿದ್ದ ಬಂಗಾಳಿ ಮುಸ್ಲಿಮರಿಂದ’ ಸ್ವತಂತ್ರಗೊಂಡು ಪಾಕಿಸ್ತಾನ ಮತ್ತೊಮ್ಮೆ ಜನಿಸಿತು ಎಂದು ಕಟ್ಟುಕತೆಯ ಪಾಠ ಹೇಳಿರಬೇಕು.
ಏಪ್ರಿಲ್ 16ರಂದು ಜನರಲ್ ಮುನಿರ್ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಮ್ಮೆ ಭಯೋ ತ್ಪಾದನೆಯ ಸಮರ ನಡೆಸಬೇಕು ಎಂಬ ಅಜೆಂಡಾ ಸಿದ್ಧಪಡಿಸಿಕೊಟ್ಟಿದ್ದ. ಷರೀಫ್ ಸಹೋದರರ ನೇತೃತ್ವದಲ್ಲಿ ನಡೆಯುತ್ತಿರುವ ಇಸ್ಲಾಮಾಬಾದ್‌ನಲ್ಲಿನ ನಾಗರಿಕ ಸರಕಾರ ಮುನಿರ್‌ಗೆ ಇಂಥ ನಿರ್ಧಾರಗಳನ್ನು ಕೈಗೊಳ್ಳಲು ಅಧಿಕಾರ ನೀಡಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅದು ಅಪ್ರಸ್ತುತ ಬಿಡಿ. 1957ರಿಂದಲೂ ಪಾಕಿಸ್ತಾನದ ಸೇನೆಯು ಅಲ್ಲಿನ ಸರಕಾರದಿಂದ ಆದೇಶಗಳನ್ನು ಪಡೆದಿಲ್ಲ.
ಹೀಗಾಗಿ ಮುನಿರ್ ಕೂಡ “ಕಾಶ್ಮೀರ ನಮ್ಮ ಕಂಠನಾಳವಿದ್ದಂತೆ, ಕಾಶ್ಮೀರ ನಮ್ಮ ಕಂಠನಾಳ ವಿದ್ದಂತೆ, ಯಾವತ್ತೂ ಅದನ್ನು ಮರೆಯಬಾರದು... ನಾವು ನಮ್ಮ ಕಾಶ್ಮೀರಿ ಸಹೋದರರನ್ನು ಐತಿಹಾಸಿಕ ನರಳಾಟದ ಕೂಪದಲ್ಲಿ ಹಾಗೇ ಬಿಡಲು ಸಾಧ್ಯವಿಲ್ಲ" ಎಂದು ಏರುಕಂಠದಲ್ಲಿ ಹೇಳಿ ರಣಕಹಳೆ ಮೊಳಗಿಸಿದ್ದ. ಹೀಗೆ ಇದ್ದಕ್ಕಿದ್ದಂತೆ ಕಾಶ್ಮೀರದಲ್ಲಿ ರಕ್ತಪಾತ ನಡೆಸುವುದಕ್ಕೆ ಪಾಕ್ ಬಳಿ ಏನಾದರೊಂದು ವಿಶ್ವಾಸಾರ್ಹ ಕಾರಣ ಇದ್ದೀತೆ? ಪಾಕಿಸ್ತಾನದ ಸೇನಾಪಡೆಯ ಮುಖ್ಯಸ್ಥನಾದ ಬಳಿಕ ಮುನಿರ್ ಸದಾ ಮೌನವಾಗಿದ್ದ. ಆದರೆ ಬಹುಶಃ ಈಗ ತನ್ನ ಕಮಾಂಡ್ ಪಡೆಯಲ್ಲಿ ಹೊಸ ಶಕ್ತಿ ಸಂಪಾದಿಸಿಕೊಂಡು, ಮೌನ ಮುರಿದು ಹೊರಬಂದಿರಬೇಕು. ಆದರೆ ತನ್ನ ನಿಯಂತ್ರಣ ದಲ್ಲಿಲ್ಲದ ಕಾಶ್ಮೀರದಲ್ಲಿ ಆದ ಒಳ್ಳೆಯ ಬದಲಾವಣೆಯನ್ನಾದರೂ ಈತ ಒಮ್ಮೆ ನೋಡಬೇಕಿತ್ತು.
