ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಸೋಲಿನ ದವಡೆಯಿಂದ ಗೆಲುವಿನ ದಡಕ್ಕೆ

ನಷ್ಟದಲ್ಲಿದ್ದ ನೂರಾರು ಮಳಿಗೆಗಳನ್ನು ಮುಚ್ಚಿ, ಸುಮಾರು 450 ರಿಂದ 500 ಅತ್ಯಂತ ಲಾಭದಾಯಕ ಕೆಫೆಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದರು. ನಿರ್ವಹಣಾ ವೆಚ್ಚ ಕಡಿಮೆ ಇರುವ ಕಾರ್ಪೊರೇಟ್ ಕಾಫಿ ವೆಂಡಿಂಗ್ ಮೆಷಿನ್‌ಗಳ ಸಂಖ್ಯೆಯನ್ನು 50000ಕ್ಕೂ ಹೆಚ್ಚು ಕಚೇರಿಗಳಿಗೆ ವಿಸ್ತರಿಸಿದರು. ಈ ನಿಖರ ನಿರ್ಧಾರಗಳ ಫಲವಾಗಿ, 2019ರಲ್ಲಿ ರು.7200 ಕೋಟಿಗೂ ಅಧಿಕವಾಗಿದ್ದ ಸಾಲವು, 2021ರ ವೇಳೆಗೆ ರು.1731 ಕೋಟಿಗೆ, ನಂತರ ರು.800 - ರು.1000 ಕೋಟಿಯ ಆಸುಪಾಸಿಗೆ ಇಳಿಯಿತು

Roopa Gururaj Column: ಸೋಲಿನ ದವಡೆಯಿಂದ ಗೆಲುವಿನ ದಡಕ್ಕೆ

-

ಒಂದೊಳ್ಳೆ ಮಾತು

ಜೀವನದಲ್ಲಿ ಎಲ್ಲವೂ ಮುಗಿದೇ ಹೋಯಿತು ಎಂದು ಜಗತ್ತು ಭಾವಿಸಿದಾಗ, ಅಲ್ಲೇ ಹೊಸದೊಂದು ಅಧ್ಯಾಯವನ್ನು ಆರಂಭಿಸುವ ಧೈರ್ಯ ಕೆಲವರಿಗಷ್ಟೇ ಇರುತ್ತದೆ. ಅಂಥದ್ದೊಂದು ಅಪರೂಪದ ಛಲದ ಕಥೆ ಇದು. 2019ರ ಆ ಒಂದು ದಿನ ಭಾರತದ ಇಡೀ ಕಾರ್ಪೊರೇಟ್ ಜಗತ್ತು ದಿಗ್ಭ್ರಮೆಗೊಂಡಿತ್ತು.

ಭಾರತೀಯರಿಗೆ ಕಾಫಿ ಸಂಸ್ಕೃತಿಯನ್ನು ಹೊಸ ರೀತಿಯಲ್ಲಿ ಪರಿಚಯಿಸಿದ ‘ಕೆಫೆ ಕಾಫಿ ಡೇ’ (ಸಿಸಿಡಿ) ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ ಅವರ ಅನಿರೀಕ್ಷಿತ ಸಾವು ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಅವರ ಅಗಲಿಕೆಯ ಬೆನ್ನಲ್ಲೇ ಸುಮಾರು ರು.7200 ಕೋಟಿಗಳ ಬೃಹತ್ ಸಾಲದ ಹೊರೆ, ಬ್ಯಾಂಕುಗಳ ನೋಟಿಸ್‌ಗಳು, ಷೇರು ಮಾರುಕಟ್ಟೆಯ ಕುಸಿತ ಮತ್ತು ಅನಿಶ್ಚಿತತೆಯಲ್ಲಿ ಸಿಲುಕಿದ 25000ಕ್ಕೂ ಹೆಚ್ಚು ಉದ್ಯೋಗಿಗಳ ಭವಿಷ್ಯ... ಸಂಬಂಧಿಸಿದ ಪ್ರತಿಯೊಬ್ಬರೂ ಆತಂಕಕ್ಕೆ ಸಿಲುಕಿದರು. ಆದರೆ, ದುಃಖದ ಕಡಲಿನಲ್ಲಿ ಮುಳುಗಿ ಹೋಗಬೇಕಿದ್ದ ಆ ಕ್ಷಣದಲ್ಲಿ ಧೃತಿಗೆಡದೆ ಮುನ್ನೆಲೆಗೆ ಬಂದವರು ಅವರ ಪತ್ನಿ ಮಾಳವಿಕಾ ಹೆಗ್ಡೆ.

