ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಕೊಂಚ ತಡವಾದರೂ ದುಷ್ಟ ಶಿಕ್ಷಣ, ಧರ್ಮ ರಕ್ಷಣ ಶತ ಸಿದ್ಧ !

ಭಾರತದ ಕಾನೂನು ನಿಜಕ್ಕೂ ಬಲಿಷ್ಟವಾಗಿದೆ. ಎಂಥೆಂಥ ರಾಜಕಾರಣಿಗಳನ್ನು ಜೈಲಿಗಟ್ಟಿದೆ. ಸ್ವಾಮೀಜಿಗಳು ಜೈಲಿನಲ್ಲಿ ಕಳೆಯುವಂತಾಗಿದೆ. ಇತ್ತೀಚಿನ ಉದಾಹರಣೆಯಾಗಿ ನೋಡಿದರೆ ಸಿನಿಮಾ ನಟರು, ಸಂಸದರು ಯಾವ ರೀತಿಯಲ್ಲಿ ಅಶಕ್ತರಿದ್ದರು? ಹಣಬಲ ಜನ ಬಲ ರಾಜಕೀಯಬಲ ಎಲ್ಲವೂ ಇದ್ದರೂ ಜೈಲು ತಪ್ಪಲಿಲ್ಲ.

ಕೊಂಚ ತಡವಾದರೂ ದುಷ್ಟ ಶಿಕ್ಷಣ, ಧರ್ಮ ರಕ್ಷಣ ಶತಃ ಸಿದ್ಧ !

ಪದಸಾಗರ

ಇಷ್ಟೆಲ್ಲ ಆದನಂತರ ಸರಕಾರದ ತಕ್ಷಣದ ನಡೆ ಏನಿರಬೇಕು? ಮೊದಲು ಅಪಪ್ರಚಾರಕ್ಕೆ ಇಳಿದಿದ್ದ ಈ ಕಿಂಗ್ ಪಿನ್ ಗಳ ವಿರುದ್ಧ ಕೇಸ್ ದಾಖಲಿಸಿಕೊಂಡು ಜೈಲಿಗೆ ತಳ್ಳುವುದು. ಬುರುಡೆ ಶೋಧಕ್ಕೆ ಬಂದಿದ್ದ ಮಾಸ್ಕ್ ಮ್ಯಾನ್ ನಿಂದ ಅಗಿರುವ ಖರ್ಚು, ರಾಜ್ಯದ ಶಾಂತಿ ಭಂಗ, ಧರ್ಮಸ್ಥಳದ ಭಕ್ತರಿಗೆ ಆದ ಆತಂಕ, ಪೊಲೀಸ್ ಇಲಾಖೆಯ ದುರುಪಯೋಗ, ಇದಕ್ಕೆ ಶಿಕ್ಷೆ ನೀಡಿ ಬಡ್ಡಿ ಸಮೇತ ದಂಡ ಕೀಳುವುದು.

ಇತ್ತೀಚೆಗೆ ನನ್ನ ತಮ್ಮ ಮಧ್ಯ ಏಷಿಯಾದ ಕಜಖ್ ಸ್ತಾನ್ ಗೆ ಹೋಗಿದ್ದ. ಅಲ್ಲಿನ ಕೆಲವು ಅಪರೂಪದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾಗ ಕೆಲವು ವಿಷಯಗಳು ಅಚ್ಚರಿ ತಂದವು. ಆತನನ್ನು ಸ್ವಾಗತಿಸಿದ ಗೈಡ್ ಆಡಿದ ಕೇಳಿದ ಮೊದಲ ಪ್ರಶ್ನೆಯೇ, ನೀನು ಇಂಡಿಯನ್ ಹಿಂದೂನಾ ಅಥವಾ ಇಂಡಿಯನ್ ಮುಸ್ಲಿಮನಾ ಅಂತ. ಹಿಂದೂ ಅಂದಾಕ್ಷಣ ಆತನ ರಿಯಾಕ್ಷನ್ ಏನು ಗೊತ್ತಾ? ನಿಮ್ಮ ದೇಶದಲ್ಲಿ ನಿಮಗಿಂತ ಮುಸ್ಲಿಮರ ಸಂಖ್ಯೆಯೇ ಜಾಸ್ತಿ ಇದೆ. ನಾವೇ ಹೆಚ್ಚು ಇದೀವಿ!