ಕಳೆದ ಐದು ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾದ ಬಳಿಕ ಅಲ್ಲಿನ ಪ್ರವಾಸೋದ್ಯಮ, ವ್ಯಾಪಾರ, ವ್ಯವಹಾರಗಳು ಸಾಕಷ್ಟು ಸುಧಾರಣೆಯಾಗಿ ಜನರ ಜೀವನಮಟ್ಟ ಕೂಡ ಸುಧಾರಿಸುತ್ತಿದೆ. ಬದಲಾಗುತ್ತಿರುವ ಈ ವಾಸ್ತವ ಮುನಿರ್ ಕಣ್ಣಿಗೆ ಏಕೆ ಬೀಳಲಿಲ್ಲ? ಅಥವಾ ಈ ಸುಧಾರಣೆಗೆ ಕಲ್ಲು ಹಾಕಬೇಕೆಂದೇ ಇನ್ನೊಂದು ರಕ್ತಪಾತ ಮಾಡಿಸಿದ್ದಾರೆಯೇ? 1947ರ ಅಕ್ಟೋಬರ್‌ನಲ್ಲೇ ಜಮ್ಮು ಮತ್ತು ಕಾಶ್ಮೀರದ ಮೇಲೆ ಏಕಪಕ್ಷೀಯ ಯುದ್ಧ ಆರಂಭಿಸುವ ಮೂಲಕ ಜಾಗತಿಕ ಇತಿಹಾಸದಲ್ಲಿ ಅತ್ಯಂತ ಸುದೀರ್ಘ ಎನ್ನಬಹುದಾದ ಸಂಗ್ರಾಮಕ್ಕೆ ಪಾಕಿಸ್ತಾನ ನಾಂದಿ ಹಾಡಿತ್ತು. ಆಗಿನ್ನೂ ಜಮ್ಮು ಮತ್ತು ಕಾಶ್ಮೀರವು ರಾಜಾಳ್ವಿಕೆಯಲ್ಲೇ ಇತ್ತು. ಅದರ ರಾಜಕೀಯ ಭವಿಷ್ಯವೇನು ಎಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು.
ಜಮ್ಮು ಮತ್ತು ಕಾಶ್ಮೀರವನ್ನು ಮಹಾರಾಜರು ಆಳುತ್ತಿದ್ದರು. ಭಾರತೀಯ ಉಪಖಂಡವನ್ನು ಇನ್ನೂ ಬ್ರಿಟಿಷರು ಪೂರ್ಣ ಪ್ರಮಾಣದಲ್ಲಿ ಬಿಟ್ಟು ಹೋಗಿರಲಿಲ್ಲ. ಲಾರ್ಡ್ ಮೌಂಟ್‌ಬ್ಯಾಟನ್ ಮೂಲಕ ಇಲ್ಲಿನ ವ್ಯವಹಾರಗಳನ್ನು ಬ್ರಿಟನ್ ನಿಯಂತ್ರಿಸುತ್ತಿತ್ತು. ಭಾರತ ಮತ್ತು ಪಾಕಿಸ್ತಾನಕ್ಕೆ ಸ್ವಯಂ ಆಡಳಿತದ ಸ್ವಾತಂತ್ರ್ಯವೇನೋ ಸಿಕ್ಕಿತ್ತು, ಆದರೆ ಅವುಗಳಿನ್ನೂ ಬ್ರಿಟಿಷ್ ಸಾಮ್ರಾಜ್ಯದ ಡೊಮಿನಿಯನ್ ಸ್ಟೇಟ್‌ಗಳಾಗಿದ್ದವು.