ಇದನ್ನೂ ಓದಿ: Roopa Gururaj Column: ಶ್ರೀಕೃಷ್ಣನ ಆದರ್ಶ ವ್ಯಕ್ತಿತ್ವ: ಬದುಕಿಗೊಂದು ಜೀವಂತ ದರ್ಶನ

ಕಣ್ಣೀರಿನಲ್ಲೇ ಕಾಲ ಕಳೆಯುವ ಬದಲು, ಪತಿಯ ಕನಸಿನ ಸಾಮ್ರಾಜ್ಯವನ್ನು ಉಳಿಸಿಕೊಳ್ಳುವ ಮಹತ್ತರ ಜವಾಬ್ದಾರಿಯನ್ನು ಹೊತ್ತು ಡಿಸೆಂಬರ್ 2020ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿ ಕೊಂಡರು. ಅವರ ಮುಂದೆ ಇದ್ದದ್ದು ಕೇವಲ ಸಾಲದ ದೊಡ್ಡ ಬೆಟ್ಟ ಮಾತ್ರವಲ್ಲ; ಸಮಾಜದ ಅಪನಂಬಿಕೆಗಳೂ ಹೌದು. ಅವರು ಕೈಚೆಲ್ಲಲಿಲ್ಲ, ಬದಲಿಗೆ ಕರಾರುವಾಕ್ ಲೆಕ್ಕಾಚಾರಗಳೊಂದಿಗೆ ರಣರಂಗಕ್ಕಿಳಿದರು: ಬೆಂಗಳೂರಿನ 90 ಎಕರೆ ವಿಸ್ತೀರ್ಣದ ‘ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್’ ಅನ್ನು ಬ್ಲಾಕ್‌ಸ್ಟೋನ್ ಸಂಸ್ಥೆಗೆ ಸುಮಾರು ರು.2700 ಕೋಟಿಗೆ ಮಾರಿ, ನೇರವಾಗಿ ಬ್ಯಾಂಕ್ ಸಾಲ ತೀರಿಸಿದರು.

ನಷ್ಟದಲ್ಲಿದ್ದ ನೂರಾರು ಮಳಿಗೆಗಳನ್ನು ಮುಚ್ಚಿ, ಸುಮಾರು 450 ರಿಂದ 500 ಅತ್ಯಂತ ಲಾಭದಾ ಯಕ ಕೆಫೆಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದರು. ನಿರ್ವಹಣಾ ವೆಚ್ಚ ಕಡಿಮೆ ಇರುವ ಕಾರ್ಪೊರೇಟ್ ಕಾಫಿ ವೆಂಡಿಂಗ್ ಮೆಷಿನ್‌ಗಳ ಸಂಖ್ಯೆಯನ್ನು 50000ಕ್ಕೂ ಹೆಚ್ಚು ಕಚೇರಿಗಳಿಗೆ ವಿಸ್ತರಿಸಿದರು. ಈ ನಿಖರ ನಿರ್ಧಾರಗಳ ಫಲವಾಗಿ, 2019ರಲ್ಲಿ ರು.7200 ಕೋಟಿಗೂ ಅಧಿಕವಾಗಿದ್ದ ಸಾಲವು, 2021ರ ವೇಳೆಗೆ ರು.1731 ಕೋಟಿಗೆ, ನಂತರ ರು.800 - ರು.1000 ಕೋಟಿಯ ಆಸುಪಾಸಿಗೆ ಇಳಿಯಿತು. ಮುಳುಗುತ್ತಿದ್ದ ಸಂಸ್ಥೆಯೂ ಉಳಿಯಿತು, ಸಾವಿರಾರು ಕುಟುಂಬಗಳ ಅನ್ನದ ದಾರಿಯೂ ರಕ್ಷಿಸಲ್ಪಟ್ಟಿತು.