ಅಷ್ಟರಲ್ಲೊಬ್ಬ ವಿದೇಶಿ ಪ್ರವಾಸಿಯೂ ಅವರೊಂದಿಗೆ ಸೇರಿಕೊಂಡನಂತೆ. ಆತ ಫ್ರಾನ್ಸ್ ನ ಪ್ರಜೆ. ಇಸ್ಲಾಮಿಗೆ ಮತಾಂತರ ಹೊಂದಿದವ. ಕಜಖ್‌ಸ್ತಾನ್ ಗೆ ಪ್ರವಾಸ ಬಂದಿದ್ದಾನೆ. ಈ ಮತಾಂತರಿ ಎಷ್ಟು ಕರ್ಮಠವಾಗಿ ಇಸ್ಲಾಮ್ ಪಾಲಿಸುತ್ತಿದ್ದಾನೆ ಅಂದರೆ, ಆ ಒಣಭೂಮಿಯಲ್ಲಿ ಯಾವ್ಯಾವುದೋ ಹೊತ್ತಲ್ಲೆಲ್ಲಾ ಶಿಸ್ತಾಗಿ ಮ್ಯಾಟ್ ಹಾಸಿ ಸುತ್ತ ಒಂದು ಕಿಲೋಮೀಟರ್ ಕೇಳಿಸುವ ಹಾಗೆ ನಮಾಜ್ ಮಾಡುತ್ತಿದ್ದನಂತೆ.

ಅಷ್ಟೇ ಅಲ್ಲದೆ ಗೈಡ್‌ನನ್ನೂ ತನ್ನೊಂದಿಗೆ ಸೇರಿಸಿಕೊಂಡು ಇಡೀ ಪ್ರವಾಸದಲ್ಲೆಲ್ಲ ದಿನಕ್ಕೆ ಮೂರು ಬಾರಿ ಸಾರ್ವಜನಿಕ ಸ್ಥಳ, ರೈಲು, ವಿಮಾನ ನಿಲ್ದಾಣ ಎಂದರಲ್ಲಿ ನಮಾಜ್ ಮಾಡಿದ್ದನಂತೆ. ಹಿಂದೂಗಳಿಂದ ಇದನ್ನು ನಿರೀಕ್ಷಿಸಲು ಸಾಧ್ಯವಾ? ಹಿಂದೂಗಳಿಗೆ ತಮ್ಮ ಧರ್ಮ ಉಳಿಸಿ ಕೊಳ್ಳೋದು, ಬೆಳೆಸೋದು, ಕಡೆ ಪಕ್ಷ ಹೇಳಿಕೊಳ್ಳೋಕೂ ಬಿಗುಮಾನ.

ಇದನ್ನೂ ಓದಿ: Naveen Sagar Column: ಈ ಮಾತು ಅಭಿಮಾನಿಗಳಿಗೆ ಇಷ್ಟವಾಗಲಿಕ್ಕಿಲ್ಲ, That's ok!

ಇಲ್ಲ ನಮ್ಮಲ್ಲಿ ಧರ್ಮಾಭಿಮಾನದ ಕೊರತೆ ಇದೆ. ಅದಕ್ಕೆ ಮೂಲ ಕಾರಣ ಜಾತಿಗಳಲ್ಲಿ ಒಡೆದು ಹೋಗಿರುವುದು. ಇದಿಷ್ಟರ ಜೊತೆ ಆಸ್ತಿಕತೆ ನಾಸ್ತಿಕತೆ ಎಂಬ ವಿಂಗಡನೆ. ದೇವರನ್ನು ನಂಬದಿರುವಿಕೆಯ ಫ್ಯಾಷನ್ನು. ದೇವರನ್ನು, ದೇವಸ್ಥಾನಗಳನ್ನು ಮೂಢನಂಬಿಕೆ ಹೆಸರಲ್ಲಿ ಅಥವಾ ಇಲ್ಲಸಲ್ಲದ ಆಪಾದನೆಗಳ ಹೆಸರಲ್ಲಿ ಕೀಳಾಗಿ ನೋಡಿ ಧರ್ಮದ ಅವಹೇಳನಕ್ಕಿಳಿಯುವುದು.

ಧರ್ಮಸ್ಥಳದ ಬೆಳವಣಿಗೆಗಳನ್ನು ಗಮನಿಸಿದಾಗ ಅನಿಸಿದ್ದೇ ಇದು. ನಮ್ಮಲ್ಲಿ ಕಟ್ಟರ್ ತನವಿಲ್ಲದ್ದೇ ಇದೆಲ್ಲದಕ್ಕೂ ಕಾರಣವಾಗಿ ಹೋಯ್ತಾ ಅಂತ. ದೇವರನ್ನು ಬಯ್ಯಬಹುದು, ಧರ್ಮಗುರುಗಳನ್ನು ನಿಂದಿಸಬಹುದು, ಪ್ರಶ್ನಿಸಬಹುದು, ಆಪಾದನೆ ಹೇರಬಹುದು. ಇಲ್ಯಾವುದೂ ನಿಷಿದ್ಧವಲ್ಲ. ಅದೇ ಕೆಲಸ ಅನ್ಯಧರ್ಮದಲ್ಲಿ ಮಾಡಿ ಬದುಕುವುದು ಸಾಧ್ಯವಾ? ನಮಗ್ಯಾವಾಗ ಬುದ್ಧಿ ಬರುವುದು?

ಧರ್ಮಸ್ಥಳ ಶತಮಾನಗಳ ನಂಬಿಕೆಯ ಮೇಲೆ ನಿಂತ ಶಕ್ತಿಸ್ಥಳ. ಕೋಟ್ಯಂತರ ಭಕ್ತರಿಗೆ ಮಂಜುನಾಥಸ್ವಾಮಿಯ ಮೇಲಿಟ್ಟ ನಂಬಿಕೆ ಫಲ ಕೊಟ್ಟಿದೆ. ಅದೇ ರೀತಿ ಅಲ್ಲಿನ ಧರ್ಮಾಧಿಕಾರಿ ಗಳನ್ನು ಶತಶತಮಾನದಿಂದ ಭಕ್ತರು ದೇವರ ಸ್ಥಾನದಲ್ಲೇ ನೋಡುತ್ತಾರೆ. ಅದು ಮೂಢನಂಬಿಕೆ ಅಲ್ಲ.

62 R

ಮನುಷ್ಯರೂಪದಲ್ಲಿರುವ ಧರ್ಮಾಧಿಕಾರಿಗಳು ದೇವರ ಪರವಾಗಿ ಭಕ್ತರ ಸೇವೆ ಮಾಡಿಕೊಂಡು ಬಂದಿದ್ದಾರೆ. ಅನ್ನದಾಸೋಹದಿಂದ ಹಿಡಿದು ಆರೋಗ್ಯ ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಇಂಥ ಶತಶತಮಾನದ ನಂಬಿಕೆಯನ್ನು ಹೊಡೆಯುವ ಷಡ್ಯಂತ್ರ ಶುರುವಾಗಿದ್ದಾದರೂ ಯಾಕೆ? ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ವಯಸ್ಸಾಗಿದೆ. ಈ ಸಮಯದಲ್ಲಿ ಅವರನ್ನು ಸಾಮಾಜಿಕವಾಗಿ, ಮಾನಸಿಕ ವಾಗಿ ಕುಗ್ಗಿಸಿ ಬಿಡೋಣ ಅಂತಲಾ? ಅವರ ನಂತರ ಧರ್ಮಸ್ಥಳ ಕ್ಷೇತ್ರ ನಶಿಸಿಹೋಗಬೇಕು, ಪರ್ಯಾಯವೇನೋ ಸೃಷ್ಟಿಯಾಗಬೇಕು ಎಂಬ ಹುನ್ನಾರವಾ? ಧರ್ಮಸ್ಥಳದ ಮೇಲಿನ ಬೃಹತ್ ಹಿಂದೂ ಧಾರ್ಮಿಕ ನಂಬಿಕೆಯನ್ನು ಸಂಪೂರ್ಣವಾಗಿ ಹೊಸಕಿ ಹಾಕಿ ಬಿಡುವ ಸಂಘಟಿತ ಷಡ್ಯಂತ್ರವಾ? ಇದರಲ್ಲಿ ಕ್ರಿಶ್ಚಿಯನ್ ಮಿಶನರಿಗಳ, ವಿದೇಶಿ ಸಂಚುಕೋರರ, ಮಹಾನ್ ಫಂರ್ ಗಳ, ರಾಜಕೀಯ ವ್ಯಕ್ತಿಗಳ ಕೈವಾಡ ಇಲ್ಲ ಅನ್ನಲಾದೀತಾ? ಆದರೆ ಇವೆಲ್ಲವೂ ವರ್ಕ್ ಆಗ್ತಾ ಇದ್ದದ್ದಕ್ಕೆ ಕಾರಣ ಯಾರು? ಹಿಂದೂಗಳಲ್ಲಿರುವ ನಮಕ್ ಹರಾಮ್ ಗಳು, ಎಡಪಂಥದ ಭ್ರಮೆ ಯಲ್ಲಿ ಬಿದ್ದಿರುವ ಹಿಂದೂಗಳು, ಹಣದ, ಅಧಿಕಾರದ ಆಸೆಗೆ ಬಿದ್ದು ಧರ್ಮವನ್ನೇ ಬಲಿ ಕೊಡಲು ಹೊರಟಿರುವ ಧರ್ಮದ್ರೋಹಿಗಳು. ಇವರಿಗೆ ಸಿಕ್ಕ ಅಸ್ತ್ರ ಸೌಜನ್ಯಾ ಎಂಬ ವಿದ್ಯಾರ್ಥಿನಿಯ ಹತ್ಯೆ. ಸೌಜನ್ಯಾ ಹತ್ಯೆ ಪ್ರಕರಣ ವಿಸ್ತೃತ ತನಿಖೆಗೆ ಒಳಪಟ್ಟಿದೆ.

ಬಹಳ ಉನ್ನತ ಮಟ್ಟದಲ್ಲಿಯೇ ವಿಚಾರಣೆಗಳಾಗಿವೆ. ನ್ಯಾಯಾಲಯವು ವೀರೇಂದ್ರ ಹೆಗ್ಗಡೆಯವ ರನ್ನು, ಧರ್ಮಸ್ಥಳ ಕ್ಷೇತ್ರವನ್ನು, ಬಹಳ ಸ್ಪಷ್ಟವಾಗಿ ಈ ಪ್ರಕರಣದ ಭಾಗವಲ್ಲ ಎಂದಿದೆ. ಆದರೂ ಮಹೇಶ್ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್ ಈ ಪ್ರಕರಣಕ್ಕೆ ಬೇರೆ ಬಣ್ಣ ಬಳಿಯಲು ಇನ್ನಿಲ್ಲದ ಪ್ರಯತ್ನಕ್ಕೆ ಇಳಿದುಬಿಟ್ಟರು.

Dharmasthala

ಗಿರೀಶ್ ಮಟ್ಟಣ್ಣನವರ್ ಮತ್ತು ಮಹೇಶ್ ತಿಮರೊಡಿಗೆ ಸ್ಪಷ್ಟವಾಗಿ ಗೊತ್ತಿದ್ದರೂ, ಸಮೀರ್ ಎಂಬ ಮುಸಲ್ಮಾನನನ್ನು ಬಳಸಿ ತಂತ್ರಜ್ಞಾನದ ದುರ್ಬಳಕೆ ಮಾಡಿ ಇಡೀ ರಾಜ್ಯದ ದಿಕ್ಕು ತಪ್ಪಿಸಲು ಹೊರಟರು. ಯಾವ ಅಧ್ಯಯನವೂ ಇಲ್ಲದ, ಕೋರ್ಟ್ ದಾಖಲಾತಿಗಳನ್ನು, ಕೇಸಿನ ಪೇಪರ್ ಗಳನ್ನು ಸ್ಟಡಿ ಮಾಡದೇ ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಿದರೆ ವಿಡಿಯೋದಿಂದಲೂ ಹಣ ಬರುತ್ತದೆ, ಫಂಡರ್ ಗಳಿಂದಲೂ ಹಣ ಬರುತ್ತದೆ ಎಂಬ ಸತ್ಯ ತಿಳಿಯುತ್ತಲೇ ಡಿಜಿಟಲ್ ಮೀಡಿಯಾ ಗಳು ಯಾವ ಭಯವೂ ಇಲ್ಲದೆ, ಯಾವ ಆತ್ಮಸಾಕ್ಷಿಗೂ ಬೆಲೆಕೊಡದೆ, ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳನ್ನು ನಿಂದಿಸತೊಡಗಿದರು.

ಧರ್ಮಸ್ಥಳದ ಪರ ಮಾತನಾಡುವವರನ್ನು ಸೌಜನ್ಯ ವಿರೋಧಿ ಎಂದು ಬಿಂಬಿಸಿ ಟಾರ್ಗೆಟ್ ಮಾಡಲಾಯಿತು. ಅವರಿಗೆ ಧರ್ಮಸ್ಥಳದಿಂದ ಹಣ ಬರುತ್ತಿದೆ ಎಂಬ ಕಥೆ ಕಟ್ಟಲಾಯ್ತು. ಧರ್ಮಾಧಿಕಾರಿಗಳು ದೇಶದ ಕಾನೂನು ವ್ಯವಸ್ಥೆಯನ್ನೇ ಕೊಂಡುಕೊಂಡಿದ್ದಾರೆ. ಹಿಡಿತದಲ್ಲಿಟ್ಟುಕೊಂಡಿದ್ದಾರೆ ಎಂದೆಲ್ಲ ನಂಬಿಸುವ ಯತ್ನ ನಡೆಯಿತು. ಸೌಜನ್ಯ ಪ್ರಕರಣದಿಂದ ಧರ್ಮಸ್ಥಳವನ್ನು ಅಡಿಸುವುದು ಸಾಧ್ಯವಿಲ್ಲ ಎಂದು ಅರ್ಥ ಆಗುತ್ತಿದ್ದಂತೆ, ಧರ್ಮಸ್ಥಳ ಸ್ವಸಹಾಯ ಸಂಘಗಳಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂಬ ನೆರೇಟಿವ್ ಹಬ್ಬಿಸಲು ಮಟ್ಟಣ್ಣನವರ್ ಜನರನ್ನು ಎತ್ತಿಕಟ್ಟಲು ನೋಡಿದರು. ತಲೆಬುರುಡೆ ಕಥಾನಕವನ್ನು ಸೃಷ್ಟಿಸಲಾಯಿತು. ಕೊನೆಗೆ ಸುಜಾತಾ ಭಟ್ ಅನನ್ಯಾ ಭಟ್ ಪ್ರಹಸನವೂ ಮುನ್ನೆಲೆಗೆ ತಂದದ್ದಾಯ್ತು. ಇದೀಗ ಅವರ ಪ್ರತಿ ಅಸ್ತ್ರವೂ ಅಡ್ಡಡ್ಡ ಮಲಗಿವೆ. ಹತಾಶೆಯ ಪರಮಾವಧಿ ತಲುಪಿದ್ದಾರೆ, ಮಟ್ಟಣ್ಣನವರ್, ತಿಮರೋಡಿ ಮತ್ತು ಸಮೀರ್ ಇವರೊಂದಿಗೆ ತೆರೆಮರೆಯಲ್ಲಿ ಇದ್ದ ಇನ್ನೂ ಸಾಕಷ್ಟು ಮಂದಿಗೂ ನಿರಾಸೆಯಾಗಿದೆ. ಅಂತಿಮವಾಗಿ ಧರ್ಮಕ್ಕೆ ಜಯ ಸಿಗುತ್ತಿದೆ ಅನ್ನಬಹುದಾ? ಆ ದಿನ ಹತ್ತಿರವಂತೂ ಬಂದಿದೆ.

ಭಾರತದಲ್ಲಿ ದೇವಾಲಯಗಳ ಮೇಲೆ, ಧರ್ಮಗುರುಗಳ, ಸ್ವಾಮಿಗಳ ಮೇಲೆ ಸಾಕಷ್ಟು ಭಾರಿ ಆರೋಪಗಳು ಬಂದಿವೆ. ಪ್ರಕರಣ ದಾಖಲಾಗಿವೆ. ಶಿಕ್ಷೆಯೂ ಆಗಿದೆ. ಭಾರತದ ಕಾನೂನು ನಿಜಕ್ಕೂ ಬಲಿಷ್ಟವಾಗಿದೆ. ಎಂಥೆಂಥ ರಾಜಕಾರಣಿಗಳನ್ನು ಜೈಲಿಗಟ್ಟಿದೆ. ಸ್ವಾಮೀಜಿಗಳು ಜೈಲಿನಲ್ಲಿ ಕಳೆಯುವಂತಾಗಿದೆ. ಇತ್ತೀಚಿನ ಉದಾಹರಣೆಯಾಗಿ ನೋಡಿದರೆ ಸಿನಿಮಾ ನಟರು, ಸಂಸದರು ಯಾವ ರೀತಿಯಲ್ಲಿ ಅಶಕ್ತರಿದ್ದರು? ಹಣಬಲ ಜನ ಬಲ ರಾಜಕೀಯಬಲ ಎಲ್ಲವೂ ಇದ್ದರೂ ಜೈಲು ತಪ್ಪಲಿಲ್ಲ.

ಇಂಥ ವ್ಯವಸ್ಥೆಯಲ್ಲಿ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳಿಂದ ತಪ್ಪು ನಡೆದಿದ್ದರೆ ಕಾನೂನಿನ ಕೈಯ್ಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿತ್ತಾ? ಖಂಡಿತ ಇಲ್ಲ. ಅದರಲ್ಲೂ ಧರ್ಮಸ್ಥಳ ಅಲ್ಪಸಂಖ್ಯಾತ ಜೈನ ಸಮುದಾಯದವರ ದೇವಸ್ಥಾನ. ಅಲ್ಪಸಂಖ್ಯಾತರಲ್ಲಿ ಅತಿ ಸಾತ್ವಿಕರು ಮತ್ತು ದುರ್ಬಲರು ಅಂದರೆ ಬಹುಶಃ ಜೈನ ಸಮುದಾಯವೇ ಅನಿಸುತ್ತದೆ.

ಇದೇ ಕಾರಣಕ್ಕೆ ಹಿಂದೂಗಳನ್ನೇ ಎತ್ತಿ ಕಟ್ಟಿ ಜೈನ ಸುಪರ್ದಿಯಲ್ಲಿರುವ ದೇವಸ್ಥಾನವನ್ನು ವಶ ಮಾಡಿಕೊಳ್ಳುವ ಹುನ್ನಾರವೂ ಇಲ್ಲಿ ಕಾಣುತ್ತಿದೆ. ಆದರೆ ಒಂದು ಅರ್ಥವಾಗಬೇಕು. ಜೈನರಿಂದ ನಿರ್ಮಿಸಲ್ಪಟ್ಟ ದೇವಾಲಯವಾದರೂ ಹಿಂದೂಗಳ ಆರಾಧ್ಯದೈವವಾಗಿ ಮಂಜುನಾಥಸ್ವಾಮಿ ದೇವಾಲಯ ಜಗದ್ವಿಖ್ಯಾತಿ ಪಡೆದಿದೆ.