‘ಹಿಂದೂಗಳಿಂದ ಕಲುಷಿತಗೊಂಡಿರುವ’ ಭಾರತದಲ್ಲಿ ಇರುವ ಬದಲು ಮುಸ್ಲಿಂ ನೆಲದ ಸ್ವರ್ಗದಲ್ಲಿ ನಮ್ಮ ಜತೆಗೆ ಇರಿ ಎಂದು ಕಾಶ್ಮೀರಿಗಳಿಗೆ ಪಾಕಿಸ್ತಾನ ಕರೆ ನೀಡಿತ್ತು. ಏಳು ದಶಕಗಳ ನಂತರ ಸಾಕ್ಷ್ಯ ನಮ್ಮ ಕಣ್ಣೆದುರೇ ಇದೆ. ಸ್ವರ್ಗ ಯಾವುದು, ನರಕ ಯಾವುದು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಅರ್ಥಶಾಸ್ತ್ರಜ್ಞರ ಎಲ್ಲಾ ಚಾರ್ಟ್‌ಗಳಲ್ಲೂ, ಮಾಧ್ಯಮಗಳಲ್ಲಿ ಪ್ರಕಟವಾಗುವ ಎಲ್ಲಾ ಫೋಟೋ ಗಳಲ್ಲೂ ಈ ಸ್ವರ್ಗ ಮತ್ತು ನರಕಗಳು ಕಾಣಿಸುತ್ತಿವೆ.
ಭಾರತದ ಕಾಶ್ಮೀರವು ಹಿಂದೆಂದೂ ಕಂಡಿರದ ಆರ್ಥಿಕಾಭಿವೃದ್ಧಿಯನ್ನು ಕಂಡು ದಿನೇದಿನೆ ಶ್ರೀಮಂತವಾಗುತ್ತಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರವು ಜಗತ್ತಿನಲ್ಲೇ ಅತ್ಯಂತ ಹಿಂದುಳಿದ ಮತ್ತು ದುಸ್ಥಿತಿಯಲ್ಲಿರುವ ಭೂಭಾಗವಾಗಿ ದಿನೇದಿನೆ ಅಧಃಪತನದತ್ತ ಸಾಗುತ್ತಿದೆ. ಮುಳುಗುತ್ತಿರುವ ದೇಶದ ದುರದೃಷ್ಟಕರ ಪ್ರಾಂತ್ಯವಾಗಿ ಪಿಒಕೆ ನರಳುತ್ತಿದೆ. ಭದ್ರತೆಯ ಹೆಸರಿನಲ್ಲಿ ಅಲ್ಲಿನ ಎಲ್ಲಾ ಸಂಪತ್ತನ್ನೂ ಪಾಕಿಸ್ತಾನದ ಧನದಾಹಿ ಸೇನಾಪಡೆ ದೋಚುತ್ತಿದೆ. ಕೊನೆಗೆ ಅಲ್ಲಿನ ಜನರಿಗೆ ಉಳಿಯುತ್ತಿರುವುದು ಖಾಲಿ ತಟ್ಟೆಯಷ್ಟೆ. ಇಸ್ಲಾಂ ಮತ್ತು ರಾಷ್ಟ್ರೀಯವಾದದ ನಡುವಿನ ಕೃತಕ ಗರ್ಭಧಾರಣೆಯ ಮೂಲಕ ಪಾಕಿಸ್ತಾನ 1947ರಲ್ಲಿ ಹುಟ್ಟಿಕೊಂಡಿತು.