ಸಂಕಷ್ಟಗಳು ಎಷ್ಟೇ ದೊಡ್ಡದಾಗಿರಲಿ, ಅಂಕಿ-ಅಂಶಗಳು ಎಷ್ಟೇ ಪ್ರತಿಕೂಲವಾಗಿರಲಿಮನಸ್ಸಿನಲ್ಲಿ ಪ್ರಾಮಾಣಿಕತೆ ಮತ್ತು ಎದುರಿಸುವ ಗಟ್ಟಿ ಛಲವಿದ್ದರೆ ಮುಳುಗುತ್ತಿರುವ ಹಡಗನ್ನೂ ದಡ ಸೇರಿಸಬಹುದು ಎಂಬುದಕ್ಕೆ ಮಾಳವಿಕಾ ಹೆಗ್ಡೆ ಅವರ ಹೋರಾಟವೇ ಸಾಕ್ಷಿ. ಕುಟುಂಬದಲ್ಲಿ ಅನೇಕ ಬಾರಿ ಮನೆಯ ಯಜಮಾನರ ಹಣಕಾಸಿನ ಪರಿಸ್ಥಿತಿ ಅವರ ವ್ಯವಹಾರಗಳು ಮನೆಯವರಿಗೆ ಗೊತ್ತೇ ಇರುವುದಿಲ್ಲ. ಅವರಿಗೆ ಬೇಡದ ದುಡ್ಡಿನ ತಲೆನೋವು ಎಂದು ಮನೆಯ ಯಜಮಾನ ಯಾವುದನ್ನು ಮನೆಯವರಿಗೆ ಹೇಳುವುದಿಲ್ಲ.

ಇದರಲ್ಲಿ ಕಾಳಜಿ ಎಷ್ಟಿದೆಯೋ ಅಪಾಯವೂ ಅಷ್ಟೇ ಇದೆ. ಅವರಿಗೆ ಮಾತ್ರ ಈ ಹಣಕಾಸಿನ ವ್ಯವಹಾರ ಗೊತ್ತಿರುವುದರಿಂದ ಅಕಸ್ಮಾತ್ ಅವರಿಗೆ ಅಪಘಾತ ಅಥವಾ ಮತ್ತೇನಾದರೂ ಆದರೆ ಅಂತಹ ಜವಾಬ್ದಾರಿಗಳನ್ನ ನಿಭಾಯಿಸಲು ಯಾರು ಕೂಡ ತಕ್ಷಣಕ್ಕೆ ಸನ್ನದ್ಧರಾಗಿರುವುದಿಲ್ಲ. ಇದರಿಂದಾಗಿ ಅನೇಕ ಬಾರಿ ಸ್ನೇಹಿತರು ಹಿತೈಷಿಗಳಿಂದಲೇ ದುಡ್ಡಿನ ವಿಷಯದಲ್ಲಿ ಮೋಸವಾಗುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲ ಬ್ಯಾಂಕ್ ವ್ಯವಹಾರಗಳಲ್ಲಿ ಸರಿಯಾಗಿ ನಾಮಿನಿಯ ಹೆಸರನ್ನು ಹಾಕದಿದ್ದರೆ ಹಾಕಿದರು ಅವರಿಗೆ ತಿಳಿಸದಿದ್ದರೆ ಕೆಲವರು ವ್ಯವಹಾರಗಳು ಬೆಳಕಿಗೆ ಬರದೇ ಹೋಗಬಹುದು.

ಕುಟುಂಬದ ಸಂಪತ್ತನ್ನು ಮಕ್ಕಳಿಗೆ ಸರಿಯಾಗಿ ಹಂಚದೆ ವಿಲ್ ಬರೆಯದೆ ಹೋದ ತಂದೆ ತಾಯಿ ಗಳಿಂದಾಗಿ, ಅನೇಕ ಮಕ್ಕಳು ವರ್ಷಾನುಗಟ್ಟಲೆ ಆಸ್ತಿಗಾಗಿ ಹೊಡೆದಾಡುತ್ತ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಇರುವಷ್ಟು ವರ್ಷ ಸಂತೋಷದಿಂದ ಬದುಕುವುದನ್ನು ಬಿಟ್ಟು ಕೋರ್ಟು ಕಚೇರಿಗಳ ಅಲೆದಾಟದಲ್ಲಿ ಜೀವನ ವ್ಯರ್ಥವಾಗಿರುವ ಅನೇಕ ಉದಾಹರಣೆಗಳು ನಮ್ಮ ಸುತ್ತಲೂ ಇದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಮನೆಯವರಿಗೆ ತೊಂದರೆ ಯಾದಾಗ ಪರಿಸ್ಥಿತಿ ಕಷ್ಟವಾದಾಗ ಧೃತಿಗೆಡದೆ ಅದನ್ನು ನಿಭಾಯಿಸುವ ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳ ಬೇಕು. ಕಷ್ಟಗಳು ಬಂದಾಗ ಕುಸಿಯಬೇಡಿ, ಅವುಗ ಳನ್ನೇ ನಿಮ್ಮ ಗೆಲುವಿನ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಿ.