ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raghava Sharma Nidle Column: ಮೀಸಲಾತಿ ನೀತಿ ಲೋಪ: ಸುಧಾರಣೆ ಬರೀ ಕನಸು ?

ದೇಶದ ಮೀಸಲಾತಿ ನೀತಿಯಲ್ಲಿ ತಿದ್ದುಪಡಿಗಳಾಗಬೇಕು. ಅರ್ಹ, ಪ್ರತಿಭಾನ್ವಿತರು ಅವಕಾಶ ವಂಚಿತ ರಾಗುತ್ತಿದ್ದಾರೆ ಎಂಬ ಕೂಗು ಇಂದು ನಿನ್ನೆಯದಲ್ಲ. ಮೀಸಲಾತಿ ನೀತಿಯಲ್ಲಿನ ಅಗತ್ಯ ಬದಲಾವಣೆಗಾಗಿ ಸಾಮಾನ್ಯ ವರ್ಗದ ಮಂದಿ ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನು ಅನೇಕ ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ.

ಮೀಸಲಾತಿ ನೀತಿ ಲೋಪ: ಸುಧಾರಣೆ ಬರೀ ಕನಸು ?

-

ಜನಪಥ

ಕೆಲ ದಿನಗಳ ಹಿಂದೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಮೀಸಲಾತಿ ವಿರೋಧಿ ಆಂದೋ ಲನ ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಸದ್ದು ಮಾಡುವ ಲಕ್ಷಣಗಳು ಗೋಚರಿಸುತ್ತಿದೆ. ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಅವರು ಈ ಆಂದೋಲನದಲ್ಲಿ ಭಾಗಿಯಾಗಿದ್ದ ಕೆಲ ಯುವಕರನ್ನು ರಾಜಧಾನಿ ಲಖ್ನೋದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರಿಂದ ರಾಜ್ಯ ಚುನಾವಣೆಗೆ ಪಿಡಿಎ (ಪಿಚ್ಡಾ-ದಲಿತ್-ಅಲ್ಪಸಂಖ್ಯಾಕ್) ಮಂತ್ರ ಜಪಿಸುತ್ತಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌ಗೆ ಬಿಜೆಪಿ ವಿರುದ್ಧ ಹೊಸ ಅಸ್ತ್ರವೊಂದು ಸಿಕ್ಕಿದೆ.

ದೇಶದ ಮೀಸಲಾತಿ ನೀತಿಯಲ್ಲಿ ತಿದ್ದುಪಡಿಗಳಾಗಬೇಕು. ಅರ್ಹ, ಪ್ರತಿಭಾನ್ವಿತರು ಅವಕಾಶ ವಂಚಿತರಾಗುತ್ತಿದ್ದಾರೆ ಎಂಬ ಕೂಗು ಇಂದು ನಿನ್ನೆಯದಲ್ಲ. ಮೀಸಲಾತಿ ನೀತಿಯಲ್ಲಿನ ಅಗತ್ಯ ಬದಲಾವಣೆಗಾಗಿ ಸಾಮಾನ್ಯ ವರ್ಗದ ಮಂದಿ ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನು ಅನೇಕ ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ. ಸುಪ್ರೀಂ ಕೋರ್ಟ್ ಮುಂದೆ ಹತ್ತಾರು ಅರ್ಜಿಗಳು ಸಲ್ಲಿಕೆಯಾಗುತ್ತಲೇ ಇರುತ್ತವೆ. ಈಗ ಇದರ ಮುಂದುವರಿದ ಭಾಗವಾಗಿ, ಕೆಲ ದಿನಗಳ ಹಿಂದೆ ದೆಹಲಿಯ ಜಂತರ್ ಮಂತರ್ ನಲ್ಲಿ ಯುವ ಹೋರಾಟಗಾರರು ‘ರಿಸರ್ವೇಷನ್ ಹಠಾವೋ ಆಂದೋಲನ್’ (ಆರ್‌ಎಚ್‌ಎ) ನಡೆಸಿ ಕೇಂದ್ರದ ಗಮನಸೆಳೆಯುವ ಯತ್ನ ಮಾಡಿದ್ದರು.

ಉತ್ತರ ಪ್ರದೇಶದಲ್ಲಿ ಎಸ್ಸಿ/ಎಸ್ಟಿ, ಒಬಿಸಿಯೇತರ ಸಮುದಾಯಗಳ ಸಂಖ್ಯೆ ದೊಡ್ಡ ಪ್ರಮಾಣ ದಲ್ಲಿದ್ದು, 2014ರಿಂದ ಈ ಮತಬ್ಯಾಂಕ್‌ನ ಬಹುಪಾಲು ಮಂದಿ ಬಿಜೆಪಿಯನ್ನು ನೆಚ್ಚಿಕೊಂಡು ಬಂದಿದ್ದಾರೆ. ಉ.ಪ್ರ. ವಿಧಾನಸಭೆ ಚುನಾವಣೆ ಹೊಸ್ತಿಲ ಆರ್‌ಎಚ್‌ಎ ಪ್ರತಿಭಟನೆ ನಡೆದಿದ್ದು, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವೇ ಆಡಳಿತದಲ್ಲಿರುವುದರಿಂದ ವಿದ್ಯಾರ್ಥಿಗಳು/ಯುವಕರನ್ನು ಭೇಟಿಯಾಗಿ ಮನವಿಗಳನ್ನು ಆಲಿಸುವುದು ಬಿಜೆಪಿ ಸರಕಾರಕ್ಕೆ ಅನಿವಾರ್ಯ ವಾಗಿತ್ತು. ಅದು ಕರ್ತವ್ಯವೂ ಹೌದು ಎನ್ನೋಣ.

ಇದನ್ನೂ ಓದಿ: Raghava Sharma Nidle Column: ಮಂಗಳೂರು ರೈಲ್ವೆ: ಸಂಭ್ರಮ ಏಕಿಲ್ಲ ಮುಖ್ಯಮಂತ್ರಿಗಳೇ?

ಉ.ಪ್ರ. ಡಿಸಿಎಂ ಬ್ರಿಜೇಶ್ ಪಾಠಕ್ ಅದನ್ನೇ ಮಾಡಿದ್ದಾರೆ. ಮೀಸಲಾತಿ ವಿರೋಧಿ ಹೋರಾಟಗಾರರ ಬೇಡಿಕೆಗಳನ್ನು ಕೇಂದ್ರ ನಾಯಕತ್ವದ ಮುಂದಿಡಲಾಗುವುದು. ಮೀಸಲಾತಿ ಸುಧಾರಣೆ ವಿಷಯವನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಲಿದೆ ಎಂದು ಬ್ರಿಜೇಶ್ ಪಾಠಕ್ ಲಖ್ನೋದಲ್ಲಿ ಆರ್‌ಎಚ್‌ಎಯ ಹರ್ಷ್ ದುಬೆ, ಶಿವ ಶರ್ಮ, ಮೃತ್ಯುಂಜಯ ಪಾಠಕ್ ಸೇರಿ ಇನ್ನಿತರೆ ಯುವಕರಿಗೆ ಭರವಸೆ ನೀಡಿದ್ದರು.

ಎಲ್ಲಾ ವಿದ್ಯಾರ್ಥಿಗಳಲ್ಲಿ ಸಮಾನ ಬೌದ್ಧಿಕ ಬೆಳವಣಿಗೆ, ಉನ್ನತ ವೃತ್ತಿಪರ ಕೋರ್ಸ್‌ಗಳಲ್ಲಿ ಅವರಿಗೆ ಸಮಾನ ಅವಕಾಶಗಳನ್ನು ಒದಗಿಸಬೇಕು ಎಂದು ಆರ್ ಎಚ್‌ಎ ನಿಯೋಗ ಡಿಸಿಎಂ ಬ್ರಿಜೇಶ್ ಪಾಠಕ್‌ಗೆ ಮನವಿ ಮಾಡಿತ್ತು. ಕುಟುಂಬವೊಂದರ ಆರ್ಥಿಕತೆ ಆಧರಿಸಿ ಮೀಸಲಾತಿ ನೀಡಬೇಕು ಎನ್ನುವುದು ಈ ಆಂದೋಲನದ ಮೂಲ ಬೇಡಿಕೆ. ಕೇಂದ್ರ ಶಿಕ್ಷಣ ಇಲಾಖೆ ಮೂಲಕ ಜಾರಿ ಮಾಡಲಾಗಿದ್ದ ಮತ್ತು ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ತಡೆಗೆ ಒಳಪಟ್ಟಿರುವ ಯುಜಿಸಿ (ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಸಮಾನತೆ ಉತ್ತೇಜನ ನಿಯಮಾವಳಿ ಖಂಡಿಸಿ ವಿವಿಧ ರಾಜ್ಯಗಳ ಮೇಲ್ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾಗ ಅವರ ಸಮಸ್ಯೆಯನ್ನು ಆಲಿಸುವ ಸಾಮಾನ್ಯ ಕಾಳಜಿಯನ್ನೂ ಕೇಂದ್ರ ಸರಕಾರ ಪ್ರದರ್ಶಿಸಿರಲಿಲ್ಲ. ʼ

ಉತ್ತರ ಪ್ರದೇಶ, ರಾಜಸ್ಥಾನ, ಹರ್ಯಾಣ, ಬಿಹಾರ ಸೇರಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಎಸ್ಸಿ/ಎಸ್ಟಿ ಮತ್ತು ಒಬಿಸಿಯೇತರ ಜಾತಿಗಳ ಯುವಕರು ಯುಜಿಸಿ ನಿಯಮಾವಳಿಯನ್ನು ವಿರೋಧಿಸಿದ್ದರು. ಇದು ಸಾಮಾನ್ಯ ವರ್ಗದವರನ್ನು ತಾರತಮ್ಯಕ್ಕೆ ಗುರಿ ಮಾಡಲಿದೆ ಎಂದು ಆತಂಕಗೊಂಡಿದ್ದರು. ಅಂತಿಮವಾಗಿ, ಸುಪ್ರೀಂ ಕೋರ್ಟ್ ಹಸ್ತಕ್ಷೇಪದಿಂದಾಗಿ ಈ ವಿವಾದಿತ ನಿಯಮಾವಳಿಗೆ ಮಧ್ಯಂತರ ತಡೆ ಬಿದ್ದಿತ್ತು. ಇದಾದ ಬಳಿಕ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ನಡೆದ ಹೋರಾಟಕ್ಕೆ ತಲೆಬಾಗಿದ್ದ ಕೇಂದ್ರ ಸರಕಾರ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಲೆದಂಡವನ್ನೂ ಪಡೆದುಕೊಂಡಿತು.

61 ಒಕ

ಪ್ರಧಾನ್ ರಾಜೀನಾಮೆಯನ್ನು ಯುಜಿಸಿ ನಿಯಮಾವಳಿ ವಿರೋಧಿಸಿದ್ದ ಯುವಕರೂ ಕೇಳಿದ್ದರು. ಕಾಕ್ರೋಚ್ ಜನತಾ ಪಾರ್ಟಿಯ ಕಾರಣಕ್ಕಾಗಿ ಪ್ರಧಾನ್ ರಾಜೀನಾಮೆ ನೀಡಿದ್ದರೂ, ಯುಜಿಸಿ ನಿಯಮಾವಳಿ ವಿರೋಧಿಗಳು (ಬಹುಪಾಲು ಬಿಜೆಪಿ ಮತದಾರರೇ ಆಗಿದ್ದಾರೆ) ಕೂಡ ಪ್ರಧಾನ್ ರಾಜೀನಾಮೆ ಯನ್ನು ಸಂಭ್ರಮಿಸಿದ್ದರು. ಆದರೂ, ಕೇಂದ್ರ ಸರಕಾರ ನಮ್ಮ ಸಮಸ್ಯೆಯನ್ನು ಆಲಿಸಲೇ ಇಲ್ಲ ಎಂಬ ಅಸಮಾಧಾನ ಈ ಯುವಕರಲ್ಲಿ ಹೆಚ್ಚುತ್ತಲೇ ಇತ್ತು.

ಸಿಜೆಪಿ ಹೋರಾಟದ ನಂತರ ಎಚ್ಚೆತ್ತುಕೊಂಡ ಕೇಂದ್ರ ಸರಕಾರ, ಈಗ ಮೀಸಲಾತಿ ನೀತಿ ವಿರೋಧಿ ಹೋರಾಟಗಾರನ್ನು ಕರೆದು ಮಾತನಾಡಿಸಿದೆ. ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಈಚಿಗೆ ಆರ್‌ಎಚ್‌ಎ ಹೋರಾಟದ ಯುವಕರನ್ನು ತಮ್ಮ ಕಚೇರಿಗೆ ಕರೆಸಿ ಮಾತುಕತೆ ನಡೆಸಿ, ಅವರ ಬೇಡಿಕೆಗಳನ್ನು ಆಲಿಸಿದ್ದಾರೆ. ಒಂದುವೇಳೆ ಈ ಯುವಕರನ್ನು ಭೇಟಿ ಮಾಡದಿದ್ದರೆ, ಅದರ ನೇರ ಪರಿಣಾಮ ಉತ್ತರ ಪ್ರದೇಶ ಚುನಾವಣೆ ಮೇಲೆ ಆಗಲಿದೆ ಮತ್ತು ಮೇಲ್ವರ್ಗದ ಮತದಾರರು ತಿರುಗಿ ಬೀಳಲಿದ್ದಾರೆ ಎಂಬ ಆತಂಕ ಬಿಜೆಪಿಯಲ್ಲಿದೆ.

ಹೀಗಾಗಿ, ಯುಜಿಸಿ ಸಮಾನ ನಿಯಮ ವಿರೋಧಿ ಹಾಗೂ ಮೀಸಲಾತಿ ನೀತಿ ವಿರೋಧಿ ಹೋರಾಟ ಗಾರ ರನ್ನು ಕಡೆಗಣಿಸುವ ಸ್ಥಿತಿಯಲ್ಲಿ ಕೇಂದ್ರ ಸರಕಾರವಿಲ್ಲ. ಅಷ್ಟರಮಟ್ಟಿಗೆ ಯುವಕರ ಹೋರಾಟಗಳು ಕೇಂದ್ರ ಸರಕಾರದ ನಡು ಬಗ್ಗಿಸಲು ಯಶಸ್ವಿಯಾಗಿವೆ. ಕೇಂದ್ರ ಸರಕಾರದ ಬಾಡಿ ಲ್ಯಾಂಗ್ವೇಜ್ ಬದಲಾವಣೆಯಲ್ಲಿ ಸಿಜೆಪಿ ಹೋರಾಟದ್ದೇ ಹೆಚ್ಚು ಪಾಲು ಎನ್ನುವುದು ಸುಳ್ಳೇನಲ್ಲ. ಹಾಗೆ ನೋಡಿದರೆ ಮೇಲ್ವರ್ಗದ ಆರ್ಥಿಕ ಹಿಂದುಳಿದವರು ಮೂಲೆಗುಂಪಾಗಬಾರದು ಎಂದೇ ಎನ್‌ಡಿಎ ಸರಕಾರ ಇಡ ಬ್ಲ್ಯುಎಸ್‌ಗಳಿಗಾಗಿ 10% ಮೀಸಲಾತಿಯನ್ನು ಜಾರಿಗೆ ತಂದಿರುವುದು ಉಲ್ಲೇಖಾರ್ಹ. ಆದರೆ ಅದು ಬೃಹದಾಕಾರವಾಗಿ ಬೆಳೆದಿರುವ ಮತ್ತು ಸಾಮಾನ್ಯ ವರ್ಗದವರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವಲ್ಲ ಎನ್ನುವುದು ಆರ್‌ಎಚ್‌ಎ ವಾದ.

ಕೇಂದ್ರ ಸರಕಾರ ಆರ್‌ಎಚ್‌ಎಯ ಬೇಡಿಕೆಗಳನ್ನು ಪರಿಗಣಿಸಿ ಪೂರಕ ನೀತಿಗಳನ್ನು ಮಾಡಲಿದೆ ಎಂಬ ದೊಡ್ಡ ನಿರೀಕ್ಷೆ ಅನೇಕರಲ್ಲಿಲ್ಲ. ಏಕೆಂದರೆ, ರಾಜಕೀಯ ಕಾರಣಗಳಿಗಾಗಿ ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕಲು ಯಾವ ಪಕ್ಷಗಳೂ ತಯಾರಿಲ್ಲ. ಈಗಾಗಲೇ, ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಬಿಜೆಪಿಗೆ ಮೀಸಲಾತಿ ವಿರೋಧಿ ಎಂದು ಪಟ್ಟಕಟ್ಟಲು ಮತ್ತೊಮ್ಮೆ ಸಜ್ಜಾಗಿ ದ್ದಾರೆ.

‘ಮೀಸಲಾತಿ ಸುಧಾರಣೆ’ಯ ಸೋಗಿನಲ್ಲಿ ಮೀಸಲಾತಿಯನ್ನು ರದ್ದುಪಡಿಸುವ ಪಿತೂರಿಯು ಪಿಡಿಎ ಸಮುದಾಯದ ವಿರುದ್ಧದ ಮತ್ತೊಂದು ಆಳವಾದ ಸಂಚು. ಮೀಸಲಾತಿಯು ಪಿಡಿಎ ಸಮುದಾಯ ದ ಹಕ್ಕೇ ಹೊರತು, ಅದು ಯಾರದ್ದೋ ಮರ್ಜಿಗೆ ಒಳಪಡುವ ವಿಷಯವಲ್ಲ ಎನ್ನುತ್ತಾ ಈ ಸಮುದಾಯ ಗಳನ್ನು ಸೆಳೆಯುತ್ತಿದ್ದಾರೆ ಅಖಿಲೇಶ್.

ಬಹುಶಃ ಮುಂದಿನ ದಿನಗಳಲ್ಲಿ ಅಖಿಲೇಶರ ಪ್ರತಿ ಭಾಷಣದಲ್ಲೂ ಬಿಜೆಪಿ ಮೀಸಲಾತಿ ವಿರೋಧಿ ಎಂಬ ವಾಕ್ಯ ಸೇರಿಕೊಳ್ಳಲಿದೆ. ಪರಿಸ್ಥಿತಿ ಹೀಗಿರುವಾಗ ಉತ್ತರ ಪ್ರದೇಶ ಚುನಾವಣೆ ನಂತರವೂ ಮೀಸಲಾತಿ ವಿಷಯದಲ್ಲಿ ತಿದ್ದುಪಡಿ ಮಾಡುವ ಸಾಹಸಕ್ಕೆ ಕೇಂದ್ರ ಸರಕಾರ ಕೈಹಾಕುವುದು ಅನುಮಾನ. ರಿಸರ್ವೇಷನ್ ಹಠಾವೋ ಆಂದೋಲದ ಮುಂದಾಳುಗಳು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರಿಗೆ ಸಲ್ಲಿಸಿದ ಮನವಿಯ ಮುಖ್ಯಾಂಶಗಳು ಹೀಗಿವೆ :

  1. ಸಾಮಾನ್ಯ ವರ್ಗಕ್ಕೆ ರಾಷ್ಟ್ರೀಯ ಆಯೋಗ: ಎಸ್‌ಸಿ/ ಎಸ್‌ಟಿ/ ಒಬಿಸಿ ಆಯೋಗಗಳಂತೆಯೇ ಸಾಮಾನ್ಯ ವರ್ಗಕ್ಕೂ ಸಾಂವಿಧಾನಿಕ ಸ್ಥಾನಮಾನ ನೀಡುವ ಆಯೋಗವನ್ನು ಸ್ಥಾಪಿಸಬೇಕು. ಜೊತೆಗೆ ಸಾಮಾನ್ಯ ವರ್ಗದ ನಾಗರಿಕರ ಮೇಲಿನ ದೌರ್ಜನ್ಯ ತಡೆಗಟ್ಟಲು ರಕ್ಷಣೆ ಒದಗಿಸಬೇಕು.
  2. ಯುಜಿಸಿ 2026 ನಿಯಮಾವಳಿ ವಾಪಸಾತಿ: ಯುಜಿಸಿ 2026ರ ನಿಯಮಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಮತ್ತು ಮೊದಲಿದ್ದ ಮಾರ್ಗಸೂಚಿಗಳನ್ನು ಜಾತಿ-ತಟಸ್ಥ (caste- neutral) ಗೊಳಿಸಬೇಕು.
  3. ಆರ್ಥಿಕ ಆಧಾರಿತ ಮೀಸಲಾತಿಗೆ ಬದಲಾವಣೆ: ಮೀಸಲಾತಿಯನ್ನು ಜಾತಿಯ ಆಧಾರದ ಬದಲು ಆದಾಯ ಮತ್ತು ಆರ್ಥಿಕ ಸ್ಥಿತಿಯ ಆಧಾರದ ಮೇಲೆ ನೀಡುವ ವ್ಯವಸ್ಥೆಗೆ ಬದಲಾಗ ಬೇಕು.
  4. ಒಂದು ಕುಟುಂಬಕ್ಕೆ ಒಂದು ಬಾರಿ ಮೀಸಲಾತಿ: ಶಿಕ್ಷಣ, ಉದ್ಯೋಗ ಅಥವಾ ರಾಜಕೀಯ ಕ್ಷೇತ್ರಗಳಲ್ಲಿ ಒಂದು ಕುಟುಂಬದ ಒಂದು ತಲೆಮಾರಿಗೆ ಮಾತ್ರ ಮೀಸಲಾತಿ ಸೀಮಿತವಾಗಬೇಕು.
  5. ಆರ್ಥಿಕವಾಗಿ ಅಭ್ಯರ್ಥಿಗಳಿಗೆ ಸಮಾನ ಸಡಿಲಿಕೆ: ಆರ್ಥಿಕವಾಗಿ ಹಿಂದುಳಿದ ವರ್ಗದ (ಇಡಬ್ಲ್ಯುಎಸ್) ಅಭ್ಯರ್ಥಿಗಳಿಗೂ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ ನೀಡುವಂತಹ ವಯಸ್ಸು, ಶುಲ್ಕ ಮತ್ತು ಪ್ರಯತ್ನಗಳ ಸಡಿಲಿಕೆಗಳನ್ನು ನೀಡಬೇಕು.
  6. ಮೀಸಲಾತಿ ಸುಧಾರಣೆಗಳು: ಹಿಂದುಳಿದಿಲ್ಲದ ಜಾತಿಗಳನ್ನು ಮೀಸಲಾತಿಯಿಂದ ಕೈಬಿಡಬೇಕು. ಎಸ್‌ಸಿ/ ಎಸ್‌ಟಿ ವರ್ಗಗಳಲ್ಲಿ ‘ಕೆನೆಪದರ’ ನೀತಿಯನ್ನು ಜಾರಿಗೊಳಿಸಬೇಕು ಹಾಗೂ ಒಬಿಸಿ ಕೆನೆಪದರವನ್ನು ಮರುಪರಿಶೀಲಿಸಬೇಕು. ಜೊತೆಗೆ ಉಪ-ವರ್ಗೀಕರಣವನ್ನು ಖಚಿತಪಡಿಸಬೇಕು.
  7. ಕನಿಷ್ಠ ಅರ್ಹತಾ ಮಾನದಂಡ: ಪ್ರತಿಯೊಂದು ಮೀಸಲಾತಿ ವರ್ಗಕ್ಕೂ ಕನಿಷ್ಠ ಅರ್ಹತಾ ಮಾನದಂಡ ನಿಗದಿಪಡಿಸಬೇಕು. ಅಭ್ಯರ್ಥಿಗಳು ಅರ್ಹತೆ ಪಡೆಯದಿದ್ದರೆ ಆ ಸೀಟುಗಳನ್ನು ಮುಕ್ತ ವರ್ಗಕ್ಕೆ (Open category) ವರ್ಗಾಯಿಸಬೇಕು.
  8. ಮೀಸಲಾತಿ ಹೆಚ್ಚಳಕ್ಕೆ ವಿರೋಧ ಖಾಸಗಿ ವಲಯದಲ್ಲಿ ಮೀಸಲಾತಿ ಬೇಡ: ಶಿಕ್ಷಣ, ಕೌಶಲ್ಯ ಮತ್ತು ಅವಕಾಶಗಳನ್ನು ವಿಸ್ತರಿಸುವುದರ ಮೇಲೆ ಗಮನ ಹರಿಸಬೇಕೇ ಹೊರತು ಮೀಸಲಾತಿ ಹೆಚ್ಚಿಸುವುದರ ಮೇಲಲ್ಲ. ಖಾಸಗಿ ವಲಯದಲ್ಲಿ ಮೀಸಲಾತಿ ಕಡ್ಡಾಯಗೊಳಿಸುವಂತಿಲ್ಲ.
  9. ಮೀಸಲಾತಿಯ ಕುರಿತು ಶ್ವೇತಪತ್ರ: ಇಲ್ಲಿಯವರೆಗೆ ಮೀಸಲಾತಿಯಿಂದಾಗಿರುವ ಲಾಭಗಳು, ಎಷ್ಟು ಜಾತಿಗಳು ಆರ್ಥಿಕವಾಗಿ/ಸಾಮಾಜಿಕವಾಗಿ ಅಭಿವೃದ್ಧಿಯಾಗಿವೆ ಎಂಬುದರ ಕುರಿತು ವಿವರವಾದ ಶ್ವೇತಪತ್ರ ಹೊರಡಿಸಿ ಮುಕ್ತ ಚರ್ಚೆಗೆ ಅವಕಾಶ ನೀಡಬೇಕು.
  10. ಕಾಲಕಾಲಕ್ಕೆ ವಿಮರ್ಶೆ: ಪ್ರತಿ 10 ವರ್ಷಗಳಿಗೊಮ್ಮೆ ಮೀಸಲಾತಿ ವ್ಯವಸ್ಥೆಯನ್ನು ಪರಿಶೀಲಿಸಿ, ಪಾರದರ್ಶಕತೆಗಾಗಿ ವರದಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು.
  11. ಮೀಸಲಾತಿಗೆ ಮುಕ್ತಾಯದ ಷರತ್ತು: ಮೀಸಲಾತಿಯ ಪ್ರತಿಯೊಂದು ನಿಯಮಕ್ಕೂ ಒಂದು ಮುಕ್ತಾಯದ ಷರತ್ತು ಇರಬೇಕು. ದತ್ತಾಂಶ ಮತ್ತು ಪುರಾವೆಗಳು ಮೀಸಲಾತಿ ಅಗತ್ಯವನ್ನು ಸ್ಪಷ್ಟವಾಗಿ ಸಾಬೀತುಪಡಿಸಿದರೆ ಮಾತ್ರ ಅದು ಮುಂದುವರಿಯಬೇಕು.
  12. ಎಸ್‌ಸಿ/ ಎಸ್‌ಟಿ ಕಾಯ್ದೆ ಸುಧಾರಣೆಗಳು: 2018ರ ತಿದ್ದುಪಡಿಯಲ್ಲಿ ಸೇರಿಸಲಾದ ಕಠಿಣ ನಿಬಂಧನೆ ಗಳನ್ನು (ಪೂರ್ವಭಾವಿ ವಿಚಾರಣೆ ಇಲ್ಲದಿರುವುದು, ಜಾಮೀನು ಇಲ್ಲದಿರುವುದು) ತೆಗೆದು ಹಾಕಬೇಕು. ಸುಳ್ಳು ಪ್ರಕರಣ ದಾಖಲಿಸುವವರ ವಿರುದ್ಧ ಜೈಲು ಅಥವಾ ದಂಡ ವಿಧಿಸಬೇಕು ಮತ್ತು ನ್ಯಾಯಾಲಯದಲ್ಲಿ ಪ್ರಕರಣ ಸಾಬೀತಾಗುವವರೆಗೆ ಯಾವುದೇ ವಿತ್ತೀಯ ಪರಿಹಾರ ನೀಡಬಾರದು.

2015ರ ಬಿಹಾರ ವಿಧಾನಸಭೆ ಚುನಾವಣೆಗೆ ಪ್ರಚಾರ ಅಭಿಯಾನಗಳು ನಡೆಯುತ್ತಿದ್ದಾಗ ಆರ್‌ಎಸ್‌ ಎಸ್ ಮುಖ್ಯಸ್ಥ ಡಾ.ಮೋಹನ್ ಭಾಗವತ್ ಅವರು ಕಾರ್ಯಕ್ರಮವೊಂದರಲ್ಲಿ ಮೀಸಲಾತಿ ನೀತಿಯ ಪುನರ್‌ವಿಮರ್ಶೆಯಾಗಬೇಕು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದರು. ಅಂದು ಬಿಹಾರದಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದ್ದ ಬಿಜೆಪಿ, ಭಾಗವತರ ಹೇಳಿಕೆಯಿಂದಾಗಿ ಭಾರೀ ನಷ್ಟ ಅನುಭವಿಸಿತು. ಕೆಲ ಸ್ಥಳೀಯ ಬಿಜೆಪಿ ನಾಯಕರು ಭಾಗವತರಿಂದಲೇ ನಾವು ಸೋತೆವು ಎಂದು ಮೂದಲಿಸಿದ್ದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮ್ಮೆಲ್ಲರ ಮೀಸಲಾತಿ ಕಿತ್ತುಕೊಳ್ಳಲಿದೆ ಎಂದು ಲಾಲೂ ಯಾದವ್-ನಿತೀಶ್ ಕುಮಾರ್ ನಡೆಸಿದ ಪ್ರಚಾರ-ನರೇಟಿವ್ ಚುನಾವಣಾ ಯಶಸ್ಸನ್ನೇ ತಂದುಕೊಟ್ಟಿತ್ತು. 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಉ.ಪ್ರ.ದ ಫೈಜಾಬಾದ್ ಕ್ಷೇತ್ರದ ಸಂಸದ ಲಲ್ಲು ಸಿಂಗ್ ನೀಡಿದ್ದ ಸಂವಿಧಾನ ಬದಲಾವಣೆಯ ಹೇಳಿಕೆ ಹಿಂದಿ ಹಾರ್ಟ್‌ಲ್ಯಾಂಡ್‌ನಲ್ಲಿ ಪಕ್ಷದ ವರ್ಚಸ್ಸಿಗೆ ಭಾರೀ ಹಾನಿ ಮಾಡಿತ್ತು.

ಮೀಸಲಾತಿ ವಿಚಾರವನ್ನು ಬಿಜೆಪಿ ನಾಯಕರು ಪ್ರಸ್ತಾಪಿಸಿದಾಗಲೆ ವಿಪಕ್ಷಗಳು ಅದನ್ನು ರಾಜಕೀಯ ಲಾಭಕ್ಕಾಗಿ ಬಿಜೆಪಿ ವಿರುದ್ಧದ ಪೊಲಿಟಿಕಲ್ ನರೇಟಿವ್ ಆಗಿ ಬಳಸಿಕೊಳ್ಳುತ್ತಿವೆ. ಎಲ್ಲಿಯವರೆಗೆ ಕಾಂಗ್ರೆಸ್ಸಿನ ರಾಹುಲ್ ಗಾಂಧಿಯವರಂಥವರು ಅಧಿಕಾರಶಾಹಿಯಲ್ಲೂ ಒಬಿಸಿ ಸಮುದಾಯದ ಅಧಿಕಾರಿಗಳೆಷ್ಟಿದ್ದಾರೆ ಎಂದು ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಮೀಸಲಾತಿ ನೀತಿಯಲ್ಲಿನ ಅಗತ್ಯ ಸುಧಾರಣೆಗಳ ಜಾರಿ ಅಸಾಧ್ಯ.

ಮೀಸಲಾತಿ ಬಳಸಿಕೊಂಡು ಜನಪ್ರತಿನಿಧಿಗಳಾಗಿ, ಆಯಕಟ್ಟಿನ ಹುದ್ದೆಗೇರಿದ ಮೇಲೂ ಮೀಸಲಾತಿ ಯ ಅನುಕೂಲಗಳನ್ನು ಬಳಸಿಕೊಳ್ಳುವ ಮನಸ್ಥಿತಿ ಜನಪ್ರತಿನಿಧಿಗಳಲ್ಲಿ ಬದಲಾಗದೆ ಮತ್ತು ಎಲ್ಲಿಯವರೆಗೆ ಸಾಮಾಜಿಕವಾಗಿ- ಆರ್ಥಿಕವಾಗಿ ಮುಂದುವರಿದಿರುವ ‘ಹಿಂದುಳಿದ ಸಮುದಾಯ’ ಗಳ ರಾಜಕೀಯ ನಾಯಕರು ನಾವು ಮೀಸಲಾತಿ ಮೀರಿ ಯೋಚಿಸಬೇಕು, ನಡೆದುಕೊಳ್ಳಬೇಕು ಎಂದು ಸ್ವಯಂ ಪ್ರೇರಣೆಯಿಂದ ಘೋಷಿಸಲು ಹಿಂದೇಟು ಹಾಕುತ್ತಾರೋ ಅಲ್ಲಿಯವರೆಗೆ ಸುಧಾರಣೆ ಎನ್ನುವುದು ಕನಸಾಗಿಯೇ ಉಳಿಯಲಿದೆ.