ಒಂದು ದೇಶವನ್ನು ಹೀಗೆ ಹುಟ್ಟಿಸಬಹುದು ಎಂಬುದಕ್ಕೆ ಅದಕ್ಕೂ ಮೊದಲು ಯಾವುದೇ ಉದಾಹರಣೆ ಇರಲಿಲ್ಲ. ಅದು ಹೋಗಲಿ, ಇವತ್ತಿಗೂ ಸಮಕಾಲೀನ ವಾಸ್ತವದಲ್ಲೂ ಅದೊಂದು ಅಸಂಬದ್ಧ ಕತೆಯಾಗಿಯೇ ಉಳಿದುಕೊಂಡಿದೆ. ಒಂದು ದೇಶ ಜನಿಸಲು ಇಸ್ಲಾಂ ಎಂಬ ತಳಹದಿ ಯೇ ಸಾಕಿತ್ತು ಅಂತಾದರೆ, ಕೊಲ್ಲಿಯಲ್ಲಿ 22 ಅರಬ್ ದೇಶಗಳು ಏಕಿವೆ? ಆ ದೇಶಗಳಲ್ಲಿ ಒಂದೇ ಭಾಷೆ ಮಾತನಾಡುತ್ತಾರೆ. ಭೂಭಾಗಗಳನ್ನೂ, ಸಂಸ್ಕೃತಿಯನ್ನೂ, ಅಸ್ಮಿತೆಯನ್ನೂ ಜೋಡಿಸಲು ಇಸ್ಲಾಮ್ ಒಂದೇ ಸಾಕು ಅಂತಾಗಿದ್ದರೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಏಕೆ ಎರಡು ದೇಶಗಳಾಗಿ ಇರಬೇಕಿತ್ತು? ಕಾಬೂಲ್‌ನಲ್ಲಿ ಇಂದು ತಾಲಿಬಾನ್ ಅಧಿಕಾರದಲ್ಲಿದೆ.
ಕ್ವೆಟ್ಟಾ ಮತ್ತು ಪಾಕಿಸ್ತಾನದ ಫ್ರಂಟಿಯರ್‌ನಲ್ಲಿ ಈ ಹಿಂದೆ ಅವರು ಅಜ್ಞಾತವಾಸದಲ್ಲಿದ್ದರು. ಆದರೆ ಅವರು ಯಾವತ್ತೂ ಅಫ್ಘಾನಿಸ್ತಾನವನ್ನು ಪಾಕಿಸ್ತಾನದ ಜತೆಗೆ ಒಂದುಗೂಡಿಸಬೇಕು ಎಂದು ಕೇಳಲಿಲ್ಲ. ಅದರ ಬಗ್ಗೆ ಆಸಕ್ತಿಯನ್ನೂ ತೋರಲಿಲ್ಲ. ಅಫ್ಘಾನಿಸ್ತಾನಕ್ಕೆ ಮರಳಿ ಅಧಿಕಾರ ಹಿಡಿದ ಮೇಲೂ ಅವರು ಪಾಕ್ -ಆಫ್ಘನ್ ಒಂದಾಗಬೇಕು ಎನ್ನಲಿಲ್ಲ. ಎಲ್ಲರಂತೆ ಅವರಿಗೂ ಆಫ್ಘನ್ ರಾಷ್ಟ್ರೀಯವಾದಕ್ಕೆ ಆಫ್ಘನ್ ಗುರುತೇ ಪರಮೋಚ್ಚ ಸಂಕೇತ. ಇದು ಅವರನ್ನೇನೂ ಕಡಿಮೆ ಮುಸ್ಲಿಮರನ್ನಾಗಿಸುವುದಿಲ್ಲ. ಇಸ್ಲಾಮ್‌ನಲ್ಲಿ 72 ವಿಭಿನ್ನ ಜನಾಂಗಗಳಿವೆ ಎಂಬುದನ್ನು ಯಾವುದೇ ಸಮಾಜಶಾಸ್ತ್ರಜ್ಞ ನಿಮಗೆ ತಿಳಿಸುತ್ತಾನೆ. ಬಹುಶಃ ಹನಾಫಿ ಇಸ್ಲಾಂ ಪಂಗಡವನ್ನು ಪ್ರತಿನಿಧಿಸುವ ಮುನಿರ್, ಇಸ್ಮಾಯಿಲ್‌ಗಳನ್ನೂ ಬೊಹ್ರಾಗಳನ್ನೂ ನಿಜವಾದ ಮುಸ್ಲಿಂ ಎಂದು ಒಪ್ಪುತ್ತಾನೆಯೇ? ಜಗತ್ತಿನಲ್ಲಿರುವ ಬಹು ಸಂಸ್ಕೃತಿಯ ವೈವಿಧ್ಯಗಳ ಬಗ್ಗೆ ಇಸ್ಲಾಮಿಕ್ ಮೂಲ ಸಿದ್ಧಾಂತಕ್ಕೆ ಯಾವ ತಕರಾರೂ ಇಲ್ಲ.
ಕುರಾನ್‌ನಲ್ಲಿ ಅಲ್ಲಾನನ್ನು ಯಾವಾಗಲೂ ರಬ್-ಉಲ್-ಅಲ್-ಅಮಿನ್ ಎಂದೇ ಕರೆದಿದ್ದಾರೆ. ಅಂದರೆ ಆತ ಬ್ರಹ್ಮಾಂಡದ ದೇವರು. ಅವನು ಕೇವಲ ರಬ್-ಅಲ್-ಮುಸ್ಲಿಮೀನ್ ಅರ್ಥಾತ್ ಮುಸ್ಲಿಮರ ದೇವರು ಅಲ್ಲ. ದೇವರು ಎಲ್ಲಾ ಭಾಷೆಗಳಲ್ಲೂ ಸಂದೇಶವನ್ನು ಕಳುಹಿಸಿದ್ದಾನೆ. ಕೊನೆಯ ಸಂದೇಶವೇ ಕುರಾನ್. ಎಲ್ಲಾ ಮನುಷ್ಯರನ್ನೂ ಅಲ್ಲಾ ಸೃಷ್ಟಿಸಿದ್ದಾನೆ. ಹೀಗಾಗಿ ಜಡ್ಜ್ ಮಾಡಬೇಕಾದವರು ದೇವರೇ ಹೊರತು ನಾವಲ್ಲ.
ಪಾಕಿಸ್ತಾನವೆಂಬುದು ಒಂದು ಅದ್ವಿತೀಯವಾದ ಹಾಗೂ ಋಣಾತ್ಮಕವಾದ ವಿಫಲ ಪ್ರಯೋಗ. ಬ್ರಿಟಿಷ್ ವಸಾಹತುಶಾಹಿಗಳು ತಮ್ಮ ಶೋಕಿಗಾಗಿ ಅಂಥದೊಂದು ಪ್ರಯೋಗ ಮಾಡಿದರು. ಇಸ್ಲಾಂ ಅಪಾಯದಲ್ಲಿದೆ, ಹೀಗಾಗಿ ಭಾರತದಿಂದ ಮುಸ್ಲಿಮರನ್ನು ಬೇರ್ಪಡಿಸುವ ಮೂಲಕ ಅವರನ್ನು ರಕ್ಷಿಸಬೇಕಿದೆ ಎಂಬ ಅಪನಂಬಿಕೆಯಲ್ಲಿ ಅವರು ಪಾಕಿಸ್ತಾನದ ಸೃಷ್ಟಿಗೆ ಅವಕಾಶ ನೀಡಿದರು. ಆದರೆ ನನ್ನ ಪ್ರಕಾರ ಇಸ್ಲಾಂ ಅಪಾಯಕ್ಕೆ ಸಿಲುಕಬಹುದು ಎಂಬ ಕಲ್ಪನೆಯೇ ಅಸಂಬದ್ಧ ಅಥವಾ ಕೇವಲ ವದಂತಿ.
ಆಸ್ತಿಕ ಮುಸ್ಲಿಮರು ನಂಬುವಂತೆ ಇಸ್ಲಾಂ ಎಂಬುದು ನಿಜವಾದ ಧರ್ಮವೇ ಆಗಿದ್ದರೆ ಅದು ಯಾವತ್ತೂ ಅಪಾಯಕ್ಕೆ ಸಿಲುಕಲು ಸಾಧ್ಯವಿಲ್ಲ. ಸುಳ್ಳು ಧರ್ಮ ಮಾತ್ರ ಅಪಾಯಕ್ಕೆ ಸಿಲುಕ ಬಲ್ಲದು. ಆದರೆ, ಮುಸ್ಲಿಮರು ಅಪಾಯಕ್ಕೆ ಸಿಲುಕಬಹುದು. ಅಂತೆಯೇ ಕ್ರಿಶ್ಚಿಯನ್ನರೂ, ಪಾರ್ಸಿ ಗಳೂ, ಬೌದ್ಧರೂ ಅಥವಾ ಇನ್ನಾವುದೇ ಧರ್ಮದವರೂ ಅಪಾಯಕ್ಕೆ ಸಿಲುಕಬಹುದು.
ಹಿಂದೂ ಧರ್ಮದಲ್ಲಿ ನಮ್ಮದು ಮೇಲ್ವರ್ಗದ ಜಾತಿ ಎಂದು ನಂಬಿದವರು ಕೂಡ ಅಪಾಯಕ್ಕೆ ಸಿಲುಕಬಹುದು. ಕಮ್ಯುನಿಸ್ಟ್ ಚೀನಾದ ನಾಸ್ತಿಕ ಆಡಳಿತದಲ್ಲಿ ಬೌದ್ಧರು ಮತ್ತು ಮುಸ್ಲಿಮರು ಹೆಚ್ಚುಕಮ್ಮಿ ನಾಮಾವಶೇಷವೇ ಆಗಿ ಬಿಟ್ಟಿದ್ದಾರೆ. ಅದು ಪಾಕಿಸ್ತಾನದ ಗ್ರೇಟ್ ಮುಸ್ಲಿಮರಿಗೆ ಸ್ವಲ್ಪವೂ ಚಿಂತೆಯನ್ನು ಹುಟ್ಟಿಸುತ್ತಿಲ್ಲ.
ಒಂದು ವೇಳೆ ಜನರಲ್ ಮುನಿರ್ ಚೀನಾದಲ್ಲಿರುವ ಉಯಿಗುರ್ ಮುಸ್ಲಿಮರ ಸಂಕಷ್ಟದ ಬಗ್ಗೆ ಮಾತನಾಡಿದರೆ ತಕ್ಷಣ ಪಾಕಿಸ್ತಾನದ ಸರಕಾರವೇ ಅವನನ್ನು ಮನೆಗೆ ಕಳಿಸುತ್ತದೆ. ಏಕೆಂದರೆ ಪಾಕಿಸ್ತಾನದ ಆಡಳಿತಗಾರರು ತಮ್ಮ ದೇಶವನ್ನು ಖಾಸಗಿ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಚೀನಾದ ರಕ್ಷಣೆಯಿಲ್ಲದೆ ಅವರಿಗೆ ಬದುಕುಳಿಯಲು ಸಾಧ್ಯವೇ ಇಲ್ಲ. ನಿಜವಾಗಿ ಹೇಳಬೇಕೆಂದರೆ ಪಾಕಿಸ್ತಾನ ಇಂದಿಗೂ ಮತ್ತೊಂದು ದೇಶದ ಡೊಮಿನಿಯನ್ ಪ್ರದೇಶವೇ ಆಗಿದೆ. ಆದರೆ ಈಗ ಅದು ಬ್ರಿಟಿಷ್ ಆಡಳಿತದ ಡೊಮಿನಿಯನ್ ಅಲ್ಲ, ಬದಲಿಗೆ ಚೈನೀಸ್ ಡೊಮಿನಿಯನ್.
ಆಧುನಿಕ ರಾಜಕೀಯ ವ್ಯವಸ್ಥೆಯಲ್ಲಿ ಜನರಿಗೆ ಕಷ್ಟಗಳಿದ್ದರೆ ಅಥವಾ ಯಾವುದರ ಬಗ್ಗೆಯಾದರೂ ಭೀತಿಯಿದ್ದರೆ ಆಗ ಅಂಥ ಸಮಸ್ಯೆಗಳಿಗೆ ರಾಜಕೀಯ ಪರಿಹಾರಗಳಿರುತ್ತವೆ. ದೇಶದ ವಿಭಜನೆಯೇ ಏಕೈಕ ಪರಿಹಾರವಾಗಿತ್ತು ಅಂತಾದರೆ ಒಂದೊಂದು ಊರು ಅಥವಾ ಜಿಲ್ಲೆ ಕೂಡ ಇಂದು ಪ್ರತ್ಯೇಕ ದೇಶವಾಗಬೇಕಿತ್ತು! ಆಗ ಜಗತ್ತಿನಲ್ಲಿ ನೂರಾರು ಅಮೆರಿಕಗಳು, ರಷ್ಯಾಗಳು, ಚೀನಾಗಳು ಇರು ತ್ತಿದ್ದವು.
ಭಾರತದ ಪ್ರಜಾಸತ್ತಾತ್ಮಕ ಸಂವಿಧಾನವು ಸಹಬಾಳ್ವೆಗೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಿದ್ದರೂ ಅವುಗಳಿಗೆ ಅದ್ಭುತವಾದ ಪರಿಹಾರಗಳನ್ನು ನೀಡುತ್ತಾ ಬಂದಿದೆ. ಪ್ರಜಾಪ್ರಭುತ್ವದ ಅತ್ಯುನ್ನತ ಮೌಲ್ಯವೇ ಇದು. ಸರ್ವಾಧಿಕಾರಿಗಳು ಪರಿಹಾರಗಳನ್ನು ಹೇರುತ್ತಾರೆ. ಅವುಗಳಲ್ಲಿ ಕೆಲವು ಒಳ್ಳೆಯ ದಿರುತ್ತವೆ, ಇನ್ನು ಕೆಲವನ್ನು ಒಪ್ಪಲು ಸಾಧ್ಯವಿರುವುದಿಲ್ಲ.
ಆಸಿಮ್ ಮುನಿರ್‌ನ ನಿಜವಾದ ಉದ್ದೇಶ ಭಾರತದೊಂದಿಗೆ ಯುದ್ಧ ಮಾಡುವುದಾಗಿರಲಿಕ್ಕಿಲ್ಲ. ಆದರೂ ಅದೃಷ್ಟದ ನಾಣ್ಯವನ್ನು ಚಿಮ್ಮಿದಾಗ ಅದು ಯಾವ ಮುಖವನ್ನು ಮೇಲು ಮಾಡಿ ಬೀಳುತ್ತದೆ ಎಂದು ಹೇಗೆ ಹೇಳುವುದು? ಪರಮಾಣು ಅಸ್ತ್ರಗಳನ್ನು ಹೊಂದಿರುವ ಎರಡು ದೇಶಗಳ ನಡುವೆ ಯುದ್ಧವನ್ನು ಸುಲಭಕ್ಕೆ ಯಾರೂ ಊಹೆ ಮಾಡಲು ಸಾಧ್ಯವಿಲ್ಲ. ಯುದ್ಧ ನಡೆದರೆ ಏನಾದೀತು ಎಂದು ಕಲ್ಪನೆ ಕೂಡ ಮಾಡಿಕೊಳ್ಳಲು ಆಗದು. ಅಣ್ವಸದ ಮಾತು ಹಾಗಿರಲಿ, ಸಾಮಾನ್ಯ ಯುದ್ಧ ನಡೆದರೂ ಈಗಾಗಲೇ ನೆಲಕಚ್ಚಿರುವ ಪಾಕಿಸ್ತಾನ ಇನ್ನಷ್ಟು ಛಿದ್ರವಾಗುತ್ತದೆ.