ಇಂದಿಗೂ ಧರ್ಮದ ಭೇದವಿಲ್ಲದೇ ಭಕ್ತರನ್ನು ಸಲಹುತ್ತಿದೆ ಧರ್ಮಸ್ಥಳ. ಇಂಥ ಪವಿತ್ರ ಕ್ಷೇತ್ರದ ಮೇಲ್ಯಾಕೆ ಇಂಥ ದ್ವೇಷ? ಯಾವ ಲಾಭಕ್ಕಾಗಿ? ನಮ್ಮ ಹಿಂದೂಗಳನ್ನು ನಂಬಿಸುವುದು, ನಂಬಿಕೆ ಒಡೆಯುವುದು ಬಹಳ ಸುಲಭ. ಧರ್ಮಸ್ಥಳದಲ್ಲಿ ಹೀಗೊಂದು ಅತ್ಯಾಚಾರವಂತೆ, ಸಾವಂತೆ, ಅದನ್ನು ಮಾಡಿದ್ದು ಅವರಂತೆ.. ಅಂತೆ ಅಂತ ಕಥೆ ಹುಟ್ಟಿದರೆ ಸಾಕು, ಪ್ರಶ್ನಿಸುವ ಬದಲು, ಅನುಮಾನಿಸುವ ಬದಲು, ಇದ್ದರೂ ಇರಬಹುದು ಎಂಬ ತೀರ್ಮಾನಕ್ಕೆ ಬಂದು ಬಿಡ್ತಾರೆ.

ಪೊಲಿಟಿಕಲೀ ಕರೆಕ್ಟ್ , ನ್ಯಾಯದ ಪರ ನಾವು ಅಂತೆಲ್ಲ ಗುರುತಿಸಿಕೊಳ್ಳುವ ಹುಕಿಯಲ್ಲಿ ಸುಳ್ಳುಗಳ ಪರವೇ ಬ್ಯಾಟಿಂಗ್ ಶುರು ಮಾಡುತ್ತಾರೆ. ಸಮೀರನ ವಿಡಿಯೋ ಬಂದಾಗ ಹಿಂದುಮುಂದು ಯೋಚಿಸದೇ ಅದನ್ನು ನಂಬಿ, ಶೇರ್ ಮಾಡಿ ಆತನನ್ನು ಫೇಮಸ್ ಮಾಡಿದವರು, ಆತನಿಗೆ ಕೋಟಿ ಗಟ್ಟಲೆ ಆದಾಯ ಹುಟ್ಟಿಸಿಕೊಟ್ಟವರು ನಮ್ಮವರೇ.

ಖುದ್ದು ಆತನೇ ಡಿಸ್ ಕ್ಲೈಮರ್ ಹಾಕಿಕೊಳ್ಳುತ್ತಾನೆ, ನಾನು ಈ ಪ್ರಕರಣದ ಸಾಕ್ಷಿಗಳನ್ನು ಮಾತನಾಡಿಸಿಲ್ಲ. ನ್ಯಾಯಾಲಯದ ಪೇಪರ್ ಗಳನ್ನು ಓದಿಲ್ಲ. ಒಂದಷ್ಟು ಕೇಳಿದ್ದು, ಒಂದಷ್ಟು ಕಲ್ಪಿಸಿಕೊಂಡದ್ದು ಎಲ್ಲವನ್ನೂ ಸೇರಿಸಿ ವಿಡಿಯೋ ಮಾಡಿದ್ದೇನೆ ಅಂತ. ಮಟ್ಟಣ್ಣನವರ್ ಮತ್ತು ತಿಮರೋಡಿಯೇ ತನ್ನ ನ್ಯೂಸ್ ಸೋರ್ಸ್ ಎಂದೂ ಹೇಳಿಕೊಳ್ಳುತ್ತಾನೆ. ಅತ್ತ ಅವರಿಬ್ಬರ ಕಥೆಗಳು ಸಾವಿರ ಇವೆ. ಅವರ ಸುಳ್ಳುಗಳು ಬಟಾಬಯಲಾಗಿವೆ.

ಸಂಚಿನ ಹಿಂದಿರೋ ಉದ್ದೇಶ ಬಹಿರಂಗವಾಗಿವೆ. ಆದರೂ ಜನ ಮಾತ್ರ ಅವರಿಗೆ ಉಘೇ ಉಘೇ ಅಂದರು. ಮೊಬೈಲಲ್ಲಿ ಸಾಕ್ಷಿ ಇದೆ ಅಂತ ಹೇಳುವ ಮಟ್ಟಣ್ಣ ಅದನ್ನು ತನಿಖಾಧಿಕಾರಿಗಳಿಗೆ ಯಾಕೆ ಕೊಡ್ತಾ ಇಲ್ಲ ಅನ್ನೋದಕ್ಕೆ ಉತ್ತರವಿಲ್ಲ. ಕಣ್ಣಮುಂದೆ ಅವರ ನಾಟಕಗಳೆಲ್ಲ ಬಯಲಾದರೂ ಕೆಲವರಿಗೆ ಧರ್ಮಸ್ಥಳದ ಮೇಲೆಯೇ ಅನುಮಾನ. ಕಾರಣ ಮನಸ್ಥಿತಿ.

ತಲೆಬುರುಡೆ ಪ್ರಕರಣ ಸುಳ್ಳು ಎಂದು ಪ್ರೂವ್ ಆಗುವ ತನಕ ರಾಜಕೀಯ ವ್ಯಕ್ತಿಗಳಾಗಲೀ, ಪತ್ರಿಕೆ ಗಳಾಗಲೀ, ಟಿವಿ ಮಾಧ್ಯಮಗಳಾಗಲೀ ಮುನ್ನೆಲೆಗೆ ಬಂದು ಮಟ್ಟಣ್ಣ ತಿಮ್ಮರೋಡಿ ಗ್ಯಾಂಗನ್ನು ಕೌಂಟರ್ ಮಾಡುವ ಮತ್ತು ಧರ್ಮಸ್ಥಳವನ್ನು ಬೆಂಬಲಿಸುವ ಧೈರ್ಯವನ್ನೇ ತೋರಲಿಲ್ಲ. ಅಥವಾ ಒಂದ ಒಂದು ದಿನ ತಾನಾಗಿ ಸತ್ಯ ಹೊರಬರುತ್ತದೆ ಎಂದು ಕಾದುಕೂತಿದ್ದರಾ? ನಿಜ ಹೇಳ ಬೇಕೆಂದರೆ, ಧರ್ಮಸ್ಥಳದ ಧರ್ಮಾಧಿಕಾರಿಗಳು ಕೂಡ, ಇಷ್ಟೆಲ್ಲ ತಮ್ಮ ವಿರುದ್ಧ ಆರೋಪ, ಸಂಚು ನಡೆಯುತ್ತಿದ್ದರೂ ಅದನ್ನು ಹತ್ತಿಕ್ಕಲು ಹೋಗಲೇ ಇಲ್ಲ.

ಕಾನೂನು ಮತ್ತು ದೇವರು ನೋಡಿ ಕೊಳ್ಳಲಿ ಎಂಬಂತೆ ಸುಮ್ಮನೇ ಇದ್ದು ಬಿಟ್ಟರು. ಇದರಿಂದಲೇ ಆ ಗ್ಯಾಂಗ್ ಇನ್ನಷ್ಟು ಹೆಚ್ಚಿಕೊಂಡದ್ದು. ಆದರೆ ಇದೀಗ ಇಡೀ ರಾಜ್ಯಕ್ಕೆ, ದೇಶಕ್ಕೆ ಗ್ಯಾಂಗಿನ ಅಸಲಿತನ ಗೊತ್ತಾಗಿದೆ. ಸೌಜನ್ಯಾ ಹತ್ಯೆಗೆ ನ್ಯಾಯ ಕೊಡಿಸುವ ಯಾವ ಉದ್ದೇಶವೂ ಇವರಿಗಿಲ್ಲ ಎಂಬುದೂ ತಿಳಿದಿದೆ.

ಸ್ವಲಾಭಕ್ಕಾಗಿ, ಹೆಗ್ಗಡೆ ಕುಟುಂಬದ ಮೇಲಿನ ದ್ವೇಷಕ್ಕಾಗಿ, ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದ ವರ್ಚಸ್ಸನ್ನು ಕೆಡಿಸುವುದಕ್ಕಾಗಿ, ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸುವು ದಕ್ಕಾಗಿ ನಡೆದ ಷಡ್ಯಂತ್ರವಿದು ಎಂಬುದು ಇಡೀ ರಾಜ್ಯಕ್ಕೆ ಈಗ ಗೊತ್ತಾಗಿದೆ. ತಿಮರೋಡಿ, ಮಟ್ಟಣ್ಣನವರ್, ಸಮೀರ್, ಹತಾಶೆ ತಾಳಲಾಗದೆ ಬಡಬಡಿಸಲು ಶುರು ಮಾಡಿದ್ದಾರೆ. ವಿಡಿಯೋ ಗಳನ್ನು ತಿರುಚಿ ಬೆಂಬಲಿಗರನ್ನು ಕೌಂಟರ್ ಮಾಡಲು ಹೊರಟಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ನಕಲಿ ಗ್ಯಾಂಗು ಬೆತ್ತಲೆಯಾಗುತ್ತದೆ. ಧರ್ಮಸ್ಥಳದ ಮಂಜುನಾಥಸ್ವಾಮಿ ಮತ್ತು ವೀರೇಂದ್ರ ಹೆಗ್ಗಡೆಯವರ ಚಾರಿತ್ರ್ಯವಧೆಯ ಪ್ರಯತ್ನ ಸಂಪೂರ್ಣ ನಿಲ್ಲಲೇಬೇಕಾಗುತ್ತದೆ. ಇಷ್ಟೆಲ್ಲ ಆದನಂತರ ಸರಕಾರದ ತಕ್ಷಣದ ನಡೆ ಏನಿರಬೇಕು? ಮೊದಲು ಅಪಪ್ರಚಾರಕ್ಕೆ ಇಳಿದಿದ್ದ ಈ ಕಿಂಗ್ ಪಿನ್ ಗಳ ವಿರುದ್ಧ ಕೇಸ್ ದಾಖಲಿಸಿಕೊಂಡು ಜೈಲಿಗೆ ತಳ್ಳುವುದು.

ಬುರುಡೆ ಶೋಧಕ್ಕೆ ಬಂದಿದ್ದ ಮಾಸ್ಕ್ ಮ್ಯಾನ್ ನಿಂದ ಅಗಿರುವ ಖರ್ಚು, ರಾಜ್ಯದ ಶಾಂತಿಭಂಗ, ಧರ್ಮಸ್ಥಳದ ಭಕ್ತರಿಗೆ ಆದ ಆತಂಕ, ಪೊಲೀಸ್ ಇಲಾಖೆಯ ದುರುಪಯೋಗ, ಇದಕ್ಕೆ ಶಿಕ್ಷೆ ನೀಡಿ ಬಡ್ಡಿ ಸಮೇತ ದಂಡ ಕೀಳುವುದು. ಇದು ಆಗಲೇಬೇಕು. ಇಡೀ ರಾಜ್ಯದ ಧಾರ್ಮಿಕ ನಂಬಿಕೆಯನ್ನು ಹೊಡೆದುಹಾಕುವ ಅಧಿಕಾರ ಇವರಿಗೆ ಕೊಟ್ಟವರಾರು? ಇವರನ್ನು ಬಂಧಿಸಿ, ಇವರ ಈ ಷಡ್ಯಂತ್ರದ ಹಿಂದಿರುವ ಕಾರಣ, ಹಿಂದಿರುವ ವ್ಯಕ್ತಿಗಳು ಎಲ್ಲವೂ ಹೊರಬರಬೇಕು.

ನಂತರ ಕಠಿಣ ಶಿಕ್ಷೆಯೂ ಆಗಬೇಕು. ಸೌಜನ್ಯ ಆತ್ಮಕ್ಕೆ ನಿಜಕ್ಕೂ ಶಾಂತಿ ಸಿಗುವುದು ಈ ಗ್ಯಾಂಗ್ ಗೆ ಶಿಕ್ಷೆಯಾದರೆ ಮಾತ್ರ. ಸೌಜನ್ಯ ಸಾವಿನ ಲಾಭ ಪಡೆದ ಇಂಥವರನ್ನು ಮಂಜುನಾಥ ನೋಡಿಕೊಳ್ಳು ತ್ತಾನೆ ಎನ್ನುತ್ತಿದ್ದಾರೆ ಜನ. ಹಾಗಾದಲ್ಲಿ ಅದಕ್ಕಿಂತ ಸಮಾಧಾನ ಮತ್ತೊಂದಿಲ್ಲ. ಈ ಘಟನೆಯ ನಂತರವಾದರೂ ಹಿಂದೂಗಳು ಎಚ್ಚೆತ್ತುಕೊಂಡು ಒಗ್ಗಟ್ಟಿನಿಂದ ಧರ್ಮ ರಕ್ಷಣೆಗೆ ನಿಲ್ಲುತ್ತಾರೆಂಬ ನಿರೀಕ್ಷೆ ಇಟ್ಟುಕೊಳ್ಳಬಹುದಾ? ಇಲ್ಲದಿದ್ದಲ್ಲಿ, ಇಂದು ಧರ್ಮಸ್ಥಳ ಕಂಡ ಸಂಕಷ್ಟ ಇನ್ನೊಂದು ಧಾರ್ಮಿಕ ಕ್ಷೇತ್ರವೂ ಕಾಣಬೇಕಾಗುತ್ತದೆ. ಅಂತಿಮವಾಗಿ ಧರ್ಮಕ್ಕೆ ಜಯ ಸಿಗಬಹುದು. ಆದರೆ ಆ ಹಾದಿಯಲ್ಲಿ ಏನೇನೆಲ್ಲ ನೋಡಬೇಕಾದೀತು?