ಪಾಕಿಸ್ತಾನದ ರಾಜಕಾರಣಿಗಳು ಆ ದೇಶವನ್ನು ಕುಲಗೆಡಿಸುತ್ತಿದ್ದಾರೆ. ಹೀಗಾಗಿ ದೇಶ ಸ್ವಯಂನಾಶದ ಹಾದಿಯಲ್ಲಿದೆ. ಅದನ್ನು ನೋಡಿ ಜನರಲ್ ಮುನಿರ್ ಮತ್ತೊಮ್ಮೆ ಪಾಕಿಸ್ತಾನದಲ್ಲಿ ಸೇನಾದಂಗೆ ನಡೆಸುವ ಸನ್ನಾಹದಲ್ಲಿರುವಂತೆ ಕಾಣುತ್ತದೆ. ಅವರ ಮಾತುಗಳು ಇದೇ ಒಳಧ್ವನಿಯನ್ನು ಸೂಸು ತ್ತಿವೆ. ಇನ್ನೊಬ್ಬ ಜಿಯಾ ಉಲ್ ಹಕ್ ಆಗಲು ಮುನಿರ್ ಹೊರಟಿದ್ದಾನೆ. 1976ರಲ್ಲಿ ಜುಲ್ಫಿಕರ್ ಅಲಿ ಭುಟ್ಟೋನಿಂದ ಜಿಯಾ ಉಲ್ ಹಕ್ ಅಧಿಕಾರ ಕಿತ್ತುಕೊಂಡಿದ್ದರು. ಭುಟ್ಟೋನನ್ನು ಕೊನೆಗೆ ನ್ಯಾಯಾಂಗ ಹತ್ಯೆಗೆ ಗುರಿಪಡಿಸಲಾಯಿತು. ಭುಟ್ಟೋನ ಮಗಳು ಬೆನಜೀರ್‌ಳನ್ನು ಎಲ್ಲರ ಕಣ್ಣೆದುರೇ ಹತ್ಯೆ ಮಾಡಿದರು. ಸಾರ್ವಜನಿಕ ರ‍್ಯಾಲಿಯಲ್ಲಿ ಆಕೆ ಹೋಗುತ್ತಿದ್ದಾಗ ಗುಂಡಿಕ್ಕಿ ಕೊಲ್ಲ ಲಾಯಿತು. ಶತ್ರುಗಳಿಗೆ ಪಾಕಿಸ್ತಾನದ ಸೇನೆ ನೀಡುವುದು ಎರಡೇ ಆಯ್ಕೆ: ಜೈಲು ಅಥವಾ ಸಾವು. ನವಾಜ್ ಷರೀಫ್ ಅಜ್ಞಾತವಾಸದಲ್ಲಿದ್ದುಕೊಂಡೂ ಬಚಾವಾಗಿ ಬಂದಿದ್ದಕ್ಕೆ ಕಾರಣ ಅವರಿಗೆ ಸೌದಿ ಅರೇಬಿಯಾದಲ್ಲಿ ಬಲಿಷ್ಠವಾದ ಸ್ನೇಹಿತರಿದ್ದರು.
ಇಲ್ಲದಿದ್ದರೆ ಅವರಿಗೂ ಹಳೆಯ ಪ್ರಧಾನಿಗಳಿಗಾದ ಗತಿಯೇ ಆಗಿರುತ್ತಿತ್ತು. ಇತಿಹಾಸವನ್ನು ನೋಡಿ ದರೆ ಪಾಕಿಸ್ತಾನದ ಜನರಲ್‌ಗಳು ಆ ದೇಶಕ್ಕೆ ಯಾವತ್ತೂ ಒಳ್ಳೆಯದನ್ನು ಮಾಡಿಲ್ಲ. ಆದರೆ ಭವಿಷ್ಯ ದಲ್ಲಿ ಏನೋ ಅದ್ಭುತವಾದದ್ದನ್ನು ಮಾಡುತ್ತೇವೆ ಎಂಬ ಫ್ಯಾಂಟಸಿಯಲ್ಲಿ ತೇಲಾಡುವು ದಕ್ಕೆ ಈ ಇತಿಹಾಸವೇನೂ ಅವರಿಗೆ ಅಡ್ಡಿಪಡಿಸಿಲ್ಲ. ಡಾಕ್ಟರ್ ಸ್ಟ್ರೇಂಜ್‌ಲವ್ ಪಾಕಿಸ್ತಾನದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದ್ದಾನೆ.
(ಲೇಖಕರು ಹಿರಿಯ ಪತ್ರಕರ್ತರು)